ಹೇಳಿ ಕೇಳಿ ಗಣೇಶ ನಮ್ಮ ಸನಾತನ ಧರ್ಮದ ದೇವರು. ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡುವ ಮುನ್ನಾ ಅಗ್ರ ಪೂಜೆ ಗಣೇಶನಿಗೇ ಸಲ್ಲುತ್ತದೆ. ಹಾಗಾಗಿ ಗಣೇಶ ಭಾರತದಲ್ಲಿ ಎಲ್ಲಾ ಜಾತಿಯವರೂ ಒಪ್ಪಿ ಮತ್ತು ಅಪ್ಪಿಕೊಳ್ಳುವ ನಿರ್ವಿವಾದಿತ ದೇವರು ಎಂದರೂ ತಪ್ಪಾಗದು. ಹಾಗಾಗಿಯೇ, ಭಾರತದಲ್ಲಿ ಯಾವ ಮೂಲೆಗೆ ಹೋದರೂ ಅಲ್ಲಿ ಗಣೇಶನ ದೇವಾಲಯವನ್ನು ಕಾಣಬಹುದಾಗಿದೆ. ಅದೇ ರೀತಿ ವರ್ಷಕ್ಕೊಮ್ಮೆ ಭಾದ್ರಪದ ಮಾಸದ ಚೌತಿಯಂದು ಗಣೇಶನನ್ನು ಬಹುತೇಕರ ಮನೆಯಗಳಲ್ಲಿಯೂ ಮತ್ತು ಸಾರ್ವಜನಿಕವಾಗಿಯೂ ಪ್ರತಿಷ್ಠಾಪಿಸಿ ಬಹಳ ಅದ್ದೂರಿಯಿಂದ 5, 7, 9 ಇಲ್ಲವೇ 11 ದಿನಗಳವರೆಗೂ ಪೂಜೆ ಮಾಡಿ ಅನಂತ ಚತುರ್ದಶಿಯಂದು ಅತ್ಯಂತ ವಿಜೃಂಭಣೆಯಿಂದ ವಿಸರ್ಜಿಸುತ್ತಾರೆ. ಗಣೇಶನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ತಮ್ಮೆಲ್ಲಾ ಇಚ್ಛೆಗಳು ಈಡೇರುತ್ತದೆ ಎನ್ನುವುದು ಸಕಲ ಭಾರತೀಯರ ನಂಬಿಕೆಯಾಗಿದೆ
ದುರದೃಷ್ಟವಷಾತ್ ಕಳೆದ 1000 ವರ್ಷಗಳ ಕಾಲ ಪರಕೀಯರ ಧಾಳಿಯಿಂದ ನಲುಗಿಯು ಬುದ್ದಿ ಕಲಿತುಕೊಳ್ಳದ ಕೆಲವು ಮತಾಂಧ ಸ್ವಾಮಿಗಳು ಮನೆಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಗಣಪತಿಯನ್ನು ಪೂಜಿಸುವುದು ಮತ್ತು ಗಣೇಶನ ಪಾರ್ಥನೆ ಸಲ್ಲಿಸುವುದು ನಮ್ಮ ಸಂಸ್ಕೃತಿ ಅಲ್ಲ. ಅದು ಮೌಢ್ಯದ ಆಚರಣೆ. ವಚನ ಪ್ರಸ್ತುತ ಪಡಿಸುವುದು ನಿಜವಾದ ಪ್ರಾರ್ಥನೆ. ಗಣಪತಿ ಎನ್ನುವುದು ಕಾಲ್ಪನಿಕ ದೇವರು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ನೆಪ ಮಾತ್ರಕ್ಕೆ ಹುಟ್ಟಿಕೊಂಡ ಮತ್ತು ಬಾಹ್ಯ ವಸ್ತುಗಳಿಂದ ಮಾಡಿದ ದೇವರುಗಳು ದೇವರಲ್ಲ, ಮನೆಗಳಲ್ಲಿ ಅಥವಾ ಯಾವುದೇ ಸಮಾರಂಭಗಳಲ್ಲಿ ಮೊದಲು ಗಣಪತಿ ಪೂಜೆ, ಸ್ತೋತ್ರ ಶ್ಲೋಕ ಪಠಿಸಬೇಕು ಎಂಬುದು ಹಲವರ ನಂಬಿಕೆಯೂ ಒಪ್ಪುವಂತಹದ್ದಲ್ಲವಾಗಿದ್ದು ಗಣೇಶನನ್ನು ಸ್ತುತಿವ ಬದಲು ವಚನಗಳನ್ನು ಪ್ರಾರ್ಥನೆಯಂತೆ ಪಠಿಸಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಕೆಲ ತಿಂಗಳುಗಳ ಹಿಂದೆ ಹೇಳಿದ್ದರ ಕುರಿತಾಗಿ ಅದೆಲ್ಲೋ ಅಕಸ್ಮಿಕವಾಗಿ ಹೇಳಿರಬೇಕು ಎಂದೇ ಎಲ್ಲರು ತಿಳಿದುಕೊಳ್ಳುತ್ತಿರುವ ಸಂಧರ್ಭದಲ್ಲಿ ಪದೇ ಪದೇ ಅದೇ ವಿಚಾರನ್ನು ಪ್ರಸ್ತಾಪನೆ ಮಾಡಿದ್ದಲ್ಲದೇ, ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ಲಿಂಗಾಯತ ಮತ್ತು ಇಸ್ಲಾಂ ಧರ್ಮಗಳಲ್ಲಿ ಬಹುತೇಕ ಸಾಮ್ಯತೆ ಇದೆ ಎನ್ನುವ ಮೂಲಕ ಶತ್ರುವಿನ ಶತ್ರು ನಮ್ಮ ಮಿತ್ರ ಎನ್ನುವಂತಹ ಮನಸ್ಥಿತಿಯನ್ನು ತೋರಿಸಿದ್ದಾರೆ.
ಇನ್ನು ಇಂಡೋನೇಷ್ಯಾ ಹೇಳೀ ಕೇಳೀ ಮುಸ್ಲಿಂ ರಾಷ್ಟ್ರ. ಒಂದು ಕಾಲದಲ್ಲಿ ಇಂಡೋನೇಷ್ಯಾ,ಆಗ್ನೇಯ ಏಷ್ಯಾದ ಬರ್ಮಾ, ಥೈಲ್ಯಾಂಡ್, ಕಾಂಬೋಡಿಯಾ ಮತ್ತು ವಿಯೆಟ್ನಾಂ ಕೂಡ ಭಾರತೀಯ ರಾಜರಾಗಿದ್ದ ಚೋಳ ಸಾಮ್ರಾಜ್ಯದ ಭಾಗವಾಗಿದ್ದ ಕಾರಣ ಅಲ್ಲಿಯವರೆಗೂ, ನಮ್ಮ ಹಿಂದೂ ಸಂಪ್ರದಾಯವಿತ್ತು. ಇದೆ ಕಾರಣದಿಂದಾಗಿಯೇ ಈ ಪ್ರದೇಶದ ಹೆಸರನ್ನು 1884ರಲ್ಲಿ ಜರ್ಮನ್ ಭೂಗೋಳಶಾಸ್ತ್ರಜ್ಞರು ಇದು ಗ್ರೀಕ್ ಇಂಡೋಸ್, ಅಂದರೆ “ಭಾರತ” ಮತ್ತು ನೆಸೋಸ್, ಅಂದರೆ “ದ್ವೀಪ” ದಿಂದ ಬಂದಿದೆ ಎಂಬ ಕಾರಣದಿಂದಾಗಿ ಇಂಡೋನೇಷ್ಯಾ ಎಂದು ಕರೆದರು. ನಂತರದ ದಿನಗಳಲ್ಲಿ ಮುಸ್ಲಿಂರ ಆಕ್ರಮಣದಿಂದಾಗಿ ಅದು ಸಂಪೂರ್ಣ ಮುಸ್ಲಿಂ ರಾಷ್ಟ್ರವಾಗಿ ಹೋದರೂ ಸಹಾ ಇಂದಿಗೂ ಅಲ್ಲಿನ ಜನಗಣೇಶನನ್ನು ಭಕ್ತಿಯಿಂದ ಪೂಜಿಸುತ್ತಾರೆ ಎಂದರೆ ಅಚ್ಚರಿಯಾಗುವುದು ಸಹಜ.
ಮುಸ್ಲಿಂ ಬಾಹುಳ್ಯದ ಇಂಡೋನೇಷ್ಯಾದಲ್ಲಿ ಒಟ್ಟು 141 ಜ್ವಾಲಾಮುಖಿಗಳಲ್ಲಿದ್ದು ಅವುಗಳಲ್ಲಿ ಸುಮಾರು 130 ಜ್ವಾಲಾಮುಖಿಗಳು ಇಂದಿಗೂ ಸಹಾ ಸಕ್ರಿಯವಾಗಿದ್ದು ಅಲ್ಲಿಂದ ಹೊಗೆಯಾಡುತ್ತಲೇ ಇರುತ್ತದೆ. ಕೆಲವೊಮ್ಮೆ ಸಣ್ಣ ಪ್ರಮಾಣದಲ್ಲಿ ಜ್ವಾಲಾರಸಗಳೂ ಉಕ್ಕಿ ಬರುವುದನ್ನು ಕಾಣಬಹುದಾಗಿದೆ. ಅಂತಹ ಜ್ವಾಲಾಮುಖಿಗಳಲ್ಲಿ ಮೌಂಟ್ ಬ್ರೋಮೋ ಪ್ರದೇಶದ ಪೂರ್ವ ಜಾವಾ ಪ್ರಾಂತ್ಯದ ಬ್ರೋಮೊ ಟೆಂಗರ್ ಸೆಮೆರು ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು 700 ವರ್ಷಗಳಷ್ಟು ಹಳೆಯದಾದ ಜೀವಂತ ಜ್ವಾಲಾಮುಖಿಯ ಕುಂಡವಿದ್ದು ಅದರ ಆವರಣದಲ್ಲೇ ದೊಡ್ಡದಾದ ಗಣೇಶನ ಪ್ರತಿಮೆಯಿದೆ. ಸ್ಥಳೀಯರ ಪ್ರಕಾರ ಈ ಪ್ರತಿಮೆ 700 ವರ್ಷಗಳಿಂದ ಇದ್ದು, ಆ ಗಣೇಶ ಜ್ವಾಲಾಮುಖಿಯ ಸ್ಫೋಟದಿಂದ ಅಲ್ಲಿಯವರನ್ನು ರಕ್ಷಿಸುತ್ತಾನೆ ಎಂದೇ ನಂಬುತ್ತಾರೆ. ಹಾಗಾಗಿ ಪ್ರತಿದಿನವೂ ತಪ್ಪದೇ ಆ ಗಣೇಶನಿಗೆ ಯಥಾಶಕ್ತಿ ಪೂಜೆ ಪುನಸ್ಕಾರಗಳು ಇಂದಿಗೂ ನಡೆಯುತ್ತಿರುವುದು ವಿಶೇಷವಾಗಿದೆ.
‘ಬ್ರೋಮೋ’ ಪದವು ಸೃಷ್ಟಿಯ ಹಿಂದೂ ದೇವತೆಯಾದ ಬ್ರಹ್ಮನ ಜಾವಾನೀಸ್ ಉಚ್ಚಾರಣೆಯಿಂದ ಬಂದಿದೆ. 2012 ರವರೆಗಿನ ದಾಖಲೆಗಳ ಪ್ರಕಾರ, ಇಂಡೋನೇಷ್ಯಾದ ಸಂಪೂರ್ಣ ಪ್ರದೇಶವು 127 ಸಕ್ರಿಯ ಜ್ವಾಲಾಮುಖಿಗಳನ್ನು ಹೊಂದಿತ್ತು, ಆದರೆ ಸುಮಾರು 5 ಮಿಲಿಯನ್ ಜನರು ಅಪಾಯದ ವಲಯಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಶಂಕಿಸಲಾಗಿದೆ. ಮೌಂಟ್ ಬ್ರೋಮೋ ಜ್ವಾಲಾಮುಖಿಯಲ್ಲಿ ಕಂಡುಬರುವ ಗಣೇಶನ ವಿಗ್ರಹವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.
ಈ ಸಕ್ರಿಯ ಜ್ವಾಲಾಮುಖಿಯಿಂದ ಗಣಪತಿಯು ತಮ್ಮನ್ನು ರಕ್ಷಿಸುತ್ತಾನೆ ಎಂದು ಸ್ಥಳೀಯರು ನಂಬುತ್ತಾರೆ. ತೆಂಗರ್ ಮಾಸಿಫ್ ಬುಡಕಟ್ಟಿನ ದಂತಕಥೆಗಳು ಸುಮಾರು 700 ವರ್ಷಗಳ ಹಿಂದೆ ತಮ್ಮ ಪೂರ್ವಜರಿಂದ ಗಣೇಶನ ವಿಗ್ರಹವನ್ನು ಸ್ಥಾಪಿಸಲಾಗಿದೆ ಎಂದು ದೃಢವಾಗಿ ನಂಬುತ್ತಾರೆ, ಅದಕ್ಕಾಗಿಯೇ ಅವರು ಗಣೇಶನಿಗೆ ಹಲವಾರು ನೈವೇದ್ಯಗಳನ್ನು ಮಾಡುತ್ತಾರೆ. ಇಲ್ಲಿ ಆಗ್ಗಾಗ್ಗೇ ಲಾವಾರಸಗಳು ಉಕ್ಕಿ ಹರಿದರೂ ಸಹಾ ಇಲ್ಲಿನ ಜನರು ಈ ಗಣಪತಿಯ ಪೂಜೆ ಎಂದಿಗೂ ನಿಲ್ಲಿಸಿಲ್ಲ. ಯಾವುದೇ ರೀತಿಯ ಪ್ರಕೃತಿ ವಿಕೋಪಗಳನ್ನೂ ಸಹಾ ಲೆಕ್ಕಿಸದೆ ಅನೂಚಾನವಾಗಿ ಗಣೇಶನನ್ನು ಅನುಸರಿಸುವ ಸಂಪ್ರದಾಯ ಇಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ನಾವು ವಿವಿಧ ಕಾರಣಗಳಿಂದಾಗಿ ನಮ್ಮ ಧರ್ಮವನ್ನು ಬದಲಿಸಿದ್ದರೂ, ನಮ್ಮ ಪೂರ್ವಜರ ನಂಬಿಕೆ ಮತ್ತು ಶ್ರದ್ಧೆಗಳನ್ನು ಬಹಳ ನಂಬುತ್ತೇವೆ. ಆದ ಕಾರಣ ನಾವು ಈ ಗಣೇಶನಿಗೆ ಪ್ರತಿನಿತ್ಯವೂ ವಿವಿಧ ಹೂವು ಮತ್ತು ಹಣ್ಣುಗಳನ್ನು ನೈವೇದ್ಯವಾಗಿ ಅರ್ಪಿಸಿ ಬಹಳ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತೇವೆ. ಹಾಗೆ ಮಾಡದೇ ಹೋದರೆ ಜ್ವಾಲಾಮುಖಿ ಸ್ಫೋಟಗೊಂಡು ಇಲ್ಲಿನ ಜನರನ್ನು ಭಸ್ಮ ಮಾಡುತ್ತದೆ ಎಂದು ಇಲ್ಲಿನ ಜನರ ನಂಬಿಕೆಯಾಗಿದೆ. ಕೇವಲ ಗಣೇಶನಲ್ಲದೇ ಪ್ರಭು ಶ್ರೀರಾಮನನ್ನೂ ಬಹುವಾಗಿ ಆರಾಧಿಸುವ ಇಂಡೋನೇಷ್ಯಾದ ಜನರು, ಪ್ರತಿವರ್ಷವೂ ರಾಮಯಣವನ್ನು ಸಾರ್ವಜನಿಕವಾಗಿಯೂ ಪಠಿಸುವುದು ಗಮನಾರ್ಹವಾಗಿದೆ.
ಕೇವಲ ಮೌಂಟ್ ಬ್ರೋಮೋಲಷ್ಟೇ ಅಲ್ಲದೇ, ಗಣೇಶನನ್ನು ಇಂಡೋನೇಷಿಯದ ಬುದ್ಧಿವಂತಿಕೆಯ ದೇವರು ಎಂದೇ ಕರೆಯುತ್ತಾರಲ್ಲದೇ, ಅಲ್ಲಿನ ಅನೇಕ ಕಡೆ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಬಂಡುಂಗ್ ಎಂಬ ಪ್ರದೇಶದಲ್ಲಿ ಗಣೇಶ ಹೆಸರಿನಲ್ಲೇ ಬೀದಿಯೊಂದನ್ನು ಹೊಂದಿದ್ದರೆ, 1 ನೇ ಶತಮಾನದಿಂದಲೇ ಗಣೇಶನ ಪ್ರತಿಮೆಯನ್ನು ಪಶ್ಚಿಮ ಜಾವಾದ ಉಜುಂಗ್ ಕುಲೋನ್ ರಾಷ್ಟ್ರೀಯ ಉದ್ಯಾನವನದ ಪನೈಟಾನ್ ದ್ವೀಪದಲ್ಲಿ ರಕ್ಸಾ ಪರ್ವತದ ಶಿಖರದಲ್ಲಿ ಕಾಣಬಹುದಾಗಿದೆ. ಇಂಡೋನೇಷಿಯಾದ ಅಧಿಕೃತ ನೋಟುಗಳನ್ನು ಭಾರತದಂತೆಯೇ ರುಪಯ್ಯಾ (Rupiah) ಎಂದು ಕರೆಯುತ್ತಾರಲ್ಲದೇ, ಅಲ್ಲಿನ ನೋಟುಗಳ ಮೇಲೆ ಗಣೇಶನನ್ನು ಸಹಾ ಮುದ್ರಿಸಿರುವುದು ವಿಶೇಷವಾಗಿದೆ.
ಪ್ರಪಂಚದಲ್ಲಿರುವ ಬಹುತೇಕ ಧರ್ಮಗಳ ಸಂಸ್ಥಾಪಕರು ಯಾರು? ಆ ಧರ್ಮಗಳು ಎಂದು ಆರಂಭವಾದವು? ಮತ್ತು ಅವುಗಳ ಪುಣ್ಯಗ್ರಂಥ ಯಾವುದು? ಎಂಬುದು ಇಡೀ ಜಗತ್ತಿಗೇ ತಿಳಿದಿದ್ದರೆ, ಸನಾತನ ಧರ್ಮವನ್ನು ಆರಂಭಿಸಿದವರು ಯಾರು? ಮತ್ತು ಎಂದು ಎಂಬುದು ಯಾರಿಗೂ ತಿಳಿದಿಲ್ಲ. ಹಾಗಾಗಿ ಹಿಂದೂ ಎಂಬುದು ಕೇವಲ ಮತ ಅಥವಾ ಧರ್ಮಕ್ಕೆ ಮಾತ್ರಾ ಸೀಮಿತವಾಗಿರದೇ, ಅದೊಂದು ಶೃತಿ ಮತ್ತು ಶೃತ ಎಂಬ ಎರಡು ಶ್ರದ್ಧೆಯ ಮೇಲಿನ ಆಚರಣೆಯಾಗಿದೆ. ಕಾಲ ಕಾಲಕ್ಕೆ ಹಿಂದೂ ಧರ್ಮದಲ್ಲಿದ್ದ ಕೆಲವು ಆಚರಣೆಗಳ ಸೈದ್ಧಾಂತಿಕ ವಿರೋಧಾಭಾಸದಿಂದಾಗಿಯೇ ಭಾರತದಲ್ಲಿ ಭೌದ್ಧ, ಜೈನ, ವೀರಶೈವ, ಸಿಖ್ ಮತಗಳು ಹುಟ್ಟಿಕೊಂಡರೂ ಅವೆಲ್ಲವೂ ಹಿಂದೂ ಧರ್ಮದ ಟಿಸಿಲುಗಳಷ್ಟೇ ಹೊರತು ಅವುಗಳು ಹಿಂದೂ ಧರ್ಮದಿಂದ ವಿಭಿನ್ನವಾಗಿಲ್ಲ. ಇಂದಿಗೂ ಸಹಾ ಈ ಎಲ್ಲಾ ಮತಗಳಲ್ಲಿಯೂ ಹಿಂದೂ ಧರ್ಮದ ದೇವರುಗಳ ಪೂಜೆ ಮತ್ತು ಆಚರಣೆಗಳು ನಿರಂತರವಾಗಿ ನಡೆದುಕೊಂಡು ಬಂದಿರುವಾಗ ಅರವತ್ತರ ನಂತರ ಅರಳು ಮರಳು ಎಂಬಂತೆ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮತ್ತು ಬಸವಣ್ಣನವರಂತೆ ಜನ್ಮತಃ ಹಿಂದೂ ಬ್ರಾಹ್ಮಣರಾಗಿ ನಂತರ ಬಸವಣ್ಣನವರು ಹೇಳಿದ ಕಾಯಕವೇ ಕೈಲಾಸ ಎಂಬ ವಾಕ್ಯದ ಅರ್ಥವನ್ನು ಅರಿಯದೇ, ಲಿಂಗಧಾರಿಯಾಗಿ ಹೋದ ಬಂದ ಕಡೆಯಲ್ಲೆಲ್ಲಾ, ಹಿಂದೂ ಧರ್ಮವನ್ನು ಅವಹೇಳನ ಮಾಡುವ ನಿಜಗುಣಾನಂದರಂತಹವರ ಬೌದ್ಧಿಕ ದೀವಾಳಿತನಕ್ಕೆ ಏನನ್ನಬೇಕು?
ಗಣೇಶನ ಜನ್ಮ ರಹಸ್ಯವನ್ನು ತಿಳಿದಿದ್ದರೂ, ಯಾರನ್ನೋ ಮೆಚ್ಚಿಸುವ ಸಲುವಾಗಿ ದೊಳ್ಳು ಹೊಟ್ಟೆಯ, ಮಾನವನ ದೇಹ ಮತ್ತು ಪ್ರಾಣಿಯ ಮುಖವನ್ನು ಹೊಂದಿರುವ ಗಣಪತಿ ದೇವರು ಹೇಗೆ ಆಗುತ್ತಾರೆ? ಎಂದು ಸಾರ್ವಜನಿಕವಾಗಿ ಪ್ರಶ್ನಿಸುವ ನಿಜಗುಣಾನಂದ, ತನ್ನ ಕೊರಳಿನಲ್ಲಿ ಚಿನ್ನದಿಂದಲೋ ಇಲ್ಲವೇ ಬೆಳ್ಳಿಯಿಂದ ಮಾಡಿರುವ ಕರಡಿಗೆಯಲ್ಲಿ ಇಷ್ಟಲಿಂಗವನ್ನು ಕಟ್ಟಿಕೊಂಡು ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ, ಮರ ದೇವರು ದೇವರಲ್ಲ, ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ|. ಸೇತುಬಂಧ, ರಾಮೇಶ್ವರ,ಕಾಶಿ, ಗೋಕರ್ಣ, ಕೇದಾರ ಮೊದಲಾದ ಪುಣ್ಯತೀರ್ಥ ಕ್ಷೇತ್ರಗಳಲ್ಲಿಹ ದೇವರು ದೇವರಲ್ಲ ತನ್ನತಾನಾರೆಂದು ತಿಳಿದೆಡೆ ತಾನೇ ದೇವನೋಡಾ ಅಪ್ರಮಾಣ ಕೂಡಲಸಂಗಮದೇವಾ|| ಎಂಬ ಬಸವಣ್ಣನವರ ವಚನವನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಜನರನ್ನು ದಿಕ್ಕು ತಪ್ಪಿಸುವ ಕಾರ್ಯದಲ್ಲಿ ನಿರತವಾಗಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.
7ನೇ ಶತಮಾನದಿಂದಲೂ ನಿರಂತರವಾಗಿ ಅರಬ್ ದೇಶದ ಕಡೆಯ ಮೊಘಲರು ಸತತವಾಗಿ ಧಾಳಿ ಮಾಡಿ 12-13ನೇ ಶತಮಾನದಲ್ಲಿ ನಮ್ಮಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳನ್ನೇ ಮುಂದು ಮಾಡಿಕೊಂಡು ಭಾರತದ ಉತ್ತರದ ಬಹುತೇಕ ಪ್ರದೇಶಗಳನ್ನು ಆಕ್ರಮಣ ಮಾಡಿಕೊಂಡು ಬಲವಂತವಾಗಿ ಇಲ್ಲಿಯವರನ್ನೇ ಮುಸಲ್ಮಾನರಾಗಿ ಮತಾಂತರ ಮಾಡಿದ ಸಂಗತಿ ಈಗ ಗುಟ್ಟಾಗಿಯೇನೂ ಉಳಿದಿಲ್ಲಾ ಎಂಬ ಸಂಗತಿಯ ಅರಿವಿದ್ದೂ, ಕೆಲವು ಮೀಸಲಾತಿ ಸೌಲಭ್ಯಗಳಿಗಾಗಿ ಮತ್ತು ಕೆಲವು ಪಟ್ಟಭದ್ರರನ್ನು ಮೆಚ್ಚಿಸುವ ಸಲುವಾಗಿ ಕಾವಿತೊಟ್ಟ ಈ ಇಬ್ಬರು, ಲಿಂಗಾಯತ ಧರ್ಮ ಹಾಗೂ ಇಸ್ಲಾಂ ಧರ್ಮಗಳು ಬೇರೆ ಬೇರೆ ಆಗಿದ್ದರೂ, ಎರಡೂ ಧರ್ಮಗಳಲ್ಲಿ ಬಹುತೇಕ ಸಾಮ್ಯತೆಯ ಅಂಶಗಳಿವೆ ಎಂಬ ಮಾತನ್ನು ಹೇಳಿದ್ದಾರೆ ಎಂಬ ಮಾತನ್ನು ಆಡುತ್ತಿರುವುದು ಎಷ್ಟು ಸರಿ?
ಸ್ಥಾವರಗಳಿಗೆ ಪೂಜಿಸಬೇಡಿ, ಮೂರ್ತಿ ಪೂಜೆ ಬೇಡ ಎಂಬ ಮಾತನ್ನು ಹೇಳಿರುವ ಕಾರಣ, ಲಿಂಗಾಯತ ಧರ್ಮ ಹಾಗೂ ಇಸ್ಲಾಂ ಧರ್ಮಗಳು ಬೇರೆ ಬೇರೆ ಆಗಿದ್ದರೂ, ಎರಡೂ ಧರ್ಮಗಳಲ್ಲಿಯೂ ಸಾಮ್ಯತೆ ಇದೆ ಎಂದು ಹೇಳುವ ಈ ಸ್ವಾಮಿಗಳು ಹಿಂದೂ ಧರ್ಮದ ರೀತಿಯಲ್ಲಿ ಪಾದ ಪೂಜೆ ಮಾಡಿಸಿಕೊಂಡು ಭಕ್ತರಿಂದ ಹಣವನ್ನು ದೋಚುತ್ತಿರುವುದು ಎಷ್ಟು ಸರಿ? ಅದೇ ಭಕ್ತಾದಿಗಳು ನೀಡಿದ ಹಣದಲ್ಲಿ ಭವ್ಯವಾದ ಮಠಗಳನ್ನು ಕಟ್ಟಿಕೊಂಡು ಐಶಾರಾಮ್ಯದ ಆಧುನಿಕ ಕಾರಿನಲ್ಲಿ ಹೊಸಾ ತಂತ್ರಜ್ಞಾನದ ಮೋಬೈಲ್ ಇಟ್ಟುಕೊಂಡು ಓಡಾಡು ಎಂದು ಎಲ್ಲಿಯಾದರೂ ಹೇಳಿದ್ದಾರಾ? ಲಿಂಗಾಯತ ಧರ್ಮದಲ್ಲಿ ಮೂರ್ತಿ ಪೂಜೆಯನ್ನು ಅಲ್ಲಗಳೆದಿದೆ ಎನ್ನುವುದಾದರೆ, ಲಿಂಗರೂಪದಲ್ಲಿರುವ ಇಷ್ಟಲಿಂಗವೂ ಮೂರ್ತಿಯಂತಾಗುತ್ತದೆಯಲ್ಲವೇ? ಎಂದು ಪ್ರಶ್ನಿಸಿದರೆ, ಆತ ಸನಾತನಿ, ಕೋಮುವಾದಿ, ಎಂಬ ನಿಂದನೆಗಳು ಈ ಸ್ವಾಮಿಗಳ ಬಾಯಿಯಿಂದ ಪುಂಖಾನು ಪುಂಖವಾಗಿ ಬರುತ್ತವೆ.
ಜಗತ್ತಿನಲ್ಲಿರುವ ಎಲ್ಲ ಧರ್ಮಗಳಲ್ಲಿಯೂ ಹೇಳುವುದು ಒಂದೇ ಇರುವುದನ್ನು ಗಮನಿಸಿ ಅವರವರ ಭಾವಕ್ಕೆ ಅವರವರ ಭಕುತಿ ಎಂದು ಜನರು ತಮ್ಮ ಪಾಡಿಗೆ ತಾವು ಮತ್ತು ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ನಂಬಿಕೆಗಳನ್ನು ಆಚರಿಸುತ್ತಿದ್ದರೆ, ಜಾತಿ ಮತ್ತು ಧರ್ಮದ ಆಧಾರದಲ್ಲಿ ಶತ್ರುವಿನ ಶತ್ರು ನಮ್ಮ ಮಿತ್ರ ಎಂಬ ಆಧಾರದಡಿಯಲ್ಲಿ ಮನುಷ್ಯ ಮನುಷ್ಯರ ನಡುವೆ ಗೋಡೆಗಳನ್ನು ಸೃಷ್ಟಿಸಿ ದೊಡ್ಡ ಕಂದಕಗಳನ್ನುಂಟು ಮಾಡುತ್ತಿರುವ ಇಂತಹ ಸ್ವಘೋಷಿತ ವಿಚಾರವಂತರು ಮತ್ತು ವಿವೇಕವಂತರನ್ನು ತಿರಸ್ಕರಿಸಿದಾಗ ಮಾತ್ರವೇ, ವಸುದೈವ ಕುಟುಂಬಕಂ ಅರ್ಥಾತ್ ಇಡೀ ವಿಶ್ವವೇ ಒಂದು ಕುಟುಂಬ ಎಂದು ನಂಬಿರುವ ಭಾರತದಲ್ಲಿ ಭಾವೈಕತೆಯು ಮೂಡಿ ಶಾಂತಿಯ ಬೀಡಾಗುತ್ತದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ