ಶಿಶಿರ ಋತುವಿನ ಫಾಲ್ಗುಣ ಮಾಸದ ಪೌರ್ಣಿಮೆ ದಿನದಂದು ದೇಶಾದ್ಯಂತ ಅತ್ಯಂತ ಸಡಗರ ಸಂಭ್ರಮಗಳಿಂದ ಕಾಮನ ಹುಣ್ಣಿಮೆ, ವಸಂತ ಹುಣ್ಣಿಮೆ ಅರ್ಥಾತ್ ಹೋಳಿ/ಹೋಲಿ ಹಬ್ಬವಾಗಿ ಅಚರಿಸುವ ಪದ್ದತಿ ಎಲ್ಲರಿಗೂ ತಿಳಿದೇ ಇದೆ. ಆದರೆ ದೇಶದ ಧಾರ್ಮಿಕ ರಾಜಧಾನಿ ಎನಿಸಿಕೊಂಡಿರುವ ವಾರಣಾಸಿಯ ಗಂಗಾನದಿಯ ಮಣಿಕರ್ಣಿಕಾ ಘಾಟ್ ಮತ್ತು ಹರಿಶ್ಚಂದ್ರ ಘಾಟ್‌ನ ದಡದಲ್ಲಿ ಹೋಲಿ ಹಬ್ಬ ಅರ್ಥಾತ್ ರಂಗಪಂಚಮಿಗೂ ನಾಲ್ಕು ದಿನಗಳ ಮುಂಚೆಯೇ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯಂದು ಮಸಾನ್ ಹೋಲಿ/ಸ್ಮಶಾನ್ ಹೋಲಿ/ಭಸ್ಮ ಹೋಲಿ ಎಂಬ ವಿನೂತನ ಆಚರಣೆ ರೂಢಿಯಲ್ಲಿದೆ.
ಕಾಶೀ ಪುರವಾಸಿಗಳಿಗೆ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಏಕಾದಶಿಯ ದಿನ ಅತ್ಯಂತ ಶುಭಕರ ಎಂದು ನಂಬುತ್ತಾರೆ. ಲಭ್ಯವಿರುವ ಪೌರಾಣಿಕ ಕಥೆಯ ಪ್ರಕಾರ ಶಿವರಾತ್ರಿಯಂದು ಪಾರ್ವತಿ ದೇವಿಯನ್ನು ಮದುವೆಯಾದ ಪರಮಶಿವನು ಪಾರ್ವತಿಯನ್ನು ಮೊದಲ ಬಾರಿಗೆ ಕಾಶಿಗೆ ಕರೆದು ಕೊಂಡ ಬಂದಾಗ ಶಿವನ ಗಣಗಳು ಮತ್ತು ಶಿವ ಭಕ್ತರುಗಳು, ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪಾರ್ವತಿ ಪರಮೇಶ್ವರನ ಆಗಮನಕ್ಕಾಗಿ ಕಾಯುತ್ತಿದ್ದದ್ದಲ್ಲದೇ, ಆವರುಗಳು ಬಂದ ನಂತರ ಬಣ್ಣಗಳೊಂದಿಗೆ ಆಟವಾಡಿ ಸಂಭ್ರಮವನ್ನು ಅಚರಿಸಲು ಯೋಚಿಸಿದ್ದರು. ಆದರೆ ಸ್ಮಶಾನ ಕಾಯುವ ಶಿವನು ತನ್ನ ಅಲೌಕಿಕ ಅನುಯಾಯಿಗಳಿಗೆ ಬಣ್ಣಗಳೊಂದಿಗೆ ಆಟವಾಡಲು ಅವಕಾಶ ಕೊಡದೇ ಹೋದದ್ದಕ್ಕೆ ಅವನ ಗಣದವರು ಬೇಸರಿಕೊಂಡಿದ್ದನ್ನು ಮನಗಂಡು ದ್ವಾದಶಿಯಂದು, ಸ್ವತಃ ಭಗವಂತನೇ ಗಂಗಾ ತಟದಲ್ಲಿದ್ದ ಸ್ಮಶಾನಕ್ಕೆ ಆಗಮಿಸಿ ಅದೇ ಸ್ಮಶಾನದಲ್ಲಿದ್ದ ಚಿತಾ ಭಸ್ಮವಾದ ಬೂದಿಯನ್ನೇ ಬಳಸಿ ಅವನ ಗಣದೊಂದಿಗೆ ಹೋಳಿ ಆಡಿದ ದಿನವೇ ನಂತರದಲ್ಲಿ ಮಸಾನ್ ಹೋಲಿ, ಸ್ಮಶಾನ್ ಹೋಲಿ, ಭಸ್ಮ ಹೋಲಿ ಎಂಬ ಹೆಸರಿನಲ್ಲಿ ಅಚರಣೆ ರೂಢಿಗೆ ಬಂದಿತು ಎನ್ನಲಾಗುತ್ತದೆ.
ಹೀಗೆ ಸಾಕ್ಷಾತ್ ಭಗವವಂತನೇ ಮಣಿಕರ್ಣಿಕಾ ಘಾಟ್ ನಲ್ಲಿ ಉರಿದು ಬಿದ್ದಿದ್ದ ಚಿತಾ ಭಸ್ಮವನ್ನೇ ಬಣ್ಣದ ರೂಪಗಳಲ್ಲಿ ತನ್ನ ಶಿವಗಣದ ಮೇಲೆ ಎರೆಚಿಕೊಂಡು ಸಂಭ್ರಮಿಸಿದ ನಂತರ ಶಿವಗಣವು ಶಿವಪಾರ್ವತಿಯರನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಅಂದು ಇಡೀ ಕಾಶೀ ನಗರಾದ್ಯಂತ ಮೆರವಣಿಗೆ ಮಾಡಿದ್ದರ ಪ್ರತೀಕವಾಗಿ ಇಂದಿಗೂ ಸಹಾ ಶಿವಭಕ್ತರು ಅರ್ಥಾತ್ ಅಘೋರಿಗಳು ಮತ್ತು ಸಾಧು ಸಂತರುಗಳು ರಂಗ್ ಭರೀ ಏಕಾದಶೀಯಂದು, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಾಶೀ ನಗರದ ಮಣಿಕರ್ಣಿಕಾ ಘಾಟ್ ಮತ್ತು ಹರಿಶ್ಚಂದ್ರ ಘಾಟ್ ಗೆ ಆಗಮಿಸಿ ಇಡೀ ದಿನ ಉಪವಾಸವ್ರತವನ್ನು ಕೈಗೊಂಡು ಭಕ್ತಿಯಿಂದ ಶಿವ ಪಾರ್ವತಿಯರನ್ನು ಪೂಜಿಸಿ ಅಲ್ಲಿಯೇ ಸಿಗುವ ಭಸ್ಮದ ಜೊತೆ ಗುಲಾಲ್ (ಗುಲಾಬಿ ಹೂವಿನ ಬಣ್ಣ)ವನ್ನು ಅರ್ಪಿಸಿ, ಶಿವ ಮತ್ತು ಪಾರ್ವತಿಯರ ವಿಗ್ರಹಗಳನ್ನು ಪಲ್ಲಕ್ಕಿಯ ಮೇಲೆ ಇರಿಸಿ ಅದನ್ನು ಕಾಶೀ ವಿಶ್ವನಾಥನ ದೇವಾಲಯಕ್ಕೆ ಶೋಭಾಯಾತ್ರೆಯನ್ನು ಮಾಡುವ ಸಂಪ್ರದಾಯವು ರೂಡಿಯಲ್ಲಿದೆ.
ವಿಶ್ವದ ಅತಿದೊಡ್ಡ ಸ್ಮಶಾನ ಸ್ಥಳವಾದ ಕಾಶಿಯ ಮಣಿಕರ್ಣಿಕಾ ಘಾಟ್ ಮತ್ತು ಹರಿಶ್ಚಂದ್ರ ಘಾಟ್ ನಲ್ಲಿ ಲಕ್ಷಾಂತರ ಶಿವಭಕ್ತರು, ಸಾಧು ಸಂತರು ಮತ್ತು ನಾಗಾಸಾಧುಗಳ ಸಮ್ಮುಖದಲ್ಲಿ ರಂಗಭರಿ ಏಕಾದಶಿಯಿಂದ ಆರಂಭವಾಗಿ ಮಾರನೇ ದಿನ ಮಸಾನ್ ಹೋಳಿಯ ನಂತರ ಮುಂದಿನ 5 ದಿನಗಳವರೆಗಗೂ ಮುಂದುವರೆಯುತ್ತದೆ. ಈ ಮಸಾನ್ ಹೋಳಿ ದಿನದಂದು ಸಾಕ್ಷಾತ್ ಪರಶಿವನೇ ತನ್ನ ಭಕ್ತಗಣದೊಂದಿಗೆ ಅಸಾಮಾನ್ಯ ಹೋಳಿಯನ್ನು ಆಡುತ್ತಾನೆ ಎಂಬ ಧಾರ್ಮಿಕ ಕಲ್ಪನೆ ಇಂದಿಗೂ ಇದೆ.
ಸನಾತನ ಧರ್ಮದಲ್ಲಿ ಜೀವನದ ಜಂಜಾಟಗಳಿಂದ ಮುಕ್ತಿಯನ್ನು ಹೊಂದುವ ಸಾವನ್ನು ಆತ್ಯಂತ ಪವಿತ್ರ ಮಾರ್ಗವೆಂದು ಸ್ವೀಕರಿಸಲಾಗುತ್ತದೆ. ಹಾಗಾಗಿ ಆ ಮೃತ ದೇಹವನ್ನು ಪಂಚಭೂತಗಳಾದ ನೀರು, ಗಾಳಿ, ಬೆಂಕಿ, ಭೂಮಿ ಮತ್ತು ಬಾಹ್ಯಾಕಾಶಗಳಲ್ಲಿ ವಿಲೀನ ಮಾಡುವುದು ಸಂಪ್ರದಾಯವಾಗಿದೆ. ಮೋಕ್ಷ ನಗರ ಎಂದು ಹೆಸರಾಗಿರುವ ವಾರಣಾಸಿಯ ಮಣಿಕರ್ಣಿಕಾ ಘಾಟ್ ನಲ್ಲಿ ನಿರಂತರವಾಗಿ ಚಿತೆಗಳ ಅಂತ್ಯಕ್ರಿಯೆಯ ನಡೆಯುತ್ತಲೇ ಇರುತ್ತದೆ. ಈ ಘಾಟ್‌ನಲ್ಲಿ ಇದುವರೆವಿಗೂ ಹೊಸ ಚಿತೆಯನ್ನು ಹೊತ್ತಿಸದೇ ಇರದೇ ಇರುವ ಒಂದು ದಿನವೂ ಇಲ್ಲದ ಕಾರಣ ಈ ಘಾಟ್ ನಲ್ಲಿ ಸದಾಕಾಲವೂ ಒಂದಲ್ಲಾ ಒಂದು ಉರಿಯುತ್ತಿರುವ ಚಿತೆಯನ್ನು ಕಾಣಬಹುದಾಗಿದೆ.
ಹೀಗೆ ನಶ್ವರವಾದ ದೇಹವೆಲ್ಲಾ ಉರಿದು ಅಂತಿಮವಾಗಿ ಉಳಿಯುವ ಭಸ್ಮ ಅಥವಾ ಬೂದಿಯನ್ನು ಸನಾತನ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುವ ಕಾರಣ ಅದನ್ನೇ ಮಹಾದೇವನಿಗೆ ಅರ್ಪಿಸಲಾಗುತ್ತದೆ. ಹೀಗಾಗಿ ಇತರೇ ಬಣ್ಣಗಳನ್ನು ಬಳಸದೇ ಅಲ್ಲೇ ಸಿಗುವ ನಿಜವಾದ ಮೃತ ದೇಹದ ಚಿತಾಭಸ್ಮದಿಂದಲೇ ಆಚರಿಸುವ ಭಸ್ಮ ಹೋಳಿಯು ಅಸಾಮಾನ್ಯ ವಿಧಾನವಾಗಿದೆ. ಅಂದು ಭಗವಾನ್ ಶಿವ ಮತ್ತು ಅವನ ಭೂತ ಗಣಗಳು (ಆಧ್ಯಾತ್ಮಿಕ ಪರಿವಾರ) ದಹನದ ಚಿತಾಭಸ್ಮದ ನಡುವೆ ನೃತ್ಯ ಮಾಡಿದ್ದರ ಪ್ರತೀಕವಾಗಿ ಇಂದು ಆಘೋರಿಗಳು ನಾಗಾ ಸಾಧುಗಳು ಸ್ಮಶಾನದ ಪ್ರಭು ಶಿವನಂತೆಯೇ ಹುಲಿ ಚರ್ಮ ಧರಿಸಿಕೊಂಡು ಮುಂಡಮಾಲೆ (ತಲೆಬುರುಡೆಯ ಹಾರ) ದಿಂದ ಅಲಂಕರಿಸಲ್ಪಟ್ಟು, ಸ್ಮನಾಶದಲ್ಲಿನ ಮಹಾಸ್ಮಶಾನನಾಥನಿಗೆ ಪೂಜೆ ಸಲ್ಲಿಸಲ್ಲಿಸಿ ಮೆರವಣಿಗೆ ಮಾಡಿ, ಜೀವನದ ಸಾಂಕೇತಿಕ ಬಣ್ಣವಾದ ಬೂದಿಯ ಬಣ್ಣ ಆಟವಾಡುತ್ತಾ, ಭಾಂಗ್ (ಗಾಂಜಾ) ಸೇವಿಸುತ್ತಾ, ಹರಹರ ಮಹದೇವ ಎನ್ನುವ ಮುಗಿಲು ಮುಟ್ಟುವ ಜಯಘೋಷದ ಹೊರತಾಗಿ ಯಾವುದೇ ರೀತಿಯ ಆಟಾಟೋಪಗಳಿಲ್ಲದೇ ತಮ್ಮ ಪಾಡಿಗೆ ತಾವು ಆಧ್ಯಾತ್ಮಿಕತೆ ಮತ್ತು ಧರ್ಮನಿಷ್ಠೆಯಿಂದ ಸಂಪೂರ್ಣವಾಗಿ ಸಂತೋಷದಲ್ಲಿ ಮಗ್ನರಾಗುವ ಅಘೋರಿಗಳು ಮತ್ತು ಸಾಧುಗಳು ನೋಡಲೆಂದೇ, ಲಕ್ಷಾಂತರ ಭಕ್ತರು ದೇಶದ ಮೂಲೆ ಮೂಲೆಗಳಿಂದ ಬರುತ್ತಾರೆ. ಈ ಪ್ರಕ್ರಿಯೆಗಳೆಲ್ಲವೂ ಮುಗಿದ ನಂತರವೇ ಕಾಶಿಯಲ್ಲಿ ಎಂದಿನಂತಿನ ಸಾಂಪ್ರದಾಯಿಕ ಹೋಳಿಯ ಆಚರಣೆಯೂ ಆರಂಭವಾಗುತ್ತದೆ.
ಹೀಗೆ ಮಸಾನ್ ಹೋಲಿಯು ಅಘೋರಿಗಳು ಮತ್ತು ಸಾಧು ಸಂತರಿಂದ ಆರಂಭವಾದ ನಂತರ ಅವರೊಂದಿಗೆ ಬಂದಿರುವ ಉಳಿದ ಎಲ್ಲಾ ವರ್ಗದ ಭಕ್ತದಿಗಳು ದಹನ ಭೂಮಿಯಲ್ಲಿ ಉರಿಯುತ್ತಿರುವ ಚಿತೆಯ ನಡುವೆ ಒಟ್ಟುಗೂಡುತ್ತಾ, ಮೋಕ್ಷವನ್ನು ಪಡೆಯುವ ಭರವಸೆಯೊಂದಿಗೆ ಸಾವನ್ನು ಆಚರಿಸುವ ಪ್ರಾಚೀನ ಸಂಪ್ರದಾಯದಲ್ಲಿ ಭಾಗವಹಿಸುತ್ತಾರೆ. ಮಸಾನ್ ಹೋಳಿಯಲ್ಲಿ ಚಿತೆಯ ಚಿತಾಭಸ್ಮವನ್ನು ಬಳಸುವುದು ಜೀವನದ ಅಲ್ಪಾವಧಿ ಮತ್ತು ಈ ಭೌತಿಕ ಜಗತ್ತಿನಲ್ಲಿ ವ್ಯಕ್ತಿಯ ಅಸ್ತಿತ್ವದ ಚಕ್ರೀಯ ಸ್ವರೂಪವನ್ನು ಸಂಕೇತಿಸುತ್ತದೆ. ಮಸಾನ್ ಹೋಳಿಯಲ್ಲಿ ಬಳಸುವ ಬೂದಿಯು ದೇಹ, ಮನಸ್ಸು ಮತ್ತು ಆತ್ಮವನ್ನು ಕಲ್ಮಶಗಳಿಂದ ಶುದ್ಧೀಕರಿಸುವ ಗುಣಗಳನ್ನು ಹೊಂದಿದೆ ಎಂದು ನಂಬಲಾಗುವ ಕಾರಣ, ಜನರು ಪರಸ್ಪರ ಬೂದಿಯನ್ನು ಬಳಿದುಕೊಳ್ಳುವ ಮೂಲಕ ಆಧ್ಯಾತ್ಮಿಕ ಪುನರ್ಯೌವನಗೊಳಿಸುವಿಕೆ ಮತ್ತು ಆಂತರಿಕ ಶುದ್ಧೀಕರಣವನ್ನು ಬಯಸುತ್ತಾರೆ.
ಈ ರೀತಿಯ ಅಸಂಪ್ರದಾಯಕ ಶೈಲಿಯ ಹೋಲಿ ಆಚರಣೆಯ ಬಗ್ಗೆಯೂ ಸಹಾ ಕೆಲವು ಚಾರ್ವಾಕ ಮನಸ್ಥಿತಿಯವರು ಆಕ್ಷೇಪ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಈ ಹೋಲಿ ಹಬ್ಬವನ್ನು ಎಂದಿನ ಹೋಲಿಯಂತೆ ಆಧುನಿಕತೆಯ ಸ್ಪರ್ಶವನ್ನು ನೀಡಿ ಜೋರು ಜೋರಾದ ಅಬ್ಬರದ ಡಿಜೆ ಶಬ್ಧದೊಂದಿಗೆ ಕುಣಿದು ಸಂಭ್ರಮಿಸಲು ಅನುಮತಿ ನೀಡಬೇಕು ಎಂಬ ಬೇಡಿಕೆಯೂ ಬಂದಿತ್ತು. ಹೀಗೆ ಪರ ಮತ್ತು ವಿರೋಧಗಳನ್ನು ಆಲಿಸಿದ ಅಲ್ಲಿನ ಬಾಬಾ ಮಹಾ ಸ್ಮಶಾನನಾಥ ಸೇವಾ ಸಮಿತಿಯವರು ಸ್ಥಳೀಯ ಧಾರ್ಮಿಕ ಮುಖಂಡರ ಸಭೆಯನ್ನು ಕರೆದು, ಫಾಲ್ಗುಣ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಎಂದಿನಂತೆ ಸಾಂಪ್ರದಾಯಿಕವಾಗಿ ಕಾಶಿಯ ವಿಶ್ವನಾಥನ ದೇಗುಲದಲ್ಲಿ ಪೂಜೆ ಪುನಸ್ಕಾರಗಳು ಮತ್ತು ಶೋಭಾಯಾತ್ರೆಯು ನಡೆದು ಮಾರನೆಯ ದಿನ ಮಸಾನ್ ಹೋಳಿಯನ್ನು ಯಾವುದೇ ಆಧುನಿಕತೆಯ ಸ್ಪರ್ಶ ಇಲ್ಲದೇ ಹಳೆಯ ಸಾಂಪ್ರದಾಯಿಕ ಶೈಲಿಯಲ್ಲಿಯೇ ಆಚರಿಸಬೇಕು ಎಂಬ ತೀರ್ಮಾನಿಸಿದ ನಂತರ ಮಸಾನ್ ಹೋಲಿ ನಿರ್ವಿಘ್ನವಾಗಿ ನಡೆಯುತ್ತಲಿದೆ.
ಮಸಾನ್ ಹೋಳಿಯಲ್ಲಿ ಪಾಲ್ಗೊಳ್ಳಲು ಆ ದಿನ ಕಾಶಿಗೆ ಲಕ್ಷಾಂತರ ಭಕ್ತರು ಆಗಮಿಸುವ ಕಾರಣ, ಉತ್ತರ ಪ್ರದೇಶದ ಯೋಗಿ ಸರ್ಕಾರ ಮಣಿಕರ್ಣಿಕಾ ಘಾಟ್ ಮತ್ತು ಹರಿಶ್ಚಂದ್ರ ಘಾಟ್ ಸುತ್ತ ಮುತ್ತಲೂ ಬಿಗಿಭದ್ರತೆ ಒದಗಿಸುವ ಮೂಲಕ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಕಟಿ ಬದ್ಧರಾಗಿರುವ ಕಾರಣ, ಅಲ್ಲಿ ನೆರದ ಭಕ್ತರಲ್ಲಿನ ಸಂತೋಷವನ್ನು ವರ್ಣಿಸುವುದಕ್ಕಿಂತಲೂ ಸಮಯ ಮಾಡಿಕೊಂಡು ಒಮ್ಮೆ ಆ ವಿಭಿನ್ನ ಮತ್ತು ಅಷ್ಟೇ ವೈಶಿಷ್ಟ್ಯ ಪೂರ್ಣ ಹಬ್ಬದಲ್ಲಿ ಭಾಗಿಗಳಾಗಿಯೇ ಅನುಭವಿಸಬೇಕು.
ದೇಶದಲ್ಲಿ ಬರ್ಸಾನಾ ಹೋಳಿ, ಲಾಠ್ಮಾರ್ ಹೋಳಿ ಮತ್ತಿತರ ವಿಶೇಷ ಹೋಳಿ ಆಚರಣೆಗಳು ನಡೆಯುತ್ತವಾದರೂ, ಕಾಶಿಯ ಮಸಾನ್ ಹೋಳಿ ಅತ್ಯಂತ ವಿಶಿಷ್ಟವಾಗಿದ್ದು ಅಲ್ಲಿನ ಚಿತೆಯಿಂದ ಹೊರಬಿದ್ದ ಭಸ್ಮ ಮತ್ತು ಗುಲಾಬಿ ಪುಡಿಯನ್ನು (ಗುಲಾಲ್) ಬೆರೆಸಿ ಆಚರಿಸಲೆಂದೇ ಲಕ್ಷಾಂತರ ಭಕ್ತಾದಿಗಳು ಒಂದೆಡೆ ಸೇರುವುದನ್ನು ನೋಡುವುದಕ್ಕೇ ಬಲು ಆನಂದ ನೀಡುತ್ತದೆ. ಅವರವರ ಭಾವಕ್ಕೆ ಅವರ ಭಕುತಿ ಎನ್ನುವಂತೆ, ವಿವಿಧ ಆಚರಣೆಗಳು ವಿಭಿನ್ನವಾಗಿದ್ದರೂ ಅದರ ಹಿಂದೆ ಸನಾತನ ಧರ್ಮವನ್ನು ಮೆರೆಸುವ ಮೂಲಕ ಉಳಿಸುವ ಆಶಾಭಾವನೆ ಇರುವ ಕಾರಣ, ಅದನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾ ಅದನ್ನು ಹೆಚ್ಚಿನ ಜನರಿಗೆ ತಲುಪಿಸುವ ಜವಾಬ್ಧಾರಿ ನಮ್ಮ ಮತ್ತು ನಿಮ್ಮಮೇಲೆಯೇ ಇದೇ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಮಂಜುಶ್ರೀ