ಕನ್ಯಾದಾನ ಎಂಬುದು ಮರೀಚಿಕೆ ಆಗಲಿದೆಯೇ?

ಸನಾತದ ಹಿಂದೂ ಧರ್ಮದಲ್ಲಿ ಮದುವೆ ಎಂದರೆ ಸಡಗರ ಸಂಭ್ರಮದ ಕಾರ್ಯಕ್ರಮ. ಅದರಲ್ಲೂ ಹೆಣ್ಣಿನ ಕಡೆಯವರಾದರೂ ಮತ್ತಷ್ಟೂ ಜವಾಬ್ಧಾರಿ  ಇರುತ್ತದೆ. ಒಮ್ಮೆ ಹೆಣ್ಣು ಮತ್ತು ಗಂಡು ನೋಡಿ ಒಪ್ಪಿಕೊಂಡ ನಂತರ ಎರಡೂ ಮನೆಯವರು ಪರಸ್ಪರ ತಾಂಬೂಲ ಬದಲಿಕೊಂಡು ವಿವಾಹ ದಿನವನ್ನು ನಿಶ್ಚಿತಾರ್ಥ ದಿನದಂದು ನಿಶ್ಚಯಿಸಿದ ನಂತರ, ಚಪ್ಪರ ಪೂಜೆ, ಹಿರಿಯರನ್ನು ನೆನೆಯುವ ನಾಂದಿ, ಅರಿಶಿಣ ಶಾಸ್ತ್ರ, ಕಾಶೀ ಯಾತ್ರೆ, ಅಂತರಪಟ, ಜೀರಿಗೆ ಧಾರಣೆ, ಕನ್ಯಾದಾನದ ಮೂಲಕ ಧಾರೆ, ಮಾಂಗಲ್ಯ ಧಾರಣೆ ಅಂತಿಮವಾಗಿ ಹೆಣ್ಣು ಒಪ್ಪಿಸಿಕೊಡುವ ಮೂಲಕ ವಿವಾಹ ಸಂಪೂರ್ಣವಾಗುತ್ತದೆ.

 

ಕನ್ಯಾದಾನ ಎಂಬ ಪದವು ಎರಡು ಪದಗಳ ಕೊಂಡಿಯಾಗಿದೆ. ಕನ್ಯಾ, ಅಂದರೆ ಹುಡುಗಿ, ದಾನ ಎಂದರೆ ಧಾರೆ ಎರೆಯುವುದು. ಸನಾತನ ಸಂಪ್ರದಾಯಗಳ ಪ್ರಕಾರ, ವರನು ವಿಷ್ಣುವಿನ ಅವತಾರವಾದರೆ, ವಧು ಮಹಾಲಕ್ಷ್ಮಿಯ ಅವತಾರವಾಗಿರುತ್ತಾಳೆ. ಅಷ್ಟು ವರ್ಷಗಳ ಕಾಲ ಹೊತ್ತು ಹೆತ್ತು ಸಾಕಿ ಸಲಹಿದ ಮಗಳನ್ನು ತಾವು ಅಳೆದು ತೂಗಿ ಹುಡುಗನ ಮನೆತನ, ಕುಲಾ ಗೋತ್ರ ಎಲ್ಲವನ್ನು ವಿಚಾರಿಸಿ ನಂತರ ಶಾಸ್ತ್ರೋಕ್ತವಾಗಿ ಲಗ್ನವನ್ನು ನೋಡಿ ಬಂಧು ಮಿತ್ರರ ಸಮ್ಮುಖದಲ್ಲಿ ಮಧುಮಗನ ಕೈಯಲ್ಲಿ ತನ್ನ ಮಗಳನ್ನು ಇತ್ತು ಗಂಗಾ ಜಲದ ಸಾಕ್ಷಿಯಾಗಿ ಪುರೋಹಿತರ  ಸುಲಗ್ನಾ ಸಾವಧಾನಃ, ಸುಮುಹೂರ್ತ ಸಾವಧಾನಃ, ಲಕ್ಷ್ಮೀನಾರಾಯಣ ಧ್ಯಾನ…. ಸಾವಧಾನ: ಎನ್ನುವ ಮಂತ್ರದೊಂದಿಗೆ ತನ್ನ ಮಗಳನ್ನು ಧಾರೆ ಎರೆದು ಕೊಡುವ ಮೂಲಕ ಆಕೆಯ ಸಕಲ ಜವಾಬ್ದಾರಿಯನ್ನು ಅಳಿಯನಿಗೆ ವಹಿಸಿಕೊಡುತ್ತಾರೆ. ಇಷ್ಟು ವರ್ಷ ಗಿಣಿಸಾಕಿದಂತೆ ಸಾಕಿ ಸಲಹಿ ದೊಡ್ಡವಳನ್ನಾಗಿ ಮಾಡಿದ್ದೇವೆ. ನಮ್ಮ ಮನೆಯ ಮಹಾಲಕ್ಷ್ಮಿಯು ಇನ್ನು ಮುಂದೆ ನಿಮ್ಮ ಎಲ್ಲಾ ಕಷ್ಟ ಸುಖದ ಕಾಲದಲ್ಲಿಯೂ ಜೊತೆಗಿದ್ದು ನಿಮ್ಮ ಮನೆಯ ಘನತೆ ಗೌರವನ್ನು ಕಾಪಾಡುವ ಜೊತೆಗೆ ನಿಮ್ಮ ವಂಶೋದ್ಧಾರದ ಜವಾಬ್ಧಾರಿಯನ್ನೂ ಹೊರಯವ ಮೂಲಕ ನಿಮ್ಮ ಮನೆಯ ನಂದಾದೀಪವಾಗಲಿ. ಹಾಗಾಗಿ ನೀವು ಆಕೆಯನ್ನು ಜೋಪಾನವಾಗಿ ನೋಡಿಕೊಳ್ಳಿ ಎಂಬುದೇ ಈ ಕನ್ಯಾದಾನದ ಹಿಂದಿರುವ ಮಹತ್ವವಾಗಿದೆ. ಹೀಗೆ ಧಾರೆ ಎರೆದು ಕೊಡುವ ಮೂಲಕ, ವರ ಮತ್ತು ವಧುವಿನ ಬಾಂಧವ್ಯವನ್ನು ಇದು ಗಟ್ಟಿಗೊಳಿಸುವುದರ ಜೊತೆಗೆ, ಎರಡೂ ಮನೆಯ ಸಂಬಂಧವನ್ನು ಬೆಳಸುತ್ತದೆ.

kan3

ಅದೇ ರೀತಿ ತಮ್ಮ ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡುವಾಗ, ಮಗಳೇ ಇಷ್ಟು ದಿನ ನಮ್ಮ ಮನೆಯಲ್ಲಿ ಏನೇ ಮಾಡಿದರೂ ತಂದೆ ತಾಯಿಗಳಾಗಿ ಸಹಿಸಿಕೊಂಡು ಹೋಗುತ್ತಿದ್ದಲ್ಲದೇ, ನಿನ್ನೆಲ್ಲಾ ತಪ್ಪನ್ನು ಕ್ಷಮಿಸಿ ಪ್ರೀತಿ ಮಾಡುತ್ತಿದ್ದೆವು. ಇನ್ನು ಮುಂದೆ ನೀನು ನಿಮ್ಮ ಅತ್ತೆ ಮತ್ತು ಮಾವನಲ್ಲೇ ತಂದೆ ತಾಯಿಯರನ್ನು ಕಾಣುತ್ತಾ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಲ್ಲದೇ ಗಂಡನ ಸುಖಃ ದುಃಖಗಳಲ್ಲಿ ಅರ್ಧಾಂಗಿಯಾಗಿ ಕೊಟ್ಟ ಮನೆಗೂ ಹೋದ ಮನೆಗೂ ಗೌರವನ್ನು ತರಬೇಕೆಂದು ತಿಳಿ ಹೇಳಿ ಕಳುಹಿಸಿಕೊಡುತ್ತಾರೆ.

.

ಹಾಗಾಗಿಯೇ ಒಂದು ಗಂಡಿಗೆ ಒಂದು ಹೆಣ್ಣು ಎಂದು ಬ್ರಹ್ಮ ಸೃಷ್ಟಿಸಿ  ಈ ಭೂಮಿಗೆ ಕಳುಹಿಸಿರುತ್ತಾನೆ. ಈ ವಧು ವರಾನ್ವೇಷಣೆ ಎಂಬುದೆಲ್ಲವೂ ಒಂದು ರೀತಿಯ ಆಚರಣೆ ಎಂದೇ ಎಲ್ಲರೂ ಭಾವಿಸುತ್ತಾರೆ. ಹೀಗೆ  ಒಂದು ಗಂಡಿಗೆ ಒಂದು ಹೆಣ್ಣು ಎಂಬ ನಿಯಮವಿದ್ದರೂ ಇತ್ತೀಚೆಗೆ ಭಾರತದಲ್ಲಿ ಗಂಡುಗಳಿಗೆ ಹೆಣ್ಣು ಮಕ್ಕಳನ್ನು ಹುಡುಕುವುದೇ ಒಂದು ಹರಸಾಹಸವಾಗಿರುವುದು ವಿಪರ್ಯಾಸವೇ ಸರಿ.  ಈ ಮೊದಲು ಹೆಣ್ಣು ಮಕ್ಕಳೆಂದರೆ ವ್ಯಯ ಮತ್ತು ಗಂಡು ಮಕ್ಕಳೇ ಕುಟುಂಬದ ಆಧಾರ ಮತ್ತು ಅದಾಯ ಎಂದು ಭಾವಿಸಿದ್ದ ಪರಿಣಾಮ ಗಂಡು ಮತ್ತು ಹೆಣ್ಣುಗಳ ಲಿಂಗ ಅನುಪಾತದ ಅಂತರ ಬಹಳ ಅಂತರವಿತ್ತು. ಆದರೆ ಇತ್ತೀಚೆಗೆ ಸರ್ಕಾರಗಳು ಬಹಳ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ಬೇಟಿ ಬಚಾವ್, ಬೇಟಿ ಪಡಾವ್ ಮುಂತಾದ ಯೋಜನೆಗಳ ಮೂಲಕ ಹೆಣ್ಣುಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, 2020-21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS-5) ಪ್ರಕಾರ, ಭಾರತದ ಲಿಂಗ ಅನುಪಾತವು ಗ್ರಾಮೀಣ ಪ್ರದೇಶಗಳಲ್ಲಿ, 1000 ಪುರುಷರಿಗೆ 1020 ಮಹಿಳೆಯರಿದ್ದರೆ, ನಗರ ಪ್ರದೇಶಗಳಲ್ಲಿ,  1000 ಪುರುಷರಿಗೆ 985 ಮಹಿಳೆಯರಿದ್ದು ಒಂದು ರೀತಿಯ ಸಮಾನ ಅನುಪಾತವಿದೆ.

2025ರ  ಫೆಬ್ರವರಿ 1 ರಂದು ಜನಪ್ರಿಯ ಲೋಕಮತ್ ಪತ್ರಿಕೆಯು ಮಾರ್ಗನ್ ಸ್ಟ್ಯಾನ್ಲಿ ಎಂಬ ಸಂಸ್ಥೆಯು ನಡೆಸಿದ ಸಮೀಕ್ಷೆಯನ್ನು ಪ್ರಕಟಿಸಿದ್ದು ಅದರ ಪ್ರಕಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಂದಿನ ಐದಾರು ವರ್ಷಗಳಲ್ಲಿ ಅರ್ಥಾತ್  2030ರ ಹೊತ್ತಿಗೆ ವಿಶ್ವದ 45% ಹುಡುಗಿಯರು ಅವಿವಾಹಿತರಾಗಿಯೇ ಉಳಿಯುತ್ತಾರೆ ಎಂದು ಹೇಳಿರುವುದು ಕನ್ಯಾ ಪಿತೃಗಳು ಅದರಲ್ಲೂ ಭಾರತೀಯ ಹೆಣ್ಣು ಮಕ್ಕಳ ಪೋಷಕರಿಗೆ ಆತಂತವನ್ನುಂಟು ಮಾಡಿದೆ ಎಂದರೂ ತಪ್ಪಾಗದು.

ಈ ರೀತಿಯ ಸಮಸ್ಯೆಗಳಿಗೆ ಕಾರಣ ಏನು ಎಂಬುದನ್ನು ಹುಡುಕುತ್ತಾ ಹೋದಾಗ ಸಿಕ್ಕ ಅಂಕಿ ಅಂಶಗಳು ನಿಜಕ್ಕೂ  ಅಚ್ಚರಿಯನ್ನುಂಟು ಮಾಡುತ್ತಿದೆ.

  • ಈ ಹಿಂದೆ ಹೆಣ್ಣುಮಕ್ಕಳು ಮದುವೆಯಾಗಿ ಗಂಡನ ಮನೆಗೆ ಬಂದ ನಂತರ ಪತಿಯೇ ಪರಮೇಶ್ವರ ಎಂದು ತಿಳಿದು ಆತ  ಮತ್ತು ಆತನ ಮನೆಯವರು ಒಳ್ಳೆಯವನಾಗಿರಲೀ, ಕೆಟ್ಟವನಾಗಿರಲೀ. ತನ್ನನ್ನು ಸರಿಯಾಗಿ ನೋಡಿಕೊಳ್ಳಲ್ಲಿ, ನೋಡಿ ಕೊಳ್ಳದೇ ಇರಲಿ ಎಲ್ಲವನ್ನೂ ಸಹಿಸಿಕೊಳ್ಳುತ್ತಾ ತನ್ನ ಪಾಡಿಗೆ ತಾನು ಸಂಸಾರ ನಡೆಸಿಕೊಂಡು ಹೋಗುತ್ತಿದ್ದಳು.  ಒಂದು ಶತಮಾನಕ್ಕೆ ಮುಂಚೆ ಪತಿ ನಿಧನರಾದಾಗ, ಆತನೊಂದಿಗೆ ಜೀವಂತ ಪತ್ನಿಯೂ ಸಹಾ ಸಹಾಗಮನ ಮಾಡುವ ಪದ್ದತಿಯೂ ರೂಡಿಯಲ್ಲಿತ್ತು. ಕಾಲಾನಂತರ ಹೆಣ್ಣು ಮತ್ತು ಗಂಡುಗಳ ನಡುವಿನ ಸಮಾನತೆಗೆ ಸಮಾಜ ಒತ್ತು ಕೊಟ್ಟ ಪರಿಣಾಮ  ಮಹಿಳೆಯರು ಇಂದು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹೀಗೆ ಎಲ್ಲಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಅನೇಕ ಸವಾಲುಗಳು, ಸಮಸ್ಯೆಗಳನ್ನು ಮೆಟ್ಟಿ ನಿಂತು ತಾನೂ ಸಹಾ ಸ್ವಾವಲಂಬಿಯಾಗಿ ಜೀವನ ನಡೆಸಲು ಸಾಧ್ಯ ಎಂಬುದನ್ನು ತೋರಿಸಿದ್ದಾಳೆ. ದಾಂಪತ್ಯದ ಕಲಹಗಳು, ಕಟ್ಟುಪಾಡುಗಳಿಂದಾಗಿ ಉಸಿರು ಕಟ್ಟಿಸುವಂತಹ  ಬಂಧನದಿಂದ ಹೊರಬಂದು ಏಕಾಂಗಿಯಾಗಿ ಜೀವನ ನಡೆಸುವಷ್ಟರ ಮಟ್ಟಿಗೆ ಸಧೃಢಳಾಗಿದ್ದಾಳೆ. ತನ್ನ ಸಂಸಾರಿಕ ಜೀವನದಿಂದ ದೂರ ಉಳಿದು ಕೇವಲ  ತನ್ನ ಬದುಕನ್ನಲ್ಲದೇ ತನ್ನ ಮಕ್ಕಳ ಭವಿಷ್ಯವನ್ನೂ ಸ್ವತಂತ್ರವಾಗಿ ಕಟ್ಟಿಕೊಡುವಷ್ಟರ ಮಟ್ಟಿಗೆ ಸ್ವಾವಲಂಭಿಯಾಗಿರುವುದು ನಿಜಕ್ಕೂ ಮೆಚ್ಚಬೇಕಾದ ಅಂಶವಾಗಿದೆ.
  • ಇದು ಇಷ್ಟಕ್ಕೇ ಸೀಮಿತವಾಗಿದ್ದರೆ ಸಮಾಜದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತಿತ್ತು. ಅತಿಯಾದರೇ ಅಮೃತವೂ ವಿಷ ಎನ್ನುವಂತೆ ಪುರುಷರಂತೆ ಮಹಿಳೆಯರೂ ಎಲ್ಲಾ ರೀತಿಯಲ್ಲೂ  ಸಮಾನವಾಗಿ ಬೆಳೆಯಬೇಕು ಎಂಬ ಧಾವಂತದಲ್ಲಿ, ತಮ್ಮ ಜನನವೂ ಸಹ ತಂದೆ ಮತ್ತು ತಾಯಿಯರ ಪವಿತ್ರ ಸಂಬಂಧ ಮತ್ತು ಅನುಬಂಧದಿಂದಲೇ ಆಗಿದೆ ಎಂಬ ಅಂಶವನ್ನೂ ಮರೆತು ಪುರುಷ ದ್ವೇಷಿಗಳಾಗಿ ಬದಲಾಗುತ್ತಿರುವುದೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ,
  • ಪ್ರಸ್ತುತ ಉನ್ನತ ಶಿಕ್ಷಣ ಪಡೆದ ಹುಡುಗಿಯರ ಶೇಕಡಾವಾರು ಹೆಚ್ಚಾಗಿದ್ದು, ಹೆಣ್ಣು ಮಕ್ಕಳು ತಮ್ಮ ವೃತ್ತಿಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ.
  • ಹೆಣ್ಣು ಮನೆಯ ಕಣ್ಣು ಎಂಬುದೆಲ್ಲವೂ ಹಳೆಯ ಮಾತುಗಳಾಗಿದ್ದು,  ಬಹುತೇಕ ಹೆಣ್ಣು ಮಕ್ಕಳಿಗೆ ಪ್ರಗತಿ ಎಂದರೆ ಅದು ಕೇವಲ ತನ್ನ ವಯಕ್ತಿಕ ಪ್ರಗತಿ ಎನ್ನುವ ಮನಸ್ಥಿತಿ ಹೊಂದಿದ್ದು, ತಾನು ಯಾರನ್ನೂ ಅವಲಂಬಿಸ ಬೇಕಿಲ್ಲಾ ಎಂಬ ಉದ್ಧಟತನ ಮೂಡಿದೆ.
  • ತಮಗೆ ಸ್ವಾತಂತ್ರ್ಯ ಬೇಕು, ತನ್ನ ಬದುಕಿನ ಕುರಿತಾಗಿ ತಾನೇ ನಿರ್ಧಾರ ತೆಗೆದುಕೊಳ್ಳುವಷ್ಟು ಸಧೃಢಳಗಬೇಕು ಎಂಬ ಹಪಾಹಪಿಯಲ್ಲಿ ಸ್ವಾತಂತ್ರ್ಯಎಂಬುದು ಅವಳಿಗೇ ಅರಿವಿಲ್ಲದಂತೆ ಸ್ವೇಚ್ಛಾಚಾರಕ್ಕೆ ಎಣೆ ಮಾಡಿಕೊಡುತ್ತಿದೆ.
  • ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಎಂಬ ಸಂಬಂಧದ ಮೂಲಕ ಸತಿ ಪತಿಗಳಾಗಿ ಸುಂದರ ದಾಂಪತ್ಯ ಜೀವನ ಅವರಿಗೆ ಬಂಧನ ಎನಿಸುತ್ತಿದ್ದು, ತಾವುದೇ ಬಂಧನವಿಲ್ಲದ ಅನುಕುಲ ಸಿಂಧು ರೀತಿಯ Living together ಕಡೆಗೆ ಗಮನ ಹರಿಸುತ್ತಿದ್ದಾರೆ
  • ಹೆಚ್ಚು ಹೆಚ್ಚು ಪದವಿಗಳನ್ನು ಪಡೆದು. ದೊಡ್ಡ ಕಂಪನಿಗಳಲ್ಲಿ ಉನ್ನತ ಹುದ್ದೆಯನ್ನು ಗಿಟ್ಟಿಸಿಕೊಂಡು ಕೈತುಂಬ ಸಂಬಳ ಪಡೆಯುವ ಕಡೆಗೆ ಗಮನ ಹರಿಸುತ್ತಿರುವ ಕಾರಣ ಹುಡುಗಿಯರ ಮದುವೆಯ ವಯಸ್ಸೂ ಮೀರಿ ಹೋಗಿ  ಅವರಿಗೆ ಮದುವೆ, ಗಂಡ, ಮಕ್ಕಳು, ಸಂಸಾರ ಎನ್ನುವ ಕಡೆ ನಿರಾಸಕ್ತಿ ಮೂಡತೊಡಗಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ.
  • ಮದುವೆ ಎಂದರೆ ನಂಬಿಕೆ. ಆದರೆ ಕೆಲವೊಮ್ಮೆ ಹೆಣ್ಣು ಮಕ್ಕಳ ಸಂಬಳ ಮದುವೆ ಆಗಲು ಬಯಸುತ್ತಿರುವ ಗಂಡಿಗಿಂತಲೂ ಹೆಚ್ಚಾಗಿರುವ ಕಾರಣ, ಹುಡುಗಿಯರು ತಮಗಿಂತಲೂ ಕಡಿಮೆ ಸಂಬಳ ತೆಗೆದುಕೊಳ್ಳುವ ಹುಡುಗನನ್ನು ಒಪ್ಪಿಕೊಳ್ಳುವುದೇ ಇಲ್ಲಾ. ಆಗ ಹುಡುಗಿ ಮದುವೆ ಆಗುತ್ತಿರುವುದು ಹುಡುಗನನನ್ನೋ ಇಲ್ಲವೇ ಅವನ ಸಂಬಳವನ್ನೋ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಹುಡುಗ ಯೋಗ್ಯ ಮತ್ತು ವಿದ್ಯಾವಂತನಾಗಿದ್ದರೆ, ಮುಂದೆ ಖಂಡಿತವಾಗಿಯೂ ಹೆಚ್ಚಿನ ಸಂಬಳ ಬಂದೇ ಬರುತ್ತದೆ ಎನ್ನುವ ನಂಬಿಕೆ ಇರಬೇಕು.
  • ಇನ್ನೂ ಕೆಲವು ಹೆಣ್ಣು ಮಕ್ಕಳು ತಮ್ಮ ದೇಹದ ಸೌಂದರ್ಯ ಶಾಶ್ವತ  ಎಂದು ಭಾವಿಸಿದ್ದು, ಮದುವೆಯಾಗಿ ಮಕ್ಕಳನ್ನು ಹೆತ್ತು ಆವರ ಲಾಲನೆ ಪೋಷಣೆ ಮಾಡುವುದರಿಂದ ತನ್ನ  ಸೌಂದರ್ಯ  ಹಾಳಾಗುತ್ತದೆ ಎಂಬ ಭ್ರಮೆಯಿಂದ ಮದುವೆಯನ್ನೇ ಧಿಕ್ಕರಿಸುತ್ತಿದ್ದಾರೆ.
  • ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಎನ್ನುವುದು ಪ್ರಾಕೃತಿಕ ಸೃಷ್ಟಿಯಾಗಿದ್ದು, ತಾಂತ್ರಿಕವಾಗಿ ಮತ್ತು ವೈಜ್ಞಾನಿಕವಾಗಿ ಎಷ್ಟೇ ಬೆಳೆದಿದ್ದರೂ, ಸಮಾಜ ಸುಸ್ಥಿರವಾಗಿ ಮುಂದುವರೆದುಕೊಂಡು ಹೋಗಲು ಹೆಣ್ಣು ಮತ್ತು ಗಂಡುಗಳು ಸಮಾನರೀತಿಯಲ್ಲಿ ಕಾರಣೀಭೂತರಾಗುತ್ತಾರೆ ಎಂಬ ಸಾಮಾನ್ಯ ಪರಿಜ್ಞಾನವನ್ನು ಕುಟುಂಬದ ಹಿರಿಯರು ಪ್ರತಿಯೊಂದು ಹಬ್ಬ ಹರಿದಿನಗಳಲ್ಲಿ ಒಟ್ಟಿಗೆ ಸೇರುವಾಗ ತಿಳಿಸಿ ಕೊಡುವ ಸತ್ ಸಂಪ್ರದಾಯವಿತ್ತು.  ಈ ಹಿಂದೆ ಶಿಕ್ಷಣದಲ್ಲೂ ನೈತಿಕ ವಿಜ್ಞಾನ (moral science) ಎಂಬ ವಿಷಯವಿದ್ದು ಅದರ ಮೂಲಕ  ಈ ಎಲ್ಲಾ ವಿಷಯಗಳನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡಲಾಗುತ್ತಿತ್ತು. ಅದೇ ರೀತಿ ಹೆಣ್ಣು ಮತ್ತು ಗಂಡು ಎಂಬ ಬೇಧವಿಲ್ಲದೇ ಸಹ ಶಿಕ್ಷಣವನ್ನು (co-edcation) ನೀಡಲಾಗುತ್ತಿತ್ತು.

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ | ಯತ್ರೈತಾಸ್ತು ನ ಪೂಜಂತೇ ಸರ್ವಾಸ್ತತ್ರಾ ಫಲಾಃ ಕ್ರಿಯಾಃ’ || ಎಲ್ಲಿ ಸ್ತ್ರೀಯರಿಗೆ ಗೌರವ ಸನ್ಮಾನಗಳು ದೊರೆಯುತ್ತವೆಯೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ. ಯಾವ ಮನೆಯಲ್ಲಿ ಸ್ತ್ರೀಯರು ಗೌರವಿಸಲ್ಪಡುವುದಿಲ್ಲವೋ ಅಲ್ಲಿ ಮಾಡುವ ಎಲ್ಲ ಯಜ್ಞ-ಪೂಜೆಗಳು ನಿಷ್ಫಲವಾಗುತ್ತವೆ ! ಎಂಬುದನ್ನು ಸ್ಪಷ್ಟವಾಗಿ ನಮ್ಮ ಸಂಪ್ರದಾಯದಲ್ಲಿ ತಿಳಿಸಿಕೊಡುವ ಮೂಲಕ ಹೆಣ್ಣು ನಮಗೆಂದೂ ಭೋಗದ ವಸ್ತುವಲ್ಲಾ. ಹೆಣ್ಣು ಸಂಸಾರದ ಕಣ್ಣು  ಎಂಬುದನ್ನು ಕಾಲ ಕಾಲಕ್ಕೆ ಮನದಟ್ಟು ಮಾಡಿಕೊಡಲಾಗುತ್ತಿತ್ತು.

ಜೀವನ ಎಂದರೆ ಕೇವಲ ಓದು, ಪದವಿ, ಹಣ ಗಳಿಸುವುದು ತನ್ಮೂಲಕ ಮೋಜು ಮಸ್ತಿ ಮಾಡುವುದಷ್ಟೇ ಅಲ್ಲಾ ಎನ್ನುವುದನ್ನು ನಮ್ಮ ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ  ಹೆಣ್ಣು ಮಕ್ಕಳಿಗೆ ತಿಳಿ ಹೇಳ ಬೇಕು.  ಪ್ರತಿಯೊಂದು ಕಾರ್ಯಕ್ಕೂ ಅದರದ್ದೇ ಆದ ವಯೋಮಾನ ಮತ್ತು ಕಾಲಮಾನವಿರುತ್ತದೆ. 6-22ರ ವರೆಗೆ ನಮ್ಮ ಮೈ ಮನಸ್ಸು  ಎಲ್ಲವನ್ನೂ ಸ್ವೀಕರಿಸುವ ಮನಸ್ಥಿತಿಯಲ್ಲಿರುವ ಕಾರಣ, ಈ ಸಮಯದಲ್ಲಿ ಹೆಚ್ಚು ಹೆಚ್ಚು ಜ್ಞಾನ ಸಂಪಾದನೆ ಮಾಡಬೇಕು. ನಂತರ ಹೆಣ್ಣು ಮಕ್ಕಳು 22 ರಿಂದ 25 ವರ್ಷದೊಳಗೆ ಮತ್ತು ಗಂಡು ಮಕ್ಕಳು 26-30 ವಯಸ್ಸಿನೊಳಗೆ ಮದುವೆಯಾಗುವಂತೆ ನೋಡಿಕೊಳ್ಳಬೇಕು.  ಹೀಗೆ ಆದಾಗ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾಜ  ಸಂಸಾರ, ಸಂಪ್ರದಾಯಗಳ  ಎಲ್ಲವೂ ಆಸಕ್ತಿದಾಯಕವೇ ಆಗಿರುತ್ತದೆ. ಅದಕ್ಕೆ ತಕ್ಕಂತೆ ನಮ್ಮ ದೇಹವೂ ಸಹಕರಿಸುತ್ತದೆ.  ಈ ಮೂಲಕ ಕನ್ಯಾದಾನ ಎಂಬುದು ಮರೀಚಿಕೆಯಾಗದೇ, ಕನ್ಯಾದಾನ ಮಾಡಿಕೊಡುವ ಮೂಲಕ ನಮ್ಮ ಏಳೇಳು ತಲೆ ಮಾರಿಗೆ ಆಗುವಷ್ಟು ಪುಣ್ಯಫಲಗಳನ್ನು ಎಲ್ಲರೂ ಗಳಿಸಬಹುದಾಗಿದೆ.

ಇವೆಲ್ಲದರ ನಡುವೆ ನಾವು ಸೇವಿಸುವ ಆಹಾರ ಮತ್ತು ಮತ್ತು ನಾವು ವಾಸಿರುವ ವಾತಾವಣವೂ ಸಹಾ ನಮ್ಮ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಹಾಗಾಗಿಯೇ ನಮ್ಮ ಹಿರಿಯರು ಊಟ ಬಲ್ಲವನಿಗೆ ರೋಗವಿಲ್ಲಾ. ಮಾತು ಬಲ್ಲವನಿಗೆ ಜಗಳವಿಲ್ಲಾ ಎಂಬ ಸುಂದರ ಗಾದೆಮಾತನ್ನು ಹೇಳಿದ್ದರು. ದೇಹಕ್ಕೆ ಮಾರಕವಾದ ಜಂಕ್ ಆಹಾರದ ಬದಲು ಸಾತ್ವಿಕ ಆಹಾರ ಸೇವಿಸುವ ಮೂಲಕ ಹೊಟ್ಟೆಯನ್ನು ತುಂಬಿಸಿಕೊಂಡರೆ, ನಿಯಮಿತವಾಗಿ ವ್ಯಾಯಾಮ, ಯೋಗ, ಧ್ಯಾನ ಮತ್ತು ಸತ್ಸಂಗಗಳ ಮೂಲಕ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಯನ್ನು  ಹೊಂದುವ ಮೂಲಕ ಸಮಾಜವನ್ನು ಸುಸ್ಥಿತಿಗೆ ಕೊಂಡೊಯ್ಯುವ ಗುರುತರ ಜವಾಬ್ಧಾರಿ ನಮ್ಮ ನಿಮ್ಮ ಮೇಲಿದೆ.

ಒಬ್ಬ ತಾಯಿಯ ಮಗನಾಗಿ, ಸಹೋದರಿಯ ಜೊತೆ ಬೆಳೆದ ಸಹೋದರನಾಗಿ, ಗೆಳತಿಯರ ಜೊತೆ ಆಡಿ ನಲಿದ ಗೆಳೆಯನಾಗಿ, ಸತಿಯೊಂದಿಗೆ ಪತಿಯಾಗಿ, ಎಲ್ಲದ್ದಕ್ಕಿಂತಲೂ ಹೆಚ್ಚಿಗೆ ಒಬ್ಬ ಹೆಣ್ಣು ಮಗಳ ಜವಾಬ್ಧಾರಿಯುತ ತಂದೆಯಾಗಿ  ಅತ್ಯಂತ ಕಾಳಜಿಯಿಂದ ಸಮಯ ಮಾಡಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಉದ್ದೇಶದಿಂದ ಈ ಲೇಖನ ಬರೆದಿದ್ದೇನೆಯೇ ಹೊರತು, ಖಂಡಿತವಾಗಿಯೂ ನಾನೆಂದೂ ಸ್ತ್ರೀ ದ್ವೇಷಿಯಲ್ಲಾ. ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಯಾವ ರೀತಿಯಾಗಿ ಗೌರವದಿಂದ ಕಾಣುತ್ತೇನೆ ಎಂಬುದನ್ನು ಈಗಾಗಲೇ ನನ್ನ   ಅಂಕಿತ ನಾಮಗಳಾದ ಉಮಾಸುತ, ಸೃಷ್ಟಿಕರ್ತ, ಮಂಜುಶ್ರೀ ಮೂಲಕ ಸಾಭೀತು ಪಡಿಸಿರುವುದನ್ನು ನೀವೆಲ್ಲರೂ ಗಮನಿಸಿದ್ದೀರಿ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಮಂಜುಶ್ರೀ

Leave a comment