ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಲೋಕಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದ್ದು, ಅಂದು, ಇಂದು ಮತ್ತು ಮುಂದೆಯೂ ದೇಶದ ಕೀರ್ತಿಪತಾಕೆಯನ್ನು ಎತ್ತಿ ಹಿಡಿಯಲು ಅನೇಕ ಕ್ರೀಡಾಪಟುಗಳು ಸಿದ್ಧರಾಗಿದ್ದಾರೆ/ಸಿದ್ಧವಾಗುತ್ತಿದ್ದಾರೆ. 80ರ ದಶಕದಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ದೊಡ್ಡ ಹೆಸರು ಮಾಡಿದ್ದಲ್ಲದೇ,, ನಂತರ ಸಿನಿಮಾದಲ್ಲಿ ನಾಯಕಿಯಾಗಿಯೂ ಪ್ರಸಿದ್ಧಿ ಪಡೆದು ಪ್ರಸ್ತುತ ಸಮಾಜಸೇವೆ ಮತ್ತು ಶಿಕ್ಷಣ ರಂಗದಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ಅಶ್ವಿನಿ ನಾಚಪ್ಪ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
ಕೊಡಗಿನ ಮೂಲದ ಅಶ್ವಿನಿ ಹುಟ್ಟಿದ್ದು 1967ರ ಅಕ್ಟೋಬರ್ 21ರಂದು. ಹೇಳಿ ಕೇಳಿ ಕೊಡಗಿನ ಗಂಡು ಮಕ್ಕಳಂತೆ ಹೆಣ್ಣು ಮಕ್ಕಳು ಸಹಾ ಧೈರ್ಯ ಮತ್ತು ಸಾಹಸಿಗಳು ಜೊತೆಗೆ ಅಷ್ಟೇ ಸುಂದರಿಯರೂ ಹೌದು. ಅಕ್ಕ ಪುಷ್ಪ ನಾಚಪ್ಪ ಮತ್ತು ಅಶ್ವಿನಿ ಅಕ್ಕ ತಂಗಿಯರ ಮನೆ ಕಂಠೀರವ ಕ್ರೀಡಾಂಗಣದ ಹತ್ತಿರದಲ್ಲೇ ಇದ್ದ ಕಾರಣ, ಪ್ರತೀ ದಿನವೂ ಆಲ್ಲಿ ಆಭ್ಯಾಸ ಮಾಡುತ್ತಿದ್ದ ಇಲ್ಲವೇ ತರಭೇತಿ ಪಡೆಯುತ್ತಿದ್ದ ಅಥ್ಲೀಟ್ ಗಳನ್ನು ನೋಡುತ್ತಿದ್ದ ಅಕ್ಕ ತಂಗಿಯರು ಅದರಿಂದ ಸಹಜವಾಗಿ ಆಕರ್ಷಿತರಾಗಿ ಅವರಿಗೇ ಅರಿವಿಲ್ಲದಂತೆಯೇ ಕಂಠೀರವ ಕ್ರೀಡಾಂಗಣದತ್ತ ಹೆಜ್ಜೆ ಹಾಕತೊಡಗಿದರು.
ಭಾರತದ ಟ್ರಿಪಲ್ ಜಂಪ್ ಆಟಗಾರರಾಗಿದ್ದಂತಹ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾಗಿದ್ದ ಮೊಹಿಂದರ್ ಸಿಂಗ್ ಗಿಲ್ ಅವರು ಕಂಠೀರವ ಕ್ರೀಡಾಂಗಣಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದದ್ದಲ್ಲದೇ, ಅಲ್ಲಿ ಆಡುತ್ತಿದ್ದ ಮಕ್ಕಳು ಆವರು ಹೇಳಿದಂತೆ ಕ್ರೀಡಾಂಗಣದ ಸುತ್ತಲೂ ಸುತ್ತು ಹಾಕಿದಲ್ಲಿ ಮತ್ತು ಅವರು ಹೇಳಿದಂತೆ ಮಾಡುವ ಮಕ್ಕಳಿಗೆ ಚಾಕ್ಲೇಟ್ ಇಲ್ಲವೇ ಸಿಹಿ ತಿಂಡಿಗಳನ್ನು ನೀಡುತ್ತಿದರು. ಅದೃಷ್ಟವೋ ಏನೋ ಎನ್ನುವಂತೆ ಅಂತಹ ಮೊಹಿಂದರ್ ಅವರ ದೃಷ್ಟಿಗೆ ಅಕ್ಕ ತಂಗಿಯರು ಬಿದ್ದಿದ್ದೆ ತಡಾ ಅವರು ತಮ್ಮೆಲ್ಲಾ ಅನುಭವನ್ನು ಆ ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಅಶ್ವಿನಿಯವರಿಗೆ ಧಾರೆ ಎರೆದರು. ಇದಾವುದರ ಪರಿವಿಲ್ಲದ ಆ ಅಕ್ಕ ತಂಗಿಯರು ಮೊಹಿಂದರ್ ಸಿಂಗ್ ನೀಡುತ್ತಿದ್ದ ಸಿಹಿ ತಿಂಡಿಗಳಿಗೆ ಪ್ರಚೋದಿತರಾಗಿ ಅವರ ಅರಿವಿಗೇ ಬಾರದಂತೆ ಒಳ್ಳೆಯ ಅಥ್ಲೇಟ್ ಆಗತೊಡಗಿದರು.
ಅಶ್ವಿನಿ ಅವರಿಗೆ ಕೇವಲ 10 ವರ್ಷವಾಗಿದ್ದಾಗಲೇ, ಕ್ರೀಡಾಕೂಟವೊಂದರೆಲ್ಲಿ ಮೊದಲ ಸ್ಥಾನ ಗಳಿಸುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ತನ್ನ ಶ್ರೇಷ್ಠತೆಯನ್ನು ತೋರಿದರು. ಆಶ್ವಿನಿಯವರನ್ನು ಗಗನ ಸಖಿಯನ್ನಾಗಿಸ ಬೇಕೆಂದು ಬಯಸಿದ್ದ ಅವರ ಪೋಷಕರು, ತಮ್ಮ ಮಗಳಿಗೆ ವಿಮಾನಕ್ಕಿಂತ ಮೈದಾನದಲ್ಲೇ ಉಜ್ವಲ ಭವಿಷ್ಯವಿದೆ ಎಂಬುದನ್ನು ತಿಳಿದು ಆಕೆಗೆ ಸಕಲ ರೀತಿಯಲ್ಲೂ ಪ್ರೋತ್ಸಾಹ ನೀಡತೊಡಗಿದರು. ಇನ್ನು ಆಕೆ ಓದುತ್ತಿದ್ದ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿಯಾಗಿದ್ದ ಶ್ರೀಮತಿ ಬೀಟ್ರಿಸ್ ಹೆಗ್ಡೆ ಅವರು ಅಥ್ಲೆಟಿಕ್ಸ್‌ನಲ್ಲಿ ಆಶ್ವಿನಿಯವರ ಪ್ರತಿಭೆಯನ್ನು ಗುರುತಿಸಿ ಆಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದರೆ, ಮುಂದೆ ಪ್ರೌಢಶಾಲೆಯ ದೈಹಿಕ ಶಿಕ್ಷಕರಾಗಿದ್ದ ಶ್ರೀ ಪುಷ್ಪಾಂಗದನ್, ಪ್ರಾಂಶುಪಾಲರು ಮತ್ತು ಎಲ್ಲ ಶಿಕ್ಷಕರೂ ನೀಡಿದ ಬೆಂಬಲ ಮತ್ತು ಪ್ರೇರಣೆ ನೀಡಿದ ಫಲವಾಗಿ ಶಾಲೆ ಮತ್ತು ಕಾಲೇಜು ಮಟ್ಟದಿಂದ ಜಿಲ್ಲಾ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿಯೂ ಉತ್ತಮ ಸಾಧನೆ ತೋರಿದ ಪರಿಣಾಮ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಮಟ್ಟಕ್ಕೆ ಬೆಳೆದರು.
1984 ನೇಪಾಳದಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಎರಡು ಬೆಳ್ಳಿ ಪದಕಗಳನ್ನು ಗಳಿಸಿದರೆ, 1986ರಲ್ಲಿ ಬಾಂಗ್ಲಾ ದೇಶದ ಕ್ರೀಡಾಕೂಟದಲ್ಲೂ ಮತ್ತೆ ಎರಡು ಬೆಳ್ಳಿ ಪದಕಗಳನ್ನೂ ಗಳಿಸಿ ಎಲ್ಲರ ಮನ ಸೆಳೆದ ಪರಿಣಾಮ ಸಹಜವಾಗಿ 1986 ರಲ್ಲಿ ದಕ್ಷಿಣ ಕೊರಿಯಾದ ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಲಾಂಗ್ ಜಂಪ್‌ನಲ್ಲಿ 6 ನೇ ಸ್ಥಾನ ಗಳಿಸುವ ಮೂಲಕ ಎಲ್ಲರನ್ನೂ ನಿರಾಶೆಗೊಳಿಸುತ್ತಾರೆ. ನಂತರದ ದಿನಗಳಲ್ಲಿ ಲಾಂಗ್ ಜಂಪ್ ಆಡುವುದನ್ನು ಬಿಟ್ಟು 200, 400, 4 × 100, 4 × 400, ಮೀಟರ್ ಓಟದತ್ತ ಗಮನಹರಿದ ಪರಿಣಾಮ 1987 ರಲ್ಲಿ ರೋಮ್ ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತದ ಪರ 4 × 400 ಮೀ ರಿಲೇಯ ಸದಸ್ಯರಾಗಿದ್ದರೂ ಪದಕ ಪಡೆಯಲು ವಿಫಲರಾದರೆ, 1988ರಲ್ಲಿ ಪಾಕಿಸ್ತಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕಗಳನ್ನು ಗಳಿಸಿದ ನಂತರ 1990 ರಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಓಪನ್ ಮೀಟ್‌ನಲ್ಲಿ 200 ಮೀ ಸ್ಪರ್ಧೆಯಲ್ಲಿ ಅಂದಿನ ಕಾಲಕ್ಕೆ ಚಿನ್ನದ ರಾಣಿ ಎಂದೇ ಪ್ರಖ್ಯಾತರಾಗಿದ್ದ ಪಿ. ಟಿ, ಉಷಾರವರನ್ನು ಹಿಂದಿಕ್ಕಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದರು. 1990ರ ಚೀನಾದ ಬೀಜಿಂಗ್ ಏಷ್ಯನ್ ಕ್ರೀಡಾಕೂಟದಲ್ಲಿ 4 × 100 ಮೀ ರಿಲೇಯ ಭಾಗವಾಗಿ ಬೆಳ್ಳಿ ಪದಕಗಳಿಸಿದರು.
ಇದೇ ಸಮಯದಲ್ಲಿ ಅಮೇರಿಕಾದ ಮಹಿಳಾ ಅಥ್ಲೇಟ್ ಫ್ಲಾರೆನ್ಸ್ ಗ್ರಿಫಿತ್ ಜಾಯ್ನರ್ ಕೇವಲ ಓಟಕ್ಕಷ್ಟೇ ಸೀಮಿತವಾಗಿರದೇ, ಆಕೆಯ ಆಕರ್ಷಕ ಉಡುಗೆ ತೊಡುಗೆ, ಅವಳ ಉಗುರುಗಳು ಮತ್ತು ಕೇಶ ವಿನ್ಯಾಸಕ್ಕೆ ಮತ್ತಷ್ಟು ಹೆಸರುವಾಸಿಯಾಗಿದ್ದಲ್ಲದೇ, ತನ್ನ ಬಟ್ಟೆಗಳನ್ನು ಸ್ವತಃ ಆಕೆಯೇ ವಿನ್ಯಾಸಗೊಳಿಸಿಕೊಳ್ಳುವ ಮೂಲಕ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಕಾರಣ ಅಮೇರಿಕನ್ನರು ಆಕೆಯನ್ನು ಪ್ರೀತಿಯಿಂದ ಫ್ಲೋ ಜೋ ಎಂದು ಕರೆಯುತ್ತಿದ್ದರು. ಬಹುಶಃ ಆಕೆಯಿಂದ ಪ್ರೇರೇಪಿತಳೋ ಎನ್ನುವಂತೆ ಆಶ್ವಿನಿ ನಾಚಪ್ಪನವರೂ ಸಹಾ ಆಕರ್ಷಕವಾದ ಉಡುಗೆ ತೊಡುಗೆಗಳ ಜೊತೆ ಕೇಶವಿನ್ಯಾಸವನ್ನೂ ಸಹಾ ಮಾಡಿಕೊಳ್ಳುತ್ತಿದ್ದ ಕಾರಣ ಭಾರತೀಯರು ಆಶ್ವಿನಿ ನಾಚಪ್ಪನವರನ್ನು ಪ್ರೀತಿಯಿಂದ ಫ್ಲೋ ಜೋ ಆಫ್ ಇಂಡಿಯಾ ಎಂದೇ ಕರೆಯಲಾರಂಭಿಸಿದರು.
ನಂತರ ಮತ್ತೊಮ್ಮೆ ಪಿ.ಟಿ. ಉಷಾರವರನ್ನು ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಸೋಲಿಸಿದ್ದೇ ಆಕೆಗೆ ಮುಳುವಾಯಿತೋ ಏನೋ ಎನ್ನುವಂತೆ ಗಾಯಾಳುವಾಗಿ ಮತ್ತೆ ತಮ್ಮ ಎಂದಿನ ಮಟ್ಟಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದೇ ಎಲ್ಲರು ಭಾವಿಸಿರುವಾಗಲೇ, 1992ರ ಕೋಲ್ಕತ್ತಾದ ರಾಷ್ಟ್ರೀಯ ಅಥ್ಲೆಟಿಕ್ ಕೂಟದಲ್ಲಿ ನಾಲ್ಕು ಸ್ವರ್ಣ ಬಾಚಿಕೊಳ್ಳುವ ಮೂಲಕ ಎಲ್ಲಾ ಟೀಕಾಕಾರರ ಬಾಯಿಯನ್ನು ಚೆಲುವೆ ಆಶ್ವಿನಿ ಮುಚ್ಚಿಸಿದರಾದರೂ, ನಂತರದ ದಿನಗಳಲ್ಲಿ ಪದೇ ಪದೇ ಗಾಯಾಕ್ಕೆ ತುತ್ತಾದ ಅನಿವಾರ್ಯವಾಗಿ ಮತ್ತು ಅಚಾನಕ್ಕಾಗಿ ಟ್ರ್ಯಾಕ್‌ನಿಂದ ದೂರ ಸರಿಯಬೇಕಾಗಿ ಹೋದದ್ದು ವಿಪರ್ಯಾಸ.
ಮೈದಾನದಲ್ಲಿ ಮುಂದುವರೆಯಲು ಆಗದೇ ಹೋದರೇನಂತೆ ಸಾಧನೆ ಮಾಡಲು ನೂರಾರು ಕ್ಷೇತ್ರಗಳಿವೆ ಎಂಬುದನ್ನು ಅತ್ಯಂತ ಶ್ರೀಘ್ರದಲ್ಲೇ ಕಂಡು ಕೊಂಡ ಅಶ್ವಿನಿ, 1980ರ ದಶಕದಲ್ಲಿ ಏಷ್ಯಾದ ಅತ್ಯಂತ ವೇಗದ ಮಹಿಳೆ ಎಂದೇ ಪ್ರಖ್ಯಾತವಾಗಿದ್ದ ಫಿಲಿಫೈನ್ಸ್ ನ ಅಥ್ಲೆಟ್ ಲಿಡಿಯಾ ಡಿ ವೇಗಳಂತೆ ನಟಿಯಾಗಬೇಕೆಂದು ಬಯಸಿ, ತೆಲುಗು ಚಿತ್ರರಂಗಕ್ಕೆ ಕಾಲಿಸಿರಿ ತಮ್ಮದೇ ಜೀವನ ಚರಿತ್ರೆಯ ಮತ್ತು ತಮ್ಮದೇ ಹೆಸರಿನ ಅಶ್ವಿನಿ ಎಂಬ ಚಿತ್ರದಲ್ಲಿ ನಟಿಸಿ ಆ ಚಿತ್ರ ಅತ್ಯಂತ ಯಶಸ್ವಿಯಾಗಿದ್ದಲ್ಲದೇ, ತನ್ನ ಚೊಚ್ಚಲು ಚಿತ್ರಕ್ಕೇ ಆಂಧ್ರ ಪ್ರದೇಶದ ನಂದಿ ಪ್ರಶಸ್ತಿಗೆ ಪಾತ್ರರಾದ ನಂತರ ಮತ್ತೆ ಬೆರಳೆಣಿಕೆಯ ಚಿತ್ರಗಳಲ್ಲಿ ನಟಿಸಿ ಯಶಸ್ಸಿನ ತುತ್ತ ತುದಿಯಲ್ಲಿ ಇರುವಾಗಲೇ ಚಿತ್ರರಂಗಕ್ಕೆ ದಿಢೀರ್ ಎಂದು ಗುಡ್ ಬೈ ಹೇಳಿ, ಅಕ್ಟೋಬರ್ 2, 1994ರಲ್ಲಿ ಕೊಡಗಿನ ಕಾಫಿ ತೋಟಗಾರ ಮತ್ತು ಮರದ ವ್ಯಾಪಾರಿ ದತ್ತ ಕರುಂಬಯ್ಯ ಅವರನ್ನು ಮದುವೆಯಾಗಿ ಗೃಹಿಣಿಯಾಗಿ, ಅವರಿಬ್ಬರ ಸುಂದರ ದಾಂಪತ್ಯದ ಕುರುಹಾಗಿ ಅನೀಷಾ ಮತ್ತು ದೀಪಾಲಿ ಎಂಬ ಇಬ್ಬರು ಹೆಣ್ಣಮಕ್ಕಳ ತಾಯಿಯಾಗಿದ್ದಾರೆ. ಪ್ರಸ್ತುತ ಆ ಹೆಣ್ಣು ಮಕ್ಕಳಿಬ್ಬರೂ ಬ್ಯಾಡ್ಮಿಂಟನ್ ಆಟಗಾರ್ತಿಯರಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ.
ಹೀಗೆ ಕ್ರೀಡೆ ಮತ್ತು ಚಿತ್ರರಂಗದಿಂದ ದೂರವಾದರೂ ಸಮಾಜಕ್ಕೆ ಏನಾದರೂ ನೀಡಲೇ ಬೇಕೆಂಬ ಉತ್ಕಟ ಬಯಕೆಯಿಂದ ತಮ್ಮ ಪತಿಯ ನೆರವಿನಿಂದ ಕೊಡಗಿನಲ್ಲಿ ಕರಂಬಯ್ಯನ ಅಕಾಡೆಮಿ ಫಾರ್ ಲರ್ನಿಂಗ್ ಮತ್ತು ಸ್ಪೋರ್ಟ್ಸ್ (KALS) ಎಂಬ ಕ್ರೀಡಾ ಶಾಲೆಯನ್ನು ಆರಂಭಿಸಿ ಅಲ್ಲಿ 1 ರಿಂದ 12ನೇ ತರಗತಿಯವರೆಗೆ ICSE ಶಿಕ್ಷಣ ಪದ್ದತಿಯ ಶಿಕ್ಷಣ ಸಂಸ್ಥೆಯಾಗಿರುವುದಲ್ಲದೇ, ಈ ಶಾಲೆಯಲ್ಲಿ ಶಿಕ್ಷಣದ ಜೊತೆ ಕ್ರೀಡೆಯೂ ಸಹಾ ಒಂದು ವಿಷಯವಾಗಿದ್ದು, ಅಲ್ಲಿನ ವಿದ್ಯಾರ್ಥಿಗಳು ಈಜು, ಗಾಲ್ಫ್, ಶೂಟಿಂಗ್, ಅಥ್ಲೆಟಿಕ್ಸ್, ರೋಡ್ ರೇಸ್, ಬಾಸ್ಕೆಟ್‌ಬಾಲ್, ಹಾಕಿ, ಇತ್ಯಾದಿಗಳಲ್ಲಿ ವಿಶೇಷ ತರಭೇತಿ ಪಡೆಯುತ್ತಾರೆ. ಅಲ್ಲಿ ಕಲಿತ ವಿದ್ಯಾರ್ಥಿಗಳು ಈಗಾಗಲೇ ರಾಜ್ಯ ಮಟ್ಟದ ಮತ್ತು ರಾಷ್ಟ್ರೀಯ ಮಟ್ಟದ ಹಾಕಿ ಮತ್ತು ಅಥ್ಲೆಟಿಕ್ಸ್‌ನಲ್ಲಿ ಭಾಗವಹಿ ಪದಕಗಳನ್ನು ಗೆದ್ದು ಅಂತರಾಷ್ಟ್ರೀಯ ಮಟ್ಟಕ್ಕೇರುವ ಮೂಲಕ ಆಶ್ವಿನಿಯವರ ಕನಸನ್ನು ನನಸು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾದ ವಿಷಯವಾಗಿದೆ. ಅಶ್ವಿನಿ ನಾಚಪ್ಪನವರು ರಾಷ್ಟ್ರೀಯ ಕ್ರೀಡಾಕೂಟ, ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ಸ್‌ನಂತಹ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಿ, ಕ್ರೀರ್ತಿ ತಂದಿದ್ದನ್ನು ಪುರಸ್ಕರಿಸಿದ ಭಾರತ ಸರ್ಕಾರ ಆಕೆಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ.
ನಮಗೆ ಆಸಕ್ತಿ ಇದ್ದ ವಿಷಯದಲ್ಲಿ ಆರಂಭಿಕ ವೈಫಲ್ಯಗಳ ಹೊರತಾಗಿಯೂ ಪ್ರಯಾಣವನ್ನು ಮುಂದುವರಿಸಿದಲ್ಲಿ ಖಂಡಿತವಾಗಿಯೂ ನಮ್ಮನ್ನು ಯಾವ ಶಕ್ತಿಯೂ ತಡೆಯಲಾಗದು. ನಮ್ಮ ಉತ್ಸಾಹ ಮತ್ತು ನಿರಂತರ ಹೋರಾಟ ನಮ್ಮನ್ನು ಅಂತಿಮ ಗುರಿಯನ್ನು ತಲುಪಿಸಿಯೇ ತೀರುತ್ತದೆ ಎಂದು ಸದಕಾಲವೂ ಧನಾತ್ಮಕವಾಗಿ ಎಲ್ಲರನ್ನೂ ಪ್ರೇರೇಪಿಸುವ ಅಶ್ವಿನಿ ನಾಚಪ್ಪನವರು ಕ್ರೀಡೆ, ಸಿನಿಮಾ, ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ವಿಶೇಷವಾದ ಸಾಧನೆಗಳನ್ನು ಮಾಡಿರುವುದರಿಂದ ಖಂಡಿತವಾಗಿಯೂ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ಸೃಷ್ಟಿಕರ್ತ ಉಮಾಸುತ