ಹಿಂದೂ ಪಂಚಾಂಗದ ಪ್ರಕಾರ ಜೇಷ್ಠ ಮಾಸ ಕಳೆದು ಆಷಾಢ ಮಾಸ ಬರುತ್ತಿದ್ದಂತೆಯೇ ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೂ ಈ ಒಂದು ತಿಂಗಳ ಕಾಲ ಬಂದ್. ಹೊಸದಾಗಿ ಮದುವೆ ಆದ ಹೆಣ್ಣು ಮಕ್ಕಳೂ ಸಹಾ ಮೊದಲ ವರ್ಷದ ಆಷಾಢ ಮಾಸದಲ್ಲಿ ಅತ್ತೆ ಮತ್ತು ಸೊಸೆ ಒಂದೇ ಹೊಸಲಿ ನಡಿಯಲ್ಲಿ ಓಡಾಡಬಾರದು ಎಂಬ ನಿಯಮದಡಿಯಲ್ಲಿ ಖಡ್ಡಾಯವಾಗಿ ತವರು ಮನೆಗೆ ಬಂದು ಒಂದು ರೀತಿಯಲ್ಲಿ ವಿರಹ ವೇದನೆ ಅನುಭವಿಸುವ ಸಮಯ. ನಿಜ ಹೇಳಬೇಕೆಂದರೆ ಮತ್ತು ವೈಜ್ಞಾನಿಕವಾಗಿ ನೋಡಿದಲ್ಲಿ ವೈಶಾಖ ಮತ್ತು ಜೇಷ್ಠ ಮಾಸಗಳಲ್ಲಿ ತಕ್ಕ ಮಟ್ಟಿಗೆ ಮಳೆ ಬಿದ್ದು ಆಷಾಡ ಮಾಸ ಕೃಷಿ ಚಟುವಟಿಕೆಗಳಿಗೆ ಯೋಗ್ಯವಾದ ಸಮಯವಾಗಿದ್ದು ಆ ಸಮಯದಲ್ಲಿ ಹಬ್ಬ ಹರಿದಿನಗಳು ಬಂದಲ್ಲಿ ಅಥವಾ ಹೊಸದಾಗಿ ಮದುವೆ ಆದ ನವದಂಪತಿಗಳು ಒಟ್ಟಿಗೆ ಇದ್ದಲ್ಲಿ ಕೃಷಿ ಚಟುವಟಿಕೆಗಳಿಗೆ ಭಂಗ ಆಗಬಹುದೆಂಬ ಎಂಬುದು ಒಂದು ಕಾರಣವಾದರೆ, ಆಷಾಢ ಮಾಸದಲ್ಲಿ ನವವಧು ಗರ್ಭಧರಿಸಿಧರಿಸಿ, ನವ ಮಾಸಗಳು ತುಂಬಿ ಚೈತ್ರ ಅಥವಾ ವೈಶಾಖಮಾಸದಲ್ಲಿ ಮಗುವಿನ ಜನನವಾಗುವ ಸಮಯದಲ್ಲಿ ವಿಪರೀತ ಬಿಸಿಲ ಬೇಗೆ ಹೆಚ್ಚಾಗುವುದರಿಂದ ಹುಟ್ಟಿದ ಮಗುವಿಗೂ ಮತ್ತು ಬಾಣಂತಿಗೂ ಸಹಾ ತ್ರಾಸವಾವಾಗುತ್ತದೆ ಎನ್ನುವ ಕಾರಣದಿಂದ ಆಷಾಢ ಮಾಸದಲ್ಲಿ ಶುಭಕಾರ್ಯಗಳು ನಿಷಿದ್ಧವಾಗಿದೆ.
ಈ ರೀತಿ ರಾಜ್ಯಾದ್ಯಂತ ಹಬ್ಬ ಹರಿದಿನಗಳು ಮತ್ತು ದೇವಾಲಯದ ರಥೋತ್ಸವಗಳು ಆಷಾಢ ಮಾಸದಲ್ಲಿ ನಿಷಿದ್ಧವಾದರೂ ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಅಪಖ್ಯಾತಿಗೆ ಒಳಗಾಗಿರುವ, ಕರ್ನಾಟಕ ಮತ್ತು ತಮಿಳುನಾಡಿನ ಗಡಿ ಭಾಗದಲ್ಲಿರುವ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ರಥೋತ್ಸವ ಮಾತ್ರಾ ಆಷಾಢ ಮಾಸದಲ್ಲಿ ನಡೆಯುವ ರಾಜ್ಯದ ಏಕೈಕ ರಥೋತ್ಸವವಾಗಿದ್ದು, ಈ ರಥೋತ್ಸವಕ್ಕೆ ಹೊಸದಾಗಿ ಮದುವೆ ಆಗಿರುವ ನವ ದಂಪತಿಗಳು ಒಟ್ಟಾಗಿ ಬಂದು ಪೂಜಿಸಿದರೆ ಅತ್ಯುತ್ತಮ ಫಲ ಸಿಗುತ್ತದೆ ಎಂಬ ವಿಷಯವು ಅತ್ಯಂತ ಮಹತ್ವ ಪೂರ್ಣವಾಗಿದ್ದು. ಈ ರಥೋತ್ಸವದ ಸಡಗರ ಸಂಭ್ರಮದ ಜೊತೆಗೆ ಅದರ ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.
ಈಗಿನ ಚಾಮರಾಜನಗರದ ಹಿಂದಿನ ಹೆಸರು ಅರಿಕುಟಾರ ಎಂಬುದಾಗಿದ್ದು ಆದೇ ಊರಿನಲ್ಲೇ 1774ರಲ್ಲಿ ಜನಿಸಿದ ಮೈಸೂರು ಮಹಾರಾಜರಾಗಿದ್ದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಂದೆ ಶ್ರೀ ಚಾಮರಾಜ ಒಡೆಯರ್ ಅವರ ಸ್ಮರಣಾರ್ಥ 1826ರಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಿ, ಅದರಲ್ಲಿ ಶೃಂಗೇರಿಯಿಂದ ತಂದ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿ ಅದಕ್ಕೆ ಶ್ರೀಚಾಮರಾಜೇಶ್ವರ ಎಂಬ ಹೆಸರನ್ನಿಟ್ಟಿದ್ದಲ್ಲದೇ, ಅದರ ಜೊತೆಯಲ್ಲಿಯೇ ತಮ್ಮ ತಾಯಿಯವರಾದ ಶ್ರೀಮತಿ ಕೆಂಪನಂಜಾಂಬ ಅಮ್ಮಣ್ಣಿಯವರ ನೆನಪಿನಾರ್ಥ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಅದಕ್ಕೆ ಕೆಂಪನಂಜಾಂಬ ದೇವಿ ಎಂದು ನಾಮಕರಣ ಮಾಡಿದರು. ಎರಡು ಮುಖಮಂಟಪದ ಅತ್ಯಂತ ವಿಶಾಲವಾದ ಈ ದೇವಾಲಯವು 5 ಹಂತದ ರಾಜಗೋಪುರ ಹೊಂದಿದ್ದು, ನೆಲಮಟ್ಟದಿಂದ ಎಪ್ಪತ್ತು ಅಡಿಯಷ್ಟು ಎತ್ತರವಿದೆ. ರಾಜಗೋಪುರಕ್ಕೆ ಕಿರೀಟಪ್ರಾಯದಂತೆ ಐದು ಹಿತ್ತಾಳೆಯ ಕಳಸಗಳಿವೆ. ದೇವಾಲಯದ ಸುತ್ತಲೂ ವಿವಿಧ ದೇವಾನು ದೇವತೆಗಳ ಕೆತ್ತನೆಗಳು ಭಕ್ತರ ಹೃನ್ಮನಗಳನ್ನು ಸೆಳೆಯುತ್ತವೆ ಎಂದರೂ ತಪ್ಪಾಗದು. ಶ್ರೀ ಚಾಮರಾಜೇಶ್ವರ ದೇವಾಲಯದ ಪ್ರವೇಶ ದ್ವಾರದ ಎಡಭಾಗದಲ್ಲಿ ಗಣೇಶ ಮತ್ತು ಬಲಭಾಗದಲ್ಲಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಎರಡು ಮುಖಮಂಟಪದ ದೇಗುಲವು ಪ್ರಾಂಗಣ ಮತ್ತು ನಂದಿ ಮಂಟಪ, ಗರ್ಭಗುಡಿಯನ್ನು ಹೊಂದಿದೆ.
1836ರಲ್ಲಿ ಮೊದಲ ಬಾರಿಗೆ ಆಷಾಢ ಹುಣ್ಣಿಮೆಯಂದು ರಥೋತ್ಸವವನ್ನು ಆರಂಭಿಸಿದ ನಂತರ 2017ರ ವರೆವಿಗೂ ನಿರಂತರವಾಗಿ ಪ್ರತಿವರ್ಷವೂ ಆಷಾಢದಲ್ಲಿ ರಥೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿತ್ತು. ದುರಾದೃಷ್ಟವಾಷಾತ್ 2017ರಲ್ಲಿ ದೇವಾಲಯದ ಆವರಣದಲ್ಲಿ ನಿಲ್ಲಿಸಲಾಗಿದ್ದ 181 ವರ್ಷದಷ್ಟು ಹಳೆಯ ಮರದ ರಥಕ್ಕೆ ಕಿಡಿಗೇಡಿಯೊಬ್ಬನು ಬೆಂಕಿ ಹಚ್ಚಿದ ಕಾರಣ, ಮರದಿಂದ ಮಾಡಿದ್ದ ಆ ರಥವು ಭಾಗಶಃ ಸುಟ್ಟು ಹೋಯಿತು, ಕೂಡಲೇ ಸ್ಥಳೀಯರು ಮತ್ತು ದೇವಾಲಯದ ಆಡಳಿತ ಮಂಡಲಿ ಸುಟ್ಟು ಹೋದ ರಥವನ್ನು ದುರಸ್ತಿ ಮಾಡಲು ಮುಂದಾದರೂ, ಒಮ್ಮೆ ಸುಟ್ಟು ಹೋದ ರಥದಲ್ಲಿ ರಥೋತ್ಸವ ನಡೆಸುವುದು ಶುಭವಲ್ಲ ಎಂದು ದೇವಾಲಯದ ಅರ್ಚಕರು ಮತ್ತು ಭಕ್ತಾದಿಗಳು ನಿರ್ಧರಿಸಿದ ಕಾರಣ ಸರ್ಕಾರದ ಸಹಾಯದಲ್ಲಿ ನೂತನ ರಥವನ್ನು ಸಿದ್ಧ ಪಡಿಸುವ ಹೊಣೆಯನ್ನು ಬೆಂಗಳೂರಿನ ರಥಶಿಲ್ಪಿ ಶ್ರೀ ಬಿ.ಎಸ್. ಬಡಿಗೇರ ಅಂಡ್ ಸನ್ಸ್ ಅವರಿಗೆ ವಹಿಸಲಾಯಿತು ಸುಮಾರು 1.2 ಕೋಟಿ ವೆಚ್ಚದಲ್ಲಿ ಸುಮಾರು 16 ಅಡಿ ಎತ್ತರವಿರುವ ಶುದ್ಧವಾದ ತೇಗದ ಮರದಿಂದಲೇ ನಿರ್ಮಿಸಲಾದ, ರಥದ ಸುತ್ತಲೂ ವಿವಿಧ ಶಿಲ್ಪಗಳು ಮತ್ತು ಕುಸುರಿ ಕಲೆಗಳನ್ನು ಹೊಂದಿರುವ ಬ್ರಹ್ಮರಥವನ್ನು 2021ರಲ್ಲಿ ನಿರ್ಮಿಸಿದ ನಂತರ ಮತ್ತೊಮ್ಮೆ ಅದೇ ಸಂಭ್ರಮ ಸಡಗರಗಳಿಂದ ಅತ್ಯಂತ ವೈಭವೋಪೇತವಾಗಿ ಆಷಾಢ ಮಾಸದ ಹುಣ್ಣಿಮೆಯಂದು ರಥೋತ್ಸವವನ್ನು ಪುನರ್ ಆರಂಭಿಸಲಾಯಿತು.
ಆಷಾಢ ಮಾಸದಲ್ಲೇ ನಡೆಯುವ ಈ ಶ್ರೀ ಚಾಮರಾಜೇಶ್ವರ ಸ್ವಾಮಿ ರಥೋತ್ಸವಕ್ಕೆ ಕೇವಲ ಚಾಮರಾಜ ಜಿಲ್ಲೆ ಮತ್ತು ಸುತ್ತ ಮುತ್ತಲಿನ ಪ್ರದೇಶದ ಭಕ್ತರುಗಳು ಮಾತ್ರವಲ್ಲದೆ, ದೇಶ ವಿದೇಶಗಳಿಂದಲೂ ಸಹಸ್ರಾರು ಭಕ್ತರು ಪಾಲ್ಗೊಂಡು ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿಕೊಳ್ಳುವುದು ಅತ್ಯಂತ ವಿಶೇಷವಾಗಿದೆ. ಅದರಲ್ಲೂ ಈಗಾಗಲೇ ತಿಳಿಸಿದಂತೆ ನವ ವಿವಾಹಿತರು ರಥೋತ್ಸವದಲ್ಲಿ ಭಾಗವಹಿಸಿ ಅವರಿಬ್ಬರೂ ಭಕ್ತಿಯಿಂದ ಪ್ರಾರ್ಥಿಸಿಕೊಂಡು ರಥಕ್ಕೆ ದವನ ಚುಚ್ಚಿದ ಬಾಳೇ ಹಣ್ಣನ್ನು ಎಸೆದರೆ ಆವರು ಅಂದು ಕೊಂಡ ಕೆಲಸಗಳು ನೆರೆವೇರುತ್ತದೆ ಎಂಬ ನಂಬಿಕೆ ಇರುವ ಕಾರಣ, ಈ ರಥೋತ್ಸವದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನವಜೋಡಿಗಳ ಕಲರವವೇ ಕೇಂದ್ರ ಬಿಂದುವಾಗುವ ಕಾರಣ, ಈ ರಥೋತ್ಸವವು ನವದಂಪತಿಗಳ ಜಾತ್ರೆ ಎಂದೇ ಜನಪ್ರಿಯವಾಗಿರುವುದು ಗಮನಾರ್ಹವಾಗಿದೆ.
ಈ ರಥೋತ್ಸವದ ಅಂಗವಾಗಿ ಚಾಮರಾಜೇಶ್ವರಸ್ವಾಮಿ ದೇಗುಲದಲ್ಲಿ ಸುಮಾರು ಎರಡು ವಾರಗಳ ಮುಂಚೆಯೇ ಶುದ್ಧೀಕರಣದ ಕೆಲಸ ಆರಂಭವಾಘುವುದಲ್ಲದೇ,ಬ್ರಹ್ಮರಥೋತ್ಸದವಕ್ಕೂ ಹತ್ತು ದಿನಗಳ ಮುಂಚೆಯೇ ವಿವಿಧ ದೈವ ಕೈಂಕರ್ಯಗಳು ಆರಂಭವಾಗುತ್ತದೆ, ಇದರ ಸಲುವಾಗಿ ಅಂಕುರಾರ್ಪಣ ಪೂರ್ವಕ ವೃಷಭಾಧಿವಾಸ ನಡೆಸುವುದಲ್ಲದೇ, ಶುಭ ಮಹೂರ್ತದಲ್ಲಿ ಧ್ವಜಾರೋಹಣ ಪೂರ್ವಕ ಬೇರಿತಾಡನಾ ನಂತರ ಶಿಭಿಕಾರೋಹಣೋತ್ಸವ ನಡೆಯುತ್ತದೆ, ಆದಾದ ನಂತರದ ದಿನಗಳಲ್ಲಿ ಚಂದ್ರ ಮಂಡಲಾರೋಹಣೋತ್ಸವ, ಅನಂತ ಪೀಠಾರೋಹಣೋತ್ಸವ, ಪುಷ್ಪಮಂಟಪಾರೋಹಣೋತ್ಸವ, ವೃಷಭಾರೋಹಣೋತ್ಸವ, ನಂತರ ವಸಂತೋತ್ಸವದ ಪೂರ್ವಕ ಗಜವಾಹನೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ. ಅಂತಿಮ ದಿನ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಥದಲ್ಲಿ ಶ್ರೀ ಚಾಮರಾಜೇಶ್ವರ ಸ್ವಾಮಿಯ ಬ್ರಹ್ಮ ಮಹಾರಥೋತ್ಸವವು ನಡೆಯಲಿದೆ.
ರಾತ್ರಿ ಅತ್ಯಂತ ಅದ್ದೂರಿ ಮತ್ತು ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ನಡೆದ ನಂತರ ರಥೋತ್ಸವಕ್ಕೆ ಬಂದಂತಹ ಸಾವಿರಾರು ಭಕ್ತಾದಿಗಳಿಗೆ ದೇವಾಲಯದ ಮುಂದೆಯೇ ಅತ್ಯಂತ ಶುಚಿ ಮತ್ತು ರುಚಿಕರವಾದ ಸುಗ್ರಾಸ ಭೋಜನವನ್ನು ಪ್ರಸಾದ ರೂಪದಲ್ಲಿ ಇಲ್ಲಿ ಉಣಬಡಿಸುವುದು ಸಹಾ ಅತ್ಯಂತ ವಿಶೇಷವಾಗಿದೆ.
ಶ್ರೀ ಚಾಮರಾಜೇಶ್ವರ ರಥೋತ್ಸವದ ಬಗ್ಗೆ ಇಷ್ಟೆಲ್ಲಾ ಮಾಹಿತಿಗಳು ತಿಳಿದ ಇನ್ನೇಕೆ ತಡಾ, ಮುಂದಿನ ಬಾರಿ ಆಷಾಢ ಮಾಸದ ಹುಣ್ಣಿಮೆಯಂದು ಸಕುಟುಂಬ ಸಮೇತರಾಗಿ ಅಲ್ಲಿನ ರಥೋತ್ಸವದಲ್ಲಿ ಭಾಗವಾಗಿಸಿ ಅಲ್ಲಿನ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ

Ch Nagar is my Mother’s home, I have been going there almost every year , and I was bought up there till I was 8yrs, however the info you have shared is immense than what is being told there. Will share with all over there . Thank you
LikeLiked by 1 person
ಧನ್ಯೋಸ್ಮಿ
LikeLike