ಕೇವಲ ಭಾರತವೇಕೇ? ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ ಕ್ಷಿಪ್ರವಾದ ಬೆಳವಣಿಗೆಯನ್ನು ಕಂಡ ಕೆಲವೇ ನಗರಗಳಲ್ಲಿ ಬೆಂಗಳೂರು ಸಹಾ ಒಂದು ಎಂದರೂ ತಪ್ಪಾಗದು. ಗಾರ್ಡನ್ ಸಿಟಿ ಮತ್ತು ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಎನಿಸಿಕೊಂಡು ಐಟಿ – ಬಿಟಿ ಕ್ರಾಂತಿಯ ಸ್ಥಳವಾಗಿದ್ದರೂ, ಬೆಂಗಳೂರಿನ ಪ್ರತಿಯೊಂದು ಬಡಾವಣೆಯಲ್ಲಿಯೂ ಕಡಿಮೆ ಎಂದರೂ ನಾಲ್ಕೈದು ದೇವಾಲಯಗಳಿದ್ದು ಅವುಗಳಲ್ಲಿ ಅನೇಕ ದೇವಾಲಯಗಳ ದೇವರುಗಳು ಭಕ್ತರ ನಂಬಿಕೆ ಮತ್ತು ಭವರೋಗಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದ್ದು ಅಂತಹವುಗಳಲ್ಲಿ ಒಂದಾದ ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್ ಜನಜಂಗುಳಿಯ ಮಧ್ಯದಲ್ಲಿ ಎಲೆಮರೆಕಾಯಿಯಂತಿರುವ ಬಹುತೇಕ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪರೀಕ್ಷಾ ದೇವರು ಅಥವಾ ಹಾಲ್ ಟಿಕೆಟ್ ಹಯಗ್ರೀವ ಎಂದೇ ಪ್ರಖ್ಯಾತವಾಗಿರುವ ಶ್ರೀ ಲಕ್ಷ್ಮೀ ಹಯಗ್ರೀವ ಸ್ವಾಮಿ ದೇವಸ್ಥಾನದ ಹಯಗ್ರೀವ ದೇವರ ಮಹಿಮೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್‌ನಲ್ಲಿ ರಾಜ್ಯ/ಅಂತರ್ ರಾಜ್ಯ ಸಾರಿಗೆ, ರೈಲ್ವೇ ನಿಲ್ದಾಣ, ನಗರ ಸಾರಿಗೆ ಅಲ್ಲದೇ, ಇತ್ತೀಚೆಗೆ ಮೆಟ್ರೋ ಸಹಾ ಸೇರಿಕೊಂಡಿದ್ದು ಇದು ಊರೂರಿನ ಜನರನ್ನು ಬೆಂಗಳೂರಿಗೆ ಸೇರಿಸುವ ಪ್ರಮುಖ ಸ್ಥಳವಾಗಿರುವ ಕಾರಣ ದಿನದ 24 ಗಂಟೆಗಳೂ ಜನಭರಿತವಾಗಿಯೇ ಇರುವಂತಹ ಸ್ಥಳವಾಗಿದೆ. ಇಂತಹ ಪ್ರವಾಸಿಗರ/ಪ್ರಯಾಣಿಕರ ಅನುಕೂಲಕ್ಕಾಗಿಯೇ, ಈ ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಉಪಹಾರಗೃಹಗಳು, ವಸತಿಗೃಹಗಳು ಮತ್ತು ಟ್ರಾವೆಲರ್ಸ್ಗಳಿದ್ದು ಇವುಗಳ ಮಧ್ಯೆ ಹೊರಗಿನವರಿಗೆ ಸುಲಭವಾಗಿ ಕಾಣಿಸದಂತಹ, ಹಾಗೆ ಕಾಣಿಸಿದರೂ ಅತ್ಯಂತ ಸಣ್ಣ ದ್ವಾರದ ಮೂಲಕ ಪ್ರವೇಶ ಮಾಡಿದರೆ ಒಳಗೊಂದು ಸುಮಾರು 600-800 ವರ್ಷಗಳಷ್ಟು ಪುರಾತನವಾದ ಮತ್ತು ಅತ್ಯಂತ ವಿಶಾಲವಾದ ದೇವಾಲಯವೇ,ಶ್ರೀ ಲಕ್ಷ್ಮೀ ಹಯಗ್ರೀವ ಸ್ವಾಮಿ ದೇವಸ್ಥಾನ.
ಇಂತಹ ಹಳೇಯ ದೇವಾಲಯವನ್ನು 1938 ರಲ್ಲಿ ಪರಕಾಲ ಮಠದ ಶ್ರೀ ಅಭಿನವ ರಂಗನಾಥರು ಜೀರ್ಣೋದ್ಧಾರ ಗೊಳಿಸಿದ್ದಲ್ಲದೇ, ದೇವಾಲಯದ ಮೂಲ ಆದಾಯಕ್ಕಾಗಿ ದೇವಾಲಯದ ಸುತ್ತಲೂ ಹತ್ತಾರು ಅಂಗಡಿ ಮಳಿಗೆಗಳನ್ನು ಕಟ್ಟಿಸಿ ಅವುಗಳನ್ನು ಅಂದಿನಿಂದಲೂ ಬಾಡಿಗೆ ಕೊಟ್ಟ ಕಾರಣ ಹೊರ ಜಗತ್ತಿಗೆ ತಕ್ಷಣವೇ ದೇವಾಲಯವು ಕಾಣಿಸಿ ಕೊಳ್ಳುವುದಿರುವುದಕ್ಕೆ ಇದೇ ಕಾರಣವಾಗಿದೆ.
ಇಲ್ಲಿನ ಹಯಗ್ರೀವ ಸ್ವಾಮಿ ಎನ್ನುವುದು ದೇವೀ ಭಾಗವತದ ಪ್ರಕಾರ ವಿಷ್ಣುವಿನ ಹೆಸರುಗಳಲ್ಲೊಂದಾಗಿದ್ದು, ಹಯ ಎಂದರೆ ಕುದುರೆ ಎಂಬರ್ಥವಾಗಿದ್ದು, ಭಗವಾನ್ ವಿಷ್ಣು ಹೀಗೆ ದೇಹವೆಲ್ಲಾ ಮನುಷ್ಯ ರೂಪ ಮುಖ ಮಾತ್ರ ಕುದುರೆಯ ರೂಪತಾಳಲು ದೃಷ್ಟಾಂತವೊಂದಿದ್ದು, ಅದರ ಪ್ರಕಾರ, ಅದೊಮ್ಮೆ ಒಮ್ಮೆ ಮಹಾವಿಷ್ಣು ಲಕ್ಷ್ಮಿಯೊಂದಿಗೆ ಸರಸವಾಡುತ್ತಿದ್ದಾಗ ಹರಿಯ ಹಾಸ್ಯದಿಂದ ಸಿಟ್ಟಾಗಿ ಲಕ್ಷ್ಮಿ ನಿನ್ನ ತಲೆ ಉರುಳಲಿ ಎಂದು ಶಾಪಕೊಡುತ್ತಾಳೆ. ಅದೇ ರೀತಿಯಾಗಿ ಭೂಲೋಕದಲ್ಲಿ ಮಧು ಮತ್ತು ಕೈಟಭ ಎಂಬ ಇಬ್ಬರು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಚಿರಂಜೀವಿ ತನವನ್ನು ಕೊಡಲು ಬೇಡಿಕೊಂಡಿದ್ದಕ್ಕೆ ಬ್ರಹ್ಮನು ಒಪ್ಪದೇ ಹೋದಾಗ, ನಮಗೆ ಮನುಷ್ಯರಿಂದಾಗಲೀ ಪ್ರಾಣಿಯಿಂದಾಗಲೀ ಮರಣ ಹೊಂದದೇ ಇರುವಂತಹ ವರವನ್ನು ಪಡೆದುಕೊಳ್ಳುತ್ತಾರೆ. ಈ ರೀತಿಯ ವರವನ್ನು ಪಡೆದ ಆ ರಾಕ್ಷಸರಿಬ್ಬರು ತಮಗೆ ಯಾರಿಂದಲೂ ಸಾವಿಲ್ಲಾ ಎಂದು ಎಲ್ಲರ ಮೇಲೂ ದಾಳಿ ನಡೆಸಲು ಮುಂದಾದಾಗ ಅವರಿಬ್ಬರ ಉಪದ್ರವ ತಾಳಲಾರದೇ ದೇವಾನು ದೇವತೆಗಳು ವಿಷ್ಣುವಿನ ಬಳಿ ನೆರವನ್ನು ಕೇಳಲು ಹೋದಾಗ, ವಿಷ್ಣುವು ಕ್ಷೀರಸಮುದ್ರದಲ್ಲಿ ಶಾರಂಗ ಎಂಬ ತನ್ನ ಬಿಲ್ಲನ್ನು ತಲೆದಿಂಬಾಗಿರಿಸಿಕೊಂಡು ಆದಿಶೇಷನ ಮೇಲೆ ಮಲಗಿ ನಿದ್ರಿಸುತ್ತಿದ್ದಾಗ, ವಿಷ್ಣುವಿನನ್ನು ನಿದ್ದೆಯಿಂದ ಎಚ್ಚರಿಸಲು ನಾನಾ ವಿಧದಲ್ಲಿ ಪ್ರಯತ್ನಿಸುವ ಭಾಗವಾಗಿ, ಅಲ್ಲೇ ಇದ್ದ ಗೆದ್ದಲುಹುಳುಗಳಿಗೆ ಯಜ್ಞದಲ್ಲಿ ಹವಿರ್ಭಾಗ ಕೊಡುವ ಆಸೆ ತೋರಿಸಿ ಅವುಗಳು ವಿಷ್ಣುವಿನ ದಿಂಬನ್ನಾಗಿ ಮಾಡಿಕೊಂಡ ಶಾರಂಗ ಧನುಸ್ಸಿನ ಹೆದೆಯನ್ನು ಕತ್ತರಿಸುವಂತೆ ಮಾಡುತ್ತಾರೆ. ಹೀಗೆ ಬಿಲ್ಲಿನ ಹೆದೆ ತುಂಡಾಗುವ ಸಮಯದಲ್ಲಿ ಸಿಡಿದ ಬಿಲ್ಲು ವಿಷ್ಣುವಿನ ತಲೆಯನ್ನು ಕತ್ತರಿದ ಕೂಡಲೇ, ದೇವತೆಗಳು ಕುದುರೆಯ ಮುಖವೊಂದನ್ನು ವಿಷ್ಣುವಿನ ದೇಹಕ್ಕೆ ಜೋಡಿಸುವ ಮೂಲಕ ಭಗವಾನ್ ವಿಷ್ಣುವು ಹಯಗ್ರೀವ ಎನಿಸಿಕೊಳ್ಳುತ್ತಾನೆ. ಈ ರೀತಿಯಾಗಿ ಮಾನವನೂ ಅಲ್ಲದ, ಪ್ರಾಣಿಯೂ ಅಲ್ಲದ ಹಯಗ್ರಿವನು ಮಧುಕೈಟಭರನ್ನು ಸಂಹರಿಸುವ ಮೂಲಕ ಲೋಕ ಕಲ್ಯಾಣ ಮಾಡುತ್ತಾನೆ.
ಹೀಗೆ ಮಹಾವಿಷ್ಣುವು ಮಾನವನ ದೇಹ ಮತ್ತು ಕುದುರೆಯ ತಲೆಯೊಂದಿಗೆ ಹಯಗ್ರೀವನಾಗಿರುವ ಕಾರಣ, ಆತ ಜ್ಞಾನ ಮತ್ತು ಬುದ್ಧಿವಂತಿಕೆಯ ದೇವರು ಎಂದು ಪೂಜಿಸಲಾಗುತ್ತದೆ. ಈ ದೇವಾಲಯದಲ್ಲಿರುವ ವಿಗ್ರಹವು ನಾಲ್ಕು ಕಮಲದ ಕೈಗಳನ್ನು ಹೊಂದಿದ್ದು, ಒಂದು ಜ್ಞಾನವನ್ನು ದಯಪಾಲಿಸುವ ವಿಧಾನದಲ್ಲಿ, ಇನ್ನೊಂದು ಜ್ಞಾನದ ಪುಸ್ತಕವನ್ನು ಹೊಂದಿದ್ದರೆ ಇನ್ನೆರಡು ಕೈಗಳಲ್ಲಿ ಶಂಖ ಮತ್ತು ಚಕ್ರವನ್ನು ಹಿಡಿದಿದೆ. ಹೀಗೆ ಜ್ಞಾನ ಮತ್ತು ವಿದ್ಯೆಗೆ ಅಧಿಪತಿಯಾದ ಹಯಗ್ರೀವ ದೇವರು ತನ್ನನ್ನಲ್ಲಿ ಭಕ್ತಿಯಿಂದ ಮೊರೆ ಇಡುವ ಭಕ್ತರಿಗೆ ಎಲ್ಲಾ ರೀತಿಯ ಜ್ಞಾನವನ್ನು ಅನುಗ್ರಹಿಸುವ ಕಾರಣ ವಿದ್ಯಾರ್ಥಿಗಳಿಗೆ ಈ ದೇವಾಲಯ ಬಹಳ ಪ್ರಿಯವಾಗಿದೆ. ಇಲ್ಲಿ ಶ್ರೀ ಲಕ್ಷ್ಮೀ ಹಯಗ್ರೀವ ಸ್ವಾಮಿಗೆ ಮಾಡುವ ಜೇನು ತುಪ್ಪದ ಅಭಿಷೇಕ ಬಹಳ ಪ್ರಸಿದ್ಧವಾಗಿದ್ದು ಅದನ್ನೇ ನೈವೇದ್ಯವಾಗಿ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಈ ನೈವೇದ್ಯ ರೂಪದ ಜೇನುತುಪ್ಪವನ್ನು ನಲವತ್ತೆಂಟು ದಿನಗಳವರೆಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ, ಸರಸ್ವತಿ ಮತ್ತು ಹಯಗ್ರೀವನ ಮಂತ್ರಗಳನ್ನು ಪಠಿಸಿದಲ್ಲಿ, ವಿದ್ಯಾರ್ಥಿಗಳ ಜ್ಞಾಪಕ ಶಕ್ತಿ ಮತ್ತು ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ ಮತ್ತು ಉತ್ತಮ ಆರೋಗ್ಯವನ್ನು ನೀಡುತ್ತದೆ ಎನ್ನುವ ನಂಬಿಕೆ ಇದ್ದು, ಈ ಹಯಗ್ರೀವ ದೇವರಿಗೆ ಭಕ್ತಿಯಿಂದ ಪೂಜಿಸಿದಲ್ಲಿ ಅವರಿಗೆ ಉತ್ತಮ ಶಿಕ್ಷಣ, ಸಂಪತ್ತು ಮತ್ತು ಜೀವನದಲ್ಲಿ ಪ್ರಗತಿಯನ್ನು ಹೊಂದುತ್ತಾರೆ ಎನ್ನಲಾಗುವ ಕಾರಣ, ಪರೀಕ್ಷಾ ಸಮಯದಲ್ಲಿ ಇಲ್ಲಿಗೆ ಬರುವ ಸಾವಿರಾರು ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ಹಾಲ್ ಟಿಕೆಟ್ಟುಗಳನ್ನು ದೇವರ ಮುಂದಿಟ್ಟು ಪೂಜೆ ಮಾಡಿಸಿ ತಮಗೆ ಒಳ್ಳೆಯ ಬುದ್ಧಿ ಶಕ್ತಿಯನ್ನು ನೀಡಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬರುವಂತೆ ಕೋರಿಕೊಳ್ಳುತ್ತಾರೆ.
ಪರೀಕ್ಷಾ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವ ವಿದ್ಯಾರ್ಥಿಗಳಿಗೆ ಪ್ರಸಾದ ರೂಪದಲ್ಲಿ ಜೇನುತುಪ್ಪದ ಜೊತೆ ಜೊತೆಯಲ್ಲಿಯೇ, ಶ್ರೀ ಲಕ್ಷ್ಮೀ ಹಯಗ್ರೀವ ಸ್ವಾಮಿಯ ಸ್ಟಿಕರ್ ಇರುವ ಪೆನ್ಸಿಲ್, ಪೆನ್ನು, ಪುಸ್ತಕ ಮತ್ತು ರಬ್ಬರ್ ಗಳನ್ನು ನೀಡುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ.
ಪ್ರತೀ ದಿನ ಬೆಳಿಗ್ಗೆ 6:00ರಿಂದ ಮಧ್ಯಾನ 1:00ರ ವರೆಗೆ ಮತ್ತು ಸಂಜೆ 5:00ರಿಂದ ರಾತ್ರಿ 9:00ರ ವರೆಗೆ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶವಿದ್ದು ಶ್ರಾವಣ ಮಾಸವಲ್ಲದೇ, ವರ್ಷಾದ್ಯಂತ ಬರುವ ವಿವಿಧ ಹಬ್ಬ ಹರಿದಿನಗಳು ಪರೀಕ್ಷಾ ಸಮಯ ಮತ್ತು ವಿಶೇಷ ದಿನಗಳಲ್ಲದೇ, ಹಯಗ್ರೀವ ಜಯಂತಿಯನ್ನು ಇಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುವ ಕಾರಣ ಆಂತಹ ದಿನಗಳಲ್ಲಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ. ಅದಲ್ಲದೇ, ಈಗಾಗಲೇ ತಿಳಿಸಿದಂತೆ ದೇವಾಲಯದ ಪ್ರವೇಶದ್ವಾರವು ಅನೇಖ ಟ್ರಾವೆಲ್ ಏಜೆನ್ಸಿಗಳಿಂದ ಸುತ್ತುವರಿದಿರುವುದರಿಂದ ಚಿಕ್ಕದಾಗಿ ಕಂಡರೂ ಒಳಗೆ ಬಹಳ ವಿಶಾಲವಾಗಿದ್ದು, ಅನೇಕ ಸುಂದರ ವಾಸ್ತುಶಿಲ್ಪದ ವಿನ್ಯಾಸ ಮತ್ತು ತಂಪಾದ ವಾತಾವರಣದೊಂದಿಗೆ ಉತ್ತಮವಾಗಿದ್ದು, ಸಣ್ಣ ಪುಟ್ಟ ಮದುವೆ, ಮುಂಜಿ ಮತ್ತು ನಾಮಕರಣಗಳಂತಹ ಸಮಾರಂಭಗಳನ್ನು ನಡೆಸಲು ಸಹ ವ್ಯವಸ್ಥೆ ಇದ್ದು ದೇವಾಲಯದ ಸುತ್ತಮುತ್ತ ಸ್ವಚ್ಛವಾಗಿ ನಿರ್ವಹಣೆ ಮಾಡಲಾಗಿರುವ ಕಾರಣ ಈ ಸನ್ನಿಧಿಯನ್ನು ವಿವಿಧ ಧಾರ್ಮಿಕ ವಿಧಿ ವಿಧಾನಗಳ ಕಾರ್ಯಕ್ರಮಗಳನ್ನು ಮಾಡಿಸಲು ಹೇಳಿಮಾಡಿಸಿದಂತಹ ಸ್ಥಳವಾಗಿದೆ.
ಇಂತಹ ಅಪರೂಪದ ಶಕ್ತಿಯುಳ್ಳ ದೇವಾಲಯದ ಬಗ್ಗೆ ಹೆಚ್ಚಿನ ಜನರಿಗೆ ಅರಿವಿಲ್ಲದೇ ಇದ್ದ ಸಮಯದಲ್ಲೇ ಕೆಲ ವರ್ಷಗಳ ಹಿಂದೆ ಜನಪ್ರಿಯ ಖಾಸಗೀ ವಾಹಿನಿಯೊಂದರಲ್ಲಿ ಈದೇವಾಲಯದ ಕುರಿತಾದ ಸುಮಾರು ಮೂವತ್ತು ನಿಮಿಷಗಳ ಕಾಲದ ಸುಂದರವಾದ ಕಾರ್ಯಕ್ರಮ ಪ್ರಸಾರವಾದ ನಂತರ ಬಹುತೇಕ ಆಸ್ತಿಕರಿಗೆ ಆದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಈ ದೇವರ ಮಹಿಮೆಯ ಬಗ್ಗೆ ಅರಿವಾದ ನಂತರ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ, ಪರೀಕ್ಷಾ ಸಮಯದಲ್ಲಿ ಗುಂಪು ಗುಂಪಾಗಿ ಸುಮಾರು ಒಂದೆರಡು ಕಿಲೋಮೀಟರ್ ದೂರದವರೆಗೂ ಸರದಿಯ ಸಾಲು ನಿಲ್ಲುವಷ್ಟು ಭಕ್ತಾದಿಗಳು ಇಲ್ಲಿಗೆ ಬರುವಂತಾಗಿರುವುದು ವಿಶೇಷವಾಗಿದೆ.
ಬೆಂಗಳೂರು ನಗರ ತಾಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದಿದ್ದರೂ, ಭಕ್ತಾದಿಗಳ ಶ್ರದ್ಧಾ ಭಕ್ತಿ ಮತ್ತು ನಂಬಿಕೆಗಳು ಇರುವವರೆಗೂ ಇಂತಹ ದೇವಾಲಯಗಳಿಗೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ ಎನ್ನುವುದು ಸುಳ್ಳಲ್ಲಾ. ಕೇವಲ ಇಂತಹ ನಂಬಿಕೆಗಳಿಂದಲೇ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಿಲ್ಲಾ ಎನ್ನುವುದೂ ಅಷ್ಟೇ ಸತ್ಯವಾಗಿದ್ದು. ಇಂತಹ ದೇವರ ಕೃಪಾಶೀರ್ವಾದದ ಜೊತೆ ಜೊತೆಗೆ ವಿದ್ಯಾರ್ಥಿಗಳ ಪರಿಶ್ರಮವೂ ಇದ್ದಲ್ಲಿ ಮಾತ್ರವೇ ಜೀವನದಲ್ಲಿ ಮುಂದೆ ಬರಬಹುದು ಎನ್ನುವುದೇ ನಿತ್ಯ ಸತ್ಯವಾಗಿದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ