ನಮ್ಮ ಸನಾತನ ಧರ್ಮದಲ್ಲಿ ಮಾತೃದೇವೋಭವ, ಪಿತೃದೇವೋಭವ ಎಂದು ಜನ್ಮ ಕೊಟ್ಟ ತಾಯಿ ತಂದೆಯರಿಗೆ ಮೊದಲ ಗೌರವವನ್ನು ಸಲ್ಲಿಸಿದರೆ, ನಂತರದ ಗೌರವ ಆಚಾರ್ಯ ದೇವೋಭವ ಎಂದು ಗುರುಗಳಿಗೆ ಸಲ್ಲಿಸುತ್ತೇವೆ. ಅದಕ್ಕೆ ಏನೋ ಯಾವುದೇ ಕೆಲಸವನ್ನು ಸುಗಮವಾಗಿ ಮಾಡುವಂತಾಗಲು ಮುಂದೆ ದಿಟ್ಟ ಗುರಿ ಇರಬೇಕು. ಹಿಂದೆ ಸಮರ್ಥ ಗುರು ಇರಬೇಕು ಎಂದು ಹೇಳುತ್ತದೆ ನಮ್ಮ ಶಾಸ್ತ್ರ. ಅದನ್ನೇ ಪುರಂದರ ದಾಸರು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂದು ಹೇಳಿದ್ದಾರೆ. ಪ್ರತೀ ವರ್ಷ ಆಷಾಢಮಾಸದ ಹುಣ್ಣಿಮೆಯಂದು ವೇದವ್ಯಾಸರ ಜಯಂತಿಯನ್ನು ಗುರುಪೂರ್ಣಿಮಾ ಎಂದು ಆಚರಿಸುವ ಪದ್ದತಿಯು ನಮ್ಮ ಸನಾತನ ಧರ್ಮದಲ್ಲಿದ್ದು, ನಾವಿಂದು ನನ್ನ ಗುರುಗಳು ಮತ್ತು ನನ್ನ ಹಿತೈಷಿಗಳಾದ ಶ್ರೀ ಸತ್ಯನಾರಾಯಣ ಎಲ್ಲರ ಪ್ರೀತಿಯ ಸತ್ಯಾ ಸರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ವಿಧ್ಯಾರ್ಥಿಗಳ ಬಗ್ಗೆ ಅವರಿಗಿದ್ದ ಪ್ರೀತಿ ವಿಶ್ವಾಸವನ್ನು ತಿಳಿಯೋಣ ಬನ್ನಿ.
ಮೈಸೂರು ಬಳಿಯ ತಾಯೂರಿನ ಸಣ್ಣ ಸಂಪ್ರದಾಯಸ್ಥ ಕುಟುಂಬದಲ್ಲಿ 60ರ ದಶಕದಲ್ಲಿ ಕೊನೆಯ ಮಗನಾಗಿ ಸತ್ಯನಾರಾಯಣ ಅವರ ಜನನವಾಗುತ್ತದೆ. ಅವರ ಕುಟುಂಬದ ಕೊನೆಯ ಮಗನಾಗಿದ್ದರಿಂದ ಸಹಜವಾಗಿ ಎಲ್ಲರಿಗೂ ಅಚ್ಚು ಮೆಚ್ಚಿನವರಾಗಿ ಎಲ್ಲರಿಗೂ ಪ್ರೀತಿಯ ಸತ್ಯಾ ಆಗುತ್ತಾರೆ. ಮನೆಯ ಮಾತೃ ಭಾಷೆ ತೆಲುಗು. ಹಾಗಾಗಿ ಅಮ್ಮಾ ತೆಲುಗಿನಲ್ಲಿ ಮಾತನಾಡಿಸಿದರೆ,ಸತ್ಯಾ ಮಾತ್ರಾ ಕನ್ನಡದಲ್ಲೇ ಉತ್ತರಿಸುವ ಮೂಲಕ ಅಪ್ಪಟ ಕನ್ನಡಿಗನಾಗಿರುತ್ತಾರೆ. ದುಡಿಯುವ ಕೈ ಒಂದಾರೆ ತಿನ್ನುವ ಕೈ ಹತ್ತಾರು ಎಂಬಂತೆ ಮನೆಯ ತುಂಬಾ ಮಕ್ಕಳು ತಂದೆಯವರ ದುಡಿಮೆಯಿಂದ ಕುಟುಂಬ ಸಾಕುವುದು ಕಷ್ಟ ಎನಿಸಿದಾಗ, ಅವರ ತಾಯಿಯವರೂ ಸಹಾ ಅಂಚೆ ಕಛೇರಿಯ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ ಕುಟುಂಬದ ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದ ಕಾರಣ, ಮನೆಯ ಜೆಣ್ಣುಮಕ್ಕಳ ಮದುವೆ ಬಾಣಂತನ ಸುಗಮವಾಗಿ ನಡೆಯುವಂತಾದರೆ, ಇನ್ನು ಗಂಡು ಮಕ್ಕಳು ತಕ್ಕ ಮಟ್ಟಿಗೆ ವಿದ್ಯಾಭ್ಯಾಸ ಮಾಡಿ ಕೆಲಸವನ್ನು ಅರಸಿಕೊಂಡು ಬೆಂಗಳೂರು ಮತ್ತು ಮೈಸೂರಿನ ಕಡೆಗೆ ಬರುವಂತಾಗುತ್ತದೆ.

ತಮ್ಮ ತವರೂರಿನಲ್ಲೇ ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಮಾಡಿದ ನಂತರ SSLCಯಲ್ಲಿ ಉತ್ತಮ ಅಂಕಗಳೊಂದಿಗೆ ಮುಗಿಸಿದ ಸತ್ಯ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅದಾಗಲೇ ಬೆಂಗಳೂರಿನ ಮತ್ತೀಕೆರೆಯಲ್ಲಿದ್ದ ಹಿರಿಯಣ್ಣನ ಮನೆಗೆ ಬರುತ್ತಾರೆ, ಸಣ್ಣ ವಯಸ್ಸಿನಿಂದಲೂ ಬಹಳ ಸ್ವಾಭಿಮಾನಿಯಾಗಿದ್ದ ಕಾರಣ, ತನ್ನ ಅಣ್ಣನಿಗೆ ಹೊರೆಯಾಗ ಬಾರದೆಂದು ಮತ್ತೀಕೆರೆ ಯಶವಂತಪುರ ಮುಖ್ಯರಸ್ತೆಯಲ್ಲಿದ್ದ ಬಾಂಬೆ ಡೈಯಿಂಗ್ ಅಂಗಡಿಯಲ್ಲಿ ಸಂಜೆಯ ಹೊತ್ತು ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಮುತ್ತು ಜೋಡಿಸಿದಂತೆ ಅಕ್ಷರಗಳನ್ನು ಬರೆಯುವ ಕಲೆ ಸತ್ಯಾ ಅವರಿಗೆ ದೈವದತ್ತವಾಗಿ ಬಂದಿದ್ದ ಕಾರಣ, ಅಲ್ಲಿನ ಎಲ್ಲಾ ಲೆಖ್ಖಾಚಾರಗಳನ್ನು ಬರೆಯುವ ಕೆಲಸ ಸತ್ಯಾ ಅವರ ಪಾಲಿಗೆ ಬಂದು ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತಾ, ನೋಡ ನೋಡುತ್ತಿದ್ದಂತೆಯೇ, BSc. BEd ಆನಂತರ MSc. ಮುಗಿಸಿ ಮತ್ತೀಕೆರೆಯಲ್ಲಿಯೇ ಇದ್ದ ಅಯ್ಯರ್ ಸ್ಕೂಲ್ (ಮೋದಿ ಸ್ಕೂಲ್)ನಲ್ಲಿ ಶಿಕ್ಷಕರಾಗಿ ಸೇರಿಕೊಂಡು ಅಲ್ಲಿ ಗಣಿತ ಮತ್ತು ಭೌತಶಾಸ್ತ್ರವನ್ನು ಹೇಳಿಕೊಡಲು ಆರಂಭಿಸುತ್ತಾರೆ.
ಸಾಧಾರಣವಾಗಿ ಗಣಿತ ಎನ್ನುವುದು ಮಕ್ಕಳಿಗೆ ಕಬ್ಬಿಣದ ಕಡಲೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವಾದರೆ, ಗಣಿತವನ್ನು ಕಲಿಸುವ ಗುರುಗಳು ಚೆನ್ನಾಗಿದ್ದಲ್ಲಿ ಗಣಿತವೂ ಸಹಾ ಬೆಣ್ಣೆಯಷ್ಟೇ ಮೃದುವಾಗಿ ವಿಧ್ಯಾರ್ಥಿಗಳಿಗೆ ಕಲಿಸ ಬಹುದು ಎಂಬುದನ್ನು ತೋರಿಸಿಕೊಟ್ಟ ಸತ್ಯಾ, ಕೆಲವೇ ದಿನಗಳಲ್ಲಿ ಎಲ್ಲರ ಪ್ರೀತಿಯ ಸತ್ಯಾ ಸರ್ ಆಗುತ್ತಾರೆ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಗಣಿತ ಮತ್ತು ಭೌತಶಾಸ್ತ್ರವನ್ನು ಹೇಳಿಕೊಡುತ್ತಿದ್ದ ವಿಷಯ ಒಬ್ಬರಿಂದ ಮತ್ತೊಬ್ಬರಿಗೆ ತಲುಪಿ ಬೇರೆ ಬೇರೆ ಶಾಲೆಯಲ್ಲಿ ಕಲಿಯುತ್ತಿದ್ದ ಮಕ್ಕಳ ಪೋಷಕರು ಸಹಾ ತಮ್ಮ ಮಕ್ಕಳಿಗೂ ಕಲಿಸಿಕೊಡಲು ದಂಬಾಲು ಬಿದ್ದ ಕಾರಣ, ಅನಿವಾರ್ಯವಾಗಿ ಸಂಜೆ ಮನೆಪಾಠವನ್ನು ಮಾಡುವಂತಾಗಿ ನಂತರದ ದಿನಗಳಲ್ಲಿ ಬೆಳಿಗ್ಗೆ 5 ಗಂಟೆಗೆ ಪಾಠ ಹೇಳಿ ಕೊಡಲು ಆರಂಭವಾದರೆ ರಾತ್ರಿ 10ರವರಗೆ ನಿರಂತವಾಗಿ ಪಾಠ ಮಾಡುವಂತಾಗಿ ಅಂತಿಮವಾಗಿ ಸರ್ಕಾರದ ಕಡೆಯಿಂದ ವರ್ಷದ ಅತ್ಯುತ್ತಮ ಶಿಕ್ಷಕ ಎಂಬ ಪ್ರಶಸ್ತಿಗೂ ಸತ್ಯಾ ಸರ್ ಭಾಜನರಾಗುತ್ತಾರೆ.

1986-87ರ ಸಮಯದಲ್ಲಿ ಬೆಂಗಳೂರಿನ ಆರ್. ಟಿ. ನಗರದಲ್ಲಿರುವ ಆದರ್ಶ ಪಾಲಿಟೆಕ್ನಿಕ್ಕಿನಲ್ಲಿ ಮೊದಲನೇ ವರ್ಷದ ವಿಧ್ಯಾರ್ಥಿಗಳಿಗೆ ಭೌತಶಾಶ್ತ್ರ ಹೇಳಿಕೊಡುವ ಶಿಕ್ಷಕರಾಗಿ ಸೇರಿಕೊಂಡರಾದರೂ, ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದು ನಿರಂತರವಾಗಿ ಪಾಠ ಮಾಡುತ್ತಲೇ ಇದ್ದು, 1989ರಲ್ಲಿ ನಾನು ಆದರ್ಶ ಪಾಲಿಟೆಕ್ನಿಕ್ ಸೇರಿಕೊಂಡಾಗ ಮೊದಲನೇ ದಿನ ಭೌತಶಾಸ್ತ್ರ ಹೇಳಿಕೊಡಲು ಬಂದ ಸಾಧಾರಣ ಎತ್ತರದ ಮತ್ತು ಬಹಳ ಕೃಶಕಾಯಕದ ಶರೀರದ ದಟ್ಟವಾದ ಗುಂಗುರು ಕೂದಲಿನ ವ್ಯಕ್ತಿಯನ್ನು ನೋಡಿ, ಅರೇ ಇವರೇ ಕಾಲೇಜ್ ಹುಡುಗನಂತೆ ಇದ್ದಾರೆ, ಇವರೇನು ಹೇಳಿಕೊಡ್ತಾರೆ! ಎಂದು ಯೋಚಿಸುತ್ತಿರುವಾಗಲೇ, ತಮ್ಮ ಕೈಯ್ಯಲ್ಲಿದ್ದ ಬಣ್ಣ ಬಣ್ನದ ಸೀಮೇಸುಣ್ಣ (ಚಾಕ್ ಪೀಸ್) ನಿಂದ ತಮ್ಮ ಹೆಸರನ್ನು ಬೋರ್ಡಿನ ಮೇಲೆ ಮುದ್ದು ಮುದ್ದಾಗಿ ಬರೆದು, ತಮ್ಮ ವಯಕ್ತಿಕ ಪರಿಚಯ ಮಾಡಿಕೊಂಡು ನಮ್ಮೆಲ್ಲರ ಪರಿಚಯ ಮಾಡಿಕೊಳ್ಳುವ ಮೂಲಕ ನನಗೆ ವಯಕ್ತಿಕವಾಗಿ ಸತ್ಯಾ ಸರ್ ಅವರ ಪರಿಚಯವಾಯಿತು.
ಸಾಧಾರಣವಾಗಿ ಕಾಲೇಜಿನಲ್ಲಿ ಶಿಕ್ಷಕರು ಪ್ರತ್ಯೇಕವಾಗಿ ನೋಟ್ಸ್ ಕೊಡುವುದಿಲ್ಲ. ಅವರು ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿಗಳೇ ನೋಟ್ಸ್ ಮಾಡಿಕೊಳ್ಳುವುದು ಸಹಜ ಪ್ರಕ್ರಿಯೆಯಾದರೆ, ಸತ್ಯಾ ಸರ್ ಅದಕ್ಕೆ ತದ್ವಿರುದ್ಧ. ಪೌಢಶಾಲೆ, ಮತ್ತು ಹೈಸ್ಕೂಲ್ ಮಕ್ಕಳಿಗೆ ಪಾಠ ಮಾಡಿದ ಅನುಭವದಿಂದ ಮೊದಲು ಪಾಠವನ್ನು ಮಾಡಿ ನಂತರ ತಮ್ಮ ಮುದ್ದು ಮುದ್ದಾದ ಬರಹದಿಂದ ವಿವಿಧ ಬಣ್ಣಗಳ ಚಾಕ್ ಪೀಸ್ ಬಳಸಿಕೊಂಡು ಬೋರ್ಡಿನ ಮೇಲೆ ನೋಟ್ಸ್ ಬರೆಯುತ್ತಿದ್ದು ಇನ್ನೂ ಕಣ್ಣಮುಂದೆ ಇದೆ. ಅದೊಮ್ಮೆ ನನ್ನ ಪಕ್ಕದಲ್ಲಿ ಕುಳಿತಿದ್ದ ಸಹಪಾಠಿಯ ಶ್ಯಾಂನ ಕೈ ಬರಹ ಥೇಟ್ ಸತ್ಯಾ ಸರ್ ಅವರನ್ನೇ ಹೋಲುತ್ತಿದ್ದ ಕಾರಣ ಕುತೂಹಲದಿಂದ ಇದೇನೋ ನೀವಿಬ್ಬರೂ ಒಂದೇ ರೀತಿಯಲ್ಲಿ ಬರೆಯುತ್ತೀರೀ? ಎಂದಾಗಲೇ ಸತ್ಯಾ ಸರ್ ಅವರ ಮತ್ತೊಂದು ಮುಖ ಪರಿಚಯವಾಗುತ್ತದೆ. ಅರೇ ನಾನೇನು? ಮೋದಿ ಸ್ಕೂಲಿನಲ್ಲಿ ಓದಿದ್ದ ಬಹುತೇಕರ ಕೈ ಬರಹ ಇದೇ ರೀತಿಯಲ್ಲಿದೆ. ಸತ್ಯಾ ಸರ್ ಎಂದರೆ ಮೋದಿ ಸ್ಕೂಲಿನ ಪ್ರತಿಯೊಬ್ಬ ವಿಧ್ಯಾರ್ಥಿಗಳಿಗೂ ಪಂಚ ಪ್ರಾಣ ಹಾಗಾಗಿ ಬಹುತೇಕರು ಅವರನ್ನೇ ಅನುಕರಣೆ ಮಾಡುತ್ತಾರೆ ಎಂದ. ಹಾಗೇ ಮಾತನ್ನು ಮುಂದುವರೆಸಿ ಸತ್ಯಾ ಸರ್ ಅವರೇ ನನ್ನನ್ನು ಈ ಕಾಲೇಜಿಗೆ ಸೇರಿಸಿದರು ಎಂದಾಗಲೇ ಸತ್ಯಾ ಸರ್ ಅವರ ಬಗ್ಗೆ ವಿಶೇಷವಾದ ಆಸಕ್ತಿ ಮೂಡಿ ಅವರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲು ಆರಂಭಿಸಿದನಾದರೂ ಆಗೆಲ್ಲಾ ಸತ್ಯಾ ಸರ್ ಅವರಿಗೆ ದೂರ್ವಾಸ ಮುನಿಯಂತೆ ಮೂಗಿನ ತುದಿಯಲ್ಲೇ ಕೋಪ ಇದ್ದ ಕಾರಣ ಅವರೊಂದಿಗೆ ಹೆಚ್ಚಿಗೆ ಮಾತನಾಡಲು ಒಂದು ರೀತಿಯ ಭಯವಿತ್ತು.

ನಂತರದ ದಿನಗಳಲ್ಲಿ ಅಗೊಮ್ಮೆ ಈಗೊಮ್ಮೆ ಸತ್ಯಾ ಸರ್ ಎದುರಿಗೆ ಸಿಕ್ಕಾಗ ಪರಸ್ಪರ ಮುಗಳ್ನಗೆಯ ವಿನಿಮಯ ಮಾಡಿಕೊಳ್ಳುತ್ತಿದ್ದೆವಷ್ಟೇ. ಸ್ವಾಮಿ ನಿಷ್ಠೆ ಎನ್ನುವುದಕ್ಕೆ ಮತ್ತೊಂದು ಹೆಸರೇ ಸತ್ಯಾ ಸರ್ ಎಂದರೂ ಅತಿಶಯವಲ್ಲಾ. ಕೊಟ್ಟ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದ ಸತ್ಯಾ ಸರ್ ಕಾಲೇಜಿನ ಆಡಳಿತ ಮಂಡಳಿಗೆ ಬಹಳ ಬೇಗ ಅಪ್ತರಾಗಿದ್ದ ಕಾರಣ, ನಾವು ಫೈನಲ್ ಇಯರ್ ಬರುವಷ್ಟರಲ್ಲಿ ಸತ್ಯಾ ಸರ್, ಕೇವಲ ಭೌತಶಾಸ್ತ್ರವಲ್ಲದೇ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರೂ ಆಗಿದ್ದರು. ಅಂತಿಮ ವರ್ಷದಲ್ಲಿ ಪ್ರಾಜೆಕ್ಟ್ ಮಾಡಲು ನಮಗೆ ಕೊಡುತ್ತಿದ್ದ ಸಮಯ ಸಾಕಾಗದೇ ಹೋದಾಗ, ನಾವು ಗೆಳೆಯರೆಲ್ಲರೂ ಸೇರಿ ಕಂಪ್ಯೂಟರ್ ವಿಭಾಗದಲ್ಲಿ ಅಟೆಂಡರ್ ಆಗಿದ್ದ ಶ್ರೀ ನಾಗರಾಜ್ ಎಲ್ಲರ ಪ್ರೀತಿಯ ನಾಗಾ, ಉರ್ಫ್ ಬೇಸಿಕ್ ನಾಗಾನ ಹಿಂದೆ ದಂಬಾಲು ಬಿದ್ದು ಆತನಿಗೆ ಮಸಾಲೇ ದೋಸೆ, ಮಸಾಲೆ ಪುರಿ, ಪಾನಿ ಪುರಿಯ ಆಸೆಯೊಡ್ಡಿ ಕಾಲೇಜು ಮುಗಿದ ನಂತರ ಯಾರಿಗೂ ತಿಳಿಯದಂತೆ ಒಂದೆರಡು ಗಂಟೆ ಹೆಚ್ಚಿನ ಸಮಯ ಕಂಪ್ಯೂಟರ್ ಲ್ಯಾಬ್ ಬಳಸಿಕೊಳ್ಳುತ್ತಿದ್ದೆವು.
ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ, ಅದು ಲೋಕಕ್ಕೆ ತಿಳಿಯದೇ ಎನ್ನುವಂತೆ, ನಮ್ಮ ಈ ಕುಕೃತ್ಯ ಕೆಲವೇ ದಿನಗಳಲ್ಲಿ ಸತ್ಯಾ ಸರ್ ಅವರ ಕಿವಿಗೆ ಬಿದ್ದು, ನಮಗೇ ಗೊತ್ತಿಲ್ಲದಂತೆ ಕೆಲವು ಬಾರಿ ಸತ್ಯಾ ಸರ್ ಕಂಪ್ಯೂಟರ್ ಲ್ಯಾಬಿಗೆ ಬಂದು ನಾವೇನು ಮಾಡುತ್ತಿದ್ದೇವೆ ಎಂಬುದನ್ನು ರಹಸ್ಯವಾಗಿ ನೋಡಿ, ಹೆಚ್ಚಿನ ಸಮಯವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದದ್ದನ್ನು ಗಮನಿಸಿ ಸುಮ್ಮನಾಗಿದ್ದಲ್ಲದೇ, ಅದೊಮ್ಮೆ ಇದ್ದಕ್ಕಿದ್ದಂತೆಯೇ ಸಂಜೆ ಲ್ಯಾಬಿಗೆ ಬಂದು ಕಾಲೇಜಿನ ಸಮಯ ಮುಗಿದರೂ ಇದೇನು ಮಾಡುತ್ತಿದ್ದೀರಿ? ಎಂದು ಕೇಳಿದಾಗ ನಾವೆಲ್ಲರೂ ತಬ್ಬಿಬ್ಬು. ಅದಾದ ಮೇಲೆ ನಾವೆಲ್ಲರೂ ಸರ್ ತಪ್ಪಾಯ್ತು. ನಿಮಗೆ ತಿಳಿಸದೇ ಪ್ರಾಜೆಕ್ಟ್ ಸಲುವಾಗಿ ಹೆಚ್ಚಿನ ಆವಧಿಗೆ ಲ್ಯಾಬ್ ಬಳಸಿಕೊಳ್ಳುತ್ತಿದ್ದೇವೆ ಎಂದಾಗಾ, ಸರಿ ಸರಿ ಎಲ್ಲರೂ ಈ ಕುರಿತಾಗಿ ಒಂದು ಲೆಟರ್ ಬರೆದುಕೊಡಿ. ನಾನು ಅದನ್ನು ಪ್ರಿನ್ಸಿಪಾಲ್ ಮತ್ತು ಸೆಕ್ರೆಟರಿ ಆವರಿಗೆ ಕೊಟ್ಟು ನಿಮಗೆ ಹೆಚ್ಚಿನ ಸಮಯಕ್ಕೆ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದಾಗಲೇ ನನ್ನ ಮತ್ತು ಸತ್ಯಾ ಸರ್ ಅವರ ಸಂಬಂಧ ಹೆಚ್ಚಿನ ರೀತಿಯಲ್ಲಾಯಿತು.ನಂತರದ ದಿನಗಳಲ್ಲಿ ಕೆಂಪು ಬಣ್ಣದ ಹೀರೋ ಹೊಂಡಾ ಸ್ಪೆಂಡರ್ ತೆಗೆದುಕೊಂಡು ಕಳೆದ 25 ವರ್ಷಗಳಿಂದಲೂ ಒಂದಲ್ಲಾ ಎರಡು ಸ್ಪೆಂಡರ್ ಬೈಕನ್ನು ಖರೀಧಿಸಿ ಸ್ಪೆಂಡರ್ ಬೈಕಿನ ರಾಯಭಾರಿಯಂತಾಗಿದ್ದಾರೆ.
ನಂತರದ ದಿನಗಳಲ್ಲಿ ರಾತ್ರಿ ತಡವಾದಾಗ ಸತ್ಯಾ ಸರ್ ಅವರ ತಮ್ಮ ಹೀರೋ ಹೋಂಡಾ ಸ್ಲೀಕ್ ನಲ್ಲಿ ಮತ್ತೀಕೆರೆ ವರೆಗೂ ಡ್ರಾಪ್ ಮಾಡಿ ಹೋಗುತ್ತಿದ್ದರು. ಹೀರೋ ಹೋಂಡಾ ಸ್ಲೀಕ್ ಹೆಸರಿಗೆ ಅನುಗುಣವಾಗಿ ಹಿಂದಿನ ಸೀಟ್ ಬಹಳ ಎತ್ತರವಾಗಿದ್ದ ಕಾರಣ, ಹಂಪ್ ಬಂದಾಗಲೋ ಇಲ್ಲವೇ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದಾಗ ಸತ್ಯಾ ಸರ್ ಅವರ ಮೇಲೇ ಬೀಳಬೇಕಾಗುತ್ತಿದ್ದರಿಂದ ಆ ಗಾಡಿಯಲ್ಲಿ ಕುಳಿತಾಕ್ಷಣದಿಂದಲೇ ಹಿಂದೆ ಗಟ್ಟಿಯಾಗಿ ಕುಳಿತುಕೊಳ್ಳುತ್ತಿದ್ದದ್ದು ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ನಮ್ಮ ಅಂತಿಮ ವರ್ಷದ ಅಂತಿಮ ಪರೀಕ್ಷೆಯಂದೇ ಸತ್ಯಾ ಸರ್ ಅವರ ಮದುವೆ ಇದ್ದರೂ, ಮದುವೆಯ ಹಿಂದಿನ ದಿನದವರೆಗೂ ಕಾಲೇಜಿಗೆ ಬಂದು ತಮ್ಮ ಕರ್ತವ್ಯ ನಿಷ್ಠೆಯನ್ನು ಎತ್ತಿ ತೋರಿದ್ದರು.

ರೋಗಿ ಬಯಸಿದ್ದು ಹಾಲು ಅನ್ನಾ, ವೈದ್ಯರು ಹೇಳಿದ್ದೂ ಹಾಲೂ ಅನ್ನಾ ಎನ್ನುವಂತೆ ಸತ್ಯಾ ಸರ್ ಅವರ ಮಡದಿಯವರ ತಂದೆ ತಾಯಿ ನಮ್ಮ ತಂದೆಯವರ ಸಹೋದ್ಯೋಗಿಗಳಾದರೆ, ಚೆನ್ನಾಗಿ ಕೊಳಲನ್ನು ನುಡಿಸುತ್ತಿದ್ದ ಸತ್ಯಾ ಸರ್ ಅವರ ಭಾವಮೈದುನ ನಮ್ಮ ತಂದೆಯವರೊಂದಿಗೆ ಅನೇಕ ಸಂಗೀತ ಕಛೇರಿಯಲ್ಲಿ ಭಾಗಿಯಾಗಿದ್ದ ಕಾರಣ, ಕಾಲೇಜು ಮುಗಿದ ನಂತರವೂ ನನ್ನ ಮತ್ತು ಸತ್ಯಾ ಸರ್ ಅವರ ಮಧುರ ಬಾಂಧವ್ಯ ಗುರು ಶಿಷ್ಯರಿಗಂತಲೂ ಒಂದು ಹೆಜ್ಜೆ ಮುಂದುವರೆಯಿತು. ಅದಾದ ನಂತರ ನಾನು ಏನೇ ಮಾಡಬೇಕಾದರೂ ಸತ್ಯಾ ಸರ್ ಅವರಿಗೆ ಹೇಳಿ ಅವರ ಸಲಹೆಗಳನ್ನು ಕೇಳಿ ಮುಂದುವರೆಯುವುದನ್ನು ರೂಢಿಸಿಕೊಂಡೆ. ನನಗೆ ಕಂಪ್ಯೂಟರ್ ತೆಗೆಸಿಕೊಡಿ ಎಂದು ನಮ್ಮ ತಂದೆಯವರನ್ನು ಕೇಳಿದಾಗ ಆರಂಭದಲ್ಲಿ ಒಲ್ಲೆ ಎಂದಾಗ, ಅವರನ್ನು ಸತ್ಯಾ ಸರ್ ಅವರ ಮನೆಗೆ ಕರೆದುಕೊಂಡು ಹೋಗಿ ಸರ್ ನೀವೇ ಹೇಳಿ ನನಗೆ ಕಂಪ್ಯೂಟರ್ ಎಷ್ಟು ಆವಶ್ಯಕ ಎಂದು ಹೇಳಿದಾಗ, ಹೌದು ಹೌದು ಶ್ರೀಕಂಠನಿಗೆ ಸದ್ಯಕ್ಕೆ ಒಂದು ಕಂಪ್ಯೂಟರ್ ಅವಶ್ಯಕತೆ ಇದೆ ಎಂದಾಗ, ಶಂಖುವಿನಿಂದ ಬಂದರೆ ಮಾತ್ರಾ ತೀರ್ಥ ಎನ್ನುವಂತೆ ತಂದೆಯವರು ಸದ್ದಿಲ್ಲದೇ Computer ತೆಗೆಸಿಕೊಟ್ಟಿದ್ದರು.
There is a woman behind every successful man ಎನ್ನುವಂತೆ ಮದುವೆ ಆದ ನಂತರ ದೂರ್ವಾಸ ಮುನಿಯಂತಿದ್ದ ಸತ್ಯಾ ಸರ್ ಶಾಂತ ಮೂರ್ತಿಯಾಗಿ ಇವರೇನಾ ನಾವು ನೋಡಿದ ಸತ್ಯಾ ಸರ್ ಎಂಚು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದರು. ಸರ್ ಹೊಸದಾಗಿ ಮದುವೆ ಆಗಿದ್ದರೂ ನಾನು ಮತ್ತೆ ನಮ್ಮ ಸ್ನೇಹಿತರು ಹೊತ್ತಲ್ಲದ ಹೊತ್ತಿಗೆ ಅವರ ಮನೆಗೆ ಹೋದರೂ ಒಮ್ಮೆಯೂ ಬೇಸರಿಕೊಳ್ಳದೇ, ನಮ್ಮೆಲ್ಲರನ್ನೂ ಅಚ್ಚುಕಟ್ಟಾಗಿ ಮಾತನಾಡಿಸುತ್ತಿದ್ದರು. ಮತ್ತೊಂದು ಕುತೂಹಲಕಾರಿ ಸಂಗತಿ ಎಂದರೆ, ಹೀಗೆ ನಾವೆಲ್ಲರೂ ಸತ್ಯಾ ಸರ್ ಎಂದೇ ಅವರನ್ನು ಸಂಬೋಧಿಸುತ್ತಿದ್ದದ್ದನ್ನು ಕಂಡ ಅವರ ಮಡದಿಯೂ ಸಹಾ ಅವರನ್ನು ರೀ ಎನ್ನುವುದರ ಬದಲು ಸತ್ಯಾ ಸರ್ ಎಂದೇ ಕರೆಯಲು ರೂಢಿ ಮಾಡಿಕೊಂಡಿದ್ದು ಗಮನಾರ್ಹ. ಸತ್ಯಾ ಸರ್ ಅವರ ಮಡದಿ ಬಾಣಂತನಕ್ಕೆಂದು ತವರು ಮನೆಗೆ ಹೋದಾಗ, ಪೊಂಡಾಟಿ ಇಲ್ಲೆ ಅನ್ನಾ ಎಂಜಾಯ್ ಎಂದು ತಮಿಳು ನಟ ಕನಕ ರಾಜ್ ಹೇಳುವಂತೆ ನಾವೆಲ್ಲರೂ ಸತ್ಯಾ ಸರ್ ಅವರ ಮನೆಗೆ ಹೋಗಿ, ಸತ್ಯಾ ಸರ್ ಮಾಡುತ್ತಿದ್ದ ಪಲಾವ್, ಬಿಸಿಬೇಳೇ ಬಾತ್, ವಾಂಗೀ ಬಾತ್ ಮೂಲಕ ಸತ್ಯಾ ಸರ್ ಎಂಬ ನಳ ಮಹರಾಜನ ಕೈ ರುಚಿಯನ್ನೂ ನೋಡುವಂತಾಯಿತು. ನಮ್ಮಿಬ್ಬರ ಮಧ್ಯೆ ಮತ್ತೊಂದು ಸಾಮ್ಯತೆ ಎಂದರೆ ಯಾವುದೇ ರೀತಿಯ ಬಾತ್ ಗಳ ಜೊತೆ ಮೊಸರು ಬಜ್ಜಿ ಇರಲೇ ಬೇಕು. ಹಾಗಾಗಿ ಸತ್ಯಾ ಸರ್ ಅಡುಗೆ ಮಾಡುತ್ತಿದ್ದರೆ, ನಾನು ಈರುಳ್ಳೀ, ಸೌತೇಕಾಯಿ, ಹಸೀ ಮೆಣಸಿನಕಾಯಿ, ಟೊಮೇಟೋಗಳನ್ನು ಸಣ್ಣದಾಗಿ ಹೆಚ್ಚಿ ಮೊಸರು ಬಜ್ಜಿ ಮಾಡುತ್ತಿದ್ದೆ. ಅದೆಷ್ಟೋ ಬಾರಿ ತರಕಾರಿಯನ್ನು ಸಣ್ಣದಾಗಿ ಮತ್ತು ವೇಗವಾಗಿ ಹೆಚ್ಚುವುದರಲ್ಲಿ ನನ್ನ ಮತ್ತು ಸರ್ ಮಧ್ಯೆ ಆರೋಗ್ಯಕರ ಪೌಪೋಟಿ ಏರ್ಪಟ್ಟಿದ್ದೂ ಉಂಟು.
ಸತ್ಯಾ ಸರ್ ಅವರಿಗೆ ಮಗಳಾದ ಮೇಲಂತೂ ಮುದ್ದಾದ ಪುಟ್ಟಿಯನ್ನು ಮುದ್ದಾಡುವ ಸಲುವಾಗಿ ಅವರ ಮನೆಗೆ ಹೋಗಿ ಬರುವುದು ಹೆಚ್ಚಾದ ನಂತರ ಅದೊಮ್ಮೆ ಶ್ರೀಕಂಠಾ, ನಿಮ್ಮ ಮನೆಯ ಬಳಿ ಯಾವುದಾದರೂ ಸೈಟ್ ಇದ್ದಲ್ಲಿ ಹೇಳು ಎಂದಾಗ, ಕೂಡಲೇ ಅದನ್ನು ನಮ್ಮ ತಂದೆಯವರಿಗೆ ತಿಳಿಸಿ ನಮ್ಮ ಮನೆಯಿಂದ ಎರಡು ಮೂರು ರಸ್ತೆಗಳ ನಂತರ ಸೈಟೊಂದನ್ನು ಕೊಡಿಸಿ ಮನೆ ಕಟ್ಟಲು ಕಾಂಟ್ರಾಕ್ಟರ್ ಅವರನ್ನು ಪರಿಚಯಿಸಿ ನೋಡ ನೋಡುತ್ತಿದ್ದಂತೆಯೇ ಅವರು ಸುಂದರವಾದ ಮನೆ ಕಟ್ಟಿ ಅದ್ಭುತವಾಗಿ ಗೃಹಪ್ರವೇಶವೂ ಮುಗಿದು ಕೂಗಳತೇ ದೂರದಲ್ಲಿಯೇ ಸತ್ಯಾ ಸರ್ ಅವರು ವಾಸಕ್ಕೆ ಬಂದರು. ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಮತ್ತೀಕೆರೆಯಲ್ಲಿದ್ದಾಗ ಅಷ್ಟೋಂದು ಬಾರಿ ಅವರ ಮನೆಗೆ ಹೋಗುತ್ತಿದ್ದ ನಾನು, ನಂತರ ನಮ್ಮ ಮನೆಯ ಬಳಿ ಬಂದಾಗ ಕೆಲಸದ ಒತ್ತಡವೋ ಇಲ್ಲವೇ ಬೇರೇ ಕಾರಣಗಳಿಂದ ಅವರ ಮನೆಗೆ ಮುಂಚಿನಂತೆ ಹೋಗದೇ ಇದ್ದರೂ, ಅಗ್ಗಾಗ್ಗೇ ಹೋಗಿ ಬಂದು ಮಾಡುವ ಮೂಲಕ ನಮ್ಮಿಬ್ಬರ ಗೆಳೆತನ ಮತ್ತಷ್ಟು ಗಟ್ಟಿಯಾಯಿತು.
ಅವರು ಮನೆ ಕಟ್ಟುತ್ತಿದ್ದ ಸಂಧರ್ಭದಲ್ಲಿ ನಮ್ಮ ಮನೆಗೆ ಬಂದಿದ್ದಾಗ Black & White TVಯಲ್ಲಿ ಕ್ರಿಕೆಟ್ ನೋಡುತ್ತಿದ್ದದ್ದನ್ನು ಗಮನಿಸಿ ಇದೇನು ಇನ್ನೂ ಹಳೆಯ ಟಿವಿಯನ್ನೇ ನೋಡುತ್ತಿದ್ದೀರಿ ಎಂದಾಗಾ, ಹಾಗೇ ಹುಳ್ಳನೇ ನಗೆ ನಕ್ಕಾಗ, ನಾಳೆ ಸಂಜೆ ಮನೆಗೆ ಬಂದು ಹೋಗು ಎಂದಿದ್ದರು. ಅದೇ ರೀತಿ ಮಾರನೇ ದಿನ ಅವರ ಮನೆಗೆ ಹೋಗಿ ಪುಟ್ಟಿಯನ್ನು ಮುದ್ದಾಡುತ್ತಿದ್ದಾಗ, ಸತ್ಯಾ ಸರ್ ಅವರ ಮಡದಿ ಕವರ್ ಒಂದನ್ನು ಕೈಗಿತ್ತು ಸತ್ಯಾ ಸರಿ ನಿನಗೆ ಕೊಡಲು ಹೇಳಿದ್ದಾರೆ ಎಂದರು. ಬಹಳ ಕುತೂಹಲದಿಂದ ನೋಡಿದಾಗ 100ರ ಗರಿ ಗರಿನೋಟಿದ್ದ 10ಸಾವಿರ ಕಂಡು ಒಂದು ನಿಮಿಷ ತಬ್ಬಿಬ್ಬಾಗಿ, ಇದೇಕೆ ಕೊಡುತ್ತಿದ್ದೀರಿ ನನಗೆ ಬೇಡಾ! ಎಂದಾಗ, ಇದರಲ್ಲಿ ಕಲರ್ ಟಿವಿ ತರಬೇಕೆಂತೆ ಎಂದಾಗ ನನಗೆ ಮಾತೇ ಹೊರಡಾಯಿತು. ಒಲ್ಲದ ಮನಸ್ಸಿನಿಂದಲೇ ಹಣವನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಅಪ್ಪಾ ಅಮ್ಮನಿಗೆ ತಿಳಿಸಿ, ನಂತರ ಅಪ್ಪನ ಬಳಿ 5 ಸಾವಿರಗಳನ್ನು ತೆಗೆದುಕೊಂಡು ನನ್ನ ಕೈಯಿಂದ 6 ಸಾವಿರ ಹಾಕಿ ಒಟ್ಟು 21 ಸಾವಿರಕ್ಕೆ ಅಂದಿನ ಕಾಲದಲ್ಲಿ ಅತ್ಯಂತ ಪ್ರತಿಷ್ಟಿತವಾಗಿದ್ದ ವಿಡಿಯೋಕಾನ್ ಬಜೂಕಾ ಟಿವಿಯನ್ನು ತಂದು ಅದನ್ನು ಸತ್ಯಾ ಸರ್ ಅವರಿಗೆ ತೋರಿಸಿದಾಗ ಬಹಳ ಸಂತೋಷ ಪಟ್ಟಿದ್ದರು. ನಂತರದ ದಿನಗಳಲ್ಲಿ ಸತ್ಯಾ ಸರ್ ಅವರು ಕೊಟ್ಟಿದ್ದ ಹಣವನ್ನು ಹಿಂದಿರುಗಿಸಿದನಾದರೂ ಕೇಳದೇ ಇದ್ದರೂ, ಸಮಯಕ್ಕೆ ಸರಿಯಾಗಿ ಸಹಾಯ ಮಾಡಿದ್ದನ್ನು ಮರೆಯಲಾಗದು.
ನಂತರದ ದಿನಗಳಲ್ಲಿ ನನಗೆ ಮದುವೆಯಾಗಿ ನನ್ನ ಮಗಳ ಜನನವಾಗಿ ನನ್ನ ಮಗಳನ್ನು ಸತ್ಯಾ ಸರ್ ಮಗಳು ಮುದ್ದು ಮಾಡುತ್ತಿದ್ದದ್ದು ವಿಶೇಷವಾಗಿತ್ತು. ಅದೊಮ್ಮೆ ಅವರ ಮನೆಗೆ ಹೋಗಿ ಲೋಕಾಭಿರಾಮವಾಗಿ ಹರಟುತ್ತಿದ್ದಾಗ, ಶ್ರೀಕಂಠಾ, ನಾನು ಮ್ಯಾಟಿಜ್ ಕಾರ್ ಬುಕ್ ಮಾಡಿದ್ದೇನೆ ಎಂದಾಗ ನಾನು ಸಂತೋಷ ಪಡುತ್ತಿರುವಾಗಲೇ, ಹೇಗೂ ನಿಮ್ಮದು ದೊಡ್ಡ ಸಂಸಾರ, ನೀನೂ ಒಂದು ಕಾರ್ ತೆಗೆದುಕೋ ಎಂದಾಗ, ಸರ್ ನನಗೇಕೆ ಕಾರ್ ಎಂದಾಗ, ಇಲ್ಲಾ ನೀರು ಕಾರ್ ಖರೀಧಿಸಲೇ ಬೇಕು ಎಂದು ಆಗ್ರಹ ಮಾಡಿದಾಗ ಅವರ ಒತ್ತಾಯಕ್ಕೆ ಮಣಿದು ಆ ವಿಷಯವನ್ನು ಅಪ್ಪಾ ಮತ್ತು ನಮ್ಮ ಮಾವನವರಿಗೆ ತಿಳಿಸಿದಾಗ, ಕೂಡಲೇ ಮಾವನವರಿಗೆ ಪರಿಚಯವಿದ್ದ ಬ್ಯಾಂಕ್ ಮ್ಯಾನೇಜರ್ ಮೂಲಕ ಸಾಲವನ್ನೂ ಮಂಜೂರು ಮಾಡಿಸಿಕೊಂಡು ಒಂದು ವಾರದಲ್ಲೇ ಮಾರುತಿ ಆಮ್ನಿ ಕಾರ್ ಮನೆಯ ಮುಂದೆ ನಿಂತಾಗ, ನಮ್ಮೆಲ್ಲರಿಗಿಂತಲೂ ಹೆಚ್ಚಾಗಿ ಸತ್ಯಾ ಸರ್ ಸಂಭ್ರಮ ಪಟ್ಟಿದ್ದರು.
ಅದಾದ ಕೆಲವು ತಿಂಗಳುಗಳ ನಂತರ ಮಡದಿ ಮತ್ತು ಮಗಳೊಂದಿಗೆ ಅವರ ಮನೆಗೆ ಹೋಗಿದ್ದಾಗ, ಇದ್ದಕ್ಕಿಂದ್ದಂತೆಯೇ ಸತ್ಯಾ ಸರ್, ಶ್ರೀಕಂಠ ನೀನೇಕೆ ಒಂದು ಸೈಟ್ ಕೊಳ್ಳಬಾರದು ಎಂದರು. ಅಯ್ಯೋ ಬಿಡಿ ಸಾರ್, ಹೇಗೂ ಅಪ್ಪಾ ಕಟ್ಟಿಸಿದ ಮನೆ ಇದೆ. ನಮಗೇಕೆ ಇನ್ನೊಂದು ಮನೆ? ಎಂದೆ. ಅದಕ್ಕವರು ಆ ಮನೆಯಲ್ಲಿ ಮೂರು ಪಾಲು ಇದೆ ಎನ್ನುವುದನ್ನು ಮರೆಯಬೇಡ. ಹಾಗಾಗಿ ಇನ್ನೂ ಚಿಕ್ಕ ವಯಸ್ಸು, ಒಂದು ಒಳ್ಳೆಯ ಬಡಾವಣೆಯಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿಸಿ ಬಿಡು ಎಂಬ ಹುಳವನ್ನು ನನ್ನ ತಲೆಗೆ ಬಿಟ್ಟರು. ನನ್ನ ಜೊತೆಯಲ್ಲಿಯೇ ಇದ್ದ ಮಡದಿಯೂ ಸಹಾ ರೀ ಸತ್ಯಾ ಸರ್ ಹೇಳಿದ್ದು ಸರಿಯಾಗಿದೆ ಅಲ್ವಾ! ಎಂದಾಗ ಸರಿ ನೋಡೋಣ ಎಂದಿದ್ದೆ.
ಸ್ವಲ ದಿನಗಳ ನಂತರ ಸತ್ಯಾ ಸರ್ ಶ್ರೀಕಂಠ, ವಿದ್ಯಾರಣ್ಯಪುರದಲ್ಲಿ ದೊಡ್ಡದಾದ ಸೈಟ್ ನೋಡಿದ್ದೇನೆ. ಸದ್ಯಕ್ಕೆ ನನ್ನ ಬಳಿ ಅಷ್ಟೊಂದು ದುಡ್ಡಿಲ್ಲಾ. ಇಬ್ಬರೂ ಸೇರಿಕೊಂಡು ಅರ್ಧರ್ಧ ತೆಗೆದುಕೊಳ್ಳೋಣವೇ ಎಂದಾಗ, ಸರ್ ನಮ್ಮಿಬ್ಬರ ಸ್ನೇಹ ಚೆನ್ನಾಗಿದೆ. ಆದರೆ ಮುಂದೆ ನಾವಿಬ್ಬರೂ ಅಕ್ಕ ಪಕ್ಕದವರಾದಾಗ ಎರಡು ಜಡೆಗಳ ನಡುವೇ ಇದೇ ಪ್ರೀತಿ ವಿಶ್ವಾಸ ಮತ್ತು ಸ್ನೇಹವನ್ನು ನಿರೀಕ್ಷಿಸಲು ಆಗದು ಹಾಗಾಗಿ ಪಕ್ಕ ಪಕ್ಕದಲ್ಲಿ ನಾವಿಬ್ಬರೂ ಇರುವುದು ಬೇಡಾ ಎಂದು ವಿನಮ್ರತೆಯಿಂದ ಹೇಳಿದ್ದಕ್ಕೆ ಸಂತೋಷದಿಂದ ಒಪ್ಪಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಸತ್ಯಾ ಸರ್ ಅವರ ಆಣತಿಯಂತೆಯೇ ನಾವಿಬ್ಬರೂ ಒಟ್ಟಿಗೆ ವಿದ್ಯಾರಣ್ಯಪುರದಲ್ಲಿ ಸೈಟ್ ತೆಗೆದುಕೊಂಡು ಮನೆಯನ್ನೂ ಕಟ್ಟಿ ಮುಗಿಸಿದ ಕೆಲವೇ ದಿನಗಳಲ್ಲಿ ನನಗೆ ಮಗ ಹುಟ್ಟಿದರೆ, ಅದಾದ ಕೆಲವೇ ತಿಂಗಳುಗಳ ಅಂತರದಲ್ಲಿ ಸತ್ಯಾ ಸರ್ ಅವರಿಗೂ ಬಹಳ ವರ್ಷಗಳ ಅಂತರದಲ್ಲಿ ಮಗ ಜನಿಸಿದ್ದದ್ದೂ ಕಾಕತಾಳೀಯವೇ ಆಗಿತ್ತು. ಆವರ ಮಗನ ನಾಮಕರಣಕ್ಕೆ ಹೋಗಿದ್ದಾಗ, ಸತ್ಯಾ ಸರ್ ಅವರ ಅಣ್ಣ, ಏನ್ರೋ ನಿಮ್ಮ ಗುರು ಶಿಷ್ಯರ ಸಂಬಂಧ! ಒಟ್ಟಿಗೆ ಕಾರ್ ತಗೋತೀರೀ, ಒಟ್ಟಿಗೆ ಮನೆ ಕಟ್ಟುತ್ತೀರೀ, ಒಟ್ಟಿಗೆ ಮಕ್ಕಳನ್ನೂ ಮಾಡಿಕೊಳ್ತೀರೀ! ಎಂದು ಹಾಸ್ಯ ಮಾಡಿದಾಗ ಎಲ್ಲರೂ ಗೋಳ್ ಎಂದು ನಕ್ಕರೆ ನಾವಿಬ್ಬರೂ ಮಾತ್ರಾ ಒಬ್ಬರ ಮುಖ ಮತ್ತೊಬ್ಬರು ನೋಡಿಕೊಳ್ಳುತ್ತಾ ನಕ್ಕು ಸುಮ್ಮನಾಗಿದ್ದೆವು.
ಸತ್ಯಾ ಸರ್ ಮತ್ತು ನನ್ನ ಗೆಳೆತನ ಸುಮಾರು 35 ವರ್ಷಗಳಾದರೂ ಇಂದಿಗೂ ನಮ್ಮಿಬ್ಬರ ನಡುವಿನ ಸ್ನೇಹ ನೆನ್ನೆ ಮೊನ್ನೆಯಷ್ಟೇ ಹಚ್ಚ ಹಸಿರಿನಂತಿದೆ. ಇಂದಿಗೂ ಸಹಾ ನನಗೆ ಯಾವುದಾದರೂ ಸಲಹೆ ಬೇಕಿದ್ದಲ್ಲಿ ಅಥಾವ ನನ್ನ ಮಕ್ಕಳಿಗೆ ತಿಳಿ ಹೇಳಬೇಕು ಎನಿಸಿದಾಗ ಎಡತಾಕುವುದೇ ಸತ್ಯಾ ಸರ್ ಅವರನ್ನು. ಅದೇ ರೀತಿಯಲ್ಲಿ ಸತ್ಯಾ ಸರ್ ಆವರಿಗೆ ಬೇಸರವಾದಾಗ, ಇಲ್ಲವೇ ಕೆಲಸದ ಸಂಬಂಧ ಪಟ್ಟ ಯಾವುದಾದರು ಹೊಸ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಬೇಕೆನಿಸಿದಾಗ ಕೂಡಲೇ ನನಗೆ ಕರೆ ಮಾಡುತ್ತಾರೆ ಇಲ್ಲವೇ ಒಂದು ಹೆಜ್ಜೆ ಮನೆಗೆ ಬಂದು ಹೋಗುತ್ತಾರೆ. ಹೀಗೆ ಹೇಳುತ್ತಾ ಹೋದಲ್ಲಿ ಇನ್ನೂ ನೂರಾರು ವಿಷಯಗಳಿವೆಯಾದರೂ, ಗುರುವಿನ ಗುಲಾಮನಾಗದ ತನಕ ದೊರೆಯದಣ್ಣಾ ಮುಕುತಿ ಎಂದು ಪುರಂದರ ದಾಸರು ಹೇಳಿರುವಂತೆ, ಈ ಆಷಾಢ ಪೌರ್ಣಿಮೆಯ ಗುರುಪೂಜೆಯಂದು ನನ್ನ ಮೆಚ್ಚಿನ ಗುರುಗಳು, ಮಾರ್ಗದರ್ಶಕರು ಮತ್ತು ಹಿತೈಷಿಗಳಾದ ಶ್ರೀ ಎಂ. ಎನ್, ಸತ್ಯನಾರಾಯಣ ಅರ್ಥಾತ್ ನಮ್ಮೆಲ್ಲರ ಪ್ರೀತಿಯ ಸತ್ಯಾ ಸರ್ ಅವರಿಗೆ ಈ ಮೂಲಕ ಸಾಷ್ಟಾಂಗ ಪ್ರಣಾಮಗಳನ್ನು ಮಾಡುತ್ತಾ, ನನ್ನ ಬಾಳಿನಲ್ಲಿ ಸತ್ಯಾ ಸರ್ ಅವರಂತಹ ಗುರುಗಳು ಸಿಕ್ಕಂತೆ ಈ ಲೇಖನವನ್ನು ಓದುತ್ತಿರುವ ಎಲ್ಲರಿಗೂ ಒಳ್ಳೆಯ ಗುರುಗಳು/ಮಾರ್ಗದರ್ಶಕರು ಸಿಗಲಿ ಎಂದು ಹಾರೈಸೋಣ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ