ನಟ, ರಂಗಕರ್ಮಿ ಕೆ. ವಿ. ಶ್ರೀನಿವಾಸ ಪ್ರಭು

1994ರಲ್ಲಿ ಉದಯ ಟಿವಿ ಎಂಬ ಖಾಸಗಿ ಛಾನೆಲ್ ಆರಂಭವಾಗುವ ವರೆಗೂ ಸಮಸ್ತ ಕನ್ನಡಿಗರಿಗೂ ದೂರದರ್ಶನದ ಚಂದನ ವಾಹಿನಿಯೇ ಪ್ರಮುಖವಾದ ಆಕರ್ಷಣೆ. ಅದರಲ್ಲೂ ಭಾನುವಾರ ಬೆಳಿಗ್ಗೆ ಪ್ರಸಾರವಾಗುತ್ತಿದ್ದ ಮುನ್ನೋಟ ಮತ್ತು ಸಂಜೆಯ ಹೊತ್ತಿನಲ್ಲಿ ಪ್ರಸಾರವಾಗುತ್ತಿದ್ದ ವೀಕ್ಷಕರ ಪ್ರಶ್ನೋತ್ತರ ಕಾರ್ಯಕ್ರಮ. ಈ  ಎರಡೂ ಕಾರ್ಯಕ್ರಮಗಳು  ಅಂದಿನ ಕಾಲದಲ್ಲಿ ಅತ್ಯಂತ ಜನಪ್ರಿಯವಾಗಲು ಕಾರಣೀಭೂತರಾದವರೇ, ಮಂದಹಾಸದ ವದನರಾದ ನಟ, ನಾಟಕಕಾರ, ನಿರ್ದೇಶಕ,  ಕಂಚಿನ ಕಂಠದ ಕಂಠದಾನ ಕಲಾವಿದ ಹೀಗೆ ಬಹುಮುಖ ಪ್ರತಿಭೆಯ ಶ್ರೀ  ಕೆ. ವಿ. ಶ್ರೀನಿವಾಸ ಪ್ರಭು ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ

prabhu4ಕೆ. ವಿ. ಶ್ರೀನಿವಾಸಪ್ರಭು ಅವರು ಹಾಸನ ಜಿಲ್ಲೆಯ ಕಟ್ಟೇಪುರದಲ್ಲಿ 1955ರ ಅಕ್ಟೋಬರ್ 21ರಂದು ಜನಿಸಿದರು.  ತಂದೆ ಕೆ.ಆರ್.ವಿ. ಸುಬ್ರಹ್ಮಣ್ಯ. ತಾಯಿ ರುಕ್ಮಿಣಮ್ಮ.  ಕನ್ನಡ ಬಿ. ಎ. ಆನರ್ಸ್ ಪ್ರಥಮ ರ್‍ಯಾಂಕ್ ಮತ್ತು 1974ರಲ್ಲಿ ಕನ್ನಡ ಎಂ.ಎ ಪದವಿಯನ್ನು ಪ್ರಥಮ ರ್‍ಯಾಂಕ್ ಸಾಧನೆಯಲ್ಲಿ ಎರಡು ಚಿನ್ನದ ಪದಕಗಳೊಂದಿಗೆ ಗಳಿಸಿದ ಸಾಧನೆ ಪ್ರಭು ಅವರದ್ದು. ಶಾಲೆಯ ದಿನಗಳಿಂದಲೇ  ಓದಿನ ಜೊತೆ ಸಾಂಸ್ಕೃತಿಕ ಚಟುವಟಿಗಳಲ್ಲಿಯೂ ಆಸಕ್ತಿ ಹೊಂದಿದ್ದ ಪ್ರಭು, 1980ರಲ್ಲಿ ದೆಹಲಿಯ ನಾಟಕ ಶಾಲೆಯಿಂದ ನಾಟಕ ರಂಗದಲ್ಲಿ ಪದವಿ ಗಳಿಸಿದ ನಂತರ ಕೆಲ ಕಾಲ ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿಕೊಂಡ ನಂತರ ಬೆಂಗಳೂರಿನಿಂದಲೇ ಕಾರ್ಯಕ್ರಮ ತಯಾರಾಗಿ ಪ್ರಸಾರ ಆರಂಭಿಸಿದ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ 1983ರಲ್ಲಿ ನಿರ್ದೇಶಕರಾಗಿ ಸೇರಿಕೊಂಡು ಅಲ್ಲಿಂದ ಕೆಲ ವರ್ಷಗಳ ಕಾಲ ಗುಲ್ಬರ್ಗಾ ಕೇಂದ್ರದಲ್ಲಿಯೂ 1998ರವರೆಗೆ ಕಾರ್ಯ ನಿರ್ವಹಿಸಿದ್ದರು. ಶ್ರೀನಿವಾಸ ಪ್ರಭು ಅವರು  ದೂರದರ್ಶನದಲ್ಲಿದ್ದ 14 ವರ್ಷಗಳ ಅವಧಿಯಲ್ಲಿ ಬಿ. ಜಯಶ್ರೀ, ಸಿ.ಜಿ. ಕೃಷ್ಣಸ್ವಾಮಿ, ಸುರೇಂದ್ರನಾಥ್, ನೀನಾಸಂ ತಂಡ, ಬಿ. ಸಿ ಸೇರಿದಂತೆ ಅನೇಕ ನಾಟಕರಾರರಿಗೆ ದೂರದರ್ಶನಲ್ಲಿ ಅವಕಾಶ ನೀಡುವ ಮೂಲಕ ನೂರಾರು ನಾಟಕಗಳನ್ನು ಕಿರುತೆರೆಗೆ ಅಳವಡಿಸಿದ್ದಲ್ಲದೇ, ಕನ್ನಡದ ವಾಹಿನಿಯನ್ನೂ ಹಿಂದೀ ವಾಹಿನಿಯಂತೆಯೇ ಆಕರ್ಶಣೀಯಗೊಳಿಸುವ ಸಲುವಾಗಿ ತೆನಾಲಿರಾಮ, ಡಿಟೆಕ್ಟಿವ್ ಅಜಿತ್ ಮೊದಲಾದ ಪತ್ತೇದಾರಿ ಕಥೆಗಳನ್ನು ನಿರ್ಮಾಣ ಮತ್ತು ನಿರ್ದೇಶನ ಮಾಡಿದರು.  ಇದೇ ಸಮಯದಲ್ಲಿಯೇ ಭಾನುವಾರ ಬೆಳಿಗ್ಗೆ ಪ್ರಸಾರವಾಗುತ್ತಿದ್ದ ಮುನ್ನೋಟ ಮತ್ತು ಸಂಜೆಯ ಹೊತ್ತಿನಲ್ಲಿ ಪ್ರಸಾರವಾಗುತ್ತಿದ್ದ ವೀಕ್ಷಕರ ಪ್ರಶ್ನೋತ್ತರ ಕಾರ್ಯಕ್ರಮಗಳಲ್ಲಿ ಖುದ್ದಾಗಿ ಶ್ರೀನಿವಾಸ ಪ್ರಭು ಅವರೇ ಭಾಗಿಗಳಾಗಿ ವೀಕ್ಷಕರ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ನೀಡುವ ಮೂಲಕ ಚಂದನ ವಾಹಿನಿ ವೀಕ್ಷಕರ ಸಂಖ್ಯೆ ಹೆಚ್ಚಾಗಲು ಕಾರಣರಾದರು ಎಂದರೂ ಅತಿಶಯವಾಗದು

ಶ್ರೀನಿವಾಸ ಪ್ರಭು ಅವರು ದೂರದರ್ಶನದ ಸೇವೆಯಿಂದ ಹೊರಬಂದ ಮೇಲೆ ವೃತ್ತಿಪರ ನಟನೆ ಮತ್ತು ನಿರ್ದೇಶನದಲ್ಲಿ ತೊಡಗಿಕೊಂಡರು. ಖಾಸಗೀ ಛಾನೆಲ್ಲುಗಳಲ್ಲಿ ಪ್ರಸಾರವಾಗುತ್ತಿದ್ದ ಜನನಿ, ಮನ್ವಂತರ, ಮುಕ್ತ ಮುಕ್ತ, ಶರಪಂಜರ, ಮಹಾಪರ್ವ, ಕ್ಲಾಸ್‍ಮೇಟ್ಸ್, ಗೀತಾಂಜಲಿ, ಮನೆಯೊಂದು ಮೂರು ಬಾಗಿಲು, ಜೋಡಿಹಕ್ಕಿ, ಕುಟುಂಬ, ನಾಕುತಂತಿ, ಮದರಂಗಿ, ತಕಧಿಮಿತಾ ಮುಂತಾದ ಧಾರಾವಾಹಿಗಳಲ್ಲಿ ಪೋಷಕಪಾತ್ರ ಅಥವಾ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದರೆ, ಸಂಜೆ ಮಲ್ಲಿಗೆ, ಡಿಟೆಕ್ಟಿವ್ ಧನುಷ್, ಅಂತರಗಂಗೆ, ಆಸರೆ ಮುಂತಾದ  ಸುದೀರ್ಘವಾದ ಧಾರಾವಾಹಿಗಳನ್ನು ವಿವಿಧ ವಾಹಿನಿಗಳಿಗಾಗಿ ನಿರ್ದೇಶಿಸಿದ್ದಾರೆ.

ತಮ್ಮ ಭಾಷಾ ಶೈಲಿ, ಕಂಚಿನ ಕಂಠ ಮತ್ತು ಕಾರ್ಯಕ್ರಮ ನಿರ್ವಹಿಸುವ ವಿಶಿಷ್ಟ ಪ್ರತಿಭೆಯನ್ನು ಹೊಂದಿರುವ ಕಾರಣ, ನಭೂತೋ ನಭವಿಷ್ಯತಿ ಎನ್ನುವಂತೆ ದಿವಂಗತ ಸಿ.‍ ಅಶ್ವಥ್ ಅವರ ಕನ್ನಡವೇ ಸತ್ಯ ಕಾರ್ಯಕ್ರಮದ ನಿರ್ವಹಣೆ ಮತ್ತು ನಿರೂಪಣೆ ಮಾಡಿದ್ದರೆ, ಈTV ವರ್ಷದ ಕನ್ನಡಿಗ, ಉಡುಪಿ ಪರ್ಯಾಯ ಮಹೋತ್ಸವಗಳು, ಧರ್ಮಸ್ಥಳ ಲಕ್ಷದೀಪೋತ್ಸವ ಮುಂತಾದ ಕಾರ್ಯಕ್ರಮಗಳ ನಿರ್ವಹಣೆ ಮತ್ತು ನೇರಪ್ರಸಾರದಲ್ಲಿ ವೀಕ್ಷಕ ವಿವರಣೆಯನ್ನೂ ನೀಡಿದ್ದಾರೆ.

pbabhu3ಕೇವಲ ನಾಟಕ ಮತ್ತು ಕಿರುತರೆಗಷ್ಟೇ ಸೀಮಿತಗೊಳ್ಳದ ಶ್ರೀನಿವಾಸ ಪ್ರಭು ಅವರು  1976-77ರಲ್ಲಿ  ಟಿ. ಎಸ್. ರಂಗಾ ನಿರ್ದೇಶನದ ಗೀಜಗನ ಗೂಡು ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ಶಂಕರ್ ನಾಗ್ ನಿರ್ದೇಶನದ ಆಕ್ಸಿಡೆಂಟ್, ಜಿ.ವಿ. ಐಯ್ಯರ್ ಅವರು ಸಂಸ್ಕೃತ ಭಾಷೆಯಲ್ಲಿ ನಿರ್ದೇಶಿಸಿದ ಆದಿ ಶಂಕರಾಚಾರ್ಯ,  ಚೈತ್ರದ ಚಿಗುರು, ಮುಸ್ಸಂಜೆ, ಕಾನೂರು ಹೆಗ್ಗಡತಿ, ಕನಕಪುರಂದರ, ರಾಷ್ಟ್ರಗೀತೆ, ಹುಡುಗರು, ಮೇಲುಕೋಟೆ ಮಂಜ, ಸ್ಮೈಲ್ ಪ್ಲೀಸ್ ಮುಂತಾದ ಚಿತ್ರಗಳು ಸೇರಿದಂತೆ ನೂರಾರು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮೆಚ್ಚುಗೆ ಗಳಿಸಿದ್ದಾರೆ.

prabhu5ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಆರಂಭದ ಸುಮಾರು 20 ಪ್ರಮುಖ  ಚಿತ್ರಗಳಲ್ಲಿ  ರವಿಚಂದ್ರನ್ ಅವರ ಶರೀರಕ್ಕೇ ಶ್ರೀನಿವಾಸ್ ಪ್ರಭುರವರ ಅದ್ಘುತವಾದ ಶಾರೀರವನ್ನು ನೀಡುವ ಮೂಲಕ ತಾವೊಬ್ಬ ಅಧ್ಭುತವಾದ ಕಂಠದಾನ ಕಲಾವಿದ ಎಂಬುದನ್ನು ಸಾಭೀತು ಪಡಿಸಿದ್ದಾರೆ.  ಅದರಲ್ಲೂ  ಲಾಯರ್ ಪಾತ್ರದಲ್ಲಿ ರವಿಚಂದ್ರನ್ ಪದೇ ಪದೇ ಹೇಳುವ  ಪೀಸ್ ಪೀಸ್ ಪದ ಕೇಳಿದಲ್ಲಿ ಅದು ಖಂಡಿತವಾಗಿಯೂ ರವಿಚಂದ್ರನ್ ಅವರ ಧ್ವನಿಯೇನೋ ಎನ್ನುವಷ್ಟರ ಮಟ್ಟಿಗೆ ಅದ್ಭುತವಾಗಿ  ಶ್ರೀನಿವಾಸ್ ಕಂಠದಾನ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಅವರಿಬ್ಬರ ನಡುವಿನ  ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ಸ್ವತಃ ರವಿಚಂದ್ರನ್ ಅವರೇ ಡಬ್ಬಿಂಗ್ ಮಾಡಲು ಆರಂಭಿಸಿದರು.

ಕನ್ನಡ ಮಹಾನ್ ನಾಟಕಕಾರ ಸಂಸರ ಜೀವನದ ಕಥಾಹಂದರವನ್ನು ಒಳಗೊಂಡ ಬಿಂಬ – ಆ ತೊಂಬತ್ತು ನಿಮಿಷಗಳು ಚಿತ್ರದಲ್ಲಿ ಸ್ವಯಂ ನಟಿಸಿದ್ದಲ್ಲದೇ, ಜಿ. ಮೂರ್ತಿ ಅವರೊಡನೆ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದ ಮತ್ತು  ಇಡೀ ಚಿತ್ರದಲ್ಲಿ ಒಬ್ಬನೇ ನಟ ಆಭಿನಯಿಸಿರುವ, ಒಂದೇ ಶಾಟ್ನಲ್ಲಿ ಚಿತ್ರಿಸಿರುವ ಪ್ರಪ್ರಥಮ ಚಿತ್ರ ಎಂದು ವಿಶ್ವದಾಖಲೆ ನಿರ್ಮಿಸಿರುವುದು ಗಮನಾರ್ಹವಾಗಿದೆ.

prabhu8ಶ್ರೀನಿವಾಸ ಪ್ರಭು ಅವರು ರಂಗಭೂಮಿಯಲ್ಲಿ ಹಲವು ನಿಟ್ಟಿನಲ್ಲಿ ಅಪಾರ ಕೆಲಸ‍ ಮಾಡಿದ್ದಾರೆ. ಅವರು ನಟಿಸಿದ್ದಾರೆ, ನಿರ್ಮಿಸಿದ್ದಾರೆ, ನಿರ್ದೇಶಿಸಿದ್ದಾರೆ ಮತ್ತು ನಾಟಕಗಳನ್ನು ರಚಿಸಿದ್ದಾರೆ. ಬಿಜಾಪುರ, ಕುಂಬಳಗೋಡು, ಕಾಸರಗೋಡು, ಉಡುಪಿ, ಹೊನ್ನಾವರ, ಗೌರಿಬಿದನೂರು ಹೀಗೆ ನಾಡಿನಾದ್ಯಂತ ಸಂಚರಿಸಿ ರಂಗ ತರಬೇತಿ ಶಿಬಿರಗಳನ್ನು ನಡೆಸಿ, ಸ್ಥಳೀಯ ತಂಡಗಳಿಗೆ ನಾಟಕ ನಿರ್ದೇಶನ ಮಾಡಿದ್ದಾರೆ.  ಕನ್ನಡದಲ್ಲಿರುವ ನಾಟಕಗಳ ಕೊರತೆ ನೀಗಿಸಲು ಅನೇಕ ಕತೆ-ಕಾದಂಬರಿಗಳನ್ನು ರಂಗರೂಪಕ್ಕೆ ಅಳವಡಿಸಿದ್ದಾರೆ.

ಶ್ರೀನಿವಾಸ ಪ್ರಭು ಅವರ ನಾಟಕಗಳಿಗೆ ಸ್ಥಳೀಯರ ಪ್ರೋತ್ಸಾಹ ಹೇಗಿತ್ತು ಎನ್ನುವುದಕ್ಕೆ ಗೌರಿಬಿದನೂರಿನಲ್ಲಿ ಬಿ.ವಿ. ವೈಕುಂಠರಾಜು ಅವರ ಉದ್ಭವ ನಾಟಕದ ಈ ಘಟನೆಯೇ ಸಾಕ್ಷಿ.  ಅಂದು ನಾಟಕ ನೋಡಲು ಆ ಹಳ್ಳಿಯ ಗಣ್ಯರು, ರಾಜಕೀಯ ಧುರೀಣರೆಲ್ಲರೂ ಬಂದಿದ್ದರು. ನಾಟಕದದ ನಾಯಕ ರಾಘಣ್ಣ, ಗಣಪತಿ ಉದ್ಭವಿಸಿದ್ದಾನೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ವಂಚಿಸಿ ಗಣಪತಿಗೆ ರಸ್ತೆಯ ಮಧ್ಯದಲ್ಲಿಯೇ ಗುಡಿ ಕಟ್ಟಲು ಮುಂದಾಗಿದ್ದನ್ನು ನೋಡಿ, ಆ ಗಣೇಶನ ಮೂರ್ತಿಯನ್ನು ಕೆತ್ತಿದ್ದ ಶಿಲ್ಪಿಗಳಾದ ರಾಮಾಚಾರಿಗಳು ಬಂದು  ಇದು ಉದ್ಭವ ಮೂರ್ತಿಯಲ್ಲಾ.. ಇದು ನಾನು ಕೆತ್ತಿದ ಗಣಪತಿ ಎಂದು ಕೂಗಾಡುವ ಸನ್ನಿವೇಶಕ್ಕೆ ಸರಿಯಾಗಿ ರಂಗದ ಮೇಲೆ ಉದ್ಭವ ಮೂರ್ತಿಯ ಪ್ರತಿಷ್ಠಾಪನೆಯಾಗಿ ಮೇಳದವರು ಸದ್ದು ಗದ್ದಲದಿ ಸುದ್ದಿ ಮಾಡುವನಲ್ಲ. ಇದ್ದೂ ಇಲ್ಲದಂತೆ ಸ್ವಾಮಿ ಉದ್ಭವಿಸಿ ಬರುತಾನೆ  ಎಂಬ ಹಾಡನ್ನಾಡುತ್ತಿದ್ದಂತೆಯೇ, ಇದ್ದಕ್ಕಿದ್ದಂತೆಯೇ ಪ್ರೇಕ್ಷಕರಲ್ಲಿ ಒಂದು ರೀತಿಯ ತಳಮಳವುಂಟಾಗಿ, ಮುಂದಿನ ಸಾಲಿನಲ್ಲಿ ಕುಳಿತಿದ್ದ  ಹಿರಿಯರೊಬ್ಬರು,  ಅಲ್ಲಿದ್ದ ಕಿರಿಯರಿಗೆ ಜಟ್ಟನೆ ಹೋಗಿ ಪಟ್ಟನೆ ಬರ್ರೋ, ಹಾಗೇ ಒಳ್ಳೇ ಹಣ್ಣು ತರ್ರೋ, ಕಸಕಟ್ಟೆ ಕಾಯಿ ಗೀಯಿ ತಂದೀರಾ ಮತ್ತೆ ಎಂದು ಜೋರಾಗಿ ಹೇಳುತ್ತಿದ್ದದ್ದನ್ನು ಕೇಳಿದ ನಾಟಕ ತಂಡಕ್ಕೆ ಏನಾಗುತ್ತಿದೆ ಎಂಬುದರ ಅರಿವಾಗದೇ ಕಕ್ಕಾಬಿಕ್ಕಿಯಾಗುತ್ತಿರುವಾಗಲೇ, ಆಲ್ಲಿನ ಯುವಕರು ಹೂವು,ಹಣ್ಣು, ಊದುಗಡ್ಡಿ,ಕರ್ಪೂರ ಮುಂತಾದ  ಪೂಜಾ ಸಾಮಗ್ರಿಗಳನ್ನು ತಂದು, ನಾಟಕದಲ್ಲಿ ಅರ್ಚಕರಾಗಿ ಅಭಿನಯಿಸುತ್ತಿದ್ದವನ್ನೇ,ಅಯ್ನೊರೇ,ನಮ್ಮ ಸುತ್ತೂ ಹಳ್ಳ್ಯಾಗೆ ಮಳೆ ಬೆಳೆ ಚಂದಾಗಿ ಆಗಿ ಎಲ್ಲಾ ಸುಖವಾಗಿರೋ ಹಂಗೆ ನೋಡ್ಕಳಪ್ಪಾ ಸ್ವಾಮಿ ಅಂತ ಬೇಡ್ಕೊಂಡು ಪೂಜೆ ಮಾಡಿ ಮಂಗಳಾರತಿ ಮಾಡಿ ಬಿಡಿ ಎಂದಾಗ,  ಆ ಅರ್ಚಕ ಪಾತ್ರಾಧಾರಿಗಳು ಎನು ಮಾಡಬೇಕು? ಎಂದು  ನಿರ್ದೇಶಕ ಶ್ರೀನಿವಾಸ ಪ್ರಭು ಅವರತ್ತ ನೋಡಿದಾಗ,ಹಳ್ಳಿಯ ಛೇರ್ಮನ್ನರ ಅಪ್ಪಣೆ ಮೀರಲಾದೀತೇ? ನಿಮಗೆ ತೋಚಿದಂತೆ ಪೂಜೆ ಮಾಡಿ ಎಂದಾಗ, ಎಲ್ಲರೂ ಉದ್ಭವ ಮೂರ್ತಿಗೆ ಪೂಜೆ ಮಾಡಿ, ಜೈಗಣೇಶ ಜೈಗಣೇಶ ಎಂದು ಪೂಜೆ ಮಾಡಿ ಸಂಭ್ರಮಿಸಿದ್ದು ನಾಟಕಗಳು ಪ್ರೇಕ್ಷಕರನ್ನು ಯಾವ ಮಟ್ಟಿಗೆ ಸೆಳೆಯುತ್ತದೆ  ಎಂಬುದನ್ನು ತೋರಿಸುತ್ತದೆ.

ಹ್ಯಾಮ್ಲೆಟ್, ಈ ಮುಖದವರು, ಬೆಕೆಟ್, ಫಾಸ್ಟಸ್, ನೀ ನಾನದ್ರೆ ನಾ ನೀನೇನಾ, ಇತಿ ನಿನ್ನ ಅಮೃತಾ, ರಾಜಬೇಟೆ, ಸಾಮಿಯ ಸ್ವಗತ, ಮಹಾಸ್ವಾಮಿ, ಮಾರೀಚನ ಬಂಧುಗಳು ಮೊದಲಾದವು ಪ್ರಭು ಅವರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ ನಾಟಕಗಳಾದರೆ, ಬೆಳ್ಳಿಗುಂಡು, ಸಿಕ್ಕು, ತಲೆಗೊಂದು ಕೋಗಿಲೆ, ನೆರಳಿಲ್ಲದ ಜೀವಗಳು, ಅಂತಿಮ ಯಾತ್ರೆ, ಉದ್ಭವ, ಗುಳ್ಳೆನರಿ, ರಾಜಬೇಟೆ, ಪರಮೇಶಿ ಪ್ರೇಮ ಪ್ರಸಂಗ, ಅಪಕಾರಿಯ ಕಥೆ, ಸಾಮಿಯ ಸ್ವಗತ ಮೊದಲಾದವು ಪ್ರಭು ರಚಿಸಿ ನಿರ್ದೇಶಿಸಿದ ನಾಟಕಗಳು.  ಬೆಕೆಟ್, ಅಂತಿಗೊನೆ, ನಾನೇ ಬಿಜ್ಜಳ ಮೊದಲಾದವು ಅವರು ನಿರ್ದೇಶಿಸಿದ ನಾಟಕಗಳು  ಹ್ಯಾಮ್ಲೆಟ್ ನಾಟಕದಲ್ಲಿ ಅವರ ಅಭಿನಯ ಎಷ್ಟು ಜನಪ್ರಿಯವಾಗಿತ್ತೆಂದರೆ ಜನರು ಅವರನ್ನು  ಹ್ಯಾಮ್ಲೆಟ್ ಪ್ರಭು ಎಂದೇ ಕರೆಯುತ್ತಿದ್ದರು. ಪ್ರಭು ಅವರು ರಂಗರೂಪಕ್ಕೆ ಅಳವಡಿಸಿ ನಿರ್ದೇಶಿಸಿದ ಸಿಕ್ಕು ನಾಟಕ ಇಂಗ್ಲೇಂಡಿನ ಮ್ಯಾಂಚೆಸ್ಟರ್ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರದರ್ಶನಗೊಂಡಿತು. ಶ್ರೀನಿವಾಸ ಪ್ರಭು ಅವರ ಕಲಾಸೇವೆಯನ್ನು ಪರಿಗಣಿಸಿ ಅವರಿಗೆ ಕರ್ನಾಟಕ ರಾಜ್ಯ ನಾಟಕ ಅಕಾಡಮಿ ಗೌರವ ಸಂದಿದೆ.

ಶ್ರೀನಿವಾಸ ಪ್ರಭು ಅವರಷ್ಟೇ ಕಲೆಗೆ ಸೀಮಿತವಾಗಿರದೇ ಅವರ ಇಡೀ  ಕುಟುಂಬವೇ ಸಾಹಿತ್ಯ, ಸಂಗೀತ, ನೃತ್ಯ, ರಂಗಭೂಮಿ, ಪಾಶ್ಚಾತ್ಯ-ಭಾರತೀಯ ಕಲಾಪ್ರಕಾರಗಳ ಮಧುರ ಸಂಗಮವಾಗಿದೆ. ಪ್ರಭು ಅವರ ಶ್ರೀಮತಿ ರಂಜಿನಿ ಪ್ರಭು ಕಾಲೇಜು ಶಿಕ್ಷಕಿ, ಕವಯತ್ರಿ ಮತ್ತು ರಂಗಾಸಕ್ತೆಯಾಗಿದ್ದಲ್ಲದೇ, ದಂಪತಿಗಳಿಬ್ಬರೂ ಖ್ಯಾತ ಹಿಂದೂಸ್ಥಾನಿ ಹಾಡುಗಾರ್ತಿ ವಿದುಷಿ ಶಾಮಲಾಭಾವೆಯವರ ಬಳಿ ಸಂಗೀತಾಭ್ಯಾಸ ಮಾಡಿದ್ದಾರೆ, ಇನ್ನು ಮಗಳು ಅನ್ವಿ ಭರತನಾಟ್ಯ ಪ್ರವೀಣೆಯಾಗಿರುವುದಲ್ಲದೇ, ಲಂಡನ್ನಿನ ಚೆಲ್ಸಿ  ಕಾಲೇಜಿನಲ್ಲಿ ಲಲಿತಕಲೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವುದಲ್ಲದೇ, ಇಂಗ್ಲಿಷಿನಲ್ಲಿ  ಕವಿತೆ ಬರೆಯುತ್ತಾರೆ. ಮಗ ಅನಿರುದ್ಧ ಪಾಶ್ಚಾತ್ಯ ಸಂಗೀತದಲ್ಲಿ ಆಸಕ್ತರಾಗಿದ್ದು, ತಾವೇ ಹಾಡು ಬರೆದು ಸಂಯೋಜಿಸಿ ಹಾಡುತ್ತಾರೆ ಮತ್ತು ಗಿಟಾರ್ ನುಡಿಸುತ್ತಾರೆ.

prabhu1ನಟನೆ, ನಿರ್ದೇಶನ,  ನಿರ್ಮಾಣವಷ್ಟೇ ಅಲ್ಲದೇ ಪಾಕಶಾಸ್ತ್ರದಲ್ಲಿಯೂ ಪ್ರಾವೀಣ್ಯತೆಯನ್ನು ಹೊಂದಿರುವ ಪ್ರಭುರವರು  ಸಿರಿಪಾಕ ಎಂಬ ಪುಸ್ತಕವನ್ನೂ ಪ್ರಕಟಿಸಿದ್ದಾರೆ. ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಏನ ಹೇಳಲಿ ಪ್ರಭುವೇ? ಎಂಬ ಪ್ರಸಿದ್ಧ ಅಂಕಣದ ಮೂಲಕ ತಮ್ಮ ಬದುಕಿನ ವಿಶಿಷ್ಟ ಪಯಣವನ್ನು ಜನರ ಮುಂದೆ ತೆರೆದಿಡುವ ಮೂಲಕ ಕನ್ನಡದ ನಾಟಕರಂಗ, ಚಿತ್ರರಂಗ, ಸಾರಸ್ವತ ಲೋಕದಲ್ಲಿ ವಿಶಿಷ್ಠವಾದ ಸೇವೆ ಸಲ್ಲಿಸಿರುವ ಕಾರಣ ನಿಸ್ಸಂದೇಹವಾಗಿಯೂ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment