ಸಾಮಾನ್ಯವಾಗಿ ಇಂದಿನ ಯುವಜನತೆ ತಮ್ಮ ಪದವಿಯನ್ನು ಮುಗಿಸಿದ ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ಹೋಗುವುದು ಒಂದು ರೀತಿಯ ವಾಡಿಕೆಯಾಗಿದೆ. ಹಾಗೆ ಓದಲು ಹೋದ ಶೇ90 ರಷ್ಟು ಜನರು ವಿದೇಶೀ ಐಶಾರಾಮ್ಯ ಜೀವನಕ್ಕೆ ಒಗ್ಗಿಕೊಂಡು ಭಾರತಕ್ಕೆ ಹಿಂದಿರುಗಿ ಬಾರದೇ ಇರುವುದೇ, ನಮ್ಮ ಭಾರತದ ಇಂದಿನ ಸ್ಥಿತಿಗೆ ಸ್ವಲ್ಪ ಮಟ್ಟಿಗಿನ ಕಾರಣ ಎಂದರೂ ತಪ್ಪಾಗದು. ಆದರೆ ಕ್ರಿ.ಶ 4ನೇ ಶತಮಾನದಿಂದ 11ನೇ ಶತಮಾನದವರೆಗೂ ಅರ್ಥಾತ್ ಮೊಘಲರು ಭಾರತದ ಮೇಲೆ ಧಾಳಿ ಮಾಡಿ ತಕ್ಕ ಮಟ್ಟಿಗೆ ಭಾರತವನ್ನು ವಶಪಡಿಸಿಕೊಳ್ಳುವವರೆಗೂ ಭಾರತದಲ್ಲೇ ಹತ್ತಾರು ದೊಡ್ಡ ದೊಡ್ಡ ವಿಶ್ವವಿದ್ಯಾನಿಲಯಗಳಿದ್ದು, ಆ ವಿದ್ಯಾಲಯಗಳಲ್ಲಿ ವಿದ್ಯೆಯನ್ನು ಕಲಿಯಲು ದೇಶ ವಿದೇಶದಿಂದ ಲಕ್ಷಾಂತರ ವಿದ್ಯಾರ್ಥಿಗಳು ಭಾರತಕ್ಕೆ ಬರುತ್ತಿದ್ದ ಕಾರಣ, ಆ ಕಾಲ ಅಕ್ಷರಶಃ ಭಾರತ ವಿಶ್ವಗುರುವಾಗಿದ್ದಂತಹ ಕಾಲ ಎಂದರೂ ತಪ್ಪಾಗದು. ಅಂತಹ ಸುವರ್ಣಕಾಲದಲ್ಲಿ ಇಂದಿನ ಬಿಹಾರಕ್ಕೆ ಸೇರಿರುವ ನಳಂದ ವಿಶ್ವವಿದ್ಯಾಲಯವೂ ಒಂದಾಗಿದ್ದು ಅದರ ಕುರಿತಾದ ವಿವರಗಳನ್ನು ತಿಳಿಯೋಣ ಬನ್ನಿ.
ಇಂದಿನ ಬಿಹಾರದ ರಾಜಧಾನಿಯಾದ ಪಾಟ್ನಾದ ಆಗ್ನೇಯ ಭಾಗಕ್ಕೆ ಸುಮಾರು 55 ಮೈಲು ದೂರದಲ್ಲಿದ್ದ ನಳಂದ ವಿಶ್ವವಿದ್ಯಾಲಯ, ಕ್ರಿ.ಶ. 427 ರಿಂದ 1197 ವರೆಗೆ ಬುದ್ಧ ಪ್ರಣೀತ ತತ್ವಜ್ಞಾನದ ವ್ಯಾಸಂಗ ಕೇಂದ್ರವಾಗಿದ್ದ ಕಾರಣ, ಇದು ಇತಿಹಾಸದಲ್ಲಿ ನಮೂದಿತವಾದ ಮೊದಲ ಅತೀ ಶ್ರೇಷ್ಠವಾದ ವಿಶ್ವವಿದ್ಯಾಲಯ ಎಂದೇ ಪ್ರಖ್ಯಾತಿಯನ್ನು ಹೊಂದಿತ್ತು. ಈ ವಿಶ್ವವಿದ್ಯಾಲಯಕ್ಕೆ ನಳಂದ ಎಂಬ ಹೆಸರು ಬರಲು ಅನೇಕ ಉಲ್ಲೇಖಗಳಿದ್ದು ಅವುಗಳಲ್ಲಿ ನಳಂದ ಎಂಬ ಸಂಸ್ಕೃತ ಪದದ ಅರ್ಥವೆಂದರೆ, ನೀಡಿದಷ್ಟೂ ತೃಪ್ತಿಯಿಲ್ಲದ್ದು ಅರ್ಥಾತ್ ಅಗಾಧ ಎಂಬ ಅರ್ಥವೂ ಬರುತ್ತದೆ. ಅದೇ ರೀತಿ ಮತ್ತೊಂದು ಉಲ್ಲೇಖದ ಪ್ರಕಾರ ‘ನ ಅಲಂ ದ ಇತಿ ನಳಂದಾ ಎಂದಾಗುತ್ತದೆ. ಅಂದರೆ ವಿದ್ಯಾದಾನದ ವಿಷಯದಲ್ಲಿ ಅಲಂ (ಸಾಕು) ಎಂಬುವುದೇ ಗೊತ್ತಿರದಿದ್ದಂತಹ ಬೃಹತ್ ವಿಶ್ವವಿದ್ಯಾಲಯವೇ ನಳಂದ. ಇನ್ನು ಚೈನಾದ ಯಾತ್ರಾರ್ಥಿ-ಸಂತ ಜುವಾನ್‌ಜಂಗ್‌ನ ಪ್ರಕಾರ ಆ ಪ್ರದೇಶದಲ್ಲಿದ್ದ ಮಾವಿನ ತೋಪಿನಲ್ಲಿದ್ದ ಸರೋವರದಲ್ಲಿ ವಾಸಿಸುತ್ತಿದ್ದ ನಾಗನಿಂದ ನಾಲಂದ ಎಂಬ ಹೆಸರು ಬಂದಿತೆಂದು ಹೇಳಿದರೆ, ಅವನೇ ಮತ್ತೊಂದು ಕಡೆ ಹೇಳಿದಂತೆ ಈ ನಳಂದ ಪ್ರದೇಶವು ಶಾಕ್ಯ ಮುನಿ ಬುದ್ಧನ ಒಂದು ಕಾಲದ ರಾಜಧಾನಿಯಾಗಿದ್ದು ಅದರ ಅರ್ಥ “ವಿರಾಮವಿಲ್ಲದೆ ಭಿಕ್ಷೆ” ಎಂದು ಹೇಳಿದರೆ, ಇನ್ನು ಅನೇಕ ಪಂಡಿತರ ಪ್ರಕಾರ, ಬುದ್ಧನ ಬಲಗೈ ಬಂಟನಂತಿದ್ದ ಶಿಷ್ಯ ಸಾರಿಪುತ್ತನ ಜನನ ಮತ್ತು ಮರಣ ಎರಡೂ ಸಹಾ ಆದದ್ದು ನಲಕ ಎಂಬ ಗ್ರಾಮವಾಗಿದ್ದರಿಂದ ಮುಂದೇ ಜನರ ಆಡು ಭಾಷೆಯಲ್ಲಿ ಅದೇ ಪ್ರದೇಶ ಅಪಭ್ರಂಶವಾಗಿ ನಳಂದ ಎಂಬ ಹೆಸರನ್ನು ಪಡೆಯಿತು ಎನ್ನಲಾಗುತ್ತದೆ.
ಪ್ರಾಚೀನ ಕಾಲದಲ್ಲಿ ಈ ಪ್ರದೇಶದಲ್ಲಿ ಭಗವಾನ್ ಬುದ್ಧ, ಭಗವಾನ್ ಮಹಾವೀರರಂತಹ ಆಧ್ಯಾತ್ಮಿಕ ಗುರುಗಳು ಧ್ಯಾನ ಮಾಡಿದ್ದಲ್ಲದೇ, ನಾಗಾರ್ಜುನ, ಆರ್ಯಭಟ್ಟ, ಧರ್ಮಕೀರ್ತಿಯಂತಹ ಮಹಾನ್ ಪಂಡಿತರುಗಳು ತಮ್ಮ ವಿದ್ವತ್ಪೂರ್ಣ ಪಾಂಡಿತ್ಯದ ಪ್ರವಚನವನ್ನು ನೀಡಿದ್ದ ಕಾರಣ ಈ ಪ್ರದೇಶವು ಅತ್ಯಂತ ವಿದ್ಯೆಯ ಕಲಿಕೆಗೆ ಅತ್ಯಂತ ಪ್ರಶಸ್ತವಾದ ಪ್ರದೇಶ ಎನಿಸಿದ್ದ ಕಾರಣ, ಈ ರಾಜ್‌ಗೀರ್ ಬೆಟ್ಟಗಳ ತಪ್ಪಲಿನ ಈ ಪ್ರದೇಶದಲ್ಲಿ ಕ್ರಿಶ 427ರಲ್ಲಿ ಗುಪ್ತರ ಚಕ್ರವರ್ತಿ ಶಕ್ರಾದಿತ್ಯ (ಕುಮಾರಗುಪ್ತ ಆಳ್ವಿಕೆ 415-55) ನಿಂದ ಸ್ಥಾಪಿತವಾಡ ಈ ನಳಂದಾ ವಿಶ್ವವಿದ್ಯಾಲಯ ವಿಶ್ವದ ಮೊದಲ ವಸತಿ ವಿಶ್ವವಿದ್ಯಾಲಯ ಎಂದೇ ಪ್ರಖ್ಯಾತವಾಗಿ, ಆನಂತರದ ದಿನಗಳಲ್ಲಿ ಮೌರ್ಯ ವಂಶದ ಚಕ್ರವರ್ತಿ ಸಾಮ್ರಾಟ್ ಅಶೋಕನು ಸಹಾ ಈ ವಿಶ್ವವಿದ್ಯಾಲಯದಲ್ಲಿ ಕೆಂಪು ಇಟ್ಟಿಗೆಗಳಿಂದ ಕೂಡಿದ ನಯನ ಮನೋಹರ ಕಟ್ಟಡಗಳನ್ನು ಕಟ್ಟಿಸಿದರೆ ನಂತರ ಬೌದ್ಧ ಸಾಮ್ರಾಟರಾದ ಹರ್ಷ ಹಾಗೂ ಪಾಲ ಸಾಮ್ರಾಜ್ಯದ ನಂತರದ ಕೆಲವು ಚಕ್ರವರ್ತಿಗಳ ಕಾಲದಲ್ಲಿ ಸುಮಾರು 12 ನೇ ಶತಮಾನದ ಅಂತ್ಯದವರೆಗೆ 800 ವರ್ಷಗಳ ಕಾಲ ಅತ್ಯಂತ ಪ್ರವರ್ಧಮಾನವಾಗಿತ್ತು.
ಈ ವಿಶ್ವವಿದ್ಯಾಲಯದಲ್ಲಿ ಅಂದಿನ ಕಾಲಕ್ಕೇ ಇಲ್ಲಿ ನೂರಾರು ಎಕರೆಗಳಷ್ಟು ವಿಶಾಲವಾದ ಸ್ಥಳದಲ್ಲಿ ಸುಮಾರು 2,000ಕ್ಕೂ ಹೆಚ್ಚಿನ ವಿದ್ವಾಂಸರು ಮತ್ತು 10,000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕೇವಲ ಭಾರತವಷ್ಟೇ ಅಲ್ಲದೇ, ಚೀನಾ, ಕೊರಿಯಾ, ಜಪಾನ್, ಟಿಬೆಟ್, ಮಂಗೋಲಿಯಾ,ಗ್ರೀಸ್, ಪರ್ಶಿಯಾ, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದಂತಹ ದೂರದ ಸ್ಥಳಗಳಿಂದಲೂ ಸಹಾ ವಿದ್ವಾಂಸರು ಮತ್ತು ವಿದ್ಯಾರ್ಥಿಗಳೂ ಈ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ, ವಾಸ್ತುಶಿಲ್ಪ, ಖಗೋಳ ವಿಜ್ಞಾನ, ರಸವಿದ್ಯೆ, ವೈದ್ಯಕೀಯ ಅದರಲ್ಲೂ ಶರೀರ ರಚನಾ ಶಾಸ್ತ್ರದಲ್ಲಿನ ಪುರಾತನ ಭಾರತೀಯ ವೈಜ್ಞಾನಿಕ ಕಲ್ಪನೆಯ ಆಧಾರಿತವಾದ ಶಿಕ್ಷಣವನ್ನು ಇಲ್ಲಿ ಪಡೆಯುತ್ತಿದ್ದರು ಎಂದು ಇತಿಹಾಸಕಾರರು ಬಣ್ಣಿಸುತ್ತಾರೆ.
ಇತಿಹಾಸಜ್ಞ ಸುಕುಮಾರ್ ದತ್ತರು ಪ್ರಕಾರ ನಳಂದ ವಿಶ್ವವಿದ್ಯಾಲಯದ ಚರಿತ್ರೆಯನ್ನು ಎರಡು ಮುಖ್ಯ ವಿಭಾಗವಾಗಿ ವಿಂಗಡಿಸಬಹುದಾಗಿದ್ದು, ಮೊದಲನೆಯದಾಗಿ ಗುಪ್ತರ ವಂಶಪಾರಂಪರ್ಯದ ಪ್ರಗತಿಪರ ಸಾಂಸ್ಕೃತಿಕ ಸಂಪ್ರದಾಯದ ಮೇಲೆ ಪ್ರಭಾವ ಬೀರಿದ ಆರರಿಂದ ಒಂಬತ್ತನೆಯ ಶತಮಾನದವರೆಗೆ ಇದರ ಬೆಳವಣಿಗೆ, ಅಭಿವೃದ್ಧಿ ಮತ್ತು ಸೌಕರ್ಯ ಎಲ್ಲವೂ ಉಚ್ಛ್ರಾಯ ಸ್ಥಿತಿಯಲ್ಲಿದ್ದರೆ, ಎರಡನೆಯದಾಗಿ ಒಂಬತ್ತರಿಂದ ಹದಿಮೂರನೇ ಶತಮಾನದವರೆಗೆ ಇಳಿಮುಖವಾಗುತ್ತಾ ಹೋಗಿ ಅಂತಿಮವಾಗಿ ವಿನಾಶವಾಗಿ ಹೋಯಿತು. ವಿಶ್ವವಿಖ್ಯಾತ ಚೀನೀ ಇತಿಹಾಸಕಾರ ಹ್ಯೂಯೆನ್ ತ್ಸಾಂಗ್ ಸಹಾ ಇಲ್ಲಿ ಸುಮಾರು ಐದು ವರ್ಷ ಕಾಲ ಇಲ್ಲಿನ ವಿದ್ಯಾರ್ಥಿಯಾಗಿದ್ದ. ಆತನ ಪ್ರಕಾರ ಚೀನಾ, ಕೊರಿಯಾ, ಟಿಬೆಟ್, ಮಂಗೋಲಿಯಾ, ಜರ್ಮನ್ ದೇಶಗಳಿಂದ ನಳಂದಕ್ಕೆ ವೈದ್ಯಕೀಯ ಕಲಿಯಲು ಆಗಮಿಸುತ್ತಿದ್ದರು. ಅಂದಿನ ಕಾಲದಲ್ಲೇ ನಳಂದದಲ್ಲಿ ಪ್ರವೇಶ ದೊರಕುವುದೇ ಕಷ್ಟಕರವಾದ ಪರಿಸ್ಥಿತಿಯಿತ್ತು ಎಂದು ಹೇಳಿದ್ದಾನೆ.
ನಳಂದ ವಿಶ್ವವಿದ್ಯಾಲಯದಲ್ಲಿ ಬೌದ್ಧ ಧರ್ಮಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದ ಕಾರಣ ಸಹಜವಾಗಿ ಉಳಿದ ಧರ್ಮವಾದ ಹಿಂದೂ ಮತ್ತು ಜೈನರಿಂದ ಸುಮಾರು 10ನೆಯ ಶತಮಾನದ ಸಮಯದಲ್ಲಿ ನಳಂದ ವಿಶ್ವವಿದ್ಯಾಲಯದ ಮೇಲೆ ಹೆಚ್ಚಿನ ಒತ್ತಡ ಬೀಳಗೊಡಗಿತು. ಇತಿಹಾಸಕಾರ ಪ್ರಕಾಶ್ ಬುದ್ಧ್ ಅವರ ಪ್ರಕಾರ, ಹಿಂದೂಗಳು ಮಾಡಿದ ಒಂದು ಯಜ್ಞದ ಮಹಾಜ್ವಾಲೆಯು ನಳಂದದ ಒಂಬತ್ತು ಮಹಡಿಯ ಗ್ರಂಥಾಲಯವಾದ ರತ್ನಭೋದಿಯನ್ನು ನಾಶಪಡಿಸಿತು ಎಂದರೆ, ಚರಿತ್ರಕಾರ ಸದಾಶಿವಂ ಅವರು ತಮ್ಮ ಸೋಷಿಯಲ್ ಹಿಸ್ಟರಿ ಆಫ್ ಇಂಡಿಯಾ ಪುಸ್ತಕದಲ್ಲಿ ಹೇಳಿರುವಂತೆ ವಿಶ್ವವಿದ್ಯಾನಿಲಯದ ಬೃಹತ್ತಾದ ಹಸ್ತಪ್ರತಿ ಗ್ರಂಥಾಲಯವನ್ನು ಅಸೂಯೆಯಿಂದ ತ್ರಿಥಿಕರು ಜೈನರ ಸಹಾಯದಿಂದ ಅಗ್ನಿಗೆ ಆಹುತಿ ಮಾಡಿದ್ದರು ಎನ್ನಲಾಗುತ್ತದೆ. ಒಟ್ಟಿನಲ್ಲಿ ಯಾರದ್ದೋ ದ್ವೇಷದ ಕಾರಣದಿಂದಾಗಿ ಅವನತಿಯ ಹಾದಿಯನ್ನು ಹಿಡಿಯಬೇಕಾಗಿ ಬಂದದ್ದು ನಿಜಕ್ಕೂ ವಿಷಾಧನೀಯವೇ ಸರಿ.
1193ರಲ್ಲಿ, ಟರ್ಕಿಯಿಂದ ಬಂದಿದ್ದ ಮುಸಲ್ಮಾನ ಮತಾಂಧ ಬಖ್ತಿಯಾರ್ ಖಿಲ್ಜಿಯ ವಕ್ರದೃಷ್ಟಿ ಬೌದ್ಧ ಧರ್ಮದ ಮೇಲೆ ಬೀಳುತ್ತದೆ. ಬೌದ್ಧ ಧರ್ಮವನ್ನು ಕಿತ್ತು ಹಾಕಿ ಇಸ್ಲಾಂ ಧರ್ಮವನ್ನು ಭಾರತಾದ್ಯಂತ ಹರಡುವ ಕಾರ್ಯಪ್ರವೃತ್ತನಾದ ಖಿಲ್ಜಿಯು ಆ ಪ್ರಯತ್ನದಲ್ಲಿ ಸಾವಿರಾರು ಬೌದ್ಧ ಸಂನ್ಯಾಸಿಗಳನ್ನು ಜೀವಂತ ಸುಡಲಾಯಿತು ಮತ್ತು ಸಾವಿರಾರು ಸಂನ್ಯಾಸಿಗಳ ಶಿರಚ್ಛೇದ ಮಾಡಲಾಯಿತು. ಇದರ ಮುಂದುವರೆಇದ ಭಾಗವಾಗಿ ಕೆಲವೇ ಕೆಲವು ಬೆರಳೆಣಿಕೆಯ ಸಂಖ್ಯೆ ಸೈನಿಕರು ನಳಂದ ವಿಶ್ವವಿದ್ಯಾಲಯಕ್ಕೆ ಧಾಳಿ ಮಾಡುವ ಸಂಧರ್ಭದಲ್ಲಿ ಸಾವಿರಾರು ವಿದ್ಯಾರ್ಥಿಗಳು ಒಗ್ಗೂಡಿ ಧಾಳಿ ಮಾಡಿದ್ದಲ್ಲಿ ನಳಂದ ವಿಶ್ವವಿದ್ಯಾಲಯದ ನಾಶವನ್ನು ತಡೆಯಬಹುದಿತ್ತೋ ಏನೋ? ದುರಾದೃಷ್ಟವಷಾತ್ ಆ ಬೆರಳೆಣಿಕೆಯ ಸೈನಿಕರು ಒಬ್ಬಬ್ಬ ಬೌದ್ಧ ಭಿಕ್ಷುಗಳು ಇಲ್ಲವೇ ವಿದ್ಯಾರ್ಥಿಗಳ ಮೇಲೆ ಧಾಳಿ ನಡೆಸುತ್ತಿದ್ದಾಗ, ಅದು ತಮಗೆ ಸಂಬಂಧ ಪಡದ ವಿಷಯ ಎಂದು ಉಳಿದ ವಿದ್ಯಾರ್ಥಿಗಳು ಭಾವಿಸಿದ ಕಾರಣ ನೋಡ ನೋಡುತ್ತಿದ್ದಂತೆಯೇ ಕೆಲವೇ ಕೆಲವು ಘಂಟೆಗಳಲ್ಲಿ ಇಡೀ ನಳಂದ ವಿಶ್ವ ವಿದ್ಯಾಲಯವನ್ನು ಖಿಲ್ಚಿಯ ಸೈನಿಕರು ಕೊಳ್ಳೆ ಹೊಡೆದದ್ದಲ್ಲದೇ, ಅಲ್ಲಿನ ವಿದ್ಯಾರ್ಥಿಗಳ ಮೇಲೆ ಮಾರಣ ಹೋಮ ನಡೆಸಿ, ಇಡೀ ವಿಶ್ವವಿದ್ಯಾಲಯಕ್ಕೆ ಬೆಂಕಿ ಹಚ್ಚಿದ ಪರಿಣಾಮ ಅಲ್ಲಿನ ಗ್ರಂಥಾಲಯದ ಹಸ್ತ ಪ್ರತಿಗಳು ಸುಟ್ಟು ಹೋಗಿ ಅದರಿಂದ ಬರುತ್ತಿದ್ದ ಹೊಗೆಯು ಸುಮಾರು ಮೂರ್ನಾಲ್ಕು ತಿಂಗಳುಗಳ ಕಾಲ ಗುಡ್ಡದ ಮೇಲಿನ ದಟ್ಟ ಮುಸುಕಿನಂತೆ ಆವರಿಸಿತ್ತು ಎಂದರೆ ಯಾವ ಪ್ರಮಾಣದ ಪುಸ್ತಕಗಳು ಅಗ್ನಿಗೆ ಆಹುತಿಯಾಯಿತು ಎಂಬುದರ ಅರಿವಾಗುತ್ತದೆ. ನಳಂದದ ಕೊನೆಯ ಸಿಂಹಾಸನಾಧೀಶನಾದ ಶಾಕ್ಯಶ್ರೀಭದ್ರ ಕ್ರಿ.ಶ.1204ರಲ್ಲಿ ಟಿಬೆಟಿಗೆ ಪಲಾಯನ ಮಾಡಿದ ನಂತರ ಇತಿಹಾಸ ಪ್ರಸಿದ್ಧ ನಳಂದ ವಿಶ್ವವಿದ್ಯಾಲಯ ಹಾಳು ಕೊಂಪೆಯಾಗುತ್ತದೆ.
ಮಾರ್ಚ್ 2006 ರಲ್ಲಿ, ಬಿಹಾರ ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾರತದ ಮಾಜಿ ರಾಷ್ಟ್ರಪತಿಗಳಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಪ್ರಾಚೀನ ನಳಂದದ ಪುನರುಜ್ಜೀವನದ ಬಗ್ಗೆ ಪ್ರಸ್ತಾಪಿಸಿ, ಪುರಾತನ ನಳಂದವನ್ನು ಮರುಸ್ಥಾಪಿಸಲು ಸೂಚಿಸುತ್ತಾರೆ. ನಂತರ ಸಿಂಗಾಪುರ ಸರ್ಕಾರ ಮತ್ತು ಜನವರಿ 2007 ರಲ್ಲಿ ಫಿಲಿಪೈನ್ಸ್‌ನಲ್ಲಿ ಪೂರ್ವ ಏಷ್ಯಾ ಶೃಂಗಸಭೆಯ (EAS) ಹದಿನಾರು ಸದಸ್ಯ ರಾಷ್ಟ್ರಗಳ ನಾಯಕರುಗಳಲ್ಲದೇ, ಅಕ್ಟೋಬರ್ 2009 ರಲ್ಲಿ ಥೈಲ್ಯಾಂಡ್‌ನಲ್ಲಿ ನಡೆದ ನಾಲ್ಕನೇ ಇಎ ಶೃಂಗಸಭೆಯಲ್ಲಿ ನಳಂದ ವಿಶ್ವವಿದ್ಯಾಲಯದ ಪುನರುತ್ಧಾನದ ಬಗ್ಗೆ ಚರ್ಚೆ ನಡೆಸಿದ ನಂತರ 2010 ಭಾರತದ ಸಂಸತ್ತು ನಳಂದಾ ವಿಶ್ವವಿದ್ಯಾನಿಲಯ ಕಾಯಿದೆಯನ್ನು ಅಂಗೀಕರಿಸಿದ ವಿಶ್ವವಿದ್ಯಾಲಯದ ಪಳಿಯುಳಿಕೆ ಜಾಗದಲ್ಲೇ ಅದೇ ರೀತಿಯ ಹೊಸ ಕಟ್ಟದ ನಿರ್ಮಾಣದಕ್ಕೆ ಮುಂದಾಯಿತು. ಸೆಪ್ಟೆಂಬರ್ 2014 ಮೊದಲ ವರ್ಷದ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುವ ಮೂಲಕ ಅಧಿಕೃತವಾಗಿ ವಿಶ್ವವಿದ್ಯಾಲಯ ಪುನರ್ ಆರಂಭವಾಯಿತು. ಬಿಹಾರದ ಮುಖ್ಯಮಂತ್ರಿಗಳಾದ ಶ್ರೀ ನಿತೀಶ್ ಕುಮಾರ್ ಅವರೂ ಸಹಾ ಇದರ ಬಗ್ಗೆ ಹೆಚ್ಚಿನ ಆಸ್ಥೆಯನ್ನು ವಹಿಸಿ ರಾಜ್ಯ ಸರ್ಕಾರದ ವತಿಯಿಂದ ವಿಶ್ವವಿದ್ಯಾಲಯದ ಆವರಣಕ್ಕಾಗಿ ಸುಮಾರು 455 ಎಕರೆಯಷ್ಟು ವಿಶಾಲವಾದ ಭೂಮಿಯನ್ನು ತ್ವರಿತವಾಗಿ ಮಂಜೂರು ಮಾಡಿದ ಕೂಡಲೇ, ಪ್ರಸಿದ್ಧ ವಾಸ್ತುಶಿಲ್ಪಿ ಪದ್ಮ ವಿಭೂಷಣ B.V. ದೋಷಿಯವರ ನೇತೃತ್ವದಲ್ಲಿ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಪ್ರಪಂಚದಲ್ಲೇ ಅತ್ಯುತ್ತಮ ಗುಣಮಟ್ಟದ ಆದರೆ, ಪ್ರಾಚೀನ ನಳಂದದ ವಾಸ್ತುವನ್ನು ಪ್ರತಿಬಿಂಬಿಸುವ ಪರಿಸರ ಸ್ನೇಹಿಯಾಗಿ ವಿನ್ಯಾಸಗೊಳಿಸಿ ಕಟ್ಟಡಗಳು 2017 ರಿಂದ 202೪ ರ ಅವಧಿಯಲ್ಲಿ ನಿರ್ಮಾಣಗೊಂಡು 2024ರ ಜೂನ್ 19, ಬುಧವಾರದಂದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಸುಮಾರು 17 ರಾಷ್ಟ್ರಗಳ ರಾಯಭಾರಿಗಳು ಉಪಸ್ಥಿತಿಯಲ್ಲಿ ಅಧಿಕೃತವಾಗಿ ನಳಂದ ವಿಶ್ವವಿದ್ಯಾಲಯವನ್ನು ಉಧ್ಘಾಟಿಸುವ ಮೂಲಕ ಮತ್ತೊಮ್ಮೆ ನಳಂದ ವಿಶ್ವವಿದ್ಯಾಲಯ ವಿಶ್ವವಿಖ್ಯಾತ ಕಲಿಕೆಯ ಕೇಂದ್ರ ಸ್ಥಾನವಾಗಿ ರೂಪಗೊಳ್ಳುವುದಕ್ಕೆ ನಾಂದಿ ಹಾಡಿದ್ದಾರೆ.

ನಿರ್ಮಾಣವಾಗಿರುವ ನಳಂದಾ ವಿಶ್ವವಿದ್ಯಾಲಯವು ಸದ್ಯಕ್ಕೆ ಎರಡು ಶೈಕ್ಷಣಿಕ ಬ್ಲಾಕ್‌ಗಳನ್ನು ಹೊಂದಿದ್ದು, ಸುಮಾರು . 40 ಕೊಠಡಿಗಳ ಸುಮಾರು 1,900 ಆಸನದ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೇ ತಲಾ 300 ಆಸನಗಳ ಸಾಮರ್ಥ್ಯವನ್ನು ಹೊಂದಿರುವ ಎರಡು ದೊಡ್ಡ ಸಭಾಂಗಣಗಳೂ ಸಹಾ ನಿರ್ಮಾಣಗೊಂಡಿದೆ. ಸುಮಾರು 550 ವಿದ್ಯಾರ್ಥಿಗಳಿಗೆ ವಾಸ್ತವ್ಯ ಕಲ್ಪಿಸುವ ವಿದ್ಯಾರ್ಥಿ ನಿಲಯದ ಜೊತೆಗೆ ಆಧುನಿಕ ರೀತಿಯ ಶಿಕ್ಷಣಕ್ಕೆ ಅವಶ್ಯಕವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿದ್ದು, ಸುಮಾರು 100 ಎಕರೆಯಷ್ಟು ಜಲಮೂಲಗಳು ಹೊಂದಿದ್ದು, ಸೌರವ್ಯವಸ್ಥೆಯ ಸ್ಥಾವರ, ಶುದ್ಧ ಕುಡಿಯುವ ನೀರಿನ ಸಂಸ್ಕರಣಾ ಘಟಕ, ತ್ಯಾಜ್ಯ ನೀರನ್ನು ಮರುಬಳಕೆ ಘಟಕದ ಜೊತೆ ಇತರೇ ಅನೇಕ ಪರಿಸರ ಸ್ನೇಹಿ ಸೌಲಭ್ಯ ಹೊಂದಿರುವ ಹಚ್ಚ ಹಸುರಿನ ಪರಿಸರದಿಂದ ಕೂಡಿದ್ದು, ಸುಮಾರು 1600 ವರ್ಷಗಳ ಹಿಂದೆ ಸ್ಥಾಪಿಸಲಾದ ಮೂಲ ನಳಂದಾ ವಿಶ್ವವಿದ್ಯಾಲಯದ ಗತ ವೈಭವವನ್ನು ನೆನಪಿಸುವಂತಾಗಿದೆ. ಇಷ್ಟೆಲ್ಲಾ ಸೌಲಭ್ಯಗಳಿರುವ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಅನೇಕ ವಿದೇಶೀ ವಿದ್ಯಾರ್ಥಿಗಳೂ ವ್ಯಾಸಂಗ ಮಾಡುತ್ತಿದ್ದು, ಇನ್ನು ಮುಂದೆ ನಮ್ಮ ದೇಶದ ಯುವ ಜನತೆಯೂ ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಗಳಿಗೆ ಹೋಗುವ ಬದಲು ಇದೇ ನಳಂದ ವಿಶ್ವವಿದ್ಯಾಲಯದಲ್ಲೇ ಉನ್ನತ ಶಿಕ್ಷಣವನ್ನು ಪಡೆಯುವಂತಾದರೆ, ನಿಶ್ಚಿತವಾಗಿಯೂ ಅತೀ ಶೀಘ್ರದಲ್ಲೇ ಭಾರತ ವಿಶ್ವಗುರುವಾಗುವ ಸಮಯ ದೂರವಿಲ್ಲಾ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ