ಹನುಮ ಭೀಮರ ಸಮಾಗಮದಲ್ಲಿ ಭೀಮನ ಗರ್ವಭಂಗ

ಇತ್ತೀಚಿನ ದಿನಗಳಲ್ಲಿ ಕೆಲವರು ತಾನು ಮಹಾನ್ ಶಕ್ತಿಶಾಲಿ ಎಂದು ಭಾವಿಸಿ ತಾನು ಎಂತಹ ತಪ್ಪನ್ನು ಮಾಡಿದರೂ ಜನರು ತನ್ನನ್ನು ಸಹಿಸಿಕೊಳ್ಳುತ್ತಾರೆ. ಅಭಿಮಾನದ ಹೊಳೆಯಲ್ಲಿ ತನ್ನನ್ನು ತೇಲಿಸುತ್ತಾರೆ  ಎಂದು ಭಾವಿಸಿ ಮಾಡಬಾರದ್ದದ್ದೆಲ್ಲಾ ಕೆಲಸಗಳನ್ನು ಮಾಡಿ ಸಿಕ್ಕಿ ಹಾಕಿಕೊಂಡು ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ಸಂಧರ್ಭದಲ್ಲಿ ದ್ವಾಪರಯುಗದ ಮಹಾಭಾರತದಲ್ಲಿ ಭೀಮನೂ ಸಹಾ ತನ್ನಷ್ಟು ಶಕ್ತಿಶಾಲಿ ಈ ಪ್ರಪಂಚದಲ್ಲಿ ಯಾರೂ ಇಲ್ಲಾ ಎಂದು ಮೆರೆಯುತ್ತಿದ್ದಂತಹ ಸಂಧರ್ಭದಲ್ಲಿ ವರಸೆಯಲ್ಲಿ ಅಣ್ಣನಾಗುವ ವಾಯುಪುತ್ರ ಹನುಮಂತನು ಭೀಮನ ಗರ್ವಭಂಗ ಮಾಡಿದ ಕಥಾ ಪ್ರಸಂಗ ನೆನಪಿಗೆ ಬಂದು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ನಮಗೆಲ್ಲರಿಗೂ ತಿಳಿದಿರುವಂತೆ  ವಾಯುದೇವ ಮತ್ತು ಅಂಜನಾದೇವಿಯ ಏಕೈಕ ಪುತ್ರ ಆಂಜನೇಯನು ಸಪ್ತ ಚಿರಂಜೀವಿಗಳಲ್ಲಿ  ಒಬ್ಬನು. ರಾಮನ ಪರಮ ಭಂಟನಾದ ಹನುಮಂತ ಸೀತಾದೇವಿಯನ್ನು ರಾವಣನು ಅಪಹರಿಸಿಕೊಂಡು ಲಂಕಾ ಪಟ್ಟಣದ  ಆಶೋಕವನದಲ್ಲಿ ಅಡಗಿಸಿಟ್ಟಿದ್ದ ವಿಷಯವನ್ನು ಜಟಾಯುವಿನಿಂದ ಕೇಳಿ ಅದನ್ನು ದೃಢೀಕರಿಸುವ ಸಲುವಾಗಿ ಸಮುದ್ರೋಲಂಘನವನ್ನು ಮಾಡಿ ಸೀತಾದೇವಿಯನ್ನು  ಅಶೋಕವನದಲ್ಲಿ ಕಂಡು ಆಕೆಯನ್ನು ಮಾತನಾಡಿಸಿ  ಆದಷ್ಟು ಶೀಘ್ರದಲ್ಲಿಯೇ ರಾಮ ಲಕ್ಷ್ಮಣರ ಜೊತೆಯಲ್ಲಿ ಬಂದು ರಾವಣನ ಸೆರೆಯಿಂದ ಬಿಡಿಸಿಕೊಂಡು ಹೋಗುವುದಾಗಿ ಮಾತು ಕೊಟ್ಟು  ಆಕೆಯನ್ನು ಕಂಡ ಕುರುಹಾಗಿ ಆಕೆಯ ಜಡೆಬಿಲ್ಲೆಯನ್ನು ಪಡೆದು ಹಿಂದಿರುಗುವ ಮಾರ್ಗದಲ್ಲಿ ತನ್ನ ಬಾಲಕ್ಕೆ ಬೆಂಕಿ ಇಟ್ಟು ಅವಮಾನ ಮಾಡಿದ ರಾವಣನಿಗೆ ಬುದ್ದಿ ಕಲಿಸುವ ಸಲುವಾಗಿ ಅದೇ ಬೆಂಕಿಯಿಟ್ಟ ಬಾಲದಿಂದ ಅರ್ಧ ಲಂಕೆಯನ್ನು ಸುಟ್ಟು  ನಂತರ ರಾಮ ರಾವಣರ ಯುದ್ಧದಲ್ಲಿ  ಮುಂದಾಳತ್ವ ವಹಿಸಿ  ಜಯಗಳಿಸುವುದರಲ್ಲಿ ಅತ್ಯಂತ ಮಹತ್ತರವಾದ ಪಾತ್ರ ವಹಿಸಿದ ವಿಷಯ ಎಲ್ಲರಿಗೂ ತಿಳಿದೆಯಷ್ಟೇ.

ತ್ರೇತಾಯುಗದಲ್ಲಿ ರಾಮನ ಪರಮಭಂಟನಾಗಿದ್ದ  ಹನುಮಂತ ಚಿರಂಜೀವಿಯಾದ ಕಾರಣ, ದ್ವಾಪರ ಯುಗದಲ್ಲಿಯೂ ಸಹಾ ಇದ್ದು ತನ್ನ ಪಾಡಿಗೆ ತಾನು ರಾಮನ ಧ್ಯಾನ ಮಾಡಿಕೊಂಡಿರುತ್ತಾನೆ. ಶಕುನಿಯ ಕುಟಿಲತೆ ಮತ್ತು ಕೌರವನ ಸ್ವಾರ್ಥ ದುರಾಸೆಯಿಂದಾಗಿ ಮೋಸದ ಪಗಡೆ ಆಟದಲ್ಲಿ  ಇದ್ದ ರಾಜ್ಯವನ್ನೆಲ್ಲವನ್ನೂ ಕಳೆದು ಕೊಂಡು ಹನ್ನೆರಡು ವರ್ಷಗಳ ಕಾಲ ವನವಾಸ ಮತ್ತು ಒಂದು ವರ್ಷದ ಕಾಲ ಅಜ್ಞಾತ ವಾಸದ ಶಿಕ್ಷೆಯನ್ನು ಪಡೆದು ಪಾಂಡವರು ತಮ್ಮ ಪತ್ನಿಯಾದ ದ್ರೌಪದಿಯೊಂದಿಗೆ ಕಾಡಿನಲ್ಲಿ ವಾಸಿಸುತ್ತಿರುವಾಗ, ಅದೆಲ್ಲಿಂದಲೂ ಸೌಗಂಧಿಕಾ ಪುಷ್ಪವನ್ನು ವಾಸನೆಯು ದ್ರೌಪದಿಯ ಮೂಗಿಗೆ ಬಡಿದು ಅದನ್ನು ತಂದು ಕೊಡುವಂತ ಪರಮ ಶಕ್ತಿಶಾಲಿಯಾದ ಭೀಮನೊಂದಿಗೆ ಕೇಳಿಕೊಂಡಾಗ, ಆಕೆಯ ಆಸೆಯನ್ನು ಪೂರೈಸುವ ಸಲುವಾಗಿ  ಭೀಮನು ಸೌಗಂಧಿಕಾ ಪುಷ್ಪದ ವಾಸನೆಯ ದಿಕ್ಕನ್ನರರಿಸಿ ಹೋರಡುತ್ತಾನೆ.

ಹಾಗೆ ಕಾಡಿನಲ್ಲಿ ಹೋಗುತ್ತಿರುವಾಗ ರಸ್ತೆಯ ಪಕ್ಕದಲ್ಲೊಂದು ವಯಸ್ಸಾದ ಕಪಿಯೊಂದು ಕುಳಿತುಕೊಂಡಿದ್ದು ಅದರ ಬಾಲ ಇಡೀ ರಸ್ತೆಯನ್ನು ಆಕ್ರಮಿಸಿಕೊಂಡಿದ್ದನ್ನು ಕಂಡ ಭೀಮನು ಕೋಪದಿಂದ ಎಲೈ ಕಪಿಯೇ ನಾನು ತುರ್ತಾಗಿ ಹೋಗ ಬೇಕಾದ ಕಾರಣ ಕೂಡಲೇ ನಿನ್ನ ಬಾಲವನ್ನು ಪಕ್ಕಕ್ಕೆ ಸರಿಸಿ ನಾನು ಹೋಗಲು ಅನುವು ಮಾಡಿಕೊಡು ಎಂದು ಕೇಳುತ್ತಾನೆ.

ಭೀಮನ ಕೋರಿಕೆಗೆ ಸ್ವಲ್ಪವೂ ಆ ಕಪಿಯು ಮನ್ನಣೆ ಕೊಡದೇ ಹೋದದ್ದನ್ನು ಗಮನಿಸಿದ ಭೀಮ,  ಎಲೈ ಕಪಿಯೇ, ನಾನು ಚಂದ್ರವಂಶದ ರಾಜಕುಮಾರ ಭೀಮ. ಇಡೀ ಪ್ರಪಂಚದಲ್ಲಿ ನನ್ನಷ್ಟು ಬಲಶಾಲಿ ಯಾರೂ ಇಲ್ಲಾ ಎಂಬ ಮಾತಿದೆ ಹಾಗಾಗಿ ಒಳ್ಳೇ ಮಾತಿನಲ್ಲಿ ದಾರಿ ಬಿಡು.  ಹನುಮಂತನು ಲಂಕೆಗೆ ಹೋಗುವ ಸಲುವಾಗಿ ಸಮುದ್ರವನ್ನು ದಾಟಿದ ಹಾಗೆ ನಿನ್ನನ್ನು ಈ ಬೆಟ್ಟವನ್ನೂ ದಾಟಿಕೊಂಡು ಹೋಗುವುದು ನನಗೆ ಹೆಚ್ಚಿನ ತ್ರಾಸದಾಯಕವಲ್ಲವಾದರೂ, ನಿನ್ನನ್ನು ದಾಟುವ ಮೂಲಕ ನಿನ್ನಲ್ಲಿರುವ ಪರಮಾತ್ಮನಿಗೆ ಅಗೌರವ ಕೊಡಲು ಇಚ್ಚಿಸುವುದಿಲ್ಲ ಎಂದು ಗರ್ವದಿಂದ ಹೇಳಿದನು.

ಭೀಮನ ಬಾಯಿಯಿಂದ ಹನುಮಂತನ ಹೆಸರನ್ನು ಕೇಳಿದ ಆಂಜನೇಯ, ಅರೇ, ಈ ಹನುಮಂತ ಎಂದರೆ ಯಾರು? ಎಂದು ಕೇಳಿದಾಗ, ಹನುಮಂತ ನನ್ನ ಅಣ್ಣ.  ಮಹಾ ಗುಣವಂತ, ಬುದ್ಧಿವಂತ, ಬಲಶಾಲಿ, ಪರಾಕ್ರಮಿ ಪ್ರಭು ಶ್ರೀರಾಮನ ಪರಮ ಭಂಟ ಎಂಬುದು ವಾನರಾದ ನಿನಗೆ ಗೊತ್ತಿರಬೇಕಲ್ಲವೇ? ಎಂದು ಮತ್ತೆ ಸಿಡಿಮಿಡಿಕೊಂಡು ಸರಿ ಸರಿ ಆ ಕಥೆ ಎಲ್ಲಾ ಬಿಡು. ನನಗೆ ಈಗ ದಾರಿ ಬಿಡು ಎಂದು ಹೇಳಿದ.

ಆಗ ಆ ಕಪಿಯು ಅಯ್ಯಾ! ವಿನಾಕಾರಣ ಸಿಟ್ಟು ಮಾಡಿಕೊಳ್ಳಬೇಡ. ನನಗೆ ಬಹಳ ವಯಸ್ಸಾಗಿರುವುದರಿಂದ ಬಲವನ್ನು ಪಕ್ಕಕ್ಕೆ ಕದಲಿಸುವಷ್ಟೂ ಸಹಾ ಶಕ್ತಿ ಇಲ್ಲದ ಕಾರಣ, ತಾವೇ ದಯಮಾಡಿ ನನ್ನ ಬಾಲವನ್ನು ಪಕ್ಕಕ್ಕೆ ಸರಿಸಿ ದಾರಿ ಮಾಡಿಕೊಂಡು ಹೋಗು ಎಂದು ಹೇಳಿದ.

ಛೇ! ಇದೆಂತಹ ಉದ್ದಟತನದ ಮಾತು. ನನ್ನಂತಹ ಮಹಾವೀರ ಮತ್ತು ಪರಾಕ್ರಮಶಾಲಿ, ಯಕಶ್ಚಿತ್ ಕಪಿಯೊಂದರ ಬಾಲವನ್ನು ಪಕ್ಕಕ್ಕೆ ಸರಿಸಬೇಕೇ?  ಎಂಬ ದುರಂಹಕಾರದ ಮಾಟುಗಳನ್ನು ಆಡುತ್ತಲೇ, ಅತ್ಯಂತ ತುರ್ತಾಗಿ ಹೋಗ ಬೇಕಾದಿದ್ದ ಕಾರಣ, ತನ್ನ ಗೆದೆಯ ತುದಿಯಿಂದಲೇ ಕಪಿಯ ಬಾಲವನ್ನು ಸರಿಸಲು ಪ್ರಯತ್ನಿಸುತ್ತಾನೆ.

ತಾನೊಂದು ಬಗೆದರೆ ದೇವವೊಂದು ಬಗೆದೀತು ಎನ್ನುವಂತೆ ಭೀಮ ಎಷ್ಟೇ ಬಲ ಪ್ರಯೋಗಿಸಿದರೂ  ಸಹಾ  ಆ ಬಾಲವು ಕಿಂಚಿತ್ತೂ ಅಲುಗಾಡದೇ ಇದ್ದಾಗ, ಮತ್ತೊಮ್ಮೆ ತನ್ನ ಎಲ್ಲಾ ಬಲವನ್ನು ಬಾಲದ ಮೇಲೆ ಹಾಕಿ ಪಕ್ಕಕ್ಕೆ ಸರಿಸುವುದು ಬಿಡಿ  ಒಂದು ಕೂದಲಷ್ಟೂ ಅಲುಗಾಡದೇ ಹೋದಾಗ, ಅರೇ ಇದೇನಿದು  ಕಪಿಯ ಬಾಲವೋ ಇಲ್ಲವೇ ತಪ್ಪಿಸಿಕೊಳ್ಳಲಿಲ್ಲ. ಅವನಿಗೆ ಯಾವ ಬಾಲವೋ ಅಥವಾ ಲೋಹದ ತುಂಡೋ ಎಂದು ತಿಳಿಯದಾದಾಗ, ತನ್ನ ಹಮ್ಮು ಮತ್ತು ಬಿಮ್ಮನ್ನು ಬಿಟ್ಟು ಅಯ್ಯಾ ನಿಮ್ಮನ್ನು ನೋಡುತ್ತಿದ್ದರೆ, ತಾವು ಸಾಮಾನ್ಯರಲ್ಲಾ ಎನ್ನುವುದು ಸ್ಪಷ್ಟವಾಗುತ್ತಿದೆ. ನಿಮ್ಮ ಈ ಶಕ್ತಿಯನ್ನು ನೋಡಿದಲ್ಲಿ ತಾವು ತ್ರೇತಾಯುಗದ ನನ್ನ ಸಹೋದರ ಹನುಮಂತರಂತೆ ಕಾಣುತ್ತೀರಿ ದಯವಿಟ್ಟು ತಮ್ಮ ಪರಿಚಯರನ್ನು ಮಾಡಿಕೊಂಡಿ ಎಂದು ವಿನಮ್ರವಾಗಿ ಕೇಳಿಕೊಳ್ಳುತ್ತಾನೆ.

ಭೀಮನ ವಿನಮ್ರತೆಗೆ ಮನಸೋತ ಹನುಮಂತ ಹಾಗೇಯೇ ಸುಮ್ಮನೇ ನಗುತ್ತಾ, ಭೀಮಾ! ಈಗ ನಾನಾರೆಂದು ನಿನಗೆ ತಿಳಿಯಿತೇ? ಎಂದು ಕೇಳುತ್ತಾನೆ. ಸ್ವತಃ ಭೀಮನೂ ಸಹಾ ವಾಯುಪುತ್ರನಾಗಿದ್ದರೂ ಹನುಮಂತನನ್ನು ಮುಖಃ ತಹಾ ಭೇಟಿಯಾಗಿರದಿದ್ದ ಕಾರಣ, ಇಂದು ತನ್ನ ಮುಂದೆಯೇ ಸಾಕ್ಷಾತ್ ರಾಮನ ಭಂಟ ನಿಂತಿರುವುದನ್ನು ಕಂಡು ಬಹಳ ಸಂತೋಷ ಪಟ್ಟು ಸಾಷ್ಟಾಂಗ ನಮಸ್ಕಾರ ಮಾಡಿ, ಅಣ್ಣಾ! ದಯವಿಟ್ಟು ನನ್ನ ಉದ್ದಟತನವನ್ನು ಕ್ಷಮಿಸಿ, ತಾವು ಸೀತಾಮಾತೆಯನ್ನು ಹುಡುಕಿಕೊಂಡು ಬರಲು ಸಮುದ್ರೋಲಂಘನ ಮಾಡಿದಾಗ ನೀನು ಬೃಹದಾಕಾರ ತಳೆದಿದ್ದೆಯಲ್ಲ, ಆ ರೂಪವನ್ನು ನೋಡಬೇಕೆಂದು ಬಯಕೆಯಾಗುತ್ತಿದ್ದು ಅದನ್ನು ನಡೆಸಿಕೊಟ್ಟಲ್ಲಿ, ನನ್ನ ಬದುಕು ಸಾರ್ಥಕವಾಗುತ್ತದೆ ಎಂದು ಕೋರಿಕೊಡು ಎಂದ ಕೂಡಲೇ, ಭೀಮನು ನೋಡ ನೋಡುತ್ತಲೇ ಹನುಮ ಬೃಹದಾಕಾರವಾಗಿ ಬೆಳೆದು ಸಾವಿರ ಸೂರ್ಯರ ತೇಜಸ್ಸಿನಿಂದ ಕಂಗೊಳಿಸಿದ  ಕೆಲವೇ ಕ್ಷಣಗಳಲ್ಲಿ ಪುನಃ ಯಥಾ ರೂಪಕ್ಕೆ ಮರಳಿ ಭೀಮನಿಗೆ ಮುಂಬರುವ ಕುರುಕ್ಷೇತ್ರ ಯುದ್ದದಲ್ಲಿ ಅರ್ಜುನನ ರಥದ ಮೇಲಿನ ಧ್ವಜದಲ್ಲಿ ಕುಳಿತು ಶತ್ರುಗಳ ಎದೆಯನ್ನು ನಡುಗಿಸಲು ಸಹಕರಿಸುತ್ತೇನೆ ಎಂಬ ಭರವಸೆ ನೀಡುವುದಲ್ಲದೇ, ಭೀಮಾ! ನೀನು ಪರಮ ವೀರ ಎಂಬ ದುರಹಂಕಾರದಿಂದ ಮೆರೆಯುತ್ತಿದ್ದದ್ದನ್ನು ಗಮನಿಸಿ ಅದನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಲು ತಿಳಿಸುವ ಸಲುವಾಗಿ  ಈ ರೀತಿಯ ನಾಟಕ ಮಾಡಿದೆ ಎಂದು ಹನುಮಂತನು ತಿಳಿಸಿದ್ದಾರೆ.

ಆಂಜನೇಯನ ಮಾತನ್ನು ಕೇಳಿ ಭೀಮನಿಗೆ ನಾಚಿಕೆಯಾಗಿ, ಅಣ್ಣಾ! ದಯವಿಟ್ಟು ಈ ತಪ್ಪಿಗೆ ಕ್ಷಮೆ ಇರಲಿ. ಖಂಡಿತವಾಗಿಯೂ ಈ  ಪಾಠವನ್ನು ನನ್ನ ಜೀವನ ಇರುವವರೆವಿಗೂ ತಪ್ಪದೇ ಸ್ಮರಿಸುತ್ತೇನೆ ಎಂದು ವಿನಯದಿಂದ ಹೇಳಿ ಹನುಮಂತನನ್ನು ಅಪ್ಪಿಕೊಂಡಾಗ, ಭೀಮನನ್ನು ಸಂತೈಸಿಸಿ ಆತನಿಗೆ ಸೌಗಂಧಿಕಾ ಪುಷ್ಪ ಇರುವ ಯಕ್ಷ ಲೋಕದ ದಾರಿ ತೋರಿಸುತ್ತಾನೆ.

ಮತ್ತೊಮ್ಮೆ ಆಂಜನೇಯನಿಗೆ ಹೃದಯಪೂರ್ವಕವಾಗಿ ನಮಸ್ಕರಿಸಿದ ಯಕ್ಷಲೋಕಕ್ಕೆ ಹೋಗಿ ಕುಬೇರನ ಸರೋವರದಲ್ಲಿದ್ದ ಸೌಗಂಧಿಕಾ ಪುಷ್ಪವನ್ನು ತಂದು ದ್ರೌಪದಿಗೆ ಕೊಡುವ ಮೂಲಕ ಆಕೆಯ ಆಸೆಯನ್ನು ಪೂರೈಸಿದ್ದು ಒಂದೆಡೆಯಾದರೆ, ದಾರಿಯಲ್ಲಿ ವರಸೆಯ ಅಣ್ಣನಾದ ಹನುಮಂತನನ್ನು ಮೊದಲ ಬಾರಿಗೆ ಮುಖತಃ ಭೇಟಿಯಾದ ಸಂತೋಷ ಪಟ್ಟುಕೊಳ್ಳುತ್ತಾನೆ.

ಇದನ್ನೇ ಕನ್ನಡದ ಮೊದಲ ರಾಷ್ಟ್ರಕವಿ ಶ್ರೀ ಪಂಜೆ ಮಂಗೇಶರಾವ್ ಅವರು ತಮ್ಮ  ಉದಯರಾಗ ಕವಿತೆಯಲ್ಲಿ ಏರುವನು ರವಿ ಏರುವನು, ಬಾನೊಳು ಸಣ್ಣಗೆ ತೋರುವನು, ಏರಿದವರು ಚಿಕ್ಕವನಿರಬೇಕೆಲೆ ಎಂಬಾ ಮಾತನು ಸಾರುವನು, ರವಿ ಸಾರುವನು  ಅತ್ಯಂತ ಮಾರ್ಮಿಕವಾಗಿ ಹೇಳಿದ್ದಾರೆ. ಹಾಗಾಗಿ ಎಷ್ಟೇ ದೊಡ್ಡವನಾಗಿದ್ದರೂ ಹಮ್ಮು ಬಿಮ್ಮು ಬಿಟ್ಟು ತಲೆ ಬಗ್ಗಿಸಿ ನಡೆಯುವುದು ಉತ್ತಮ ನಡೆ ಅಲ್ವೇ?

ಏನಂತೀರೀ?

ಸೃಷ್ಟಿಕರ್ತ ಉಮಾಸುತ

2 thoughts on “ಹನುಮ ಭೀಮರ ಸಮಾಗಮದಲ್ಲಿ ಭೀಮನ ಗರ್ವಭಂಗ

  1. ನಿಮ್ಮ ಲೇಖನದ ಮೂಲ ಉದ್ದೇಶ ಮತ್ತು ಸಾಂದರ್ಭಿಕ ವಿಷಯದ ಹೋಲಿಕೆಗೆ ನನ್ನ ಸಹಮತವಿದೆ . ಈ ಪ್ರಸಂಗ ಹನುಮ ಮತ್ತು ಭೀಮಸೇನ ದೇವರು ಮುಖಾಮುಖಿಯಾಗುವ ಪರಮಾತ್ಮನ ಸಂಕಲ್ಪ ಮತ್ತು ಅಸುರ ಮೋಹನಾರ್ಥಕ್ಕಾಗಿ ನಡೆಸಿದ ವ್ಯಾಪಾರ. ಹೇಗೆ ಮಕ್ಕಳ ಮುಂದೆ ನಮ್ಮ ಕೈಯನ್ನು ನಾವೇ ಜರುಗಿಸಲು ಶ್ರಮ ಪಟ್ಟಂತೆ ನಟಿಸುತ್ತೇವೊ ಹಾಗೆ. “ಭೀಮಸೇನಾ ಸಮೋ ನಾಸ್ತಿ ಸೇನೇಯೋರ್ ಉಭಯೋರಪಿ ಪಾಂಡಿತ್ಯೇ ಚ ಪಟುತ್ವೇ ಶೂರತ್ವೇ ಚ ಬಲೇ ಪಿ ಚ ” ಎಂದು ಅವನ ಪರಮ ಶತ್ರುವಾದ ದುರ್ಯೋಧನ ಭೀಷ್ಮರ ಸಭೆಯಲ್ಲಿ ಉಭಯ ಸೇನೆಗಳ ಶಕ್ತಿ ಸಾಮರ್ಥ್ಯಗಳ ಬಗ್ಗೆ ಪರಾಮರ್ಶೆ ಮಾಡುವಾಗ ಹೇಳುತ್ತಾನೆ. ಭೀಮಸೇನರಿಗೆ ಅಹಂಕಾರವಿತ್ತು ಎಂದು ತಿಳಿದರೆ ಅದು ದೇವತೆಗಳು ನಡೆಸಿದ ಲೀಲೆಯನ್ನು ತಪ್ಪಾಗಿ ಅರ್ಥೈಸಿದಂತಾಗುತ್ತದೆ. ಈ ರೀತಿಯ ಪ್ರಸಂಗಗಳು ಮಹಾಭಾರತದಲ್ಲಿ ಹೇರಳವಾಗಿ ದೊರೆಯುತ್ತವೆ. ಪಾಂಡವರು ವನವಾಸದಲ್ಲಿದ್ದಾಗ ಒಮ್ಮೆ ಬಾಯಾರಿದಾಗ ಕಿರಿಯನಾದ ಸಹದೇವನನ್ನು ನೀರು ತರಲು ಕಳುಹಿಸುತ್ತಾರೆ, ಸರೋವರದ ಬಳಿಯಿದ್ದ ಯಕ್ಷನ ಪ್ರಶ್ನೆಗೆ ಉತ್ತರಿಸದೇ ನೀರಿಗಿಳಿದಾಗ ಸಹದೇವನು ಮೃತನಾಗುತ್ತಾನೆ, ಹೀಗೆ ಉಳಿದ ಪಾಂಡವರು ಮೃತರಾದಾಗ ಯುಧಿಷ್ಠಿರನು ಬಂದು ಯಕ್ಷ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳನ್ನು ನೀಡಿದಾಗ ಸಂತುಷ್ಟನಾಗಿ ಯಕ್ಷ ರೂಪದಲ್ಲಿದ್ದ ಸಾಕ್ಷಾತ್ ಯಮಧರ್ಮ ದೇವರು ತಮ್ಮ ರೂಪವನ್ನು ಪ್ರಕಟಿಸಿ ಅನುಗ್ರಹಿಸುತ್ತಾರೆ. ಯುಧಿಷ್ಠಿರನು ಯಮಧರ್ಮ ದೇವರ ಅವತಾರ, ಇಲ್ಲಿ ಮೂಲ ಸ್ವರೂಪ ಮತ್ತು ಅಂಶರೂಪದ ಸಮಾಗಮದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಯಮಧರ್ಮ ತಾನೇ ಕೇಳಿದ ಪ್ರಶ್ನೆಗಳಿಗೆ ತಾನೇ ಉತ್ತರಿಸುವುದು ಸೋಜಿಗ. ದೇವತೆಗಳ ವಿಚಿತ್ರವಾದ ವ್ಯವಹಾರ ನಡೆಸುವ ಇನ್ನೊಂದು ಉದಾಹರಣೆ ಕೊಡುತ್ತೇನೆ. ಇಂದ್ರಜಿತ್ ಸರ್ಪಾಸ್ತ್ರ ಪ್ರಯೋಗಿಸಿ ಲಕ್ಷ್ಮಣ ದೇವರನ್ನು ಮೂರ್ಛೆಗೊಳಿಸುತ್ತಾನೆ ಮತ್ತು ಲಂಕೆಗೆ ಹೊತ್ತು ಒಯ್ಯಲು ಬರುತ್ತಾನೆ ಆದರೇ ಎಲ್ಲಾ ಸರ್ಪಗಳ ಒಡೆಯ ಆದಿಶೇಷನ ಅವತಾರನಾದ ಲಕ್ಷ್ಮಣನನ್ನು ಯಾವ ಸರ್ಪಾಸ್ತ್ರ ಹಾನಿ ಮಾಡಲು ಸಾಧ್ಯ. ಸದಾ ಕಾಲ ಪರಮಾತ್ಮನನ್ನು ಪಾಲಸಾಗರದಲ್ಲಿ ಧರಿಸಿರುವ ಲಕ್ಷ್ಮಣ ದೇವರನ್ನು ಇಂದ್ರಜಿತುವಿಗೆ ಕದುಲಿಸಲು ಸಹಾ ಆಗುವುದಿಲ್ಲ. ಲಕ್ಷ್ಮಣ ಮೂರ್ಛೆ ಹೋದಂತೆ ನಟಿಸುವುದು ಮತ್ತು ನಂತರ ಹನುಮಪ್ಪನ ಪ್ರಾರ್ಥನೆಗೆ ಗರುಡ ದೇವರು ಬಂದು ಸರ್ಪ ಬಂಧನದಿಂದ ಮುಕ್ತಿ ಗೊಳಿಸುವ ಲೀಲೆ ಅನನ್ಯ. ಹೀಗೆ ದೇವತೆಗಳ ಈ ವಿಚಿತ್ರವಾದ ವ್ಯಾಪಾರಗಳನ್ನು ವಿಚಕ್ಷಣ ಮನದಿಂದ ಅನುಸಂಧಾನ ಮಾಡಿ ಪರಮಾತ್ಮನ ಅನುಗ್ರಹ ಪಡೆಯಬೇಕೆಂದು ನನ್ನ ಅಲ್ಪಮತಿಯಿಂದ ಕೇಳಿಕೊಳ್ಳುತ್ತೇನೆ.

    Like

    1. ಮೂಗಿಗಿಂತ ಮೂಗು ನತ್ತಿನ ತೂಕವೇ ಭಾರ ಎಂಬಂತೆ. ನನ್ನ‌ ಲೇಖನಕ್ಕಿಂತಲೂ‌ ನಿಮ್ಮೀ‌ ಅಭಿಪ್ರಾಯ/ ಅನಿಸಿಕೆಯೇ ಬಲು ರೋಚಕವಾಗಿದೆ.

      ಧನ್ಯೋಸ್ಮಿ

      Like

Leave a comment