ಕೆಲವು ದಿನಗಳ ಹಿಂದೆ ಸನಾತನ ಧರ್ಮದ ಆಚಾರ ಮತ್ತು ವಿಚಾರಗಳ ಕುರಿತಾಗಿ ಬೌದ್ಧಿಕ್ ನೀಡಲು ಹೋಗಿದ್ದಾಗ, ಪ್ರಶ್ನೋತ್ತರದ ಸಮಯದಲ್ಲಿ ಹೆಣ್ಣುಮಕ್ಕಳಿಗೆ ಋತುಸಾವ್ರವಾದಾಗ ಮೂಲೆಯಲ್ಲಿ ಏಕೆ ಕೂರಿಸುವುದು ಮಹಿಳೆಯರ ಮೇಲೆ ಮಾಡುವ ದೌರ್ಜನ್ಯವಲ್ಲವೇ? ಇತ್ತಿಚೆಗಂತೂ ಎಲ್ಲೆಡೆಯಲ್ಲೂ ಮಹಿಳೆಯರು ಅಬಲೆಯರಲ್ಲಾ! ಸಬಲೆಯರು ಅವರಿಗೂ ಪುರುಷರ ಸರಿಸಮನಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುವ ಸಾಮರ್ಥ್ಯವಿದೆ ಎಂದು ಹೋರಾಡುತ್ತಿರುವ ಸಮಯದಲ್ಲಿ ಇನ್ನೂ ಮಹಿಳೆಯರಿಗೆ ದೇವಾಲಯದೊಳಕ್ಕೆ ಬಿಟ್ಟುಕೊಳ್ಳುವುದಿಲ್ಲಾ ಇವೆಲ್ಲವ ಕಾರಣಗಿಳಿಂದಾಗಿ ಜನರು ಹಿಂದೂ ಧರ್ಮದಿಂದ ಇತರೇ ಧರ್ಮದ ಬಗ್ಗೆ ಆಕರ್ಶಿತರಾಗುತ್ತಿದ್ದಾರೆ ಎಂದೆನಿಸುತ್ತಿದೆ ಇದಕ್ಕೆ ನಿಮ್ಮ ಅಭಿಪ್ರಾಯವೇನು? ಎಂದು ಕೇಳಿದರು.
ನಿಜ ಹೇಳಬೇಕೆಂದರೆ, ಅವರು ಕೇಳಿದ ಪ್ರಶ್ನೆ ವಸ್ತುನಿಷ್ಟ ಮತ್ತು ಸೂಕ್ತ ಎನಿಸಿದರೂ, ಸಾರ್ವಜನಿಕವಾಗಿ ಅದರ ಕುರಿತು ಮಾತಾನಾಡುವುದು ಹೇಗೆ ಎಂಬ ಜಿಜ್ಞಾಸೆ ಮೂಡಿತಾದರೂ, ಸಿಕ್ಕ ಸಮಯವನ್ನು ಸೂಕ್ತವಾಗಿ ಬಳಸಿಕೊಳ್ಳದೇ ಹೋದಲ್ಲಿ ಈ ರೀತಿಯ ಸತ್ ಸಂಪ್ರದಾಯದ ಹಿಂದಿರುವ ಮಹತ್ವದ ಅರಿವನ್ನು ಮೂಡಿಸಲು ಸಾಧ್ಯವಾಗದೇ ಹೋದಾಗ ಮತ್ತಷ್ಟು ಮುಜುಗರವನ್ನು ಅನುಭವಿಸಬೇಕಾಗುತ್ತದೆ ಎಂದು ಭಾವಿಸಿ, ನಮ್ಮ ತಾಯಿ, ಅಕ್ಕ, ತಂಗಿಯರು, ಮಡದಿ ಮತ್ತು ಮಗಳ ಜೊತೆ ಐದು ದಶಕಗಳನ್ನು ಕಳೆದಿರುವ ಅನುಭವದಿಂದ ಈ ಲೇಖನವನ್ನು ಹಂಚಿಕೊಳ್ಳುತ್ತಿದ್ದೇನೆ.
ಮುಟ್ಟು
ನಾವೆಲ್ಲಾ ಚಿಕ್ಕವರಿರುವಾಗ ನಮ್ಮ ತಾಯಿ ತಿಂಗಳಲ್ಲಿ ಮೂರು ದಿನಗಳ ಕಾಲ ಮುಟ್ಟು ಎಂದು ಮನೆಯ ಮೂಲೆಯೊಂದರಲ್ಲಿ ಕುಳಿತು ಕೊಂಡಾಗ, ಅವರನ್ನು ಯಾರು ಮುಟ್ಟಬಾರದು ಎನ್ನುತ್ತಿದ್ದರು. ಆಂತಹ ದಿನಗಳಲ್ಲಿ ನಮ್ಮ ತಂದೆಯವರೇ ತಿಂಡಿ ಅಡುಗೆ ಮಾಡಿ ಕೆಲಸಕ್ಕೆ ಹೋಗುತ್ತಿದ್ದರೆ, ಇನ್ನೂ ಕೆಲವು ಸಮಯಗಳಲ್ಲಿ ಊರಿನಿಂದ ಬಂದಿರುತ್ತಿದ್ದ ಚಿಕ್ಕಂಮ್ಮದಿರೋ ಇಲ್ಲವೇ ನಮ್ಮ ಚಿಕ್ಕಂಮ್ಮಂದಿರ ವಯಸ್ಸಿನ ನಮ್ಮ ಅಕ್ಕ ಪಕ್ಕದ ಮನೆಯ ಹೆಣ್ಣು ಮಕ್ಕಳು ಬಂದು ಅಡುಗೆ ಮಾಡುವುದೋ ಇಲ್ಲವೇ ಮಾಡಿಟ್ಟ ಅಡುಗೆಯನ್ನು ನಮಗೆ ಬಡಿಸಿ ಹೋಗುತ್ತಿದ್ದರು. ನಾವು ಸ್ವಲ್ಪ ದೊಡ್ಡವರಾಗಿ ಪಾತ್ರೆಗಳನ್ನು ಎತ್ತುವಷ್ಟರ ಮಟ್ಟಿಗೆ ಸಧೃಢರಾದಾಗ, ಅಮ್ಮ ದೂರದಿಂದಲೇ ಅಕ್ಕಿ ಇಷ್ಟು ಹಾಕು, ಬೇಳೇ ಇಷ್ಟು ಹಾಕು ಎಂದು ಹೇಳುತ್ತಿದ್ದಕ್ಕೆ ಅನುಗುಣವಾಗಿ ನಾವುಗಳು ಮಾಡುತ್ತಲೇ ಹೋದ ಕಾರಣ, ನಮಗೇ ಅರಿವಿಲ್ಲದಂತೆ ಸಹಜವಾಗಿಯೇ ನಮಗೆಲ್ಲರಿಗೂ ಅಡುಗೆ ಮಾಡುವುದರಲ್ಲಿ ಅಸಕ್ತಿ ಮೂಡುವಂತಾಗಿ ಇನ್ನೂ ಸ್ವಲ್ಪ ದೊಡ್ಡವರಾದ ನಂತರ ಅಮ್ಮನ ನೆರವಿಲ್ಲದೆಯೇ ಹೊಸ ಹೊಸ ಅಡುಗೆಯ ಪ್ರಯೋಗ ಮಾಡಿ ಪಾತ್ರೆಯನ್ನು ಸೀದಿಸಿಯೋ ಇಲ್ಲವೇ ಮತ್ತಾವುದೋ ಅವಘಡವನ್ನು ಮಾಡಿ ಅಬ್ಬಬ್ಬಾ ಈ ಮೂರು ದಿನಗಳಲ್ಲಿ ನಿಮ್ಮೊಂದಿಗೆ ಏಗುವುದು ಸಾಕು ಮತ್ತು ಆದಾದ ನಂತರ ನೀವು ಮಾಡಿಟ್ಟ ಗಲೀಜನ್ನು ಶುದ್ದೀಕರಣ ಮಾಡುವುದೂ ಸಾಕು ಎಂದು ನಮ್ಮಮ್ಮ ಹೇಳುತ್ತಿದ್ದದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ.
ಮೈನೆರದಳು/ದೊಡ್ಡವಳಾದಳು
ನಾವು ಹೈಸ್ಕೂಲ್ ಓದುತ್ತಿರುವ ಸಮಯದಲ್ಲಿ ತರಗತಿಯಲ್ಲಿ ಹೆಣ್ಣು ಮಕ್ಕಳು ಇದ್ದಕ್ಕಿದ್ದಂತೆಯೇ ಮಿಸ್ ಎಂದು ನಿಂತು ಕೊಳ್ಳುತ್ತಿದ್ದಂತೆಯೇ ಟೀಚರ್ ಆವಳ ಬಳಿ ಹೋಗಿ ಗುಟ್ಟಾಗಿ ಮಾತನಾಡಿ ಅವಳ ಮನೆ ತಿಳಿದ್ದವರ ಅಕ್ಕ ಪಕ್ಕದ ಹುಡುಗಿಯರೊಂದಿಗೆ ಅವಳನ್ನು ಮನೆಗೆ ಕಳುಹಿಸಿಕೊಟ್ಟರೆ, ಇನ್ನು ಎರಡು ಮೂರು ವಾರ ಆ ಹುಡುಗಿ ಶಾಲೆಗೆ ಚಕ್ಕರ್. ಅನೇಕ ಬಾರಿ ಅವಳಿಗೆ ಏನಾಯ್ತು ಎಂದು ಕೇಳಿದಾಗ, ಅವಳು ಮೈನೆರೆದಿದ್ದಾಳೆ ಅಂತಲೋ ಇಲ್ಲವೇ ದೊಡ್ಡವಳಾಗಿದ್ದಾಳೆ ಎಂದು ಹೇಳುತ್ತಿದ್ದಾಗ, ಅದರ ಅರ್ಥ ಗೊತ್ತಿಲ್ಲದೇ, ಕುತೂಹಲದಿಂದ ಹಾಗೆಂದರೇನೂ ಎಂದು ಕೇಳಿದರೆ ಸಾಕು, ಥೂ! ಗಂಡು ಮಕ್ಕಳು ಅದನ್ನೆಲ್ಲಾ ಕೇಳಬಾರದು ಎಂದು ಬೈಯ್ಯುತ್ತಿದ್ದ ಕಾರಣ, ನಾವುಗಳು ಸಹಾ ಅದರ ಬಗ್ಗೆ ಹೆಚ್ಚಿನ ವಿಚಾರಿಸುತ್ತಿರಲಿಲ್ಲ. ನಂತರ ನಮ್ಮ ಮನೆಯ ಅಕ್ಕ ತಂಗಿಯರು ಮೈ ನೆರೆದಾಗ, ಎರಡು ವಾರಗಳ ಕಾಲ ಅವರನ್ನು ಒಂದು ಕಡೆ ಕೂರಿಸಿ, ಪ್ರತೀ ದಿನವೂ ಸ್ನಾನ ಮಾಡಿಸಿ ಅವರಿಗೆ ಇಷ್ಟವಾದ ಒಳ್ಳೊಳ್ಳೆ ಅಡುಗೆಯನ್ನು ಮಾಡಿ ಅದರ ಜೊತೆ ಬಾದಾಮಿ, ಉತ್ತುತ್ತೇ, ಗೊಡಂಬಿ, ಕೊಬ್ಬರಿ, ಬೆಲ್ಲ ಹಾಕಿದ ಅಂಟುಂಡೆ ಮಾಡಿ ಕೊಡುತ್ತಿರುವಾಗ, ನಾವುಗಳೂ ನಾಚಿಕೆ ಬಿಟ್ಟು ಅಮ್ಮಾ ಮಾಡಿಟ್ಟಿರುತ್ತಿದ್ದ ಅಂಟುಂಡೆಯನ್ನು ಕದ್ದು ತಿಂದದ್ದೂ ಉಂಟು. ಆದಾದ ನಂತರ ನೆಂಟರಿಷ್ಟರು ಮತ್ತು ಅಕ್ಕ ಪಕ್ಕದವರನ್ನು ಕರೆದು ಅದೊಂದು ದಿನ ದೊಡ್ಡದಾದ ಸಮಾರಂಭವನ್ನು ಮಾಡಿದ ನಂತರ ಮುಂದಿನ ತಿಂಗಳಿನಿಂದ ಆಕೆಯೂ ಅಮ್ಮನಂತೆ ತಿಂಗಳಲ್ಲಿ ಮೂರು ದಿನಗಳ ಕಾಲ ಮುಟ್ಟು ಎಂದು ಮೂಲೆ ಸೇರುತ್ತಿದ್ದಳು. ಆ ಮೂರು ದಿನಗಳಲ್ಲಿ ಅಕೆಯನ್ನು ಯಾರೂ ಸಹಾ ಮುಟ್ಟುವುದಿರಲಿ, ಬೈಯ್ಯುವಂತೆಯೂ ಇರಲಿಲ್ಲ. ಒಂದು ರೀತಿ ಮಹಾರಾಣಿಯಂತೆ ನೋಡಿಕೊಳ್ಳುತ್ತಿದ್ದದ್ದನ್ನು ಕಂಡು ನಮಗೆ ಅಸೂಯೆಯಾಗಿದ್ದಂತೂ ಸುಳ್ಳಲ್ಲ.
ನಂತರ ಹತ್ತನೇ ತರಗತಿಯ ಜೀವಶಾಸ್ತ್ರದಲ್ಲಿ ಹೆಣ್ಣುಮಕ್ಕಳು ವಯಸ್ಸಿಗೆ ಬಂದಾಗ ಈ ರೀತಿಯಾಗಿ ಋತುಮತಿಯಾಗುವುದು ಸಹಜ ಪ್ರಕ್ರಿಯಾಗಿದ್ದು, ಹಾಗೆ ಋತುಮತಿಯಾದ ನಂತರ ಆಕೆಯ ಗರ್ಭಾಶಯ ಮಕ್ಕಳನ್ನು ಹೆರುವ ಸಾಮರ್ಥ್ಯವನ್ನು ಪಡೆಯುತ್ತದೆ ಎಂದು ತಿಳಿಯಿತು. ಇನ್ನು ವೈಜ್ಞಾನಿಕವಾಗಿ ಹೇಳಬೇಕೆಂದರೆ, ಹೆಣ್ಣು ಮಕ್ಕಳು ಪ್ರಾಯಕ್ಕೆ ಬಂದ ನಂತರ ಆಕೆಯ ಗರ್ಭಾಶಯದಿಂದ ಆಗುವ ರಕ್ತಸ್ರಾವವೇ ಮುಟ್ಟು ಅಥವಾ ಋತುಸ್ರಾವ. ಪ್ರಾಯದ ಹೆಣ್ಣಿಗೆ ಗರ್ಭಕೋಶದಲ್ಲಿ ಪ್ರತಿ ತಿಂಗಳೂ ಗರ್ಭ ನಿಂತು ಮಗು ಬೆಳೆಯಲು ತೆಳುವಾದ ಮಾಂಸದ ಚೀಲ ಗರ್ಭಕೋಶದಲ್ಲಿ ಋತು ಸಮಯದ 8-20ರ ಮಧ್ಯ ದಿನಗಳಲ್ಲಿ ಬೆಳೆಯುವುದು. ಆ ಸಮಯದಲ್ಲಿ ಹೆಣ್ಣಿನ ಅಂಡಾಶಯದಿಂದ ಚಿಕ್ಕ ಅಂಡವು ಬೆಳೆದು, ಅದು ಮುಟ್ಟಾದ 9-11 ದಿನಗಳ ನಂತರ ಬಂದು ಗರ್ಭಕೋಶದಲ್ಲಿ ಮೆತ್ತನೆಯ ಬೆಳೆದ ಪದರದಲ್ಲಿ ಗಂಡಿನ ವೀರ್ಯಾಣುವನ್ನು ಪಡೆಯಲು ಕಾಯುತ್ತದೆ. ಆ ಸಮಯದಲ್ಲಿ ಗಂಡಿನ ಸಂಪರ್ಕದಿಂದ ವೀರ್ಯಾಣುಗಳು ಬಾರದಿದ್ದ ಸಮಯದಲ್ಲಿ ಅವುಗಳು ನಾಶವಾಗಿ ಬೆಳೆದ ಮಾಂಸದ ತೆಳು ಗರ್ಭಚೀಲ ಕಳಚಿ ಯೋನಿಯ ಮೂಲಕ ರಕ್ತಸ್ರಾವವಾಗುತ್ತದೆ, ಈ ರೀತಿಯ ರಕ್ತಸ್ರಾವ ಸಾಮಾನ್ಯವಾಗಿ 2 ದಿನಗಳಿಂದ 7 ದಿನಗಳ ಕಾಲ ಆಗುತ್ತದೆ. ಸಾಮನ್ಯವಾಗಿ ಆರೋಗ್ಯವಂತ ಹೆಣ್ಣು ಮಕ್ಕಳಿಗೆ ಮೂರುದಿನಗಳ ಕಾಲ ರಕ್ತಸ್ರಾವ ಅಗುವುದು ಸಹಜ ಪ್ರಕ್ರಿಯೆಯಾಗಿದೆ. ಸರಳವಾಗಿ ಹೇಳಬೇಕೆಂದರೆ, ಇದು ಪ್ರಕೃತಿಯ ವಂಶವೃದ್ದಿಯ ವ್ಯವಸ್ಥೆಯ ಸಹಜ ಪ್ರಕ್ರಿಯೆಯಾಗಿದ್ದು, ಹೆಣ್ಣಿನಲ್ಲಿ ಗರ್ಭ ನಿಲ್ಲುವ ವಿಫಲತೆಯೇ ತಿಂಗಳಿಗೊಮ್ಮೆ ಯೋನಿಯಲ್ಲಿ ರಕ್ತಸ್ರಾವವಾಗುವುದು.
ಒಬ್ಬ ವಯಸ್ಕ ಮತ್ತು ಆರೋಗ್ಯವಂತ ಸ್ತ್ರೀಯರಲ್ಲಿ ಈ ರೀತಿಯಾದ ಋತುಸ್ರಾವವು 28 ದಿನಗಳಿಗೆ ಒಮ್ಮೆಯಾದರೆ, ಇನ್ನೂ ಕೆಲವರಿಗೆ ಅದು 21ರಿಂದ 45 ದಿನಗಳ ಅಂತರವಿರುತ್ತದೆ. ಇದರಲ್ಲಿ ತೀರಾ ವೆತ್ಯಾಸವಾದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮವಾದರೆ, ಗಂಡು ಮತ್ತು ಹೆಣ್ಣುಗಳ ಮಿಲನದ ನಂತರ ಒಂದರಿಂದ ಒಂದೂವರೆ ತಿಂಗಳಾದರೂ ಆಕೆಗೆ ಋತುಸ್ರಾವವಾಗದೇ ಹೋದಲ್ಲಿ ವೈದ್ಯರಿಂದ ಸೂಕ್ತವಾದ ತಪಾಸಣೆ ನಡೆಸಿದ ನಂತರ ಆಕೆ ಗರ್ಭವತಿಯೋ ಅಲ್ಲವೋ ಎಂದು ತಿಳಿಯುತ್ತಾರೆ. ಈ ರೀತಿಯ ಋತುಸ್ರಾವವು ಸಾಮಾನ್ಯವಾಗಿ 45 ಮತ್ತು 55 ವರ್ಷ ವಯಸ್ಸಿನವರೆಗೂ ಇದ್ದು ಆದಾದ ನಂತರ ಮುಟ್ಟು ನಿಂತು ಹೋಗುತ್ತದೆ. ಹೀಗೆ ಮುಟ್ಟು ನಿಂತ ಹೆಣ್ಣಿನಲ್ಲಿ ಅಂಡಾಣುಗಳು ಬಿಡುಗಡೆಯಾಗಿ ಗರ್ಭಕೋಶಕ್ಕೆ ಬರುವುದಿಲ್ಲವಾದ್ದರಿಂದ ಆಕೆ ಮುಂದೆ ಗರ್ಭವತಿ ಆಗುವುದಿಲ್ಲ.
ಹೀಗೆ ಪ್ರತೀ ತಿಂಗಳೂ ಹೆಣ್ಣು ಮಕ್ಕಳಿಗೆ ಆಗುವ ಋತುಸ್ರಾವದ ಸಮಯದಲ್ಲಿ ಅಕೆಯ ದೇಹದ ಮೇಲೆ ಭಾರೀ ಪರಿಣಾಮ ಬೀರುವುದಲ್ಲದೇ, ಅನೇಕ ಬಾರಿ ಬಹಳ ಸುಸ್ತು, ಇನ್ನೂ ಕೆಲವು ಬಾರಿ ಹೊಟ್ಟೆ ನೋವು ಆಗುವ ಪರಿಣಾಮ ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇರುವ ಕಾರಣ, ನಮ್ಮ ಪೂರ್ವಜರು ಆ ಮೂರು ದಿನಗಳ ಕಾಲ ಅವರಿಗೆ ಮನೆಯ ಎಲ್ಲಾ ಕೆಲಸಗಳಿಂದಲೂ ಮುಕ್ತಿ ನೀಡುವ ಒಂದು ಬಹಳ ಸುಂದರವಾದ ಪದ್ದತಿಯನ್ನು ಜಾರಿಗೆ ತಂದಿದ್ದರು. ಇನ್ನು ಮನೆಯಲ್ಲಿ ಚಿಕ್ಕಮಕ್ಕಳು ಹೋಗಿ ಅವರಿಗೆ ತೊಂದರೆ ಕೊಡುವುದೋ ಇಲ್ಲವೇ ನಾನಾ ರೀತಿಯ ಪ್ರಶ್ನೆ ಕೇಳುವ ಮೂಲಕ ಆಕೆಗೆ ಮುಜುಗೊರ ತಾರದಿರಲೆಂದು, ಹಾಗೆ ಸುಮ್ಮನೇ ಹೇಳಿದರೆ ಯಾರೂ ಕೇಳುವುದಿಲ್ಲ ಎಂಬ ಕಾರಣದಿಂದ, ನಮ್ಮ ಹಿರಿಯರು, ಅವಳು ಮಡಿಯಾಗಿದ್ದಾಳೆಂದೋ ಅಥವಾ ಮೈಲಿಗೆಯೆಂದೋ ಹೇಳುವ ಮೂಲಕ ಆಕೆಯನ್ನು ಯಾರೂ ಮುಟ್ಟ ಬಾರದು ಮತ್ತು ಆಕೆ ಮುಟ್ಟಿದ್ದ ಯಾವುದೇ ವಸ್ತುಗಳನ್ನೂ ನಾವುಗಳು ಮುಟ್ಟಬಾರದು ಎಂದಿದ್ದರಲ್ಲದೇ, ಆ ದಿನಗಳಲ್ಲಿ ಅವರ ದೇಹಕ್ಕೆ ಅವಶ್ಯಕವಿರುವ ಪೌಷ್ಠಿಕ ಆಹಾರಗಳನ್ನು ನೀಡುವ ಮೂಲಕ ಅವರನ್ನು ಸಧೃಢರಾಗಿಸುತ್ತಿದ್ದರು. ಈ ದಿನಗಳಲ್ಲಿ ಹೆಣ್ಣು ಮತ್ತು ಗಂಡುಗಳ ಮಿಲನವು ಸಹಾ ನಿಷಿದ್ಧವಾಗಿತ್ತು.
ಅದಲ್ಲದೇ ಅಂದಿನ ಕಾಲದಲ್ಲಿ ಈಗಿನಂತೆ ರಕ್ತಸ್ರಾವ (ಋತುಸ್ರಾವ)ವನ್ನು ಹೀರಿಕೊಳ್ಳುವ ಹೀರು ಪದರದ ಸ್ಯಾನಿಟರೀ ಪ್ಯಾಡುಗಳು ಇರದೇ, ಅದಕ್ಕೆ ಮನೆಯಲ್ಲೇ ಇದ್ದ ಹಳೆಯ ಸೀರೆಯನ್ನೇ ಬಳಸುತ್ತಿದ್ದದ್ದರಿಂದ (ಅದೆಷ್ಟೋ ಬಾರಿ ಬಚ್ಚಲು ಮನೆಯ ಮೂಲೆಯಲ್ಲಿ ಇರುತ್ತಿದ್ದ ಇದೇ ಬಟ್ಟೆಯನ್ನು ಕತ್ತರಿಸಿಕೊಂಡು ಗಾಳಿ ಪಟದ ಬಾಲಂಗೋಚಿಗೆ ಬಳಸಿಕೊಂಡು ನಂತರ ಅಮ್ಮನ ಕೈಯ್ಯಿಂದ ಪೆಟ್ಟೂ ತಿಂದದ್ದಿದೆ) ಮನೆಯಲ್ಲಿ ಓಡಾಡುವಾಗ ಆ ರಕ್ತದ ಕಲೆಗಳು ಮನೆಯಲ್ಲಿ ಬೀಳದಿರಲೆಂದೇ ಅವರನ್ನು ಒಂದು ಮೂಲೆಗೆ ಕೂರಿಸುತ್ತಿದ್ದರು ಮತ್ತು ಇದೇ ಕಾರಣಕ್ಕೆ ದೇವರ ಮನೆ ಮತ್ತು ದೇವಾಲಯಗಳಿಗೂ ಹೋಗಬಾರದು ಎನ್ನುತ್ತಿದ್ದರು ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ (ಹೆಚ್ಚಿನ ಮಾಹಿತಿ ಇದ್ದವರು ಖಂಡಿತವಾಗಿಯೂ ತಿಳಿಸಿ ಕೊಡಿ) ಹೀಗೆ ರಕ್ತಸ್ರಾವವಾದಾಗ ಸಹಜವಾಗಿಯೇ ಹೆಣ್ಣು ಮಕ್ಕಳ ದೇಹ ಬಳಲುವುದರಿಂದ ಅವರಿಗೆ ಸೂಕ್ತವಾದ ವಿಶ್ರಾಂತಿ ದೊರೆಯಲೆಂದು ಒಂದು ಕೋಣೆಯಲ್ಲಿ ಒಳ್ಳೆಯ ಆಹಾರ ಮತ್ತು ಪೌಷ್ಠಿದಾಯಕ ಪಾನೀಯಗಳನ್ನು ನೀಡುವ ಸಂಪ್ರದಾಯ ರೂಢಿಯಲ್ಲಿತ್ತು.
ಇನ್ನೂ ಕೆಲವು ಸಾಂಪ್ರದಾಯಸ್ಥರ ಮನೆಗಳಲ್ಲಿನ ಹಿರಿಯರು ಅದಕ್ಕೊಂದು ದೈವೀ ಸ್ವರೂಪವನ್ನು ಕೊಟ್ಟು ಆ ಐದು ದಿನಗಳು ಸ್ತ್ರೀಯು ಜಾಗೃತ ಶಕ್ತಿಸ್ವರೂಪಿಣಿಯಾಗಿರುತ್ತಾಳೆ ಆ ಸಮಯದಲ್ಲಿ ನಾವು ಅವಳನ್ನು ವಿನಾ ಕಾರಣ ಸಮೀಪಿಸುವುದಾಗಲೀ ಅವಳಿಗೆ ಯಾವುದೇ ತೊಂದರೆ ನೀಡದೆ, ಕಷ್ಟವಾಗದ ಹಾಗೆ ನೋಡಿಕೊಳ್ಳಬೇಕು. ಋುತುಸ್ರಾವದ ಐದು ದಿನಗಳಲ್ಲಿ ಆಕೆ ಶಕ್ತಿ ಹೀನಳಾಗಿರುತ್ತಾಳಾದ್ದರಿಂದ ಮನಸ್ಸಿಗೆ ನೋವಾಗುವ ರೀತಿ ಮಾತಾಡುವುದಾಗಲೀ ದೈಹಿಕ ಶ್ರಮದ ಕೆಲಸಗಳನ್ನಾಗಲೀ ಮಾಡಿಸಬಾರದು. ಪ್ರತಿಮಾರೂಪಿ ಪೂಜೆಯನ್ನು ಮಾಡುವ ಪರಂಪರೆಯಲ್ಲಿ ದೇವಾಲಯದ ಮೂರ್ತಿಗೆ ಶಕ್ತಿ ಬರುವುದು ಭಕ್ತರ ಪೂಜೆ ಹಾಗೂ ಪ್ರಾರ್ಥನೆಯಿಂದ. ಹಾಗಾಗಿ ಸಾಕ್ಷಾತ್ ಶಕ್ತಿ ಸ್ವರೂಪಿಯಾಗಿರುವಂತಹ ಋುತುಸ್ರಾವದ ಸ್ತ್ರೀಯರು ಪ್ರತಿಷ್ಟಿತ ಮೂರ್ತಿಯ ಶಕ್ತಿಯನ್ನೂ ಮಸುಕು ಮಾಡಬಾರದು ಮತ್ತು ಶಕ್ತಿ ವೈರುದ್ಯಗಳು ಬರಬಾರದು ಎಂದು ಈ ನಿಯಮ ಮಾಡಿದ್ದಾರೆ ಎಂದು ಹೇಳುತ್ತಿದ್ದರು.
ದುರಾದೃಷ್ಟವಷಾತ್ 80-90 ದಶಕದಲ್ಲಿ ಸ್ಯಾನಿಟರಿ ಪ್ಯಾಡ್ ತಯಾರಕರು ತಮ್ಮ ಉತ್ಪನ್ನಗಳಿಗೆ ಸೂಕ್ತವಾದ ಮಾರುಕಟ್ಟೆಯನ್ನು ಒದಗಿಸಿಕೊಳ್ಳುವ ಸಲುವಾಗಿ ಕೆಲವು ಸ್ತ್ರೀ ವಿಮೋಜನ ಸದಸ್ಯೆಯರನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು, ಹೆಣ್ಣು ಮತ್ತು ಗಂಡುಗಳಲ್ಲಿ ಯಾವುದೇ ಬೇಧ ಭಾವ ಇರಕೂಡದು. ಗಂಡು ಮಕ್ಕಳಂತೆ ಹೆಣ್ಣು ಮಕ್ಕಳೂ ಸಹಾ ಎಲ್ಲಾ ಕ್ಷೇತ್ರಗಳಲ್ಲಿಯೂ ಸಮಾನವಾಗಿ ದುಡಿಯಬಲ್ಲರು. ಪ್ರತಿ ತಿಂಗಳು ಹೆಣ್ಣು ಮಕ್ಕಳನ್ನು ಋತುಸ್ರಾವದ ಹೆಸರಿನಲ್ಲಿ ಮೂಲೆಗೆ ಕೂರಿಸುವುದು ಲಿಂಗ ತಾರತಮ್ಯ, ಹೀಗೆ ಲೊಟ್ಟೆ ಲೊಸಕು ಎಂಬ ಹಾರಾಟ ಮಾಡಿದ್ದಲ್ಲದೇ, ಹೆಣ್ಣು ಮಕ್ಕಳು ತಿಂಗಳಿನ 3-5 ದಿನಗಳಲ್ಲಿ ಸ್ವಾಭಾವಿಕವಾಗಿ ಆಗುವ ಋತುಸ್ರಾವದ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಗಳನ್ನು ಧರಿಸುವ ಮೂಲಕ ಎಲ್ಲಾ ಕೆಲಸಗಳನ್ನೂ ಮಾಡಬಲ್ಲಳು ಎಂದು ಹೇಳಿದ್ದೇ ತಡಾ, ಒಂದು ಕುರಿ ಹಳ್ಳಕ್ಕೆ ಬಿದ್ದರೆ ಅದನ್ನೇ ಅನುಸರಿಸಿದ ನೂರಾರು/ಸಾವಿರಾರು/ಲಕ್ಷಾಂತರ/ಕೋಟ್ಯಾಂತರ ಹೆಣ್ಣು ಮಕ್ಕಳು, ತಮ್ಮ ಪೂರ್ವಜರು ಅವರ ವಿಶ್ರಾಂತಿಗೆಂದೇ ಸುಂದರವಾದ ಸಂಪ್ರದಾಯದ ಮೂಲಕ ಕಟ್ಟಿಕೊಟ್ಟಿದ್ದನ್ನು ಧಿಕ್ಕರಿಸುವ ಮೂಲಕ ತಮ್ಮ ಗುಂಡಿ ತಾವೇ ತೋಡಿಕೊಂಡಿದ್ದಾರೆ. ಇಂದು ಆಧುನಿಕತೆಯ ಹೆಸರಿನಲ್ಲಿ ಬಹುತೇಕರ ಮನೆಗಳಲ್ಲಿ ಹಿಂದಿನಂತೆ ಮುಟ್ಟಿನ ನೆಪದಲ್ಲಿ ಮೂರು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವ ಸತ್ ಸಂಪ್ರದಾಯವೇ ಮಾಯವಾಗಿ ಹೋಗಿರುವುದೇ ನಿಜವಾಗಿಯೂ ಹೆಣ್ಣಿನ ಮೇಲೆ ನಡೆಯುವ ಶೋಷಣೆ/ದೌರ್ಜನ್ಯ ಎಂದರೂ ತಪ್ಪಾಗದು.
ವಿವಿದೆಡೆಯಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳಿಗೆ 6-9 ತಿಂಗಳುಗಳುಗಳ ಕಾಲ ಮಾತೃತ್ವ ರಜೆ ನೀಡುವಂತೆಯೇ, ಸ್ವಾತಂತ್ರ ಬಂದ ಇಷ್ಟು ವರ್ಷಗಳಾದ ನಂತರ ಪ್ರಸ್ತುತ ಸರ್ಕಾರ ಹೆಣ್ಣುಮಕ್ಕಳಿಗೆ ಋತುಸ್ರಾವದ ತಿಂಗಳಿನ ಆ 3 ದಿನಗಳ ಕಾಲ ರಜೆಯನ್ನು ನೀಡಬೇಕೆನ್ನುವ ಆಲೋಚನೆ ಮಾಡುತ್ತಿರುವುದು ನಿಜಕ್ಕೂ ಉತ್ತಮವಾದ ನಡೆಯಾಗಿದ್ದು, ಇದುವೇ ನಿಜವಾದ ಮಹಿಳಾ ಸಬಲೀಕರಣ ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ