ಕರ್ನಾಟಕ ಎಂದ ತಕ್ಷಣವೇ ಎಲ್ಲರ ಮನಸ್ಸಿನಲ್ಲಿ ಥಟ್ ಅಂತಾ ಮೂಡಿ ಬರುವುದೇ ಸಂಗೀತ, ಸಾಹಿತ್ಯ ಮತ್ತು ಶಿಲ್ಪಕಲೆಗಳ ತವರೂರು ಎಂದು. ಹಾಗೆ ವಿದೇಶೀ ವಾದನವಾದ ಪಿಟೀಲನ್ನು ಕರ್ನಾಟಕದ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿಕೊಂಡು ಅದರಲ್ಲಿ ಮಹಾನ್ ಸಾಧನೆಗಳನ್ನು ಮಾಡಿ ಕರ್ನಾಟಕದ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಮಹಾನ್ ಸಂಗೀತಗಾರರಾಗಿದ್ದ ಶ್ರೀ ಪಿಟೀಲು ಚೌಡಯ್ಯನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
ಮೈಸೂರಿನ ಬಳಿಯ ತಿರುಮಕೂಡಲಿನಲ್ಲಿ ಕೃಷಿಕರಾಗಿದ್ದ ಶ್ರೀ ಆಗಸ್ತ್ಯ ಗೌಡ ಮತ್ತು ಸುಂದರಮ್ಮ ದಂಪತಿಗಳ ಮಗನಾಗಿ 1895ರಲ್ಲಿ ಚೌಡಯ್ಯನವರ ಜನನವಾಗುತ್ತದೆ. ಸಹಜವಾಗಿ ಎಲ್ಲರ ಪೋಷಕರಂತೆ ಚೌಡಯ್ಯನವರ ತಂದೆಯವರಿಗೂ ತಮ್ಮ ಮಗ ಚನ್ನಾಗಿ ಓದಿ ವಿದ್ಯಾವಂತನಾಗಲಿ ಎಂಬ ಆಸೆಯಿಂದ ಪ್ರತೀ ದಿನವೂ ಅವರನ್ನು ಶಾಲೆಗೆ ಕಳುಹಿಸಿದರೆ, ಬಾಲಕ ಚೌಡಯ್ಯನವರಿಗೆ ಓದಿಗಿಂತಲೂ ಸಂಗೀತದಲ್ಲೇ ಆಸಕ್ತಿ. ತಮ್ಮ ಊರಿನ ಭಜನಾ ಮಂಡಲಿ ಮತ್ತು ದೇವಾಲಯದಲ್ಲಿ ನಡೆಯುತ್ತಿದ್ದ ಸಂಗೀತ ಕಛೇರಿಗಳಲ್ಲಿ ಮುಂದಿನ ಸಾಲಿನಲ್ಲಿ ಕುಳಿತು. ತನ್ಮಯರಾಗಿ ಸಂಗೀತವನ್ನು ಆಲಿಸುತ್ತಿದ್ದದ್ದನ್ನು ಗಮನಿಸಿದ ಅವರ ತಂದೆಯವರು 1910ರಲ್ಲಿ ಮೈಸೂರಿನ ನಾಲ್ಮಡಿ ಕೃಷ್ಣರಾಜೇಂದ್ರ ಒಡೆಯರ ಆಸ್ಥಾನದಲ್ಲಿ ಖ್ಹಾತ ಸಂಗೀತ ವಿದ್ವಾಂಸರೂ ಮತ್ತು ವಾಗ್ಗೇಯಕಾರರಾಗಿದ್ದ ಗಾನವಿಶಾರದ ಶ್ರೀ ಬಿಡಾರಂ ಕೃಷ್ಣಪ್ಪನವರ ಬಳಿ ಸಂಗೀತಾಭ್ಯಾಸಕ್ಕೆ ಬಿಡುತ್ತಾರೆ. ಗುರುಕುಲ ಪದ್ದತಿಯಲ್ಲಿ ಸುಮಾರು 1918ರ ವರಗೆ ಅವರ ಬಳಿ ಸಂಗೀತಾಬ್ಯಾಸ ಮಾಡಿದ ಚೌಡಯ್ಯನವರು, ಆರಂಭದಲ್ಲಿ ಹಾಡುಗಾರಿಕೆಯನ್ನು ಕಲಿತ ನಂತರ ಪಿಟೀಲು ವಾದ್ಯವನ್ನು ಕರಗತಮಾಡಿಕೊಂಡು ಅಸಾಧಾರಣ ಪಾಂಡಿತ್ಯ ಪಡೆಯುತ್ತಾರೆ. ಹೆಚ್ದಿನ ಅಭ್ಯಾಸಕ್ಕಾಗಿ ಕೆಲ ವರ್ಷಗಳ ಕಾಲ ತಿರುಚಿ ಗೋವಿಂದ ಸ್ವಾಮಿಗಳ ಬಳಿ ಶಿಶ್ಯವೃತ್ತಿಯನ್ನು ನಡೆಸಿ, ಕರ್ನಾಟಕ ಸಂಗೀತ ಪ್ರಕಾರದಲ್ಲಿ ಪಿಟೀಲು ಎಂದರೆ ಚೌಡಯ್ಯನವರು, ಚೌಡಯ್ಯನವರು ಎಂದರೆ ಪಿಟೀಲು ಎನ್ನುವಷ್ಟರ ಮಟ್ಟಿಗೆ ಪ್ರಖ್ಯಾತರಾಗುತ್ತಾರೆ.
ಗುರುಗಳಾದ ಬಿಡಾರಂ ಕೃಷ್ಣಪ್ಪನವರ ಪ್ರೋತ್ಸಾಹ, ಧೈರ್ಯ ಮತ್ತು ಪಾಂಡಿತ್ಯದಿಂದ ಕಲಿತ ವಿದ್ಯೆಯಿಂದಾಗಿ ಕೆಲವೇ ಕೆಲವು ವರ್ಷಗಳಲ್ಲಿ ನಾಡಿನ ಬಹುತೇಕ ಎಲ್ಲಾ ಸಂಗೀತಗಾರೊಂದಿಗೂ ಪಕ್ಕವಾದ್ಯಗಾರರಾಗಿ ನುಡಿಸುತ್ತಾರೆ. ಅವರ ಪಾಂಡಿತ್ಯವನ್ನು ಮನ್ನಿಸಿ, ಕೇವಲ ಕರ್ನಾಟಕವಲ್ಲದೇ ನೆರೆ ರಾಜ್ಯಗಳಾದ ಆಂಧ್ಯ ಮತ್ತು ತಮಿಳುನಾಡು ಅದಾಲ್ಲಿಯೂ ವಿಶೇಷವಾಗಿ ಮದ್ರಾಸಿನ ಅವರ ಸಮಕಾಲೀನ ಸಂಗೀತ ವಿದ್ವಾಂಸರುಗಳು ಚೌಡಯ್ಯನವರೇ ತಮ್ಮ ಕಛೇರಿಯಲ್ಲಿ ಪಿಟೀಲು ವಾದಕನಾಗಿರ ಬೇಕೆಂದು ಬಯಸುತ್ತಿದ್ದರು ಎಂದರೆ ಅವರ ಖ್ಯಾತಿಯ ಅರಿವಾಗುತ್ತದೆ. ತಮ್ಮೂರಿನಲ್ಲಿ ಚೌಡಯ್ಯನವರ ಕಛೇರಿ ಇದೆ ಎಂದು ತಿಳಿಯುತ್ತಿದ್ದಂತೆಯೇ, ಸಕ್ಕರೆಗೆ ಇರುವೆ ಮುತ್ತುವಂತೆ, ಚೌಡಯ್ಯನವರ ಪಿಟೀಲು ವಾದನವನ್ನು ಕೇಳಲು ಜನಸಾಗರವೇ ಹರಿದು ಬರುವಷ್ಟ್ರರ ಮಟ್ಟಿಗೆ ಅವರ ಕೀರ್ತಿ ಹಬ್ಬಿತ್ತು,
ಚೌಡಯ್ಯನವರು ಕೇವಲ ಪಕ್ಕವಾದ್ಯಗಾರರಾಗಿಯಷ್ಟೇ ಅಲ್ಲದೇ ಖ್ಯಾತ ತನಿವಾದ್ಯಗಾರರಾಗಿದ್ದರೂ ಮೂಲಹಾಡುಗಾರನ ಸೃಜನಶೀಲತೆಗೆ ನೆರವಾಗುವುದು ಪಕ್ಕವಾದ್ಯದವನ ಕರ್ತವ್ಯ ಎಂವುದನ್ನು ಅರಿತು ತಮ್ಮ ಕಚೇರಿಗಳನ್ನು ನಿರ್ವಹಿಸುತ್ತಿದ್ದರು. ಇದೇ ವಿಷಯವನ್ನೇ ಅವರು 1954ರಲ್ಲಿ ಮದ್ರಾಸಿನ ಮ್ಯೂಸಿಕ್ ಅಕಾಡೆಮಿಯ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷರಾಗಿ ಆಡಿದ್ದರು. ಮುಖ್ಯ ಕಲಾವಿದನನ್ನು ಮೀರಿ ಯಾವ ಪಕ್ಕವಾದ್ಯಗಾರೂ ಸಹಾ ನುಡಿಸಬಾರದು. ಸಂಗೀತಗಾರನ್ನೇ ಹಿಂಬಾಲಿಸುತ್ತ, ಅವರು ಹಾಡಿರುವುದನ್ನು ಬಿಡದೇ, ಅವರು ಹಾಡಿದೇ ಇರುವುದನ್ನು ನುಡಿಸದೇ ಎಚ್ಚರಿಕೆಯಿಂದ ಕಛೇರಿಯನ್ನು ನಡೆಸಿಕೊಂಡು ಹೋಗಬೇಕು. ಪಿಟೀಲಿನವರ ಸ್ವರಗತಿಯ ವೇಗ ಹಾಡುವವರ ಸ್ವರವೇಗಕ್ಕೆ ಸಮನಾಗಿರಬೇಕು ಮತ್ತು ಪಕ್ಕ ವಾದ್ಯದವರು ಸಂಪೂರ್ಣ ಸಂಗೀತ ಜ್ಞಾನವನ್ನು ಹೊಂದಿರಬೇಕು ಅದಕ್ಕಾಗಿಯೇ ಅವರಿಗೆ ಹಾಡುಗಾರಿಕೆಯಲ್ಲೂ ತಕ್ಕ ಮಟ್ಟಿಗೆ ಪಾಠವಾಗಿರಬೇಕು. ಮೂಲ ಸಂಗೀತಗಾರರು ಕಡೆಯಲ್ಲಿ ಪಕ್ಕವಾದ್ಯಗಾರರ ಪಾಂಡಿತ್ಯವನ್ನು ಪರಿಚಯಿಸುವ ಸಲುವಾಗಿ ತನಿಯನ್ನು ನುಡಿಸಲು ಬಿಟ್ಟಾಗ ತಮ್ಮ ಸಕಲ ಪಾಂಡಿತ್ಯವನ್ನೂ ಸಭಿಕರ ಮುಂದೆ ಪ್ರದರ್ಶಿಸಬೇಕು ಎಂದಿದ್ದಲ್ಲದೇ ಈ ಮಾತು ಮೃದಂಗ ವಾದಕರಿಗೂ ಅನ್ವಯಿಸುತ್ತದೆ ಎಂಬ ಎಚ್ಚರಿಕೆಯ ಮಾತನ್ನೂ ಸಹಾ ಹೇಳಿದ್ದರು.
ಇಷ್ಟೆಲ್ಲಾ ಪ್ರಭುದ್ಧತೆ ಇದ್ದರೂ ಸಹಾ ಕೆಲವೊಮ್ಮೆ ಸಂಗೀತರಾರಲ್ಲಿರುವ ಅಹಂ ಇವೆಲ್ಲವನ್ನೂ ಮರೆಸಿಬಿಡುತ್ತದೆ ಎನ್ನುವುದಕ್ಕೆ ಈ ಪ್ರಸಂಗವನ್ನು ತಿಳಿಯಲೇ ಬೇಕು. ಅದು 1920ರ ಸಮಯ ಅರಿಯಕ್ಕುಡಿ ರಾಮಾನುಜ ಅಯ್ಯಂಗಾರ್ ಗಾನಚಕ್ರವರ್ತಿಯಾಗಿ ಮೆರೆಯುತ್ತಿದ್ದ ಕಾಲ ಅದೊಮ್ಮೆ ಮದ್ರಾಸಿನಲ್ಲಿ ಅವರ ಸಂಗೀತ ಕಛೇರಿ ಏರ್ಪಾಟಾಗಿ, ಅನಿವಾರ್ಯಕಾರಣಗಳಿಂದಾಗಿ ಪಿಟೀಲು ವಿದ್ವಾಂಸರು ಕೊನೆಯ ಗಳಿಗೆಯಲ್ಲಿ ಬರಲಾರರು ಎಂಬ ವಿಷಯ ತಿಳಿದು, ಕಾರ್ಯಕ್ರಮದ ಆಯೋಜಕರಿಗೆ ಅದೇ ಸಮಯಲ್ಲಿ ಮದ್ರಾಸಿನಲ್ಲೇ ಚೌಡಯ್ಯನವರು ಇರುವ ವಿಷಯ ತಿಳಿದು ಅವರನ್ನೇ ಪಕ್ಕವಾದ್ಯಗಾರರಾಗಿ ನುದಿಸಲು ಕೇಳಬಹುದೆಲ್ಲಾ ಎಂದು ಅರಿಯಕ್ಕುಡಿಯವರಲ್ಲಿ ಕೇಳಿದಾಗ. ಸಹಜವಾಗಿ ಹೆಚ್ಚಿನ ಗಾಯಕರಿಗೆ ತಮ್ಮನ್ನು ಮೀರಿಸುವ ಕಲಾವಿದರು ಪಕ್ಕ ವಾದ್ಯದಲ್ಲಿರುವುದು ಅಷ್ಟು ಇಷ್ಟವಾಗುವುದಿಲ್ಲ. ಹಾಗಾಗಿಯೇ ಅರಿಯುಕ್ಕುಡಿಯವರು ಆರಂಭದಲ್ಲಿ ಬೇಡ ಎಂದರೂ ಕಡೆಗೆ ಅನಿವಾರ್ಯವಾಗಿ ಒಪ್ಪಿಕೊಂದಿದ್ದರು.
ಕಡೆಯ ಗಳಿಗೆಯಲ್ಲಿ ಚೌಡಯ್ಯನವರಿಗೆ ಈ ಕಛೇರಿಯ ವಿಷಯ ತಿಳಿದು ಸಕಾಲಕ್ಕೆ ಬರಲು ಆಗದೇ ಇದ್ದಾಗ, ವಿಧಿ ಇಲ್ಲದೇ, ಸಭಾ ಗೌರವವನ್ನು ಕಾಪಾಡಲು ಅರಿಯಕ್ಕುಡಿಯವರು ಪಿಟೀಲು ವಾದಕರಿಲ್ಲದೇ ಕಛೇರಿಯನ್ನು ಆರಂಭಿಸಿದ್ದರು. ಇದನ್ನು ಕಂಡ ಚೌಡಯ್ಯನವರಿಗೆ ಅಸಮಧಾನವಾದರೂ ತಮ್ಮದೇ ತಪ್ಪಿದ್ದಿದ್ದರಿಂದ ಸದ್ದಿಲ್ಲದೇ ಕಛೇರಿ ಮುಂದುವರೆಸಿದರು. ಅರಿಯುಕ್ಕುಡಿಯವರ ಅಮೋಘವಾದ ಶಂಕರಾಭರಣ ರಾಗದ ಅಲಾಪನೆ ನೆರದಿದ್ದ ಸಭಿಕರೆಲ್ಲರ ಕರತಾಡನದ ಸುರಿಮಳೆ ಅರಿಯುಕ್ಕುಡಿಯವರು ಸಂತೃಷ್ಟರಾಗಿ ಚೌಡಯ್ಯನವರ ಕಡೆ ನೋಡುತ್ತಿದ್ದಂತೆಯೇ ಆವರಿಬ್ಬರಿಗೆ ಅರಿವಿಲ್ಲದಂತೆಯೇ ಒಂದು ರೀತಿಯ ಜಿದ್ದಾಜಿದ್ದಿ ಏರ್ಪಟ್ಟು ಚೌಡಯ್ಯನವರು ತಮ್ಮ ಸರದಿ ಬಂದಾಗ ಶಂಕರಾಭರಣದ ಸಾರವನ್ನೆಲ್ಲಾ ಹೀರಿ ಇಂದ್ರಲೋಕವನ್ನೇ ನಿರ್ಮಿಸಿದಾಗ ಇಡೀ ಸಭೆಯೇ ಬೆರಗಾಗಿ ಎದ್ದು ನಿಂತು ಕರತಾಡನ ಮಾಡಿದ್ದದ್ದು ಅರಿಯಕ್ಕುಡಿಯವರ ಕಣ್ಣು ಕೆಂಪಗಾಯಿತು.
ಈ ಘಟನೆ ಸಂಭವಿಸಿದ 15ದಿನದಲ್ಲೇ ಮದ್ರಾಸ್ ಗಾಯನ ಸಭಾದಲ್ಲಿದ್ದ ಅರಿಯಕ್ಕುಡಿಯವರ ಕಛೇರಿಗೆ ಚೌಡಯ್ಯನವರೇ ಪಿಟೀಲು ವಾದಕರಾಗಿ ಬರಬೇಕು ಆಗ್ರಹಿಸಿದ್ದನ್ನು ಕೇಳಿದ ಸಂಗೀತ ಪ್ರಿಯರು ಈ ಕಛೇರಿಯು ಚೌಡಯ್ಯನವರನ್ನು ಪರೀಕ್ಷಿಸಲೇಂದೇ ಏರ್ಪಾಟಾಗಿದೆ ಎಂಬ ಗುಸು ಗುಸು ಸುದ್ದಿ ಹರಡಿ ಇಡೀ ಸಭಾಂಗಣ ಕಿಕ್ಕಿರಿದು ತುಂಬಿ ಪೋಲೀಸ್ ಬಂದೋಬಸ್ತ್ ಮಾಡ ಬೇಕಾಯಿತು. ಅಂದಿನ ಕಛೇರಿಯಲ್ಲಿ ವಿದ್ವಾಂಸರಿಬ್ಬರೂ ಇಡೀ ಕಲ್ಯಾಣಿಯ ರಾಗವನ್ನು ಶೋಧಿಸಿ ಬಿಟ್ಟದ್ದು ಸಭಿಕರನ್ನು ಆನಂದ ಸಾಗರದಲ್ಲಿ ತೇಲಿಸಿತು. ಇದೇ ಸಮಯದಲ್ಲೇ ತ್ಯಾಗರಾಜರ ನಿಧಿಚಾಲಸುಖಮಾವನ್ನು ಒಂದಕ್ಷರ ಬಿಟ್ಟು ಹಾಡುವುದು ಪದ್ದತಿಯನ್ನು ಮೀರಿ ಅರಿಯಕ್ಕುಡಿಯವರು ಎರಡಕ್ಷರ ಬಿಟ್ಟು ಹಾಡುವ ಮೂಲಕ ಪಿಟೀಲಿನಲ್ಲಿ ಹಾಗೆ ನುಡಿಸಲಾಗದು ಎಂಬ ಲೆಕ್ಕಾಚಾರ ಹಾಕಿದ್ದರು. ಆದರೆ ಪಿಟೀಲು ವಾದನವನ್ನು ಅರೆದು ಕುಡಿದಿದ್ದ ಚೌಡಯ್ಯನವರು ಕೊಂಚವೂ ಶ್ರಮ ಪಡದೇ ಅದನ್ನು ಲೀಲಾಜಾಲವಾಗಿ ಅದೇ ಕ್ರಮದಲ್ಲಿ ಒಂದಲ್ಲ ನಾಲ್ಕಾವರ್ತ ನುಡಿಸಿ, ವಾದ್ಯವನ್ನು ಕೆಳಗಿಟ್ಟು ಎದ್ದು ನಿಂತದ್ದನ್ನು ಕಂಡು ಅರಿಯುಕ್ಕುಡಿಯವರು ಅವಕ್ಕಾದರೆ, ಇಡೀ ಸಭೆಯೇ ಭಯಭೀತವಾಯಿತು.
ಅಯ್ಯಂಗಾರರೇ ನಿಮಗೆ ಈ ಲೆಕ್ಕಾಚಾರ ದೊಡ್ಡದಾಗಿ ಕಾಣ ಬಹುದು, ಬಿಡಾರಂ ಕೃಷ್ಣಪ್ಪನವರ ಶಿಷ್ಯನಾದ ನನಗೆ ಇದು ಲೀಲಾಜಾಲ… ಆದರೆ ಇಂದು ನೀವು ಹೀಗೆ ಹಾಡಿದ್ದು ಸಂಗೀತ ಶಾಸ್ತ್ರದ ವಿರುದ್ಧ. ಸ್ಪರ್ಧೆಗಾಗಿ ಶಾಸ್ತ್ರವನ್ನು ಬಿಡುವುದು ಸರ್ವಥಾ ಸರಿಯಲ್ಲ ಹಾಗಾಗಿ ನೀವು ಏನಾದರೂ ಹಾಡಿ ಕೊಳ್ಳಿ ನಾನು ಹೊರಟೆ ಎಂದು ಎದ್ದು ನಿಂತಾಗ, ಸಭೆಯಲ್ಲಿದ್ದ ಹಿರಿಯರು, ವ್ಯವಸ್ಥಾಪಕರು ಚೌಡಯ್ಯನವರನ್ನು ಸಮಾಧಾನ ಪಡಿಸಿ ಸಭೆಯನ್ನು ಮುಂದುವರೆಸುವಂತಪ ಪರಿಸ್ಥಿತಿ ಏರ್ಪಟ್ಟಿತ್ತು.
ಈ ಪ್ರಸಂಗ ಇಲ್ಲಿಗೇ ಮುಗಿಯದೇ, ಕೆಲವು ದಿನಗಳ ನಂತರ ಅದೇ ಅರಿಯುಕ್ಕುಡಿಯವರ ಗಾಯನ ಮತ್ತು ಚೌಡಯ್ಯನವರ ಪಿಟೀಲು ವಾದನ, ಈ ಬಾರಿ ಅರಿಯಕ್ಕುಡಿಯವರು ಅಲಾಪನೆಗೆ ಎತ್ತಿಕೊಂಡ ರಾಗ ವರಾಳಿಯೋ ಕಾಮವರ್ಧನಿಯೋ ಎನ್ನುವುದನ್ನು ಸ್ಪಷ್ಟ ಪಡಿಸದೆ ಮಧ್ಯಮ ಸ್ಥಾಯಿಯ ಪ್ರತಿ ಮಧ್ಯಮದಿಂದ ತಾರಸ್ಥಾಯಿಯ ರಿಷಭದವರೆಗೆ ಮಾತ್ರ ಸಂಚಾರ ಮಾಡುತ್ತಾ ಸಂದಿಗ್ಧ ಸ್ಥಿತಿಯಲ್ಲಿರಿಸಿದರು. ಒಂದು ಸ್ವರ ಜಾರಿದರೂ ಪಿಟೀಲಿನಲ್ಲಿ ರಾಗಪ್ರವೇಶವಾಗುತ್ತದೆ ಎನ್ನುವುದು ಅವರ ಅಂದಾಜು. ಆದರೆ ಚೌಡಯ್ಯನವರು ಅರ್ಧಗಂಟೆ ಅದೇ ಚೌಕಟ್ಟಿನಲ್ಲಿ ಅರ್ಧಗಂಟೆಗಳ ಕಾಲ ನುಡಿಸಿ ನಸುನಗುತ್ತಾ ‘ಈಗಲಾದರೂ ರಾಗ ಪ್ರವೇಶ ಮಾಡ ಬಹುದಲ್ಲಾ ಎಂದಾಗ, ಅರಿಯುಕ್ಕುಡಿಯವರು ತಮ್ಮ ಹಮ್ಮು ಬಿಮ್ಮು ಎಲ್ಲವನ್ನು ಪಕ್ಕಕ್ಕೆ ಸರಿಸಿ, ಎದ್ದು ನಿಂತು ಕೈ ಮುಗಿದು ಸ್ವಾಮೀ ನೀವು ಈ ಲೋಕದವರೇ ಅಲ್ಲ. ನಿಮ್ಮನ್ನು ಪರೀಕ್ಷಿಸಲು ಹೋಗಿ ನಾನು ಬಾರೀ ಪ್ರಮಾದ ಮಾಡಿದೆ, ದಯವಿಟ್ಟು ಕ್ಷಮಿಸಿ ಎಂದು ಕೇಳಿದ್ದನ್ನು ಕಂಡು ಕಿಕ್ಕಿರಿದು ತುಂಬಿದ್ದ ಸಭೆ ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿ ಪಡುವಂತಾಯಿತು. ಇದಾದ ನಂತರ ಮಂದೆ ಅನೇಕ ವರ್ಷಗಳ ಕಾಲ ಆ ಮಹಾನ್ ಸಾಧಕರಿಬ್ಬರೂ ನೂರಾರು ಸಂಗೀತ ಕಛೇರಿಗಳಲ್ಲಿ ಒಟ್ಟಾಗಿ ಯಾವುದೇ ಅಹಂ ಸ್ನೇಹಪೂರ್ವಕವಾಗಿ ಕಶೇರಿಯನ್ನು ನಡೆಸಿಕೊಂಡು ಹೋಗಿದ್ದು ಈಗ ಇತಿಹಾಸ.
ಅಂದಿನ ಕಾಲದಲ್ಲಿ ಈಗಿನ ಕಾಲದಲ್ಲಿ ಇದ್ದಂತಹ ಧ್ವನಿವರ್ಧಕ ಸೌಲಭ್ಯಗಳು ಇಲ್ಲದೇ ಇದ್ದ ಕಾರಣ, 4 ತಂತಿಯ ಪಿಟೀಲಿನಲ್ಲಿ ನುಡಿಸುತ್ತಿದ್ದು ತುಂಬಿದ ಸಭಾಂಗಣದ ಹಿಂದಿನ ಸಾಲಿನ ಸಂಗೀತಾಸಕ್ತರಿಗೆ ಕೇಳದೇ ಹೋಗುಗ್ಗಿದ್ದದ್ದನ್ನು ಮನಗಂಡ ಚೌಡಯ್ಯನವರು 4 ತಂತಿಗಳ ಬದಲಾಗಿ ತಾವೇ ಆವಿಷ್ಕರಿಸಿದ 7 ತಂತಿಯ ಪಿಟೀಲನ್ನು ಕರಗತ ಮಾಡಿಕೊಂಡರು. ಅದೊಮ್ಮೆ ಮೈಸೂರಿನಲ್ಲಿ ತಮ್ಮ ಗುರುಗಳಾದ ಬಿಡಾರಂ ಕೃಷ್ಣಪ್ಪನವರ ಕಛೇರಿಯೊಂದರಲ್ಲಿ, ಚೌಡಯ್ಯನವರು ತಮ್ಮ ಹೊಸ ಆವಿಷ್ಕಾರವಾದ 7 ತಂತಿಗಳ ಪಿಟೀಲು ನುಡಿಸತೊಡಗಿದರು. ಈ ಪಿಟೀಲಿನಿಂದ ಹೊರಡುವ ದನಿ ಎಂದಿಗಿಂತ ಜೋರಾಗಿದನ್ನು ಗಮನಿಸಿದ ಕೃಷ್ಣಪ್ಪನವರು ಸಭೆಯಲ್ಲಿಯೇ ತನ್ನ ಶಿಷ್ಯನನ್ನು ಮತ್ತು ಅವರ ಪಿಟೀಲುಗಳನ್ನು ದಿಟ್ಟಿಸಿ ನೋಡುತ್ತಾ, ಇದೇನಿದು? ಮೂರು ಹೆಚ್ಚುವರಿ ತಂತಿಗಳಿವೆ ಎಂದು ಕೋಪದಿಂದ ಕೇಳಿದ್ದಲ್ಲದೇ, ಯಾಕೀ ವಿರೋಧಾಭಾಸ? ಎಂದು ಕೇಳಿದಾಗ, 7 ತಂತಿಯೊಂದಿಗೆ ನುಡಿಸುವ ಧ್ವನಿಯು ಸಭಾಂಗಣದ ಹಿಂದಿನ ಸಾಲಿನವರಿಗೂ ಕೇಳಿಬರುತ್ತದೆ ಎಂದು ಹೇಳಲು ತಡವರಿಸುತ್ತಿದ್ದಾಗ, ಆ ಸಭೆಯಲ್ಲಿಯೇ ಉಪಸ್ಥಿತರಿದ್ದ ಮತ್ತೊಬ್ಬ ಮಹಾನ್ ಸಂಗೀತ ವಿದ್ವಾಂಸರು ಮತ್ತು ಚೌಡಯ್ಯನವರ 7 ತಂತಿಯ ಪಿಟೀಲು ಆವಿಷ್ಕಾರದ ಬಗ್ಗೆ ಅರಿವಿದ್ದ ವೀಣೆ ಶೇಷಣ್ಣವರು ಸಂತಸ ವ್ಯಕ್ತಪಡಿಸಿ ಚೌಡಯ್ಯನವರಿಗೆ ಆ ಪಿಟೀಲು ನುಡಿಸಲು ಅವಕಾಶ ನೀಡಬೇಕೆಂದು ಬಿಡಾರಂ ಕೃಷ್ಣಪ್ಪನವರಲ್ಲಿ ವಿನಂತಿಸಿಕೊಂಡ ನಂತರ ಪರಿಸ್ಥಿತಿ ತಿಳಿಯಾಗಿ ಸಭೆಯು ಮುಂದುವರೆಯಿತು. 1947ರಲ್ಲಿ ಚೌಡಯ್ಯನವರು 12 ತಂತಿಗಳ ಪಿಟೀಲನ್ನು ನುಡಿಸಲು ಮುಂದಾದಾಗ, ಖ್ಯಾತ ಸಂಗೀತ ವಿದ್ವಾಂಸರಾಗಿದ್ದ ಶ್ರೀ ಸೆಮ್ಮಂಗುಡಿಯವರು ಅದಕ್ಕೆ ಸಮ್ಮತಿಸದೇ ಹೋದಾಗ, ಚೌಡಯ್ಯನವರ ತಮ್ಮ ಪ್ರಯತ್ನವನ್ನು ಕೈ ಬಿಟ್ಟರು.
1936ರಲ್ಲಿ ಮಹಾತ್ಮ ಗಾಂಧಿಯವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಂತಹ ಸಂಧರ್ಭದಲ್ಲಿ ಅವರ ವೈದ್ಯರು ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಸೂಚಿಸಿದಾಗ ಅವರು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಕೆಲ ಸಮಯ ಕಳೆದಿದ್ದರು, ಇದೇ ಸಂಧರ್ಭದಲ್ಲಿ ಬೆಂಗಳೂರಿಗೆ ಭೇಟಿ ನೀಡಿದಾಗ ಚೌಡಯ್ಯನವರ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅವರ ಪಿಟೀಲು ವಾದನದಿಂದ ಆನಂದತುಲಿತರಾದ ಗಾಂಧಿಯವರು ತಮ್ಮ ಪಕ್ಕದಲ್ಲಿ ಕುಳಿತಿದ್ದ ಕನ್ನಡದ ಹಾಸ್ಯ ಸಾಹಿತಿಗಳಾದ ಶ್ರೀ ಟಿ.ಪಿ.ಕೈಲಾಸಂ ಅವರ ಬಳಿ ಈ ಪಿಟೀಲು ವಾದಕರು ಯಾರು ಎಂದು ಕೇಳಿದಾಗ, ಕೈಲಾಸಂರವರು ಎಂದಿನಂತೆ ತಮ್ಮ ಹಾಸ್ಯಶೈಲಿಯಲ್ಲಿ You are a non-violonist and he is a violonist ಎಂದು ಹೇಳಿ ಎಲ್ಲರನ್ನೂ ನಗೆಗಡಲಿನಲ್ಲಿ ತೂಗಿಸಿ ನಂತರ ಚೌಡಯ್ಯನವರ ಪರಿಚಯ ಮಾಡಿಕೊಟ್ಟಿದ್ದರು.
ತಮ್ಮ ಗುರುಗಳ ಬಗ್ಗೆ ಅಪಾರವಾದ ಗೌರವನ್ನು ಇಟ್ಟಿಕೊಂಡಿದ್ದ ಚೌಡಯ್ಯನವರು ಬಿಡರಂ ಕೃಷ್ಣಪ್ಪನವರ ಪ್ರಸನ್ನ ಸೀತಾ ರಾಮಮಂದಿರದಲ್ಲಿ ಸಂಗೀತದ ಕಲಿಕೆ ಮತ್ತು ಉನ್ನತ ಅಧ್ಯಯನಗಳ ಸಂಸ್ಥೆಯನ್ನು ತೆರೆಯುವ ಕನಸನ್ನು ನನಸಾಗಿಸಲು ಅಯ್ಯನಾರ್ ಸಂಗೀತ ಕಾಲೇಜನ್ನು ಸ್ಥಾಪಿಸಿದರು. ಅದಕ್ಕೆ ಅಂದಿನ ಕಾಲದ ಹಿರಿಯ ವಕೀಲರಾಗಿದ್ದ ಶ್ರೀ ಕೆ.ಪುಟ್ಟು ರಾವ್ ಅವರನ್ನು ಕಾರ್ಯದರ್ಶಿಯಾಗಿಸಿ ಆ ಸಂಸ್ಥೆಗೆ ಅಗತ್ಯವಿರುವ ಎಲ್ಲ ಆರ್ಥಿಕ ಬೆಂಬಲವನ್ನು ನೀಡಿದ್ದಲ್ಲದೇ ಆ ಸಂಸ್ಥೆಯ ಮೂಲಕ ನೂರಾರು ಶಿಷ್ಯರನ್ನು ತಯಾರು ಮಾಡಿದರು.
ಸಂಗೀತ ವಿದ್ವಾಂಸರ ಆತಿಥ್ಯಕ್ಕೆ ಚೌಡಯ್ಯನವರು ಹೆಸರುವಾಸಿಯಾಗಿದ್ದರು. ಹಾಗಾಗಿ ದೇಶ ವಿದೇಶಗಳಿಂದ ನೂರಾರು ಸಂಗೀತ ಸಾಧಕರನ್ನು ಮೈಸೂರಿಗೆ ಕರೆಸಿ ಅವರಿಂದ ಉತೃಷ್ಟವಾದ ಸಂಗೀತ ಕಛೇರಿಯನ್ನು ಆಯೋಚಿಸುತ್ತಿದ್ದದ್ದಲ್ಲದೇ ಅವರ ಆತಿಥ್ಯಕ್ಕೆಂದೇ ಮೈಸೂರಿನ ತಮ್ಮ ನಿವಾಸದ ಪಕ್ಕದಲ್ಲಿದ್ದ ಮನೆಯನ್ನು ನಿಯೋಜಿಸಿದ್ದರು. ಅಲ್ಲಿ ಅತಿಥಿಗಳ ಅಗತ್ಯಗಳನ್ನು ಪೂರೈಸಲು ಅಡುಗೆಯವರು ಮತ್ತು ಸೇವಕರನ್ನು ಇಟ್ಟಿದ್ದರು. ಬಹುಶಃ ತಮ್ಮ ತಾನ ಈ ಗುಣವನ್ನು ಬಳುವಳಿಯಾಗಿ ಪಡೆದ ಅವರ ಮೊಮ್ಮಗ ಕನ್ನಡದ ಚಿತ್ರರಂಗದ ಪ್ರಖ್ಯಾತ ನಟ ಮತ್ತು ರಾಜಕಾರಣಿ ಶ್ರೀ ಅಮರ್ ನಾಥ್ ಎಲ್ಲರ ಪ್ರೀತಿಯ ಅಂಬರೀಶ್ ಮುಂದುವರಿಸಿಕೊಂಡು ಹೋದರು.
ಸಂಗೀತದ ಜೊತೆ ನಾಟಕ ಮತ್ತು ಚಲನಚಿತ್ರದಲ್ಲಿಯೂ ಆಸಕ್ತಿ ಹೊಂದಿದ್ದ ಚೌಡಯ್ಯನವರು ಮಹಾರಾಜಪುರ ವಿಶ್ವನಾಥ ಅಯ್ಯರ್ರಂತಹ ವಿದ್ವಾನ್ಗಳು ಚಲನಚಿತ್ರಗಳಲ್ಲಿ ಭಾಗವಹಿಸುತ್ತಿದ್ದರಿಂದ ಪ್ರೇರಿತರಾಗಿ 1943ರಲ್ಲಿ ವಾಣಿ ಎಂಬ ಚಲನಚಿತ್ರವನ್ನು ನಿರ್ಮಿಸಿದ್ದಲ್ಲದೇ ಅದರಲ್ಲಿ ಪ್ರಸಿದ್ಧ ನಾಟಕಕಾರ ಹಿರಣ್ಣಯ್ಯನರೊಂದಿಗೆ ದ್ವಿಪಾತ್ರಾಭಿನಯ ಮಾಡಿದ್ದಲ್ಲದೇ, ಆ ಚಿತ್ರದ ಸಂಗೀತ ನಿರ್ದೇಶಕರೂ ಆಗಿದ್ದರು. ಈ ಚಿತ್ರದ ಮೂಲಕವೇ ಪಂಡರಿಬಾಯಿಯವರು ಮತ್ತು ಮುಸುರಿ ಕೃಷ್ಣಮೂರ್ತಿಗಳು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವುದು ವಿಶೇಷವಾಗಿದೆ.
ಬೌಡಯ್ಯನವರ ಸಾಧನೆಯನ್ನು ಗುರುತಿಸಿ
- 1941ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸಂಗೀತ ರತ್ನ ಪ್ರಶಸ್ತಿ
- ಮೈಸೂರಿನ ಸಂಗೀತ ಪರಿಷತ್ ನೀಡಿದ ಗಾನ ಕಲಾ ಸಿಂಧು ಪ್ರಶಸ್ತಿ
- 1952-1957ರವರೆಗೆ ಕರ್ನಾಟಕದ ವಿಧಾನ ಪರಿಷತ್ ಸದಸ್ಯರು
- 1957 ರಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಿಂದ ಸಂಗೀತ ಕಲಾನಿಧಿ ಪ್ರಶಸ್ತಿ
- 1958 ರಲ್ಲಿ ದಿ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿಯಿಂದ ಸಂಗೀತ ಕಲಾಶಿಖಾಮಣಿ ಪ್ರಶಸ್ತಿಗಳಿಗಳಲ್ಲದೇ ಇನ್ನೂ ನೂರಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು.
ವಯಸ್ಸಾದ ನಂತರ ಅದೊಮ್ಮೆ ಕಚೇರಿಯೊಂದರಲ್ಲಿ ಪಿಟೀಲು ನುಡಿಸುತ್ತಿದ್ದ ಚೌಡಯ್ಯನವರನ್ನು ಕಂಡ ಅವರ ಮಿತ್ರರೊಬ್ಬರು ನಿಮ್ಮ ಆರೋಗ್ಯ ಹೇಗಿದೆ? ಎಂದು ಕೇಳಿದಾಗ, ಅಯ್ಯೋ ಆರೋಗ್ಯವೆಲ್ಲಿ ಸ್ವಾಮಿ – ವಾರದಿಂದ ಮೇಲೆದ್ದಿಲ್ಲ. ಗುರುಗಳ ಸ್ಮರಣಾರ್ಥದ ಇಂದಿನ ಕಚೇರಿಯಲ್ಲಿ ತಪ್ಪಿಸಿಕೊಳ್ಳಲಾಗದದೇ ಬಂದಿದ್ದೇನೆ. ಈ ನನ್ನ ಪ್ರಿಯವಾದ್ಯವನ್ನು ನುಡಿಸುತ್ತಲೇ ಪ್ರಾಣ ಹೋದರೆ ಹೋಗಲೇಳಿ ಸ್ವಾಮಿ ಎಂದಿದ್ದರಂತೆ. 1967ರ ಜನವರಿ 19ರಂದು ಮನೆಯಲ್ಲಿ ಇದ್ದಕ್ಕಿದ್ದಂತೆಯೇ ಪ್ರಜ್ಞೆತಪ್ಪಿ ಬಿದ್ದಾಗ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದಾಗ, ವೈದ್ಯರು ನೀಡಿದ ಔಷಧೋಪಚಾರದಿಂದ ಕೊಂಚ ಚೇತರಿಸಿಕೊಳ್ಳುತ್ತಿದ್ದಂತೆಯೇ, ಸ್ವಾಮಿ, ಈ ದಿನ ಚಂಬೈ ಅವರೊಂದಿಗೆ ಬೆಂಗಳೂರಿನಲ್ಲಿ ಕಚೇರಿ ಇದೆ ದಯವಿಟ್ಟು ಹೋಗಲು ಅನುಮತಿ ಕೊಡಿ ಎಂದು ವೈದ್ಯರಲ್ಲಿ ಕೇಳಿದ್ದರಂತೆ. ದುರಾದೃಷ್ಟವಷಾತ್, ವೈದ್ಯರ ಅಷ್ಟೆಲ್ಲಾ ಪ್ರಯತ್ನದ ನಡುವೆಯೂ ಚಿಕಿತ್ಸೆ ಫಲಕಾರಿಯಾಗದೇ, ಅಂದು ರಾತ್ರಿಯೇ ಚೌಡಯ್ಯನವರು ತಮ್ಮ 72 ನೇ ವಯಸ್ಸಿನಲ್ಲಿ ನಿಧನರಾಗುವ ಮೂಲಕ ಕರ್ನಾಟಕ ಸಂಗೀತ ಲೋಕದ ಧೃವತಾರೆಯೊಂದು ಶಾಶ್ವತವಾಗಿ ಮರೆಯಾಗಿ ಹೋಗುತ್ತದೆ.
ಕರ್ನಾಟಕ ಸಂಗೀತಕ್ಕೆ ಚೌಡಯ್ಯನವರ ಕೊಡುಗೆಯನ್ನು ಶಾಶ್ವತವಾಗಿ ನೆನಪಿನಲ್ಲಿ ಇರುವಂತಾಗಲು 1980ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಸಾರ್ವಜನಿಕರ ಬೆಂಬಲದೊಂದಿಗೆ ಪಿಟೀಲು ಆಕಾರದಲ್ಲಿ ಚೌಡಯ್ಯ ಸ್ಮಾರಕ ಭವನನ್ನು ನಿರ್ಮಿಸುವ ಮೂಲಕ ಸಂಗೀತಗಾರನ ನೆನಪಿಗಾಗಿ ಮೀಸಲಾಗಿರುವ ಮತ್ತು ಅವರು ನುಡಿಸುತ್ತಿದ್ದ ವಾದ್ಯ ಪಿಟೀಲಿನಂತೆ ವಿನ್ಯಾಸದಲ್ಲಿರುವ ವಿಶ್ವದ ಏಕೈಕ ಸಭಾಂಗಣ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತದೆ. ಅಷ್ಟೇ ಅಲ್ಲದೇ ಸಂಗೀತ ರತ್ನ ಮೈಸೂರು ಟಿ.ಚೌಡಯ್ಯ ಸ್ಮಾರಕ ಪ್ರಶಸ್ತಿಯನ್ನು ಹೆಸರಾಂತ ಸಂಗೀತಗಾರರನ್ನು ಗೌರವಿಸಲು ಸ್ಥಾಪಿಸಲಾಗಿದೆೆ ಎಂದರೆ ಅವರು ಖಂಡಿತವಾಗಿ ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ
ಅದ್ಭುತ ಲೇಖನ ಧನ್ಯವಾದ
LikeLike
ಧನ್ಯವಾದಗಳು. ಹಾಗೆಯೇ ಅವರ ಗುರುಗಳಾದ ಬಿಡಾರಂ ಕೃಷ್ಣಪ್ಪನರ ಲೇಖನವನ್ನೂ ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ
LikeLike