
ಪ್ರತೀ ವರ್ಷ ನವೆಂಬರ್ ತಿಂಗಳಿನ 30 ದಿನಗಳ ಕಾಲ ಕನ್ನಡ ನಾಡು, ನುಡಿ, ಲಲಿತ ಕಲೆ, ಕ್ರೀಡೆ, ನಾಟಕ, ಚಲನಚಿತ್ರ, ಸಾಹಿತ್ಯ ಸಂಗೀತಗಳಲ್ಲಿ ಸಾಧನೆ ಮಾಡಿದ ಕನ್ನಡಿಗರನ್ನು ಪರಿಚಯಿಸುವ ಕನ್ನಡದ ಕಲಿಗಳು ಎಂಬ ಮಾಲಿಕೆಯನ್ನು ನಮ್ಮ ಏನಂತೀರೀ? ಬ್ಲಾಗಿನಲ್ಲಿ ಕಳೆದ ಐದಾರು ವರ್ಷಗಳಿಂದಲೂ ರೂಢಿಸಿಕೊಂಡಿದ್ದು ಈ ವರ್ಷಕ್ಕೂ ಅಂತಹ ಮಹನೀಯ ಕನ್ನಡಿಗರ ಪಟ್ಟಿಯನ್ನು ಮಾಡಿಕೊಂಡು ಅವರ ಬಗ್ಗೆ ಸವಿಸ್ತಾರವಾದ ವಿಷಯ ಸಂಗ್ರಹಣೆ ಮಾಡಿ ದಿನಕ್ಕೊಬ್ಬ ವ್ಯಕ್ತಿಯನ್ನು ಪರಿಚಯಿಸುವ ಪ್ರಯತ್ನ ಮಾಡುತ್ತೇನೆ. ನಾವೊಂದು ಬಗೆದರೆ, ದೈವವೊಂದು ಬಗೆದೀತು ಎನ್ನುವಂತೆ, ಕೆಲವೊಮ್ಮೆ ಅಕಾಲಿಕವಾಗಿ ಈ ಸರಣಿಯಲ್ಲಿ ಕೆಲವೊಂದು ವ್ಯಕ್ತಿಗಳನ್ನು ಪರಿಚಯಿಸಲೇ ಬೇಕಾಗುವ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತದೆ. ಅಂತಹವರಲ್ಲಿ ಅಕ್ಷರಗಳ ರಾಕ್ಷಸ ರವಿ ಬೆಳಗೆರೆ, ಕನ್ನಡದ ರಾಜರತ್ನ ಪುನೀತ್ ರಂತಹವರ ಜೊತೆ ಮಠ ಸಿನಿಮಾ ಖ್ಯಾತಿಯ ಗುರುಪ್ರಸಾದ್ ಅವರ ಹೆಸರೂ ಸಹಾ ಸೇರ್ಪಡೆಯಾಗಿರುವುದು ನಿಜಕ್ಕೂ ವಿಷಾಧನೀಯವಾಗಿದ್ದು, ನಿರ್ದೇಶನ ಮಾಡಿದ್ದು ಮತ್ತು ನಟಿಸಿದ್ದು ಬೆರಳೆಣಿಕೆಯಷ್ಟೇ ಚಿತ್ರವಾಗಿದ್ದರೂ, ತಮ್ಮ ಚಿತ್ರಗಳ ಮೂಲಕ ಕನ್ನಡಿಗರ ಮನದಲ್ಲಿ ಶಾಶ್ಬತವಾಗಿ ಮನೆ ಮಾಡಿದ್ದ ಗುರುಪ್ರಸಾದ್ ರಾಮಚಂದ್ರ ಶರ್ಮಾ ಅವರ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಪರಿಚಯಿಸುತ್ತಿದ್ದೇವೆ.
ಗುರುಪ್ರಸಾದ್ ಮೂಲತಃ ಕನಕಪುರದವರಾಗಿದ್ದು, ನವೆಂಬರ್ 2, 1972 ರಲ್ಲಿ ಸಾಂಪ್ರದಾಯಸ್ಥ ಕುಟುಂಬವೊಂದರಲ್ಲಿ ಜನಿಸಿದರು. ದುಡಿಯುವ ಕೈಗಳು ಒಂದಾದರೆ ತಿನ್ನುವ ಕೈಗಳು ಹತ್ತಾರು ಎನ್ನುವಂತೆ ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರದಿದ್ದ ಕಾರಣ, ಕಡು ಬಡತನದಲ್ಲೇ ಬಾಲ್ಯವನ್ನು ಕಳೆಯುವಂತಾಗಿತ್ತು, ಚಿಕ್ಕಂದಿನಿಂದಲೂ ಆಟ ಪಾಠಗಳಲ್ಲಿ ಅತ್ಯಂತ ಚುರುಕಾಗಿದ್ದ ಗುರು, ಪಾಠದ ಜೊತೆ ನಾಟಕಗಳ ಬಗ್ಗೆ ಹೆಚ್ಚಿನ ಒಲವಿದ್ದ ಕಾರಣ, ಊರಿನಲ್ಲಿ ಎಲ್ಲೇ ನಾಟಕ ಅಭ್ಯಾಸವಾಗುತ್ತಿದ್ದರೂ, ಅಲ್ಲಿಗೆ ಹೋಗಿ ಅಲ್ಲಿನ ಕಲಾವಿದರ ಹಾವ ಭಾವ, ಅಭಿನಯ ಮತ್ತು ಸಂಭಾಷಣೆಯನ್ನು ಹೇಳುವುದನ್ನು ತದೇಕ ಚಿತ್ತದಿಂದ ನೋಡಿಕೊಂಡು ಬಂದು ಅದನ್ನೇ ಅನುಕರಣೆ ಮಾಡುತ್ತಿದ್ದರು. ಅದೇ ರೀತಿ ಗುರು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಂತೆ, ಆಗೊಮ್ಮೆ ಈಗೊಮ್ಮೆ ಟೆಂಟಿನಲ್ಲಿ ನೋಡಿದ್ದ ಸಿನಿಮಾದ ಅಷ್ಟೂ ಕಥೆಯನ್ನು ಆರಂಭದಿಂದ ಅಂತಿಮವರೆಗೂ ತಮ್ಮ ಗೆಳೆಯರೊಡನೆ ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದರಿಂದ ಬಾಲ್ಯದಲ್ಲೇ ನಿರ್ದೇಶನ ಎನ್ನುವುದು ಆವರಿಗೆ ರಕ್ತಗತವಾಗಿತ್ತಂತೆ. ಸಣ್ಣ ವಯಸ್ಸಿನಿಂದಲೇ ನೂರಾರು ಪುಸ್ತಕವನ್ನು ಓದುವ ಹವ್ಯಾಸವನ್ನು ರೂಢಿ ಮಾಡಿಕೊಂಡಿದ್ದರಿಂದ ಚಿಕ್ಕವಯಸ್ಸಿನಲ್ಲೇ ಕಥೆ, ಕವನಗಳನ್ನು ಬರೆದು ಅದನ್ನು ತಮ್ಮ ಗೆಳೆಯರೊಡನೆ ಹಂಚಿಕೊಂಡು ಸಂಭ್ರಮಿಸುತ್ತಿದ್ದರಂತೆ. ಇನ್ನು ಬಿಎಸ್ಸಿ ಓದುವಾಗ ಹಾಗೂ ಹೀಗೂ ಅಲ್ಪ ಹಣವನ್ನು ಸಂಪಾದಿಸಿಕೊಂಡು ಶನಿವಾರ ಮಧ್ಯಾಹ್ನ ಕಾಲೇಜು ಮುಗಿಯುತ್ತಿದ್ದಂತೆಯೇ ಕನಕಪುರದಿಂದ ಬೆಂಗಳೂರಿಗೆ ಬಂದು ಆ ವಾರ ಬಿಡುಗಡೆಯಾಗಿರುತ್ತಿದ್ದ ಸಿನಿಮಾವನ್ನು ನೋಡಿಕೊಂಡು ತಡರಾತ್ರಿ ಮನೆಗೆ ಸೇರುವವರೆಗೂ ಆ ಸಿನಿಮಾದ ವಿಮರ್ಶೆ ಮಾಡಿಕೊಂಡೇ ಹೋಗುತ್ತಿದ್ದರಂತೆ.
ಹೀಗೆ ಬಾಲ್ಯದಿಂದಲೂ ಕನ್ನಡ ಭಾಷೆಯ ಜೊತೆ ಗಣಿತ ಮತ್ತು ವಿಜ್ಞಾನದಲ್ಲಿ ಬಾರಿ ಚುರುಕಾಗಿದ್ದ ಗುರುಪ್ರಸಾದ್, ತಮ್ಮ ದೈನಂದಿನ ಖರ್ಚಿಗೆ ಮನೆಯವರನ್ನು ಕೇಳುವುದು ಸರಿ ಕಾಣದು ಎಂದು ಭಾವಿಸಿ ತಮ್ಮೂರಿನ ಮನೆಯ ಅಕ್ಕಪಕ್ಕದವರಿಗೆ ಮನೆ ಪಾಠವನ್ನು ಹೇಳಿಕೊಡುವ ಮೂಲಕ ತಮ್ಮ ಹೆಸರಿಗೆ ಅನ್ವರ್ಥದಂತೆ ಹಲವರಿಗೆ ಗುರುವೂ ಆಗಿದ್ದರು. ಹಾಗೆ ಮನೆ ಪಾಠಕ್ಕೆ ಬರುತ್ತಿದ್ದ ಹುಡುಗಿಯನ್ನೇ ಪ್ರೀತಿಸಿ ನಂತರ ಮನೆಯವರನ್ನೆಲ್ಲಾ ಒಪ್ಪಿಸಿ ಮದುವೆಯಾಗುವ ಮೂಲಕ ಶಿಷ್ಯೆಯನ್ನೇ ಮದುವೆಯಾದ ಗುರು ಎಂದು ಊರಲೆಲ್ಲಾ ಗುಲ್ಲು ಎಬ್ಬಿಸಿದ್ದಂತಹ ವ್ಯಕ್ತಿ,

ತಮ್ಮ BSc., ಪದವಿ ಮುಗಿಸುತ್ತಿದ್ದಂತೆಯೇ, ಕನ್ನಡ ಚಿತ್ರರಂಗದಲ್ಲಿ ಏನಾದರೂ ಸಾಧಿಸಲೇ ಬೇಕೆಂಬ ಹಂಬಲದಿಂದ ಕನಕಪುರದಿಂದ ಬೆಂಗಳೂರಿಗೆ ಬಂದು ಮೆಜಿಸ್ಟಿಕ್ಕಿನಲ್ಲಿ ಮೆಡಿಕಲ್ ರೆಪ್ರಸೆಂಟೇಟಿವ್ ಆಗಿ ಕೆಲ ಕಾಲ ಕೆಲಸ ಮಾಡಿದ ನಂತರ ಹಿಂದೂಸ್ಥಾನ್ ಲಿವರ್ ಕಂಪನಿಯಲ್ಲಿ ಸುಮಾರು ಏಳೆಂಟು ವರ್ಷಗಳ ಕಾಲ ರಿಸರ್ಚ್ ಅನಲಿಸ್ಟ್ ಆಗಿ ಕೆಲಸ ಮಾಡುವಾಗಲೇ ನಿರಂತರ ಓದುತ್ತಲೇ ಸಮಯ ಸಿಕ್ಕಾಗಲೆಲ್ಲಾ ಗಾಂಧಿನಗರದ ಬೀದಿ ಬೀದಿಗಳನ್ನು ಸುತ್ತಿ ಯಾರಿಂದಲೂ ಅವರಿಗೆ ಸೂಕ್ತವಾದ ಸಹಾಯ ಸಿಗದೇ ಹೋದಾಗ, ಅದೇ ತಾನೇ ದೂರದರ್ಶನ ಮತ್ತು ಖಾಸಗೀ ಚಾನೆಲ್ಲುಗಳಲ್ಲಿ ದೈನಂದಿನ ಧಾರಾವಾಹಿಗಳು ಆರಂಭವಾದಾಗ, ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಹಿರಿ ತೆರೆಯಾದರೇನು? ಕಿರಿ ತೆರೆಯಾದರೇನು ಎಂದು ಭಾವಿಸಿ ಖಾಸಗೀ ಛಾನೆಲ್ಲುಗಳ ಧಾರಾವಾಹಿಗಳಲ್ಲಿ ಆರಂಭದಲ್ಲಿ ಸಂಭಾಷಣಾಕಾರರಾಗಿ ಸೇರಿಕೊಂಡು ನಂತರ ಸಹಾಯಕ ನಿರ್ದೇಶಕ ಮತ್ತು ಸಂಚಿಕೆಯ ನಿರ್ದೇಶಕರಾಗುವ ಮಟ್ಟಕ್ಕೆ ಬೆಳೆದು ಬಿಟ್ಟರು ಕನ್ನಡದ ಧಾರಾವಾಹಿಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿರುವ ಟಿ.ಎನ್. ಸೀತಾರಾಂ ಅವರ ಗರಡಿಗೆ ಸೇರಿಕೊಂಡ ಗುರು ಅವರ ಮನ್ವಂತರ ಧಾರಾವಾಹಿಯ ಅನೇಕ ಸಂಚಿಕೆಗಳ ನಿರ್ದೇಶನ ಮಾಡಿ ನಿರ್ದೇಶನದ ಕಲೆಯನ್ನು ಕರಗತ ಮಾಡಿಕೊಂಡ ನಂತರ ಸುನಿಲ್ ಕುಮಾರ್ ದೇಸಾಯಿ ಅವರ ಗರಡಿಗೆ ಸೇರಿಕೊಂಡು ಅವರೊಂದಿಗೆ. ಕೆಲಸ ಮಾಡುವ ಮೂಲಕ ಚಿತ್ರರಂಗದ ಒಳ ಹೊರಗುಗಳನ್ನು ಅರಿತುಕೊಂಡು ಹಿರಿತೆರೆಯಲ್ಲಿ ತಮ್ಮ ಕರಾಮತ್ತನ್ನು ತೋರಿಸಲು ಮುಂದಾದರು.

ಹಿಂದಿಯ ದೋ ಆಂಖೇ ಬಾರ್ ಹಾತ್ ಎನ್ನುವ ಸಿನಿಮಾ ರೀತಿಯಲ್ಲೇ ಅದೊಂದು ಊರಿನ ಮಠಾಧೀಶ ಪಟ್ಟಕ್ಕೆ ಆರೇಳು ಖೈದಿಗಳನ್ನು ಕರೆತಂದು ಅವರಿಗೆ ಆಧ್ಯಾತ್ಮಿಕ ಶಿಕ್ಷಣವನ್ನು ಕೊಡಿಸುವ ಹರಸಾಹಸದ, ನವಿರಾದ ಮತ್ತು ಸೂಕ್ಷ್ಮ ವ್ಯಂಗ್ಯಗಳುಳ್ಳ, ಸಾಮಾಜಿಕ ಸಂದೇಶವನ್ನು ನೀಡುವ ಕಥಾ ಹಂದರದ ಮಠ ಎನ್ನುವ ಸಿನಿಮಾದ ಮೂಲಕ 2006ರಲ್ಲಿ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿ ಪಯಣ ಆರಂಭಿಸಿದರು. ಈ ಚಿತ್ರ ನವರಸ ನಾಯಕ ಜಗ್ಗೇಶ್‌ರ ನೂರನೇ ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಕಾರಣ ಸಹಜವಾಗಿಯೇ ಎಲ್ಲರೂ ಕುತೂಹಲ ಭರಿತರಾಗಿದ್ದರು. ಮೊದಲ ಪಂದ್ಯದಲ್ಲೇ ಶತಕ ಗಳಿಸಿದ ಕ್ರಿಕೆಟ್ ಆಟಗಾರನಂತೆ ತಮ್ಮ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ದಕ್ಷ ನಿರ್ದೇಶನದ ಮೂಲಕ ಕನ್ನಡಿಗರ ಹೃದಯವನ್ನು ಸೂರೆಗೈದ ಗುರು ಕ್ಷಣ ಮಾತ್ರದಲ್ಲೇ ಕನ್ನಡಿಗರ ಮನೆ ಮಾತಾದರು.

ಮೊದಲ ಚಿತ್ರವೇ ಸೂಪರ್ ಡ್ಯೂಪರ್ ಹಿಟ್ಟಾಗಿದ್ದ ಕಾರಣ ಅವರ ಎರಡನೇ ಚಿತ್ರದ ಬಗ್ಗೆ ಸಹಜವಾಗಿಯೇ ಎಲ್ಲರೂ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದನ್ನು ಹುಸಿಮಾಡದ ಗುರು ಮತ್ತೆ 2009 ರಲ್ಲಿ ಜಗ್ಗೇಶ್, ತಬಲಾ ನಾಣಿ, ಯಜ್ಞಾ ಶೆಟ್ಟಿ ಜೋಡಿಯೊಂದಿಗೆ 10×8 ಅಡಿಗಳ ಕೊಠಡಿಯಲ್ಲಿಯೇ ಚಿತ್ರೀಕರಿಸಿದ ಎದ್ದೇಳು ಮಂಜುನಾಥ ಚಿತ್ರದ ಮೂಲಕ ಮತ್ತೊಂದು ಸಾಮಾಜಿಕ ಚಿತ್ರ ನೀಡಿದರು, ಇದೇ ಚಿತ್ರದಲ್ಲೇ ಉರ್ದು ಮಿಶ್ರಿತ ಕನ್ನಡ ಭಾಷೆಯಲ್ಲಿ ಮಾತನಾಡುವ ಮುಸ್ಲಿಂ ಇನ್ಸೆಪೆಕ್ಟರ್ ಪಾತ್ರದಲ್ಲಿ ನಟಿಸುವ ಮೂಲಕ ನಟನಾಗಿಯೂ ಜನಪ್ರಿಯರಾಗಿದ್ದರು. ಈ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿ ದೊರಕಿತು. ಇದೇ ಸಮಯದಲ್ಲೇ ಕನ್ನಡ ಚಿತ್ರರಂಗದ ದೊಡ್ಮೆನೆ ಎಂದೇ ಎಂದೇ ಪ್ರಖ್ಯಾತವಾಗಿರುವ ವರನಟ ರಾಜಕುಮಾರ್ ಅವರ ಕ್ಯಾಂಪ್ ಸೇರುವ ಅವಕಾಶ ದೊರೆತು ಆವರ ಮೂರ್ನಾಲ್ಕು ಸಿನಿಮಾಗಳಿಗೆ ಕಥೆ ಚಿತ್ರಕಥೆ ಸಂಭಾಷಣೆ ಬರೆಯುವ ಆವಕಾಶ ದೊರೆತದ್ದು ಅವರ ಜೀವನದ ದೊಡ್ಡ ಸಂಭ್ರಮದ ಸಂಧರ್ಭ ಎಂದು ಹೇಳಿಕೊಂಡಿದ್ದರು. ಅದ್ಯಾವುದೋ ಕಾರಣದಿಂದಾಗಿ ಅಣ್ಣಾವರು ಗುರು ಪ್ರಸಾದ್ ಅವರ ಗಡ್ಡ ಮುಟ್ಟಿದ್ದ ಕಾರಣ ಹರ್ಷಗೊಂಡಿದ್ದ ಗುರು ಅಂದಿನಿಂದ ಸಾಯುವವರೆಗೂ ಅಣ್ಣಾವ್ರು ಮುಟ್ಟಿದ ಗಡ್ಡವನ್ನು ಬೋಳಿಸಿರಲಿಲ್ಲವಂತೆ (ಕೇವಲ ಟ್ರಿಮ್ ಮಾಡಿಸುತ್ತಿದ್ದರಂತೆ)
ಜೋಕ್ ಹೇಳುವುದರಲ್ಲಿ ಗುರುಪ್ರಸಾದ್ ಎತ್ತಿದ ಕೈ. ಅದರಲ್ಲೂ ಅವರ ಈ ಜೋಕ್ ಬಹಳ ಸುಪ್ರಸಿದ್ದಿಯಾಗಿತ್ತು.
ಮೇಷ್ಟ್ರು – ಹೆಣ್ಣು ಮಗು ಆದ್ರೆ ಗಣಿತ ಅಂತ ಹೆಸರಿಡಬೇಕು ಅಂತ ಆಸೆ ಇತ್ತು. ಏನ್ಮಾಡೋದು ಗಂಡು ಮಗು ಆಗೋಯ್ತು
ಅದಕ್ಕೇನಂತೆ ಈಗ, ಬೀಜಗಣಿತ ಅಂತ ಇಟ್ಟರೆ ಆಯ್ತು.
ಈ ರೀತಿಯಾಗಿ ಆಶ್ಲೀಲತೆಯನ್ನೂ ಆಶ್ಲೀಲ ಎನಿಸದಿರುವಷ್ಟರ ಮಟ್ಟಿಗೆ ಹಾಸ್ಯವಾಗಿ ಹೇಳುವ ಕಲೆಯು ಗುರುವಿಗೆ ಕರಗತವಾಗಿತ್ತು.

ಬಹಳ ಜನರಿಗೆ ತಿಳಿಯದೇ ಇದ್ದ ವಿಷಯವೇನೆಂದರೆ ಅನೇಕ ರಿಯಾಲಿಟಿ ಶೋಗಳಲ್ಲಿ ತೆರೆಯ ಹಿಂದೆ ಕೆಲಸ ಮಾಡಿದ್ದರು ಅವುಗಳಲ್ಲಿ ಪ್ರಸಿದ್ಧವಾಗಿದ್ದೆಂದರೆ, ಪುನೀತ್ ರಾಜಕುಮಾರ್ ಅವರು ನಡೆಸಿ ಕೊಟ್ಟ ಕನ್ನಡದ ಕೋಟ್ಯಾಧಿಪತಿಯೂ ಒಂದು. ಆ ಕಾರ್ಯಕ್ರಮದಲ್ಲಿ ಪುನೀತ್ ರಾಜ ಕುಮಾರ್ ಅವರಿಗೆ ಮೆಂಟರ್ ಆಗುವ ಮೂಲಕ ಆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗುವುದರ ಹಿಂದೆ ಗುರು ಅವರ ಶ್ರಮ ಅತ್ಯಂತ ಶ್ಲಾಘನೀಯವಾಗಿತ್ತು. ಆ ಕಾರ್ಯಕ್ರಮ ಒಂದರಲ್ಲಿ ಪುನೀತ್ ಮತ್ತು ರವಿಚಂದ್ರನ್ ಅವರು ಒಂದಾಗಿ ಭಾಗವಹಿಸುವ ಸಂದರ್ಭದಲ್ಲಿ ವಜ್ರೇಶ್ವರಿ ಮತ್ತು ಈಶ್ವರಿಯ ಸಮಾಗಮ ಎಂದು ಬರೆದದ್ದು, ಅದೇ ರೀತಿ ಕಾರ್ಮಿಕರ ದಿನಾಚರಣೆಯ ದಿನದಂದು ಅಪ್ಪು ಅವರ ಬಾಯಲ್ಲಿ ಚಿಕ್ಕ ಮಕ್ಕಳನ್ನು ಕೂಲಿಗೆ ಕಳುಹಿಸಬೇಡಿ ಸ್ಕೂಲಿಗೆ ಕಳುಹಿಸಿ ಎಂದು ಹೇಳಿಸಿದದ್ದೂ ಸಹಾ ಎಲ್ಲರ ಮೆಚ್ಚುಗೆ ಪಡೆದಿತ್ತು. ಹಾಗಾಗಿಯೇ ಪುನೀತ್ ರಾಜಕುಮಾರ್ ಗುರುಪ್ರಸಾದ್ ಅವರನ್ನು ಗುರು ಸ್ಥಾನದಲ್ಲಿ ನೋಡುತ್ತಿದ್ದರು.
ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್‌ಬಾಸ್ ಎರಡನೆಯ ಅವತರಣಿಕೆಯಲ್ಲಿ ಗುರುಪ್ರಸಾದ್ wildcard entry ಆಗಿ ಭಾಗವಹಿಸಿದ ನಂತರವೇ ಅದುವರೆವಿಗೂ ಒಂದು ರೀತಿಯ ಪೇಲವವಾಗಿದ್ದಂತಹ ಬಿಗ್‌ಬಾಸ್ ನಂತರದ ದಿನಗಳಲ್ಲಿ ಅಕುಲ್ ಬಾಲಾಜಿ ಜೊತೆ ಸೇರಿಕೊಂಡು ಗುರು ಮಾಡಿದ ಚೇಷ್ಟೆಗಳಿಂದಾಗಿಯೇ ಜನ ಮನ ಗೆದ್ದಿತು ಎಂದರೂ ತಪ್ಪಾಗದು. ಇವರಿಬ್ಬರ ಗೆಳೆತನದ ಫಲವಾಗಿಯೇ ಅಕುಲ್ ಗೆದ್ದ ನಂತರ ಗುರು ಪ್ರಸಾದ್ ಅವರಿಗೆ ಟಾಟಾ ನ್ಯಾನೋ ಕಾರ್ ಕೊಡಿಸಿದ್ದದ್ದು ಈಗ ಇತಿಹಾಸ. ಆದಾದ ನಂತರ ಕನ್ನಡದ ವಿವಿಧ ಛಾನೆಲ್ಲುಗಳಲ್ಲಿ ಹಾಸ್ಯ ಕಾರ್ಯಕ್ರಮ ಮತ್ತು ನೃತ್ಯ ಕಾರ್ಯಕ್ರಮಗಳಂತಹ ಹತ್ತು ಹಲವು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಸಹಾ ಭಾಗವಹಿಸಿದ್ದರು.

ಅದಾದ ಬಳಿಕ ಡೈರೆಕ್ಟರ್ಸ್ ಸ್ಪೆಷಲ್ ಸಿನಿಮಾ ಮಾಡಿ, ಅದರಲ್ಲಿ ರಂಗಾಯಣ ರಘು ಅವರ ಬಾಯಲ್ಲಿ ಮಾಲೂರು ಕನ್ನಡದ ಶೈಲಿಯಲ್ಲಿ ಆಡಿಸಿದ ಮಾತುಗಳು ನಿಜಕ್ಕೂ ಅದ್ಭುತವೇ ಸರಿ. ಈ ಸಿನಿಮಾ ಮೂಲಕ ಡಾಲಿ ಧನಂಜಯ್ ನಾಯಕನಾಗಿ ಪರಿಚಯಗೊಂಡರು. ಅದಾದ ಬಳಿಕ 2017 ರಲ್ಲಿ ಎರಡನೇ ಸಲ ಎಂಬ ಸಿನಿಮಾ ನಿರ್ದೇಶಿಸಿದರಾದರೂ ಅದು ಸಾಧಾರಣ ಯಶಸ್ಸನ್ನಷ್ಟೆ ಕಂಡಿತು. ಈ ಸಿನಿಮಾ ಆದ ಮೇಲೆ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದ ಗುರುಪ್ರಸಾದ್ ಕರೋನ ಸಮಯದಲ್ಲಿ ಮತ್ತೆ ಜಗ್ಗೇಶ್ ಅವರೊಂದಿಗೆ ರಂಗನಾಯಕ ಸಿನಿಮಾ ಆರಂಭಿಸಿ ಬಾರೀ ನಿರೀಕ್ಷೆಯಿಂದ 2023ರಲ್ಲಿ ತೆರೆ ಕಂಡಿತಾದರೂ, ಚಿತ್ರಮಂದಿರದಲ್ಲಿ ಯಶಸ್ವಿಯಾಗದೇ ಮಾನಸಿಕವಾಗಿ ಭಾರೀ ಜರ್ಜರಿತಾಗಿದ್ದ ಗುರು ಈ ಸೋಲಿನಿಂದ ಸಾಕಷ್ಟು ಸಾಲಗಳಿಗೆ ಸಿಲುಕಿಕೊಂಡಿದ್ದರು. ಅವರೇ ನಟಿಸಿ ನಿರ್ದೇಶಿಸಿದ್ದ ಎದ್ದೇಳು ಮಂಜುನಾಥ-2 ಸುಮಾರು ಎರಡು ವರ್ಷಗಳಿಂದಲೂ ತೆರೆಗೆ ಬಾರದಿದ್ದೂ ಸಹಾ ಅವರನ್ನು ಚಿಂತೆಗೆ ಈಡು ಮಾಡಿತ್ತು. ತಮ್ಮ ಸಾಲು ಸಾಲು ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದೇ ಹೋಗುತ್ತಿದ್ದರಿಂದ ಇತ್ತೀಚೆಗೆ ಅವರ ಚಿತ್ರಗಳ ಪ್ರಮುಖ ಆಕರ್ಷಣೆ ಮತ್ತು ಅವರ ನೈಜ ಶಕ್ತಿಯಾದ ಪಂಚಿಗ್ ಸಂಭಾಷಣೆಯ ಬದಲಾಗಿ ಡಬ್ಬಲ್ ಮೀನಿಂಗ್ ಸಂಭಾಷಣೆಗೆ ಒತ್ತು ನೀಡುತ್ತಿದ್ದದ್ದು ಅವರ ಮನಸ್ಥಿತಿ ಸಹಜವಾಗಿರಲಿಲ್ಲ ಎಂಬುದನ್ನು ಸೂಚಿಸುತ್ತಿತ್ತು.

ನಿರ್ದೇಶಕ ಮಾತ್ರವಲ್ಲದೇ ನಟನಾಗಿ ತಮ್ಮ ಚಿತ್ರಗಳಲ್ಲದೇ, ಮೈಲಾರಿ, ಹುಡುಗರು,ಅನಂತು v/s ನುಸ್ರತ್ ಉಪೇಂದ್ರ ಅವರ ಇನ್ನೂ ಬಿಡುಗಡೆಯಾಗ ಬೇಕಾಗಿರುವ UI ಸಿನಿಮಾದಲ್ಲೂ ನಟಿಸಿದ್ದರು. ಇದಲ್ಲದೇ ಕರೋನ ಸಂಧರ್ಭದಲ್ಲಿ YouTube ಛಾನೆಲ್ಲೊಂದರನ್ನು ಆರಂಭಿಸಿ ಅದರಲ್ಲಿ ತಮ್ಮದೇ ಶೈಲಿಯಲ್ಲಿ ಜನರನ್ನು ರಂಜಿಸಲಾರಂಭಿಸಿದರಾದರೂ, ಅದೂ ಸಹಾ ಕೈ ಹಿಡಿಯದೇ ಇದ್ದಾಗ, ಆತ್ತ ಸಿನಿಮಾದಲ್ಲಿಯೂ ಕೆಲಸ ಇಲ್ಲದೇ ಇದ್ದ ಸಂದರ್ಭದಲ್ಲಿ ತಮ್ಮ ಸಿನಿಮಾ ಅನುಭವವನ್ನು ಉದಯೋನ್ಮುಖ ಕಲಾವಿದರುಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಹೇಳಿಕೊಡುವ ತಮ್ಮದೇ ಆದ ಫಿಲ್ಮ್ ಕೋಚಿಂಗ್ ಕ್ಲಾಸ್ ಸಹಾ ಆರಂಭಿಸಿ ಸುಮಾರು 8-10 ತಂಡಗಳಿಗೆ ಹೇಳಿಕೊಟ್ಟಿದ್ದರು.
ತಪ್ಪು ಮಾಡದವ್ರು ಯಾರವ್ರೇ? ತಪ್ಪು ಮಾಡದವ್ರು ಎಲ್ಲವ್ರೇ?’ ಎಂದು ತಪ್ಪು ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮಠ ಸಿನಿಮಾದಲ್ಲಿ ಹೇಳಿದ್ದ ಗುರು, ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದಲ್ಲೂ ಹತ್ತು ಹಲವು ತಪ್ಪುಗಳನ್ನು ಮಾಡಿಕೊಂಡರು. ಆರಂಭದಲ್ಲಿ ಸಣ್ಣದಾಗಿ ಕುಡಿತದ ಅಭ್ಯಾಸವನ್ನೂ ರೂಢಿ ಮಾಡಿಕೊಂಡ ಗುರು, ನಂತರದ ದಿನಗಳಲ್ಲಿ ಅದಾವ ಪರಿಗೆ ತಲುಪಿದ್ದರೆಂದರೆ, ಕುಡಿತವೇ ಅವರನ್ನು ಆವರಿಸಿಕೊಂಡಿತ್ತು. ಜೀವನದಲ್ಲಿ ಯಶಸ್ಸು ಕಂಡು ಕೊಂಡ ನಂತರ ಅದನ್ನು ಹೇಗೆ ಮುಂದುವರೆಸಿಕೊಂಡು ಹೋಗಬೇಕು ಎಂಬುದರಲ್ಲಿ ಎಡವಿದ್ದ ಕಾರಣದಿಂದಾಗಿಯೇ ವಯಕ್ತಿಕ ಜೀವನದಲ್ಲಿ ಅಪಾರ ನೊವುಂಡಿದ್ದ ಗುರು, ತಾವೇ ಪ್ರೀತಿಸಿ 23 ವಯಸ್ಸಿನ ಮಗಳಿದ್ದ ತಮ್ಮ ಮೊದಲ ಹೆಂಡತಿಯಿಂದ ವಿಚ್ಚೇದನ ಪಡೆದ ನಂತರ ಎರಡನೇ ಮದುವೆಯಾಗಿ ನಗು ಶರ್ಮಾ ಎಂಬ ಎರಡು ವರ್ಷದ ಮಗಳ ತಂದೆಯೂ ಅಗಿದ್ದರು. ಬಲ್ಲ ಮೂಲಗಳ ಮೂಲಕ ತಿಳಿದು ಬಂದ ವಿಷಯವೆಂದರೆ ಅವರ ಎರಡನೇ ಪತ್ನಿ, ಎರಡನೇ ಮಗುವಿನ ಗರ್ಭಿಣಿ ಆಗಿದ್ದರಂತೆ.
ಜೀವನದಲ್ಲಿ ಸದಾಕಾಲವೂ ಧನಾತ್ಮಕವಾಗಿರ ಬೇಕು ಎನ್ನುತ್ತಲೇ ಎಲ್ಲರನ್ನೂ ನಗಿಸುತ್ತಿದ್ದ ಗುರುಪ್ರಸಾದ್ ಮಾದನಾಯಕಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಮನೆಯಿಂದ ದುರ್ವಾಸನೆ ಬರುತ್ತಿದ್ದ ಕಾರಣ ಅಪಾರ್ಟ್ಮೆಂಟ್ ಅಕ್ಕಪಕ್ಕದವರು ಪೋಲಿಸರಿಗೆ ತಿಳಿಸಿದ್ದು ಪೋಲೀಸರು ಬಂದು ಅವರ ಮನೆಯ ಬಾಗಿಲನ್ನು ಒಡೆದು ಒಳಗೆ ಹೋದಾಗ ಗುರು ಅವರ ದೇಹ ಫ್ಯಾನಿಗೆ ನೇತು ಹಾಕಿಕೊಂಡಿದ್ದನ್ನು ನೋಡಿದ್ದು, ಅವರ ಮೊದಲ ತನಿಖೆಯ ನಂತರ ಗುರು ಅವರ ಸಾವು ನಾಲ್ಕೈದು ದಿನಗಳ ಮುಂಚೆಯೇ ಅಗಿರಬಹುದು ಎಂದು ತಿಳಿಸಿದ್ದಾರೆ. ಸದ್ಯಕ್ಕೆ ತಿಳಿದು ಬಂದ ಮಾಹಿತಿಯ ಪ್ರಕಾರ ತಮ್ಮ ಆತ್ಮೀಯರಿಂದಲೇ ಪಡೆದ ಕೈ ಸಾಲವನ್ನು ಹಿಂದಿರುಗಿಸಲಾಗದೇ ಅವರಿಗೆ ಕೊಟ್ಟ ಚೆಕ್ ಬೌನ್ಸ್ ಆಗಿ ಅದರ ವಿರುದ್ಧ ನ್ಯಾಯಾಲಯದಲ್ಲಿ ಮೊಕ್ಕದ್ದಮ್ಮೆ ಎದುರಿಸುತ್ತಿದ್ದ ಗುರು, HDFC Bankನಿಂದ 40 ಲಕ್ಷ ಮತ್ತು ಎದ್ದೇಳು ಮಂಜುನಾಥ -2 ಸಿನಿಮಾಕ್ಕೆ Crowd fundingನ ಮೂಲಕ ಸುಮಾರು 1.2 ಕೋಟಿಗಳಷ್ಟು ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಂಡಿದ್ದು ಅದನ್ನು ತೀರಿಸುವ ಸಲುವಾಗಿ Online Rummy circle ಎಂಬ ಜೂಜಿನಲ್ಲಿಯೂ ಭಾಗಿಯಾಗಿ ಸುಮಾರು 60-70 ಲಕ್ಷದಷ್ಟು ಹಣವನ್ನು ಕಳೆದುಕೊಂಡಿದ್ದು ಅವರನ್ನು ಮತ್ತಷ್ಟು ಹೈರಾಣಾಗಿಸಿತ್ತು. ಸಾಲಗಾರ ಬಾದೆಯಿಂದ ಪದೇ ಪದೇ ಮನೆಯನ್ನು ಬದಲಿಸುತ್ತಿದ್ದ ಗುರು ಕಳೆದ ಒಂದು ವರ್ಷದಲ್ಲೇ ಸುಮಾರು 3 ಮನೆಗಳನ್ನು ಬದಲಿಸಿದ್ದರಂತೆ.

ಎಲ್ಲವೂ ಅಂದು ಕೊಂಡಂತೆ ಆಗಿಬಿಟ್ಟಿದ್ದರೆ, ಕನ್ನಡಕ್ಕೊಂದು ಆಸ್ಕರ್ ಪ್ರಶಸ್ತಿಯನ್ನು ತಂದು ಕೊಡುವಂತಹ ಸಿನಿಮಾ ಮಾಡುತ್ತೇನೆ ಮತ್ತು ತಮ್ಮ 8ನೇ ಸಿನಿಮಾದಲ್ಲಿ ತಮ್ಮ ದೊಡ್ಡ ಮಗಳನ್ನೇ ನಾಯಕಿಯನ್ನಾಗಿಸುತ್ತೇನೆ ಎಂದು ಹೇಳಿಕೊಂಡು ಓಡಾಡುತ್ತಿದ್ದ ಗುರುಪ್ರಸಾದ್ ಎಲ್ಲವ(ರ)ನ್ನೂ ಬಿಟ್ಟು ಬಾರದ ಲೋಕಕ್ಕೆ ಹೋಗುವ ಮೂಲಕ ಕನ್ನಡ ಚಿತ್ರರಸಿಕರನ್ನು ಕಣ್ಣಿರ ಕೋಡಿಯಲ್ಲಿ ಬಿಟ್ಟಿ ಹೋಗಿದ್ದಾರೆ ಎಂದರೂ ತಪ್ಪಾಗದು. ಕನಕಪುರದಿಂದ ಬೆಂಗಳೂರಿಗೆ ಅಪ್ಪನಿಂದ ಬಸ್ ಚಾರ್ಚ್ ರೂಪದಲ್ಲಿ ಕೇವಲ 11 ರೂಪಾಯಿ ಪಡೆದುಕೊಂಡು ಬೆಂಗಳೂರಿನ ಗಾಂಧಿನಗರಕ್ಕೆ ಬಂದು ತಮ್ಮ ಬುದ್ಧಿಶಕ್ತಿ ಮತ್ತು ಪರಿಶ್ರಮದಿಂದ Zero ದಿಂದ Hero ಆಗಿ ಬೆಳೆದು ಅದನ್ನು ನಿಭಾಯಿಸಲಾಗದೇ, ದುಶ್ಚಟಗಳಿಗೆ ಮತ್ತು ಜೂಜಿಗೆ ಬಲಿಯಾಗಿ ಇದ್ದ ಬದ್ದ ಹಣದ ಜೊತೆ ಮಾನ ಮರ್ಯಾದೆಯೆನ್ನೆಲ್ಲಾ ಕಳೆದುಕೊಂಡು ಒಂದು ರೀತಿ ಹೇಡಿಯಂತೆ ಆತ್ಮಹತ್ಯೆ ಮಾಡಿ ಕೊಂಡಿದ್ದು ಗಾಂಧಿನಗರಕ್ಕೆ ಬಂದು ಏನನ್ನೋ ಕಡಿದು ಕಟ್ಟೆ ಹಾಕುತ್ತೇವೇ ಎಂದು ಬರುವವರಿಗೆ ಮಾದರಿಯಾಗಬೇಕು.
ಮಾಡಿದ್ದು ಬೆರಳೆಣಿಕಷ್ಟೇ ಚಿತ್ರವಾದರೂ ತಮ್ಮದೇ ಆದ ಟ್ರೆಂಡ್ ಸೆಟ್ಟಿಂಗ್ ಮಾಡಿದ್ದ ಗುರು ಪ್ರಸಾದ್ ಕನ್ನಡ ಚಿತ್ರರಂಗ ಕಂಡ ಅದ್ಬುತವಾದ ಕತೆಗಾರ, ಸಂಭಾಷಣೆಕಾರ ಮತ್ತು ನಿರ್ದೇಶಕರಾಗಿದ್ದ ಕಾರಣ ಕನ್ನಡದ ಕಲಿಗಳು ಎನಿಸಿಕೊಳ್ತಾರೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ