1980-90ರ ದಶಕದಲ್ಲಿ ಬಹುತೇಕ ಸರ್ಕಾರಿ ಕಾರ್ಯಕ್ರಮಗಳಾಗಿರಲೀ, ದೂರದರ್ಶನದ ವಿವಿಧ ಕಾರ್ಯಕ್ರಮಗಳಾಗಿರಲೀ ಅಥವಾ ದಸರಾ ವೀಕ್ಷಕವಿವರಣೆಯಾಗಿರಲೀ ಆಲ್ಲಿ ಅಪರ್ಣಾ ಆವರು ಉಧ್ಘೋಷಕಿಯಾಗಿದ್ದಾರೆ ಎಂದರೆ, ಆ ಕಾರ್ಯಕ್ರಮ ಅತ್ಯಂತ ಸುಲಲಿತವಾಗಿ ಮತ್ತು ನೆಡೆದುಕೊಂಡು ಹೋಗುತ್ತದೆ ಎನ್ನುವ ಭಾವ ಕನ್ನಡಿಗರಲ್ಲಿ ಮೂಡಿತ್ತು. ತಮ್ಮ ಅಚ್ಚ ಕನ್ನಡದಲ್ಲಿ ಸ್ವಚ್ಭವಾಗಿ ಮತ್ತು ಅಷ್ತೇ ಸ್ಪಷ್ಟವಾಗಿ, ಸ್ಪುಟವಾಗಿ ಪ್ರತೀ ಪದಗಳಿಗೂ ಅದಕ್ಕೆ ತಕ್ಕಂತೆ ಏರಿಳಿತಗಳಿಂದ ನಿರೂಪಣೆ ಮಾಡುತ್ತಿದ್ದ ಶೈಲಿ ಕನ್ನಡಿಗರ ಹೃದಯಗಳನ್ನು ಗೆದ್ದಿತ್ತು. ನಂತರದ ದಿನಗಳಲ್ಲಿ ಕೆಲವು ಕನ್ನಡ ಚಲನಚಿತ್ರ ಮತ್ತು ಕನ್ನಡದ ಧಾರಾವಾಹಿಗಳಲ್ಲಿ ಬಹಳ ಗಂಭೀರ ಪಾತ್ರಗಳಲ್ಲಿ ನಟಿಸಿ ಆ ಪಾತ್ರಗಳಿಗೆ ಜೀವತುಂಬುತ್ತಿದ್ದ ಅಪರ್ಣಾರವರು ಇತ್ತೀಚಿನ ವರ್ಷಗಳಲ್ಲಿ ಮಜಾ ಟಾಕೀಸ್ ನಲ್ಲಿ ವರೂ ಅರ್ಥಾತ್ ವರಲಕ್ಷ್ಮಿ ಎಂಬ ಹಾಸ್ಯ ಪಾತ್ರದ ಮೂಲಕ ಅಪರ್ಣಾ ಸಹಾ ಹಾಸ್ಯಪಾತ್ರದಲ್ಲಿ ಮಿಂಚಬಲ್ಲರು ಎಂದು ನಿರೂಪಿಸಿದ್ದ ನಟಿ, ಶ್ರೀಮತಿ ಅಪರ್ಣಾ ವಸ್ತಾರೆ ಅವರ ವ್ಯಕ್ತಿ, ವಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ
ಅಪರ್ಣಾ ಆವರು 1967ರ ಜುಲೈ 11ರಂದು ಚಿಕ್ಕಮಗಳೂರು ಜಿಲ್ಲೆಯ ಪಂಚನ ಹಳ್ಳಿಯಲ್ಲಿ ಸಾಂಪ್ರದಾಯಸ್ಥ ಕುಟುಂಬದಲ್ಲಿ ಜನಿಸುತ್ತಾರೆ. ಅಪರ್ಣಾ ಬೆಳೆದಿದ್ದು ಬೆಂಗಳೂರಿನ ಮಲ್ಲೇಶ್ವರದಲ್ಲಿಯೇ. ಮಲ್ಲೇಶ್ವರದಲ್ಲಿ ತಮ್ಮ ಬಾಲ್ಯವನ್ನು ಕಳೆದ ಅಪರ್ಣಾ ಆ ನಂತರ ಕುಮಾರಪಾರ್ಕ್ ಶಾಲೆಯಲ್ಲಿ ಪ್ರಾರ್ಥಮಿಕ ಶಿಕ್ಷಣ ಪಡೆದರು. ಆ ನಂತರ ಎಂಇಎಸ್ ಕಾಲೇಜ್‌ನಲ್ಲಿ ಶಿಕ್ಷಣವನ್ನು ಪಡೆದರು. ಅಪರ್ಣ ಅವರ ತಂದೆ ಶ್ರೀ ನಾರಾಯಣ ಸ್ವಾಮಿಯವರು ಕನ್ನಡಪ್ರಭ ಪತ್ರಿಕೆಯ ಪುರವಣಿ ಸಂಪಾದಕರಾಗಿ ಆನಂತರ ಅಭಿಮಾನಿ ದಿನ ಪತ್ರಿಕೆಯ ಸಂಪಾದಕರಾಗಿದ್ದವರು. ಬಾಲ್ಯದಿಂದಲೂ ಆಟ ಪಾಠಗಳಲ್ಲಿ ಅತ್ಯಂತ ಚುರುಕಾಗಿದ್ದ ಅರ್ಪರ್ಣಾ ಸಹಜವಾಗಿಯೇ ಸುಸ್ಪಷ್ಟ ಕನ್ನಡ ಭಾಷೆ, ಸಂಸ್ಕಾರ ಮತ್ತು ಸಂಪ್ರದಾಯಗಳು ಮನೆಯೇ ಮೊದಲ ಪಾಠಶಾಲೆ ಎಂಬಂತೆ ಮನೆಯಲ್ಲಿಯೇ ತಂದೆ ತಾಯಿಯರಿಂದ ಬಂದ ಕಾರಣ, ಕನ್ನಡವನ್ನು ಅತ್ಯಂತ ಸ್ಪಷ್ಟವಾಗಿ ಪಟ ಪಟನೆ ಅರಳು ಹುರಿದಂತೆ ಮಾತಾಡುವುದು ಕರಗತವಾಗಿದ್ದಲ್ಲದೇ, ಮನೆಯಲ್ಲಿಯೂ ಸಾಹಿತ್ಯಾತ್ಮಕವಾದ ಚಟುವಟಿಕೆಗಳು ಇದ್ದ ಕಾರಣ, ಶಾಲಾಕಾಲೇಜುಗಳಲ್ಲಿ ಓದಿನ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಾಟಕಗಳಲ್ಲಿ ಭಾಗವಹಿಸುತ್ತಿದ್ದ ಅಪರ್ಣಾ ತಮ್ಮ ಪದವಿ ಮುಗಿದ ನಂತರ ರಂಗಭೂಮಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಈಕೆಯ ಅಭಿನಯವನ್ನು ನೋಡಿ ಮೆಚ್ಚಿಕೊಂಡಿದ್ದಲ್ಲದೇ, ಅಪರ್ಣ ಅವರ ತಂದೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಕನ್ನಡದ ಹೆಸರಾಂತ ನಿರ್ದೇಶಕರಾದ ಶ್ರೀ ಪುಟ್ಟಣ್ಣ ಕಣಗಾಲ್ ರವರು 1984ರಲ್ಲಿ ನಿರ್ದೇಶಿಸಿದ ಮಸಣದ ಹೂವು ಚಿತ್ರದಲ್ಲಿ ಚಿಕ್ಕ ವಯಸ್ಸಿನಲ್ಲೇ ವೇಶ್ಯಾವಾಟಿಗೆಗೆ ದೂಡಲ್ಪಟ್ಟ ಬಾಲೆಯಂತಹ ಪ್ರಬುದ್ಧವಾದ ಪಾತ್ರವೊಂದನ್ನು ನೀಡುವ ಮೂಲಕ ಅಪರ್ಣಾ ಅವರನ್ನು ಅಧಿಕೃತವಾಗಿ ಕನ್ನಡ ಚಲನ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸಿದ್ದರು. ಅದಾದ ನಂತರ ಇನ್ಸಪೆಕ್ಟರ್ ವಿಕ್ರಂ ಸೇರಿದಂತೆ ಇನ್ನೂ ಕೆಲವು ಬೆರಳೆಣಿಕೆಯ ಚಿತ್ರಗಳಲ್ಲಿ (10 ಸಿನಿಮಾಗಳಲ್ಲಿ) ಪ್ರಮುಖ ಪಾತ್ರಗಳಲ್ಲಿ ನಟಿಸುವಷ್ಟರಲ್ಲಿ, ಆಕೆ ಸುಮುಧುರ ಶಾರೀರ(ಕಂಠ)ಕ್ಕೆ ಮಾರು ಹೋದ ಆಕಾಶವಾಣಿಯ ವಿವಿಧ ಭಾರತಿ ಕನ್ನಡದವರು ಆಕೆಯನ್ನು ತಮ್ಮ ನಿಲಯದ ಅಧಿಕೃತವಾದ ಉಧ್ಘೋಷಕಿಯಾಗಿ (ರೇಡಿಯೋ ಜಾಕಿಯಾಗಿ) ನೇಮಕ ಮಾಡಿಕೊಳ್ಳುವ ಮೂಲಕ ಅಪರ್ಣಾರವರ ಅಮೃತವಾಣಿ ಅರ್ಥಾತ್ ಧ್ವನಿಯ ಮೂಲಕವೇ ಸಮಸ್ತ ಕನ್ನಡಿಗರ ಮನೆ ಮತ್ತು ಮನಗಳನ್ನು ತಲುಪುವಂತಾಗುತ್ತದೆ. 1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದರಲ್ಲಿ ಸತತ ಎಂಟು ಗಂಟೆಗಳ ಕಾಲ ನಿರಂತರವಾಗಿ ನಿರೂಪಣೆ ಮಾಡುವ ಮೂಲಕ ನಿರೂಪಣಾ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಅಪರ್ಣಾರವರು ಸೃಷ್ಟಿಸುತ್ತಾರೆ.
ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲೇ 90ರ ದಶಕದಲ್ಲಿ ಕರ್ನಾಟಕ ದೂರದರ್ಶನದ ಕನ್ನಡ ವಾಹಿನಿ ಚಂದನದಲ್ಲಿಯೂ ಹತ್ತು ಹಲವಾರು ನಿರೂಪಿಸುವ ಜವಾಬ್ಧಾರಿಯು ಅಪರ್ಣಾರವರ ಹೆಗಲಿನ ಮೇಲಿ ಬಿದ್ದಾಗ ಅವುಗಳೆಲ್ಲವನ್ನೂ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿ ಸೈ ಎನಿಸಿಕೊಳ್ಳುತ್ತಾರೆ. ಕೇವಲ ಕಾರ್ಯಕ್ರಮ ನಿರೂಪಣೆಯಲ್ಲದೇ ಚಂದನ ವಾಹಿನಿಯಿಂದ ಪ್ರಸಾರವಾಗುತಿದ್ದ ಅನೇಕ ನೇರಕಾರ್ಯಕ್ರಮಗಳು ಅದರಲ್ಲೂ ದಸರಾ ಕಾರ್ಯಕ್ರಮದ ನೇರ ಪ್ರಸಾರಗಳಲ್ಲಿ ಅಪರ್ಣಾ ಅವರದ್ದೇ ಸಾರಥ್ಯ. ಹಾಗಾಗಿಯೇ ನನಗೆ ಇವತ್ತಿಗೂ ಹೆಮ್ಮೆ ಏನೆಂದರೆ ಕರ್ನಾಟಕದಲ್ಲಿ ದೂರದರ್ಶನ ಆರಂಭವಾದಗಿನಿಂದಲೂ ಇವತ್ತಿನವರೆಗೂ ದೂರದರ್ಶನ ಜೊತೆಗಿನ ನನ್ನ ನಂಟು ಬಿಗಿಯಾಗಿದೆ. ಹಾಗಾಗಿಯೇ ಟೆಲಿವಿಷನ್ ಅಂದರೆ ನನಗೆ ತುಂಬಾ ಅಭಿಮಾನ’ ಎಂದು ಹಲವು ಸಂದರ್ಶನಗಳಲ್ಲಿ ಅಪರ್ಣಾ ಅವರೇ ಹೇಳಿಕೊಂಡಿದ್ದುಂಟು.
ಇವಿಷ್ಟರ ಮಧ್ಯದಲ್ಲಿ ತಮ್ಮ ಪೋಷಕರು ನೋಡಿದ ವರನೊಂದಿಗೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕೆಲವು ತಿಂಗಳುಗಳ ಕಾಲ ಕಲಾಜಗತ್ತಿನಿಂದ ದೂರವಿದ್ದ ಆಪರ್ಣಾರವರು, ನಂತರ ವಯಕ್ತಿಕ ಕೌಟುಂಬಿಕ ಕಾರಣಗಳಿಂದಾಗಿ ತಮ್ಮ ಪತಿಯೊಂದಿಗೆ ವಿಚ್ಚೇದನ ಪಡೆದ ಬಳಿಕ ಮತ್ತೆ ಕಲಾಜಗತ್ತಿಗೆ ಹಿಂದಿರುಗಿದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಅದು ಕರ್ನಾಟಕ ಸರ್ಕಾರದ ಅಧಿಕೃತ ಕಾರ್ಯಕ್ರಮವಾಗಿರಲೀ, ಕನ್ನಡ ಚಿತ್ರರಂಗದ ಕಾರ್ಯಕ್ರಮವಾಗಿರಲೀ, ರಾಜಕೀಯ ಸಮಾವೇಶಗಳಾಗಿರಲೀ ಇಲ್ಲವೇ ಯಾವುದೇ ಕನ್ನಡದ ಖಾಸಗೀ ಕಾರ್ಯಕ್ರಮಗಳಾಗಿರಲೀ ಅಲೆಲ್ಲಾ ಕಡೆಯಲ್ಲೂ ಕಂಚಿನ ಕಂಠದ ಮತ್ತೊಬ್ಬ ನಿರೂಪಕ ಶಂಕರ್ ಪ್ರಕಾಶ್ ಮತ್ತು ಅಪರ್ಣಾ ಅವರ ಜೋಡಿಯದ್ದೇ ಪಾರುಪತ್ಯ. ಸುಮಾರು ಮೂರು ದಶಕಗಳ ಕಾಲ ನಿರಂತರವಾಗಿ ವಿವಿಧ ವಾಹಿನಿಗಳಲ್ಲಿ, 7000ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಅಚ್ಚ ಕನ್ನಡವನ್ನು ಮೆರೆಸಿದ ಕೀರ್ತಿ ಅಪರ್ಣಾ ಅವರದ್ದು ಎಂದರೂ ತಪ್ಪಾಗದು.
ಸಂಸ್ಕೃತದಲ್ಲಿ ಅಪರ್ಣಾ ಎನ್ನುವುದು ಪಾರ್ವತಿಯ ಮತ್ತೊಂದು ಹೆಸರಾಗಿದ್ದು, ಎಲ್ಲರಿಗೂ ತಿಳಿದಿರುವಂತೆ ಆಕೆ ಶಿವನ ಪತ್ನಿ, ಕಾಕತಾಳೀಯವೋ ಎನ್ನುವಂತೆ, ಅಪರ್ಣಾ ಅವರ ಜೀವನದಲ್ಲಿ ಚಿಕ್ಕಮಗಳೂರಿನ ಮೂಲದವರಾದ, ವೃತ್ತಿಯಲ್ಲಿ ವಾಸ್ತುಶಿಲ್ಪಿಯಾಗಿ ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತ ಮತ್ತು ಉತ್ತಮ ಬರವಣೆಗಾರರಾಗಿದ್ದ ಶ್ರೀ ನಾಗರಾಜ್ ವಸ್ತಾರೆ ಅವರ ಪರಿಚಯವಾಗಿ, ಆ ಪರಿಚಯ ಪ್ರೇಮಕ್ಕೆ ತಿರುಗಿ, ಕಡೆಗೆ ಅವರಿಬ್ಬರೂ ಪಾರ್ವತಿ ಪರಮೇಶ್ವರರಂತೆ, ಅಪರ್ಣಾ ನಾಗರಾಜ್ ಅವರುಗಳು ಸತಿಪತಿಗಳಾಗುವ ಮೂಲಕ ಅಧಿಕೃತವಾಗಿ ಅಪರ್ಣಾ ವಸ್ತಾರೆಯಾಗುತ್ತಾರೆ. ಹೀಗೆ ಕನ್ನಡ ಕಾರ್ಯಕ್ರಮಗಳ ನಿರೂಪಣೆ ಮಾಡುತ್ತಲೇ ಇರುವಾಗ ಕೆಲವೊಂದು ನಿರ್ದೇಶಕರ ಒತ್ತಾಯಕ್ಕೆ ಮಣಿದು ಧಾರಾವಾಹಿಗಳಲ್ಲಿಯೂ ನಟಿಯಾಗಿ ನಟಿಸಿದ್ದು ಅವುಗಳಲ್ಲಿ ಪ್ರಮುಖವಾಗಿ ದಿವಂಗತ ವೈಶಾಲಿ ಕಾಸರವಳ್ಳಿಯವರು ನಿರ್ದೇಶಿಸಿದ್ದ ಮೂಡಲಮನೆ, ನಂತರ ಕಿರುತೆರೆಯ ದಿಗ್ಗಜ ನಿರ್ದೇಶಕರಾದ ಶ್ರೀ ಟಿ. ಎನ್, ಸೀತಾರಾಮ್ ಅವರ ಮುಕ್ತ ಧಾರಾವಾಹಿಯಲ್ಲಿ ಸೀತಾರಾಂ ಅವರು ನಿರ್ವಹಿಸುತ್ತಿದ್ದ ವಕೀಲ ಸಿ.ಎಸ್.ಪಿ. ಅವರ ಮಡದಿ ವಕೀಲೆ ಶೀಲಾ ಪ್ರಸಾದ್ ಆಗಿ ಅನೇಕ ಪ್ರಕರಣಗಳಲ್ಲಿ ಸಿ.ಎಸ್.ಪಿ ಆವರ ವಿರುದ್ಧ ಕೋರ್ಟಿನ ವಿವಿಧ ಪ್ರಕರಣಗಳಲ್ಲಿ ವಾದ ಮಾಡುತ್ತಿದ್ದ ರೀತಿಯಂತೂ ಇಂದಿಗೂ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಇತ್ತೀಚಿನ ದಿನಗಲ್ಲಿ ಇವಳು ಸುಜಾತ ಎನ್ನುವ ಧಾರಾವಾಹಿಯಲ್ಲಿ ನಾಯಕನ ತಾಯಿಯ ಪಾತ್ರದಲ್ಲೂ ನಟಿಸಿ ಎಂತಹ ಪಾತ್ರಗಳಿಗೂ ಜೀವ ತುಂಬವಂತೆ ನಟಿಸಬಲ್ಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಕನ್ನಡದ ಮತ್ತೊಂದು ಹೆಸರಾಂತ ಟಿವಿ ಶೋ ಅದ ಸುದೀಪ್ ನಿರೂಪಿಸುವ ಬಿಗ್ ಬಾಸ್ ಕನ್ನಡದ 2013ರ ಮೊದಲ ಸೀಸನ್ನಲ್ಲಿಯೂ ಭಾಗವಹಿಸಿದ್ದ ಅಪರ್ಣಾ ಸುಮಾರು 41 ದಿನಗಳ ಕಾಲ ಆ ಮನೆಯಲ್ಲಿದ್ದು, ತಮ್ಮ ಸಹಜ ವ್ಯಕ್ತಿತ್ವದಿಂದ ಮತ್ತು ತಮ್ಮ ಪಾಕಶಾಸ್ತ್ರ ಪ್ರಾವೀಣ್ಯತೆಯಿಂದ ಅನ್ನಪೂರ್ಣೆ ಅಪರ್ಣಾರಾಗಿ ಎಲ್ಲರ ಮನಸೂರೆಗೊಂಡಿದ್ದರು. ಅಂತಿಮವಾಗಿ ಅಪರ್ಣಾ ಅವರಲ್ಲಿದ್ದ ಕಲಾವಿದೆ ಹೊರಬಂದಿದ್ದು 2015ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ ಮಜಾ ಟಾಕೀಸ್ ರಿಯಾಲಿಟಿ ಶೋನ ಒನ್ ಅಂಡ್ ಓನ್ಲಿ, ಸ್ವೀಟ್ 16 ವರಲಕ್ಷ್ಮೀ ಅರ್ಥಾತ್ ವರೂ! ಎನ್ನುವ ಪಾತ್ರದ ಮೂಲಕ ಎಂದರೂ ತಪ್ಪಾಗದು. ಆರಂಭದಲ್ಲಿ ಉಷಾ ಭಂಡಾರಿಯವರು ಮಾಡುತ್ತಿದ್ದ ಪಾತ್ರವನ್ನು ಅಪರ್ಣಾ ಮಾಡಲು ಆರಂಭಿಸಿದಾಗ, ಸದಾ ಕಾಲವೂ ಗಂಭೀರವಾಗಿರುತ್ತಿದ್ದ ಅಪರ್ಣಾ ಹಾಸ್ಯ ಪಾತ್ರವನ್ನು ನಿಭಾಯಿಸಬಲ್ಲರೇ? ಎಂಬ ಸಂದೇಹವಿದ್ದರೂ ದಿನದಿಂದ ದಿನಕ್ಕೆ ಬಹಳ ಪ್ರಬುದ್ಧವಾಗಿ ಆ ಹಾಸ್ಯ ಪಾತ್ರಕ್ಕೆ ಜೀವ ತುಂಬಿದ ಕಾರಣ, ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು. ಚಿಕ್ಕಮಕ್ಕಳಿಂದ ವೃದ್ಧರವರೆಗೆ ಅನೇಕರು ಈ ಪಾತ್ರವನ್ನು ಮೆಚ್ಚಿದ್ದರು. ವರಲಕ್ಷ್ಮಿ ಪಾತ್ರದ ಮೂಲಕ ಬಹಳ ಸಹಜವಾಗಿ ತನಗೆ ಬರಾಕ್ ಒಬಾಮಾನಿಂದ ಹಿಡಿದು ಸಲ್ಮಾನ್ ಖಾನ್ ಅವರಂತಹ ಜನಪ್ರಿಯ ವ್ಯಕ್ತಿಗಳು ಏಕವಚನದಲ್ಲಿ ಮಾತನಾಡಿಸುವಂತಹ ಸ್ನೇಹಿತರೆಂದು ಹೇಳಿ ಕೊಳ್ಳುತ್ತಾ, ಅವರೊಂದಿಗೆ ಮಾತನಾಡುವ ದೃಶ್ಶಗಳು ಮತ್ತು ಸೃಜನ್ ಲೋಕೇಶ್ ಅವರಿಂದ ಪದೇ ಪದೇ ಕಾಲು ಎಳೆಸಿಕೊಳ್ಳುತ್ತಾ, ಸೃಜಾ… ಥೂ.. ಹೋಗಪ್ಪಾ.. ಎಂದು ತೆರೆಯ ಮರೆಗೆ ಸರಿಯುತ್ತಿದ್ದದ್ದು ಇಂದಿಗೂ ಕನ್ನಡಿಗರ ಕಣ್ಣಿಗೆ ಕಟ್ಟಿದಂತಿದೆ ಎಂದರೂ ಅತಿಶಯವಾಗದು.
ಸುಮಾರು 20 ವರ್ಷಗಳ ನಂತರ 2024 ರ ಬಿಡುಗಡೆಯಾದ ಗಂಗಾಧರ ಸಾಲಿಮಠ್ ನಿರ್ದೇಶಿಸಿದ ಗ್ರೇ ಗೇಮ್ಸ್ ಎಂಬ ಚಿತ್ರದಲ್ಲಿ ಅಪರ್ಣಾ ಅವರು ನಟಿಸಿದ್ದಲ್ಲದೇ, ತಾನು ನಟಿಸುವ ಪಾತ್ರ ಮಹತ್ವದ್ದಾಗಿದ್ದು ಅದರ ಮೂಲಕ ಸಮಾಜಕ್ಕೆ ಏನಾದರೂ ತಿಳುವಳಿಕೆಯನ್ನು ನೀಡಬಲ್ಲಂತಹ ಸತ್ವಯುತ ಪಾತ್ರವಾಗಿದ್ದಲ್ಲಿ ಮಾತ್ರವೇ ನಟಿಸುತ್ತೇನೆ. ದುರಾದೃಷ್ಟವಷಾತ್ ನನಗೆ ಬಂದ ಪಾತ್ರಗಳೆಲ್ಲವೂ ಇದಕ್ಕಿಂತ ಹೊರತಾಗಿದ್ದ ಕಾರಣ, ತಾನು ಇಷ್ಟು ದಿವಸಗಳ ಕಾಲ ನಟನೆ ಮಾಡಿರಲಿಲ್ಲ ಎಂದು ತಿಳಿಸಿದ್ದರು. ಸೈಬರ್ ಕ್ರೈಮ್ ಥ್ರಿಲ್ಲರ್ ಕುರಿತಾದ ಕಥೆಯುಳ್ಳ ಗ್ರೇ ಗೇಮ್ಸ್‌ನಲ್ಲಿ, ಅವರು ಆನ್‌ಲೈನ್ ಗೇಮಿಂಗ್‌ಗೆ ವ್ಯಸನಿಯಾಗಿರುವ ಹುಡುಗನ ತಾಯಿಯಾಗಿ ನಟಿಸಿದ್ದರ ಕುರಿತಾಗಿ ಅನೇಕ ಸಿನಿ ವಿಮರ್ಶಕರು ಅಪರ್ಣಾ ಅವರು ಶಕ್ತಿಯುತ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ಸಂಪೂರ್ಣವಾಗಿ ಮನವರಿಕೆ ಮಾಡಿಕೊಡುತ್ತಾರೆ ಎಂದು ತಿಳಿಸಿದ್ದದ್ದು, ಅಪರ್ಣಾ ಅವರು ಬಹಳ ವರ್ಷಗಳ ನಂತರ ಆ ಚಿತ್ರವನ್ನು ಏಕಾಗಿ ಒಪ್ಪಿಕೊಂಡಿದ್ದರು ಎಂಬುದನ್ನು ಧೃಢಪಡಿಸುತ್ತದೆ.
ಇಷ್ಟೆಲ್ಲಾ ಬಹುಮುಖಿ ಪ್ರತಿಭೆಯ ಅಪರ್ಣಾ ಅವರು ಕೆಲ ಕಾಲ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಮೂಲಕವೂ ಓದುಗರಿಗೆ ಮತ್ತಷ್ಟು ಹತ್ತಿರವಾಗಿದ್ದರು. ಬೆಂಗಳೂರಿನಲ್ಲಿ ನಡೆಯುತ್ತಿದ್ದ ವಿವಿಧ ಸಾಂಸ್ಕೃತಿಕ ಮತ್ತು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಸಹಜವಾಗಿ ನಗೆಮೊಗದಿಂದ ಭಾಗವಹಿಸುತ್ತಿದ್ದದ್ದಲ್ಲದೇ,ಅವರನ್ನು ಗುರುತಿಸಿ ಮಾತನಾಡಿಸುವವರೊಂದಿಗೂ ಸಹಾ ಬಹಳ ಸಹಜವಾಗಿ ಮಾತನಾಡಿಸುತ್ತಿದ್ದದ್ದಲ್ಲದೇ, ಅವರ ಸೆಲ್ಫೀ ಆಸೆಯನ್ನು ಸಹಾ ಈಡೇರಿಸುವ ಮೂಲಕ ತಮ್ಮ ಪಕ್ಕದ ಮನೆಯ ಹುಡುಗಿಯೇನೋ ಎನ್ನುವಷ್ಟು ಹತ್ತಿರವಾಗಿ ಬಿಡುತ್ತಿದ್ದರು.
ಕನ್ನಡವೇ ನನ್ನ ಉಸಿರು ಎನ್ನುತ್ತಿದ್ದ ಅಪರ್ಣಾ ಅವರಿಗೆ ಕನ್ನಡ ಭಾಷೆಯ ಮೇಲಿದ್ದ ಹಿಡಿತದಷ್ಟೇ ಇಂಗ್ಲಿಷ್ ಭಾಷೆ ಮೇಲೂ ಕೂಡ ಹಿಡಿತ ಹೊಂದಿದ್ದರೂ ಸಹಾ, ಅನಗತ್ಯವಾಗಿ ತಮ್ಮ ಸಂಭಾಷಣೆಯಲ್ಲಿ ಇಂಗ್ಲೀಷ್ ಭಾಷೆಯನ್ನು ಬಳಸಲು ಇಚ್ಚಿಸುತ್ತಿರಲಿಲ್ಲ. ಎಂತಹ ಸಭೆ ಸಮಾರಂಭಗಳಲ್ಲಿಯೂ ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲಿಯೇ ನಿರೂಪಣೆಯನ್ನು ಎಷ್ಟು ಸೊಗಸಾಗಿ ಮಾಡಬಹುದು ಎಂದು ತೋರಿಸಿಕೊಟ್ಟ ಅಪರ್ಣಾರಿಗೆ, ತನಗೆ ಅನ್ನ ಕೊಟ್ಟ ಮಾತೃ ಭಾಷೆಗಾಗಿ ಏನಾದರೂ ಮಾಡಬೇಕು ಎನ್ನುವ ಕನಸಿತ್ತು, ಅದಕ್ಕಾಗಿಯೇ ಅವರು ನಿರೂಪಣಾ ಶಾಲೆಯನ್ನು ತೆರೆದು ಅದರ ಮೂಲಕ ನಿರೂಪಣೆಯಲ್ಲಿ ತಮಗಿದ್ದ ಅಪಾರ ಅನುಭವವನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯಬೇಕೆಂಬ ಉತ್ಕಟ ಇಚ್ಚೆಯನ್ನು ಹೊಂದಿರುವಾಗಿ ಅನೇಕ ಬಾರಿ ತಮ್ಮ ಆಪ್ತರ ಬಳಿ ಅವರು ಈ ಬಗ್ಗೆ ಹೇಳಿಕೊಂಡಿದ್ದರಂತೆ. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ, ತಮ್ಮ ನಿರೂಪಣಾ ಶಾಲೆಯ ಮೂಲಕ ನೂರಾರು ಮತ್ತಷ್ಟು ಉತ್ತಮ ನಿರೂಪಕರನ್ನು ಕನ್ನಡಕ್ಕೆ ಕೊಡಬೇಕು ಅವರ ಆಸೆ ನನಸಾಗುವ ಮುನ್ನವೇ ಶ್ವಾಸಕೋಶದ ಕ್ಯಾನ್ಸರ್ ಎನ್ನುವ ಮಹಾಮಾರಿ ಅವರಿಗೆ ವಕ್ಕರಿಸಿ ಸುಮಾರು ಎರಡು ವರ್ಷಗಳ ಕಾಲ ನರಳಿಸಿ ಅಂತಿಮವಾಗಿ 2024ರ ಜುಲೈ 11ರ ರಾತ್ರಿ ಸುಮಾರು 9:45ರ ಸಮಯದಲ್ಲಿ ಜಯನಗರದ ಖಾಸಗೀ ಆಸ್ಪತ್ರೆಯಲ್ಲಿ 3 ದಿನಗಳಿಂದ ನೀದುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೇ, ನಿಧನರಾಗುವ ಮೂಲಕ ಕನ್ನಡದ ಧೃವತಾರೆಯೊಂದರ ಅಗಲಿಕೆಯಾಗಿರುವುದು ಕನ್ನಡ ಸಾರಸ್ವತ ಲೋಕಕ್ಕಷ್ಟೇ ಅಲ್ಲದೇ ಸಮಸ್ತ ಕನ್ನಡಿಗರಿಗೆ ನಿಜಕ್ಕೂ ಅತ್ಯಂತ ದುಃಖಕರವಾದ ಸಂಗತಿಯಾಗಿದೆ.
ಕಾಕತಾಳೀಯವೆಂದರೆ, ಆಪರ್ಣಾವರು ಹುಟ್ಟಿದ್ದೂ ಸಹಾ ಜುಲೈ 11 ಮತ್ತು ನಿಧನರಾದದ್ದೂ ಸಹಾ ಜುಲೈ 11. 1967ರಲ್ಲಿ ಜನಿಸಿದ್ದ ಅಪರ್ಣ, 2024ರಲ್ಲಿ ತಮ್ಮ 57ನೇ ವಯಸ್ಸಿನಲ್ಲಿ ನಿಧನರಾಗುವ ಮೂಲಕ ದೈಹಿಕವಾಗಿ ನಮ್ಮೆಲ್ಲರನ್ನೂ ಅಗಲಿದ್ದರೂ, 2014ರಲ್ಲಿ, ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸಮಯದಲ್ಲಿ ನೀಡಲಾಗುವ ಸೂಚನೆಗಳಾದ, ಪ್ರಯಾಣಿಕರಲ್ಲಿ ವಿನಂತಿ, ಮುಂದಿನ ನಿಲ್ದಾಣ ಯಶವಂತಪುರ, ರೈಲಿನ ಬಾಗಿಲು ಈಗ ಎಡಕ್ಕೆ ತೆರಯಲಿದೆ ಎನ್ನುವ ಹತ್ತಾರು ಧ್ವನಿಮುದ್ರಿಕೆಗಳಿಗೆ ಧ್ವನಿ ಯಾಗುವ ಮೂಲಕ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಕನ್ನಡಿಗರಿಗೂ ಆಚಂದ್ರಾರ್ಕವಾಗಿ ಅಪರ್ಣಾ ತಮ್ಮ ಧ್ವನಿಯ ಮೂಲಕ ಸದಾ ನಮ್ಮೊಂದಿಗೆ ಇದ್ದಾರೆ ಎನ್ನುವುದನ್ನು ನೆನಪಿಸುತ್ತಾರೆ ಎಂದರೂ ತಪ್ಪಾಗದು ಅಲ್ವೇ? ಕನ್ನಡಕ್ಕಾಗಿಯೇ ತನು ಮನವನ್ನು ಅರ್ಪಿಸಿದ್ದ ಹೆಮ್ಮೆಯ ಕನ್ನಡತಿ ಶ್ರೀಮತಿ ಅಪರ್ಣಾ ವಸ್ತಾರೆಯವರು ಖಂಡಿತವಾಗಿಯೂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ಸೃಷ್ಟಿಕರ್ತ ಉಮಾಸುತ