ಶ್ರಾವಣ ಕಳೆದು ಭಾದ್ರಪದ ಮಾಸ ಆರಂಭವಾಗುತ್ತಿದ್ದಂತೆಯೇ ಎಲ್ಲರ ಮನ ಮತ್ತು ಮನೆಗಳಲ್ಲಿ ಗೌರಿ ಮತ್ತು ಗಣೇಶನ ಹಬ್ಬದ ಸಂಭ್ರಮ. ಹಬ್ಬಕ್ಕೆ ಬೇಕಾದ ಹೊಸ ಬಟ್ಟೆಗಳ ಜೊತೆ ಹೂವು ಹಣ್ಣು ಮತ್ತು ಪೂಜಾಸಾಮಗ್ರಿಗಳನ್ನು ಅಣಿ ಮಾಡಿಕೊಂಡು ಶ್ರದ್ಧಾ ಭಕ್ತಿಯಿಂದ ಗೌರಿ ಮತ್ತು ಗಣೇಶನ ಪೂಜೆ ಮಾಡಿ ಮಧ್ಯಾಹ್ನ ಊಟ ಮುಗಿಯುತ್ತಿದ್ದಂತೆಯೇ, ಎಲ್ಲರ ಮನೆಗಳ ಗಣೇಶನನ್ನು ನೋಡುವ ಸಂಭ್ರಮ. ಬಾಲ್ಯದಲ್ಲಿ ಯಾರು ಎಷ್ಟು ಹೆಚ್ಚು ಗಣೇಶನನ್ನು ನೋಡುತ್ತಾರೋ ಅವರೇ ಹೀರೋ. ಹಾಗಾಗಿ ಕನಿಷ್ಟ ಪಕ್ಷ 21, ಇನ್ನೂ ಹೆಚ್ಚೆಂದರೆ 51, ಅದಕ್ಕಿಂತಲೂ ಹೆಚ್ಚೆಂದರೆ 101 ಅಥವಾ 108 ಗಣೇಶನನ್ನು ನೋಡಿದರೆಂದರೆ ಅಂತಹವರಿಗೆ ಎವರೆಸ್ಟ್ ಏರಿದ್ದಕ್ಕಿಂತಲೂ ಹೆಚ್ಚಿನ ಕೀರ್ತಿ ಲಭಿಸುತ್ತಿತ್ತು.
ಅಂದೆಲ್ಲಾ ನಮಗೆ ಅಪರಿಚಿತರ ಮನೆಗಳಿಗೆ ಹೋಗಲು ಯಾವುದೇ ರೀತಿಯ ಭಯ ಅಥವಾ ಅಳುಕು ಇರುತ್ತಿರಲಿಲ್ಲ ಮತ್ತು ಹಾಗೆಯೇ ಅಪರಿಚಿತ ಹುಡುಗರು ಗಣೇಶನನ್ನು ನೋಡಲು ಮನೆಗೆ ಬರುತ್ತಾರೆ ಎಂದರೆ ಆ ಮನೆಯವರೂ ಭಯಪಡುವುದಾಗಲೀ, ಬೇಸರಿಸಿ ಕೊಳ್ಳುವುದಾಗಲೀ ಇರತ್ತಲೇ ಇರಲಿಲ್ಲ. ಕೈಯ್ಯಲ್ಲಿ ಮಂತ್ರಾಕ್ಷತೆಯನ್ನು ಹಿಡಿದ ಪುಟ್ಟ ವಯಸ್ಸಿನ ಹುಡುಗ ಹುಡುಗಿಯರು ರೀ.. ಗಣೇಶಾ ಕೂರಿಸಿದ್ದೀರಾ (ಕುಂಡ್ರಿಸಿದ್ದೀರಾ, ಮಡಗಿದ್ದೀರಾ) ಎಂದು ಹೊರಗಿನಿಂದ ಕೂಗುತ್ತಿದ್ದಂತೆಯೇ, ಮನೆಯವರೆಲ್ಲಫು ಎಲ್ಲರೂ ಸಂತೋಷದಿಂದ ಹೂಂ.. ಬನ್ನಿ ಬನ್ನೀ ಎಂದು ಸ್ವಾಗತಿಸುತ್ತಿದ್ದರು. ಬೆನಕ ಬೆನಕ ಏಕದಂತ ಪಚ್ಚೆ ಕಲ್ಲು ಪಾಣಿ ಮೆಟ್ಲು ಮುತ್ತಿನುಂಡೆ ಹೊನ್ನಗಂಟೆ ಒಪ್ಪುವಂತ ವಿಘ್ನೇಶ್ವರನಿಗೆ 21 ನಮಸ್ಕಾರಗಳು ಎಂಬ ಶ್ಲೋಕವನ್ನು ಹೇಳಿ ಎಲ್ಲರೂ ಒಟ್ಟಿಗೆ ಏರು ಧನಿಯಲ್ಲಿ ವಿದ್ಯಾಗಣಪತೀ ಕೀ.. ಜೈ ಎಂದು ಕೂಗಿ ಮಂತ್ರಾಕ್ಷತೆಯನ್ನು ಗಣೇಶನ ಮೇಲೆ ಹಾಕಿ ನಮಸ್ಕಾರ ಮಾಡುತ್ತಿದ್ದಂತೆಯೇ, ಬಹುತೇಕರ ಮನೆಗಳಲ್ಲಿ ದೇವರ ನೈವೇದ್ಯಕ್ಕೆ ಮಾಡಿದ ತಿಂಡಿಗಳನ್ನು ಕೊಡುತ್ತಿದ್ದರು. ಹಾಗೆ ಬಾಯಿಗೆ ಹಾಕಿಕೊಂಡರೆ ಎಂಜಿಲು ಆಗುತ್ತದೆ ಎಂದು ಜೊತೆಯಲ್ಲಿ ತಂದಿರುತ್ತಿದ್ದ ಡಬ್ಬಾ ಎಲ್ಲವೇ ಚೀಲದಲ್ಲಿ ಹಾಕಿಕೊಳ್ಳುವಾಗ, ಎಷ್ಟು ಮನೆ ಗಣಪತಿ ನೋಡಿದ್ರೋ ಎಂದು ಆ ಮನೆಯವರು ಕೇಳಿದಾಗ, ನೋಡಿದ ಗಣೇಶನ ಸಂಖ್ಯೆಯನ್ನು ಹೇಳುತ್ತಾ ಮುಂದಿನ ಮನೆಯತ್ತ ಧಾವಿಸುತ್ತಿದ್ದೆವು. ಇನ್ನು ಪರಿಚಯಸ್ಥರ ಮನೆಗಳಿಗೆ ಹೋಗುತ್ತಿದ್ದಂತೆಯೇ ಏ, ಶ್ಲೋಕ ಹೇಳ್ರೋ ಇಲ್ಲವೇ ಹಾಡು ಹೇಳ್ರೋ ಎಂದು ನಮ್ಮಿಂದ ಹಾಡು ಮತ್ತು ಶ್ಲೋಕಗಳನ್ನು ಹೇಳಿಸಿ ಸಂಭ್ರಮಿಸುತ್ತಿದ್ದರು.
ಮೊನ್ನೆ ಗಣೇಶ ಹಬ್ಬದ ದಿನ ಬಾಲ್ಯದ ದಿನಗಳೆಲ್ಲವೂ ನೆನಪಾಗಿ ಹಿಂದಿನಂತೆ ಬೇರೆಯವರ ಮನೆಗೆ ಹೋದರೆ ಹೇಗೆ ತಿಳಿದುಕೊಳ್ಳುತ್ತಾರೋ ಎಂದು ಭಾವಿಸಿ, ಸೀದಾ ನನ್ನ ತಂಗಿಯ ಮನೆಗೆ ಹೋಗಿ ಶ್ರೀ ವಿದ್ಯಾ ಗಣಪತೀ ಕೀ ಜೈ ಎಂದು ಜೋರಾಗಿ ಹೇಳುತ್ತಾ ಆಂಟೀ.. ಅಂಕಲ್ ಗಣೇಶ ಕುಂಡ್ರಿಸಿದ್ದೀರಾ ಎಂದು ಕೇಳುತ್ತಿದ್ದಂತೆಯೇ ಮನೆಯೊಳಗೆ ಹಬ್ಬದ ಊಟ ಮಾಡಿ ಭುಕ್ತಾಯಾದದಿಂದ ವಿರಮಿಸಿಕೊಳ್ಳುತ್ತಿದ್ದ ನಮ್ಮ ಭಾವನವರು, ಅರೇ, ಇಂದಿನ ಸಮಯದಲ್ಲೀ ಅದರಲ್ಲೂ ಈ ಹೊತ್ತಿನಲ್ಲಿ ಗಣೇಶನನ್ನು ನೋಡಲು ಯಾವ ಮಕ್ಕಳು ಬಂದರೋ ಎನ್ನುತ್ತಾ ನಿದ್ದೆಯ ಮಂಪರಿನಲ್ಲಿಯೇ ಎದ್ದು ಬಂದು ಬಾಗಿಲನ್ನು ತೆಗೆದು ನಮ್ಮೆಲ್ಲರನ್ನೂ ನೋಡಿ ಸಂತೋಷ ಪಟ್ಟು, ಓ ನೀವಾ!! ಬನ್ನಿ ಬನ್ನಿ ಎಂದು ಮನೆಯೊಳಗೆ ಕರೆದು ನಾವೆಲ್ಲರೂ ಒಟ್ಟಿಗೆ ಗಣೇಶನಿಗೆ ನಮಿಸಿ, ತಂಗಿಗೆ ಮೊರದ ಬಾಗಿಣ ನೀಡೀ ಹಾಗೇ ಲೋಕಾಭಿರಾಮವಾಗಿ ಹರಟುವಷ್ಟರಲ್ಲಿಯೇ, ಗಣೇಶನ ನೈವೇದ್ಯಕ್ಕೆ ಮಾಡಿದ್ದ ಕಡಲೇ ಕಾಳು ಹುಸ್ಲಿ ಮತ್ತು ಕಡುಬನ್ನು ಕೈಗಿತ್ತು, ನಾವು ಚಿಕ್ಕವರಿದ್ದಾಗ ನಾನೇ ಪಿ.ಬಿ. ಶ್ರೀನಿವಾಸ್ ನನ್ನ ತಂಗಿಯರೇ ಬಿ.ಕೆ. ಸುಮಿತ್ರಾ ಎನ್ನುವಂತೆ ಭಾದ್ರಪದ ಶುಕ್ಲದಾ ಚೌತಿಯಂದೂ, ಚಂದಿರನ ನೋಡಿದರೇ, ಅಪವಾದ ತಪ್ಪದು ಎಂಬ ಹಾಡನ್ನು ಹೇಳುತ್ತಿದ್ದೆಲ್ಲವನ್ನೂ ನೆನಪಿಸಿಕೊಂಡು ಈಗ ಮೊಬೈಲ್ ನಲ್ಲಿ ಅದೇ ಶಮಂತಕೋಪಾಖ್ಯಾನದ ಹಾಡನ್ನು ಕೇಳಿ ನಾವು ಹಿಂದೆ ಗಣೇಶನನ್ನು ನೋಡಲು ಹೋಗುತ್ತಿದ್ದ ಸಡಗರ ಸಂಭ್ರಮದ ಗತ ವೈಭವ ಈಗಿಲ್ಲವಲ್ಲಾ ಎಂದು ಮಮ್ಮಲ ಮರುಗಿದ್ದಂತೂ ಸತ್ಯ.
ಇನ್ನು 1, 3, 5, 11 ದಿನಗಳ ವರೆಗೆ ಗಣೇಶನನ್ನು ಮನೆಯಲ್ಲಿ ಕೂರಿಸಿ, ಗಣೇಶ ವಿಸರ್ಜನೆಯಂದು ಹತ್ತಿರದ ಕೆರೆ ಇಲ್ಲವೇ ತೋಟದ ಭಾವಿಯವರೆಗೂ, ಅಕ್ಕ ಪಕ್ಕದ ಗೆಳೆಯರನ್ನೆಲ್ಲಾ ಸೇರಿಸಿಕೊಂಡು ಗಂಟೆ, ಜಾಗಟೆ ಬಾರಿಸಿಕೊಂಡು, ಗಣೇಶ ಬಂದ ಕಾಯ್ಕಡ್ಬು ತಿಂದಾ, ಚಿಕ್ಕೆರೆಲೀ ಬಿದ್ದ, ದೊಡ್ಡ ಕೆರೇಲೀ ಎದ್ದ. ಅಲ್ಲಿ ನೋಡು ಗಣೇಶಾ.. ಇಲ್ಲಿ ನೋಡೂ ಗಣೇಶಾ. ಎಲ್ಲೆಲ್ಲಿ ನೋಡು ಗಣೇಶಾ.. ಎಂದು ಜೋರಾಗಿ ಘೋಷಣೆ ಕೂಗಿಕೊಂಡು ನೀರಿನ ಬಳಿ ಹೋಗಿ ಗಣೇಶನಿಗೆ ನೈವೇದ್ಯ ಮತ್ತು ಆರತಿ ಮಾಡಿ, ಎರಡು ಬಾರಿ ನೀರಿನಲ್ಲಿ ಮುಳುಗಿಸಿ ಮೂರನೇ ಬಾರಿಗೆ ಗಣೇಶನನ್ನು ವಿಸರ್ಜಸಿ, ಗಣೇಶನಿಗೆ ಕೈಲಾಸಕ್ಕೆ ಹೋಗುವಾಗ ಕತ್ತಲಾಗದಿರಲಿ ಎಂದು ಒಂದು ವಿಳ್ಳೇದೆಲೆ ಮೇಲೆ ಕರ್ಪೂರ ಹತ್ತಿಸಿ ಎಲ್ಲರೂ ಕೈ ಕಾಲು ತೊಳೆದುಕೊಂಡು ಅಮ್ಮಾ ಮಾಡಿಕೊಂಡು ಬರುತ್ತಿದ್ದ ಪ್ರಸಾದ ಹುಳಿಯನ್ನಾ/ಹುಳಿಯವಲಕ್ಕಿ/ಹುಗ್ಗಿಯ ಜೊತೆಗೆ ಮೊಸರನ್ನು ತಿಂದು ಮತ್ತೆ ಕೈ ತೊಳೆದುಕೊಂಡು ಮತ್ತೆ ಮುಂದಿನ ವರ್ಷದ ಗಣೇಶನ ಹಬ್ಬಕ್ಕೆ ಕಾಯುತ್ತಿದ್ದೆವು.
ಇಂದು ಕಾಲವೆಲ್ಲವೂ ಸಂಪೂರ್ಣ ಬದಲಾಗಿದೆ. ಭಾವಿಗಳು, ಕೆರೆ ಕಟ್ಟೆಗಳನ್ನೆಲ್ಲಾ ಮುಚ್ಚಿ ಗಗನ ಚುಂಬಿ ಕಟ್ಟಡಗಳನ್ನು ಕಟ್ಟಿರುವ ಕಾರಣ, ಬಿಬಿಎಂಪಿಯವರು ತಾತ್ಕಾಲಿಕವಾಗಿ ಗಣೇಶನ ವಿಸರ್ಜನೆಗೆ ಅವಕಾಶ ಮಾಡಿಕೊಟ್ಟಿದ್ದರೂ, ಅಲ್ಲಿಗೆ ಬರುವ ಜನರ ಬೀಡು ಮತ್ತು ನಾವು ಸ್ವತಃ ಗಣೇಶನನ್ನು ವಿಸರ್ಜಿಸಲು ಅವಕಾಶ ಸಿಗದೇ ಅಲ್ಲಿರುವ ಸಿಬ್ಬಂದಿಯ ಮೂಲಕ ವಿಸರ್ಜನೆ ಮಾಡಬೇಕಾಗಿರುವುದರಿಂದ ಬಹುತೇಕರು ತಮ್ಮ ತಮ್ಮ ಮನೆಗಳಲ್ಲೇ ದೊಡ್ಡ ಕೊಳಗದಲ್ಲಿ ಗೌರಿ ಗಣೇಶನನ್ನು ವಿಸರ್ಜಿಸುವ ಕಾರಣ, ಈ ಹಿಂದೆ ಮಾಡುತ್ತಿದ್ದ ವಿಸರ್ಜನೆ ಕಾರ್ಯಕ್ರಮದ ಸವಿ ಇಂದು ಇಲ್ಲದಂತಾಗಿದೆ.
ಇನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡಲಾಗುವ ಗಣೇಶನ ವಿಸರ್ಜನೆ ಸಮಯದಲ್ಲಿ ಭಕ್ತಿಗಿಂತಲೂ ಅಬ್ಬರಕ್ಕೇ ಪ್ರಾಮುಖ್ಯತೆ ನೀಡುವುದಲ್ಲದೇ, ದೊಡ್ಡ ದೊಡ್ಡ ಧನಿಯಲ್ಲಿ ಡಿಜೆಗಳ ಮೂಲಕ ಸಿನಿಮಾ ಹಾಡುಗಳಿಗೆ ನೃತ್ಯ ಮಾಡುವುದು ತುಸು ಬೇಸರ ತರಿಸುತ್ತಾದರೂ, ಇವೆಲ್ಲಾ ಮಧ್ಯೆ ಅಲ್ಲೊಮ್ಮೆ ಇಲ್ಲೊಮ್ಮೆ ಗಣೇಶ ಬಪ್ಪಾ ಮೋರ್ಯಾ, ಗಣಪತಿ ಬಪ್ಪಾ ಮೋರ್ಯಾ, ಮಂಗಳ ಮೂರ್ತಿ ಮೂರ್ಯಾ ಎಂಬ ಘೋಷಣೆಗಳನ್ನು ಕೂಗುವುದು ವಿಶೇಶವಾಗಿದ್ದು, ಹಾಗಾದರೆ ಈ ಗಣಪತಿ ಬಪ್ಪ ಮೋರ್ಯ ಎಂದರೇನು? ಎಂಬ ಜಿಜ್ಞಾಸೆಗೆ ಇದೋ ಇಲ್ಲಿದೆ ಉತ್ತರ.
ಗಣೇಶನ ಭಕ್ತಾದಿಗಳ ಗಣಪತಿ ಬಪ್ಪ ಮೋರ್ಯ, ಮಂಗಳ ಮೂರ್ತಿ ಮೋರ್ಯ ಎಂಬ ಘೋಷಣೆಯಲ್ಲಿ ಮೋರಿಯಾ ಅಥವಾ ಮೋರ್ಯ ಎಂಬ ಪದದ ಹಿಂದೆ ಬಹಳಷ್ಟು ವಿಶೇಷತೆ ಇದೆ. ಮೋರ್ಯ ಎಂಬ ಪದವು ಹದಿನಾಲ್ಕನೇ ಶತಮಾನದಲ್ಲಿ ಮೋರ್ಯ ಗೋಸಾವಿ ಎಂಬ ಗಣೇಶನ ಪರಮ ಭಕ್ತನನ್ನು ನೆನಪು ಮಾಡಿಕೊಡುತ್ತದೆ. ಇಂದಿನಂತೆ ಭಾಷಾವಾರು ಪ್ರಾಂತ್ಯಗಳಾಗಿ ಹರಿದು ಹಂಚಿಹೋಗಿರದಿದ್ದ ಕಾಲದಲ್ಲಿ ಮೂಲತಃ ಕರ್ನಾಟಕದ ಶಾಲಿಗ್ರಾಮ ಎಂಬ ಹಳ್ಳಿಯ ಮೋರ್ಯ ಭಟ್ಟ ಎಂಬ ಬಾಲಕನಿಗೆ ಬಾಲ್ಯದಿಂದಲೇ ಅನಾರೋಗ್ಯ ಪೀಡಿತನಾಗಿದ್ದ ಕಾರಣ ಅವರ ಕುಲ ಗುರುಗಳು ಮತ್ತು ಪಂಡಿತರೂ ಆಗಿದ್ದ ಶ್ರೀ ನಾರಾಯಣ್ ಭಾರತಿ ಗೋಸಾವಿಯವರು ಆ ಬಾಲಕನಿಗೆ ಆಯುರ್ವೇದ ಔಷಧಿಗಳನ್ನು ಕೊಟ್ಟು ಉಪಚರಿಸಿದ್ದಲ್ಲದೇ, ಆತನ ಜಾತಕದ ಅನುಗುಣವಾಗಿ ಆತನ ಹೆಸರನ್ನು ಮೋರ್ಯ ಭಟ್ಟನಿಂದ ಮೋರ್ಯ ಗೋಸಾವಿ ಎಂದು ಮರುನಾಮಕರಣ ಮಾಡಿದ ನಂತರ ಆ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಂಡುಕೊಂಡಿತು.
ಹೀಗೆ ಆರೋಗ್ಯದಲ್ಲಿ ಚೇತರಿಸಿಕೊಂಡ ಮೋರ್ಯರು ಸದಾ ಕಾಲವೂ ಅಂತರ್ಮುಖಿಯಾಗಿ, ಮನೆಯ ಯಾವುದೇ ಕೆಲಸ ಕೆಲಸಗಳಲ್ಲೂ ಆಸಕ್ತಿ ವಹಿಸುತ್ತಿಲ್ಲದಿದ್ದದ್ದನ್ನು ಗಮನಿಸಿದ ಅವರ ತಂದೆ-ತಾಯಿಗಳು ಅವರನ್ನು ಮನೆಯಿಂದ ಹೊರಗೆ ಕಳಿಸಿದರು. ಹೀಗೆ ಮನೆಯಿಂದ ಹೊರಹಾಕಲ್ಪಟ್ಟ ಮೋರ್ಯರು, ತಮ್ಮ ಗೆಳೆಯರ ಜೊತೆ ಮೊರ್ಗಾವ್ ನ ಹೆಸರಾಂತ ಗಣಪತಿ ದೇವಸ್ಥಾನಕ್ಕೆ ಹೋಗಿ, ಅಲ್ಲಿ ಭಕ್ತಿಯಿಂದ ಪ್ರಾರ್ಥಿಸುತ್ತಾ ದೈವಸಾನ್ನಿದ್ಧ್ಯದಲ್ಲಿ ತಲ್ಲೀನರಾಗಿರುತ್ತಿದ್ದರು. ಒಮ್ಮೆ ಗಣೇಶ ಮೂರ್ತಿಯನ್ನು ತಾವೇ ಸ್ವತಃ ಅರ್ಚನೆ ಮಾಡಲು ಹೋದಾಗ, ದೇವಾಲಯದವರು ಅವರನ್ನು ಗರ್ಭಗುಡಿಯನ್ನು ಪ್ರವೇಶಿಸಲು ತಡೆದದ್ದರಿಂದ ಖಿನ್ನರಾದ ಮೋರ್ಯರು ಗಣೇಶನ ಕುರಿತಾಗಿ ಸುಧೀರ್ಘವಾದ ತಪಸ್ಸನ್ನು ಮಾಡಿದರು. ಭಕ್ತರ ಕೋರಿಕೆಗಳನ್ನು ತಕ್ಷಣವೇ ತೀರಿಸುವ ಗಣೇಶ ಅವರ ಸ್ವಪ್ನದಲ್ಲಿ ಪ್ರತ್ಯಕ್ಷನಾಗಿ ಪುಣೆಯ ಬಳಿ ಇರುವ ಚಿಂಚವಾಡ ಎಂಬ ಗ್ರಾಮಕ್ಕೆ ಹೋಗಲು ಅಪ್ಪಣೆಕೊಟ್ಟರು. ಹೀಗೆ ಗೋಸಾವಿಯವರು ಚಿಂಚ್‌ವಾಡಕ್ಕೆ ತಮ್ಮ ವಾಸ್ತ್ಯವ್ಯವನ್ನು ಬದಲಿಸಿಕೊಂಡ ನಂತರ ತಮ್ಮ ಸಂಪೂರ್ಣ ಜೀವನವನ್ನು ಗಣೇಶನಿಗಾಗಿ ಮೀಸಲಿಟ್ಟರು.
ಹೀಗೆ ಮೋರ್ಯ ಅವರ ಭಕ್ತಿ ಪರವಶೆಗಳಿಗೆ ಒಲಿದ ಗಣಗತಿ ಅವರಿಗೆ ಪ್ರತ್ಯಕ್ಷವಾಗಿ ತನ್ನಿಂದ ಎಂತಹ ವರಬೇಕು ಎಂದು ಕೇಳಿದಾಗ, ಒಂದು ಕ್ಷಣವೂ ಸ್ವಾರ್ಥಕ್ಕಾಗಿ ಯೋಚಿಸದೇ, ಎಲ್ಲವನ್ನೂ ನೀಡಿರುವ ನಿನ್ನಿಂದ ಮತ್ತಿನ್ನೇನು ತಾನೇ ನಿರೀಕ್ಷಿಸಲು ಸಾಧ್ಯ. ಹಾಗಾಗಿ ಮುಂದೆ ಯಾವುದೇ ಭಕ್ತರು ಗಣೇಶನನ್ನು ಸ್ಮರಿಸುವಾಗ ಅದರ ಜೊತೆ ತನ್ನ ಹೆಸರೂ ಸಹಾ ಶಾಶ್ವತವಾಗಿ ಇರುವಂತೆ ಮಾಡುವ ಮೂಲಕ ದೇವರು ಮತ್ತು ಭಕ್ತರ ಅವಿನಾಭಾವ ಸಂಬಂಧವನ್ನು ತೋರಿಸು ಮತ್ತು ತನ್ಮೂಲಕ ಅವರಿಗೂ ಸಹಾ ನಿನ್ನಲ್ಲಿ ಅಂತಿಮವಾಗಿ ಮೊರೆ ಹೋಗುವಂತೆ ಮಾಡು ಎಂದು ಕೇಳಿದ್ದಕ್ಕೆ ಗಣಪತಿಯು ಸಂತೋಷದಿಂದ ತಥಾಸ್ತು ಎಂದು ಹೇಳಿದನಂತೆ. ಅಂದಿನಿಂದ ಅಲ್ಲಿನ ಭಕ್ತಾದಿಗಳು ಗಣಪತಿ ಬಪ್ಪಾ ನ ಜೊತೆ ಮೋರಿಯಾನನ್ನು ಸಹಾ ಸೇರಿಸಿಕೊಂಡು ಗಣೇಶ ಬಪ್ಪಾ ಮೋರ್ಯಾ, ಗಣಪತಿ ಬಪ್ಪಾ ಮೋರ್ಯಾ, ಮಂಗಳ ಮೂರ್ತಿ ಮೂರ್ಯಾ ಎಂಬ ಘೋಷಣೆಗಳನ್ನು ಕೂಗುವುದನ್ನು ರೂಢಿಸಿಕೊಂಡರು.
ಹೀಗೆ ಗಣೇಶನನ್ನು ಸಾಕ್ಷಾತ್ಕರಿಸಿಕೊಂಡಿದ್ದ ತಮ್ಮ ತಂದೆಯವರ ನೆನೆಪಿನಾರ್ಥ ಅಲ್ಲೊಂದು ಭವ್ಯವಾದ ದೇವಾಲಯವನ್ನು ನಿರ್ಮಿಸಿದ ಕೆಲವು ದಿನಗಳ ನಂತರ ಮೋರ್ಯಾ ಅವರು ಅದೇ ಪ್ರದೇಶದಲ್ಲಿಯೇ ಸಂಜೀವನ್ ಸಜೀವ ಸಮಾಧಸ್ತರಾದರು. ಭಕ್ತಾದಿಗಳು ಅವರ ಮಗ ಚಿಂತಾಮಣಿಯನ್ನು ಗಣೇಶನ ಪ್ರತ್ಯವತಾರವೆಂದು ಭಾವಿಸಿರುವ ಪ್ರತೀತಿ ಇದ್ದು ಅವರನ್ನು ಪ್ರೀತಿಯಿಂದ ದೇವ್ ಎಂದು ಕರೆಯುತ್ತಿದ್ದರು. ಇಂದಿಗೂ ಅಲ್ಲಿನ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾದಿಗಳು ನಂತರ ತಪ್ಪದೇ ಮೋರ್ಯ ಗೋಸಾವಿಯವರ ಸಮಾಧಿಗೂ ಭೇಟಿ ನೀಡುವುದು ವಿಶೇಷವಾಗಿದೆ. ಮೋರ್ಯಾವರು ಅಹಮದಾಬಾದ್‌ನ ಸಿದ್ಧಿ ವಿನಾಯಕನಲ್ಲಿ ಮತ್ತು ಮೊರೆಗಾನ್‌ನಲ್ಲಿರುವ ಮೋರೇಶ್ವರ/ಮಯೂರೇಶ್ವರದಲ್ಲಿಯೂ ಸಹಾ ತಪಸ್ಸು ಮಾಡಿದ್ದಲ್ಲದೇ ಅಲ್ಲಿಯೂ ಸಹಾ ದೇವಾಲಯಗಳನ್ನು ನಿರ್ಮಿಸಿದ್ದರು ಎನ್ನಲಾಗುತ್ತದೆ.
ಸಂತ ತುಕಾರಾಂ ಮಹಾರಾಜರೂ ಸಹಾ ಮೋರ್ಯ ಗೋಸಾವಿಯವರಿಗೆ ತಮ್ಮ ವಂದನೆಯನ್ನು ಸಲ್ಲಿಸಿರುವುದು ಗಮನಾರ್ಹವಾಗಿದ್ದು, ನಂತರದ ದಿನಗಳಲ್ಲಿ ಗಣಪತಿ ಬಪ್ಪನನ್ನು ನೆನೆಸಿಕೊಳ್ಳುವಾಗ ಅವರಿಗೇ ಅರಿವಿಲ್ಲದಂತೆ ಮೋರ್ಯಾ ಅವರನ್ನೂ ನೆನೆಪಿಸಿಕೊಳ್ಳುವ ಮೂಲಕ ಭಕ್ತಾದಿಗಳ ಮನಸ್ಸಿನಲ್ಲಿ ಮೋರ್ಯ ಗೋಸಾವಿಯವರ ಹೆಸರು ಚಿರಸ್ಥಾಯಿಯಾಗಿ ಉಳಿದು ಹೋಯಿತು. ನಂತರದ ದಿನಗಳಲ್ಲಿ ಈ ಸಂಪ್ರದಾಯ ಬಾಯಿಂದ ಬಾಯಿಗೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹರಡುವ ಮೂಲಕ ಇಂದಿಗೂ ಸಹಾ ಗಣೇಶನ ಜೊತೆ ಮೋರ್ಯ ಸಂತರ ಹೆಸರನ್ನೂ ಸಹಾ ವಿಶ್ವಮಾನ್ಯಮಾಡಿರುವುದು ಅದ್ಭುತವೇ ಸರಿ.
ಏನಂತೀರೀ?
ಸೃಷ್ಟಿಕರ್ತ ಉಮಾಸುತ