ಆರಾಮ್ ಹರಾಮ್ ಹೈ!

ಬಹಳ ಹಿಂದೆ ಒಂದು ಟಿವಿಯಲ್ಲಿ ಬರುತ್ತಿದ್ದ ಒಂದು ಜಾಹೀರಾತನ್ನು ಬಹಳಷ್ಟು ಜನರು ಗಮನಿಸಿಯೇ ಇರುತ್ತಾರೆ. ಅದರಲ್ಲೊಬ್ಬ ಹುಡುಗ, ಸಮುದ್ರದ ತೀರದಲ್ಲಿ ಆರಾಮಾಗಿ ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತಿರುವುದನ್ನು ಗಮನಿಸಿದ ಹಿರಿಯರೊಬ್ಬರು, ಅರೇ ಇದೇನಪ್ಪಾ ನಿಮ್ಮಂತಹ ಚಿಕ್ಕ ಹುಡುಗರು  ಈ ರೀತಿಯಾಗಿ ಸುಮ್ಮನೇ ಕಾಲಾಹರಣ ಮಾಡುವುದೇ? ಎಂದು ಕೇಳಿದ್ದಕ್ಕೆ ಆ ಹುಡುಗ ಅಷ್ಟೇ ತಾತ್ಸಾರದಿಂದ ನಾನು ಏನು ಮಾಡಬೇಕು? ಎಂದು ಕೇಳುತ್ತಾನೆ. ಅದಕ್ಕೆ ಆ ಹಿರಿಯರು, ನೀನು ಚೆನ್ನಾಗಿ ಓದಬೇಕು, ಓದಿಗೆ ತಕ್ಕ ಹಾಗೆ ದೊಡ್ಡ ಕೆಲಸವನ್ನು ಪಡೆದುಕೊಳ್ಳಬೇಕು. ಅದರಿಂದ ಲಕ್ಷ ಲಕ್ಷಾಂತರ ಹಣ ಗಳಿಸಿ, ಒಳ್ಳೆಯ ಹುಡುಗಿಯೊಂದಿಗೆ ಮದುವೆಯಾಗಿ, ಮಕ್ಕಳು ಮರಿಯೊಂದಿಗೆ ಆರಾಮಾಗಿರಬೇಕು ಎನ್ನುತ್ತಾರೆ. ಅದಕ್ಕೆ ನಸುನಕ್ಕ ಆ ಹುಡುಗ, ನಾನು ಈಗ ಅದನ್ನೇ ಮಾಡುತ್ತಿದ್ದೇನೆ ಎಂದು ಮತ್ತ್ತೊಂದು ಪಕ್ಕಕ್ಕೆ ತಿರುಗಿ ಮಲಗಿಕೊಳ್ಳುತ್ತಾನೆ. ಅಂದು ನೋಡಿದ ಆ ಜಾಹೀರಾತಿಗೂ ಪ್ರಸ್ತುತವಾಗಿ ನಮ್ಮ ದೇಶದಲ್ಲಿ ನಡೆಯುತ್ತಿರುವ ರೀತಿಗೂ ಒಂದು ಚೂರೂ ವೆತ್ಯಾಸವಿಲ್ಲಾ ಎಂದರೆ ಅಚ್ಚರಿ ಎನಿಸಿದರೂ ಸತ್ಯ ಎನ್ನುವುದೇ ವಾಸ್ತವದ ಸಂಗತಿಯಾಗಿದ್ದು  ಅದದರ ಇಂಚಿಂಚೂ ಮಜಲಿನ ಮೆಲುಕು ಹಾಕೋಣ ಬನ್ನಿ,

village2ಅದೊಮ್ಮೆ ಅದೊಬ್ಬ ಹಿರಿಯರು ನಗರದಿಂದ ತಮ್ಮ ಊರಿಗೆ ಹೋಗಿರುತ್ತಾರೆ, ಹಾಗೆ ಹಳ್ಳಿಗೆ ಹೋದಾಗ ಅಲ್ಲಿನ ಆಶ್ವತ್ಥ ಕಟ್ಟೆಯ ಪಕ್ಕದಲ್ಲಿದ್ದ ಅಂಗಡಿಯ ಮುಂದೆ ಹತ್ತಾರು ನಿರುದ್ಯೋಗಿ ಯುವಕರುಗಳು ಕಾಲಹರಟೆಮಾಡುತ್ತಾ ಸುಮ್ಮನೆ ಕುಳಿತಿದ್ದದ್ದನ್ನು ಕಂಡ ಹಿರಿಯರು, ಏನ್ರಪ್ಪಾ, ನೀವೇಕೆ ಹೀಗೆ ಸುಮ್ಮನೇ ಕೆಲಸ ಕಾರ್ಯವಿಲ್ಲದೇ ಈ ರೀತಿಯಾಗಿ ತಂಬಾಕು ಗುಟ್ಕಾ ತಿನ್ನುತ್ತಾ, ಟೀ ಕುಡಿಯುತ್ತಾ ಇಲ್ಲಿ ಕಾಲವನ್ನು ವ್ಯರ್ಥ ಮಾಡುತ್ತಿದ್ದೀರಿ. ನೀವೆಲ್ಲರೂ ಯಾವುದಾದರೂ ಕೆಲಸ ಮಾಡಬಾರದೇ? ಎಂದು ಕೇಳಿದ್ದಕ್ಕೆ ಅದರಲ್ಲೊಬ್ಬ ಬುದ್ದಿವಂತ ಸೋಮಾರಿ ಹುಡುಗ, ಅಜ್ಜಾ ಅದು ನಮ್ಮಿಷ್ಟ. ಅದರಿಂದ ನಿಮಗೇನು ಸಮಸ್ಯೆ? ಎಂದು ಕೇಳುತ್ತಾನೆ.

ಆಗ ಆ ಹಿರಿಯರು, ನಿಮಗೆ ಮದುವೆಯಾಗಿದೆಯೇ? ಎಂದಾಗ ಅವರಲ್ಲಿ ಬಹುತೇಕರು ಹೌದು ಮದುವೆಯಾಗಿ ಮಕ್ಕಳೂ ಆಗಿದೆ ಎನ್ನುತ್ತಾರೆ. ಅರೇ ಕೆಲಸ ಕಾರ್ಯವಿಲ್ಲದೇ ಮದುವೆ ಹೇಗಾದಿರಿ? ಮದುವೆಯ ಖರ್ಛು ಹೇಗೆ ನಿಭಾಯಿಸಿದಿರಿ? ಎಂದು ಕೇಳಿದಾಗ, ಅರೇ, ಮದುವೆ ಆಗಲು ನಾವೇಕೆ ಖರ್ಛು ಮಾಡಬೇಕು? ಮುಖ್ಯಮಂತ್ರಿ ಆದರ್ಶ ವಿವಾಹ ಯೋಜನೆ (ಸರ್ಕಾರಿ ಯೋಜನೆ) ಯಿಂದ 30,000 ರೂಪಾಯಿ ಮತ್ತು ಅಂತ್ಯೋದಯ ಕನ್ಯಾ ವಿವಾಹ ಯೋಜನೆ (ಇನ್ನೊಂದು ಸರ್ಕಾರಿ ಯೋಜನೆ) ಯಿಂದ 2,50,000 ನಮಗೆ ಸಿಕ್ಕಿತು. ಅದರಲ್ಲಿ ಸರಳವಾಗಿ ಮದುವೆ ಆದೆವು ಎನ್ನುತ್ತಾನೆ.

ಸರಿ ನಿಮ್ಮ ಮಕ್ಕಳನ್ನು ನೋಡಿ ಕೊಳ್ಳುವುದಕ್ಕೆ ಮತ್ತು ಅವರಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಲಾದರೂ, ನೀವು ಕೆಲಸ ಮಾಡಬೇಕಲ್ಲವೇ? ಎಂದು ಆ ವೃದ್ಧರು ಕೇಳಿದ್ದಕ್ಕೇ, ಗಹಗಹಿಸಿ ನಕ್ಕ ಆ ಯುವಕ ಜನನಿ ಸುರಕ್ಷಾ ಯೋಜನೆ ಮತ್ತು ಭಗಿನಿ ಪ್ರಸೂತಿ ಯೋಜನೆ  ಅಡಿಯಲ್ಲಿ ನಾನು ತಿಂಗಳಿಗೆ 1,500 ರೂಪಾಯಿ ಮತ್ತು ಉಚಿತ ಹೆರಿಗೆಯ ಜೊತೆಗೆ 20,000 ರೂಪಾಯಿಗಳನ್ನು ಪಡೆದಿದ್ದೇವೆ ಇನ್ನು ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ ಸಾಕು. ಭೇಟೀ ಬಚಾವ್, ಭೇಟಿ ಪಡಾವ್ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಯೋಜನೆ ಇದ್ದರೆ, ಇನ್ನೂ ಎಲ್ಲಾ ಮಕ್ಕಳಿಗೂ  ಶಿಕ್ಷಣ, ಸಮವಸ್ತ್ರ, ಪುಸ್ತಕ, ಮಧ್ಯಾಹ್ನದ ಊಟ ಎಲ್ಲವೂ ಉಚಿತವಾಗಿದೆಯಷ್ಟೇ ಅಲ್ಲದೇ, ಮುಖ್ಯಮಂತ್ರಿಗಳ ನೌಲ್ನಿಹಾಲ್ ಮತ್ತು ಮೇಧಾವಿ ಛ್ಹಾತ್ರವೃತ್ತಿ ಯೋಜನೆ (ಸರ್ಕಾರಿ ಯೋಜನೆಗಳು) ಅಡಿಯಲ್ಲಿ ನಮ್ಮ ಮಕ್ಕಳಿಗೂ ವಿದ್ಯಾರ್ಥಿವೇತನ ಸಿಗುವುದರಿಂದ ನಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಅನಾವಶ್ಯಕವಾಗಿ ಯೋಚಿಸುವ ಅವಶ್ಯಕತೆ ಇಲ್ಲ ಎನ್ನುತ್ತಾನೆ.

freebiesಆ ಯುವಕರ ಮಾತುಗಳನ್ನು ಕೇಳಿ ತಲೆ ತಲೆ ಚಚ್ಚಿಕೊಂಡ  ಆ ವೃದ್ಧರು, ಅಲ್ಲಯ್ಯಾ, ನೀವು ಯಾವುದೇ ಕೆಲಸವನ್ನು ಮಾಡದೇ ಹೋದರೂ, ಜೀವನವನ್ನು ಹೇಗೆ ನಡೆಸುತ್ತೀರೀ? ಎಂದು ಕೇಳಿದಾಗ, ನನ್ನ ಕಿರಿಯ ಮಗಳಿಗೆ ಸರಕಾರದಿಂದ ಸೈಕಲ್ ಸಿಕ್ಕಿದೆ. ನನ್ನ ಮಗನಿಗೆ ಲ್ಯಾಪ್‌ಟಾಪ್ ಸಿಕ್ಕಿದೆ. ನನ್ನ ತಂದೆ-ತಾಯಿಗೆ ವೃದ್ಧಾಪ್ಯ ಪಿಂಚಣಿ ಸಿಗುತ್ತದೆ. ಅದರ ಜೊತೆಗೆ ಗೃಹಲಕ್ಷಿ ಯೋಜನೆಯಡಿಯಲ್ಲಿ ತಿಂಗಳಿಗೆ ಎರಡು ಸಾವಿರವನ್ನು ಸರ್ಕಾರವೇ ಕೊಡುತ್ತದೆ. ಮನೆಗೆ ಜಲ್ ಜೀವನ್ ಆಶ್ರಯದಲ್ಲಿ  ನೀರು ಮತ್ತು ಗೃಹಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಸಿಗುತ್ತದೆ. ಇನ್ನು ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತೀ ತಿಂಗಳೂ ಮನೆಯ ಪ್ರತೀ ಸದಸ್ಯರಿಗೂ ತಲಾ ಐದು ಕೆಜಿ ಅಕ್ಕಿಯನ್ನು ಕೊಡುತ್ತಿದ್ದಾರೆ. ಈಗ  ಅದರ ಜೊತೆಗೆ ಎಣ್ಣೆ ಬೇಳೆಯನ್ನೂ ಕೊಡುತ್ತೇವೆ ಎಂದಿದ್ದಾರೆ

ಇನ್ನು ನಮ್ಮ ಮನೆಯ ಹೆಣ್ಣು ಮಕ್ಕಳು ಎಲ್ಲಿಗೇ ಹೋಗಬೇಕೆಂದರೂ ಸರ್ಕಾರಿ ಕೆಂಪು ಬಸ್ಸುಗಳಲ್ಲಿ ಉಚಿತವಾಗಿ ಹೋಗಬಹುದು, ನಮ್ಮ ತಂದೆ ತಾಯಿಯರು ತೀರ್ಥಯಾತ್ರೆಗೆ ಹೋಗಬೇಕೆಂದರೂ, ಅದಕ್ಕೂ ಮುಖ್ಯಮಂತ್ರಿಗಳ ತೀರ್ಥ ಯಾತ್ರೆ ಯೋಜನೆ ಇದೆ, ಈಗಾಗಲೇ  ಅದರ ಸದ್ಬಳಕೆ ಮಾಡಿಕೊಂಡು ನಮ್ಮ ತಂದೆ ತಾಯಿಯರನ್ನು ಕಾಶೀ ರಾಮೇಶ್ವರ, ಅಯೋಧ್ಯ ಮಥುರಾ ಪ್ರಯಾಗಕ್ಕೆ ಕಳುಹಿಸಿಕೊಟ್ಟಿದ್ದೇವೆ.

ಸಣ್ಣ ಪುಟ್ಟ ಖಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಔಷಧೋಪಚಾರಗಳು ದೊರಕುತ್ತವೆ. ಇನ್ನೂ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ, ನಮ್ಮ ಬಳಿ ಆಯುಷ್ಮಾನ್ ಕಾರ್ಡ್ ಇದೆ.  ಅದರಲ್ಲಿ ನಮಗೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸಿಗುತ್ತದೆ. ಇನ್ನು ಮನೆಯಲ್ಲಿ ಯಾರಾದರೂ ಮೃತರಾದಲ್ಲಿ ಅವರ  ಅಂತ್ಯಕ್ರಿಯೆಗೂ ಯಾವುದೇ  ಖರ್ಚು ಮಾಡಬೇಕಿಲ್ಲ. ಅದಕ್ಕೂ 1 ರೂಪಾಯಿ ವಿದ್ಯುತ್ ಸ್ಮಶಾನವಿದೆ.

shadi_Baghyaಅಬ್ಬಾ ಅದಲ್ಲಾ ಬಿಡಿ. ನಿಮ್ಮ ಮಕ್ಕಳ ಮದುವೆಯನ್ನಾದರೂ ಮಾಡಲು ನಿಮಗೆ ಹಣಬೇಕಲ್ಲವೇ?  ಎಂದು ಕೇಳಿದರೆ,  ಅಯ್ಯೋ  ಅದಕ್ಕಿನ್ನೂ ತುಂಬಾ ದಿನವಿದೆ. ಈಗಾಗಲೇ ಮುಸಲ್ಮಾನರಿಗೆ ಶಾದಿ ಭಾಗ್ಯ ಕೊಟ್ಟಿರುವ ಹಾಗೆ ಅಷ್ಟರೊಳಗೆ ಬರುವ ಮತ್ಯಾವುದೋ ಸರ್ಕಾರ, ಎಲ್ಲರಿಗೂ ಮದುವೆ ಭಾಗ್ಯದ ಯೋಚನೆ ತಂದೇ ತರುತ್ತಾರೆ. ಹಾಗಾಗಿ ಅದರ ಬಗ್ಗೆ ಹೆಚ್ಚಿಗೆ ಯೋಚಿಸುವ ಅವಶ್ಯಕತೆ ಇಲ್ಲಾ ಬಿಡಿ. ನಮಗೇನಿದ್ದರೂ ನಿಮ್ಮಂತಹವರು ಮತ್ತು ನಿಮ್ಮ ಮಕ್ಕಳ ಬಗ್ಗೆಯೇ ವಿಶೇಷ ಕಾಳಜಿ. ದೇವರ ದಯೆಯಿಂದ ನಿಮ್ಮ ಮಕ್ಕಳೆಲ್ಲರೂ ಚೆನ್ನಾಗಿ ಓದಿ ದೊಡ್ಡ ದೊಡ್ಡ ಹುದ್ದೆಯನ್ನು ಪಡೆದು ಲಕ್ಷ ಲಕ್ಷ ಹಣವನ್ನು ಸಂಪಾದಿಸಿ  ಅದಕ್ಕೆ ತಕ್ಕಂತೆ ತಪ್ಪದೇ ತೆರಿಗೆಯನ್ನು ಕಟ್ಟುವಂತಾಗಬೇಕು. ಅದೇ ರೀತಿ  ಒಳ್ಳೆಯ ಮಳೆಯಾಗಿ ರೈತರು ಉತ್ತಮವಾದ ಬೆಳೆಯನ್ನು ಬೆಳೆದು ಅದಕ್ಕೆ ಸರ್ಕಾರವು ಉತ್ತಮ ಬೆಂಬಲ ಬೆಲೆಯನ್ನು ನೀಡಿ ಖರೀಧಿಸಿ ಮತ್ತೆ ನಮಗೆಲ್ಲರಿಗೂ ಉಚಿತವಾಗಿ ನೀಡುವಂತಾದಾಗಲೇ ನಾವೆಲ್ಲರೂ ಆರಾಮವಾಗಿ ಇರಬಹುದು, ಇಷ್ಟೆಲ್ಲಾ ಸೌಲಭ್ಯಗಳು ಇರುವಾಗ ನಾವೇಕೆ ಕಷ್ಟ ಪಟ್ಟು ಕೆಲಸ ಮಾಡಬೇಕು  ಅಲ್ವೇ? ಎಂದು ದೇಶಾವರಿ ನಗೆ ಬಿರೀತ್ತಲೇ,

vilalge2ನೀವು ಕಾಫೀ ಕುಡೀತೀರಾ? ಇಲ್ಲಾ ಟೀನೋ? ಎಂದು ಕೇಳುತ್ತಾ, ಅಣ್ಣಾ! ನನ್ನ ಲೆಕ್ಕದಲ್ಲಿ ಅವರಿಗೆ ಏನು ಬೇಕೋ ಅದನ್ನು ಕೊಡಿ ಎಂದು ಅಂಗಡಿಯವರಿಗೆ ಹೇಳಿದಾಗ, ಇಲ್ಲಾಪ್ಪಾ ನನಗೆ ಕಾಫೀ, ಟೀ ಯಾವುದರ ಅಭ್ಯಾಸವೂ ಇಲ್ಲಾ!! ಎಂದು ಹೇಳುತ್ತಾ ಇಂದಿನ ಯುವಕರ ಮನಸ್ಥಿತಿಯನ್ನು ಕಣ್ಣಾರೆ ಕಂಡು ಭಾರದ ಹೃದಯದಿಂದ ಮರಳಿದರು.

neharuಇಷ್ಟೆಲ್ಲಾ ಓದಿದ ಮೇಲೆ ಇದು ನಿಜವಾಗಿಯೂ  ಉತ್ಪ್ರೇಕ್ಷೆಯೆನಿಸದೇ, ಭಾರತದ ಬಹುತೇಕ ರಾಜ್ಯಗಳಲ್ಲಿ ನಡೆಯುತ್ತಿರುವ ವಾಸ್ತವದ ಸಂಗತಿಯಾಗಿದೆ. ತಮ್ಮ ಅಧಿಕಾರದ ಆಸೆಗಳಿಗಾಗಿ ಜನರಿಗೆ ವಿವಿಧ ರೀತಿಯ ಭಾಗ್ಯಗಳ ಮೂಲಕ ಆಮೀಷವನ್ನು ನೀಡುವ ಮೂಲಕ ದೇಶದ ಯುವಜನತೆಯನ್ನು ಸೋಮಾರಿಗಳನ್ನಾಗಿಸುತ್ತಿರುವ ಸಂಧರ್ಭದಲ್ಲಿ ಭಾರತದ ಪ್ರಥಮ ಪ್ರಧಾನಿಗಳಾಗಿದ್ದ ಜವಹರ್ ಲಾಲ್ ನೆಹರು ಅವರು ಹೇಳುತ್ತಿದ್ದ  ಆರಾಮ್ ಹರಾಮ್ ಹೈ! ಎಂಬ ಎಚ್ಚರಿಕೆಯ ಮಾತು ನೆನಪಾಗುತ್ತದೆ.

ಇಡೀ ಪ್ರಪಂಚದಲ್ಲೇ ಎರಡನೇ ಅತಿ ದೊಡ್ದ ಜನಸಂಖ್ಯೆಯನ್ನು ಹೊಂದಿರುವಂತಹ ನಮ್ಮ ಭಾರತ, ಇನ್ನೇನು ಕೆಲವೇ ಕೆಲವು ವರ್ಷಗಳಲ್ಲಿ ಚೀನಾ ದೇಶವನ್ನು ದಾಟಿ ಮುನ್ನುಗ್ಗುವ ಭರದಲ್ಲಿ ಸಾಗುತ್ತಿದೆ. ಆದರೆ ನಾವು ಚೀನಾದೊಡನೆ ಜನಸಂಖ್ಯೆಯಲ್ಲಿ ಸ್ಪರ್ಧೆಗೆ ಇಳಿಯದೇ ಅವರ  ಆರ್ಥಿಕತೆ ಮತ್ತು ಅವರಲ್ಲಿನ ತಂತ್ರಜ್ಞಾನದ ವಿರುದ್ಧ ಹೋರಾಡಬೇಕಿದೆ. ಪ್ರಸ್ತುತವಾಗಿ ಇಡೀ ಪ್ರಪಂಚದಲ್ಲಿ ಅತ್ಯಂತ ಹೆಚ್ಚಿನ ಯುವ ಜನತೆಯನ್ನು ಹೊಂದಿರುವಂತಹ ದೇಶ ನಮ್ಮ ಭಾರತವಾಗಿದ್ದು ಇಲ್ಲಿನ ಯುವಜನರ ಶಿಕ್ಷಣ, ಸಂಸ್ಕಾರ ಮತ್ತು ಕಾರ್ಯತತ್ಪರತೆಯಿಂದಾಗಿಯೇ ಇಡೀ ವಿಶ್ವಾದ್ಯಂತ ನಮ್ಮ ಭಾರತೀಯರು ಕೆಲಸ ಮಾಡುತ್ತಿರುವುದನ್ನು ಕಾಣಬಹುದಗಿದೆ. ದುರದೃಷ್ಟವಷಾತ್ ರಾಜಕಾರಣಿಗಳ ಅಧಿಕಾರದ ತೆವಲಿಗಾಗಿ ಅವರು ಜನರ ತೆರಿಗೆ ಹಣ ಮತ್ತು ವಿದೇಶದಿಂದ ಸಾಲ ಸೋಲ ಮಾಡಿ, ಈ ರೀತಿಯ ಬಿಟ್ಟಿ ಭಾಗ್ಯಗಳನ್ನು ಕೊಡುವ ಮೂಲಕ ಭಾರತೀಯ ಯುವಕರನ್ನು ಸೋಮಾರಿಗಳನ್ನು ಮಾಡುತ್ತಿರುವುದರ ವಿರುದ್ಧ ಸಮಸ್ತ ಭಾರತೀಯರೂ ಎಚ್ಚೆತ್ತಿಕೊಳ್ಳಲೇ ಬೇಕಾಗಿದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

ಈ ಲೇಖನ ಸಾಮಾಜಿಕ ಜಾಲತಾಣವೊಂದರಲ್ಲಿ ಓದಿದ ಆಂಗ್ಲ ಸಂದೇಶದ ಭಾವಾನುವಾದವಾಗಿದೆ.

Leave a comment