ವಾರ್ಕರಿ ಯಾತ್ರೆ ಮತ್ತು ವ್ಯಾಪಾರಿ ವೃತ್ತಿಪರತೆ

ನಮಗೆಲ್ಲರಿಗೂ ತಿಳಿದಿರುವಂತೆ, ಪ್ರತೀ ವರ್ಷ ಆಷಾಢ ಮತ್ತು ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಪಂಡರಾಪುರದ ಪಾಂಡುರಂಗನಿಗೆ ನಡೆಸಲಾಗುವ ವಿಶೇಷ ಪೂಜೆಗಾಗಿ ಕೇವಲ ಮಹಾರಾಷ್ಟ್ರವಲ್ಲದೇ ದೇಶ ವಿದೇಶಗಳಿಂದಲೂ ಲಕ್ಷಾಂತರ ಭಕ್ತರು ತಮ್ಮ ತಮ್ಮ ಊರುಗಳಿಂದ ಕಾಲ್ನಡಿಗೆಯಲ್ಲಿ ಭಗವಂತನ ಭಜನೆಯನ್ನು ಮಾಡಿಕೊಂಡು ಬರುವ ಪದ್ದತಿಗೆ  ವಾರ್ಕರಿ ಯಾತ್ರೆ ಎಂದು ಕರೆಯಲಾಗುತ್ತದೆ. ವಾರಕರಿ ಎಂದರೆ ಮರಾಠಿಯಲ್ಲಿ ಮತ್ತೆ ಮತ್ತೆ ಯಾತ್ರೆ ಮಾಡುವವರು ಎಂದು ಅರ್ಥವಿದೆ.

ಮಹಾರಾಷ್ಟ್ರದ ಜಲನ್‌ ಜಿಲ್ಲೆಯ ಅಂಭೋರಾ ಜಹಗಿರ್‌ ಗ್ರಾಮದ ಕೃಷಿ ಕುಟುಂಬಕ್ಕೆ ಸೇರಿದವರಾದ 93 ವರ್ಷದ ಶ್ರೀ ನಿವೃತ್ತಿ ಶಿಂದೆ ಮತ್ತು ಅವರ ಧರ್ಮಪತ್ನಿಯವರಾದ ಶ್ರೀಮತಿ ಶಾಂತಾಬಾಯಿ ಅವರು ಪಂಢರಪುರಕ್ಕೆ ಆಷಾಢ ಏಕಾದಶಿಗಾಗಿ ಪಾದಯಾತ್ರೆ ಹೊರಟಿರುತ್ತಾರೆ. ಹಾಗೆ ಹೋಗುವ  ಮಾರ್ಗದಲ್ಲಿ ಛತ್ರಪತಿ ಸಾಂಭಾಜಿನಗರದಲ್ಲಿರುವ ಆಭರಣ ಮಳಿಗೆ ಆವರ ಕಣ್ಣಿಗೆ ಬೀಳುತ್ತದೆ. ಆ  93 ವರ್ಷದ ವೃದ್ದರಿಗೆ ತಮ್ಮ ಪತ್ನಿಗೆ ಮಂಗಳಸೂತ್ರ   ಅರ್ಥಾತ್ ತಾಳಿಯನ್ನು ಕೊಡಿಸಬೇಕೆಂಬ ಆಸೆಯಾಗಿ ಆ ಚಿನ್ನದ ಅಂಗಡಿಗೆ ಹೋಗುತ್ತಾರೆ.

ಅಷ್ಟು ದೊಡ್ಡ ಚಿನ್ನದ ಅಂಗಡಿಗೆ ಈ ದಂಪತಿಗಳು ಅಪ್ಪಟ ಮಹಾರಾಷ್ಟ್ರದ ಸಾಂಪ್ರದಾಯಿಕ ಉಡುಗೆಗಳಾದ ಧೋತಿ ಮತ್ತು ಕುರ್ತಾ, ತಲೆಯ ಮೇಲೊಂದು ಟೋಪಿ ಮತ್ತು ಸಾಧಾರಣವಾದ ಸೀರೆಯನ್ನು ಧರಿಸಿಕೊಂಡು ಹೋಗಿದ್ದನ್ನು ನೋಡಿದ ಆ ಆಂಗಡಿಯ ಸಿಬ್ಬಂದಿಗಳು ಆವರೆಲ್ಲೋ ಭಿಕ್ಷೆ ಬೇಡಲು ಬಂದಿದ್ದಾರೆ ಎಂದು ತಪ್ಪಾಗಿ ಭಾವಿಸಿರುತ್ತಾರೆ. ಆದರೆ ಆ ವೃದ್ದರು ತನ್ನ ಪ್ರೀತಿಯ ಪತ್ನಿಗಾಗಿ ಚಿನ್ನದ ಮಂಗಳಸೂತ್ರ ಖರೀದಿಸಲು ಬಂದಿರುವುದಾಗಿ ತಿಳಿಸಿದಾಗ,  ಅವರಿಗೆ ಅಚ್ಚರಿಯಾದರೂ, ಗ್ರಾಹಕರಿಗೆ ಅಗೌರ ತೋರಬಾರದು ಎಂದು  ತಮ್ಮ ಅಂಗಡಿಯಲ್ಲಿದ್ದ ತಾಳಿ ಮತ್ತು ಸರವನ್ನು ತೋರಿಸುತ್ತಾರೆ.

ಆ ವೃದ್ಧ ದಂಪತಿಗಳು ಆ ಆಭರಣಗಳಲ್ಲಿ ಒಂದು ಸರ ಮತ್ತು ತಾಳಿಯನ್ನು ಆಯ್ಕೆ ಮಾಡುತ್ತಿದ್ದಾಗ ಆ ವೃದ್ಧ  ದಂಪತಿಗಳ ಪ್ರೀತಿ ಮತ್ತು ಅವರ ಮಧುರ ಬಾಂಧವ್ಯವನ್ನು ಗಮನಿಸುತ್ತಿದ್ದ ಆ ಅಂಗಡಿಯ ಮಾಲಿಕರು ಅವರ ಬಳಿ ಬಂದು ಅವರೊಂದಿಗೆ ಸಂಭಾಷಣೆಗೆ ಇಳಿದಿದ್ದು, ಈ ತಾಳಿ ಮತ್ತು ಸರವನ್ನು ಖರೀಧಿಸಲು ನಿಮ್ಮ ಬಳಿ ಹಣ ಎಷ್ಟಿದೆ ಎಂದು ಕೇಳಿದ  ಕೂಡಲೇ ವೃದ್ಧ ಮಹಿಳೆ ತನ್ನ ಕೈ ಚೀಲಕ್ಕೆ ಕೈಹಾಕಿ  ಆಕೆಯ ಬಳಿದ್ದ  500 ರೂಪಾಯಿಗಳ ಎರಡು ನೋಟುಗಳು. 100 ರೂಪಾಯಿಯ ಒಂದು ನೋಟು,  20 ರೂಪಾಯಿಯ ಒಂದು ನೋಟು ಮತ್ತು 10 ರೂಪಾಯಿಯ ಒಂದು ನೋಟು ಹೀಗೆ ಒಟ್ಟು1,120 ರೂಪಾಯಿಯ ಹಣವನ್ನು ಆತನ ಕೈಗೆ ಕೊಡುತ್ತಾರೆ.

ಆ ವೃದ್ಧ ದಂಪತಿಗಳ ಆರ್ಥಿಕ ಪರಿಸ್ಥಿತಿ  ಮತ್ತು ತಮ್ಮ ಪ್ರೀತಿಯ ಸಂಕೇತವಾಗಿ ಪತ್ನಿಗೆ ಮಂಗಲಸೂತ್ರವನ್ನು ಕೊಡಲು ಇಚ್ಚಿಸಿರುವ ವೃದ್ಧರ ಮನದಾಸೆಯನ್ನು ಅರಿತ ಅರಿತ ಅಂಗಡಿ ಮಾಲೀಕನು ಅರೇ  ಇಷ್ಟೇ ಇಷ್ಟು ಹಣವೇ? ಎಂದು  ಉದ್ಗಾರವನ್ನು ತೆರೆದ ಕೂಡಲೇ ಆ ವೃದ್ಧರು ತಮ್ಮ ಕೈ ಚೀಲಕ್ಕೆ ಕೈ ಹಾಕಿ ಪಾಂಡುರಂಗನಿಗೆ ಅರ್ಪಿಸಲು ಮನೆಯಲ್ಲಿ  ಕೂಡಿ ಇಟ್ಟಿದ್ದ  ನಾಣ್ಯಗಳಿಂದ ತುಂಬಿದ್ದ ಗಂಟನ್ನು ತೆಗೆದು ತೋರಿಸುತ್ತಾರೆ. ಅವುಗಳಲ್ಲಿ ಒಂದು ಗಂಟು  ಕೆಳಗೆ ಬಿದ್ದಾಗ, ಆ ಅಂಗಡಿಯ ಸಿಬ್ಬಂಧಿಯೊಬ್ಬರು ಕೂಡಲೇ ತೆಗೆದು ಆ ವೃದ್ಧರ ಕೈಗೆ ಕೊಡುತ್ತಾರೆ.

ವ್ಯಾಪಾರಂ ದ್ರೋಹ ಚಿಂತನಂ ಎಂಬ ಗಾದೆ ಮಾತಿದ್ದು ಅದೇ ರೀತಿಯಲ್ಲಿ ಅಕ್ಕಸಾಲಿ, ಅಕ್ಕನ ಚಿನ್ನವನ್ನೂ ಬಿಡುವುದಿಲ್ಲ ಎಂಬ ಗಾದೆಯ ಮಾತಿಗೆ ವಿರುದ್ಧವಾಗಿ ಎಲ್ಲರ ನಿರೀಕ್ಷೇಗಳನ್ನೂ ಮೀರಿ ಆ ಅಂಗಡಿ ಮಾಲೀಕರು ಹೃದಯ ವೈಶಾಲ್ಯತೆಯಿಂದ ಆ ವೃದ್ಧ ಮಹಿಳೆಯು ನೀಡಿದ ಹಣವನ್ನು ಒಂದೊಂದಾಗಿ ಹಿಂದಿರುಗಿಸಿದ್ದಲ್ಲದೇ, ಅವರು ಆಯ್ಕೆ ಮಾಡಿದ್ದ ಆ ಚಿನ್ನದ ಸರವನ್ನು ಆಕೆಯ ಕೈಗೆ ನೀಡಿ ಅದೇ ರೀತಿಯಲ್ಲಿ  ಆ ತಾಳಿಯನ್ನು ಆ ವೃದ್ಧರ ಕೈಗೆ ಕೊಟ್ಟು ಅದನ್ನು ಪ್ರೀತಿ ಪೂರ್ವಕವಾಗಿ ಅವರ ಮಡದಿಯ ಕೈಗೆ ಕೊಡಲು ಹೇಳುತ್ತಾರೆ.  ಆದರೆ ಸ್ವಾಭಿಮಾನಿ ದಂಪತಿಗಳು ಈ ರೀತಿಯಾಗಿ ಉಚಿತವಾಗಿ ತೆಗೆದುಕೊಳ್ಳಲು ನಿರಾಕರಿಸಿದಾಗ. ಆ ಅಂಗಡಿ ಮಾಲಿಕರು ಪಾಂಡುರಂಗನ ಪರಮ ಭಕ್ತರಾದ ನಿಮಗೆ ಇದು ಪ್ರೀತಿಯ ಉಡುಗೊರೆ ಎಂದು ಹೇಳಿ. ಮತ್ತೆ ಆಕೆಯಿಂದ ಚಿನ್ನದ ಸರಕ್ಕೆ 20 ರೂಪಾಯಿಗಳನ್ನೂ ಮತ್ತು ತಾಳಿಗಾಗಿ 10 ರೂಪಾಯಿಗಳನ್ನು ತೆಗೆದುಕೊಂಡು, ಪಾಂಡುರಂಗನ ಆಶೀರ್ವಾದ ಮತ್ತು ನಿಮ್ಮಗಳ ಹಾರೈಕೆ ನಮ್ಮ ಮೇಲೆ ಇರಲಿ ಎಂದು ವಿನಮ್ರವಾಗಿ ಕೋರಿದಾಗ, ಆ ಅಂಗಡಿ ಮಾಲೀಕನ ಮಾತುಗಳಳನ್ನು   ಆಲಿಸಿದ ಆ ವೃದ್ಧ ದಂಪತಿಗಳು ಭಾವುಕರಾಗಿ ಆನಂದಭಾಷ್ಪವಾಗಿ ಕಣ್ಣೀರು ಸುರಿಸುತ್ತಾ ಮನಸೋ ಇಚ್ಚೆ  ಆ ಅಂಗಡಿಯ ಮಾಲಿಕನನ್ನು ಆಲಂಗಿಸಿ ಹಾರೈಸುವ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತು ಈ ಕುರಿತಾದ ವಿಷಯ  ದೇಶಾದ್ಯಂತ ಬಹುತೇಕ ಎಲ್ಲಾ ಪತ್ರಿಕೆಗಳಲ್ಲೂ ಬಹಳ ವೈರಲ್ ಆಗಿದೆ.

ಚಿನ್ನದ ಅಂಗಡಿ ಇರುವುದೇ ವ್ಯಾಪಾರಕ್ಕೆ ಮತ್ತು ಲಾಭಗಲಿಸುವುದಕ್ಕೆ. ಆದರೆ ಈ ಪ್ರಸಂಗದಲ್ಲಿ ಇಲ್ಲಿ ಯಾವುದೇ ರೀತಿಯ ವ್ಯವಹಾರ ಇರಲಿಲ್ಲ. ಅದು  ಕೇವಲ ಶುದ್ಧ ಭಾವನೆ, ನಂಬಿಕೆ, ಮಾನವೀಯತೆ ಮತ್ತು ಭಕ್ತಿಯ ಪರಾಕಾಷ್ಠೆ. ಇಂತಹ ಸರಳತೆಯ ಭಕ್ತಿ ಮತ್ತು ಕರುಣೆಯನ್ನು ಭಾರತವಲ್ಲದೇ ಜಗತ್ತಿನ ಬೇರಾವ ಪ್ರದೇಶದಲ್ಲೂ ಕಾಣಲಾಗದು. ಅದಕ್ಕಾಗಿಯೇ ಭಾರತ ಅಂದು ಇಂದು ಮತ್ತು ಮುಂದೆಯೂ ವಿಶ್ವಗುರು ಆಗಿಯೇ ಇರುವುದು. ಧರ್ಮೋ ರಕ್ಷತಿ ರಕ್ಷಿತಃ ಎನ್ನುವುದಕ್ಕೆ ಇದಕ್ಕಿಂತಲೂ ಹೃದಯಸ್ಪರ್ಶಿ ಬೇರೆಯ ಉದಾಹರಣೆ ಇಲ್ಲಾ ಎಂದೆನಿಸುತ್ತದೆ. ನಾವು ಮಾಡುವ ಇಂತಹ ಸಣ್ಣ ಸಣ್ಣ ಒಳ್ಳೆಯ ಕೆಲಸಗಳು ಯಾವಾಗಲೂ ನಮ್ಮನ್ನು  ಜೀವನದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವುದಲ್ಲದೇ, ನಮ್ಮ ಇಂತಹ ಅಂತಃಕರಣ ಪೂರಿತವಾದ ಸೇವಾ ಕಾರ್ಯಗಳು ನಮ್ಮ ಮುಂದಿನ ಪೀಳಿಗೆಗೆ ಪ್ರೇರಣೆ ಆಗುತ್ತದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment