ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ

ನಮ್ಮ ದೇಶ ಕಂಡ ಅದ್ಭುತ ದಾರ್ಶನಿಕ, ಅರ್ಥಶಾಸ್ತ್ರಜ್ಞ, ಇತಿಹಾಸಕಾರ, ಪತ್ರಕರ್ತ ಮತ್ತು ರಾಜಕೀಯ ಕಾರ್ಯಕರ್ತರಾಗಿದ್ದಂತಹ ಮತ್ತು ಸ್ವಾತಂತ್ರ್ಯಾ ನಂತರ  ರಾಜ ಮಹಾರಾಜರುಗಳ ಆಳ್ವಿಕೆ ಕೊನೆಯಾಗಿ ಪ್ರಜಾಪ್ರಭುತ್ವ ಸರ್ಕಾರ ಆಳ್ವಿಕೆಗೆ ಬಂದರೂ ಕಾಂಗ್ರೇಸ್ ಪಕ್ಷದ ನೆಪದಲ್ಲಿ ದೇಶದ ಆಡಳಿತ ನೆಹರು ಮತ್ತವರ ಕುಟುಂಬದ ಕಪಿಮುಷ್ಟಿಯಲ್ಲಿ ಸಿಲುಗಿದಾಗ, ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಭಾರತೀಯ ಜನಸಂಘ ಎಂಬ ರಾಜಕೀಯ ಶಕ್ತಿ ಉದಯವಾದಾಗ ಅದರ ಸಂಸ್ಥಾಪಕರಲ್ಲೊಬ್ಬರಾಗಿ ನಂತರ ಅದೇ ಭಾರತೀಯ ಜನಸಂಘ ಈಗ ಭಾರತೀಯ ಜನತಾ ಪಕ್ಷವಾಗಿ ಅರ್ಥಾತ್ ಬಿಜೆಪಿಯಾಗಿ ಮಾರ್ಪಟ್ಟು ದೇಶದಲ್ಲಿ ಸುಮಾರು 15-18 ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದರಲ್ಲಿ ಪಂಡಿತ್ ದೀನದಯಾಳ ಉಪಾಧ್ಯಾಯರ ಕೊಡುಗೆ ಅಪಾರವಾಗಿದ್ದು. ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳನ್ನು  ಪ್ರತಿಯೊಬ್ಬ ಭಾರತೀಯರು ತಿಳಿಯಲೇ ಬೇಕಾಗಿರುವುದು ಅತ್ಯಗತ್ಯವಾಗಿದೆ.

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ನಗ್ಲಾ ಚಂದ್ರಬಾನ್ ಗ್ರಾಮದಲ್ಲಿ ಪ್ರಸಿದ್ಧ ಜ್ಯೋತಿಷಿಗಳಾಗಿದ್ದ ಶ್ರೀ ಭಗವತಿ ಪ್ರಸಾದ್ ಮತ್ತು ರಾಮ್ ಪ್ಯಾರಿ ಎಂಬ ಸಂಪ್ರದಾಯಸ್ಥ ದಂಪತಿಗಳ ಮಗನಾಗಿ 1918ರ ಸೆಪ್ಟಂಬರ್ 25ರಂದು ದೀನದಯಾಳ ಉಪಾಧ್ಯಾಯರು ಜನಿಸಿದರು. ನವಜಾತ ಶಿಶುವಿನ  ಜಾತಕವನ್ನು ನೋಡಿದ ಮತ್ತೊಬ್ಬ ಪ್ರಸಿದ್ಧ ಜ್ಯೋತಿಷಿಗಳು ಈ  ಹುಡುಗ ಬೆಳೆದು ದೊಡ್ಡವನಾದ ನಂತರ  ಮಹಾನ್ ವಿದ್ವಾಂಸ, ಚಿಂತಕ, ನಿಸ್ವಾರ್ಥ ಕೆಲಸಗಾರ ಮತ್ತು ದೇಶದ  ಪ್ರಮುಖ ರಾಜಕಾರಣಿಯಾಗುತ್ತಾನೆ ಮತ್ತು  ಆತನ ಹೆಸರು ದೇಶದ ರಾಜಕಾರಣದಲ್ಲಿ ಅಜರಾಮರವಾಗುತ್ತದೆ ಎಂದು ಭವಿಷ್ಯ ನುಡಿದಾಗ ಸಂತಸಗೊಂಡ ಅವರ ಪೋಷಕರು ಎಲ್ಲಾ ಭಗವಂತನ ಇಚ್ಚೆ ಎಂದು ಸಂಭ್ರಮಿಸಿದ್ದರು. ಎಲ್ಲರೂ ಪ್ರೀತಿಯಿಂದ ಆ ಪುಟ್ಟ ಬಾಲಕನನ್ನು ದೀನ ಎಂದೇ ಕರೆಯುತ್ತಿದ್ದರು. ದುರಾದೃಶ್ಟವಷಾತ್ ದೀನದಯಾಳರಿಗೆ  3 ವರ್ಷವಿದ್ದಾಗಲೇ ಅವರ ತಂದೆಯವರ ಅಕಾಲಿಕ ಮರಣವಾದರೆ, ಅವರ ಮುಂದಿನ ಭವಿಷ್ಯವನ್ನು ರೂಪಿಸುವ ಹೊಣೆ ಹೊತ್ತ ತಾಯಿಯವರೂ ಸಹಾ ಅವರಿಗೆ  8 ವರ್ಷವಿದ್ದಾಗ ಇಹಲೋಕ ತ್ಯಜಿಸಿದಾಗ, ಅಕ್ಷರಶಃ ಅನಾಥರಾಗಿ ಹೋದರು.

ಮಕ್ಕಳ ಜವಾಬ್ಧಾರಿ ತಂದೆಯ ನಂತರ ಸೋದರ ಮಾವನದ್ದಾಗಿರುತ್ತದೆ ಎನ್ನುತ್ತದೆ ನಮ್ಮ ಶಾಶ್ತ್ರ. ಅದೇ ರೀತಿಯಲ್ಲೇ ಅವರು ತಮ್ಮ ಸೋದರ ಮಾವನ  ಊರಾದ ಸಿಕಾರ್‌ಗೆ ಬಂದು ಅಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಚಿಕ್ಕಂದಿನಿಂದಲೂ ಆಟ ಪಾಠಗಳಲ್ಲಿ ಬಹಳ ಚುರುಕಾಗಿದ್ದಲ್ಲದ್ದ ದೀನ ದಯಾಳರು  ಕೋಟಾ, ರಾಜ್‌ಗಢ, ಸಿಕರ್ ಮತ್ತು ಪಿಲಾನಿಯಂತಹ ವಿವಿಧ ಸ್ಥಳಗಳಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿದರು. ರಾಜಸ್ಥಾನದ ಸಿಕಾರ್‌ನಲ್ಲಿ ಪ್ರೌಢಶಾಲೆಯಲ್ಲಿರುವಾಗ ನಡೆದ ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದದ್ದಕ್ಕಾಗಿ, ಅಂದಿನ ಸಿಕರ್‌ನ ಮಹಾರಾಜರಾಗಿದ್ದ ಶ್ರೀ ಕಲ್ಯಾಣ್ ಸಿಂಗ್ ಅವರು ದೀನ ದಯಾಳರಿಗೆ ಚಿನ್ನದ ಪದಕವನ್ನು ನೀಡಿ, ಪುಸ್ತಕಗಳ ಖರೀದಿಗೆಂದು ಅಂದಿನ ಕಾಲದಲ್ಲೇ ಸುಮಾರು 250ರೂಪಾಯಿಗಳನ್ನು ನೀಡಿದ್ದಲ್ಲದೇ, ಮಾಸಿಕ 10 ರೂಗಳ ವಿದ್ಯಾರ್ಥಿ ವೇತನವನ್ನು ನೀಡಿ ಆತನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟರು.

ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೀನದಯಾಳರು ಪಿಲಾನಿಗೆ ಬಂದು 1937ರಲ್ಲಿ ನಡೆದ ಬೋರ್ಡ್ ಪರೀಕ್ಷೆಯಲ್ಲಿ ಅಗ್ರಸ್ಥಾನಗಳಿಸಿದ್ದಲ್ಲದೇ, ಎಲ್ಲಾ ವಿಷಯಗಳಲ್ಲಿಯೂ ಡಿಸ್ಟಿಂಕ್ಷನ್ ಪಡೆದರು. ಅವರು ಬಿರ್ಲಾ ಕಾಲೇಜಿನಲ್ಲಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಮೊದಲ ವಿದ್ಯಾರ್ಥಿಯಾಗಿದ್ದರು ಮತ್ತು ಈ ಅದ್ಭುತ ಸಾಧನೆಗಾಗಿ ಅವರಿಗೆ  ಮತ್ತೊಮ್ಮೆ ಚಿನ್ನದ ಪದಕ, ರೂ. 10 ಮತ್ತು ರೂ. 250 ರ ಮಾಸಿಕ ವಿದ್ಯಾರ್ಥಿವೇತನವನ್ನು ಘನ ಶ್ಯಾಮ್ ದಾಸ್ ಬಿರ್ಲಾ ಅವರಿಂದ ಪಡೆದರು. ನಂತರ ದೀನ್ ದಯಾಳರು 1939 ರಲ್ಲಿ ಕಾನ್ಪುರದ ಸನಾತನ ಧರ್ಮ ಕಾಲೇಜಿನಲ್ಲಿ ಮೊದಲ ವಿಭಾಗದಲ್ಲಿ ಬಿಎ ಮಾಡಿದರು ಮತ್ತು ಆಗ್ರಾದ ಸೇಂಟ್ ಜಾನ್ಸ್ ಕಾಲೇಜಿಗೆ ಸೇರಿದರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

ಇದೇ ಸಮಯದಲ್ಲೇ  ಅವರ ಮಿತ್ರರಾದ ಶ್ರೀ ಬಲವಂತ ಮಹಾಶಬ್ದೆ ಎಂಬುವರ ಮೂಲಕ ಅವರಿಗೆ  ಆರ್‌ಎಸ್‌ಎಸ್‌ ಪರಿಚಯವಾಗಿ, ನಂತರ ಶ್ರೀ ನಾನಾ ಜಿ ದೇಶಮುಖ್ ಮತ್ತು ಶ್ರೀ ಭಾವು ಜುಗಾಡೆ ಅವರ ಪ್ರಭಾವಕ್ಕೆ ಒಳಗಾಗಿ, ಸಂಘ ಶಿಕ್ಷಾವರ್ಗಕ್ಕೆ ಹೋದಾಗ, ಅಲ್ಲಿ ಸಂಘದ  ಅದ್ಯ ಸರ ಸಂಘಚಾಲಕರಾಗಿದ್ದ ಶ್ರೀ ಕೇಶವ ಬಲಿರಾಂ ಹೆಡ್ಗೇವಾರ್ ಅವರನ್ನೂ ಸಹಾ ಭೇಟಿ ಮಾಡುವ ಅವಕಾಶ ಸಿಕ್ಕಿ ಅವರ ಮಾತುಗಳಿಂದ ಭಾರೀ ಪ್ರಭಾವಿತರಾಗಿ ಸಂಘದ ಸಕ್ರೀಯ ಸ್ವಯಂಸೇವಕರಾದರು. ತಮ್ಮ ಬಿಎ ಪದವಿ ಮುಗಿಸಿದ ನಂತರ ಎಂಎ ವ್ಯಾಸಂಗ ಮಾಡಲು ಆಗ್ರಾಕ್ಕೆ ತೆರಳಿದರಾದರೂ, ಅದೇ ಸಂಧರ್ಭದಲ್ಲಿ ಅವರ  ಸೋದರ ಸಂಬಂಧಿ ರಮಾ ದೇವಿಯವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಅವರ ಆರೈಕೆಯ ಜವಾಬ್ಧಾರಿ ದೀನದಯಾಳರಿಗೆ ಬಂದು, ಚಿಕಿತ್ಸೆಯು ಫಲಕಾರಿಯಾಗದೇ ಅಕೆ ನಿಧನರಾದಾಗ, ದೀನದಯಾಳ್ರು  ತುಂಬಾ ಖಿನ್ನತೆಗೆ ಒಳಗಾಗಿದ್ದ ಪರಿಣಾಮ ತಮ್ಮ ಎಂಎ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕಾಗಿಯೇ ಅವರಿಗೆ ಸಿಕರ್‌ನ ಮಹಾರಾಜರು ಮತ್ತು ಶ್ರೀ. ಬಿರ್ಲಾ  ಅವರುಗಳು ನೀಡುತ್ತಿದ್ದ ಶಿಷ್ಯವೇತನವೂ ನಿಂತು ಹೋಯಿತು,

dd2ಇದೇ ಸಮಯದಲ್ಲೇ ತಮ್ಮ  ಅತ್ತೆಯವರ ಒತ್ತಾಸೆಯ ಮೇರೆಗೆ Provincial Services Exam ಬರೆಯಲು ಅಂದಿನ ಕಾಲದ ಸಹಜ ಭಾರತೀಯ ಉಡುಗೆಯಾದ  ಧೋತಿ ಮತ್ತು ಕುರ್ತಾದೊಂದಿಗೆ ತಲೆಯ ಮೇಲೆ ಟೋಪಿಯೊಂದಿಗೆ ದೀನ ದಯಾಳರು ಹೋದಾಗ,  ಆ ಪರೀಕ್ಷೆ ಬರೆಯಲು ಬಂದಿದ್ದ ಇತರೇ ಅಭ್ಯರ್ಥಿಗಳು ಅಂದಿನ ಸರ್ಕಾರವನ್ನು ಮೆಚ್ಚಿಸುವ ಸಲುವಾಗಿ ಪಾಶ್ಚಿಮಾತ್ಯ ಉಡುಗೆಯಾದ ಸೂಟ್‌ ಬೂಟು ಧರಿಸಿದ್ದವರು, ದೀನದಯಾಳರನ್ನು ನೋಡಿ  ಪಂಡಿತ್ ಜೀ ಎಂದು ಅಪಹಾಸ್ಯ ಮಾಡಿದರು. ಕಾಕತಾಳೀಯವೆಂದರೆ ಅಂದು ಅಪಹಾಸ್ಯಕ್ಕೆಂದು ಕರೆದ ಪಂಡಿತ್ ಮುಂದೆ ಆವರ ಹೆಸರಿನೊಂದಿಗೇ  ಅಜರಾಮರವಾಗಿ ಸೇರಿಕೊಂಡು ಕೋಟ್ಯಾಂತರ ಜನರೆಲ್ಲರೂ ಪ್ರೀತಿಯಿಂದ ಮತ್ತು ಆಷ್ಟೇ ಗೌರವದಿಂದ ಅವರನ್ನು ಪಂಡಿತ್ ದೀನ ದಯಾಳ್  ಉಪಾಧ್ಯಾಯ   ಎಂದೇ ಕರೆಯಲಾರಂಭಿಸಿದರು.

ಅಷ್ಟೆಲ್ಲಾ ಅಪಹಾಸ್ಯಗಳ ನಡುವೆಯೂ ಆ ಪರೀಕ್ಷೆಯಲ್ಲಿ ಅವರೇ ಅಗ್ರಸ್ಥಾನ ಪಡೆದದರಾದರೂ, ಅವರು ಸರ್ಕಾರೀ ಕೆಲಸಕ್ಕೆ ಸೇರಲು ಇಚ್ಚಿಸದೇ, 1942ರಲ್ಲಿ ತಮ್ಮ ಸೋದರ ಮಾವನವರ ಅನುಮತಿ ಪಡೆದು ಸಂಘದ ಪೂರ್ಣಾವಧಿ ಪ್ರಚಾರಕರಾಗಿ ಉತ್ತರ ಪ್ರದೇಶದ ಲಖಿಂಪುರ ಜಿಲ್ಲೆಗೆ ಸಂಘಟಕರಾಗಿ ತೆರಳಿದರು ನಂತರ ಯುಪಿಯಲ್ಲಿ ಆರ್‌ಎಸ್‌ಎಸ್‌ನ ಪ್ರಾಂತೀಯ ಸಂಘಟಕರಾದರು.

dd3ನೆಹರು ಅವರ ಸಂಪುಟದಲ್ಲಿ ಸಚಿವರಾಗಿದ್ದ ಶ್ಯಾಮ ಪ್ರಸಾದ್ ಮುಖರ್ಜಿ ಅವರು ಮಹಾತ್ಮ ಗಾಂಧಿಯವರ ಹತ್ಯೆಯ ನಂತರ RSS ಮೇಲಿನ ನಿಷೇಧ ಹೇರಿದ್ದನ್ನು ಸರ್ಕಾರದಲ್ಲಿದ್ದು ಕೊಂಡೇ ಬಲವಾಗಿ ಖಂಡಿಸಿದ್ದರು ನಂತರ ಅಂದಿನ ಪ್ರಧಾನಿಗಳಾಗಿದ್ದ ನೆಹರು ಅವರು   ಲಿಯಾಕತ್ ಒಪ್ಪಂದ ಮಾಡಿಕೊಂಡ ನಂತರ  ಅದನ್ನು ತೀವ್ರವಾಗಿ ಖಂಡಿಸಿದ ಮುಖರ್ಜಿಯವರು ಸರ್ಕಾರದಿಂದ ಹೊರ ಬಂದು ಬಲಪಂಥೀಯ ರಾಜಕೀಯ ಪಕ್ಷವನ್ನು ಆರಂಭಿಸುವ ಸಲುವಾಗಿ ಸಂಘದ ಎರಡನೇ ಸರ ಸಂಘ ಚಾಲಕರಾಗಿದ್ದ ಶ್ರೀ ಮಾಧವ ಸದಾಶಿವ ಗೋಳ್ವಾಲ್ಕರ್ ಅವರನ್ನು ಸಂಪರ್ಕಿಸಿ ಉತ್ಕಟ ದೇಶ ಭಕ್ತಿ, ಸಂಘಟನಾ ಚತುರತೆ, ಉತ್ತಮ ವಾಗ್ಮಿಗಳಾಗಿರುವ ಕೆಲವು ತರುಣರನ್ನು ತಮ್ಮ ಪಕ್ಷ ಸಂಘಟನೆಗೆ ಕಳುಹಿಸುವಂತೆ ಕೋರಿಕೊಂಡಾಗ, ಗುರುಜೀಯವರು ಸೂಚಿಸಿದ ಮೊದಲ ಹೆಸರೇ ದೀನದಯಾಳರದ್ದಾಗಿತ್ತು.

janasanghaಹೀಗೆ ಗುರೂಜಿಯವರ ಸಲಹೆಯಂತೆಯೇ, 21 ಅಕ್ಟೋಬರ್ 1951ರಲ್ಲಿ ದೆಹಲಿಯಲ್ಲಿ ಸಂಘದ ಸಹಯೋಗದೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ “ರಾಷ್ಟ್ರೀಯ ಪರ್ಯಾಯ ಪಕ್ಷವಾಗಿ  ಜನಸಂಘ ಎಂಬ ಪಕ್ಷ ಆರಂಭಿಸಿ, ಶ್ಯಾಮಾ ಪ್ರಸಾದ್ ಮುಖರ್ಜಿ, ಬಲರಾಜ್ ಮಧೋಕ್ ಮತ್ತು ದೀನ ದಯಾಳ್ ಉಪಾಧ್ಯಾಯರು ಸೇರಿಕೊಂಡು ಮೂವರು ಸ್ಥಾಪಕ ಸದಸ್ಯರಾದರು. ದೀನದಯಾಳರು  1967ರವರೆಗೂ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ  ದೇಶಾದ್ಯಂತ ಅವಿರತವಾಗಿ ಸಂಚರಿಸಿ, ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡರು. ಈ ನಡುವೆ 1963ರ ಲೋಕಸಭೆಯ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡರು.

ಸಂಘ ಮತ್ತು ಜನಸಂಘದ ಅಷ್ಟೆಲ್ಲಾ ಜವಾಬ್ಧಾರಿಯುತ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೂ ಅವರಲ್ಲಿದ್ದ ಪತ್ರಕರ್ತ ಸದಾಕಾಲವೂ ಜಾಗೃತವಾಗಿಯೇ ಇದ್ದ ಕಾರಣ, 1940ರಲ್ಲೇ ರಾಷ್ಟ್ರಧರ್ಮ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದ್ದಲ್ಲದೇ, ನಂತರ ಪಾಂಚಜನ್ಯ ಹಾಗೂ ಸ್ವದೇಶ ಪತ್ರಿಕೆಗಳನ್ನುಪ್ರಾರಂಭಿಸಿ ಅದರ ಸಂಪಾದಕರಾಗಿದ್ದ ದೀನ್ ದಯಾಳರು ಪತ್ರಿಕೆಗಷ್ಟೇ ತಮ್ಮ ಬರಹವನ್ನು ಸೀಮಿತಗೊಳಿಸದೇ, ತಮ್ಮ ಲೇಖನಿಯ ಮೂಲಕ ಚಂದ್ರಗುಪ್ತ ಮೌರ್ಯ ಎಂಬ ನಾಟಕ, ಶಂಕರಾಚಾರ್ಯರ ಜೀವನಚರಿತ್ರೆ, ರಾಜಕೀಯ ದಿನಚರಿ, ಸಮಗ್ರ ಮಾನವತಾವಾದ, ಏಕಾತ್ಮಮಾನವ್ – ವದ್ ಮತ್ತು ಭಾರತದಲ್ಲಿನ ಪಂಚವಾರ್ಷಿಕ ಯೋಜನೆಗಳ ವಿಶ್ಲೇಷಣೆ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಲ್ಲದೇ, ಸಂಘದ ಸಂಸ್ಥಾಪಕರಾದ  ಡಾ. ಕೇಶವ ಬಲಿರಾಮ್ ಹೆಡ್ಗೆವಾರರ ಜೀವನಚರಿತ್ರೆಯನ್ನು ಮರಾಠಿ ಭಾಷೆಯಿಂದ ಆಂಗ್ಲ ಭಾಷೆಗೆ ಅನುವಾದಿಸಿದರು.

dd4ದೀನದಯಾಳರು ಸೃಜನಶೀಲ ಲೇಖಕರು ಮತ್ತು ಸಂಪಾದಕರಾಗಿ ಹೆಸರು ಗಳಿಸಿದರು, ತಮ್ಮ ಪತ್ರಿಕೆಯಷ್ಟೇ ಅಲ್ಲದೇ, ದಿ ಆರ್ಗನೈಸರ್ ವಾರಪತ್ರಿಕೆಗೆ ಪೊಲಿಟಿಕಲ್ ಡೈರಿ ಎಂಬ ಅಂಕಣವನ್ನೂ ಸಹಾ ಬರೆಯುತ್ತಿದ್ದದ್ದಲ್ಲದೇ, ಪತ್ರಿಕೋದ್ಯಮದಲ್ಲಿ ಕ್ಷಣಿಕ ಆಕರ್ಷಣೆಗಾಗಿ ಸುದ್ದಿಯನ್ನು ತಿರುಚಬೇಡಿ ಎಂಬುದೇ ಅವರ ಮೂಲ ಮಂತ್ರವಾಗಿತ್ತು. ದೀನ ದಯಾಳರ ಪ್ರಕಾರ ರಾಜಕೀಯದಲ್ಲಿ ನೈತಿಕತೆ ಮತ್ತು ಸ್ವದೇಶಿ, ಮತ್ತು ಆರ್ಥಿಕತೆಗಳಲ್ಲಿ ಸಣ್ಣ-ಪ್ರಮಾಣದ ಕೈಗಾರಿಕೀಕರಣ ಅಷ್ಟೇ ಅಲ್ಲದೇ, ಸಾಂಸ್ಕೃತಿಕ-ರಾಷ್ಟ್ರೀಯ ಮೌಲ್ಯಗಳ ಪ್ರಾಮುಖ್ಯತೆ ಮತ್ತು ಶಿಸ್ತಿನ ಮೂಲಭೂತ ವಿಷಯಗಳ ಕುರಿತಾಗಿತ್ತು. ಎಲ್ಲರಿಗೂ ಶಿಕ್ಷಣ’ ಮತ್ತು ಹರ್ ಹತ್ ಕೋಕಂ, ಹರ್ಖೇತ್ಕೋಪಾನಿ ಅವರ ದೃಷ್ಟಿಕೋನವು ಅವರ ಆರ್ಥಿಕ ಪ್ರಜಾಪ್ರಭುತ್ವದ ಕಲ್ಪನೆಯಲ್ಲಿ ಪರಾಕಾಷ್ಠೆಯನ್ನು ಕಂಡಿತು. ತಮ್ಮ ಆರ್ಥಿಕ ಪ್ರಜಾಪ್ರಭುತ್ವದ ಕಲ್ಪನೆಯನ್ನು ವಿವರಿಸುತ್ತಾ, ಎಲ್ಲರಿಗೂ ಒಂದು ಮತವು ರಾಜಕೀಯ ಪ್ರಜಾಪ್ರಭುತ್ವದ ಸ್ಪರ್ಶ ಕಲ್ಲು ಆಗಿದ್ದರೆ, ಎಲ್ಲರಿಗೂ ಕೆಲಸ ಮಾಡುವುದು ಆರ್ಥಿಕ ಪ್ರಜಾಪ್ರಭುತ್ವದ ಅಳತೆಯಾಗಿದೆ. ದೊಡ್ಡ ಪ್ರಮಾಣದ ಕೈಗಾರಿಕೆಗಳ ಆಧಾರಿತ ಅಭಿವೃದ್ಧಿ, ಕೇಂದ್ರೀಕರಣ ಮತ್ತು ಏಕಸ್ವಾಮ್ಯದ ಕಲ್ಪನೆಗಳನ್ನು ವಿರೋಧಿಸಿದ ಅವರು ಸ್ವದೇಶಿ ಮತ್ತು ವಿಕೇಂದ್ರೀಕರಣವನ್ನು ಪ್ರತಿಪಾದಿಸಿದರು. ಉದ್ಯೋಗಾವಕಾಶವನ್ನು ಕಡಿಮೆ ಮಾಡುವ ಯಾವುದೇ ವ್ಯವಸ್ಥೆಯು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಬಲವಾಗಿ ಪ್ರತಿಪಾತಿಸಿದ್ದಲ್ಲದೇ, ಬಂಡವಾಳ ಮತ್ತು ಅಧಿಕಾರ ವಿಕೇಂದ್ರೀಕರಣಗೊಳ್ಳುವ ಸಾಮಾಜಿಕ ಅಸಮಾನತೆ ಮುಕ್ತ ವ್ಯವಸ್ಥೆಯನ್ನು ಅವರು ಪ್ರತಿಪಾದಿಸುವ ಮೂಲಕ ನೋಡ ನೋಡುತ್ತಲೇ ಭಾರತೀಯ ರಾಜಕಾರಣದಲ್ಲಿ ಅತಿ ಎತ್ತರದ ಮತ್ತು ಅಷ್ಟೇ ಗೌರವಯುತ ಸ್ಥಾನವನ್ನು ಗಳಿಸಿದರು.

ದೀನ ದಯಾಳರಿಗೆ ಭಾರತೀಯ ಭಾಷೆಗಳ ಬಗ್ಗೆ ಇದ್ದ ಕಾಳಜಿಯೊಂದಕ್ಕೆ ಈ ಪ್ರಸಂಗವೇ ಸಾಕ್ಷಿ. ಅದೊಮ್ಮೆ ಕರ್ನಾಟಕದ ಹುಬ್ಬಳ್ಳಿಗೆ ಪ್ರವಾಸದ ಮೇಲೆ ದೀನ್ ದಯಾಳರು ಬಂದಿದ್ದಂತಹ ಸಮಯದಲ್ಲಿ, ಮೈಸೂರು ವಿಧಾನಸಭೆಯಲ್ಲಿ ಅಂದಿನ ಜನಸಂಘದ ನಾಯಕರಾಗಿದ್ದ ಸದಾಶಿವಪ್ಪ ಶೆಟ್ಟರ್ (ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ತಂದೆ) ಅವರ ಜೊತೆಯಲ್ಲಿ ರಿಕ್ಷಾದಲ್ಲಿ ರೈಲು ನಿಲ್ದಾಣಕ್ಕೆ ಹೊರಟಿದ್ದ ಸಮಯದಲ್ಲಿ ಹುಬ್ಬಳ್ಳಿಯ ಪೇಟೆ ಬೀದಿಯ ಅನೇಕ ಅಂಗಡಿಗಳ ನಾಮ ಫಲಕಗಳು ಇಂಗ್ಲಿಷ್ ಭಾಷೆಯಲ್ಲಿದ್ದದ್ದನ್ನು ಗಮನಿಸಿದ ದಯಾಳ್ ರವರು, ಶೆಟ್ಟರ್ ಅವರೇ, ಈ ಎಲ್ಲಾ ನಾಮ ಫಲಕಗಳು ಕನ್ನಡದಲ್ಲಿ ಏಕಿಲ್ಲ? ಈ ಕುರಿತಾಗಿ ಅತೀ ಶೀಘ್ರವಾಗಿಯೇ ಚಳುವಳಿಯನ್ನು ಮಾಡುವ ಮೂಲಕ ಈ ಎಲ್ಲಾ ನಾಮಪಲಕಗಳು ಕನ್ನಡದಲ್ಲೇ ಇರುವಂತೆ ಮಾಡಬೇಕು ಎಂದಿದ್ದರಂತೆ, ಸ್ವಭಾಷಾ ಪ್ರೇಮ, ಸ್ವದೇಶಿ ಪ್ರೇಮ ನಮ್ಮ ಸಂಸ್ಕೃತಿ, ಪರಂಪರೆ, ಚರಿತ್ರೆ ಎಲ್ಲದರ ಬಗ್ಗೆ ನಮಗೆ ಹೆಮ್ಮೆ ಇರಬೇಕು ಅದರಿಂದಲೇ ನಾವು ಸ್ವತಂತ್ರ ದೇಶದ ನಾಗರಿಕರೆಂದು ಹೇಳಲು ಸಾಧ್ಯ ಎಂಬ ನಂಬಿಕೆ ದೀನ ದಯಾಳರದ್ದಾಗಿತ್ತು.

shymaಶ್ಯಾಮ ಪ್ರಸಾದ್ ಮುಖರ್ಜಿಯವರ ನಿಧನದ ನಂತರ 29 ಡಿಸೆಂಬರ್ 1967 ರಂದು ಜನಸಂಘದ ಅಧ್ಯಕ್ಷರಾಗಿ ಜವಾವ್ಧಾರಿಯನ್ನು ವಹಿಸಿಕೊಂಡು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ದೇಶಾದ್ಯಂತ ಪ್ರವಾಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಂತಹ ಸಮಯದಲ್ಲೇ, 10 ಫೆಬ್ರುವರಿ 1968ರಂದು ಲಕ್ನೋನಿಂದ ಪಾಟ್ನಾಗೆ ತೆರಳಲು ಸಿಯಾಲ್ದಾ ಎಕ್ಸ್ ಪ್ರೆಸ್ ರೈಲನ್ನು ಹತ್ತಿದ್ದ ದೀನದಯಾಳರು 11 ಫೆಬ್ರವರಿ ಮುಂಜಾನೆ 2:10ರ ಹೊತ್ತಿಗೆ, ರೈಲು  ಮೊಘಲ್‌ಸಾರಾಯ್ ರೈಲ್ವೆ ನಿಲ್ದಾಣವನ್ನು ತಲುಪಿದಾಗ ದೀನ್ ದಯಾಳರು ತಮ್ಮ ಸೀಟಿನಲ್ಲಿ ಇರಲಿಲ್ಲ,  ಆದಾದ ನಂತರ ಅದೇ ರೈಲು ನಿಲ್ದಾಣದ ಹತ್ತಿರದಲ್ಲಿ ದೀನ್ ದಯಾಳ್ ಉಪಾಧ್ಯಾಯರ  ಮೃತ ದೇಹ ಪತ್ತೆಯಾಯಿತು. ಈ ರೀತಿಯಾಗಿ ತಮ್ಮ 52 ನೇ ವಯಸ್ಸಿನಲ್ಲಿ  ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆದು, ಅದರ ಕುರಿತಾಗಿ ತನಿಖೆ ನಡೆದು, ಅಂತಿಮವಾಗಿ ಕೇಂದ್ರೀಯ ತನಿಖಾ ದಳದ ತನಿಖೆಯ ಪ್ರಕಾರ, ಡಕಾಯಿತರ ತಂಡವೊಂದು ದೀನ್ ದಯಾಳರ ಮೇಲೆ ಆಕ್ರಮಣವನ್ನು ಮಾಡಿ ಅವರನ್ನು ರೈಲಿನಿಂದ ಕೆಳ ತಳ್ಳಿತು ಎಂಬ ವರದಿ ನೀಡಿದ್ದಲ್ಲದೇ ಈ ಪ್ರಕರಣದ ಕುರಿತಂತೆ  ಕೇಂದ್ರೀಯ ತನಿಖಾ ದಳವು ಭರತ್ ಲಾಲ್ ಮತ್ತು ರಾಮ್ ಅವಧ್ ಎನ್ನುವ ಇಬ್ಬರನ್ನು ಬಂಧಿಸಿತು, ದುರಾದೃಷ್ಟವಷಾನ್ ನಂತರ ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದ ಅವರಿಬ್ಬರನ್ನೂ ಬಂಧ ಮುಕ್ತಗೊಳಿಸಿತು.

11 ಜನವರಿ 1966ರಲ್ಲಿ ರಷ್ಯಾದ ತಾಷ್ಕೆಂಟಿನಲ್ಲಿ ಅಂದಿನ ದಿಟ್ಟ ಪ್ರಧಾನಿಗಳಾಗಿದ್ದಂತಹ ಲಾಲ ಬಹದ್ದೂರ್ ಶಾಸ್ತಿಗಳು ಅನುಮಾನಾಸ್ಪದವಾಗಿ ಮೃತಪಟ್ಟಂತೆಯೇ,  1953 ರಲ್ಲಿ ಆಗಿನ ಪ್ರಧಾನಿ ಜವಹರಲಾಲ್ ನೆಹರು ಅವರು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನಗಳನ್ನು ನೀಡಿದ ಸಂದರ್ಭದಲ್ಲಿ ಅದನ್ನು ಖಂಡಿಸಿ ಹೋರಾಟಗಳು, ಚಳುವಳಿಗಳು ಪ್ರಾರಂಭವಾದವು. ಕಾಣದ ಕೈಗಳ ಕೈವಾಡದಿಂದ ಜೂನ್ 23 ರಂದು ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಕಾಶ್ಮೀರದ ಜೈಲಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಮುಖರ್ಜಿ ಅವರ ಅನುಪಸ್ಥಿತಿಯಲ್ಲಿ ಜನಸಂಘ ಅನಾಥವಾಯಿತೆಂದು ಕೆಲವರು  ಸಂಭ್ರಮಿಸುತ್ತಿದ್ದಂತಹ ಸಮಯದಲ್ಲೇ  ಸಂಘಟನಾ ಕೌಶಲ್ಯಕ್ಕೆ ಸಾಟಿಯೇ ಇಲ್ಲದಿದ್ದಂತಹ, ಸಮಾಜದ ತಳ ಮಟ್ಟದಿಂತಲೂ ತಮ್ಮ ಬುದ್ಧಿಶಕ್ತಿ ಮತ್ತು ಸಾಮರ್ಥ್ಯದಿಂದಲೇ ಹಂತ ಹಂತವಾಗಿ ಜನಸಂಘದ ಅಧ್ಯಕ್ಷ ಹುದ್ದೆಯನ್ನು ಏರಿದ್ದರೂ, ಸರಳ, ಸಜ್ಜನ ಮತ್ತು ನಿಗರ್ವಿ ನಾಯಕರೆಂದೇ ಭಾರತೀಯ ರಾಜಕೀಯದ ಇತಿಹಾಸದಲ್ಲಿ ಪ್ರಖ್ಯಾತರಾಗಿದ್ದ ರಾಜರ್ಷಿ ದೀನದಯಾಳ್ ಉಪಾಧ್ಯಾಯ ಅವರ ಈ ಅನುಮಾನಾಸ್ಪದ ಹಠಾತ್ ಸಾವಿನ ಹಿಂದೆ ರಾಜಕೀಯ ಷಡ್ಯಂತರವಿತ್ತು ಎಂದೆನಿಸುತ್ತದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment