ಐಪಿಎಲ್ ಭರಾಟೆ, RCB ವಿಜಯೋತ್ಸವದ ಸಮಯದಲ್ಲಿ ಕಾಲ್ತುಳಿತ, ಯಥಾ ಪ್ರಕಾರ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೇಸ್ ನಾಯಕರ ಆರೋಪಗಳ ನಡುವೆಯೇ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಮಂದಿರದಲ್ಲಿ, 2025ರ ಜೂನ್ 3ರ ಬೆಳಗ್ಗೆ 11.25ರಿಂದ 11.40ರಲ್ಲಿ ಉಡುಪಿಯ ಶ್ರೀ ಪೇಜಾವರ ಶ್ರೀಗಳ ಪೌರೋಹಿತ್ಯದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ಪ್ರಭು ಶ್ರೀರಾಮನ ಎರಡನೇ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಅದ್ದೂರಿಯಾಗಿ ಆಗಿ ಹೋದದ್ದೇ ಬಹಳಷ್ಟು ಜನರಿಗೆ ತಿಳಿಯದೇ ಹೋಗಿರುವುದು ವಿಪರ್ಯಾಸವೇ ಸರಿ.
2024ರ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಆದ ನಂತರವೂ ನಿರಂತರವಾಗಿ ಅಲ್ಲಿ ದೇವಾಲಯಗಳ ನಿರ್ಮಾಣದ ಕಾರ್ಯ ನಡೆಯುತ್ತಲಿದ್ದು, ಶ್ರೀ ರಾಮ ಜನ್ಮಭೂಮಿ ದೇವಸ್ಥಾನದ ಮೊದಲ ಮಹಡಿಯಲ್ಲಿನ ರಾಮ ದರ್ಬಾರ್ ಅನಾವರಣದಲ್ಲಿ ಶ್ರೀ ರಾಮ, ಸೀತಾ, ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಹನುಮರಾದಿಯಾಗಿ ಶ್ರೀ ರಾಮ ಪಟ್ಟಾಭಿಷೇಕದ ಅಮೃತಶಿಲೆಯಲ್ಲಿ ಕೆತ್ತಿರುವ ಸುಂದರ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ಮಾಡಲಾಗಿದೆ.
500 ವರ್ಷಗಳ ಸುದೀರ್ಘ ಹೋರಾಟದ ಬಳಿಕ ರಾಜಾ ರಾಮನನ್ನು ಅಯೋಧ್ಯೆಯ ಭವ್ಯ ರಾಮ ಮಂದಿರದ ಮೊದಲ ಮಹಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಕಾರ್ಯಕ್ರಮವೂ ಉತ್ಸಾಹ, ಭಕ್ತಿ ಮತ್ತು ಆಧ್ಯಾತ್ಮದಿಂದ ಕೂಡಿದ್ದ ಈ ಕಾರ್ಯಕ್ರಮವು ಗಂಗಾ ದಸರಾ ಪವಿತ್ರ ದಿನದಂದು ನಡೆದಿರುವುದು ಮತ್ತಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ ಎಂದು ಅಯೋಧ್ಯೆಯ ರಸಿಕ್ ನಿವಾಸ ದೇವಾಲಯದ ಪ್ರಧಾನ ಅರ್ಚಕ ಅನಿಲ್ ಮಿಶ್ರಾ ಅವರು ತಿಳಿಸಿದ್ದಾರೆ. ಹಿಂದೂ ಪುರಾಣಗಳ ಪ್ರಕಾರ, ಗಂಗಾ ದಸರಾದ ದಿನದಿಂದ ಭಗೀರಥನ ತಪಸ್ಸಿನ ಫಲವಾಗಿ ಗಂಗಾ ನದಿ ಶಿವನ ಜಡೆಯಿಂದ ಕೆಳಗೆ ಇಳಿದು ಬಂದ ದಿನವಾಗಿದ್ದು, ಇದನ್ನು ಪವಿತ್ರ ದಿನವಾಗಿ ಪರಿಗಣಿಸಲಾಗಿದೆ. ಗಂಗಾ ದಸರಾದ ದಿನದಂದು ಯಾವುದೇ ಪವಿತ್ರ ಕಾರ್ಯ ಮಾಡಿದರೂ ಅದು ಅನೇಕ ಪಟ್ಟು ಉತ್ತಮ ಫಲಿತಾಂಶ ನೀಡುತ್ತದೆ ಎನ್ನುವುದು ಅಯೋಧ್ಯೆ ಮೂಲದ ಜ್ಯೋತಿಷಿ ಪಂಡಿತ್ ಕಲ್ಕಿ ರಾಮ್ ಅವರ ಅಭಿಪ್ರಾಯವಾಗಿದ್ದು ಇದೇ ಕಾರಣದಿಂದಲೇ ರಾಜರಾಮನ ಪ್ರತಿಷ್ಟಾಪನೆಗೆ ರಾಮ ದೇಗುಲ ಟ್ರಸ್ಟ್ ಇದೇ ದಿನವನ್ನು ಆರಿಸಿಕೊಂಡಿದೆ. ರಾಮ ದೇಗುಲದ ಸಂಕೀರ್ಣದೊಳಗಿನ ರಾಮ ದರ್ಬಾರ್ ಮುಖ್ಯ ದೇಗುಲದಲ್ಲಿ 8 ಇತರೆ ದೇಗುಲಗಳ ಪ್ರತಿಷ್ಠಾಪನೆಯೂ ಸಹಾ ಇದರ ಜೊತೆ ನಡೆದಿದೆ ಎನ್ನಲಾಗಿದೆ.
2025ರ ಜೂನ್ 3 ಮಂಗಳವಾರ ದಿಂದ ಜೂನ್ 5 ಗುರುವಾರವಾರದ ವರೆಗೂ ಒಟ್ಟು ಮೂರು ದಿನಗಳ ಕಾಲ ಈ ಕಾರ್ಯಕ್ರಮವು ಬಹಳ ಅದ್ದೂರಿಯಿಂದ ಆಚರಣೆಗೊಂಡು ಸಮಾಪ್ತಿಗೊಂಡಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಮ ದರ್ಬಾರ್ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ಆಂಜನೇಯ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಲಾಗಿತ್ತು.
ಭಗವಾನ್ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯು ಮತ್ತೊಂದು ಅದ್ಭುತ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಈ ಭವ್ಯ ಮತ್ತು ದೈವಿಕ ರಾಮ ದರ್ಬಾರ್‌ನ ಈ ಪವಿತ್ರ ಸಂದರ್ಭವು ಎಲ್ಲಾ ರಾಮ ಭಕ್ತರನ್ನು ಭಕ್ತಿ ಮತ್ತು ಸಂತೋಷದಲ್ಲಿ ತೇಲಿಸಿದೆ. ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನು, ಎಲ್ಲಾ ದೇಶವಾಸಿಗಳಿಗೆ ಸಂತೋಷ, ಸಮೃದ್ಧಿ ಮತ್ತು ಆರೋಗ್ಯವನ್ನು ದಯಪಾಲಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿಯವರು ಟ್ವೀಟ್ ಮೂಲಕ ಸಕಲ ಆಸ್ತಿಕ ಬಂಧುಗಳಿಗೆ ತಿಳಿದ್ದಾರೆ.
ಈಗಾಗಲೇ ತಿಳಿದಿರುವಂತೆ ಶ್ರೀ ರಾಮ ಜನ್ಮಭೂಮಿ ಮಂದಿರವನ್ನು ಸಾಂಪ್ರದಾಯಿಕ ನಾಗರ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದ್ದು, ರಾಮ್ ದರ್ಬಾರ್‌ನಲ್ಲಿ 4.5 ಅಡಿ ಎತ್ತರದ ಮೂರ್ತಿಗಳನ್ನು ರಾಜಸ್ಥಾನದ ಜೈಪುರದಲ್ಲಿ ಬಿಳಿ ಅಮೃತಶಿಲೆಯಿಂದ ಕೆತ್ತಲಾಗಿದೆ ಈ ಮೊದಲೇ ತಿಳಿಸಿದಂತೆ ರಾಮ, ಸೀತಾ , ಲಕ್ಷ್ಮಣ, ಭರತ, ಶತ್ರುಘ್ನನ ಜೊತೆ ಆಂಜನೇಯನನ್ನು ಕೆತ್ತಲಾಗಿದೆ. ರಾಮನ ವಿಗ್ರಹವನ್ನು ಸಂಕೀರ್ಣವಾಗಿ ವಿನ್ಯಾಸಗೊಳಿಸಲಾದ ಕಿರೀಟಗಳು, ಆಭರಣಗಳಿಂದ ಕೂಡಿದ ಬೆಲ್ಟ್‌ಗಳು, ಕಸೂತಿ ಮಾಡಿದ ನಿಲುವಂಗಿಗಳು ಮತ್ತು ಜರಿ ಹಾಗೂ ಅಮೂಲ್ಯ ರತ್ನಾಭರಣಗಳಿಂದ ಕೂಡಿದ ಬಟ್ಟೆಗಳಿಂದ ಅಲಂಕರಿಸಲಾಗುತ್ತದೆ. ಈ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಸೀಮಿತ ಸಂಖ್ಯೆಯ ಭಕ್ತರಿಗೆ ಮಾತ್ರ ದೇವಾಲಯದ ಮೊದಲ ಮಹಡಿಗೆ ಪ್ರವೇಶವನ್ನು ನೀಡಲಾಗಿದ್ದು, ಎರಡನೇ ಮಹಡಿಯಲ್ಲಿ ರಾಮಾಯಣದ ಅತ್ಯಂತ ಹಳೆಯ ಆವೃತ್ತಿಯ ಪ್ರದರ್ಶನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಈ ಎಲ್ಲಾ ಪೂಜಾ ಕಾರ್ಯಗಳು ಸುಸೂತ್ರವಾಗಿ ನಡೆದ ನಂತರ ಸಕಲ ಭಕ್ತಾದಿಗಳಿಗೆ ಮುಕ್ತ ದರ್ಶನದ ಅವಕಾಶವನ್ನು ನೀಡಲಾಗುತ್ತದೆ.
ಮೂರು ದಿನಗಳ ಆಚರಣೆಗಳಿಗಾಗಿ ಅಯೋಧ್ಯೆಯಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಸಿಆರ್‌ಪಿಎಫ್, ಎಸ್‌ಎಸ್‌ಎಫ್ ಮತ್ತು ಪಿಎಸಿ ಸಿಬ್ಬಂದಿಯನ್ನು ಭದ್ರತಾ ಕರ್ತವ್ಯದಲ್ಲಿ ನಿಯೋಜಿಸಲಾಗಿತ್ತು. ಭಕ್ತರು ರಾಮಲಲ್ಲಾ ದರ್ಶನ ಮಾಡಿ ಪುನೀತರಾದರು. ಇನ್ನು ಪ್ರಾಣ ಪ್ರತಿಷ್ಠಾಪನೆಗಾಗಿ ಲಕ್ನೋದಿಂದ 62,000 ಪ್ರಸಾದ ಪೆಟ್ಟಿಗೆಗಳನ್ನು ಕೂಡ ತರಲಾಗಿತ್ತು. ರಾಮ ಮಂದಿರದ ಟ್ರಸ್ಟಿಗಳಲ್ಲಿ ಒಬ್ಬರಾದ ಶ್ರೀ ಅನಿಲ್ ಮಿಶ್ರಾ ಮಾತನಾಡಿ, ಎಲ್ಲಾ ಧಾರ್ಮಿಕ ಆಚರಣೆ ಮತ್ತು ವೈದಿಕ ಮಂತ್ರಘೋಷಗಳಿಂದಾಗಿ ಕಾರ್ಯಕ್ರಮ ನಡೆಸಲಾಗಿದ್ದು, ದೇಶದ ಎಲ್ಲಾ ಭಾಗದ ನುರಿತ ಬ್ರಾಹ್ಮಣರೂ ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆ 6.30ಕ್ಕೆ ಯಜ್ಞ ಮಂಟಪದಲ್ಲಿ ಪ್ರಾರ್ಥನೆಗಳೊಂದಿಗೆ ವಿವಿಧ ದೇವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ಕೆ ಚಾಲನೆ ದೊರೆಯಿತು. ನಂತರ, 9.30ಕ್ಕೆ ಹವನದ ನಂತರ ಏಕಕಾಲಕ್ಕೆ ಎಲ್ಲ ದೇವಸ್ಥಾನಗಳಲ್ಲಿ ಧಾರ್ಮಿಕ ವಿಧಿಗಳು ನಡೆದವು. ಸಾರ್ವಜನಿಕರಿಗೆ ಈ ಎಲ್ಲಾ ಕಾರ್ಯಕ್ರಮದ ನೇರ ಪ್ರಸಾರದವನ್ನು ದೇವಾಲಯದ ಸುತ್ತಲೂ ದೊಡ್ಡ ಪರದೆಗಳಲ್ಲಿ ನೋಡುವ ವ್ಯವಸ್ಥೆ ಮಾಡಿದ್ದ ಕಾರಣ, ಅಲ್ಲಿಗೆ ಬಂದಿದ್ದ ಲಕ್ಷಾಂತರ ಭಕ್ತಾದಿಗಳು ಈ ಪೂಜಾ ಕಾರ್ಯಕ್ರಮಗಳನ್ನು ಜನರು ಕಣ್ತುಂಬಿಕೊಂಡು ಪುನೀತರಾದರು.
ಅಯೋಧ್ಯೆಯಲ್ಲಿನ ರಾಮ ಮಂದಿರದ ಈ ಎರಡನೇ ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿಗಳ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮೊದಲು ಬಾಲ ರಾಮನ ಮೂರ್ತಿಯ ದರ್ಶನ ಪಡೆದು ನಂತರ ಮೊದಲ ಮಹಡಿಗೆ ತೆರಳಿ ರಾಮನ ದರ್ಬಾರದ ವಿಧಿವಿಧಾನಗಳಲ್ಲಿ ಭಾಗವಹಿಸಿದ ಬಳಿಕ, ದೇಗುಲ ಸಂಕೀರ್ಣದ ಸಮೀಪದಲ್ಲಿರುವ ಹನುಮಾನ್ ಗಢಿಗೂ ಭೇಟಿ ನೀಡಿದರು. ರಾಮ ದೇವರು ಜನಿಸಿದ ಈ ಪವಿತ್ರಭೂಮಿಯಲ್ಲಿ ವಿವಿಧ ದೇವತಾ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆಗೆ ಸಾಕ್ಷಿಯಾಗುವ ಪುಣ್ಯ ನಮಗೆ ಲಭಿಸಿಸಿರುವುದು ಪರಮ ಸೌಭಾಗ್ಯ. ಈ ಮಂಗಳಕರ ಸಂದರ್ಭವು ಏಕ್ ಭಾರತ್, ಶ್ರೇಷ್ಠ ಭಾರತ್ ಹಾಗೂ ಸಿಯಾವರ್ ಶ್ರೀರಾಮಚಂದ್ರನ ವಿಜಯದ ಅಭಿವ್ಯಕ್ತಿಯಾಗಿದೆ ಎಂದು ಟ್ವೀಟ್ ಮಾಡಿ ತಮ್ಮ ಸಂತಸವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.
ಸುಮಾರು 500 ವರ್ಷಗಳ ಕಾಲ ಲಕ್ಷಾಂತರ ಭಕ್ತರ ತ್ಯಾಗ ಮತ್ತು ಬಲಿದಾನದಿಂದ ಕೂಡಿದ್ದ ಸುದೀರ್ಘ ಹೋರಾಟದ ಬಳಿಕ ಕಳೆದ ವರ್ಷ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ನಡೆದಿದ್ದು ಈಗ ಎರಡನೇ ಪ್ರಾಣ ಪ್ರತಿಷ್ಟಾಪನೆಯ ಅಂಗವಾಗಿ ಅದೇ ದೇವಾಲಯದ ಮೊದಲನೇ ಮಹಡಿಯಲ್ಲಿ ರಾಮ ಪಟ್ಟಾಭಿಷೇಕವು 8 ದೇಗುಲಗಳಲ್ಲಿ ದೇವರ ಪ್ರಾಣ ಪ್ರತಿಷ್ಠಾಪನೆ ಮುಕ್ತಾಯಗೊಂಡಿದ್ದು, ಇದು ರಾಮ ರಾಜ್ಯ ನಿರ್ಮಾಣದತ್ತ ಒಂದು ದಿಟ್ಟ ಹೆಜ್ಜೆ ಇಟ್ಟಂತಾಗಿದೆ ಎನ್ನುವ ಸಕಲ ಆಸ್ತಿಕರ ನಂಬಿಕೆಯು ಬಹಳಷ್ಟು ಸತ್ಯವಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ