108 ಅಡಿ ಎತ್ತರದ ವಿಶ್ವರೂಪ ಮಹಾ ವಿಷ್ಣು ಪ್ರತಿಮೆಯ ಪ್ರತಿಷ್ಠಾಪನೆ

ಹೇಳೀ ಕೇಳಿ ನಮ್ಮ ದೇಶ ಅಸ್ತಿಕರಿಂದಲೇ ತುಂಬಿರುವ ದೇಶ.  ಒಂದು ಹೊತ್ತು ಬೇಕಿದ್ರೂ ಬಿಡ್ತಾರೆ. ಅದರೆ, ದೇವರ ಮೇಲಿನ ನಂಬಿಕೆ ಮತ್ತು ಭಯ ಭಕ್ತಿಗಳನ್ನು ಬಿಡುವುದಿಲ್ಲ.  ಅವರು ಬಡವರಾಗಿರಲೀ ಇಲ್ಲವೇ ಶ್ರೀಮಂತರೇ ಅಗಿರಲಿ ಧರ್ಮ ಎಂದು ಬಂದಾಗ ಯಾವ ಬೇಧ ಭಾವವೂ ಇಲ್ಲದೇ  ಒಗ್ಗಟ್ಟಾಗಿ ದೇವರ ಕೆಲಸಕ್ಕೆ ಕೈ ಜೋಡಿಸುತ್ತಾರೆ ಎನ್ನುವುದಕ್ಕೆ ಇತ್ತೀಚಿಗಷ್ಟೇ ಬೆಂಗಳೂರಿನ ಕೋರಮಂಗಲದ ಬಳಿಯ ಈಜಿಪುರದಲ್ಲಿರುವ ಸುಮಾರು 75 ವರ್ಷದಷ್ಟು ಹಳೆಯದಾದ ಶ್ರೀ ಕೋದಂಡ ರಾಮಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಆದ ವಿಶ್ವದಲ್ಲೇ ಅತಿ ಎತ್ತರದ ಸುಮಾರು 108 ಅಡಿ ಎತ್ತರದ ಏಕಶಿಲೆಯ  ಶ್ರೀ ಮಹಾ ವಿಷ್ಣು ವಿಶ್ವರೂಪ ಪ್ರತಿಮೆಯೇ ಸಾಕ್ಷಿ.

 

ಈಜಿಪುರಸ ಸ್ಥಳೀಯರಾದ ವೃತ್ತಿಯಲ್ಲಿ ನಿವೃತ್ತ ಸರ್ಕಾರಿ ವೈದ್ಯರಾದ  ಡಾ. ಬಿ. ಸದಾನಂದ ಅವರಿಗೆ ಲೋಕ ಕಲ್ಯಾಣಕ್ಕಾಗಿ ಏನಾದರೂ ಮಾಡಲೇ ಬೇಕೆಂಬ ತುಡಿತದಿದ ಮೂಡಿಬಂದದ್ದೇ ಈ  ಏಕಶಿಲೆಯ ಪ್ರತಿಮೆ. 2010 ರಲ್ಲಿ ಈ ಯೋಜನೆ ಪರವಾಗಿ ಕೆಲಸವನ್ನು ಆರಂಭಿಸಿ ಅದಕ್ಕಾಗಿ ಹತ್ತಾರು ಕಡೆ ಓಡಾಡಿ ಅಂತಿಮವಾಗಿ  ಬೆಂಗಳೂರಿನಿಂದ ಸುಮಾರು 210 ಕಿಮೀ ದೂರವಿರುವ ತಮಿಳುನಾಡಿನ ತಿರುವಣ್ಣಾಮಲೈ ಬಳಿಯ ವಂದವಾಸಿ ಬಳಿಯ ಕೊರಕ್ಕೊಟ್ಟೈ ಎಂಬ ಪ್ರದೇಶದಲ್ಲಿ ಸುಮಾರು 420 ಟನ್ ತೂಕದ ಏಕಶಿಲೆಯ ಕಲ್ಲನ್ನು ಆಯ್ಕೆ ಮಾಡಿ ಮೊದಲ ಹಂತದಲ್ಲಿ ವಿಶ್ವರೂಪಂ ಮಹಾವಿಷ್ಣುವಿನ ಪ್ರತಿಮೆಯ ಮುಖ ಮತ್ತು  ಆದಿಶೇಷನ ಪೂರ್ವ ನಿರ್ಮಾಣ ಕೆಲಸ ಮತ್ತು ಶಿಲ್ಪಕಲೆಯನ್ನು ಪೂರೈಸಿಕೊಂಡು 2019 ರಲ್ಲಿ 240 ಚಕ್ರಗಳ ಟ್ರಕ್‌ನಲ್ಲಿ ಸುಮಾರು ಆರು ತಿಂಗಳ ಅವಧಿಯಲ್ಲಿ ಬೆಂಗಳೂರಿನ ಈಜಿಪುರಕ್ಕೆ ತಂದು ಅಲ್ಲಿ ಶಿಲ್ಪದ ಉಳಿದ ಕೆಲಸವನ್ನು ಪೂರ್ಣಗೊಳಿಸಿ ಅದಕ್ಕೆ ಹೊಳಪು ನೀದಿ ನಂತರ ಕ್ರೇನ್ ಸಹಾಯದಿಂದ ಪ್ರತಿಮೆಯನ್ನು ಎತ್ತರದ ಪ್ರದೇಶದಲ್ಲಿ ನಿಲ್ಲಿಸಿ  ಪ್ರತಿಮೆಯ ಕಟ್ಟಡ ಚೌಕಟ್ಟು ಮತ್ತು ಇತರ ಗಾರೆ ಕೆಲಸಗಳನ್ನು ಒಳಗೊಂಡಂತೆ ಪೂರೈಸುಷ್ಟರಲ್ಲಿ ಮತ್ತೆ 6 ವರ್ಷಗಳ ಕಾಲ ತೆಗೆದುಕೊಂಡು   ಇದುವರೆವಿಗೂ ಸುಮಾರು  2.60 ಕೋಟಿ ರೂ. ವೆಚ್ಚದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ.

ಈ ಪ್ರತಿಮೆಯ ಮೂಲಕ ಹಿಂದೂ ಧರ್ಮೀಯರಲ್ಲಿ ಆಧ್ಯಾತ್ಮಿಕ ಏಕತೆ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿ ಕಾರ್ಯನಿರ್ವಹಿಸಬೇಕೆಂದು ಆಶಯದೊಂದಿಗೆ ಈಜಿಪುರದ ಶ್ರೀ ಕೋದಂಡ ರಾಮಸ್ವಾಮಿ ದೇವಸ್ಥಾನ ಚಾರಿಟೇಬಲ್ ಟ್ರಸ್ಟ್ ಈ ಯೋಜನೆಯ ಮೇಲ್ವಿಚಾರಣೆಯನ್ನು ವಹಿಸಿದೆ.  ಇದುವರೆಗೆ ನಾವೆಲ್ಲರೂ  ನೋಡಿರಬಹುದಾದಂತಹ ಇತರೇ ವಿಷ್ಣುವಿನ ಪ್ರತಿಮೆಗಳಿಗಿಂತ ಬಹಳ  ಭಿನ್ನವಾಗಿದ್ದು ಇದು ಕೇವಲ ಮಹಾವಿಷ್ಣುವಿನ ಪ್ರತಿಮೆಯಾಗಿರದೇ,   ಪರಮಾತ್ಮನ ಶಿವ ಕೇಶವ ಸ್ವರೂಪ ಅರ್ಥಾತ್  ಮಹಾ ವಿಷ್ಣು, ಶಿವ, ಬ್ರಹ್ಮ, ಸ್ಕಂದ, ವಿನಾಯಕ, ನರಸಿಂಹ, ಆಂಜನೇಯ, ಗರುಡ, ಅಗ್ನಿ ಮತ್ತು ಋಷಿ ಮುನಿಗಳನ್ನು ಪ್ರತಿನಿಧಿಸುವ ಶಿರ ಮತ್ತು ತೋಳುಗಳನ್ನು ಹೊಂದಿರುವ ಮೂಲಕ  ಅತ್ಯಂತ ವಿಶೇಷವಾಗಿದೆ.

ಈ ರೀತಿಯಾಗಿ ವೈಶಿಷ್ಟ್ಯತೆಯನ್ನು ಹೊಂದಿರುವ ವಿಶ್ವದಲ್ಲೇ ಅತಿ ಎತ್ತರದ ವಿಷ್ಣುವಿನ 108 ಅಡಿ ಎತ್ತರದ ಏಕಶಿಲೆಯ ಪ್ರತಿಮೆಯ ಪ್ರಾಣ ಪ್ರತಿಷ್ಠಾಪನೆ 2025 ಮೇ 31 ರಿಂದ ಜೂನ್ 2ರ ವರೆಗೂ ಶನಿವಾರ, ಭಾನುವಾರ ಮತ್ತು ಸೋಮವಾರ ಪವಿತ್ರೀಕರಣ ಸಮಾರಂಭ, ವಿವಿಧ ಧಾರ್ಮಿಕ ವಿಧಿವಿಧಾನಗಳು, ಹೋಮಗಳು ಮತ್ತು ಹವನಗಳೊಂದಿಗೆ ಪ್ರಾರಂಭವಾಗಿ ಸೋಮವಾರ  ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಮತ್ತು ಮೈಸೂರಿನ ಪರಕಾಲ ಮಠದ ಶ್ರೀ ಅಭಿನವ ವಾಗೀಶ್ ಉಪಸ್ಥಿತಿಯಲ್ಲಿ  ಮುಖ್ಯ ಪ್ರಾಣ ಪ್ರತಿಷ್ಠಾಪನೆ ಮತ್ತು  ಮಹಾಕುಂಬಾಭಿಷೇಕ ಮಾಡುವ ಮೂಲಕ ಲೋಕರ್ಪಣೆ ಮಾಡಲಾಗಿದೆ.

ಈ ಅವತಾರದಲ್ಲಿನ ಬಹುನಿರೀಕ್ಷಿತ ವಿಷ್ಣುವಿನ ವಿರಾಟ ಸ್ವರೂಪದ ವಿಶ್ವದಲ್ಲೇ ಅತ್ಯಂತ ಎತ್ತರದದ್ದು ಎಂದು ಹೇಳಲಾಗುವ ವಿಶ್ವರೂಪಂ ಸ್ವಾಮಿಯ ದರ್ಶನವನ್ನು ಪಡೆಯಲು ಕೇವಲ ಈಜಿಪುರ ಮತ್ತು ಸುತ್ತಮುತ್ತಲಿನ ಪ್ರದೇಶದ  ಭಕ್ತರಷ್ಟೇ ಅಲ್ಲದೇ, ತಮಿಳುನಾಡಿನಿಂದಲೂ  ವೀಕ್ಷಿಸಲು ಧಾವಿಸುತ್ತಿರುವುದು ಗಮನಾರ್ಹವಾಗಿದೆ.

ಲೋಕಕಲ್ಯಾಣಕ್ಕಾಗಿ ನಡೆಯುತ್ತಿರುವ ಈ ಸ್ವಯಂಸೇವಾ ಯೋಜನೆಗಾಗಿ ಎಲ್ & ಟಿ ಲಿಮಿಟೆಡ್ ಮತ್ತು ಫ್ರೈಟ್ ವಿಂಗ್ಸ್ ಪ್ರೈವೇಟ್ ಲಿಮಿಟೆಡ್ ಸ್ವಯಂಪ್ರೇರಿತವಾಗಿ ಮುಂದಾಗಿ ಈಗಾಗಲೇ ತಿಳಿಸಿದಂತೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಕೊರಕೊಟ್ಟೈ ಗ್ರಾಮದ ಬೆಟ್ಟದಿಂದ 420 ಟನ್ ತೂಕದ 108 ಅಡಿ ಎತ್ತರದ ಈ ಪ್ರತಿಮೆಯನ್ನು 240 ಚಕ್ರಗಳ ಟ್ರಕ್‌ನಲ್ಲಿ ಸುಮಾರು ಆರು ತಿಂಗಳುಗಳ ಕಾಲ ರಸ್ತೆಯ ಮೂಲಕವೇ  ಇಲ್ಲಿಗೆ ಸಾಗಿಸುವ ಕಾರ್ಯದಲ್ಲಿ ಭಾಗಿಗಳಾಗಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ. ಪ್ರಸ್ತುತವಾಗಿ ಈ ಎತ್ತರದ ವಿಷ್ಣು ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು  ಇನ್ನು ಒಂದು ಅಥವಾ ಎರಡು ವರ್ಷಗಳಲ್ಲಿ ದೇವಾಲಯದ ತಪ್ಪಲಿನಿಂದ ಸ್ವಾಮಿಯ ಪಾದದವರೆಗೂ ತಲುಪಲು ಸುಮಾರು 1,008 ಮೆಟ್ಟಿಲುಗಳನ್ನು ನಿರ್ಮಿಸಲು ದೇವಾಲಯದ ಟ್ರಸ್ಟ್ ನವರು ನಿರ್ಧರಿಸಿದ್ದು ಆ ಮೆಟ್ಟಿಲುಗಳ ಮೇಲೆ ವಿಷ್ಣು ಸಹಸ್ರನಾಮ ಮತ್ತು ಅದರ ಅರ್ಥವನ್ನು ಕೆತ್ತಿಸುವ ಮೂಲಕ ಪ್ರತಿಯೊಬ್ಬರು ಮೆಟ್ಟಿಲುಗಳನ್ನು ಹತ್ತುವಾಗ ವಿಷ್ಣು ಸಹಸ್ರ ನಾಮದ ಪಠಣೆ ಮತ್ತು  ಅದರ ಅರ್ಥವನ್ನು ತಿಳಿದುಕೊಳ್ಳುವಂತ ಅರ್ಥಪೂರ್ಣ ಕೆಲ್ಪನೆಯನ್ನು ಸಾಕಾರಗೊಳಿಸಲು ಕಟಿ ಬದ್ಧರಾಗಿದ್ದಾರೆ.

ದೇವಾಲಯದ ವಿಳಾಸ: ಶ್ರೀ ಕೋದಂಡರಾಮ ಸ್ವಾಮಿ ದೇವಾಲಯ
ಶ್ರೀ ರಾಮ ಮಂದಿರ ರಸ್ತೆ, ಈಜಿಪುರ ಮುಖ್ಯ ರಸ್ತೆ,
ಈಜಿಪುರ, ಬೆಂಗಳೂರು -560047
ಈಮೇಲ್ : support@srivishwaroopa.com
ದೂರವಾಣಿ ಸಂಖ್ಯೆ : +91 810 578 4897, +91 984 507 4415

ಇಷ್ಟು ಮಹತ್ತರವಾದ ಕಾರ್ಯದಲ್ಲಿ ತಮ್ಮ ತನು ಮನ ಮತ್ತು ಧನದ ಸಹಾಯದೊಂದಿಗೆ ಭಾಗಿಗಳಾಗಲು ಸಕಲ ಆಸ್ತಿಕ ಮಹಾಜನರನ್ನು ಶ್ರೀ ಕೋದಂಡ ರಾಮಸ್ವಾಮಿ ದೇವಸ್ಥಾನ ಚಾರಿಟೇಬಲ್ ಟ್ರಸ್ಟ್ ಆಡಳಿತ ಮಂಡಳಿಯವರು ಕೋರಿಕೊಂಡಿದ್ದಾರೆ.

ಬೆಂಗಳೂರಿನ ಈಜಿಪುರದಲ್ಲಿ ಇತ್ತೀಚೆಗಷ್ಟೇ ಪ್ರತಿಷ್ಠಾಪನೆಗೊಂಡ ಈ ವಿಶ್ವದ ಅತಿದೊಡ್ಡ 108 ಅಡಿ ಎತ್ತರದ ವಿಶ್ವರೂಪ ಮಹಾ ವಿಷ್ಣು ದೇವಾಲಯದ ಬಗ್ಗೆ ಇಷ್ಟೆಲ್ಲಾ ಮಾಹಿತಿ ತಿಳಿದ ಮೇಲೆ ಇನ್ನೇಕೆ ತಡಾ, ಈ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ವಿಶ್ವರೂಪ ಮಹಾ ವಿಷ್ಣುವಿನ ದರ್ಶನ ಮಾಡಿಕೊಂಡು ನಿಮ್ಮ ಕೈಲಾದ ಮಟ್ಟಿಗಿನ ಕಾಣಿಕೆಯನ್ನು ಸ್ವಾಮಿಗೆ ಅರ್ಪಣೆ ಮಾಡುವ ಮೂಲಕ ಈ ಮಹತ್ಕಾರ್ಯದಲ್ಲಿ ಅಳಿಲು ಸೇವೆಯನ್ನು ಮಾಡಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರಿ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

One thought on “108 ಅಡಿ ಎತ್ತರದ ವಿಶ್ವರೂಪ ಮಹಾ ವಿಷ್ಣು ಪ್ರತಿಮೆಯ ಪ್ರತಿಷ್ಠಾಪನೆ

Leave a comment