ಕನ್ನಡ ನವೋದಯ ಸಾಹಿತ್ಯದ ಮುಂಗೋಳಿ ಮುದ್ದಣ

ಕೆಲವೊಮ್ಮೆ ಕೆಲವೊಂದು ಮಾತುಗಳನ್ನು ಕೆಲವರಿಂದ ಕೇಳಿದರೆ ಮಾತ್ರವೇ ಅದಕ್ಕೊಂದು ಗತ್ತು ಇರುತ್ತದೆ. ನಾನು ಬರೋವರಗೂ ಮಾತ್ರ ಬೇರೆಯವರ ಹವಾ ನಾನು ಬಂದ್ಮೇಲೇ ನಂದೇ ಹವಾ! ಎಂಬ ಮಾತು ರಾಕಿಂಗ್ ಸ್ಟಾರ್ ಯಶ್ ಅವರದ್ದಾದರೇ  ಪಟಾಕಿ ಯಾರ್ದೇ  ಇರ್ಲೀ ಹಚ್ಚೋರು ಮಾತ್ರಾ ನಾವ್ ಆಗಿರ್ಬೇಕ್ ಅಂತಾ ಪುನೀತ್ ರಾಜಕುಮಾರ್ ಅವರ ಬಾಯಿಂದ ಕೇಳಿದರೆ ಹೇಗೆ ಚಂದ ಎನಿಸುತ್ತದೆಯೋ ಹಾಗೇಯೇ ಆರಂಕುಶಮಿಟ್ಟೊಡಂ ನೆನವುದೆನ್ನಮನಂ ಬನವಾಸಿ ದೇಶಮಂ ಎಂದೊಡನೆ ನಮಗೆ ಪಂಪ ನೆನಪಾದರೆ, ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು, ಕನ್ನಡಂ ಕತ್ತೂರಿಯಲ್ತೆ, ಪದ್ಯಂ ವದ್ಯಂ ಗದ್ಯಂ ಹೃದ್ಯಂ, ಹೃದ್ಯಮಪ್ಪ ಗದ್ಯದೊಳೆ ಪೇಳ್ವುದು, ಸಪ್ತಾಕ್ಷರೀ ಮಂತ್ರ ಮುಂತಾದ ಮಾತುಗಳನ್ನು ಕೇಳಿದ ತಕ್ಷಣವೇ ನೆನಪಿಗೆ ಬರುವುದೇ ಮುದ್ದಣ. ಕನ್ನಡ ನವೋದಯ ಸಾಹಿತ್ಯದ ಮುಂಗೋಳಿ ಎಂದೇ ಹೆಸರಾಗಿದ್ದ ಮುದ್ದಣನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಕನ್ನಡ ಸಾರಸ್ವತಲೋಕಕ್ಕೆ ಅವರ ಕೊಡುಗೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

ಉಡುಪಿ ಮತ್ತು ಕಾರ್ಕಳದ ಮಧ್ಯದ ಗ್ರಾಮವಾದ ನಂದಳಿಕೆಯ ಪಾಠಾಳಿ ತಿಮ್ಮಪ್ಪಯ್ಯ ಮತ್ತು ಮಹಾ ಲಕ್ಷ್ಮಮ್ಮ ದಂಪತಿಗಳಿಗೆ ಶುಕ್ಲ ಸಂವತ್ಸರದ ಪುಷ್ಯ ಬಹುಳ ಅಷ್ಟಮಿ ಸೋಮವಾರ  ಅರ್ಥಾತ್ 24 ಜನವರಿ 1870ರಂದು ನಂದಳಿಕೆಯಲ್ಲೇ ಜನಿಸಿದ ತಮ್ಮ ಚೊಚ್ಚಲುಮಗುವಿಗೆ ನಂದಳಿಕೆ ಲಕ್ಷ್ಮೀ ನಾರಣಪ್ಪ  ಎಂಬ ಹೆಸರನ್ನು ಇಟ್ಟರಾದರೂ, ನೋಡಲು ಬಹಳ ಮುದ್ದು ಮುದ್ದಾಗಿದ್ದ ಕಾರಣ ಎಲ್ಲರೂ ಪ್ರೀತಿಯಿಂದ ಮುದ್ದಣ್ಣ ಎಂಬ  ಹೆಸರಿನಿಂದ ಕರೆಯಲಾರಂಭಿಸಿದ್ದೇ ಶಾಶ್ವತವಾಗಿ ಉಳಿದುಹೋಗಿ ಅದೇ ಮುಂದೆ ನಂದಳಿಕೆ ಲಕ್ಷ್ಮೀ ನಾರಣಪ್ಪರ ಕಾವ್ಯನಾಮವಾಗಿ ಕನ್ನಡಿಗರ ಮನಗಳಲ್ಲಿ ಅಚ್ಚೊತ್ತಿತು. ಮುದ್ದಣ್ಣ ನಂದಳಿಕೆಯ ಮುರೂರು ಚರಡಪ್ಪನವರು ಸ್ಥಾಪಿಸಿದ ಪಾಠಶಾಲೆಯಲ್ಲಿ  ಪ್ರಾಥಮಿಕ ಶಿಕ್ಷಣ ಮುಗಿಸಿ ಹೆಚ್ಚಿನ ವ್ಯಾಸಂಗಕ್ಕೆ ಉಡುಪಿಗೆ ಬಂದು ಉಟೋಪಚಾರಗಳಿಗೆ  ಉಡುಪಿಯ ಮಠದ ಆಶ್ರಯ ಸಿಕ್ಕರೂ, ಆಂಗ್ಲ ಮಾಧ್ಯಮದ ಶಾಲೆಗೆ ಕೊಡುವಷ್ಟು ಹಣ ಇಲ್ಲದೇ ಇದ್ದ ಕಾರಣ, ಕನ್ನಡ ಮಾಧ್ಯಮದಲ್ಲೇ ಪ್ರೌಢ ಶಿಕ್ಷಣ ಮುಗಿಯಿತು.

ಉಡುಪಿಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ಜೀವನೋಪಾಯಕ್ಕಾಗಿ ಶಿಕ್ಷಕರಾಗಲೂ ನಿರ್ಧರಿಸಿ, ಶಿಕ್ಷಕರ ತರಬೇತಿ ಶಾಲೆಗೆ ಸೇರುವ ಮೂಲಕ ಶಿಕ್ಷಕರ ತರಭೇತಿಯ ಜೊತೆಗೆ ಅಂದಿನ ವ್ಯವಹಾರಕ್ಕೆ   ಅವಶ್ಯಕವಿದ್ದಷ್ಟು ಇಂಗ್ಲಿಷ್ ಭಾಷೆಯನ್ನೂ ಕಲಿತಿದ್ದಲ್ಲದೇ, ಸಹಜವಾಗಿ ಕರಾವಳಿಯ ಕಲೆ ಯಕ್ಷಗಾನದಲ್ಲಿ ಅಭಿನಯಿಸುವುದಷ್ಟೇ ಅಲ್ಲದೇ,  ಪ್ರಸಂಗಗಳನ್ನು ರಚಿಸುವಷ್ಟು ಸಾಮರ್ಥ್ಯವನ್ನೂ ಗಳಿಸಿಕೊಂಡರು. ಒಳ್ಳೆಯ  ಗಟ್ಟಿ ಮುಟ್ಟಿನ ದೇಹದಾಢ್ಯವನ್ನು  ಹೊಂದಿದ್ದನ್ನು ನೋಡಿದ ಅವರ ಶಾಲೆಯ ಮುಖ್ಯೋಪಾಧ್ಯಾಯರು ಅಂಗಸಾಧನೆಯಲ್ಲಿ ಹೆಚ್ಚಿನ ಪರಿಶ್ರಮ ಪಡೆಯುವ ಸಲುವಾಗಿ ಮದರಾಸಿಗೆ ಕಳುಹಿಸಿಕೊಟ್ಟರು. ಮದರಾಸಿನಲ್ಲಿ ಅಂಗಸಾಧನೆಯ ಜೊತೆಗೆ ತಮಿಳು ಮಲೆಯಾಳಿ ಭಾಷಾ ಸಾಹಿತ್ಯಗಳ ಪರಿಚಯವೂ ಮುದ್ದಣ್ಣರಿಗೆ ದೊರೆಯಿತು.

mud2ಮದರಾಸಿನಿಂದ  1889ನೆಯ ಮೇ ತಿಂಗಳಲ್ಲಿ ಉಡುಪಿಗೆ ಹಿಂದಿರುಗಿ ಅಲ್ಲಿನ ಹೈಸ್ಕೂಲಿನಲ್ಲಿ ಮುದ್ದಣ್ಣರು ವ್ಯಾಯಾಮ ಶಿಕ್ಷಕರಾಗಿ ಸೇರಿಕೊಂಡಾಗ, ಆ ಶಾಲೆಯಲ್ಲಿ ಉಪಾಧ್ಯಾಯರಾಗಿದ್ದ ಶ್ರೀ ಮಳಲಿ ಸುಬ್ಬರಾಯರ ಪರಿಚಯವಾದದ್ದೂ ಮುದ್ದಣ್ಣನರ ಸಾಹಿತ್ಯ ಜೀವನದ ದಿಕ್ಕು ಬದಲಿಸಿತು ಎಂದರೂ ತಪ್ಪಾಗದು. ಸುಬ್ಬರಾಯ ಮಹಾನ್ ಪಂಡಿತರಾಗಿದ್ದಲ್ಲದೇ ಅನೇಕ  ಗ್ರಂಥಕರ್ತರಾಗಿದ್ದರು.  ತಾವು ರಚಿಸಿದ ಕೃತಿಗಳನ್ನು ಮುದ್ದಣ್ಣರಿಗೆ ಓದಲು ಕೊಟ್ಟಿದ್ದಲ್ಲದೇ, ಅವರ ಪುಸ್ತಕಭಂಡಾರದಲ್ಲಿದ್ದ ಅನೇಕ ಗ್ರಂಥಗಳನ್ನು ಓದಲು ಅನುವು ಮಾಡಿಕೊಟ್ಟರು. ಇದೇ ಸಮಯದಲ್ಲಿ ಮುದ್ದಣ್ಣರಿಗೆ ಅನೇಕ ಯಕ್ಷಗಾನ ಪ್ರಸಂಗಗಳನ್ನು ಓದುವ  ಅವಕಾಶ ದೊರೆತ ಕಾರಣ ಅದರಿಂದ ಪ್ರೇರಿತರಾಗಿ, ಸುಬ್ಬರಾಯರ ಮಾರ್ಗದರ್ಶನದಲ್ಲಿ ರತ್ನಾವತಿ ಕಲ್ಯಾಣ ಎಂಬ ಕೃತಿಯನ್ನು ರಚಿಸಿದರು ಇದೇ ಸಮಯದಲ್ಲೇ,  ಶ್ರೀ ಎಚ್. ನಾರಾಯಣ ರಾಯರು ಮತ್ತು  ಶ್ರೀ ಬೆನಗಲ್ ರಾಮರಾಯರ ಪರಿಚಯವಾಗಿ ಅವರ  ದ್ರಾವಿಡ ಭಾಷೆಗಳಿಗೆ ಸಂಬಂಧಪಟ್ಟ ಅನೇಕ ಟಿಪ್ಪಣಿಗಳನ್ನು ರಚಿಸಿದರು.

mud11893ರಲ್ಲಿ ಮುದ್ದಣ್ಣನವರು ಮೈಸೂರು ಸೀಮೆಯ ಶಿವಮೊಗ್ಗ ಜಿಲ್ಲೆಯ ಕಾಗೇಗೋಡು ಮಗ್ಗಿಯ ಮೂಲದ  ಕಮಲಾಬಾಯಿ  ಎಂಬುವರೊಂದಿಗೆ ವಿವಾಹವಾಗಿ ಅವರಿಬ್ಬರ ಸುಖ ದಾಂಪತ್ಯದ ಕುರುಹಾಗಿ  1898ರಲ್ಲಿ  ರಾಧಾಕೃಷ್ಣ ಎಂಬ ಮಗ ಜನಿಸಿದನು. ರತ್ನಾವತಿ ಕಲ್ಯಾಣ ನಂತರ ಕುಮಾರ ವಿಜಯ ಎಂಬ ಮತ್ತೊಂದು ಯಕ್ಷಗಾನ ಪ್ರಸಂಗವನ್ನು ರಚಿಸಿದ ಸಂಧರ್ಭದಲ್ಲಿಯೇ ಅವರ  ಮಾರ್ಗದರ್ಶಕ ಗುರುಗಳಾದ ಸುಬ್ಬರಾಯರಿಗೆ ಕುಂದಾಪುರಕ್ಕೆ ವರ್ಗಾವಣೆಯಾದಾಗ, ನೀರಿನಿಂದ ಹೊರಬಂದ ಮೀನು ಚಡಪಡಿಸುವಂತೆ ತಳಮಳಗೊಂಡ ಮುದ್ದಣ್ಣರೂ ಸಹಾ ಅವರ ಸಾನಿಧ್ಯದಲ್ಲೇ ಇರಬೇಕೆಂದು  ಬಯಸಿ ಉಡುಪಿಯಿಂದ ಕುಂದಾಪುರಕ್ಕೆ  ವರ್ಗ ಮಾಡಿಸಿಕೊಂಡು ಸುಬ್ಬರಾಯರನ್ನು ಸೇರಿಕೊಳ್ಳುತ್ತಾರೆ.  ಅಲ್ಲಿಯೇ ಅವರಿಗೆ ಸಂಸ್ಕೃತವನ್ನು  ಕಲಿಯ ಬೇಕೆಂಬ ಆಸೆ ಮೂಡಿ ಸಂಸ್ಕೃತವನ್ನು ಕಲಿತುಕೊಂಡ ನಂತರ ಸಂಸ್ಕೃತದ ರಾಮಾಯಣವನ್ನು  ಅದ್ಭುತ ರಾಮಾಯಣ ಎಂಬ ಹೆಸರಿನಲ್ಲಿ ಹಳಗನ್ನಡದಲ್ಲಿ ರಚನೆ ಮಾಡಿದರು. ಮುದ್ದಣ್ಣ ಬಹಳ ಅಂತರ್ಮುಖಿಯಾದ ವ್ಯಕ್ತಿಯಾಗಿದ್ದು ತಾವು ಬರೆದ ಕೃತಿಗಳನ್ನು ತಮ್ಮದೆಂದು ಹೇಳಿಕೊಳ್ಳಲೂ ಸಹಾ ಹಿಂಜರಿಕೆಯನ್ನು  ಹೊಂದಿದ್ದಂತಹ ವ್ಯಕ್ತಿಯಾಗಿದ್ದರು. ತಾವು ರಚಿಸಿದ ಅದ್ಭುತ ರಾಮಾಯಣ ಕೃತಿಯನ್ನು ಮೈಸೂರಿನ ಕಾವ್ಯಮಂಜರಿ ಪತ್ರಿಕೆಗೆ 1895ರಲ್ಲಿ  ಕಳುಹಿ, ಇದರ ಕರ್ತೃಗಳ ಪರಿಚಯವಿಲ್ಲವೆಂದು ಇದು ತಮ್ಮ ಮನೆಯ ಅಟ್ಟದ ಮೇಲೆ ದೊರೆಯಿತು ಎಂದು ಸಂಪಾದಕರಿಗೆ ತಿಳಿಸುತ್ತಾರೆ. ಕೃತಿಯ ಪ್ರಕಟಯೋಗ್ಯವಾಗಿದ್ದ ಕಾರಣ ಅದು ಪತ್ರಿಕೆಯಲ್ಲಿ ಪ್ರಕಟಗೊಂಡು ಅಪಾರ ಜನ ಮನ್ನಣೆಗಳಿಸುತ್ತದೆ.

mud3ಮುದ್ದಣ್ಣನವರು  ಕುಂದಾಪುರದಲ್ಲಿರುವಾಗಲೇ,  ಬವುಲಾಡಿ ವೆಂಕಟರಮಣ ಹೆಬ್ಬಾರರು ಎಂಬ ಮಹಾ ವಿದ್ವಾಂಸರೊಬ್ಬರ ಪರಿಚಯವಾಗಿ ಅವರ ಬಳಿ ತಾವು ಕನ್ನಡದ ಜೈಮಿನಿ ಭಾರತದ ಮಾದರಿಯಲ್ಲೇ ಬರೆಯುತ್ತಿದ್ದ ರಾಮಾಶ್ವಮೇಧ ಎಂಬ ದೊಡ್ಡ ಗ್ರಂಥದ ಮೊದಮೊದಲಿನ ಕೆಲವು ಪದ್ಯಗಳನ್ನು ಓದಿ ಹೇಳಿದಾಗ, ಹೆಬ್ಬಾರರು ಪದ್ಯಬಂಧದಲ್ಲಿ ಕಾಣ ಬರುವ ರಸಹೀನತೆಯನ್ನು ತೋರಿಸಿಕೊಟ್ಟು ಪ್ರಾಚೀನ ಗ್ರಂಥಗಳಲ್ಲಿ ದೊರೆಯದ ಶಬ್ದರೂಪಗಳಿಗೆ ಆಧಾರಗಳನ್ನು ಕೇಳುತ್ತ ಬಂದರಂತೆ. ಅದಾಗಿ ಸುಮಾರು ಮೂರ್ನಾಲ್ಕು ವರ್ಶಗಳ ನಂತರ ಹೆಬ್ಬಾರರನ್ನು ಭೇಟಿಯಾಗಿ ರಾಮಾಶ್ವಮೇಧದ ಇನ್ನೂ ಕೆಲವು ಪದ್ಯಗಳನ್ನು ಓದಿದಾಗ, ನೀವು ಹೀಗೆ ಬರೆಯುವುದಕ್ಕಿಂತ ಛಂದಸ್ಸಿನ ಗೊಡವೆಯಿಲ್ಲದೇ, ವಚನ ರೂಪದಲ್ಲಿ ಏಕೆ ಬರೆಯಬಾರದು? ಎಂದು ಸೂಚಿಸಿದರಂತೆ. ಮತ್ತೆ ಮೂರು ವರ್ಷಗಳ ನಂತರ ಅವರನ್ನು ಭೇಟಿಯಾಗಿ ಅದ್ಭುತ ರಾಮಾಯಣದ ಪುಸ್ತಕವನ್ನು ಅವರಿಗೆ ಕೊಟ್ಟಾಗ  ಅದನ್ನೋದಿದ  ಹೆಬ್ಬಾರರಿಗೆ ಸಮಾಧಾನವಾಯಿತಂತೆ. ಇದರಿಂದ  ಸಂತೋಷಗೊಂಡ ಮುದ್ದಣ್ಣರು, ರಾಮಪಟ್ಟಾಭಿಷೇಕ ಮುಗಿಯಿತೆಂದೂ ಅದರ ಮುಂದಿನ ಭಾಗವನ್ನು ಗದ್ಯದಲ್ಲಿ ಬರೆಯುವೆನೆಂದು ಹೇಳಿದ್ದಲ್ಲದೇ, ಕವಿ ಹೆಬ್ಬಾರರಿಗೆ ಪಟ್ಟಾಭಿಷೇಕ ಕಾಲದಲ್ಲಿ ರಾಮನ ಸ್ತುತಿ ಪರವಾದ ಕೆಲವು ಪದ್ಯಗಳನ್ನು ಬರೆದುಕೊಡಲು ಕೋರಿದ್ದನ್ನು ಮನ್ನಿಸಿದ ಹೆಬ್ಬಾರರು ಭೂರಮೆ ಭುಜಾಗ್ರದೊಳ್ ಭುಜಮಧ್ಯದೊಳ್’ ಎಂಬ ಪದ್ಯದಿಂದ ಆರಂಭಿಸಿ ಇಂತು ಮೃದುಮಧುರವಚನರಚನೆಗಳಂ ಎಂಬ ಪದ್ಯದವರೆಗೆ ನಡುವಣ 33 ಪದ್ಯಗಳನ್ನು ಬರೆದುಕೊಟ್ಟರಂತೆ. ಹೀಗೆ ಗುರು ಶಿಷ್ಯರ ಸಮಾಗಮ ಮತ್ತು ಪರಸ್ಪರ ಸಹಕಾರದಿಂದ ಶ್ರೀರಾಮಪಟ್ಟಾಭಿಷೇಕ ಪೂರ್ಣಗೊಂಡು  25-09-1895 ರಲ್ಲಿ ಮಹಾಲಕ್ಶ್ಮಿ ಎಂಬ  ಲೇಖಕಿಯ ವಿರಚಿತ   ಶ್ರೀ ರಾಮಪಟ್ಟಾಭಿಷೇಕ ಎಂಬ ಷಟ್ಪದಿ ಗ್ರಂಥವು ಸಿಕ್ಕಿದ್ದು ಅದು ಪ್ರಕಟಿಸಲು ಯೋಗ್ಯವಾಗಿದ್ದಲ್ಲಿ ಪ್ರಕಟಿಸಿ ಎಂದು ಕಾವ್ಯಮಂಜರಿಯವರಿಗೆ ಮುದ್ದಣ್ಣನವರು  ಬರೆದ್ದರು. 1895ರ ನವೆಂಬರ್ 44ನೆ ಸಂಚಿಕೆಯಲ್ಲಿ ಅದ್ಭುತ ರಾಮಾಯಣವನ್ನು ಮುಗಿಸಿದ ಸಂಚಿಕೆಯಲ್ಲಿಯೇ ರಾಮಪಟ್ಟಾಭಿಷೇಕವನ್ನು ಆರಂಭಸಿ 1987ನೆಯ ಜನವರಿ 46ನೆಯ ಸಂಚಿಕೆಯಲ್ಲಿ ಮುಗಿಸಿದರು. ಮುಂದೆ ಮುದ್ದಣ್ಣನವರಿಗೆ  ಮತ್ತೆ ಉಡುಪಿಗೆ ವರ್ಗವಾಗಿದ್ದರಿಂದ ಹೆಬ್ಬಾರರ ಸಂಪರ್ಕ ಕಡಿಮೆಯಾಯಿತು.

Mud8ಮುಂದೆ ಹೆಬ್ಬಾರರ ಪ್ರೇರಣೆಯಿಂದಾಗಿ ಪದ್ಯಂ ವಧ್ಯಂ ಗದ್ಯಂ ಹೃದ್ಯಂ; ಹೃದ್ಯಮಪ್ಪ ಗದ್ಯದೊಳೆ ಪೇಳ್ವುದು ಎಂಬುದನ್ನು ಅರಿತ ಮುದ್ದಣ್ಣ ತನ್ನ ಮುಂದಿನ ಕೃತಿಯಾಯಾಗಿ ಜೈಮಿನಿ ಭಾರತದ ಹೃದ್ಯವಾದ ಸೀತಾಪರಿತ್ಯಾಗದ ಕಥೆಯನ್ನು ಆರಿಸಿಕೊಂಡು ರಾಮನ ಅಶ್ವಮೇಧ ವೃತ್ತಾಂತವನ್ನು , ರಾಮಪಟ್ಟಾಭಿಷೇಕದ  ಕಥೆಯನ್ನು ಶ್ರೀ ರಾಮಾಶ್ವಮೇಧ ಎಂಬ ಹೆಸರಿನಲ್ಲಿ ಸುಂದರವಾದ ಗದ್ಯದಲ್ಲಿಯೇ ಬರೆಯುತ್ತಾನೆ. ಆದರೆ ಈ ಬಾರಿ ಎಂದಿನ ಸಾಂಪ್ರದಾಯಿಕ ಶೈಲಿಯನ್ನು ಬದಲಿಸಿ, ತನ್ನ ಬಡತನದ ಬೇಗೆಯನ್ನು ಮರೆಯುವುದಕ್ಕಾಗಿ   ಇಡೀ ಕಥೆಯ ಸಂವಾದ ಸ್ವಾರಸ್ಯವನ್ನು  ಮುದ್ದಣ ಮನೋರಮೆಯರ ಸರಸ ಸಲ್ಲಾಪದ ಹಾಸ್ಯರೂಪದಲ್ಲಿ ಹೇಳಿದ್ದದ್ದು ಎಡೆ ಎಡೆಯಲ್ಲಿ ಸಕ್ಕದ ಕನ್ನಡ ನಲ್ನುಡಿಯನ್ನು ಮೆರೆಯಲು ತಿರುಳ್ಗನ್ನಡದಲ್ಲಿ ಈ ಕಥೆಯನ್ನು ಬರೆದಿದ್ದಾರೆ ಎಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ.

mud6ಈ ಗ್ರಂಥವು  ಮೈಸೂರಿನ ಕಾವ್ಯಕಲಾನಿಧಿಯವರಿಂದ 1911ರಲ್ಲಿ ಪ್ರಕಟವಾಗಿ  ಮುದ್ದಣ-ಮನೋರಮೆಯರ ಸರಸ ಸಲ್ಲಾಪ ಸಂವಾದದ ವಾಕ್ಯಗಳು ಜನಪ್ರಿಯವಾಗಿ  ಅಂದಿನ ಕಾಲದ ಎಲ್ಲಾ  ವಿದ್ವಾಂಸರುಗಳು ಮತ್ತು  ಪತ್ರಿಕೆಗಳು ಈ  ಕೃತಿಯನ್ನು ಮತ್ತು ಮುದ್ದಣ್ಣನನ್ನೂ ಹಾಡಿ ಹೊಗಳಿದರೆ,  ಕೆಲವು ಇಂಗ್ಲಿಷ್ ಪತ್ರಿಕೆಗಳು ಸಹಾ ಮುದ್ದಣ್ಣನ ಈ ಕೃತಿಯನ್ನು ಮತ್ತು ಹೊಸಾ ಸಾಹಸವನ್ನು ಕೊಂಡಾಡಿದವು.  ಬೆನಗಲ್ ರಾಮರಾಯರ ಶಿಫಾರಸ್ಸಿನ ಮೇರೆಗೆ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿಯೂ ಕನ್ನಡ ಪಂಡಿತರಾಗಿ ಮುದ್ದಣ್ಣನವರು ಸೇವೆ ಸಲ್ಲಿಸಿದ್ದಾರೆ.

mud5ಹೀಗೆ ಅದ್ಭುತ ರಾಮಾಯಣವನ್ನು ಅನಾಮಿಕರ ಹೆಸರಿನಲ್ಲಿ ಮತ್ತು  ಶ್ರೀರಾಮ ಪಟ್ಟಾಭಿಷೇಕಂ ಷಟ್ಪದಿ ಕಾವ್ಯವನ್ನು ಮಹಾಲಕ್ಷ್ಮಿ ಎಂಬ ಅಜ್ಞಾತ ಕವಯಿತ್ರಿಯ ಹೆಸರಿನಲ್ಲಿ ಪ್ರಕಟವಾದ ನಂತರ, ಇವೆರಡೂ ಕೃತಿಗಳು ಅಂದಿನ ಮದರಾಸು ವಿಶ್ವವಿದ್ಯಾಲಯದ ಪರೀಕ್ಷೆಗಳಿಗೆ  ಪಠ್ಯಪುಸ್ತಕಗಳಾದರೂ, ಮೂಲ ಕೃತಿಕಾರನ ಹೆಸರು ಯಾರಿಗೂ ತಿಳಿಯದಿದ್ದ ಕಾರಣ, ಮುದ್ದಣನವರಿಗೆ ಸಲ್ಲಬೇಕಾದ ಗೌರವ ಮತ್ತು ಗೌರವ ಧನ ಹೇರಲಿಲ್ಲ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ಮುದ್ದಣ್ಣ ತನ್ನ ಕೃತಿಗಳನ್ನು ಓರ್ವ ಕನ್ನಡಿಗ, ಚಕ್ರಧಾರಿ, ರಂಗಭಟ್ಟನಾತ್ಮಜೆ, ಲಕ್ಷ್ಮೀನಾರಾಯಣ ಎಂಬೆಲ್ಲಾ  ಹೆಸರಿನಿಂದ ಕೃತಿ ರಚನೆ ಮಾಡಿದರು. ನಂತರದ ದಿನಗಳಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘವು ಮುದ್ದಣ ಸ್ಮರಣ ಸಂಚಿಕೆಯನ್ನು ಪ್ರಕಟಿಸಿದ ಸಂದರ್ಭದಲ್ಲಿ, ಮುದ್ದಣನವರ ಸಮೀಪವರ್ತಿಗಳಾಗಿದ್ದ ಪಂಜೆ ಮಂಗೇಶರಾಯರು, ಬೆನೆಗಲ್ ರಾಮರಾವ್, ಹುರಳಿ ಭೀಮರಾವ್ ಮತ್ತು ಮಳಲಿ ಸುಬ್ಬರಾವ್ ಅವರುಗಳು ಈ ಎಲ್ಲಾ ಕೃತಿಗಳು ಮುದ್ದಣನಿಂದಲೇ ಸ್ವಯಂರಚಿತವಾಗಿರುವುದನ್ನು ಖಚಿತಪಡಿಸಿದ್ದಲ್ಲದೇ, ಮುದ್ದಣ್ಣನಿಗೆ ಕಬ್ಬಗರ ಬಲ್ಲಹಂ ಎಂಬ ಬಿರುದು ನೀಡಿದರೆ,  ಅದಕ್ಕಿಂತಲೂ ಒಂದು ಹೆಜ್ಜೆ ಮುಂದು ಹೋದ ಹಿರಿಯ ಸಾಹಿತಿಗಳಾಗಿದ್ದ ಶ್ರೀ ಪಂಜೆ ಮಂಗೇಶರಾಯರುರ ಮುದ್ದಣನವರಿಗಿಂತ ಒಳ್ಳೆಯ ಕವಿ ಬೇರಾರಿಲ್ಲ ಎಂಬ ಮಾತನ್ನು ಆಡಿರುವುದು ಗಮನಾರ್ಹವಾಗಿದೆ.

ಕನ್ನಡ ನವೋದಯದ ಮುಂಜಾನೆ ಕೋಳಿ’ ಎಂಬ  ಕೀರ್ತಿಗೆ ಪಾತ್ರರಾಗಿದ್ದ  ಮುದ್ದಣನವರು ಸಾಮಾನ್ಯ ಚಿತ್ರಕ್ಕೆ ಸುವರ್ಣ ಚೌಕಟ್ಟನ್ನು ನೀಡುವಂತಹವರು ಎಂದು ಎಸ್.ವಿ. ರಂಗಣ್ಣನವರು ಪ್ರಶಂಸಿಸಿದ್ದರು ಇಂತಹ ಮುದ್ದಣ್ಣನಿಗೆ ಕ್ಷಯರೋಗ ತಗುಲಿದ ಪರಿಣಾಮ ತಮ್ಮ 32ನೇ ವಯಸ್ಸಿನಲ್ಲಿ 16-2-1901 ನಿಧನರಾದರು.

muddanna_Stampಮುದ್ದಣ್ಣನ ಸಾರಸ್ವತ ಲೋಕಕ್ಕೆ ಕೊಡುಗೆಯನ್ನು ಮನ್ನಿಸಿ ಅನೇಕ ಗೌರವಗಳಿಗೆ ಪಾತ್ರರಾಗಿದ್ದು  ಅವುಗಳಲ್ಲಿ ಪ್ರಮುಖವಾದವು ಹೀಗಿದೆ.

  • ಮುದ್ದಣ್ಣನ 75ನೆಯ ವರ್ಷದ  ಸ್ಮರಣೆಯ ನೆನಪಿಗಾಗಿ 1976ರಲ್ಲಿ ಮುದ್ದಣ ಪ್ರಶಸ್ತಿ ಗ್ರಂಥವನ್ನು ಪ್ರಕಟಿಸಲಾಯಿತು.
  • 1979ರಲ್ಲಿ ನಂದಳಿಕೆ ಬಾಲಚಂದ್ರರಾವ್ ಅವರ  ನೇತೃತ್ವದಲ್ಲಿ ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿಯನ್ನು  ಸ್ಥಾಪಿಸಲಾಯಿತು.
  • 1979ರಲ್ಲಿ ವರಕವಿ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಸ್ಥಾಪಿಸಲಾಯ್ತು. ಈ ಪ್ರಶಸ್ತಿಯು ಹತ್ತು ಸಾವಿರ ನಗದು ಹಾಗೂ ಸನ್ಮಾನವನ್ನು ಒಳಗೊಂಡಿದೆ.
  • 1987ರಲ್ಲಿ ನಂದಳಿಯಲ್ಲಿ ಮುದ್ದಣ ಸ್ಮಾರಕ ಭವನವನ್ನು  ನಿರ್ಮಿಸಲಾಯಿತು.
  • 2017ನೇ ಇಸವಿಯಲ್ಲಿ ಮುದ್ದಣ್ಣನ ನೆನಪಿನಲ್ಲಿ ಭಾರತೀಯ ಅಂಚೆ ಇಲಾಖೆ ರೂ 5 ಮುಖಬೆಲೆಯ ಒಂದು  ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. .
  • ಪ್ರತೀವರ್ಷವೂ ಹುಟ್ಟೂರಾದ ನಂದಳಿಕೆಯಲ್ಲಿ  ಮುದ್ದಣನ ಜಯಂತಿಯನ್ನು  ಅದ್ದೂರಿಯಿಂದ ಆಚರಿಸಲಾಗುತ್ತದೆ.

mud4ಮುದ್ದಣನವರು ತಮ್ಮ ಬರಹಗಳಲ್ಲಿ ಸಂಸ್ಕೃತದ ಪದಗಳಿಗಿಂತಲೂ ಕನ್ನಡ ಪದಗಳಿಗೇ ಹೆಚ್ಚು  ಒತ್ತನ್ನು ನೀಡುವ ಮೂಲಕ  ತಮ್ಮ ನಲ್ಬರಹಗಳಲ್ಲಿ ಹೆಚ್ಚಿನ ಕನ್ನಡದ್ದೇ ಪದಗಳನ್ನು ಬಳಸಿ ಕನ್ನಡದ ಒಲವು ಮೆರೆದವರು.  ಸಂಸ್ಕೃತ ಪದಗಳ ತತ್ಸಮ ತತ್ಭಭವ ಹಂಗಿಲ್ಲದೆಯೂ ಒಳ್ಳೆಯ ಮೇಲ್ಮಟ್ಟದ ಕನ್ನಡ ನಲ್ಬರಹಗಳನ್ನು ಬರೆಯಬಹುದು ಎಂಬುದನ್ನು ಮುದ್ದಣ ತೋರಿಸಿ ಕೊಟ್ಟಿದ್ದು ನಿಜಕ್ಕೂ ಅಭಿನಂದನಾರ್ಹವಾಗಿದ್ದು ಇವೆಲ್ಲ ಕಾರಣಗಳಿಂದ  ನಂದಳಿಕೆ ಲಕ್ಷ್ಮೀನಾರಾಯಣ  ಅರ್ಥಾತ್ ಮುದ್ದಣ್ಣ ನಮ್ಮ  ಹೆಮ್ಮೆಯ ಕನ್ನಡದ ಕಲಿಗಳು ಎಂದರೂ ತಪ್ಪಾಗದು ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment