ಧಾರವಾಡ ಕರ್ನಾಟಕದ ವಿದ್ಯಾಕಾಶಿ ಎಂದರೂ ತಪ್ಪಾಗದು. ಧಾರವಾಡದ ಸಾಧನೆ ಕೇರಿಯ ಯಾವುದೇ ರಸ್ತೆಯಲ್ಲಿ ನಿಂತು ಒಂದು ಕಲ್ಲನ್ನು ಎಸೆದರೆ ಅದು ಸೀದಾ ಹೋಗಿ ಒಬ್ಬ ಸಾಹಿತಿಯ ಮನೆಯ ಮೇಲೆ ಬೀಳುತ್ತದೆ ಎನ್ನುವ ಮಾತು ಉತ್ಪ್ರೇಕ್ಷೆಯೇನಲ್ಲ. ಅಂತಹ ಧಾರವಾಡದ ಸಾಧನಕೇರಿಯವರೇ ಆದ ವರ ಕವಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ದ.ರಾ.ಬೇಂದ್ರೆಯವರು ಧಾರವಾಡದಲ್ಲಿ ದತ್ತಾತ್ರೇಯ ಗುಡಿಯ ಕಡೆಗೆ ಅವರ ಸ್ನೇಹಿತರಾದ ಶ್ರೀ ಸುರೇಶ್ ಕುಲಕರ್ಣಿಯವರೊಂದಿಗೆ ಹೋಗಿ ಹಿಂದಿರುಗು ಬರುವಾಗ ಆ ರಸ್ತೆಯ ಮೂಲೆಯೊಂದರಲ್ಲಿ ಒಬ್ಬ ಚಮ್ಮಾರ ಚಪ್ಪಲಿ ಹೊಲಿಯುತ್ತಾ ಕುಳಿತಿದ್ದ. ಬೇಂದ್ರೆಯವರ ಚಪ್ಪಲಿಯ ಉಂಗುಷ್ಠ ಹರಿದಿದ್ದನ್ನು ಕಂಡು ಆತ ಅಜ್ಜಾವ್ರ ನಿಮ್ಮ ಚೆಪ್ಪಲಿಯ ಉಂಗುಷ್ಠ ಹಚ್ಚಿಕೊಡತೀನಿ ಕೊಡ್ರಿ ಎಂದು ಕೇಳಿದಾಗಲೇ, ಬೇಂದ್ರೆಯವರಿಗೆ ತಮ್ಮ ಚಪ್ಪಲಿ ಉಂಗುಷ್ಠ ಕಿತ್ತುಹೋಗಿದೆ ಎಂಬುದರ ಅರಿವಾಗಿ, ಕೂಡಲೇ ತಮ್ಮ ಚಪ್ಪಲಿಯನ್ನು ಹೊಲಿಯಲು ಆ ಚಮ್ಮಾರನಿಗೆ ಕೊಟ್ಟರು. ಅದಾಗಲೇ ಮಟ ಮಟ ಮಧ್ಯಾಹ್ನ ಮತ್ತು ಬಿಸಿಲು ಸಹಾ ಬಹಳವಾಗಿತ್ತು. ಬೆಂದ್ರೇಯವರು ಚಪ್ಪಲಿಯನ್ನು ಹೊಲಿಯಲು ಕೊಟ್ಟುಾ ಸುಡುಬಿಸಿಲಿನಲ್ಲಿ ಬರಿಗಾಲಲ್ಲಿ ನಿಂತಿದ್ದನ್ನು ಗಮನಿಸಿದ ಆ ಚಮ್ಮಾರ ಕೂಡಲೇ ಅಜ್ಜಾರೇ, ಬಿಸಿಲಾಗ ಕಾಲು ಸುಡುತಾವ, ಇದರ ಮೇಲೆ ಕಾಲು ಇಡ್ರಿ ಎಂದು ತನ್ನಲ್ಲಿದ್ದ ಒಂದು ಚಪ್ಪಲಿಯನ್ನು ಅವರಿಗೆ ಕೊಟ್ಟ. ಆತನ ವೃತ್ತಿಪರತೆ ಮತ್ತು ತನ್ನ ಗ್ರಾಹಕರ ಬಗ್ಗೆಯ ಕಾಳಜಿ ಕಂಡು ಬೇಂದ್ರೆಯವರಿಗೆ ಚಮ್ಮಾರನ ಬಗ್ಗೆ ಪ್ರೀತಿ ಹುಟ್ಟಿದ್ದಲ್ಲದೇ ಮನ ತುಂಬಿ ಬಂತು.
ಕೂಡಲೇ ಅಲ್ಲೋ ತಮ್ಮಾ, ನನ್ನ ಕಾಲು ಸುಡೋದರ ಬಗ್ಗೆ ನಿನಗೆ ಕಾಳಜಿ ಅದ. ಆದರೆ ಸುಡೋ ಬಿಸಿಲಿನಾಗೆ ನೀನ್ ಹಿಂಗಾ ಕೂತಿದ್ದಿ. ನಿನ್ನ ಮೈಸುಡೋದಿಲ್ಲೇನು? ಎಂದವರೇ ತಮ್ಮ ಛತ್ರಿಯನ್ನು ಬಿಡಿಸಿ ಅವನ ತಲೆ ಮೇಲೆ ಹಿಡಿದರು. ಅಷ್ಟು ವಯಸ್ಸಿನ ಹಿರಿಯರು ತನಗೆ ಛತ್ರಿ ಹಿಡಿದಿರುವುದನ್ನು ಕಂಡು ಅತನಿಗೆ ಬಹಳ ಸಂಕೋಚವಾಗಿ, ಅಯ್ಯೋ ಬೇಡ್ ಬಿಡ್ರೀ ಅಜ್ಜಾರೇ ಅಂದರೂ, ಕೇಳದ ಬೇಂದ್ರೆಯವರು ತಮ್ಮ ಛತ್ರಿಯನ್ನು ಅವನ ನೆರಳಿಗೆ ಹಿಡಿದರು. ಹಿರಿಯರು ತನ್ನ ಮಾತು ಕೇಳುವುದಿಲ್ಲಾ ಎಂಬುದನ್ನು ಅರಿತ ಆತ, ಲಗುಬಗನೆ ಚಪ್ಪಲಿಯನ್ನು ಹೊಲಿದಿದ್ದಲ್ಲದೇ, ಅದಕ್ಕೆ ಪಾಲೀಶ್ ಸಹಾ ಮಾಡಲು ಅನುವಾದ.
ಇದೇ ಸಮಯದಲ್ಲಿ ಬೇಂದ್ರೆಯವರು ಆತನನ್ನು ಮಾತಿಗೆ ಎಳೆದು,
ಮದ್ವೀ ಆಗಿದ್ಯೇನು? ಎಷ್ಟು ಮಕ್ಕಳು ನಿನಗ? ಎಂದರು
ಅದಕ್ಕೆ ಆತ ತಲೆಯನ್ನು ಬಗ್ಗಿಸಿ, ಹೂಂ ಆಗಿದೆ. ಎರಡು ಮಕ್ಕಳು ಎಂದ
ದಿನಕ್ಕೆ ಎಷ್ಟು ದುಡೀತಿದಿ? ಎಂದು ಬೇಂದ್ರೇಯವರು ಕೇಳಿದ್ದಕ್ಕೆ
ದಿನಕ್ಕೆ ಸರಾಸರಿ ಹತ್ತು ರೂಪಾಯಿ ಸಿಗಬಹುದು. ಒಮ್ಮೊಮ್ಮೆ ಹೆಚ್ಚು ಕಡಿಮೆ ಆಗತೈತಿ ಎಂದ
ಅದನ್ನು ಕೇಳಿದ ಬೇಂದ್ರೆಯವರ ಮನಸ್ಸಿಗೆ ಸ್ವಲ್ಪ ಬೇಸರವಾದರೂ ಅದನ್ನೂ ಸಾವರಿಸಿಕೊಂಡು ಶರೆ ಕುಡಿತೀಯೇನು? ಎಂದರು
ಈ ಪ್ರಶ್ನೆಯಿಂದ ಬೆಚ್ಚಿ ಬಿದ್ದ ಆ ಚಮ್ಮಾರ, ತುಸು ಭಯ ಮತ್ತು ನಾಚಿಕೆಯಿಂದ ಯಾವಾಲಾದರೂ ಒಮ್ಮೊಮ್ಮೆ ಎಂದು ಹೇಳುತ್ತಾ, ಅಜ್ಜಾರೇ!! ತಗೋರಿ ನಿಮ್ಮ ಚಪ್ಪಲಿ ಎಂದು ಹೊಲಿದ ಚಪ್ಪಲಿಯನ್ನು ಅವರ ಮುಂದಿಟ್ಟ.
ಸರಿ ಎಷ್ಟು ಆತು ಎಂದು ಬೇಂದ್ರೆಯವರು ಕೇಳಿದಾಗ, ಒಂದೂವರೆ ರೂಪಾಯಿ ಆತ್ರಿ ಎಂದ ಚಮ್ಮಾರ. ಕೂಡಲೇ ಬೇಂದ್ರೆಯವರು ಆತನಿಗೆ ಹತ್ತು ರೂಪಾಯಿಯ ನೋಟೊಂದ್ದನ್ನು ನೀಡಿದಾಗ, ಆತ ಚಿಲ್ಲರೆ ಇಲ್ಲವೆಂದಾಗ, ಚಿಲ್ಲರೆ ಏನು ಕೊಡ ಬ್ಯಾಡಾ! ಇದು ನಿನ್ನ ಇವತ್ತಿನ ದುಡಿಮೆ. ಮೊದಲು ಒಂದು ಕೊಡೆ ಖರೀದಿಸಿ ಬಿಸಿಲು ಮತ್ತು ಮಳೆಯಿಂದ ನಿನ್ನನ್ನು ರಕ್ಷಿಸಿಕೋ. ನಿನ್ನ ದುಡಿಮೆಯನ್ನೇ ಅವಲಂಬಿಸಿರುವ ನಿನ್ನ ಹೆಂಡತಿ ಮತ್ತು ಮಕ್ಕಳು ಇದ್ದಾರೆ ಎನ್ನೋದನ್ನ ಮರೀಬ್ಯಾಡ ಎಂದು ಹೇಳಿದ್ದಲ್ಲದೇ, ಉಳಿದ ಹಣದಲ್ಲಿ ಅವರಿಗೆ ಹಣ್ಣು ಹಂಪಲು ಒಯ್ಯಿ, ಸುಮ್ಮಾನೇ ಶರೆ ಕುಡಿಬ್ಯಾಡ ಎಂದು ಪ್ರೀತಿಯಿಂದ ಗದುರಿಸಿದರೂ, ಬೇಂದ್ರೆಯವರ ಅಂತಃಕರಣ ನೋಡಿ ಆ ಚಮ್ಮಾರನಿಗೇ ಅರಿವಿಲ್ಲದಂತೆ ಒದ್ದೆಯಾದ ಅವನ ಕಣ್ಣುಗಳನ್ನು ಒರೆಸಿಕೊಂಡು. ಹಾಂ! ಅಜ್ಜಾರೆ ನಿಮ್ಮ ಮನಿ ಎಲ್ಲೈತಿ? ಎಂದು ಕೇಳಿದ.
ಚಪ್ಪಲಿಯನ್ನು ಹಾಕಿಕೊಳ್ಳುತ್ತಾ! ನಮ್ಮ್ ಮನೀ ಸಾಧನಕೇರೀಯೊಳಗ ಎಂದು ಸರಸರನೇ ಅಲ್ಲಿಯೇ ಇದ್ದ ಟಾಂಗಾ ಏರಲು ಹೋದಾಗ, ಆ ಚಮ್ಮಾರ ನಿಮ್ಮ್ ಮನೀ ಬೇಂದ್ರೆ ಮಾಸ್ತರ ಮನೆ ಹತ್ರೇನ್ರಿ? ಎಂದು ಕೇಳಿದ. ಅದಕ್ಕೆ ಕೊಂಚವೂ ವಿಚಲಿತರಾಗದ ಬೇಂದ್ರೆಯವರು ಹಿಂದಿರಿಗಿಯೂ ನೋಡದೇ ಹೂಂ ಎನ್ನುತ್ತಾ! ಟಾಂಗಾ ಏರಿ ಹೊರಟೇ ಬಿಟ್ಟರು. ನಂತರ ದಿನಗಳಲ್ಲಿ ಅವರೇ ಬೇಂದ್ರೇಯವರು ಎಂದು ತಿಳಿದ ಆ ಚಮ್ಮಾರ ಆಗಾಗ್ಗೆ ಬೇಂದ್ರೆಯವರ ಮನೆಗೆ ಹೋಗಿ ಬರುವ ಅಭ್ಯಾಸವನ್ನು ರೂಢಿ ಮಾಡಿಕೊಂಡನಂತೆ.
ಈ ಘಟನೆಯನ್ನು ಓದುವಾಗ ಕನ್ನಡದ ಮೊದಲ ರಾಷ್ಟ್ರಕವಿ ಶ್ರೀ ಪಂಜೆ ಮಂಗೇಶರಾಯರ ಉದಯರಾಗ ಕವಿತೆಯ ಏರುವನು ರವಿ ಏರುವನು ಬಾನೊಳು ಸಣ್ಣಗೆ ತೋರುವನು. ಏರಿದವನು ಚಿಕ್ಕವನಿರಲೇ ಬೇಕೆಂಬ ಮಾತನು ಸಾರುವನು ರವಿ ಸಾರುವನು ಎಂಬ ಸಾಲುಗಳು ನೆನಪಾಗಿ, ಬೇಂದ್ರೇಯಂತಹವರು ಎಷ್ಟೇ ಎತ್ತರಕ್ಕೇರಿದರೂ, ಅದನ್ನು ತೋರಿಸಿಕೊಳ್ಳದೇ, ಎಷ್ಟು ಸರಳವಾಗಿ ಯಾವ ಹಂತಕ್ಕೆ ಬೇಕಾದರೂ ಇಳಿದು ತಮ್ಮ ಹೃದಯವಂತಿಕೆಯನ್ನು ತೋರುತ್ತಾರೆ ಎಂಬುದು ಅರಿವಾಗುತ್ತದೆ.
ಇದೇ ರೀತಿಯ ಅನುಭವ ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಕಂಡು ಬಂದು ಅದರ ಭಾವಾನುವಾದವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಆದು ಆಂಧ್ರ ಪ್ರದೇಶದ ವಿಜಯವಾಡ. ಹೇಳೀ ಕೇಳಿ ಬಿಸಿಲಿಗೆ ಹೇಳಿಮಾಡಿಸಿದಂತಹ ಪ್ರದೇಶ. ಮಟ ಮಟ ಮಧ್ಯಾಹ್ನದ ಸಮಯಲ್ಲಿ ಹೀಗೇ ಹಿರಿಯರೊಬ್ಬರು ಹೋಗುತ್ತಿದ್ದಾಗ, ಅಚಾನಕ್ಕಾಗಿ ಅವರ ಚಪ್ಪಲಿ ಕಿತ್ತು ಹೋಗಿ ನಡೆಯಲು ಕಷ್ಟವಾದಾಗ, ಅಯ್ಯೋ ರಾಮಾ!! ಹೇಗಪ್ಪಾ ಈ ಬಿಸಿಲಿನಲ್ಲಿ ಬರೀ ಕಾಲಿನಲ್ಲಿ ನಡೆದುಕೊಂಡು ಹೋಗುವುದು? ಎಂದು ಯೋಚಿಸುತ್ತಾ, ಅಚೀಚೀಗೆ ನೋಡುತ್ತಿರುವಾಗಲೇ ರಸ್ತೆಯ ದೂರದ ಮೂಲೆಯೊಂದರಲ್ಲಿ ಚಪ್ಪಲಿ ಹೊಲೆಯುವ ಚಮ್ಮಾರ ಕುಳಿತಿದ್ದದ್ದನ್ನು ಕಂಡು ಮರುಭೂಮಿಯಲ್ಲಿ ಓಯಸಿಸ್ ಕಂಡಂತೆ ಆನಂದವಾಗಿ ಹಾಗೇ ಹರಿದು ಹೋದ ಚಪ್ಪಲಿಯನ್ನೇ ಎಳೆದುಕೊಂಡು ಹೋಗಿ ಅವನ ಬಳಿ ಸರಿಮಾಡಲು ಕೋರುತ್ತಾರೆ.
ಅದಾಗಲೇ ಒಬ್ಬರ ಚಪ್ಪಲಿಯನ್ನು ಸರಿಪಡಿಸುತ್ತಿದ್ದ ಆತ, ಸ್ವಾಮೀ ಸ್ವಲ್ಪ ಸಮಯ ಕೊಡಿ ಇವರ ಚಪ್ಪಲಿ ಹೊಲಿದು ಕೊಟ್ಟ ನಂತರ ನಿಮ್ಮ ಚಪ್ಪಲಿಯನ್ನು ಸರಿಪಡಿಸಿಕೊಡುತ್ತೇನೆ ಎಂದು ತಿಳಿಸಿ, ಹೇಳಿದ ಮಾತಿನಂತೆ ಸರ ಸರನೆ ಹರಿದು ಹೋದ ಚಪ್ಪಲಿಯನ್ನು ಹೊಲಿದು ಕೊಟ್ಟು ಸರ್ವೇ ಸಾಮಾನ್ಯವಾಗಿ ಇಂತಹ ಕೆಲಸಕ್ಕೆ ಇಪ್ಪತ್ತು ರೂಪಾಯಿ ತೆಗೆದುಕೊಳ್ಳುವಾಗ ಆತ ಮಾತಾ, ಐದು ರೂಪಾಯಿ ತೆಗೆದುಕೊಂಡದ್ದನ್ನು ಕಂಡು ಅಚ್ಚರಿ ಗೊಂಡ ಆ ಹಿರಿಯರು ಆತನೊಂದಿಗೆ ಮಾತಿಗಿಳಿದು ಆತನ ಹಿನ್ನಲೆ ತಿಳಿದ ನಂತರ ಧಿಗ್ರಮೆಗೊಳಗಾಗುತ್ತಾರೆ.
ಈ ಚಮ್ಮಾರ ವೃತ್ತಿಯು ಆತನ ಕುಲಕಸುಬಾಗಿದ್ದು ಆತನ ತಾತ, ತಂದೆ ಕೂಡ ಇದೇ ವೃತ್ತಿಯನ್ನು ಮಾಡುತ್ತಿದ್ದರಿಂದ ಸಹಜವಾಗಿ ಆತನೂ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದಾನೆ. ತಾನು ಓದದೇ ಇದ್ದ ಕಾರಣಕ್ಕೆ ಕುಲ ಕಸುಬನ್ನೇ ಮುಂದುವರೆಸಿಕೊಳ್ಳಬೇಕಾದರೂ ತನ್ನ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎಂಬ ಹಂಬಲದಿಂದ ಹೊಟ್ಟೇ ಬಟ್ಟೇ ಕಟ್ಟಿ ಇದೇ ವೃತ್ತಿಯಿಂದ ಸಂಪಾದಿಸಿದ ಹಣದಲ್ಲಿ ಆತನ ಮಗನನ್ನು ಇಂಜಿನಿಯರಿಂಗ್ ಓದಿಸಿ ಆತ ಈಗ ಅಮೆರಿಕಾದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಇನ್ನು ಆತನ ಮಗಳ ಗಂಡ ಅರ್ಥಾತ್ ಅಳಿಯ ರಾಷ್ಟ್ರೀಕೃತ ಬ್ಯಾಂಕ್ ಒಂದರ ಉದ್ಯೋಗಿ.
ಇನ್ನು ಯನಮಲಕುದೂರಿನಲ್ಲಿ 7 ಸೆಂಟ್ಸ್ ನಲ್ಲಿ ಆತನಿಗೆ ಸ್ವಂತ ಮನೆ ಇದ್ದು, ತಾನು ವಾಸಿಸುವುದರ ಜೊತೆಗೆ ತಿಂಗಳಿಗೆ 25 ಸಾವಿರ ಬಾಡಿಗೆ ಬರುತ್ತದೆ. ಆತನ ಹುಟ್ಟೂರಾದ ನುನ್ನಾದಲ್ಲಿ ಅಪ್ಪನಿಂದ ಬಳುವಳಿಯಾಗಿ ಬಂದಿರುವ ಒಂದು ಎಕರೆ ಮಾವಿನ ತೋಟವೂ ಇದ್ದು ವರ್ಷಕ್ಕೆ ಅಲ್ಲಿಂದಲೂ ತಕ್ಕ ಮಟ್ಟಿಗಿನ ಆದಾಯ ಬರುತ್ತದೆಯಂತೆ. ಇಷ್ಟೆಲ್ಲಾ ಆದಾಯ ಹೊಂದಿದ್ದರೂ, ಇನ್ನೂ ಏಕೆ ನೀನು ಈ ಉರಿ ಬಿಸಿಲಿನಲ್ಲಿ ರಸ್ತೆಯ ಬದಿಯಲ್ಲಿ ಚಪ್ಪಲಿ ಹೊಲಿಯುತ್ತಿದ್ದೀಯೇ? ಸುಮ್ಮನೇ ಮನೆಯಲ್ಲಿ ಆರಾಮಾಗಿ ಇರಬಾರದೇ? ಎಂದು ಕೇಳಿದಾಗ ಆತನ ಉತ್ತರ ನಿಜಕ್ಕೂ ಎಲ್ಲರಿಗೂ ಪ್ರೇರಣಾದಾಯಿಯಾಗಿತ್ತು.
ಹೌದು ನಿಜ. ಈಗ ನನಗೆ ಎಲ್ಲವೂ ಇದೆ. ನಾನು ಆರಾಮಾಗಿ ಜೀವನ ನಡೆಸಬಹುದು. ಆದರೆ ಒಂದು ಕಾಲದಲ್ಲಿ ಇದೇ ಕುಲ ಕಸುಬು ನಮಗೆ ಅನ್ನವನ್ನು ನೀಡಿದೆ. ನನ್ನ ತಂದೆಯವರು ಈ ರೀತಿಯಾಗಿ ಚಪ್ಪಲಿ ಹೊಲಿಯುತ್ತಿದ್ದಾಗ ಬರುತ್ತಿದ್ದ ಹಣವು ಮನೆಯ ನಿರ್ವಹಣೆಗೆ ಸಾಕಾಗದೇ ಹೋದಾಗ, ನಮ್ಮ ಅಮ್ಮಾ ಅವರಿವರ ಜಮೀನಿನಲ್ಲಿ ಕೂಲೀ ನಾಲಿ ಮಾಡಿ ನಮ್ಮನ್ನು ಸಾಕಿ ಸಲಹಿದ್ದಾಳೆ. ನಂತರ ನಾನು ದೊಡ್ಡವನಾದ ಮೇಲೆ ನಾನೂ ಸಹಾ ಇದೇ ಕುಲ ಕಸುಬಿನಿಂದಲೇ ಇಷ್ಟರ ಮಟ್ಟಿಗೆ ಬಂದಿದ್ದೀನಿ. ನಮ್ಮ ಮಕ್ಕಳು ಓದಿ ವಿದ್ಯಾವಂತರಾಗಿ ದೇಶ ವಿದೇಶಗಳ ದೊಡ್ಡ ದೊಡ್ಡ ಕಂಪನಿಯಲ್ಲಿ ಕೆಲಸಮಾಡುತ್ತಿರುವುದರಿಂದ ಖಂಡಿತವಾಗಿಯೂ ಅವರು ಈ ಕುಲ ಕಸುಬನ್ನು ಮುಂದುವರೆಸಲಾರರು. ಹಾಗಾಗಿ ಭಗವಂತ ನನ್ನ ಮೈಯ್ಯಲ್ಲಿ ಕಸುವು ನೀಡುವವರೆಗೂ ಇದೇ ಕೆಲಸವನ್ನು ಶ್ರದ್ಧಾ ಭಕ್ತಿಯಿಂದ ಮುಂದುವರೆಸಿಕೊಂಡು ಹೋಗುತ್ತೇನೆ. ಹಾಗಾಗಿ ನನಗೆ ಇದರಲ್ಲಿ ಹೆಚ್ಚಿನ ಆದಾಯ ಗಳಿಸುವ ಆಸೆಯೇನು ಇಲ್ಲಾ. ಇಲ್ಲಿ ನನಗೆ ಯಾರೂ ಹೇಳುವವರಿಲ್ಲಾ. ಕೇಳುವವರಿಲ್ಲಾ. ಯಾವುದೇ ವಾರಗಳ ಲೆಕ್ಕವಿಲ್ಲದೇ ಪ್ರತೀ ದಿನವು ಬೆಳಗ್ಗೆಯಿಂದ ಸಂಜೆ ಕತ್ತಲಾಗುವವರೆಗೂ ಇಲ್ಲಿಗೆ ಬಂದು ನನ್ನ ಕಾಯಕವನ್ನು ಮಾಡುತ್ತೇನೆ ಮತ್ತು ಜನರು ಕೊಟ್ಟದ್ದನ್ನು ಸಂತೋಷವಾಗಿ ತೆಗೆದುಕೊಳ್ಳುತ್ತೇನೆ. ಎಂದು ಹೇಳಿದರು. ಅದಕ್ಕೆ ಪುರಾವೆ ಎನ್ನುವಂತೆ ಈ ಮೊದಲು ಚಪ್ಪಲಿಯನ್ನು ಸರಿಮಾಡಿಸಿಕೊಂಡು ೨೦೦ರೂಪಾಯಿಗಳನ್ನು ನೀಡಿದಾಗ, ಸದ್ಯಕ್ಕೆ ನನ್ನ ಬಳಿ ಚಿಲ್ಲರೆ ಇಲ್ಲಾ. ಮುಂದೆ ಎಂದಾದರೂ ಈ ಕಡೆ ಬಂದಾಗ ಕೊಡುವಿರಂತೆ ಎಂದು ಹೇಳಿದ್ದು ಆ ಹಿರಿಯರಿಗೆ ನೆನಪಾಯಿತು.
ಅಲ್ಪರಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲೂ ಕೊಡೆ ಹಿಡಿಯುತ್ತಾರೆ ಎಂಬ ಗಾದೆ ಮಾತನ್ನು ಸುಳ್ಳು ಮಾಡಿದ ಈ ಎರಡೂ ಪ್ರಸಂಗಗಳು ನಿಜಕ್ಕೂ ನಮ್ಮ ಇಂದಿನ ಜನಾಂಗಕ್ಕೆ ಮಾದರಿ ಎಂದರೂ ತಪ್ಪಾಗದು. ಯಾವ ಹುತ್ತದಲ್ಲಿ ಯಾವ ಹಾವಿದೆ ಎಂದು ಬಲ್ಲವರು ಯಾರು? ಎನ್ನುವ ಗಾದೆ ಮಾತಿನಂತೆ, ಕೇವಲ ಅವರು ಮಾಡುವ ವೃತ್ತಿಯಿಂದ, ಅವರು ಧರಿಸುವ ಬಟ್ಟೆ ಬರೆಗಳಿಂದ ಯಾರನ್ನೂ ಅಳೆಯಲಾಗದು. ಈ ಪ್ರಸಂಗದಲ್ಲಿ ಬರುವ ಚಮ್ಮಾರಿಬ್ಬರೂ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಆವರಿಬ್ಬರೂ ಅವಿದ್ಯಾವಂತರಾದರೂ ಹೃದಯ ವೈಶಾಲ್ಯವನ್ನು ಹೊಂದಿದವರಾಗಿದ್ದರು. ತಮ್ಮ ಕುಟುಂಬ ನಿರ್ವಹಣೆಗಾಗಿ ಯಾರದ್ದೇ ಬಳಿ ಕೈ ಚಾಚದೇ ಅಥಾವ ಸರ್ಕಾರ ಕೊಡುವ ಬಿಟ್ಟಿ ಭಾಗ್ಯಗಳ ಆಸೆಗೆ ಬೀಳದೆ ತಮ್ಮ ಕೈಲಾದ ಮಟ್ಟಿಗೆ ಸ್ವಾಭಿಮಾನದಿಂದ ಕೆಲಸ ಮಾಡುವರು. ಇದಕ್ಕೇ ಹೇಳುವುದು ಸಂತೃಪ್ತಿ ಎನ್ನುವುದು ಕೇವಲ ಹಣ, ಆಸ್ತಿ, ಅಂತಸ್ತು ಮತ್ತು ಐಷಾರಾಮ್ಯತೆಯಿಂದ ಬರುವುದಿಲ್ಲ. ಅದು ನಮ್ಮ ಆತ್ಮತೃಪ್ತಿ ಮತ್ತು ನಾವು ನಡೆಸುವ ಜೀವನ ಶೈಲಿಯಿಂದ ಬರುತ್ತದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ