ಯಾವುದೇ ಒಂದು ದೇಶದ ಪ್ರಗತಿಗೆ ಆ ದೇಶದ ಪ್ರಜೆಗಳು ಬಹಳ ಪ್ರಾಮುಖ್ಯತೆಯನ್ನು ಹೊಂದಿರುತ್ತಾರೆ, ಹಾಗಾಗಿ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವ ಮಾತೂ ಸಹಾ ಪ್ರಚಲಿತದಲ್ಲಿದ್ದು, ಹಾಗಾಗಿ ಅಂತಹ ಮಕ್ಕಳಿಗೆ ಉತ್ತಮವಾದ ಶಿಕ್ಷಣದ ಜೊತೆ ಒಳ್ಳೆಯ ಸಂಸ್ಕಾರವನ್ನೂ ನೀಡುವುದು ಶಿಕ್ಷಣ ಸಂಸ್ಥೆಯ ಕರ್ತವ್ಯವಾಗಿರುತ್ತದೆ ಎಂದರೂ ತಪ್ಪಾಗದು. ದುರಾದೃಷ್ಟವಷಾತ್ ಪ್ರಸ್ತುತ ದೇಶದಲ್ಲಿ ಶಿಕ್ಷಣ ಸಂಸ್ಥೆಗಳೇ ವ್ಯಾಪಾರ ಕೇಂದ್ರಗಳಾಗಿರುವಾಗ 50ರ ದಶಕದಲ್ಲಿ ಸಮಾಜದ ಎಲ್ಲಾ ಸ್ಥರದ ಮಕ್ಕಳಿಗೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣದ ಹೊತೆಗೆ ಒಳ್ಳೆಯ ಸಂಸ್ಕಾರ ಮತ್ತು ಜೀವನದ ಮೌಲ್ಯಗಳನ್ನು ಕಲಿಸಿಕೊಡುವ ಸಲುವಾಗಿ ಮಲ್ಲೇಶ್ವರಂ ಶಿಶುವಿಹಾರವನ್ನು ಸ್ಥಾಪಿಸಿದ ಶ್ರೇಷ್ಠ ಶಿಕ್ಷಣ ತಜ್ಞೆ ಶ್ರೀಮತಿ ಬಿ.ಕೆ. ತಿರುಮಲಮ್ಮ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
1932 ರಲ್ಲಿ ಕಾವೇರಿ ನದಿಯ ಅಡ್ಡಲಾಗಿ ಕನ್ನಂಬಾಡಿಯಲ್ಲಿ ಶ್ರೀ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಿಸಿ, ಅಲ್ಲಿಂದ ಮಂಡ್ಯ ಜಿಲ್ಲೆಯ ಕಾಳೇನಹಳ್ಳಿಯ ಹುಲಿಕೆರೆ ಎಂಬ ಸಣ್ಣ ಗ್ರಾಮಕ್ಕೆ ಕೃಷಿ ಚಟುವಟಿಕೆಗಾಗಿ ನೀರನ್ನು ಹರಿಸಲು ಯೋಜಿಸಿದಾಗ, ಮಧ್ಯೆ ಅಡ್ಡ ಬಂದ ಗುಡ್ಡಕ್ಕೆ ಸುರಂಗವನ್ನು ಕೊರೆಯಲು ಸ್ಥಳೀಯರಿಂದ ಆಗದು ಎಂದು ಭಾವಿಸಿ ದೂರದ ಅಫ್ಘಾನಿಸ್ಥಾನದಿಂದ ಘಟಾನುಘಟಿ ಕೂಲಿ ಆಳುಗಳನ್ನು ಕರೆಸಿ, ಸುರಂಗವನ್ನು ಕೊರೆಸಲು ವಿನ್ಯಾಸ ಗೊಳಿಸಿದವರು ಸರ್ ಎಂ ವಿಶ್ವೇಶ್ವರಯ್ಯನವರು, ಅ ಯೋಜನೆಯ ಸಂಪೂರ್ಣ ಜವಾಬ್ಧಾರಿಯನ್ನು ಶ್ರೀ. ಬಿ ಕೃಷ್ಣಸ್ವಾಮಿ ಅಯ್ಯಂಗಾರ್ ಎಂಬ ಎಂಜಿನಿಯರ್ ಅವರಿಗೆ ವಹಿಸುತ್ತಾರೆ, ವಿಶ್ವೇಶ್ವರಯ್ಯನವರ ಮಾರ್ಗದರ್ಶನ ಮತ್ತು ಕೃಷ್ಣಸ್ವಾಮಿ ಐಯ್ಯಂಗಾರರ ದಕ್ಷ ನಿರ್ವಹಣೆಯಿಂದಾಗಿ ಹುಲಿಕೆರೆ ಸುರಂಗ ಮಾರ್ಗ ಅತ್ಯಂತ ಯಶಸ್ವಿಯಾಗಿ ನಿರ್ಮಾಣ ಗೊಂಡು ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸಲು ಸಹಾಯಕಯವಾಗುತ್ತದೆ. ಮುಂದೆ ಕೃಷ್ಣಸ್ವಾಮಿ ಅಯ್ಯಂಗಾರ್ ಕನ್ನಂಬಾಡಿಯ ಅಣಕಟ್ಟೆಯ ಎದುರುಗಿರುವ ಬೃಂದಾವನ ಉದ್ಯಾನವನದ ಉಸ್ತುವಾರಿ ವಹಿಸಿದ ನಂತರ ಬೆಂಗಳೂರಿನ UVCE ಪ್ರಾಂಶುಪಾಲರಾಗಿ ನಿವೃತ್ತರಾದರೂ ಜನರಿಂದ ಅವರು ಹುಲಿಕೆರೆ ಕೃಷ್ಣಸ್ವಾಮಿ ಅಯ್ಯಂಗಾರ್ ಎಂದೇ ಗುರುತಿಸಲ್ಪಡುತ್ತಾರೆ. ಇಂತಹ ಕೃಷ್ಣಸ್ವಾಮಿ ಅಯ್ಯಂಗಾರ್ ಮತ್ತು ಶ್ರೀಮತಿ ಲಕ್ಷ್ಮಮ್ಮ ದಂಪತಿಗಳ ಸುಪುತ್ರಿಯೇ ಬಿ.ಕೆ.ತಿರುಮಲಮ್ಮ.
ತಿರುಮಲಮ್ಮನವರ ತಂದೆ ಅಂದಿನ ಕಾಲದಲ್ಲೇ ಇಂಜೀನಿಯರ್ ಆಗಿದ್ದರೂ ತಾಯಿಯವರು ಶಾಲೆಗೆ ಹೋಗಿ ಕಲಿತಿರಲಿಲ್ಲವಾದರೂ. ಅವರ ಮನೆಯಲ್ಲೇ ಆವರ ಮಾತೃಭಾಷೆ ತಮಿಳಿನ ಜೊತೆ, ಕನ್ನಡ, ಸಂಸ್ಕೃತ ಭಾಷೆಗಳ ಮೇಲೆ ಒಳ್ಳೆಯ ಹಿಡಿತವನ್ನು ಹೊಂದಿದ್ದಿದ್ದಲ್ಲದೇ, ಅನೇಕ ಶ್ಲೋಕಗಳು, ಸುಭಾಷಿತಗಳು, ಪೌರಾಣಿಕ ಕಥೆಗಳ ಜೊತೆಗೆ ಸಾಂಪ್ರದಾಯಿಕ ಹಾಡು ಹಸೆಗಳನ್ನು ಕಲಿತ ಸಂಸ್ಕಾರವಂತರಾಗಿದ್ದರು. ಇಂತಹ ಸಂಪ್ರದಾಯಸ್ಥರ ಮನೆಯಲ್ಲಿ ಜನಿಸಿದ ತಿರುಮಲಮ್ಮನವರ ಕುಟುಂಬ ಹುಲಿಕೆರೆಯಲ್ಲಿದ್ದಾಗ ಅಲ್ಲಿ ಒಳ್ಳೆಯ ಶಾಲೆ ಇರಲಿಲ್ಲವಾದ ಕಾರಣ, ಮನೆಯೇ ಮೊದಲ ಪಾಠ ಶಾಲೆ, ತಂದೆ ತಾಯಿಯರೇ ಮೊದಲ ಗುರು ಎನ್ನುವಂತೆ ಮನೆಯಲ್ಲಿಯೇ ಉತ್ತಮ ಶಿಕ್ಷಣ ದೊರೆತ ಕಾರಣ, ಆಕೆ ಯಾವುದೇ ಪ್ರಾಥಮಿಕ ಶಾಲೆಗೆ ಹೋಗದೆ, ಸೂಕ್ತವಯಸ್ಸಿನಲ್ಲಿ ನೇರವಾಗಿ 7ನೇ ತರಗತಿಯ ಪರೀಕ್ಷೆಯನ್ನು ಬರೆದು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಾರೆ.
7ನೇ ತರಗತಿಯನ್ನು ಮುಗಿಸಿದ ನಂತರ ಹೆಚ್ಚಿನ ವಿದ್ಯಾಭ್ಯಾಸ ಮುಂದುವರೆಸಲಾಗಲಿಲ್ಲ ಅದಾದ ನಾಲ್ಕು ವರ್ಷಗಳ ನಂತರ ಅವರ ಕುಟಂಬ ಬೆಂಗಳೂರಿಗೆ ಸ್ಥಳಾಂತರವಾದಾಗ ತಮ್ಮ ಪ್ರೌಢ ಶಿಕ್ಷಣವನ್ನು ಮುಗಿಸಿ ಕಾಲೇಜಿಗೆ ಸೇರಿ ವಿಜ್ಞಾನದಲ್ಲಿ ಪದವಿಯನ್ನು ಪಡೆಯುತ್ತಿದ್ದಂತೆಯೇ ಅವರಿಗೆ ಮದುವೆಯಾಗಿ ಒಂದು ಮಗುವೂ ಸಹ ಆಗುತ್ತದೆ. ದುರಾದೃಷ್ಟವಷಾತ್, ಪತಿ ಮತ್ತು ಮಗುವನ್ನು ಅತ್ಯಂತ ಸಣ್ಣ ವಯಸ್ಸಿನಲ್ಲೇ ಕಳೆದುಕೊಂಡ ತಿರುಮಲಮ್ಮನವರು ವಿಧವೆಯಾಗುತ್ತಾರೆ. ಹೀಗೆ ವಿಧವೆಯಾಗಿ ಮನೆಯಲ್ಲಿ ಸುಮ್ಮನೇ ತಮ್ಮ ಮಗಳು ಕುಳಿತುಕೊಳ್ಳುವುದನ್ನು ಇಚ್ಚಿಸದ ಅವರ ತಂದೆಯವರು ಸುಮಾರು ಹತ್ತು ವರ್ಷಗಳ ನಂತರ ಮತ್ತೆ ಶಿಕ್ಷಣವನ್ನು ಮುಂದುವರೆಸಲು ಸೂಚಿಸಿದಾಗ ತಿರುಮಲಮ್ಮನವರು BEd. ಮುಗಿಸಿ ಮಲ್ಲೇಶ್ವರ 15ನೇ ಅಡ್ಡರಸ್ತೆಯಲ್ಲಿರುವ ಹಿಮಾಂಶು ಶಿಶು ವಿಹಾರದಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿ ತಮ್ಮ ಕಾರ್ಯಕ್ಷಮತೆಯಿಂದ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಭಡ್ತಿ ಮೇಲೆ ಭಡ್ತಿ ಪಡೆದು 1949 ರಿಂದ 1953 ರವರೆಗೆ ಪ್ರಾಂಶುಪಾಲರಾಗಿದ್ದಾಗಲೇ, ಉತ್ತಮ ಮೌಲ್ಯಾಧಾರಿತ ಸಂಸ್ಕಾರ ಸಂಪ್ರದಾಯಿಕ ಶಿಶುವಿಹಾರವನ್ನೇಕೆ ಆರಂಭಿಸಬಾರದು? ಎಂಬ ಆಲೋಚನೆ ಮೂಡುತ್ತದೆ.
ಹೀಗೆ 1953ರಲ್ಲಿ ಮಲ್ಲೇಶ್ವರಂ ಸರ್ಕಲ್ಲಿನ ಬಳಿ ಜಟಕಾ ಸ್ಟಾಂದಿನ ಎದುರು (ಪ್ರಸ್ತುತ ಕೆನರಾ ಬ್ಯಾಂಕ್ ನ ಹಿಂದೆ, ಕೆ.ಸಿ. ಜನರಲ್ ಆಸ್ಪತ್ರೆಯ ಹಿಂದಿನ ಬಾಗಿಲನ ಹತ್ತಿರ) ತಮ್ಮದೇ ಆದ ಮಲ್ಲೇಶ್ವರಂ ಶಿಶು ವಿಹಾರ ಎಂಬ ಸಣ್ಣದಾದ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ತಮ್ಮ ಕನ್ನಡ ಭಾಷೆಯ ಮೇಲಿನ ಪ್ರೀತಿಯಿಂದಾಗಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣವನ್ನು ನೀಡಲಾರಂಭಿಸುತ್ತಾರೆ. ಅಂದಿನ ಶಾಲೆಯ ಅಕ್ಕಪಕ್ಕದಲ್ಲೆಲ್ಲಾ ಬಡ ಮಧ್ಯಮ ವರ್ಗದವರೇ ಹೆಚ್ಚಾಗಿದ್ದ ಕಾರಣ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೂ ಶಾಲೆಯ ಶಿಕ್ಷಣ ದೊರೆಯಬೇಕೆಂಬ ಸದುದ್ದೇಶದಿಂದ ಯಾವುದೇ ಧರ್ಮ, ಜಾತಿ, ಭಾಷೆಯ ಭೇದವಿಲ್ಲದೆ ಎಲ್ಲಾ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ನೀಡಲು ಮುಂದಾಗುತ್ತಾರೆ. ಅಷ್ಟು ಸಣ್ಣ ಮೊತ್ತವನ್ನೂ ಕೊಡಲು ಅಸಾಧ್ಯವಾದವರಿಗೆ ಉಚಿತವಾದ ಶಿಕ್ಷಣವನ್ನೂ ನೀಡಿದ ಉದಾಹರಣೆಯೂ ಇದೆ.
ಈ ರೀತಿಯ ಸದುದ್ದೇಶದಿಂದ ಆರಂಭವಾದ ಶಾಲೆಯಲ್ಲಿ ಎಲ್ಲವೂ ಸುಗಮವಾಗಿ ನಡೆಯುತ್ತಿದೆ ಎಂದು ಕೊಳ್ಳುತ್ತಿರುವಾಗಲೇ, ಶಾಲೆಯ ಕೆಲವು ಶಿಕ್ಷಕರ ಕ್ಷಿಪ್ರ ಕ್ರಾಂತಿಯ ಪರಿಣಾಮ ಶಾಲೆಯ ಬಹುತೇಕ ಶಿಕ್ಷಕರನ್ನು ರಾಜೀನಾಮೆ ನೀಡಲು ಮುಂದಾದಾಗ, ಧೃತಿಗೆಡೆದ ತಿರುಮಲಮ್ಮನವರು ಸಹನೆ ಮತ್ತು ತಾಳ್ಮೆಯಿಂದ ತರಬೇತಿ ಪಡೆದ ನುರಿತ ಶಿಕ್ಷಕರನ್ನು ನೇಮಿಸುವವರೆಗೂ ತಮ್ಮ ಕುಟುಂಬ ಸದಸ್ಯರ ಸಹಾಯದಿಂದಲೇ ಶಾಲೆಯಲ್ಲಿ ಶಿಕ್ಷಣವನ್ನು ಮುಂದುವರೆಸುವ ಮೂಲಕ ಬಿಕ್ಕಟ್ಟಿನಿಂದ ಹೊರಬಂದ ನಂತರ ಮತ್ತೆ ಹಿಂದುರಿಗೆ ನೋಡುವ ಪ್ರಮೇಯವೇ ಬರಲಿಲ್ಲ.
ನೋಡ ನೋಡುತ್ತಿದ್ದಂತೆಯೇ ಅವರ ಕನಸಿನ ಕೂಸಾದ ಮಲ್ಲೇಶ್ವರಂ ಶಿಶುವಿಹಾರ 1-7ನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಉತ್ತಮವಾದ ಶಿಕ್ಷಣವನ್ನು ನೀಡುವ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದ್ದಂತೆಯೇ 1962ರಲ್ಲಿ ವಿಶೇಷ ಅಗತ್ಯತೆಗಳ ಮಕ್ಕಳಿಗಾಗಿಯೇ ಪ್ರತ್ಯೇಕವಾದ ಶಾಲೆಯನ್ನು ಪ್ರಾರಂಭಿಸಲು ನಿರ್ಧರಿಸಿ ಅದಕ್ಕೆ ಬಾಲ ಮನೋವಿಕಾಸ ಕೇಂದ್ರ ಎಂಬ ಚೆಂದನೆಯ ಹೆಸರನ್ನಿಟ್ಟು, ಬಹಳ ಆಸ್ಥೆಯಿಂದ ಆಸಕ್ತಿ ವಹಿಸಿ, ವಿಶೇಷ ಚೇತನದ ಮಕ್ಕಳಿಗೆ ಅವಶ್ಯಕವಾದ ಶಿಕ್ಷಣ ಮತ್ತು ತರಭೇತಿಯನ್ನು ನೀಡುವ ಮೂಲಕ ಆ ಮಕ್ಕಳನ್ನು ಬೆಳೆಸಿ ಅವರನ್ನು ಸಮರ್ಥ ವಯಸ್ಕರನ್ನಾಗಿ ಮಾಡುವುದರಲ್ಲಿ ಸಮರ್ಥರಾದರು.
ಸ್ವತಃ ಉತ್ತಮವಾದ ಗಾಯಕಿ ಮತ್ತು ಪಿಟೀಲು ವಾದಕಿಯಾಗಿ ಒಳ್ಳೆಯ ಸಂಗೀತಗಾರ್ತಿಯಾಗಿದ್ದ ಶ್ರೀಮತಿ ತಿರುಮಲಮ್ಮನವರು, ಮಕ್ಕಳ ಮನಸ್ಥಿತಿಯನ್ನು ಬಹಳ ಚೆನ್ನಾಗಿ ಅರಿತವರಾಗಿದ್ದ ಕಾರಣ, ಸಣ್ಣ ಮಕ್ಕಳಿಗೂ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ಶಿಶುಗೀತೆಗಳನ್ನು ರಚಿಸಿ ಅದಕ್ಕೆ ರಾಗ ಸಂಯೋಜನೆ ಮಾಡಿ ಮಕ್ಕಳಿಗೆ ಕಲಿಸಲಾರಂಭಿಸಿದರು. ಅಷ್ಟೇ ಅಲ್ಲದೇ ನವಕರ್ನಾಟಕ ಪುಸ್ತಕ ಪ್ರಕಾಶನದ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸುವ ಅನೇಕ ವೀರ ಪುರುಷರ ಮತ್ತು ವೀರ ವನಿತೆಯಯರ ಸಣ್ಣ ಸಣ್ಣ ಪುಸ್ತಕಗಳಲ್ಲದೇ, ಕಂಡ ಅಕ್ಷರ ಕಲಿ, ಕನ್ನಡ ಓದುವೆ ಭಾಗ-1& 2, ನಮ್ಮ ಮನೆ, ಓದಿ ಕೇಳುವ ಕಥೆಗಳು, ಪುಟಾಣಿಗಳ ವೈಜ್ಞಾನಿಕ ಕಥೆಗಳು, ನಮ್ಮ ಬೆಂಗಳೂರು ಪುಣ್ಯಕೋಟಿ ಯಂತಹ ಪುಸ್ತಕಗಳನ್ನು ಬರೆದು ಪ್ರಕಟಿಸುವ ಮೂಲಕ ಕೇವಲ ಶಿಕ್ಷಣಕ್ಕೆ ಮಾತ್ರವೇ ಒತ್ತು ಕೊಡದೇ, ಕಲೆ, ಸಂಗೀತ, ಸಾಹಿತ್ಯ, ಕ್ರೀಡೇ ಹೀಗೆ ಸರ್ವಾಂಗೀಣ ಅಭಿವೃದ್ಧಿಯಾಗಲು ಪೂರಕವಾಗುವಂತಹ ಬೋಧನ ಸಾಧನಗಳನ್ನು ರೂಪಿಸಿದರು. ಅವರೇ ರಚಿಸಿ ರಾಗ ಸಂಯೋಜಿಸಿದ ಹಾಡುಗಳೆಲ್ಲಾ ಬಂಗಾರಿ ಎನ್ನುವ ಸಿಡಿಯ ರೂಪದಲ್ಲಿ ಹೊರಬಂದು ಅನೇಕ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಿಕೊಡಲಾಗುತ್ತಿರುವುದು ವಿಶೇಷವಾಗಿದೆ.
ಮಕ್ಕಳಿಗೆ ಕೇವಲ ಶಿಕ್ಷಣ ಕೊಟ್ಟರೇ ಸಾಲದು, ಮಕ್ಕಳಿಗೆ ಉತ್ತಮವಾದ ಮೌಲ್ಯಾಧಾರಿತ ಶಿಕ್ಷಣವನ್ನು ಕೊಡಲು ಅವಶ್ಯಕವಿರುವ ಶಿಕ್ಷಕ ಶಿಕ್ಷಕಿಯರ ಅವಶ್ಯಕೆಯನ್ನು ಮನಗಂಡು ತಮ್ಮ ಶಾಲೆಯಲ್ಲಿ ನರ್ಸರಿ ಶಿಕ್ಷಕರ ತರಬೇತಿ ಕೋರ್ಸ್ ಅನ್ನು ಪ್ರಾರಂಭಿಸುವ ಮೂಲಕ ಪ್ರಸ್ತುತವಾಗಿ ಸರ್ಕಾರಿ ಶಾಲೆಗಳು ಮತ್ತು ನೂರಾರು ಅಂಗನವಾಡಿ ಶಾಲೆಗಳು ಸೇರಿದಂತೆ ವಿವಿಧ ಶಾಲೆಗಳಲ್ಲಿ ಕಲಿಸುತ್ತಿರುವ ಸಾವಿರಾರು ಶಿಕ್ಷಕಿಯರು ತಿರುಮಲಮ್ಮನವರ ಮಲ್ಲೇಶ್ವರಂ ಶಿಶುವಿಹಾರದಲ್ಲಿ ತರಬೇತಿ ಪಡೆದಿದ್ದೇವೆ ಎಂದು ಹೆಮ್ಮೆಯಿಂದ ಹೇಳುವಂತಾಯಿತು. ಇಂತಹ ಶಿಕ್ಷಕರ ತರಭೇತಿಯ ಭಾಗವಾಗಿ, ಅವರನ್ನೂ ಮತ್ತು ತಮ್ಮ ಹಿರಿಯ ಶಿಕ್ಷಕರನ್ನು ಗ್ರಾಮೀಣ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ಅಲ್ಲಿನ ಮಕ್ಕಳಿಗೆ ತಾವೇ ಸ್ವತಃ ವಿಶೇಷವಾಗಿ ವಿನ್ಯಾಸಗೊಳಿಸಿದ ಕಡಿಮೆ ವೆಚ್ಚದ ಮತ್ತು ಯಾವುದೇ ವೆಚ್ಚವಿಲ್ಲದ ಬೋಧನಾ ಸಾಧನಗಳನ್ನು ಬಳಸಿಕೊಂಡು ಶಿಕ್ಷಣವನ್ನು ನೀಡಲು ಆರಂಭಿಸಿದ್ದದ್ದು ಸಹಜವಾಗಿ ಸರ್ಕಾರ ಮತ್ತು ಅನೇಕ ಸಂಘ ಸಂಸ್ಥೆಗಳ ಗಮನಕ್ಕೆ ಬಂದು ಅನೇಕ ಪ್ರಶಸ್ತಿ ಮತ್ತು ಪುರಸ್ಕಾರಗಳು ಅವರನ್ನು ಅರಸಿ ಬಂದು ಅವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ.
- 1956-57ರಲ್ಲಿ ಇಂಡೋ-ಸೋವಿಯತ್ ಅಸೋಸಿಯೇಷನ್‌ನ ಪ್ರತಿನಿಧಿಯಾಗಿ ರಷ್ಯಾ ಪ್ರವಾಸ ಮಾಡಿ ಅಲ್ಲಿನ ಮತ್ತು ಇಲ್ಲಿನ . ಬೋಧನಾ ತಂತ್ರಗಳ ವಿನಿಮಯ ಮಾಡಿಕೊಳ್ಳುವ ಸದಾವಕಾಶ ದೊರೆಯಿತು
- 1972 ರಲ್ಲಿ ಕರ್ನಾಟಕ ರಾಜ್ಯೋತ್ಸವ ಶಿಕ್ಷಕರ ಪ್ರಶಸ್ತಿ
- 1973 ರಲ್ಲಿ ಹೆಬ್ಬಾರ್ ಶ್ರೀ ವೈಷ್ಣವ ಸಭಾ ಸಂಸ್ಥೆಯ ವತಿಯಿಂದ ಸಮುದಾಯ ಅಭಿವೃದ್ಧಿಗಾಗಿ ಚಿನ್ನದ ಪದಕ.
- 1978 ರಲ್ಲಿ ತನ್ನ ನೆರೆಹೊರೆಯ ಅತ್ಯುತ್ತಮ ಸಮಾಜ ಸೇವಕಿ ಪ್ರಶಸ್ತಿ
- 1997 ರಲ್ಲಿ ಕನ್ನಡ ಲೇಖಕಿಯರ ಸಂಘದಿಂದ ಅತ್ತಿಮಬ್ಬೆ ಪ್ರಶಸ್ತಿ
- 1995 ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಅಮೆರಿಕಕ್ಕೆ ಭೇಟಿ ನೀಡಿ, ಅಲ್ಲಿನ ಕೆಲವು ಶಾಲೆಗಳಲ್ಲಿ ಭೇಟಿ ನೀಡಿ ಅಲ್ಲಿನ ಮತ್ತು ಇಲ್ಲಿನ ಬೋಧನಾ ತಂತ್ರಗಳ ವಿನಿಮಯ ಮಾಡಿಕೊಂಡಿದ್ದರು.
90ರ ದಶಕದಲ್ಲಿ ಮಲ್ಲೇಶ್ವರದ ಸುತ್ತಮುತ್ತಲೂ ಹತ್ತಾರು ಆಂಗ್ಲ ಮಾಧ್ಯಮದ ಶಾಲೆಗಳು ಆರಂಭವಾಗಿ ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳ ಸಂಖ್ಯೆ ಕಡಿಮೆ ಆದದ್ದನ್ನು ಗಮನಿಸಿ ಒಲ್ಲದ ಮನಸ್ಸಿನಿಂದಲೇ, ತಮ್ಮ ಶಾಲೆಯಲ್ಲಿಯನ್ನೂ ಆಂಗ್ಲ ಮಾಧ್ಯಮಕ್ಕೆ ಬದಲಾಯಿಸಿದರೂ, ಕನ್ನಡ ಮತ್ತು ಸನಾತನ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸುವ ವಿಷಯದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ನಂತರ ದಿನಗಳಲ್ಲಿ ಪ್ರೌಢಶಾಲೆಯೂ ಆರಂಭವಾಗಿ ಈಗ ಶಿಶುವಿಹಾರದಿಂದ ಆರಂಭವಾಗಿ 10ನೇ ತರಗತಿಯವೆರೆಗೂ ಅತ್ಯತ ಕೈಗೆಟುಕುವ ಬೆಲೆಯಲ್ಲಿ ಸಂಸ್ಕಾರಭರಿತ ಶಿಕ್ಷಣವನ್ನು ಕಲಿಸುವ ಶಾಲೆಯಾಗಿ 7 ದಶಕಗಳನ್ನು ಕಳೆದಿದ್ದು ತನ್ನ 75ನೇ ವಜ್ರ ಮಹೋತ್ಸವವನ್ನು ಅಚರಿಸಿಕೊಳ್ಳುವತ್ತ ಧಾಪುಗಾಲು ಹಾಕಿದೆ.
ತಿರುಮಲಮ್ಮನವರು ಕೇವಲ ಶಾಲೆಯ ಮುಖ್ಯಸ್ಥೆಯಷ್ಟೇ ಆಗಿರದೇ ಶಾಲೆಯ ಶಿಕ್ಷಕ ವೃಂದವರಿಗೆ ಮತ್ತು ವಿದ್ಯಾರ್ಥಿಗಳಿಗೆ ತಾಯಿಯಾಗಿದ್ದರೂ ಎಂದರೂ ಅತಿಶಯವೆನಿಸದು. ತಮ್ಮ ಮಕ್ಕಳ ಬಗ್ಗೆ ವಿಚಾರಿಸಲು ಬರುತ್ತಿದ್ದ ಪೋಷಕರಿಗೆ ಮಕ್ಕಳ ಮೇಲೆ ಅನಗತ್ಯವಾಗಿ ನಿಮ್ಮ ಆಲೋಚನೆಗಳನ್ನು ಹೇರದೇ ಅವರ ಇಚ್ಚೆಯಂತೆ ಕಲಿಯಲು ಬಿಡಿ ಎಂದು ಉತ್ತಮವಾದ ಸಮಾಲೋಚನೆ ಮಾಡುವ ಮೂಲಕ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರೊಡನೆ ಬಲವಾದ ಬಾಂಧವ್ಯವನ್ನು ಬೆಳೆಸಿದ್ದರು. ಈ ರೀತಿಯ ಪ್ರೋತ್ಸಾಹದಿಂದಾಗಿ MSV ಶಾಲೆಯ ಮಕ್ಕಳು ತರಗತಿಯ ಜೊತೆಗೆ ಅಂತರ್ ಶಾಲಾ ಸ್ಪರ್ಧೆಗಳು, ಚರ್ಚಾಸ್ಪರ್ಧೆಗಳು ಇತ್ಯಾದಿಗಳಲ್ಲಿ ಸಕ್ರಿಯವಾಗಿ ಭಾಗವಹಿ ಅನೇಕ ಬಹುಮಾನಗಳನ್ನು ಗೆಲ್ಲುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಆರಂಭದ ದಿನಗಳಲ್ಲಿ ಶ್ರೀಮತಿ ತಿರುಮಲಮ್ಮರೇ ಶಾಲಾ ಮಕ್ಕಳನ್ನು ಶಿಕ್ಷಕರ ಜೊತೆ ವಿವಿಧ ಸ್ಥಳಗಳಿಗೆ ಪ್ರವಾಸಕ್ಕೆ ಕರೆದೊಯ್ದು ಅವರ ಜ್ಞಾನವನ್ನು ಉತ್ಕೃಷ್ಟಗೊಳಿಸಿರುವುದನ್ನು ಇಂದಿಗೂ ಶಾಲೆ ವಿಧ್ಯಾರ್ಥಿಗಳು ನೆನಸಿಕೊಳ್ಳುತ್ತಾರೆ.

ಪಠ್ಯಕ್ರಮದ ಜೊತೆ ಜೊತೆಗೆ ಶ್ಲೋಕಗಳು, ಭಗವದ್ಗೀತೆ, ಕ್ರೀಡೆ, ನಾಟಕ, ಚಿತ್ರಕಲೆ ಮುಂತಾದವುಗಳನ್ನು ಕಲಿಯುವುದರ ಜೊತೆಯಲ್ಲೇ ಆತ್ಮ ಸ್ಥೈರ್ಯ, ಆತ್ಮ ವಿಶ್ವಾಸ, ಶಿಸ್ತು, ಗುರು ಹಿರಿಯರಲ್ಲಿ ನಂಬಿಕೆ, ನಮ್ರತೆ, ಸಹಾನುಭೂತಿ, ಸಮರ್ಪಣೆ, ನಿಷ್ಠೆ, ಮುಂತಾದ ಮೃದು ಮೌಲ್ಯಗಳನ್ನು ಕಲಿತ ಅಲ್ಲಿನ ವಿಧ್ಯಾರ್ಥಿಗಳು ಈಗ ದೇಶ ವಿದೇಶಗಳಲ್ಲಿ ಅತ್ಯುನ್ನತವಾದ ಪದವಿಗಳನ್ನು ಅಲಂಕರಿಸಿ ತಿರುಮಲಮ್ಮನವರು ಕಲಿಸಿದ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ ಮತ್ತು ಹಿಡಿಯುತ್ತಿದ್ದಾರೆ. ಇದಕ್ಕೆ ದ್ಯೋತಕವಾಗಿ ಇಂದಿಗೂ ಪ್ರತೀ ವರ್ಷ ಜನವರಿ ತಿಂಗಳಾಂತ್ಯದಲ್ಲಿ MSV ಶಾಲೆಯ ವಿದ್ಯಾರ್ಥಿಗಳೆಲ್ಲರೂ ಒಂದೆಡೆ ಸ್ನೇಹ ಮಿಲನವನ್ನು ನಡೆಸುತ್ತಾ, MSV ಶಾಲೆಯಲ್ಲಿ ಪಡೆದ ಮೌಲ್ಯಗಳನ್ನು ಮೆಲುಕು ಹಾಕುವ ಮೂಲಕ ಇಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವುದು ಶ್ಲಾಘನೀಯವಾಗಿದೆ.
2001, ಸೆಪ್ಟಂಬರ್ 2 ರಂದು ವಯೋಸಜಹವಾಗಿ ಕಮಲಮ್ಮನವರ ದೇಹಾಂತ್ಯರಾದಾಗ, ಶಾಲೆಯನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ಧಾರಿಯು ಅವರ ಸಹೋದರ ಶ್ರೀ ಬಿ.ಆರ್. ಪ್ರಸಾದ್ ಅವರು ಹೆಗಲಿಗೆ ಬಿದ್ದು ಅವರು ಅತ್ಯಂತ ಕಾಳಜಿಯಿಂದ ನಿರ್ವಹಿಸುತ್ತಿದ್ದರೂ, ಕೆಲವು ಅನಿವಾರ್ಯ ಕಾರಣಗಳಿಂದಾಗಿ ಶಾಲೆಯನ್ನು ನಡೆಸಲಾಗದೇ ಕೆಲ ವರ್ಷಗಳ ಕಾಲ ಅನ್ಯರಿಗೆ ಹಸ್ತಾಂತರಿಸಿದ ನಂತರ ಅವರು ಶಾಲೆಯನ್ನು ನಡೆಸಿಕೊಂಡು ಹೋಗುತ್ತಿರುವ ಪರಿ ಸರಿಯಾಗದೇ ಹೋದದ್ದನ್ನು ಗಮನಿಸಿದ MSV ಶಾಲೆಯ ಹಿರಿಯ ವಿದ್ಯಾರ್ಥಿಗಳು ಮತ್ತು ತಿರುಮಲಮ್ಮನವರ ಕುಟುಂಬದವರು ಮತ್ತೆ ಹರ ಸಾಹಸ ಮಾಡಿ ಶಾಲೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದು ನಿಜಕ್ಕೂ ಅಭಿನಂದನಾರ್ಹವೇ ಸರಿ. ಈ ಸಂತಸದ ವಿಷಯವನ್ನು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ತಿರುಮಲಮ್ಮನವರ ಸಹೋದರ ಪ್ರಸಾದ್ ಅವರಿಗೆ ತಿಳಿಸಿದಾಗ, ಆ ನೋವಿನಲ್ಲಿಯೂ ಹರ್ಷವನ್ನು ವ್ಯಕ್ತಪಡಿಸಿ ಮಾರನೆಯೇ ದಿನವೇ ಇಹಲೋಕವನ್ನು ತ್ಯಜಿಸಿದ ನಿಜಕ್ಕೂ ವಿಷಾಧನೀಯವೇ ಸರಿ. ಈ ವಿಷಯವನ್ನು ಕೇಳಿದಾಗ ಪ್ರಸಾದ್ ಅವರ ಜೀವ, MSV ಶಾಲೆ ತಮ್ಮ ತೆಕ್ಕೆಗೆ ಮತ್ತೆ ಬರಲೆಂದೇ ಕಾಯುತ್ತಿತ್ತೇನೋ ಎಂದೆನಿಸಿದ್ದು ಸುಳ್ಳಲ್ಲ. ಪ್ರಸ್ತುತವಾಗಿ ಶಾಲೆಯನ್ನು ಶ್ರೀ ಬಿ.ಆರ್. ಪ್ರಸಾದ್ ಅವರ ಮಗ ಮತ್ತು ಸೊಸೆಯಷ್ಟೇ ಅಲ್ಲದೇ ಶಾಲೆಯ ಕೆಲವು ಹಿರಿಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಸುಸೂತ್ರವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.
ಇನ್ನು ವಯಕ್ತಿಕವಾಗಿ ಹೇಳಬೇಕೆಂದರೆ, ನನ್ನ ಆರಂಭಿಕ ಶಿಕ್ಷಣವೂ ಇದೇ ಮಲ್ಲೇಶ್ವರಂ ಶಿಶುವಿಹಾರದಲ್ಲೇ ಆರಂಭವಾದರೆ, ನಮ್ಮ ಅತ್ತೆಯ ಮಗಳು ವಿಶಾಲಾಕ್ಷಿ 1977ರಲ್ಲೇ 7ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ 4ನೇ ರ್ಯಾಂಕ್ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದರೆ, ಮುಂದೆ ನನ್ನ ಚಿಕ್ಕಕ್ಕಪ್ಪನ ಮಕ್ಕಳೂ ಅದೇ ಶಾಲೆಯಲ್ಲಿ ಕೆಲವರ್ಷಗಳ ಕಾಲ ವಿದ್ಯಾಭ್ಯಾಸವನ್ನು ಮಾಡುವ ಮೂಲಕ ನಮ್ಮ ಕುಟುಂಬದ ಅನೇಕ ಸದಸ್ಯರುಗಳು ಇದೇ ಮಲ್ಲೇಶ್ವರಂ ಶಿಶಿವಿಹಾರದ ತಿರುಮಲಮ್ಮನವರ ಹೆಮ್ಮೆ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸಾಲಿಗೆ ಸೇರುತ್ತೇವೆ.
ಕನ್ನಡ ಮಾಧ್ಯಮದ ಶಿಕ್ಷಣ ಎಂದರೆ ಮೂಗು ಮುರಿಯುವಂತಹ ಕಾಲದಲ್ಲಿಯೂ ಸಮಾಜದ ಎಲ್ಲಾ ವರ್ಗದವರಿಗೂ ಕೈಗೆಟುಕುವಂತಹ ಶಿಕ್ಷಣವನ್ನು ಕೊಡುವಂತಹ ಮಲ್ಲೇಶ್ವರಂ ಶಿಶುವಿಹಾರ ಎಂಬ ಕನ್ನಡ ಮಾಧ್ಯಮ ಶಾಲೆಯನ್ನು ಆರಂಭಿಸಿ, ಕಳೆದ 7 ದಶಕಗಳಿಂದಲೂ ಆಟ ಪಾಠಗಳ ಜೊತೆ ಮೌಲ್ಯಾಧಾರಿತ ಸಂಸ್ಕಾರ ಮತ್ತು ಸಂಪ್ರಾದಾಯಗಳನ್ನು ಕಲಿಸಿಕೊಟ್ಟ ಶಿಕ್ಷಣ ತಜ್ಞೆ ಶ್ರೀಮತಿ ಬಿ.ಕೆ.ತಿರುಮಲಮ್ಮನವರು ನಿಸ್ಸಂದೇಹವಾಗಿ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ಸೃಷ್ಟಿಕರ್ತ ಉಮಾಸುತ
ಈ ಲೇಖನದ ಅನೇಕ ವಿಷಯಗಳನ್ನು ಮಲ್ಲೇಶ್ವರಂ ಶಿಶು ವಿಹಾರದ ಮೊದಲನೇ ವಿದ್ಯಾರ್ಥಿನಿಯಾದ ಶ್ರೀಮತಿ ಲಕ್ಷ್ಮೀ ಶ್ರೀಧರನ್ ಅವರ ಲೇಖನದಿಂದ ಎರವಲು ಪಡೆಯಲಾಗಿದೆ.