ಮಕ್ಕಳ ಕೂಟದ ಆರ್. ಕಲ್ಯಾಣಮ್ಮನವರು

kal2ಹಿಂದೆಲ್ಲಾ ಮಕ್ಕಳಿಗೆ ಬೇಸಿಗೆ ರಜಾ ಬಂದಾಗ ಅಜ್ಜಿಯ ಮನೆಗೆ ಹೋಗುವುದು ವಾಡಿಕೆಯಾಗಿತ್ತು. ನಂತರದ ದಿನಗಳಲ್ಲಿ ಬಹುತೇಕರು ಊರಿನಿಂದ ಹತ್ತಿರದ ನಗರ ಪ್ರದೇಶಗಳಿಗೆ ವಲಸೆ ಬಂದ ಕಾರಣ  ಅಜ್ಜಿಮನೆಯ ಸಂಸ್ಕೃತಿಯೇ ಮಾಯವಾಗಿ, ನಗರದಲ್ಲೇ ಉಳಿಯುವಂತಾದಾಗ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿದ್ದೇ ಮಕ್ಕಳ ಬೇಸಿಗೆ ಶಿಬಿರ. ಈ ಎಲ್ಲಾ ಬೇಸಿಗೆ ಶಿಬಿರಗಳಿಗೆ ಮೂಲ ಸ್ವರೂಪವೇ ನಮ್ಮ ಇಂದಿನ ಕಥಾ ನಾಯಕಿಯಾದ ಶ್ರೀಮತಿ ಆರ್. ಕಲ್ಯಾಣಮ್ಮನವರು ಬೆಂಗಳೂರಿನ ಚಾಮರಾಜಪೇಟೆಯ ಕೋಟೆ ಹೈಸ್ಕೂಲಿನ  ಪಕ್ಕದಲ್ಲೇ ಆರಂಭಿಸಿದ್ದ ಮಕ್ಕಳ ಕೂಟ ಎಂದರೂ ತಪ್ಪಾಗದು. ಬಾಲ ವಿಧವೆಯಾದರೂ ತಮ್ಮ ಓದನ್ನು ಮುಂದುವರೆಸಿ ಸಾಹಿತಿಯಾಗಿ ಅದರಲ್ಲೂ ಮಕ್ಕಳ ಸಾಹಿತಿಯಾಗಿ ರಾಜಕೀಯದಲ್ಲೂ ಬೆರಳಾಡಿಸಿ, ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡಿದ್ದ ಶ್ರೀಮತಿ ಆರ್. ಕಲ್ಯಾಣಮ್ಮನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

kalyanamma1ಮೂಲತಃ ತಮಿಳು ನಾಡಿನ ಸಾಂಪ್ರದಾಯಿಕ ಕುಟುಂಬದವರಾದರೂ ಅವರ ಪೂರ್ವಜರು ಅನೇಕ ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ನೆಲಸಿದ್ದ ಕಾರಣ, ಒಂರು ರೀತಿಯ ಕನ್ನಡಿಗರೇ ಆಗಿದ್ದ  ಶ್ರೀ ರಾಮಸ್ವಾಮಿ ಅಯ್ಯಂಗಾರ್  ಮತ್ತು ಶ್ರೀಮತಿ ಜಾನಕಮ್ಮ ದಂಪತಿಗಳ ಏಳು ಜನ ಹೆಣ್ಣುಮಕ್ಕಳ ಪೈಕಿ ಎರಡನೆಯವರಾಗಿ 1892ರಲ್ಲಿ ಕಲ್ಯಾಣಮ್ಮನವರ ಜನವಾಗುತ್ತದೆ. ಅಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಾಲೆಗೆ ಕಳುಹಿಸಿ ವಿದ್ಯಾಭ್ಯಾಸ ಕೊಡಿಸುವ ಪದ್ದತಿ ಅಷ್ಟಾಗಿಲ್ಲದೇ, ಮನೆಯೇ ಮೊದಲ ಪಾಠ ಶಾಲೆ, ಅಪ್ಪಾ ಅಮ್ಮಂದಿರೇ ಮೊದಲ ಗುರು ಎನ್ನುವಂತೆ  ಆರಂಭದಲ್ಲಿ ಕಲ್ಯಾಣಮ್ಮನವರು ಮನೆಯಲ್ಲೇ ಮಾತೃಭಾಷೆ ತಮಿಳಿನ ಜೊತೆ, ಕನ್ನಡ ಮತ್ತು ಸಂಸ್ಕೃತ ಭಾಷೆಯ ಪರಿಚಯವಾಗಿತ್ತದೆ. ಆಗಿನ್ನೂ ಬಾಲ್ಯ ವಿವಾಹ ಪದ್ದತಿ ರೂಢಿಯಲ್ಲಿದ್ದ ಕಾರಣದಿಂದಾಗಿ ತಮ್ಮ 10ನೇ ವಯಸ್ಸಿಗೆಲ್ಲಾ ಮದುವೆಯಾಗಿ ಮದುವೆಯ ಬಗ್ಗೆ ತಿಳುವಳಿಕೆ ಬರುವ ಮುನ್ನವೇ ಅವರು ವಿಧವೆಯಾಗುತ್ತಾರೆ. ದುಃಖಕರವಾದ ವಿಚಾರವೆಂದರೆ, ಅವರ ಒಡ ಹುಟ್ಟಿದ  ಏಳು ಅಕ್ಕತಂಗಿಯರಲ್ಲಿ ಐವರು ಬಾಲ್ಯ ವಿಧವೆಯರಾಗಿದ್ದರು.

ಅದೃಷ್ಟವಷಾತ್  ಕಲ್ಯಾಣಮ್ಮನವರ ಚುರುಕುತನ ಮತ್ತು ಬುದ್ದಿವಂತಿಕೆಯನ್ನು ಗಮನಿಸಿದ ಅವರ ಚಿಕ್ಕಪ್ಪನವರು ಆಕೆಯನ್ನು ಉಳಿದ ವಿಧವೆಯರಂತೆ ಮನೆಯ ಮೂಲೆಯಲ್ಲಿ ಕೂರಿಸದೇ, ಅವರನ್ನು ಶಾಲೆಗೆ ಸೇರಿಸಿ ಓದಲು  ಪ್ರೋತ್ಸಾಹ ನೀಡಿದ್ದದ್ದು ಕಮಲಮ್ಮನವರ ಬದುಕಿನ ದಿಕ್ಕನ್ನೇ ಬದಲಿಸಿತು ಎಂದರೂ ತಪ್ಪಾಗದು. 1906 ರಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ , ಕನ್ನಡ ಮತ್ತು ಇಂಗ್ಲೀಷ್ ಎರಡೂ ವಿಷಯಗಳಲ್ಲಿ ಉತ್ತೀರ್ಣರಾಗಿ ಓದನ್ನು ಮುಂದುವರೆಸುವ ಆಸೆಯಿದ್ದರೂ, ಮನೆಯ  ಆರ್ಥಿಕ ಪರಿಸ್ಥಿತಿ ಮತ್ತು ಕೆಲವು ಕಟ್ಟು ಪಾಡುಗಳಿಂದಾಗಿ ಓದನ್ನು ಮುಂದುವರೆಸಲು ಆಗದೇ ಹೋದರೂ, ಅವರ ಮನೆಯಲ್ಲಿದ್ದ  ಕನ್ನಡ, ತಮಿಳು, ಸಂಸ್ಕೃತದ ಪ್ರಾಚೀನ ಗ್ರಂಥಗಳನ್ನು ಅಧ್ಯಯನ ಮಾಡುವ ಮೂಲಕ ತಮ್ಮ ಬೌದ್ಧಿಕ ಬುದ್ದಿಮತ್ತೆಯನ್ನು ಹೆಚ್ಚಿಸಿಕೊಂಡರು.

ಹೀಗೆ ಹಲವು ವರ್ಷಗಳ ಅಧ್ಯಯನದ  ಜ್ಞಾನವನ್ನು ಎಲ್ಲರೊಡನೆ ಹಂಚಿಕೊಳ್ಳುವ ಮನಸ್ಸಿನಿಂದ  ಕವಿತೆ, ಕವನಗಳು ಮತ್ತು ಲೇಖನಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸಲು ಆರಂಭಿಸಿದ ಕಲ್ಯಾಣಮ್ಮನವರು  ತಮ್ಮ ಹೆಸರಿನ ಅನ್ವರ್ಥದಂತೆಯೇ ಅಂದಿನ ಸಮಾಜದಲ್ಲಿ ಅವರಂತೆಯೇ ಇದ್ದ ಅಸಂಖ್ಯಾತ ಬಾಲ ವಿಧವೆಯರ ಕಲ್ಯಾಣಕ್ಕಾಗಿ, ನಿರ್ಗತಿಕ ಸ್ತ್ರೀಯರ ಏಳಿಗೆಗಾಗಿ, ಯೋಜನಾ ಬದ್ದವಾಗಿ ದುಡಿಯುವ ಫಣ ತೊಟ್ಟಾಗ ಅವರ ವಯಸ್ಸು ಕೇವಲ 14-15 ವರ್ಷಗಳು ಎಂದರೆ ಅವರ ಪ್ರಬುದ್ಧತೆ ಮತ್ತು ಚಿಂತನಾ ಶೈಲಿ ಯಾವ ಮಟ್ಟದಲ್ಲಿತ್ತು ಎಂಬುದರ ಅರಿವಾಗುತ್ತದೆ.

sharada_Sthree_Samajaಕೇವಲ ಆಧ್ಯಾತ್ಮಿಕ ಶ್ರದ್ದೆ, ಸಂಕಲ್ಪಶಕ್ತಿ ಮತ್ತು ಕ್ರಿಯಾಶಕ್ತಿಗಳಿದ್ದಲ್ಲಿ ಮಾತ್ರವೇ ತಾವು ಅಂದುಕೊಂಡ ಕೆಲಸವನ್ನು ಸಾಧಿಸಲು ಆಗದು ಎಂಬುದನ್ನು ಮನಗಂಡಿದ್ದ ಕಲ್ಯಾಣಮ್ಮನವರು ತಮ್ಮ ಸುತ್ತಲಿನ ಹಲವು ಗಣ್ಯ ವ್ಯಕ್ತಿಗಳನ್ನು ಭೇಟಿಯಾಗಿ ತಮ್ಮ ವಿಚಾರಧಾರೆಯನ್ನು ಅವರ ಮುಂದೆ ಸಮರ್ಪಕವಾಗಿ ಮಂಡಿಸಿ ಅವರೆಲ್ಲರ  ಸಹಕಾರವನ್ನು ಕೋರಿದ್ದಲ್ಲದೇ,  ದೇಶದ ವಿವಿದೆಡೆಯಲ್ಲಿ  ಸ್ತ್ರೀಯರ ಅಭಿವೃದ್ದಿ ಮತ್ತು ಸುಧಾರಣೆಗಳಿಗಾಗಿ ನಡೆಯುತ್ತಿದ್ದ ಹೋರಾಟಗಳು ಮತ್ತು ಕಾರ್ಯಗಳನ್ನು ಅಧ್ಯಯನ ಮಾಡಿ ಅದೇ ರೀತಿಯ ಕಾರ್ಯ ಚಟುವಟಿಕೆಗಳನ್ನು ಕರ್ನಾಟಕದಲ್ಲೂ ಆರಂಭಿಸುವ  ನಿಟ್ಟಿನಲ್ಲಿ 1913ರಲ್ಲಿ ಶಾರದಾ ಸ್ತ್ರೀ ಸಮಾಜವನ್ನು ಸ್ಥಾಪಿಸಿ, ಅದರ ಸಂಸ್ಥಾಪನಾ ಕಾರ್ಯದರ್ಶಿ ಮತ್ತು ಖಜಾಂಚಿಯಾದರು. ಶಾರದಾ ಸಮಾಜದ ಮೂಲಕ ತಮ್ಮ  ಕಲ್ಪನೆಯ ಕೂಸಾದ, ಪಸ್ತಕ ಭಂಡಾರ, ಪಂಡಿತರಿಂದ ಉಪನ್ಯಾಸ, ಹೆಣ್ಣು ಮಕ್ಕಳಿಗೆ ಸಂಗೀತ, ನೃತ್ಯದ ಜೊತೆ ಕರಕುಶಲ ಕೈಗಾರಿಕೆಯನ್ನು ಕಲಿಸಿ ತನ್ಮೂಲಕ ಗುಡಿಕೈಗಾರಿಕೆಗಳನ್ನು ಆರಂಭಿಸಲು ಪ್ರೋತ್ಸಾಹ, ಇವೆಲ್ಲದರ ಜೊತೆ ಶಾರಾದ ಸ್ತ್ರೀ ಸಮಾಜದಲ್ಲಿ  ಕಲಿಯಲು ಬರುವ ತಾಯಂದಿರ ಮಕ್ಕಳನ್ನ ನೋಡಿಕೂಳ್ಳುವ ವ್ಯವಸ್ಥೆಯನ್ನೂ ಸಹಾ ಸಾಕಾರಗೊಳಿಸಿದರು. ದುರಾದೃಷ್ಟವಷಾತ್ 1926 ರಲ್ಲಿ ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ತಾವೇ ಕಟ್ಟಿ ಬೆಳೆಸಿದ ಸ್ತ್ರೀ ಸಮಾಜದಿಂದ  ಹೊರಬರಬೇಕಾಗಿ ಹೋದದ್ದು ವಿಷಾಧನೀಯ.

kal3ಸ್ತ್ರೀ ಸಮಾಜ ಇಲ್ಲದೇ ಹೋದರೇನಂತೇ ಇಡೀ ಸ್ತ್ರೀ ಸಮಾಜವನ್ನೇ ಬದಲಿಸ ಬಲ್ಲಂತಹ ಅವರ ಏಳಿಗೆಗೆ ಮುಖ್ಯವಾಣಿಯಾಗ ಬಲ್ಲಂತಹ ಸರಸ್ವತಿ ಎಂಬ ಪತ್ರಿಕೆಯನ್ನು 1917ರಲ್ಲಿ ಆರಂಭಿಸಿ ಅದರ ಮೂಲಕ ಭಾರತ ಮಹಿಳಾ ಸಾಧಕಿಯರ ಪರಿಚಯವನ್ನು ಮಾಡಿಸುತ್ತಲೇ,  ಪತ್ರಿಕೆಯ ಅಷ್ಟೂ ಕೆಲಸಗಳನ್ನು ತಾವೇ ಮಾಡುತ್ತಿದ್ದದ್ದು ವಿಶೇಷವಾಗಿತ್ತು. ಈ ಪತ್ರಿಕೆ ಮೂಲಕ ಅನೇಕ ಹೊಸ ಪ್ರತಿಭೆಗಳು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದ ಕೀರ್ತಿಯೂ ಸಹಾ ಕಲ್ಯಾಣಮ್ಮನವರದ್ದಾಗಿತ್ತು. ಈ ಪತ್ರಿಕೆಯನ್ನು ಎಲ್ಲರೂ ಓದಲು ಆನುಕೂಲವಾಗುವಂತಹ ಕೈಗೆಟುಕುವ ಬೆಲೆಯಲ್ಲಿ ಪತ್ರಿಕೆಯನ್ನು ಮಾರಾಟ ಮಾಡುತ್ತಿದ್ದ ಕಲ್ಯಾಣಮ್ಮನವರು ಸುಮಾರು 45 ವರ್ಷಗಳ ಕಾಲ ಈ ಪತ್ರಿಕೆಯನ್ನು ನಡೆಸಿದ ಬಳಿಕ  ಅನಾರೋಗ್ಯದ ಕಾರಣದಿಂದ ಪತ್ರಿಕೆಯ ಕೆಲಸದಿಂದ ವಿಮುಕ್ತಿಯನ್ನು ಹೊಂದಿದರು.

makkala_kootaಸ್ತ್ರೀಯರ  ಸಮಸ್ಯೆಗಳ ನಿವಾರಣೆಗೆಂದೇ ತಮ್ಮ ಜೀವಮಾನವನ್ನು ಮುಡುಪಾಗಿಟ್ಟಿದ್ದ ಕಲ್ಯಾಣಮ್ಮನವರಿಗೆ, ಕುಟುಂಬದಲ್ಲಿ ತಾಯಿ ಮತ್ತು ಮಕ್ಕಳು ಅವಿನಾಭಾವ ಸಂಬಂಧವೇ ಮುಖ್ಯವಾಗಿದ್ದು, ತಾಯಿ ಮತ್ತು ಮಕ್ಕಳನ್ನು ಬೇರ್ಪಡಿಸಿದಲ್ಲಿ, ಮಹಿಳೆಯರ ಅಭಿವೃದ್ದಿ ಅಸಾದ್ಯವೆಂದು ತಿಳಿದ ಕಲ್ಯಾಣಮ್ಮನವರು ತಮ್ಮ ಮಹಿಳಾ ಸಮಾಜಗಳಲ್ಲಿ ಮಕ್ಕಳಿಗೂ ಸ್ಥಳವಿರಬೇಕು ಎಂದು ಪ್ರತಿಪಾದಿಸಿದ್ದಲ್ಲದೇ ಅಲ್ಲಿ ನರ್ಸರಿ ಮತ್ತು ಪ್ರಾಥಮಿಕ ಶಾಲೆಗಳನ್ನು ಆರಂಭಿಸಿ  ಅದರ ಮೂಲಕ ಉತ್ತಮವಾದ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿಹಿಡಿಯುವಂತಹ ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ಕೊಟ್ಟರು. ಇದೇ ಸಮಯದಲ್ಲಿ ಕಲಿಕೆಯಿಂದ ವಂಚಿತರಾದ ಬೀದಿ ಮಕ್ಕಳಲ್ಲಿಯೂ ಸಹಾ ಇರಬಹುದಾದ ಪ್ರತಿಭೆಯನ್ನು ಹೆಕ್ಕಿ  ಅವರಿಗೂ ಅವಕಾಶ ಕೊಟ್ಟಲ್ಲಿ ಏನಾದರು ಸಾಧಿಸಬಹುದು ಎಂಬ ಆಲೋಚನೆ ಆವರಿಗೆ ಹೊಳೆಯುತ್ತಿದ್ದಂತೆಯೇ, 1938ರಲ್ಲಿ ಚಾಮರಾಜಪೇಟೆಯ ಕೋಟೇ ಹೈಸ್ಕೂಲ್ ಪಕ್ಕದಲ್ಲಿ ಅಖಿಲ ಕರ್ನಾಟಕ ಮಕ್ಕಳ ಕೂಟವನ್ನು   ಸ್ಥಾಪಿಸಿದರು. ಈ ಪ್ರಯತ್ನ ಬಾರೀ ಯಶಸ್ಸು ಪಡೆಯುತ್ತಿದ್ದಂತೆಯೇ ಅದರ ಉಪಶಾಖೆಗಳು ಮೈಸೂರು ಮತ್ತು ಮಂಗಳೂರಿನಲ್ಲೂ ಆರಂಭಿಸಲಾಯಿತು.  ಇಲ್ಲಿ ಮಕ್ಕಳಿಗೆ  ಹಾಡು ಹಸೆ, ನೃತ್ಯ ನಾಟಕಗಳನ್ನು ಹೇಳಿಕೊಡುತ್ತಿದ್ದದ್ದಲ್ಲದೇ, ಅದೇ ಮಕ್ಕಳಿಂದ ಸಾಂಸ್ಕೃತಿಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದ್ದದ್ದಲ್ಲದೇ, ಅಗ್ಗಾಗ್ಗೆ  ಮಕ್ಕಳ ಸಮ್ಮೇಳನ ನಡೆಸುವುದು, ಮಕ್ಕಳ ಸಾಹಿತ್ಯ ಪ್ರಕಟಣೆ ಮಾಡುವ ಮೂಲಕ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತವಾದ ವೇದಿಕೆಯಾಯಿತು.

makkala_Kootaನೋಡ ನೋಡುತ್ತಿದ್ದಂತೆಯೇ ಆರಂಭಿಸಿದ ಎಲ್ಲಾ ಕಡೆಗಳಲ್ಲೂ ಮಕ್ಕಳ ಕೂಟ ಭಾರೀ ಯಶಸ್ಸನ್ನು ಪಡೆದ್ದದ್ದಲ್ಲದೇ, ಆರಂಭದಲ್ಲಿ ನಗರ ಮಟ್ಟಕ್ಕೆ ಸೀಮಿತವಾಗಿದ್ದದ್ದು, ಗ್ರಾಮಾಂತರ ಪ್ರದೇಶಗಳಲ್ಲೂ ಮಕ್ಕಳ ಕೂಟ ಆರಂಭವಾಗಿ ಕಲ್ಯಾಣಮ್ಮನವರ ಕಲ್ಪನೆಯ ಕೂಸಾದ ಮಕ್ಕಳ ಕೂಟದ ಉದ್ದೇಶಗಳು ಸಾಕಾರಗೊಂಡವು, ಈ ಮೂಲಕ ಅನೇಕ ಬಾಲ ಪ್ರತಿಭೆಗಳು ಹೊರಬಂದು ಮುಂದೆ  ಕನ್ನಡ ರಂಗಭೂಮಿ, ಚಲನಚಿತ್ರರಂಗ ಮತ್ತು ಸಾಹಿತ್ಯ ಲೋಕದಲ್ಲಿ ಮಿಂಚತೊಡಗಿದರು.   ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ  ಅತ್ಯಂತ ಶ್ರೇಷ್ಟ ನಿರ್ದೇಶಕ, ನಟ, ಬರಹಗಾರ ಮತ್ತು ಗಾಯಕರಾಗಿಯೂ ಪ್ರಖ್ಯಾತವಾಗಿರುವ ರಿಯಲ್ ಸ್ಟಾರ್ ಉಪೇಂದ್ರ ಸಹಾ ತಮ್ಮ ಬಾಲ್ಯದಲ್ಲಿ ಇದೇ ಮಕ್ಕಳ ಕೂಟದ ಪ್ರತಿಭಾ ಕಾರಂಜಿಯ ಆವಿಷ್ಕಾರ ಎನ್ನುವುದು ಗಮನಾರ್ಹವಾಗಿದೆ.

ಇಷ್ಟೆಲ್ಲಾ ಕಾರ್ಯಚಟುವಟಿಕೆಗಳ ಮಧ್ಯೆಯೂ ಕಲ್ಯಾಣಮ್ಮನವರು ತಮ್ಮ ದೃಷ್ಟಿಯನ್ನು ಮಕ್ಕಳ ಸಾಹಿತ್ಯದತ್ತ ಹರಿಸಿ ಪ್ರಿಯಂವದ, ಸುಖಲತಾ, ಭಕ್ತಮೀರಾ ಮಾಧವಿ, ನಿರ್ಮಲಾ, ನೀರದಾ, ರಣಕೇಸರಿ, ಷಹಜಹಾನ್ ಮೊದಲಾದವು  ಕಾದಂಬರಿಗಳು. ವಸುಂಧರಾ, ನೀಳ್ಗತೆ, ಒಲ್ಲದ ಹೆಂಡತಿ, ರಾಣಿ ದುರ್ಗಾವತಿ ಮುಂತಾದವು ಕಥೆಗಳು. ವರದಕ್ಷಿಣೆ, ಯದುರಾಯ, ದರಿದ್ರನಾರಾಯಣ, 20ನೇ ಶತಮಾನದ ಅಳಿಯ, ಬ್ಯಾರಿಸ್ಟರ್ ರಾಮಚಂದ್ರನ್, ಯದುರಾಯ, ಸತಿ ಪದ್ಮಿನಿ ಮೊದಲಾದವು ನಾಟಕಗಳು. ಪಂಚಕಜ್ಜಾಯ, ಪುಟಾಣಿ ಕಥೆಗಳು, ವಿಕಟಕವಿ, ಕನ್ನಡಿ, ನಮ್ಮ ಹಿಂದೂಸ್ಥಾನ ಮೊದಲಾದವುಗಳನ್ನು  ಮಕ್ಕಳಿಗಾಗಿ ಬರೆದರು

ಕೇವಲ ತಮ್ಮ ಸ್ತ್ರೀ ಸಮಾಜ, ಪತ್ರಿಕೆ, ಸಾಹಿತ್ಯ ರಚನೆಯಲ್ಲದೇ ಸಮಾಜದ ಇತರ ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಕಲ್ಯಾಣಮ್ಮನವರು,

  • 1919 ರಲ್ಲಿ ಬಂಗಾಲದ ಆರ್ಯ ಸಾಹಿತ್ಯ ಪರಿಷತ್ತು ಕಲ್ಯಾಣಮ್ಮನವರಿಗೆ ದ್ಯಾವಿನೋದಿನಿ ಎಂಬ ಬಿರುದನ್ನಿತ್ತು ಗೌರವಿಸಿತು.
  • 1926—27 ರಲ್ಲಿ ನ್ಯಾಷನಲ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಸ್ಥಾಪಿಸಿದ್ದ ಬಾಲ ಕರ್ನಾಟಕ ಸಂಘಕ್ಕೆ ಅಧ್ಯಕ್ಷರಾಗಿದ್ದರು.
  • 1932 ರಲ್ಲಿ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿ ಸರಕಾರದಿಂದ ನೇಮಕಗೊಂಡು ಅಲ್ಲಿಯೂ ದಕ್ಷತೆಯಿಂದ ಕಾರ್ಯನಿರ್ವಹಿಸಿದರು.
  • 1933ರಲ್ಲಿ ಬೆಂಚ್ ಮೆಜಿಸ್ಟ್ರೇಟ್‍ರಾಗಿ ನೇಮಕಗೊಂಡಿದ್ದ ಕಲ್ಯಾಣಮ್ಮ ಸುಮಾರು 15 ವರ್ಷ ಈ ಸೇವೆಯನ್ನು ನಿರ್ವಹಿಸಿದರು.
  • 1935ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ಮಹಿಳಾ ಅಧ್ಯಕ್ಷೆಯಾಗಿದ್ದಲ್ಲದೇ ಕನ್ನಡ ನುಡಿ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಕೆಲಸ ಮಾಡಿದರು
  • 1935ರಲ್ಲಿ ನವರಾತ್ರಿಯ ಸಂಧರ್ಭದಲ್ಲಿ ಮೈಸೂರು ಮಹಾರಾಜರು ಇವರಿಗೆ ಸಾರ್ವಜನಿಕ ಸೇವಾ ಪದಕ ನೀಡಿ ಗೌರವಿಸಿದ್ದಲ್ಲದೇ, ಅವರನ್ನು ಮೈಸೂರು ಪ್ರಜಾಪ್ರತಿನಿಧಿಯಾಗಿ ಪರಿಷತ್ತಿನ ಸದಸ್ಯೆಯಾಗಿ ನೇಮಿಸಿದರು. ಹೀಗೆ ಅರಮನೆಯ ನಿಕಟ ಸಂಪರ್ಕವನ್ನಿಟ್ಟುಕೊಂಡು ಸ್ತ್ರೀಯರ ವಿದ್ಯಾಬ್ಯಾಸ ಮತ್ತು ಏಳಿಗೆ ಎಲ್ಲಾ ರೀತಿಯ ಅನುಕೂಲ ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾದರು.
  • 1937 ರಲ್ಲಿ ಸರ್ಕಾರ ಕಲ್ಯಾಣಮ್ಮನವರು ಮಕ್ಕಳ ಏಳಿಗೆಗಾಗಿ ನಡೆಸುತ್ತಿದ್ದ ಸಾರ್ಥಕ ಸೇವೆಯನ್ನು ಗುರುತಿಸಿ ಸಿಟಿ ಮುನ್ಸಿಪಾಲ್ ಸ್ಕೂಲ್ ಬೋರ್ಡಿಂಗ್ ನ ಸದಸ್ಯೆಯನ್ನಾಗಿ ನೇಮಿಸಿತು.
  • 1937ರಲ್ಲಿ ಮುಸ್ಲಿಂ ಶಿಕ್ಷಣ ಸಮಿತಿಗೆ ಅಧ್ಯಕ್ಷರಾಗಿಯೂ ನೇಮಕಗೊಂಡಿದ್ದರು.
  • 1938 ರಲ್ಲಿ ಬೆಂಗಳೂರಿನ ಪುರಸಭೆ ಸದಸ್ಯೆಯಾಗಿ ಚುನಾವಣೆಯಿಂದ ಆಯ್ಕೆಗೊಂಡರು. ಅಲ್ಲಿ ಸಲ್ಲಿಸಿದ ದಕ್ಷಸೇವೆಯಿಂದಾಗಿ ನಗರದ ಉಪಾದ್ಯಕ್ಷೆಯಾಗಿ ಆರಿಸಲ್ಪಟ್ಟರು. ಈ ಚುನಾವಣೆಯಲ್ಲಿ ಅವರು 18 ಮತಗಳಿಸಿ ತಮ್ಮ ಪ್ರತಿಸ್ಪರ್ದಿಗಿಂತ 10 ಮತಗಳನ್ನು ಹೆಚ್ಚಿಗೆ ಪಡೆದು ಗೆದ್ದರು.
  • 1949ರಲ್ಲಿ ತಮ್ಮ ಸರಸ್ವತಿ ಪತ್ರಿಕೆಯ ರಜತೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರ ಪರವಾಗಿ ಇವರಿಗೆ ಒಂದು ನಿಧಿಯನ್ನು ಅರ್ಪಿಸಲಾಯಿತು.
  • ಕಲ್ಯಾಣಮ್ಮನವರ  ಕಾರ್ಯ ಚಟುವಟಿಕೆಗಳನ್ನು ಮೆಚ್ಚಿ ಅಮೆರಿಕದಿಂದಲೂ ಅವರಿಗೆ ಆಹ್ವಾನ ಬಂದಿತ್ತು.
  • ಕಲ್ಯಾಣಮ್ಮನವರ ಜ್ಞಾಪಕಾರ್ಥವಾಗಿ ಅಖಿಲ ಕರ್ನಾಟಕ ಮಕ್ಕಳ ಕೂಟವು ಸ್ಮಾರಕನಿಧಿಯೊಂದನ್ನು ಸ್ಥಾಪಿಸಿತು.

ಮೈಸೂರು ರಾಜ್ಯ ಜೀವ ವಿಮಾ ಕಂಪನಿಯ ನಿರ್ದೇಶಕರಾಗಿ, ಯೂನಿವರ್ಸಿಟಿ ಸೆನೆಟ್ ಸದಸ್ಯೆಯಾಗಿ, ಥಿಯಸಾಫಿಕಲ್ ಸೂಸೈಟಿ ಮುಂತಾದ ಅನೇಕ ಸಂಘಗಳಲ್ಲೂ ಕೆಲಸ ಮಾಡಿದರು. ಸೆಂಟ್ರಲ್ ಜೈಲ್ ಸಮಿತಿಯ ಸದಸ್ಯೆಯಾಗಿದ್ದರು. ಸ್ವಾತಂತ್ರ ಪೂರ್ವ ರಾಷ್ಟ್ರೀಯ ಕಾಂಗ್ರೆಸ್ಸಿನ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿದ್ದಲ್ಲದೇ, ಗಾಂಧಿಜಿಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಅಹಿಂಸಾವಾದಿ ಚಳುವಳಿಯಲ್ಲಿಯೂ ಅಗ್ರಣಿಯಾಗಿದ್ದರು. ಅಂದಿನ ಕಾಲದ ಬಹುತೇಕ ಕಾಂಗ್ರೆಸ್ ನಾಯಕರ ಪರಿಚಯವಿದ್ದ ಕಾರಣ, ಬೆಳಗಾವಿಯ ಕಾಂಗೆಸ್ ಅಧಿವೇಶನದಲ್ಲಿ ಮಹಿಳಾ ಮಂಡಲವನ್ನು ಉದ್ದೇಶಿಸಿ ಮಾಡಿದ ಬಾಷಣದಲ್ಲಿ, ಮಹಿಳೆಯರು ರಾಷ್ಟ್ರ ನಿರ್ಮಾಣದಲ್ಲಿ ದೈರ್ಯವಾಗಿ ಮುಂದೆ ಬರಬೇಕೆಂದು ಪ್ರೇರಣೆ ನೀಡಿದರು.  ಹೀಗೆ ಅವರು ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಗಳಾಗುತ್ತಿದ್ದ ಕಾರಣ, ನೇರವಾಗಿ ರಾಜಕೀಯದಲ್ಲಿರಲು  ಆಹ್ವಾನವಿದ್ದರೂ ಅದನ್ನು ಸ್ಪಷ್ಟವಾಗಿ ನಿರಾಕರಿಸಿ ಸಮಾಜ ಸೇವೆಗೆ ಮಾತ್ರವೇ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಲ್ಲದೇ ಜೀವಮಾನವಿಡೀ ಸಮಾಜಕ್ಕಾಗಿ ನಿಸ್ವಾರ್ಥವಾಗಿ ದುಡಿದರು.

kal1ದೀರ್ಘ ಕಾಲದಿಂದಲೂ ಮೂರ್ಛೆ ರೋಗದಿಂದ ಬಳಲುತ್ತಿದ್ದರೂ ಕಲ್ಯಾಣಮ್ಮನವರ ಮನಸ್ಸಿನಲ್ಲಿ  ಅಸಾದ್ಯ ಎಂಬ ಪದವೇ ಇರಲಿಲ್ಲ ಎಂದರೂ ತಪ್ಪಾಗದು. ಮನಸಿದ್ದರೆ ಮಾರ್ಗ ಎನ್ನುವಂತೆ, ಸಮಾಜಕ್ಕಾಗಿ ಅವಿಶ್ರಾಂತವಾಗಿ ದುಡಿದ ಕಲ್ಯಾಣಮ್ಮನವರು 1965ರ ಫೆಬ್ರವರಿ 24 ರಂದು  ನಿಧನರಾಗುವ ಮೂಲಕ ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಆವರು ಮಾಡಿದ ಹತ್ತು ಹಲವಾರು ಕೆಲಸಗಳ ಮೂಲಕ ಅಚಂದ್ರಾರ್ಕವಾಗಿ ನಮ್ಮ ನಿಮ್ಮೆಲ್ಲರೊಡನೆ ಇರುವ ಕಾರಣ ಅವರು ಖಂಡಿತವಾಗಿಯೂ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment