ಅರೇ ಇದೇನು ಇಂತಹ ಶೀರ್ಷಿಕೆ? ಸಾಮಾನ್ಯವಾಗಿ ವೈದ್ಯರು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆರೋಗ್ಯಕರವಾಗಿ ತಿನ್ನಲು ಸೂಚಿಸುವುದೇ ಇಡ್ಲಿ ಅಂತಹದ್ದರಲ್ಲಿ ಇಡ್ಲಿ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬ ವಿಷಯ ಕೇಳಿ ಆಚ್ಚರಿ ಪಡುವುದರರಲ್ಲಿ ತಪ್ಪೇನಿಲ್ಲಾ. ಆದರೆ, ಇತ್ತೀಚೆಗೆ ಆಹಾರ ಮತ್ತು ಗುಣಮಟ್ಟ ಇಲಾಖೆಯು ರಾಜ್ಯಾದ್ಯಂತ ಹೋಟೇಲ್ ಮತ್ತು ರಸ್ತೆ ಬದಿಯಲ್ಲಿ ಇಡ್ಲಿ ಮಾರಾಟ ಮಾಡುವವರಿಂದ ಇಡ್ಲಿಯನ್ನು ತೆಗೆದುಕೊಂಡು ಹೋಗಿ ಅದನ್ನು ಪರೀಕ್ಷೆಯಲ್ಲಿ ನಡೆಸಿದ ಸಂಧರ್ಭದಲ್ಲಿ ಈ ವಿಚಾರ ಬಹಿರಂಗಗೊಂಡಿದ್ದು, ಇದನ್ನು ಕೇಳಿ ಇಡ್ಲಿ ಪ್ರಿಯರು ಶಾಕ್ ಆಗಿರುವುದಂತೂ ಸತ್ಯ. ಹಾಗಾಗಿ ಈ ಕುರಿತಾದ ಸವಿವರಗಳನ್ನು ತಿಳಿಯೋಣ ಬನ್ನಿ.
ಇಡ್ಲಿ ಇಂದು ಕೇವಲ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಅವಿಭಜಿತ ರಾಜ್ಯದ ಬೆಳಗಿನ ಉಪಹಾರವಾಗಿಯಷ್ಟೇ ಉಳಿಯದೇ, ಈಗ ಅಂತರಾಷ್ಟ್ರೀಯ ಮಟ್ಟದಲ್ಲೂ ಮಾನ್ಯತೆ ಪಡೆದು ವಿಶ್ವವಿಖ್ಯಾತವಾಗಿದ್ದು, ಪ್ರಪಂಚದ ಮೂಲೆ ಮೂಲೆಯಲ್ಲಿಯೂ ಸಹಾ ಇಡ್ಲಿ, ಸಾಂಬಾರ್, ಚೆಟ್ನಿ ಸಿಗುವಂತಾಗಿದ್ದು ಎಲ್ಲರ ಮೆಚ್ಚಿನ ಖಾದ್ಯವಾಗಿದೆ. ಹಾಗಾಗಿಯೇ ಅನೇಕರು ಇಡ್ಲಿಯನ್ನು ತಿಂಡಿಗಳ ರಾಜ ಎಂದು ಕರೆದರೆ ತಪ್ಪಾಗದು ಎನ್ನುವುದು ಸತ್ಯ ಎನಿಸುತ್ತದೆ. ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ಒಂದು ನಿರ್ಧಿಷ್ಟ ಪ್ರಮಾಣದಲ್ಲಿ ನೆನಸಿ ಅದನ್ನು ಹದವಾಗಿ ರುಬ್ಬಿ ಒಂದು ರಾತ್ರಿ ಇಡೀ ಹಾಗೇ ಬಿಟ್ಟಲ್ಲಿ ನೈಸರ್ಗಿಕವಾಗಿ ಈಸ್ಟ್ ಉತ್ಪತ್ತಿಯಾಗಿ ಹುದುಗು ಬಂದು ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ, ಬೇಕಾದ ಆಕಾರದ ಬಟ್ಟಲು/ತಟ್ಟೆಗಳಲ್ಲಿ ಹಾಕಿ ಇಡ್ಲೀ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿದರೆ ರುಚಿ ರುಚಿಯಾದ, ಅತ್ಯಂತ ಹೆಚ್ಚಿನ ಪೌಷ್ಠಿಕಾಂಶವನ್ನು ಹೊಂದಿರುವ ಮತ್ತು ಅಷ್ಟೇ ಆರೋಗ್ಯಕರವಾದ ಇಡ್ಲಿಗಳು ಸವಿಯಲು ಸಿದ್ಧವಾಗಿರುತ್ತದೆ. ಈ ಇಡ್ಲಿಗಳನ್ನು ಅವರವರ ರುಚಿ ಮತ್ತು ಅಭಿರುಚಿಗೆ ತಕ್ಕಂತೆ, ಬಗೆ ಬಗೆಯ ಚಟ್ನಿ, ಚಟ್ನಿ ಪುಡಿ, ಬೆಣ್ಣೆ, ಸಾಂಬಾರ್ ಇಲ್ಲವೇ ಗೊಜ್ಜುಗಳೊಂದಿಗೆ ತಿನ್ನುವ ಆನಂದವನ್ನು ಇಲ್ಲಿ ವರ್ಣಿಸುವುದಕ್ಕಿಂತಲೂ ಅನುಭವಿಸಿದರೇ ಆನಂದ.
ಇಂತಹ ವಿಶ್ವಮಾನ್ಯ ಖಾದ್ಯವಾದ ಇಡ್ಲಿಯ ಮೂಲದ ಕುರಿತಾಗಿಯೂ ಅನೇಕ ಜಿಜ್ಞಾಸೆಗಳು ಇದ್ದು, ಕರ್ನಾಟಕ, ತಮಿಳುನಾಡು, ಗುಜರಾತ್ ಅಷ್ಟೇ ಅಲ್ಲದೇ ಅನೇಕ ವಿದೇಶಿಗರೂ ಸಹಾ ಇದು ನಮ್ಮದೇ ಅವಿಷ್ಕಾರ ಎಂದು ಹೇಳಿಕೊಳ್ಳುತ್ತಾರೆ. ಕ್ರಿ.ಶ. 920ರಲ್ಲಿ ಕನ್ನಡ ಭಾಷೆಯಲ್ಲಿ ಶಿವಕೋಟಿ ಆಚಾರ್ಯರು ಬರೆದ ವಡ್ಡರಾಧನೆ ಎಂಬ ಕೃತಿಯಲ್ಲಿ ಮತ್ತು ಕ್ರಿ.ಶ. 1130ರಲ್ಲಿ ಪ್ರಕಟವಾದ ಸಂಸ್ಕೃತ ಕೃತಿ ಮಾನಸೊಲ್ಲಾಸದಲ್ಲಿಯೂ ಸಹಾ ಇಡ್ಲಿ ಬಗ್ಗೆ ಉಲ್ಲೇಖವಿರುವ ಕಾರಣ ಮತ್ತು ಕರ್ನಾಟಕದ ಮನೆಮನೆಗಳಲ್ಲಿ ಇಡ್ಲಿ ಸಾಂಪ್ರದಾಯಕ ತಿಂಡಿಯಾಗಿರುವ ಕಾರಣ ಇದು ಕರ್ನಾಟಕದ ಕೊಡುಗೆ ಎಂದರೆ, 17ನೇ ಶತಮಾನದಲ್ಲಿನ ತಮಿಳು ಕೃತಿಗಳಲ್ಲಿಯೂ ಇಡ್ಲಿಯ ಬಗ್ಗೆ ವ್ಯಾಖ್ಯಾನಗಳಿದ್ದು, ತಮಿಳುನಾಡಿನಲ್ಲಿಯೂ ಇಡ್ಲಿ ಕೇವಲ ಬೆಳಗಿನ ಉಪಹಾರವಷ್ಟೇ ಅಲ್ಲದೇ ಸಂಜೆ/ರಾತ್ರಿಯ ಉಪಹಾರ/ಊಟದಲ್ಲಿ ವ್ಯಾಪಕವಾಗಿ ಬಳಸುವ ಕಾರಣ ಇಡ್ಲಿ ನಮ್ಮ ಆವಿಷ್ಕಾರ ಎನ್ನುವುದು ತಮಿಳಿಗರ ವಾದವಾಗಿದೆ.
ಇನ್ನು 2ನೇ ಮಹಾಯುದ್ಧದ ಸಮಯದಲ್ಲಿ, ಇಡ್ಲಿಯಲ್ಲಿ ಬಳಸುವ ಪ್ರಮುಖ ವಸ್ತುವಾದ ಅಕ್ಕಿಯ ಆಮದು ಕಡಿಮೆಯಾಗಿ ಅಕ್ಕಿಯ ಬಳಕೆಯ ಮೇಲೆ ಸರ್ಕಾರವೇ ನಿರ್ಭಂಧ ಹೇರಿದಾಗ ಬೆಂಗಳೂರಿನ ಜನಪ್ರಿಯ ರೆಸ್ಟೋರೆಂಟ್ ಸರಣಿ ಮಾವಳ್ಳಿ ಟಿಫಿನ್ ರೂಮ್ಸ್ (MTR)ನ ಮಾಲಿಕರರಾದ ಶ್ರೀ ಮಯ್ಯಾರವರು ಅಕ್ಕಿಯ ಬದಲು ರವೆ ಬಳಸಿ ಇಡ್ಲಿ ಮತ್ತಷ್ಟು ಮೃದುವಾದ ಮಗದಷ್ಟು ರುಚಿಕರವಾದ ರವೇ ಇಡ್ಲಿಯನ್ನು ಅವಿಷ್ಕರಿಸಿ, ರವೇ ಇಡ್ಲಿ, ಸಾಗು ಮತ್ತು ಚೆಟ್ನಿ, ಅದರ ಮೇಲೊಂದು ಚಮಚ ತುಪ್ಪಾ ಇಲ್ಲವೇ ಬೆಣ್ಣೆ ಯೊಂದಿಗೆ ವಿಶೇಷ ತಿಂಡಿಯನ್ನು ಕಂಡು ಹಿಡಿದ ಕಾರಣ ಇಡ್ಲಿಯ ಆವಿಷ್ಕಾರದ ಸಂಪೂರ್ಣ ಹಕ್ಕು ಕನ್ನಡಿಗರಿಗೇ ಸೇರಬೇಕು ಎನ್ನುವುದೇ ನನ್ನ ವಯಕ್ತಿಕ ಅಭಿಪ್ರಾಯ ಮತ್ತು ವಾದವಾಗಿದೆ. ಹೀಗೆ ಇಡ್ಲಿಗಳಿಗೂ ಈಗ ವಿಶ್ವ ಮಾನ್ಯತೆ ದೊರೆತಿದ್ದು, ಪ್ರತೀ ವರ್ಷ ಮಾರ್ಚ್ 30ರಂದು ವಿಶ್ವ ಇಡ್ಲಿ ದಿನವನ್ನಾಗಿ ಆಚರಿಸಲ್ಪಡುವಷ್ಟರ ಮಟ್ಟಿಗೆ ಅದರ ಖ್ಯಾತಿ ಬೆಳದಿದೆ. ಹಾಗಾಗಿಯೇ ಬಹುತೇಕರ ಮನೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನ ತಿಂಡಿಗೆ ಇಡ್ಲಿಯನ್ನು ಬಳಸುವುದರಿದ್ದರೆ, ಕೇವಲ ದಕ್ಷಿಣ ಭಾರತವೇಕೇ? ಬಹುತೇಕ ಭಾರತಾದ್ಯಂತ ಮತ್ತು ವಿದೇಶಗಳ ಆಯ್ದ ಭಾಗಗಳ ಹೋಟೆಲ್ ಮತ್ತು ರೆಸ್ಟೊರೆಂಟ್ ಗಳಲ್ಲಿ ಇಡ್ಲಿಯದ್ದೇ ಪ್ರಾಭಲ್ಯ. ಯಾವ ತಿಂಡಿಯಿಲ್ಲದೇ ಹೋದರೂ, ಬೆಳ್ಳಂಬೆಳಿಗ್ಗೆಯಿಂದ ತಡರಾತ್ರಿಯವರೆಗೂ, ವಿವಿಧ ಆಕಾರದ, ವಿವಿಧ ಬಗೆಯ ಇಡ್ಲಿಗಳ ಲಭ್ಯ ಇದ್ದೇ ಇರುವುದನ್ನು ನಾವೆಲ್ಲರೂ ಗಮನಿಸಿಯೇ ಇದ್ದೇವೆ.
ಹೀಗೆ ನೂರಾರು ವರ್ಷದ ಇತಿಹಾಸ ಇರುವ ಇಡ್ಲಿ ತಿಂದರೆ ಕ್ಯಾನ್ಸರ್ ಬರುತ್ತದೆ ಎನ್ನುವ ವಿಷಯ ಹೇಗೆ ಚಾಲ್ತಿಗೆ ಬಂದಿತು ಎಂಬುದನ್ನು ಕೂಲಂಕುಶವಾಗಿ ವಿಚಾರಿಸುತ್ತಾ ಹೋದಲ್ಲಿ, ಇತ್ತೀಚೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾಗೂ ಆಹಾರ ಇಲಾಖೆ ಜಂಟಿಯಾಗಿ ಬೆಂಗಳೂರಿನ ವಿವಿದೆಡೆ ಆಹಾರ ಮಳಿಗೆಗಳ ಮೇಲೆ ಸುಮಾರು 15 ದಿನಗಳ ಕಾಲ ಭೇಟಿ ನೀಡಿ ಅಲ್ಲಿಂದ ಸುಮಾರು 500 ಇಡ್ಲಿಗಳ ಮಾದರಿಯನ್ನು ಸಂಗ್ರಹಿಸಿ ಅದನ್ನು ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ಕಳುಸಿಕೊಟ್ಟು ಅಲ್ಲಿಂದ ಬಂದ ವರದಿ ನಿಜಕ್ಕೂ ಎಲ್ಲರೂ ಬೆಚ್ಚಿಬೀಳುವಂತಿತ್ತು. ಹಾಗೆ ಸಂಗ್ರಹಿಸಿದ 500 ಇಡ್ಲಿಗಳಲ್ಲಿ ಸುಮಾರು 35ಕ್ಕೂ ಹೆಚ್ಚು ಇಡ್ಲಿಗಳ ಗುಣಮಟ್ಟ ಅಪಾಯಕಾರಿಯಾಗಿದ್ದು, ಅಂತಹ ಇಡ್ಲಿಗಳನ್ನು ತಿನ್ನುವುದರಿಂದ ಕ್ಯಾನ್ಸರ್ ಬರಬಹುದು ಎಂದು ತಿಳಿಸಲಾಗಿದೆಯೇ ಹೊರತು ಮನೆಯಲ್ಲಿ ಶುಚಿ ರುಚಿಯಾಗಿ ತಯಾರಿಸಿದ ಇಡ್ಲಿಗಳನ್ನು ತಿನ್ನುವರಿಂದ ಯಾವ ರೋಗವೂ ಬಾರದೇ, ಇನ್ನೂ ಹೆಚ್ಚಿನ ರೀತಿಯಲ್ಲಿ ಆರೋಗ್ಯಕರವಾಗಿರಬಹುದಾಗಿದೆ.
ಸಾಮಾನ್ಯವಾಗಿ ಇಡ್ಲಿ ತಯಾರಿಸುವಾಗ, ಇಡ್ಲಿ ಪಾತ್ರೆಗೆ ಹಿಟ್ಟು ಅಂಟಿಕೊಳ್ಳದೇ, ಸುಲಭವಾಗಿ ತೆಗೆಯಲು ಬರುವಂತಾಗಲೂ ಹಿಂದಿನಿಂದಲೂ ತೆಳುವಾದ ಶುಚಿಯಾದ ಬಟ್ಟೆಯನ್ನು ಬಳುಸುವ ಸಂಪ್ರದಾಯವಿತ್ತು. ಹಾಗೆ ಬಳಸುವ ಬಟ್ಟೆ ಹತ್ತಿಯಿಂದ ಮಾಡಿದ ಹಳೆಯ ಪಂಚೆಯಾಗಲಿ ಇಲ್ಲವೇ ಕೋರಾ ಬಟ್ಟೆಯನ್ನು ಮೂರ್ನಾಲ್ಕು ಬಾರಿ ತೊಳೆದು ಶುದ್ಧೀಕರಿಸಿ ಇಡ್ಲಿ ತಯಾರಿಸುತ್ತಿದ್ದದ್ದಲ್ಲದೇ, ಇಡ್ಲಿಗಳನ್ನು ಮಾಡಿದ ನಂತರ ಮತ್ತೆ ಆ ಬಟ್ಟೆಗಳನ್ನು ಶುಧ್ಧೀಕರಿಸಲಾಗುತ್ತಿತ್ತು. ಆದರೆ ಇಂದು ಬಹುತೇಕ ಇಡ್ಲಿ ತಯಾರಕರು ಬಟ್ಟೆಯ ಬದಲಾಗಿ ಪ್ಲ್ಯಾಸ್ಟಿಕ್ ಬಳಸುವುದಲ್ಲದೇ, ಬಿಸಿ ಬಿಸಿ ಇಡ್ಲಿಯನ್ನು ಪ್ಲಾಸ್ಟಿಕ್ ತಟ್ಟೆ ಇಲ್ಲವೇ ಪ್ಲಾಸ್ಟಿಕ್ ಹಾಳೆಗಳ ಮೇಲೆ ತಿನ್ನಲು ಬಳಸುವ ಕಾರಣ, ಬಿಸಿಯಾದ ಪ್ಲಾಸ್ಟಿಕ್ ನಲ್ಲಿರುವ ವಿಷಕಾರಿ ಅಂಶಗಳು ಇಡ್ಲಿಯ ಜೊತೆ ಸೇರಿಕೊಂಡು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವುದಲ್ಲದೇ, ಕ್ಯಾನ್ಸರ್ ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ವರದಿಯಿಂದ ತಿಳಿದು ಬಂದಿದೆ. ಪ್ರಯೋಗಾಲಯಕ್ಕೆ ಕಳುಹಿಸಿ ಕೊಟ್ಟಿದ್ದ 500 ಇಡ್ಲಿಗಳಲ್ಲಿ ಇದುವರೆವಿಗೂ ಅರ್ಧದಷ್ಟರ ಪರೀಕ್ಷಾ ವರದಿ ಹೊರಬಂದಿದ್ದು, ಉಳಿದ 250ಕ್ಕೂ ಹೆಚ್ಚಿನ ಇಡ್ಲಿಗಳ ಸಂಪೂರ್ಣ ವರದಿ ಬಂದ ಬಳಿಕ ಆಹಾರ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ಅಂತಿಮ ವರದಿಯನ್ನೂ ನೀಡಲಿದ್ದು ಆದಾದ ನಂತರ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮಗಳೊಂದಿಗೆ ಜನರಿಗೆ ಎಚ್ಚರಿಕೆ ನೀಡಲಿದೆ.
ಇದು ಕೇವಲ ಇಡ್ಲಿಗಳಿಗಷ್ಟೇ ಸೀಮಿತವಾಗಿರದೇ, ರಸ್ತೆ ಬದಿಯಲ್ಲಿ ಅಥವಾ ಸಣ್ಣ ಸಣ್ಣ ಹೋಟೆಲ್ಲುಗಳಲ್ಲಿ ತಯಾರಿಸಿ ಮಾರಾಟ ಮಾಡಲಾಗುವ ಕಬಾಬ್, ವಿವಿಧ ಬಗೆಯ ಮಂಚೂರಿ, ಚೈನೀಸ್ ಖಾದ್ಯಗಳು, ಪಾನಿಪೂರಿ ಮುಂತಾದ ತಿನಿಸುಗಳ ಗುಣಮಟ್ಟವನ್ನು ಸಹ ಕೆಲ ತಿಂಗಳುಗಳ ಹಿಂದೆ ಪರಿಶೀಲನೆ ಮಾಡಿದ ಆಹಾರ ಮತ್ತು ಗುಣಮಟ್ಟ ಇಲಾಖೆ ಆ ರೀತಿಯ ಖಾದ್ಯಗಳನ್ನು ತಯಾರಿಸಲು ಬಳಸುವ ಬಣ್ಣ, ಎಣ್ಣೆ ಕಲಬೆರಕೆ ವಸ್ತುಗಳಾಗಿವೆ ಎಂಬ ವರದಿ ನೀಡಿತ್ತಲ್ಲದೇ, ಖ್ಯಾದ್ಯಗಳಿಗೆ ಹೆಚ್ಚಿನ ಸ್ವಾದಕ್ಕಾಗಿ ಬಳಸಲಾಗುವ ಅಜಿನೋಮೋಟೋ ಸಹಾ ದೇಹಕ್ಕೆ ಹಾನಿಕರ ಎಂದು ತಿಳಿಸಿತ್ತು. ಇದೀಗ ಇಡ್ಲಿ ಸರದಿ ಬಂದಿರುವ ಕಾರಣ, ಇನ್ನು ಮುಂದೆ ಎಲ್ಲಾ ಇಡ್ಲಿ ತಯಾರಕರೂ ಜಾಗರೂಕರಾಗಿ ಸಾಂಪ್ರದಾಯಿಕ ರೀತಿಯ್ಲಲ್ಲೇ ಇಡ್ಲಿಗಳನ್ನು ತಯಾರಿಸುವ ಮೂಲಕ ಪರಿಸ್ಥಿತಿಯನ್ನು ತಡೆಯಬಹುದಾಗಿದೆ. ಅದೇ ರೀತಿ ಹೊರಗೆ ಈ ವಸ್ತುಗಳನ್ನು ತಿನ್ನುವವರೂ ಸಹಾ ಇದರ ಕುರಿತಾಗಿ ಜಾಗೃತಿ ವಹಿಸಿದಾಗಲೇ ಇಂತಹ ಸಮಸ್ಯೆಗಳನ್ನು ತಡೆಯಬಹುದಾಗಿದೆ.
ಇಡ್ಲಿಯ ಕುರಿತಾಗಿ ಇಷ್ಟೆಲ್ಲಾ ಸಮಸ್ಯೆಗಳ ನಡುವೆ, ಕುಣಿಯಲಾರದವಳು ನೆಲ ಡೋಂಕು ಎಂದಳಂತೆ ಎನ್ನುವಂತೆ, ಗೋವಾದ ಶಾಸಕರು, ತಮ್ಮ ತಮ್ಮ ರಾಜ್ಯಕ್ಕೆ ಪ್ರವಾಸಿಗರು ಕಡಿಮೆಯಾಗಲು ಇಡ್ಲಿ-ಸಾಂಬಾರ್ ಕಾರಣ ಎಂದು ದೂರನ್ನಿತಿರುವ ಸಂಗತಿ ಮತ್ತಷ್ಟೂ ಕೌತಕವನ್ನು ಮೂಡಿಸಿದೆ. ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಗೋವಾ ರಾಜ್ಯದಲ್ಲಿ ಇತ್ತೀಚಿಗೆ ಪ್ರವಾಸಿಗರ ಸಂಖ್ಯೆ ಕಡಿಮೆಯಾತ್ತಿರುವ ಕುರಿತಾಗಿ ಚರ್ಚೆ ನಡೆಯುತ್ತಿದ್ದ ಸಂಧರ್ಭದಲ್ಲಿ ಬಿಜೆಪಿ ಶಾಸಕ ಮೈಕೆಲ್ ಲೋಬೊ ಮಾತನಾಡುತ್ತಾ, ಗೋವಾದ ಪ್ರವಾಸೋದ್ಯಮ ಉದ್ಯಮವು ಸ್ಥಳೀಯ ಸಂಸ್ಕೃತಿ ಮತ್ತು ಪಾಕಪದ್ಧತಿಯ ಬದಲು. ಬೀಚ್‌ಗಳಲ್ಲಿ ಇಡ್ಲಿ ಸಾಂಬಾರ್ ಮಾರಾಟ ಮಾಡುತ್ತಿರುವ ಕಾರಣ, ವಿದೇಶಿ ಪ್ರವಾಸಿಗರ ಕುಸಿತಕ್ಕೆ ಕಾರಣವಾಗಿದೆ ಎಂಬ ಸಂಗತಿಯನ್ನು ಹೊರಹಾಕಿರುವುದು ಇಡ್ಲಿ ಪ್ರಿಯರನ್ನು ಅಚ್ಚರಿಗೊಳಿಸಿದ್ದು, ಹೀಗೂ ಉಂಟೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಗೋವಾದ ಹೋಟೆಲ್ ಮಾಲೀಕರು ದಕ್ಷಿಣ ಭಾರತೀಯ ಖಾದ್ಯ ತಯಾರಿಸುವವರಿಗೆ ಸಬ್‌ಲೀಸ್ ಮಾಡುತ್ತಿರುವ ಕಾರಣ ಇಲ್ಲಿ ಇಡ್ಲೀ ಸಾಂಬಾರ್ ದೋಸೆಗಳದ್ದೇ ಕಾರುಬಾರಾಗಿ, ಶಾಸ್ತ್ರೀಯ ಗೋವಾ ಪಾಕ ಪದ್ದತಿಯನ್ನು ಅರಸಿ ಬರುವ ವಿದೇಶೀ ಪ್ರವಾಸಿಗರಿಗೆ ಬೇಸರವಾಗುತ್ತಿದೆ. ಗೋವಾ ಬೀಚುಗಳಲ್ಲಿ ಮೋಜು ಮಸ್ತಿಯ ಜೊತೆಗೆ ಗೋವಾ ಖ್ಯಾದ ದೊರೆಯುತದೆ ಬನ್ನಿ ಎಂದು ಪ್ರವಾಸಿಗರನ್ನು ಕರೆಯುವುದರ ಬದಲಾಗಿ, ನಾವು ಬೀಚ್‌ನಲ್ಲಿ ನಿಮಗೆ ಇಡ್ಲಿ ಸಾಂಬಾರ್ ನೀಡುತ್ತೇವೆ ಬನ್ನಿ ಎಂದು ಕರೆಯಲಾಗುತ್ತದೇಯೇ? ಎಂಬ ಎಂಬ ಆಕ್ರೋಶವನ್ನು ವ್ಯಕ್ತ ಪಡಿಸುತ್ತಲೇ, ಅಂತಿಮವಾಗಿ ನಾನು ಇಲ್ಲಿ ಇಡ್ಲಿ ಸಾಂಬಾರ್ ಅನ್ನು ವಿರೋಧಿಸುತ್ತಿಲ್ಲ ಆದರೆ ಸ್ಥಳೀಯ ಗೋವಾದ ಪಾಕಪದ್ಧತಿಯನ್ನು ಹೆಚ್ಚಿನ ರೀತಿಯ ಉತ್ತೇಜಿಸಬೇಕು ಎಂದು ಹೇಳುವ ಮೂಲಕ ಜಾಣತನವನ್ನು ಮೆರೆದಿದ್ದಾರೆ.
ಅಂತಿಮವಾಗಿ ಬೆಂಗಳೂರಿನಲ್ಲಿ ಹಲವು ಹೋಟೆಲ್ ಗಳಲ್ಲಿ ಇಡ್ಲಿ ತಯಾರಿಸುವಾಗ ಮತ್ತು ಪ್ಯಾಕಿಂಗ್ ಮಾಡುವಾಗ ಮತ್ತು ಉಣಬದಿಸುವಾಗ ಅಧಿಕ ಮಟ್ಟದಲ್ಲಿ ಪ್ಲಾಸ್ಟಿಕ್ ಬಳಸುವ ಕಾರಣದಿಂದಾಗಿಯೇ ಕ್ಯಾನ್ಸರ್ ನಂತಹ ಮಹಾಮಾರಿ ಬರುತ್ತದೆಯೇ ಹೊರತು ಮನೆಯಲ್ಲಿ ಅಥವಾ ಇತರೆಡೆಯಲ್ಲಿಯೂ ಶುದ್ಧವಾದ ಅರಳೇ (ಹತ್ತಿ) ಬಟ್ಟೆಯನ್ನು ಬಳಸಿ ಇಡ್ಲಿಯನ್ನು ತಯಾರಿಸಿ ತಿಂದಲ್ಲಿ ಕ್ಯಾನ್ಸರ್ ಬರುವುದಿಲ್ಲ ಎನ್ನುವ ಸ್ಪಷ್ಟನೆಯನ್ನೂ ಸಹಾ ಆರೋಗ್ಯ ಇಲಾಖೆ ಹೇಳಿರುವಾಗ, ಇನ್ನೇಕೆ ತಡಾ, ವಾರಾಂತ್ಯದಲ್ಲಿ, ಬಗೆ ಬಗೆಯ ಇಡ್ಲಿ, ಸಾಂಬಾರ್ ಚಟ್ನಿಯನ್ನು ಮಾಡಿ ನಮ್ಮನ್ನೂ ತಿಂಡಿಗೆ ಕರೀತೀರೀ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಮಂಜುಶ್ರೀ