ನಮಸ್ಕಾರ ಸ್ನೇಹಿತರೇ! ಶೀರ್ಷಿಕೆ ಸ್ವಲ್ಪ ತಮಾಷೆ ಎನಿಸಿದರೂ ಬಹಳ ಗಂಭೀರವಾದ ವಿಚಾರವಾಗಿದ್ದು, ನಾನಿಂದು ನಿಮ್ಮೊಡನೆ ಹಂಚಿಕೊಳ್ಳುತ್ತಿರುವ ವಿಷಯ ಕೇವಲ ಕಾಲ್ಪನಿಕ ಕಥೆಯಾಗಿರದೇ, ನನ್ನ ಆತ್ಮೀಯ ಗೆಳೆಯರೊಬ್ಬರ ಕುಟುಂಬದಲ್ಲಿ ನಡೆದ ಹೃದಯವಿದ್ರಾವಕವಾಕ ಮತ್ತು ವಾಸ್ತವದ ಸಂಗತಿಯಾಗಿದ್ದು, ಸಣ್ಣ ಪುಟ್ಟದಾಗಿ ನಾವುಗಳು ಮಾಡುವ ನಿರ್ಲಕ್ಷತನ ಹೇಗೆ ನಮ್ಮ ಕುಟುಂಬವನ್ನು ದುಃಖದಲ್ಲಿ ದೂಡಬಹುದು ಎಂಬ ನೋವಿನ ಜೀವನದ ಪಾಠವಾಗಿದ್ದು ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರಿಗೂ ಒಂದು ಸಂದೇಶವಾಗಿರುವುದರಿಂದ ದಯವಿಟ್ಟು ಸ್ವಲ್ಪ ಸಮಯ ಮಾಡಿಕೊಂಡು ಗಂಭೀರವಾಗಿ ಓದಿ ಅದನ್ನು ಅಳವಡಿಸಿಕೊಂಡಲ್ಲಿ ಕುಟುಂಬದೊಡನೆ ನೆಮ್ಮದಿಯ ಜೀವನವನ್ನು ನಡೆಸಬಹುದು ಎನ್ನುವುದೇ ಈ ಲೇಖನದ ಆಶಯವಾಗಿದೆ.
ನಮ್ಮ ಗೆಳೆಯನ 38 ವರ್ಷದ ಸೋದರಳಿಯ ಬಹಳ ಕ್ರಿಯಾಶೀಲ ಮತ್ತು ಶ್ರಮಶೀಲ ವ್ಯಕ್ತಿ. ಕುಟುಂಬದ ಆರ್ಥಿಕ ಪರಿಸ್ಥಿತಿಯ ಕಾರಣ ಹೆಚ್ಚು ವಿದ್ಯಾಭ್ಯಾಸ ಮಾಡಲಾಗದೇ, ಸಣ್ಣ ವಯಸ್ಸಿನಲ್ಲಿಯೇ ಕೆಲವನ್ನು ಮಾಡಲು ಆರಂಭಿಸಿ ಇಂದು ಮಂಡ್ಯ, ಮದ್ದೂರು ಮೈಸೂರು ಮುಂತಾದ ಕಡೆಗಳಲ್ಲಿ ಚಿಪ್ಸ್ ತಯಾರಿಸುವ ಕಾರ್ಖಾನೆಗಳಿಗೆ ಆಲೂಗಡ್ಡೆ ತಲುಪಿಸುವ ಟ್ರಕ್ ಚಾಲಕ. ತಾನಾಯಿತು ತನ್ನ ಮಡದಿ ಮತ್ತು ನಾಲ್ಕು ಮಕ್ಕಳ ಕುಟುಂಬವಾಯಿತು ಎನ್ನುವಂತಹ ವ್ಯಕ್ತಿ. ಕೆಲಸದ ಮೇಲೆ ಮನೆಯಿಂದ ಹೊರಟರೆ ಕೆಲವೊಮ್ಮೆ ಎರಡು ಮೂರು ದಿನಗಳ ನಂತರು ಮನೆಗೆ ಬರಬೇಕಾದಂತಹ ಅನಿವಾರ್ಯ ಸಂಧರ್ಭವೂ ಉಂಟು. ಹೀಗೆ ಮೂರ್ನಾಲ್ಕು ದಿನಗಳ ಕಾಲ ಮನೆಯಲ್ಲಿ ಇಲ್ಲದೇ ಹೋದಾಗ ಮಡದಿ ಮಕ್ಕಳಿಗೆ ಆಗಬಹುದಾದ ನೋವನ್ನು ನಿವಾರಿಸುವ ಸಲುವಾಗಿ ಮಡದಿಗೆ ಮಲ್ಲಿಗೆ ಹೂವು ಮತ್ತು ಮಕ್ಕಳಿಗೆ ಮಿಠಾಯಿ ತರುವ ಪರಿಪಾಠವನ್ನು ಇಟ್ಟು ಕೊಂಡಿದ್ದಂತಹ ಸಭ್ಯ ಗೃಹಸ್ಥ.
ಹೀಗೆ ಬದುಕು ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದು ಭಾವಿಸಿರುವಾಗಲೇ, ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ, ವಿಧಿಯಾಟದ ಮುಂದೆ ನಮ್ಮದೇನೂ ನಡೆಯದು ಎನ್ನುವಂತೆ, ಯಥಾ ಪ್ರಕಾರ ಜುಲೈ 25, 2025 ಶುಕ್ರವಾರದಂದು ಒಂದು ವಾರದ ಸುದೀರ್ಘ ಕೆಲಸದ ನಂತರ, ತನ್ನ ಕಛೇರಿಯಲ್ಲಿಯೇ ಟ್ರಕ್ಕನ್ನು ನಿಲ್ಲಿಸಿ ತನ್ನ ಪತ್ನಿ, ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ನೋಡಲು ದ್ವಿಚಕ್ರವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ಅಚಾನಕ್ಕಾಗಿ ಆವರ ದುರಂತವೊಂದು ಸಂಭವಿಸಿದ್ದು, ಇಡೀ ಕುಟುಂಬವನ್ನೇ ಬೆಚ್ಚಿ ಬೀಳಿಸುವಂತಹ ಭೀಕರವಾದ ರಸ್ತೆ ಅಪಘಾತಕ್ಕೆ ಆತ ಈಡಾಗಿದ್ದು, ದೇಹಕ್ಕೆ ಹೆಚ್ಚಿನ ಗಾಯಗಳು ಆಗದೇ ಹೋದರೂ, ಮನೆಯವರನ್ನು ಕಾಣುವ ಆತರದಲ್ಲಿ ಎಲ್ಲರಂತೆಯೂ ನಿರ್ಲಕ್ಷತೆಯಿಂದ ಆತನೂ ಸಹಾ ಹೆಲ್ಮೆಟ್ ಧರಿಸದೇ ಇದ್ದ ಕಾರಣ, ತಲೆಗೆ ತೀವ್ರವಾದ ಪೆಟ್ಟಾಗಿ ಮೆದುಳಿನಲ್ಲಿ ರಕ್ತಸ್ರಾವವಾದ ಕಾರಣ, ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ಅದೃಷ್ಟವಷಾತ್ ಬೆಳಕವಾಡಿ ಪೊಲೀಸರು ಮತ್ತು ಹೆದ್ದಾರಿ ಗಸ್ತು ತಿರುಗುವವರ ತ್ವರಿತ ಕ್ರಮದಿಂದಾಗಿ ಕೂಡಲೇ ಅವರನ್ನು ಹತ್ತಿರದ ಮಳವಳ್ಳಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅಲ್ಲಿಂದ ಮಂಡ್ಯಕ್ಕೆ ನಿಮ್ಹಾನ್ಸ್‌ಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ವರ್ಗಾವಣೆ ಮಾಡಿ ಸೂಕ್ತ ಚಿಕಿತ್ಸೆಯನ್ನು ಕೊಡಿಸುತ್ತಿದ್ದರೂ, ಅವರ ಜೀವವು ಒಂದು ದಾರದಲ್ಲಿ ನೇತಾಡುತ್ತಿದ್ದು ಕೋಮಾಗೆ ಜಾರಿದ್ದಾರೆ. ಈಗಾಗಲೇ ಹೇಳಿದಂತೆ ಬಾಹ್ಯವಾಗಿ ಹರಿದ ತುಟಿ ಮತ್ತು ಅಲ್ಲಲ್ಲಿ ತರಚಿರುವ ಗಾಯ ಕಾಣುತ್ತದಾದರೂ ತಲೆಯಲ್ಲಿ ಆದ ಆಂತರಿಕ ಗಾಯವೇ ಹೆಚ್ಚಾಗಿದ್ದು, ಇದಕ್ಕೆಲ್ಲವೂ ಆತ ನಿರ್ಲಕ್ಷದಿಂದ ಹೆಲ್ಮೆಟ್ ಧರಿಸದೇ ಹೋದದ್ದೇ ಕಾರಣವಾಗಿದೆ. ಅಕಸ್ಮಾತ್ ಆತ ಹೆಲ್ಮೆಟ್ ಧರಿಸಿದ್ದೇ ಆಗಿದ್ದಲ್ಲಿ ಖಂಡಿತವಾಗಿ ಅಪಘಾತದಲ್ಲಿ ಈ ಪರಿಯ ನೋವನ್ನು ಅನುಭವಿಸ ಬೇಕಾಗುತ್ತಿರಲಿಲ್ಲ ಎನ್ನುವುದೇ ವಾಸ್ತವಿಕ ಸಂಗತಿಯಾಗಿದೆ.
ಎರಡು ಮೂರು ವಾರದಿಂದ ಯಾವುದೇ ಪ್ರತಿಕ್ರಿಯೆಯಿಲ್ಲದೆ, ಸ್ತಬ್ಧನಾಗಿ ಅವರು ಐಸಿಯುನಲ್ಲಿ ಕೋಮಾದಲ್ಲಿ ಮಲಗಿದ್ದಾರೆ. ಆದರೆ ಐಸಿಯುವಿನ ಹೊರಗೆ ರೈತರಾಗಿರುವ ಅವರ ವಯಸ್ಸಾದ ತಂದೆ, ಆತನ ಅವಿದ್ಯಾವಂತ ಮಡದಿ, ಶಾಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಆವರ ಮಕ್ಕಳು, ಸಹೋದರರ ಸಹೋದರಿಯರು ಮತ್ತು ಬಂಧು ಮಿತ್ರರು ಎಲ್ಲರೂ ಅಸಹಾಯಕರಾಗಿ ಆತ ಶೀಘ್ರವಾಗಿ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದಾರೆ. ಪವಾಡ ಸದೃಶ್ಯದಿಂದ ಆತನ ಒಂದು ಸಣ್ಣ ಚಲನೆ, ಒಂದು ಮಾತು, ಒಂದು ಕಣ್ಣೀರಿಗಾಗಿ ಅವರೆಲ್ಲರೂ ಮೌನದಿಂದ ಕಾತರಿಸುತ್ತಿದ್ದಾರೆ. ನನ್ನ ಗೆಳೆಯರೂ ಸೇರಿ ಇನ್ನೂ ಅನೇಕ ಬಂಧು ಮಿತ್ರರು ಹಣ ಎಷ್ಟೇ ಖರ್ಚಾಗಲಿ ಆತ ಮತ್ತೆ ಮೊದಲಿನಂತಾಗಲೀ ಎಂದು ನೈತಿಕ ಬೆಂಬಲ ನೀಡಲು ಸಿದ್ಧರಾಗಿದ್ದಾರೆ.
ಹೀಗೆ ಆಸ್ಪತ್ರೆಗೆ ಬಂದು ಐಸಿಯುನಲ್ಲಿರುವ ಆತನನ್ನು ನೋಡಿ ಭಾರವಾದ ಹೃದಯದಿಂದ ಹೊರಗೆ ಬರುತ್ತಿದ್ದಾರೆ. ಅಷ್ಟೆಲ್ಲಾ ಖರ್ಚು ವೆಚ್ಚಗಳನ್ನು ಮಾಡಿದರೂ ಆತ ಮೊದಲಿನಿಂತಾಗುತ್ತಾನೆಯೇ ಎನ್ನುವುದು ಇನ್ನೂ ಅನಿಶ್ಚಿತತೆಯಲ್ಲಿದ್ದರೂ, ಆತ ಗುಣಮುಖನಾಗಬಹುದು ಎಂಬ ಆಶಯದಿಂದಲೇ ಎಲ್ಲರೂ ಸರ್ವರೀತಿಯ ಪ್ರಯತ್ನದಲ್ಲಿದ್ದಾರೆ. ಅಲ್ಲಿನ ವೈದ್ಯರ ಪ್ರಕಾರ ಅಪಘಾತದಲ್ಲಿ ತೀವ್ರವಾಗಿ ನರಗಳಿಗೆ ಹಾನಿಯಾಗಿರುವ ಪರಿಣಾಮ ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಕೇವಲ ದೀರ್ಘಾವಧಿಯ ಔಷಧಿ ಮತ್ತು ಆರೈಕೆ ಮಾತ್ರ ಆತ ಗುಣಮುಖರಾಗಬಲ್ಲರು. ಆದರೆ ಅವರು ಎಷ್ಟು ದಿನ/ತಿಂಗಳು/ವರ್ಷದಲ್ಲಿ ಗುಣಮುಖರಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಶೀಘ್ರವಾಗಿ ಗುಣಮುಖರಾಗ ಬಹುದು ಇಲ್ಲವೇ ತಿಂಗಳಾನುಗಟ್ಟಲೇ ಹೀಗೆಯೇ ಚಿಕಿತ್ಸೆಯನ್ನೇ ಮುಂದುವರಿಸಿಕೊಂಡು ಹೋಗಬೇಕಾಗಬಹುದು. ಅದೃಷ್ಟವಷಾತ್ ಚಿಕಿತ್ಸೆಗೆ ಸ್ಪಂದಿಸಿ ಆವರಿಗೆ ಪ್ರಜ್ಞೆ ಬಂದರೂ ಅವರು ಮೊದಲಿನಂತೆ ಕೆಲಸ ಮಾಡಲು ಆಗುತ್ತಾರೋ ಇಲ್ಲವೋ ಎನ್ನುವುದೂ ಸಹಾ ಯಕ್ಷಪ್ರಶ್ನೆಯಾಗಿದ್ದು, ಆತ ಸರಿ ಹೋಗದೇ ಇದ್ದಲ್ಲಿ ಅವರ ಜೀವನ ಹೇಗೆ ಸಾಗುತ್ತದೆ? ಅವರ ಬಂಧು ಮಿತ್ರರೇ ಆಗಲಿ ಎಷ್ಟು ದಿನಗಳ ಕಾಲ ಅವರ ಕುಟುಂಬವನ್ನು ಬೆಂಬಲಿಸಬಹುದು?
ನಮ್ಮ ಗೆಳೆಯರು ಹೇಳುವ ಪ್ರಕಾರ ಇದು ಅವರ ಕುಟುಂಬದಲ್ಲಿ ಆದ ವಯಕ್ತಿಯ ಪ್ರಸಂಗವಾದರೇ ಇದಕ್ಕಿಂತಲೂ ಕೆಲವೇ ದಿನಗಳ ಹಿಂದೇ ಅವರೇ ಪ್ರತ್ಯಕ್ಷವಾಗಿ ನೋಡಿದಂತೆ ಶಿವನ ಸಮುದ್ರದ ಮಾರಮ್ಮ ದೇವಸ್ಥಾನಕ್ಕೆ ಪೂಜೆಗೆಂದು ಅತಿ ವೇಗವಾಗಿ ಬೈಕ್ ನಲ್ಲಿ ಹೆಲ್ಮೆಟ್ ಧರಿಸದೇ ಇಬ್ಬರು ಯುವಕರು ಹೋಗುತ್ತಿದ್ದ ಸಂಧರ್ಭದಲ್ಲಿ ಮಳೆಯಿಂದಾಗಿ ತೀರ್ವವಾಗಿ ಹಾಳಾಗಿದ್ದ ರಸ್ತೆಯಲ್ಲಿ ಇದ್ದಕ್ಕಿದ್ದಂತೆಯೇ ಬೈಕ್ ಸ್ಕಿಡ್ ಆದ ಪರಿಣಾಮ ಆ ಯುವಕರಿಬ್ಬರೂ ಬೈಕ್ ನಿಂದ ರಸ್ತೆಯ ಮೇಲೆ ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡು ಒಬ್ಬ ಹುಡುಗ ಜೀವಾಪಾಯದಿಂದ ಪಾರಾದರೇ, 30 ವರ್ಷದ ಚಂದ್ರಶೇಖರ್ ಎಂಬ ಇನ್ನೊಬ್ಬ ಸವಾರ ನಿಮ್ಹಾನ್ಸ್‌ನಲ್ಲಿ ನಿಧನರಾದ ಸುದ್ದಿಯನ್ನು ಆಗಸ್ಟ್ 1, 2025 ರ ಪತ್ರಿಕೆಯಲ್ಲಿ ಓದಿ ಬಹಳ ದುಃಖ ಪಟ್ಟಿದ್ದಾರೆ. ಈ ಪ್ರಕರಣದಲ್ಲೂ ಆ ಬೈಕ್ ಸವಾರರಿಬ್ಬರೂ ತಲೆಗೆ ಹೆಲ್ಮೆಟ್ ಧರಿಸಿದ್ದಲ್ಲಿ ಬಹುಶಃ ಈ ಪರಿಯಾಗಿ ಸಾವು ನೋವನ್ನು ಅನುಭವಿಸುತ್ತಿರಲ್ಲವೇನೋ?
ಈ ಭೂಮಿಯಲ್ಲಿ ನಾವು ಹುಟ್ಟುವಾಗ ತಾಯಿಯ ಗರ್ಭದಲ್ಲಿ 9 ತಿಂಗಳು ಕಾಯ್ದಿರುತ್ತೇವೆ, ನಂತರ ನಡೆಯಲು ಸುಮಾರು 2 ವರ್ಷಗಳಷ್ಟು ಕಾಲ ತೆಗೆದುಕೊಂಡಿರುತ್ತೇವೆ. ಆನಂತರ ಶಾಲೆಗೆ ಹೋಗಲು 3 ವರ್ಷಗಳು, ದೇಶದ ಭವಿಷ್ಯವನ್ನು ನಿರ್ಧರಿಸುವ ಮತ ಚಲಾಯಿಸಲು 18 ವರ್ಷಗಳು, ಪದವಿ ಪಡೆಯಲು 21, ಉದ್ಯೋಗ ಪಡೆಯಲು 25 ವರ್ಷಗಳು, ಮದುವೆಯಾಗಲು 25 ರಿಂದ 30 ವರ್ಷಗಳು ಹೀಗೆ ಕಾಯುವಿಕೆ ಎನ್ನುವುದು ನಮ್ಮ ಜೀವನದಲ್ಲಿ ನಿರಂತವಾದ ಪ್ರಕ್ರಿಯೆಯಾಗಿದೆ.
ಹಾಗಾಗಿ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸುವಾಗ ಅಥವಾ ಮತ್ತೊಂದು ವಾಹನವನ್ನು ಹಿಂದಿಕ್ಕುವಾಗ ಕನಿಷ್ಠ ಪಕ್ಷ 30 ಸೆಕೆಂಡುಗಳ ಕಾಲ ತಾಳ್ಮೆ ವಹಿಸಿ ನಿಂತಲ್ಲಿ ಬಹುತೇಕ ಅಪಘಾತಗಳನ್ನು ತಡೆಯಬಹುದಾಗಿದೆ. ಆತಿ ವೇಗ ತಿಥಿ ಬೇಗ ಎನ್ನುವಂತೆ ಕೇವಲ 30 ಸೆಕೆಂಡುಗಳ ತಾಳ್ಮೆ ಕಳೆದುಕೊಂಡು ಅಪಘಾತವಾದಾಗ, ನಾವು ಗಂಟೆಗಳು, ದಿನಗಳು, ವಾರಗಳು, ತಿಂಗಳುಗಳು ಮತ್ತು ಅಗತ್ಯವಿದ್ದರೆ ವರ್ಷಗಳ ಕಾಲ ಆಸ್ಪತ್ರೆಯಲ್ಲೇ ನರಳ ಬೇಕಾಗುತ್ತದೆ, ನಾವು ನರಳುವುದು ಬಿಡಿ, ಯಾವುದೇ ತಪ್ಪನ್ನು ಮಾಡಿರದ ನಮ್ಮ ಕುಟುಂಬವನ್ನೂ ಕಣ್ಣೀರಿನ ಕೋಡಿಯಲ್ಲಿ ಹರಿಸಬೇಕಾಗುತ್ತದೆ.
- ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ ಧರಿಸುವುದು ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅಲ್ಲಾ ಅದು ನಮ್ಮ ನಿಮ್ಮನ್ನು ಅವಲಂಬಿಸಿರುವವರ ಮತ್ತು ಪ್ರೀತಿಸುವವರನ್ನು ರಕ್ಷಿಸುವ ಸಾಧನ.
- ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ ಧರಿಸಿದದೇ ವಾಹನ ಚಲಾಯಿದರೆ ಧೈರ್ಯಶಾಲಿಗಳು ಎನಿಸಿಕೊಳ್ಳುವುದಿಲ್ಲ ಬದಲಾಗಿ ನಮಗೇ ಅರಿವಿಲ್ಲದಂತೆ ನಮ್ಮ ಭವಿಷ್ಯದೊಂದಿಗೆ ಜೂಜಾಟವಾಡುತ್ತಿರುತ್ತೇವೆ
- ಕೆಲವು ಸೆಕೆಂಡುಗಳ ಅಜಾಗರೂಕತೆಯು ಉಂಟುಮಾಡುವ ಭಯಾನಕ ಪರಿಣಾಮಗಳ ಬಗ್ಗೆ ಯೋಚಿಸೋಣ.
- ಮುಂದೆ ಹೋಗುವವರು ಹೋಗಲಿ… ಹಿಂದೆ ಇರುವವರು ಆರಾಮವಾಗಿ ಬರಲಿ…
- ನಾವು ನೆಮ್ಮದಿಯಾಗಿ ಸಂಚಾರ ನಿಯಮಗಳನ್ನು ಪಾಲಿಸುತ್ತಾ, ಸರಿಯಾದ ವೇಗದಲ್ಲಿ, ಸರಿಯಾದ ದಿಕ್ಕಿನಲ್ಲಿ ಹೆಲ್ಮೆಟ್ / ಸೀಟ್ ಬೆಲ್ಟ್ ಧರಿಸಿ, ನಿಯಂತ್ರಣದಲ್ಲಿ ವಾಹನವನ್ನು ಚಲಿಸುತ್ತಾ,ಸುರಕ್ಷಿತವಾಗಿ ಸಾಗೋಣ.
- ಏಕೆಂದರೆ ನಮಗಾಗಿ ನಮ್ಮನ್ನು ಹೃದಯಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಕುಟುಂಬ ಸದಸ್ಯರು ಮತ್ತು ಮಕ್ಕಳು ನಮ್ಮ ಮನೆಯಲ್ಲಿ ನಿಮಗಾಗಿ ನಮಗಾಗಿ ಕಾಯುತ್ತಿದ್ದಾರೆ ಎಂಬುದನ್ನು ಮರೆಯದಿರೋಣ
- ಜೀವನ ಎಂಬ ಒಂದು ಸೊಗಸಾದ ಸವಾರಿ ನಮ್ಮ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಶವಪೆಟ್ಟಿಗೆಯಲ್ಲಿ ಕೊನೆಗೊಂಡರೆ ಅದು ಅರ್ಥಹೀನ.
- ರೋಮಾಂಚಕ ವೇಗವು ಯಾರನ್ನಾದರೂ ಕೋಮಾಕ್ಕೆ ತಳ್ಳಿದರೆ ಅದು ನಿಷ್ಪ್ರಯೋಜಕವಾಗಿರುತ್ತದೆ.
- ಹೆದ್ದಾರಿಯಲ್ಲಿ ಒಂದು ಕ್ಷಣದ ಆತುರವು ನಮ್ಮ ಕುಟುಂಬಕ್ಕೆ ಜೀವಮಾನವಿಡೀ ವಿಷಾದವನ್ನುಂಟುಮಾಡಬಹುದು.
- ಮೊಬೈಲ್ ನಲ್ಲಿ ಮಾತನಾಡಿ ಕೊಂಡು ದ್ವಿಚಕ್ರ ವಾಹನ ಚಲಾಯಿಸುವುದು ಸಹಾ ಬಹಳ ಅಪಾಯಕಾರಿಯಗಿದೆ
- ಹುಡುಗಾಟಿಕೆಗಾಗಿ ಬೈಕ್ ನಲ್ಲಿ ವೀಲ್ಹೀ ಮಾಡುವಾಗ ಅಪಘಾತಕ್ಕೆ ಈಡಾಗಿ ತಾವೂ ಗಂಭೀರವಾಗಿ ಗಾಯಗೊಳ್ಳುವುದಲ್ಲದೇ, ಇತರನ್ನೂ ಗಾಯಾಳುಗಳಾನ್ನಾಗಿ ಮಾಡುವುದು ಅಕ್ಷಮ್ಯ ಅಪರಾಧವಾಗಿದೆ

ಈ ಸುಧೀರ್ಘವಾದ ಲೇಖನವನ್ನು ಓದಿದ ನಿಮ್ಮೆಲ್ಲರಲ್ಲೂ ಒಂದು ಕಳಕಳಿಯ ನಿವೇದಿಸಿಕೊಳ್ಳುವುದೇನೆಂದರೆ, ದಯವಿಟ್ಟು ಇನ್ನು ಮುಂದೆ ನಮ್ಮ ಪ್ರಯಾಣ ಸಣ್ಣದಾಗಿರಲೀ, ಸುದೀರ್ಘವಾಗಿರಲಿ, ಹೆಲ್ಮೆಟ್/ಸೀಟ್ ಬೆಲ್ಟ್ ಧರಿಸಿಯೇ ವಾಹನಗಳ ಚಲಾವಣೆಯನ್ನು ಆರಂಭಿಸೋಣ ಮತ್ತು ಸಂಚಾರಿ ನಿಯಮಗಳನ್ನು ಖಡಾಯವಾಗಿ ನಮಗಲ್ಲದೇ ಹೋದರೂ, ನಮ್ಮನ್ನು ಬೇಷರತ್ತಾಗಿ ಪ್ರೀತಿಸುವವರಿಗಾಗಿ ಪಾಲಿಸೋಣ.
ಬರೆಯುವಾಗ ತಪ್ಪಾದಲ್ಲಿ ಆಳಿಸಿ ಸರಿಪಡಿಸಿಕೊಳ್ಳಬಹುದು. ಮಾತನಾಡುವಾಗ ತಪ್ಪಾದಲ್ಲಿ ಕ್ಷಮೆಯಾಚಿಸಿ ಅದನ್ನು ಸರಿಪಡಿಸಿಕೊಳ್ಳ ಬಹುದು ಆದರೆ ರಸ್ತೆಯ ಮೇಲೆ ನಿರ್ಲಕ್ಷತೆಯಿಂದ ಚೆಲ್ಲಾಟವಾಡಿದ್ದಲ್ಲಿ ಅದನ್ನು ಸರಪಡಿಸಿ ಕೊಳ್ಳಲಾಗದು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ನಿಮಗೆ ಈ ಲೇಖನ ಇಷ್ಟವಾಗಿದ್ದೇ ಆದಲ್ಲಿ ದಯವಿಟ್ಟು ಅದನ್ನು ಪಾಲಿಸಿ ಮತ್ತು ನೀಫು ಪ್ರೀತಿಸುವ ಎಲ್ಲರಿಗೂ ಇದ್ದನ್ನು ತಪ್ಪದೇ ತಲುಪಿಸಿ. ಎಲ್ಲರಿಗೂ ಶುಭವಾಗಲಿ