ಸಾಮಾನ್ಯವಾಗಿ ಸಂಗೀತ ಲೋಕದಲ್ಲಿ ಹಾಡುಗಾರರಲ್ಲದೇ, ಅವರಷ್ಟೇ ಏಕೇ? ಅವರಿಗಿಂತಲೂ ಒಂದು ಕೈ ಹೆಚ್ಚಾಗಿಯೇ ಪ್ರಾವೀಣ್ಯತೆ ಪಡೆದಿರುವ ಪಕ್ಕವಾದ್ಯಗಾರರು ಇದ್ದರೂ, ಅಂತಹವರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುವುದಿಲ್ಲ. ಈ ರೀತಿಯ ತಾರತಮ್ಯ ಅನೇಕ ಬಾರಿ ತಾರಕಕ್ಕೆ ಏರಿದ ಉದಾಹರಣೆಗಳು ಹತ್ತು ಹಲವಾರಿವೆ. ಇನ್ನು ಚಲನ ಚಿತ್ರಗೀತೆಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು, ಹಾಡಿನ ರಚನೆಕಾರ, ಸಂಗೀತ ನಿರ್ದೇಶಕ ಮತ್ತು ಪಕ್ಕವಾದ್ಯಗಾರರಿಗೆ ಪ್ರಾಶಸ್ತ್ಯವೇ ಸಿಗದೇ ಅದರ ಕೀರ್ತಿಗಳೆಲ್ಲವೂ ಗಾಯಕರಿಗೆ ಮತ್ತು ನಟ/ನಟಿಯರಿಗಷ್ಟೇ ಹೋಗುವುದು ನಿಜಕ್ಕೂ ವಿಪರ್ಯಾಸವೇ ಸರಿ ಇಂತಹ ಸಂಗೀತ ಲೋಕದಲ್ಲಿ ಸುಮಾರು ಆರು ದಶಕಗಳ ಕಾಲ ತೊಡಗಿಸಿಕೊಂಡಿದ್ದರೂ, ಎಲೆಮರೆಕಾಯಿಯಂತೆಯೇ ಸಾಧನೆ ಮಾಡಿ ನಮ್ಮೆಲ್ಲರನ್ನೂ ಅಗಲಿದ ಬಹು ಲಯವಾದ್ಯ ಪರಿಣಿತರಾಗಿದ್ದ ಎಸ್. ಬಾಲಸುಬ್ರಹ್ಮಣ್ಯಂ ಎಲ್ಲರ ಪ್ರೀತಿಯ ಬಾಲಿ ಸರ್ ಗುರುವಾರ, ಜನವರಿ 02, 2025ರಂದು ತಮ್ಮ71 ವಯಸ್ಸಿನಲ್ಲಿ ವಿಧಿವಶರಾಗುವ ಮೂಲಕ ಕನ್ನಡ ಸಂಗೀತ ಲೋಕದ ಧೃವನಕ್ಷತ್ರವೊಂದು ಮರೆಯಾಗಿದೆ ಎಂದರೂ ತಪ್ಪಾಗದು.
ಬಯಾಲಜಿ ಸುಂದರೇಶನ್ ಎಂದೇ ಖ್ಯಾತರಾಗಿದ್ದ ಎಂ.ವಿ. ಸುಂದರೇಶನ್ ಮತ್ತು ಸಾವಿತ್ರಿ ದಂಪತಿಗಳ ಸುಂದರ ದಾಂಪತ್ಯದ ಕುರುಹಾಗಿ 1953ರ ಜನವರಿ 9ರಂದು ಬೆಂಗಳೂರಿನಲ್ಲಿ ಜನಿಸಿದ ಮುದ್ದು ಮುದ್ದಾದ ಮಗುವಿಗೆ ತಮ್ಮ ಮನೆ ದೇವರಾದ ಸುಬ್ರಹ್ಮಣ್ಯನ ನೆನಪಿನಾರ್ಥ ಬಾಲಸುಬ್ರಹ್ಮಣ್ಯಂ ಎಂದು ನಾಮಕರಣ ಮಾಡಿದರಾದರೂ, ಎಲ್ಲರೂ ಪ್ರೀತಿಯಿದ ಬಾಲಿ ಎಂದೇ ಕರೆಯಲಾರಂಬಿಸಿ ಮುಂದೆ ಬಾಲಿ ಎಂಬ ಹೆಸರಿನಿಂದಲೇ ಚಿರಪರಿಚಿತರಾದರು.
ಚಿಕ್ಕಂದಿನಿಂದಲೇ ಆಟ ಪಾಠಗಳಲ್ಲಿ ಚುರುಕಾಗಿದ್ದ ಬಾಲಿಯವರ ಮನೆಯಲ್ಲಿ ಸಂಗೀತದ ವಾತಾವರಣವಿತ್ತು. ಇದಕ್ಕೆ ಪೂರಕ ಎನ್ನುವಂತೆ ಬಾಲಿಯವರು ಸಮಯ ಸಿಕ್ಕಾಗಲೆಲ್ಲಾ ತಮ್ಮ ಮನೆಯ ಬಾಗಿಲು, ಮೇಜು, ಬಿಂದಿಗೆ ಬಕೀಟ್, ಕಡೆಗೆ ಏನೂ ಸಿಗದಿದ್ದರೆ, ಊಟದ ತಟ್ಟೆ, ಲೋಟ ಹೀಗೆ ಏನೇ ಸಿಕ್ಕರೂ ಅದನ್ನು ಬಡಿಯುತ್ತಿದ್ದದ್ದನ್ನು ಗಮನಿಸಿದ ಅವರ ತಂದೆಯವರು ಮಗನಿಗೆ ತಾಳವಾದ್ಯದಲ್ಲಿ ಆಸಕ್ತಿ ಇರುವ ಕಾರಣ ಪಾಲಕ್ಕಾಡು ಶ್ರೀ ರವೀಂದ್ರನಾಥ ವಾರಿಯರ್ ಆವರ ಬಳಿ ಮೃದಂಗಾಭ್ಯಾಸಕ್ಕೆ ಸೇರಿಸಿದರು. ಬಹಳ ಶ್ರದ್ಧೆಯಿಂದ ಮೃದಂಗವನ್ನು ಅತಿ ಕಡಿಮೆ ಸಮಯದಲ್ಲೇ ಕಲಿತ ಬಾಲಿಯವರ ಆಸಕ್ತಿ ಓದಿಗಿಂತಲೂ ಸಂಗೀತದತ್ತ ಹೆಚ್ಚಿನ ಒಲವು ಮೂಡಿದ ಪರಿಣಾಮ, ಕೇವಲ ಮೃದಂಗವಲ್ಲದೇ, ಇತರೇ ತಾಳವಾದ್ಯಗಳಾದ ತಬಲ, ಢೋಲ್ಕಿ, ಢೋಲಕ್, ಖಂಜರ, ಕೋಲ್ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚಿನ ಲಯ ವಾದ್ಯಗಳನ್ನು ನುಡಿಸುವಲ್ಲಿ ಪರಿಣಿತರಾಗಿದ್ದಲ್ಲದೇ, 70ರ ದಶಕಕ್ಕಿಂತಲೂ ಮುಂಚೆ ದಕ್ಷಿಣ ಭಾರತದ ಚಿತ್ರರಂಗದ ಬಹುತೇಕ ಕೆಲಸಗಳು ಮದ್ರಾಸಿನಲ್ಲೇ ನಡೆಯುತ್ತಿದ್ದ ಕಾರಣ, ಬಾಲಿಯವರೂ ಸಹಾ ಸಂಗೀತ ಕ್ಷೇತ್ರದಲ್ಲಿ ಕೆಲಸವನ್ನರಸಿಕೊಂಡು ಮದ್ರಾಸಿಗೆ ಪ್ರಯಾಣಿಸಿ ಅಂದಿನ ಬಹುತೇಕ ಎಲ್ಲಾ ಸಂಗೀತ ನಿರ್ದೇಶಕರುಗಳ ಜೊತೆ ತಾಳವಾದ್ಯದಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಾ, ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್ ಆಗುವ ಮಟ್ಟಕ್ಕೆ ಬೆಳೆದ ಕಾರಣ ಎಲ್ಲರೂ ಬಾಲಿ ಅವರನ್ನು ಪ್ರೀತಿ ಮತ್ತು ಗೌರವಗಳಿಂದ ರಿದಂ ಕಿಂಗ್ ಎಂದೇ ಕರೆಯಲಾರಂಭಿಸಿದರು.
70ರ ದಶಕದಲ್ಲಿ ಕರ್ನಾಟಕದದಲ್ಲಿ ಪಿ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಸಿ. ಆಶ್ವಥ್ ಮುಂತಾದ ಸಂಗೀತ ನಿರ್ದೇಶಕರು ಪ್ರಾಭಲ್ಯಕ್ಕೆ ಬಂದ ನಂತರ ಕರ್ನಾಟಕ/ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಮತ್ತು ಕನ್ನಡ ಚಲನಚಿತ್ರ ಗೀತೆಗಳ ಜೊತೆ ಜೊತೆಯಲ್ಲಿಯೇ ಭಾವಗೀತೆಗಳ ಸುಗಮ ಸಂಗೀತ ಮುನ್ನಲೆಗೆ ಬರುವ ಮೂಲಕ ಸಾವಿರಾರು ಕಲಾವಿದರುಗಳು ನಾಡಿನಾದ್ಯಂತ ಚಿರಪರಿಚಿತರಾಗ ತೊಡಗಿದರು. 1978ರಲ್ಲಿ ಕನ್ನಡ ಪ್ರಪ್ರಥಮ ಧ್ವನಿಸುರಳಿಯಾದ ನಿತ್ಯೋತ್ಸವದಲ್ಲಿ ಕವಿ ನಿಸಾರ್ ಅಹ್ಮದ್ ಅವರ ಭಾವಗೀತೆಗಳಿಗೆ ಸೊಗಸಾದ ಸಂಗೀತ ಮತ್ತು ಗಾಯನದೊಂದಿಗೆ ಮೈಸೂರು ಅನಂತಸ್ವಾಮಿ ರಾತ್ರಿ ಕಳೆದು ಬೆಳಗಾಗುವುದರೊಳಗೆ ರಾಜ್ಯಾದ್ಯಂತ ಪ್ರಖ್ಯಾತಿ ಪಡೆದ ಹಿಂದೆ ಇದೇ ಬಾಲಿಯವರು ಅನಂತಸ್ವಾಮಿ ಅವರ ಸಂಯೋಜನೆಗಳಿಗೆ ಎಲೆಮರೆಯಕಾಯಿಯಂತೆ ಸಹಾಯಕರಾಗಿ ವಾದ್ಯದ ನೆರವು ನೀಡಿದ್ದ ವಿಷಯ ಬಹುತೇಕರಿಗೆ ತಿಳಿಯದ ಸಂಗತಿಯಾಗಿದೆ.
ಹೀಗೆ ಚಲನಚಿತ್ರಗೀತೆಗಳು, ಸುಗಮ ಸಂಗೀತ ಮತ್ತು ರಂಗಭೂಮಿಯ ನಾಟಕಗಳಿಗೆ ಹಿನ್ನಲೆ ಸಂಗೀತ ನೀಡುವ ಮೂಲಕ ಬಿಡುವಿಲ್ಲದ ಕಲಾವಿದ ಎಂಬ ಖ್ಯಾತ್ರಿಗೂ ಪಾತ್ರರಾದ ಬಾಲಿಯವರು ನಂತರ ದಿನಗಳಲ್ಲಿ ಕನ್ನಡದ ಮತ್ತೊಬ್ಬ ನಟ, ನಿರ್ದೇಶಕ, ನಿರ್ಮಾಪಕ ಮತ್ತು ತಂತ್ರಜ್ಞ ಎಂದೇ ಖ್ಯಾತಿ ಪಡೆದಿದ್ದ ದಿವಂಗತ ಶಂಕರ್ ನಾಗ್ ಅವರ ಜೊತೆಗೂಡಿ ಮಾಡಿದ ಸಾಧನೆಗಾಗಿ ನಿಜಕ್ಕೂ ಪ್ರಸ್ತುತ ಕನ್ನಡದ ಸಂಗೀತ ಕಲಾವಿದರುಗಳು ಸದಾಕಾಲವೂ ಋಣಿಗಳಾಗಬೇಕು ಎಂದರೂ ತಪ್ಪಾಗದು.
ಅಂದಿನ ಕಾಲದ ಸಂಗೀತ ನಿರ್ದೇಶಕರುಗಳಾಗಿದ್ದ ಜಿ.ಕೆ. ವೆಂಕಟೇಶ್, ವಿಜಯಭಾಸ್ಕರ್, ಎಂ. ರಂಗರಾವ್, ರಾಜನ್-ನಾಗೇಂದ್ರ, ಟಿ.ಜಿ. ಲಿಂಗಪ್ಪ, ಅನಂತಸ್ವಾಮಿ, ಅಶ್ವತ್ಥ್-ವೈದಿ ಹೀಗೆ ನೂರಾರು ಸಂಗೀತ ನಿರ್ದೇಶಕರುಗಳ ಸಂಯೋಜನೆಗಳಿಗೆ ಮದ್ರಾಸಿನಲ್ಲಿಯೇ ಕುಳಿತು ಲಯ ಸಂಯೋಜನೆ ಮಾಡಿದ್ದ ಬಾಲಿಯವರಿಗೆ ಕರ್ನಾಟಕದಲ್ಲಿರುವ ಸಂಗೀತಗಾರರು ಮತ್ತು ವಾದ್ಯಗಾರರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತವಾದ ವೇದಿಕೆ ಸಿಗದೇ ಹೋದದ್ದಕ್ಕಾಗಿ ಬೇಸರವಿತ್ತು. ಇದೇ ಸಮಯದಲ್ಲೇ ಕನ್ನಡ ಚಿತ್ರರಂಗದ ರೆಕಾಂರ್ಡಿಂಗ್ ಮತ್ತು ರೀರೆಕಾಂರ್ಡಿಂಗ್ ಮತ್ತು ಡಬ್ಬಿಂಗ್ ಗಳು ಕರ್ನಾಟಕದಲ್ಲೇ ಆಗಬೇಕು ಎಂದು ನಿರ್ಧರಿಸಿದ ಶಂಕರ್ ನಾಗ್ ತಮ್ಮ ಅಣ್ಣ ಅನಂತ್ ನಾಗ್ ಮತ್ತು ಗೆಳೆಯ ರಮೇಶ್ ಭಟ್ ರೊಂದಿಗೆ ಸೇರಿಕೊಂಡು ರಾಜ್ಯದ ಅಂದಿನ ಮುಖ್ಯ ಮಂತ್ರಿಗಳಾಗಿದ್ದ ಶ್ರೀ ರಾಮಕೃಷ್ಣ ಹೆಗಡೆಯವ ಸಹಕಾರದೊಂದಿಗೆ 1985ರಲ್ಲಿ ಬೆಂಗಳೂರಿನ ಶೇಷಾದ್ರಿಪುರದಲ್ಲಿ ಸಂಕೇತ್ ಸ್ಟುಡಿಯೋ ಆರಂಭಿಸಿದಾಗ, ಹಿರಿಯ ಸಂಗೀತ ನಿರ್ದೇಶಕರಾಗಿದ್ದ ಜಿ.ಕೆ. ವೆಂಕಟೇಶ್ ಅವರ ಸಲಹೆಯ ಮೇರೆಗೆ ಶಂಕರ್ ನಾಗ್ ಮತ್ತು ಬಾಲಿಯವರ ಸಂಪರ್ಕವಾಗುತ್ತದೆ
ಆಗಷ್ಟೇ ಆರಂಭವಾಗಿದ್ದ ಸಂಕೇತ್ ಸ್ಟುಡಿಯೋದಲ್ಲಿ ಹಾಡಲು ಗಾಯಕ ಗಾಯಕಿಯರುಗಳು ಆವಶ್ಯಕತೆ ಇದ್ದು ಸ್ಥಳೀಯ ಪ್ರತಿಭಾವಂತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅರ್ಜಿ ಆಹ್ವಾನಿಸಿ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿದ್ದಕ್ಕೆ ಪ್ರತಿಯಾಗಿ ಸುಮಾರು 300ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಹೀಗೆ ಬಂದವರನ್ನೆಲ್ಲಾ ಆಯ್ಕೆ ಮಾಡುವ ಬದಲು ಅವರ ಪ್ರತಿಭೆಯನ್ನೊಮ್ಮೆ ಪರೀಕ್ಷಿಸಿ ಕೇವಲ ಪ್ರತಿಭಾವಂತರನ್ನಷ್ಟೇ ಆಯ್ಕೆ ಮಾಡುವಂತೆ ಬಾಲಿಯವರು ಶಂಕರ್ ನಾಗ್ ಅವರಿಗೆ ಸಲಹೆ ನೀಡಿದ್ದು ಶಂಕರ್ ಅವರಿಗೆ ಆರಂಭದಲ್ಲಿ ಇರುಸು ಮುರುಸು ಉಂಟು ಮಾಡಿ, ಮೊದಲು ಬಂದವರಿಗೆ ಮೊದಲ ಆಯ್ಕೆ ಎಂಬ ತತ್ವದಡಿಯಲ್ಲಿ ಆಯ್ಕೆ ಮಾಡಿಕೊಂಡ ಕಲಾವಿದರುಗಳ ಕಾರ್ಯತತ್ಪರತೆ ನಿರೀಕ್ಷಿತ ಮಟ್ಟದಲ್ಲಿ ಇರದಿದ್ದದ್ದನ್ನು ಮನಗಂಡ ಶಂಕರ್, ಕೆಲವೇ ದಿನಗಳಲ್ಲಿ ಬಾಲಿಯವರು ನೀಡಿದ್ದ ಸಲಹೆಯ ಮಹತ್ವ ಅರಿವಾಗಿ, ಮುಂದೆ ಸಂಕೇತ್ ಸ್ಟುಡಿಯೊದ ಪ್ರತಿ ಹೆಜ್ಜೆಗಳಲ್ಲೂ ಬಾಲಿಯವರ ಸಲಹೆಯನ್ನು ತೆಗೆದುಕೊಂಡೇ ಮುಂದುವರೆಯುವ ಮೂಲಕ ಕನ್ನಡ ಚಿತ್ರರಂಗ ಮತ್ತು ಕಲಾವಿದರುಗಳಿಗೆ ಕರ್ನಾಟಕದಲ್ಲಿ ನೆಲೆಯೂರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೇ, ಹಾಡುಗಳ ಧ್ವನಿ ಮುದ್ರಣಕ್ಕೆ ಮದ್ರಾಸಿನಿಂದ ಕಲಾವಿದರನ್ನು ಕರೆಸುವ ಬದಲು ಸ್ಥಳೀಯ ಕಲಾವಿದರುಗಳಿಗೆ ಅವಕಾಶ ನೀಡುವಂತಾಯಿತು. ಬಾಲಿ ಮತ್ತು ಶಂಕರ್ ನಡುವಿನ ಈ ಅವಿನಾಭಾವ ಸಂಬಂಧ ಶಂಕರ್ ನಿಧನರಾಗುವ ವರೆಗೂ ಮುಂದುವರೆದಿತ್ತು ಎನ್ನುವುದು ಗಮನಾರ್ಹ.
ಇತರೇ ಸಂಗೀತ ನಿರ್ದೇಶಕರುಗಳಿಗೆ ಲಯವಾದ್ಯ ಸಹಾಯಕರಾಗಿ ಕೆಲಸ ಮಾಡುವುದರ ಜೊತೆ ಜೊತೆಯಲ್ಲೇ 1974–75ರಲ್ಲಿ ಕರ್ನಾಟಕ ಫಿಲಂ ಇಂಡಸ್ಟ್ರಿ ಡೆವಲಪ್‌ಮೆಂಟ್ ಕಾರ್ಪೊರೇಷನ್ ನಿರ್ಮಿಸಿದ್ದ ಸಿನಿಮಾಗಳಿಗೂ ಸ್ವಂತತ್ರವಾಗಿ ಸಂಗೀತ ನೀಡಿದ್ದಲ್ಲದೇ, ಅಂದಿನ ದಿನಗಳಲ್ಲಿ ಯಾವುದೇ ಸಂಗೀತ ಕಾರ್ಯಕ್ರಮಗಳಾಗಲೀ, ರೆಕಾರ್ಡಿಂಗ್ ಗಳಿಗಾಗಲೀ ಬಾಲಿ ಇರಲೇಬೇಕು ಎಂಬಷ್ಟು ಬೇಡಿಕೆಯಲ್ಲಿದ್ದರು. ನಂತರ ರೆಕಾರ್ಡಿಂಗ್ ತಂತ್ರಜ್ಞಾನ ಬಹಳಷ್ಟು ಸುಧಾರಿತಗೊಂಡು ಆಧುನಿಕ ಉಪಕರಣಗಳು ಬಂದ ನಂತರ ನೂರಾರು ಕಲಾವಿದರುಗಳ ಜೊತೆಗೆ ಗಾಯಕರು ಒಟ್ಟಿಗೆ ಕುಳಿತುಕೊಂಡು ಹಾಡುವ ಆರ್ಕೇಸ್ಟ್ರಾ ಪದ್ದತಿ ಕಾಣೆಯಾಗಿ ಹೋದಾಗ, ಬಾಲಿ ಅಂತಹ ಕಲಾವಿದರುಗಳು ನೇಪಥ್ಯಕ್ಕೆ ಸರಿಯುವಂತಾಯಿತು.
ಹೀಗೆ ಚಿತ್ರರಂಗದಲ್ಲಿ ಕೆಲಸ ಕಡಿಮೆಯಾಗುತ್ತಿದ್ದಂತೆಯೇ ಸುಗಮ ಸಂಗೀತ ಕ್ಷೇತ್ರ ಅವರನ್ನು ಕೈ ಬೀಸಿ ಅಪ್ಪಿಕೊಂಡ ಕಾರಣ ಅಂದಿನ ಹೆಸರಾಂತ ಸುಗಮ ಸಂಗೀತ ಗಾಯಕರುಗಳಾದ ಬಾಳಪ್ಪ ಹುಕ್ಕೇರಿ, ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಶ್ಯಾಮಲಾ ಭಾವೆ, ಸಿ ಅಶ್ವತ್ಥ್, ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮ ಮುಂತಾದವರ ಕಾರ್ಯಕ್ರಮಗಳಲ್ಲಿ ಖಡ್ಡಾಯವಾಗಿ ಬಾಲಿ ಅವರು ಸಾಥ್ ನೀಡುತ್ತಿದ್ದದ್ದಲ್ಲದೇ ಹಲವಾರು ಹೆಸರಾಂತ ಶಾಸ್ತ್ರೀಯ ಸಂಗೀತಗಾರರಿಗೆ ತಮ್ಮ ಮೃದಂಗ ಮತ್ತು ಖಂಜಿರ ವಾದನದ ಪಕ್ಕವಾದ್ಯ ಸಹಕಾರ ನೀಡುವ ಮೂಲಕ ತಮ್ಮ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಹೋದರು.
ಇತ್ತೀಚಿನ ವರ್ಷಗಳಲ್ಲಿ ಖಾಸಗೀ ವಾಹಿನಿಗಳಲ್ಲಿ ಸಂಗೀತ ಕಾರ್ಯಕ್ರಮಗಳು ಹೆಚ್ಚಾದ ನಂತರ ಅದು ಈ ಟಿವಿಯ (ನಂತರ ಕಲರ್ಸ್ ಕನ್ನಡ) ಎದೆ ತುಂಬಿ ಹಾಡುವೆನು ಕಾರ್ಯಕ್ರಮವಾಗಿರ ಬಹುದು, ಜೀ ಟಿವಿಯ ಸರಿಗಮಪ ಆಗಿರಬಹುದು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಬಾಲಿಯವರ ಅನುಭವವನ್ನು ಬಳಸಿಕೊಳ್ಳಲಾರಂಭಿಸಿದರು. ಅದಲ್ಲೂ ಜೀ ಟಿವಿಯವರ ಸರಿಗಮಪ ದಲ್ಲಿನ ಮೆಂಟರ್ ಮತ್ತು ತೀರ್ಪುಗಾರರ ತಂಡಲ್ಲಿ ಬಾಲಿಯವರೇ ಅಗ್ರೇಸರ ಎಂದರೂ ತಪ್ಪಾಗದು. ಉದಯೋನ್ಮುಖ ಗಾಯಕ/ಗಾಯಕರುಗಳಿಗೆ ಉಳಿದ ತೀರ್ಪುಗಾರರು ಎಷ್ಟೇ ಅಂಕಗಳನ್ನು ನೀಡಿದ್ದರೂ, ಬಾಲಿಯವರು ನೀಡುತ್ತಿದ್ದ ಅಂಕಗಳು ಬಹಳ ಮಹತ್ವ ಮತ್ತು ತೂಕವನ್ನು ಹೊಂದಿರುತ್ತಿತ್ತು. ಪ್ರತಿಭಾವಂತರ ಪ್ರತಿಭೆಯನ್ನು ಅಳೆದೂ ತೂಗಿ ಅವರ ಅಂದಿನ ಪ್ರತಿಭಾ ಪ್ರದರ್ಶನಕ್ಕೆ ಅನುಗುಣವಾಗಿ ಬಾಲಿಯವರು ಅಂಕಗಳನ್ನು ನೀಡುತ್ತಿದ್ದದ್ದಲ್ಲದೇ, ಬಹುವಾದ್ಯ ಪರಿಣಿತರಾಗಿ ಗಳಿಸಿಕೊಂಡಿದ್ದ ತಮ್ಮ ಅನುಭವವನ್ನು ಚಿಕ್ಕ ಮಕ್ಕಳೊಂದಿಗೆ ಯಾವುದೇ ಹಮ್ಮು ಬಿಮ್ಮುಗಳಿಲ್ಲದೇ ಹಂಚಿಕೊಳ್ಳುತ್ತಿದ್ದರು. ಸ್ಪರ್ಧಿಗಳು ಮಾಡುತ್ತಿದ್ದ ಸಣ್ಣ ಸಣ್ಣ ತಪ್ಪುಗಳನ್ನು ಸಹಾ ಕೊಂಚವೂ ಬೇಸರಿಸಿಕೊಳ್ಳದೇ ತಿದ್ದುತ್ತಿದ್ದರಿಂದ ಬಾಲಿಯವರು ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದದ್ದು ವಿಶೇಷವಾಗಿತ್ತು. ಚಿತ್ರ ಸಂಗೀತ ಮತ್ತು ಲಯವಾದ್ಯಗಳ ಬಳಕೆ ಕುರಿತು ಖಡಕ್ ಮಾತಿನಿಂದ ವಿಶ್ಲೇಷಿಸುವುದು ಬಾಲಿ ಅವರ ಗುಣವಾಗಿತ್ತು. ನಮ್ಮ ಜ್ಞಾನವನ್ನು ಹಂಚಿಕೊಳ್ಳುವಾಗ ಮುಲಾಜು ಮಾಡಿದರೆ ಅದರ ಫಲಾನುಭವಿಗಳಿಗೆ ವಂಚನೆ ಮಾಡಿದಂತಾಗುತ್ತದೆ. ಹಾಗಾಗಿ ತನಗೆ ಅನಿಸಿದ್ದನ್ನು ನೇರವಾಗಿ ಹೇಳುವುದು ನನ್ನ ಗುಣ ಎಂದೇ ಬಾಲಿ ಸರ್ ಅವರು ಸದಾ ಕಾಲವೂ ಹೇಳುತ್ತಿದ್ದದ್ದು ಗಮನಾರ್ಹವಾಗಿತ್ತು.
ಬಾಲಿಯವರ ನಿಷ್ಟುರತೆ ಹೇಗಿರುತ್ತಿತ್ತು ಎಂಬುದಕ್ಕೇ ಈ ಪ್ರಸಂಗವೇ ಸಾಕ್ಷಿ. ಸುಗಮ ಸಂಗೀತ ಕ್ಷೇತ್ರದಲ್ಲಿ ತನ್ನದೇ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹೊಸಕೆರೆಹಳ್ಳಿಯ ಗಾಯನಗಂಗಾ ಟ್ರಸ್ಟ್ ತನ್ನ ದಶಮಾನೋತ್ಸವದ ಸಂಧರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಆಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದ ಬಾಲಿಯವರಿಗೆ ಸ್ವರ ಸಾಮ್ರಾಟ್ ಎಂಬ ಪ್ರಶಸ್ತಿ ನೀಡಲು ಮುಂದಾದಾಗ, ಈ ಪ್ರಶಸ್ತಿ ತಮ್ಮ ಸೇವಾ ಅನುಭವಕ್ಕೆ ಭಾರವಾಯಿತು ಎಂಬ ಆಭಿಪ್ರಾಯವನ್ನು ವ್ಯಕ್ತಪಡಿಸಿದ್ದ ಬಾಲಿಯವರು, ಪ್ರತಿ ಸಂಘ ಸಂಸ್ಥೆಗಳು ನೀಡುವ ಪ್ರಶಸ್ತಿ ಪುರಸ್ಕಾರಗಳಿಗೆ ಒಂದು ಮೌಲ್ಯ ಇರುತ್ತದೆ. ಹಾಗೆ ನೀಡುವ ಬಿರುದುಗಳು ಕಲಾವಿದರುಗಳ ಯೋಗ್ಯತೆಯನ್ನು ಮೀರಿರಬಾರದು. ಸ್ವರ ಸಾಮ್ರಾಟ್ ಎಂದು ಕರೆಸಿಕೊಳ್ಳುವಷ್ಟು ಯೋಗ್ಯತೆ ತನಗಿಲ್ಲ ಎಂದು ನೇರವಾಗಿ ಆಯೋಜಕರಿಗೆ ತಿಳಿಸಿದಾಗ, ತಮ್ಮ ಸಂಸ್ಥೆ ಸ್ಥಾಪಿಸಿರುವ ಪ್ರಶಸ್ತಿಯ ಹೆಸರೇ ಹಾಗಿದೆ ಎಂದು, ಗಾಯನ ಗಂಗಾದ ಅಧ್ಯಕ್ಷರಾದ ಶ್ರೀ ಆನಂದ ಮಾದಲಗೆರೆ ಅವರು ಹೇಳಿದರೂ ಆ ಪ್ರಶಸ್ತಿಯನ್ನು ತೆಗೆದುಕೊಳ್ಳಲು ಬಾಲಿಯವರು ನಯವಾಗಿ ನಿರಾಕರಿಸಿದ್ದರು.
ಕರ್ನಾಟಕದಲ್ಲಿ ಸಂಗೀತ ಕ್ಷೇತ್ರದಲ್ಲಿ ಬಾಲಿಯವರ ಸೇವೆಯನ್ನು ಗುರುತಿಸಿ
- ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಗೌರವ
- ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಇನ್ನೂ ಹತ್ತು ಹಲವಾರು ಸಂಸ್ಥೆಗಳ ಪ್ರಶಸ್ತಿಗಳು ಬಾಲಿಯವರನ್ನರಸಿ ಬಂದಿದ್ದವು.
ಹೀಗೆ ಧರ್ಮ ಜಾತಿ, ಮೇಲು-ಕೀಳು ಎಂಬ ಯಾವುದೇ ಬೇಧ ಭಾವವನ್ನು ತೋರದೇ, ಕಲಾವಿದರುಗಳಲ್ಲಿದ್ದ ಕಲೆಯನ್ನು ಗುರುತಿಸಿ ಅಂತಹವರನ್ನು ಪ್ರೋತ್ಸಾಹಿಸುತ್ತಿದ್ದಂತಹ ಮಹಾನ್ ಚೇತವಾಗಿದ್ದ ಬಾಲಿಯವರು, ಜಾತಸ್ಯ ಮರಣಂ ಧೃವಂ ಅರ್ಥಾತ್ ಹುಟ್ಟಿದವರು ಒಂದಲ್ಲಾ ಒಂದು ದಿನ ಸಾಯಲೇ ಬೇಕು ಎಂಬ ಜಗದ ನಿಯಮದಂತೆ ಗುರುವಾರ, ಜನವರಿ 02, 2025ರಂದು ತಮ್ಮ71 ವಯಸ್ಸಿನಲ್ಲಿ ವಿಧಿವಶರಾಗಿರುವುದು ಕನ್ನಡ ಸಂಗೀತ ಲೋಕಕ್ಕೆ ತುಂಬಲಾದದ ನಷ್ಟ ಎಂದೇ ಅನೇಕ ಗಣ್ಯರು ಸಂತಾಪ ವ್ಯಕ್ತ ಪಡಿಸಿರುವುದು ಬಾಲಿಯವರ ಹಿರಿತನ ಮತ್ತು ಸಾಧನೆಗಳಿಗೆ ಧ್ಯೋತಕವಾಗಿದೆ ಎಂದರೂ ತಪ್ಪಾಗದು.
ಹೀಗೆ ಬಹು ಲಯವಾದ್ಯಗಳ ಪರಿಣಿತ, ದಕ್ಷಿಣ ಭಾರತದ ರಿದಂ ಕಿಂಗ್ (Rhythm King) ಎಂದೇ ಪ್ರಖ್ಯಾತರಾಗಿದ್ದ, ಶ್ರೀ ಎಸ್ ಬಾಲಸುಬ್ರಹ್ಮಣ್ಯಂ ಎಲ್ಲರ ಪ್ರೀತಿಯ ಬಾಲಿಯವರು ನಮ್ಮೆಲ್ಲರನ್ನೂ ಭೌತಿಕವಾಗಿ ಅಗಲಿದ್ದರೂ ಅವರ ಸಂಗೀತ ಸಾಧನೆಗಳ ಮೂಲಕ ಅವರು ಆಚಂದ್ರಾರ್ಕವಾಗಿ ನಮ್ಮೊಂದಿಗೆ ಇದ್ದೇ ಇರುತ್ತಾರೆ ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ
ಅತ್ತ್ಯುತ್ತಮ ಲೇಖನ, ಅಭಿನಂದನೆಗಳು
LikeLiked by 2 people
ನಿಮ್ಮೆಲ್ಲಾ ಶ್ರೇಯ ಅಗಲಿದ ಆ ಹಿರಿಯ ಜೀವ ಬಾಲಿಯವರಿಗೇ ಸೇರುತ್ತದೆ
LikeLiked by 1 person