ಕ್ಯಾಮೇನಹಳ್ಳಿಯ ಶ್ರೀ ಆಂಜನೇಯನ ಶ್ರೀ ಕಮನೀಯ ಕ್ಷೇತ್ರ

ಸಾಮಾನ್ಯವಾಗಿ ನಮ್ಮ ಪುರಾಣಗಳಲ್ಲಿ ಕಥೆಗೊಂದು ಉಪಕಥೆ ಅದಕ್ಕೊಂದು ಸಣ್ಣ ದೃಷ್ಟಾಂತ ಇರುವುದದನ್ನು ಕೇಳಿದ್ದೇವೆ ಆದರೆ ಶ್ರೀ ಕ್ಷೇತ್ರಕ್ಕೊಂದು ಉಪಕ್ಷೇತ್ರ ಇರುವ ವಿಷಯ ಸ್ವಲ್ಪ ವಿರಳವಾಗಿದ್ದು, ನಾವಿಂದು ಅಂತಹ ಶ್ರೀಕ್ಷೇತ್ರ ಮತ್ತು ಉಪಕ್ಷೇತ್ರದ ಬಗ್ಗೆ ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ

ಶ್ರೀ ಯೋಗಾ ನರಸಿಂಹ ಮತ್ತು ಭೋಗಾನರಸಿಂಹಸ್ವಾಮಿಗಳು ಇರುವ  ಶ್ರೀ ಕರಿಗಿರಿಕ್ಷೇತ್ರ ಎಂದೇ ಪ್ರಸಿದ್ಧವಾಗಿರುವ ದೇವರಾಯನದುರ್ಗ ಶ್ರೀ ಕ್ಷೇತ್ರಕ್ಕೆ ಉಪ ಕ್ಷೇತ್ರವಾಗಿ   ಜಯ, ಮಂಗಳ, ಮತ್ತು ಗರುಡಾಚಲ ಎಂಬ ಮೂರು ನದಿಗಳು  ಸಂಗಮ ಕ್ಷೇತ್ರ ಎಂದೇ ಪ್ರಸಿದ್ಧವಾಗಿರುವ ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕಿನ ಕ್ಯಾಮೇನಹಳ್ಳಿಯ ಆಂಜನೇಯ ಕ್ಷೇತ್ರವು ಬಹಳ ನಂಬಿಕೆಯ ಮತ್ತು ಶ್ರದ್ದೇಯ ಪವಿತ್ರ ಸ್ಥಳವಾಗಿದ್ದು ಅಲ್ಲಿನ ವಿಶೇಷಗಳನ್ನು ತಿಳಿಯೋಣ ಬನ್ನಿ.

ಸಾಮಾನ್ಯವಾಗಿ ಬಹುತೇಕ ದೇವಾಲಯಗಳಲ್ಲಿರುವ ಶ್ರೀ ಆಂಜನೇಯಸ್ವಾಮಿಯು ಬಲಭಾಗಕ್ಕೋ  ಇಲ್ಲವೇ ಎಡಭಾಗಕ್ಕೆ ತಿರುಗಿರುವ ವಿಗ್ರಹಗಳನ್ನು ಕಾಣುತ್ತೇವೆ. ಆದರೆ  ಈ ದೇವಾಲಯದಲ್ಲಿ  ಅತ್ಯಂತ ವಿಶೇಷವಾಗಿ ನಮಗೆ ಎದುರು ಮುಖ ಮಾಡಿರುವ ಮತ್ತು ಗಿರಿಜಾ ಮೀಸೆಯನ್ನು ಹೊಂದಿರುವ ಹನುಮನು ಕಾಣ ಸಿಗುವುದು ನಿಜಕ್ಕೂ ಅದ್ಭುತವಾಗಿದೆ. ಇದಿಷ್ಟೇ ಅಲ್ಲದೇ,  ಸಾಮಾನ್ಯವಾಗಿ ಬಹುತೇಕ ವಿಷ್ಣು ಮೂರ್ತಿಯ ವಿಗ್ರಹದಲ್ಲಿ ಕಾಣಬಹುದಾದ ಶಂಖು ಚಕ್ರಗಳನ್ನೂ ಸಹ ಇಲ್ಲಿಯೂ ಕಾಣಬಹುದಾಗಿದ್ದು,  ರಾಮನ ಪರಮ ಭಂಟ ರಘುವೀರ ಸಮರ್ಥನ  ಎಡ ಬಲದಲ್ಲಿ ಶಂಖ ಚಕ್ರಗಳಿವೆ. ಅಷ್ಟೇ ಅಲ್ಲದೇ, ಇಲ್ಲಿನ ವಿಗ್ರಹದಲ್ಲಿ ಹನುಮ, ಭೀಮ ಮತ್ತು ಮಧ್ವ ಈ ಮೂವರ ಅಂಶವೂ ಸಹಾ  ಇದೆ ಎಂದು ಅಲ್ಲಿನ ಪುರೋಹಿತರು ತಿಳಿಸುತ್ತಾರೆ. ಸುಮಾರು 5000 ವರ್ಷಗಳ ಹಿಂದೆ ಜನಮೇಜಯ ರಾಜನು ಈ ದೇವಾಲಯವನ್ನು ನಿರ್ಮಿಸಿದರು ಎನ್ನಲಾಗುತ್ತಿದ್ದು ಕಾಲಾಂತರದಲ್ಲಿ ವಿಜಯನಗರ ಅರಸರು ಜೀರ್ಣೋದ್ದಾರ ಮಾಡಿಸಿದ ಸಾವಿರಾರು ದೇವಾಲಯಗಳಲ್ಲಿ ಈ ದೇವಾಲಯವೂ ಸೇರಿದ್ದು,  ಸ್ಕಾಂದ ಪುರಾಣದಲ್ಲಿಯೂ ಈ ಕ್ಷೇತ್ರವನ್ನು ಕಮನೀಯ ಕ್ಷೇತ್ರ ಎಂದು ಉಲ್ಲೇಖವಾಗಿದೆ.

ಒಂದು ದಂತಕಥೆಯ ಪ್ರಕಾರ ಈ ಹನುಮಂತನ ವಿಗ್ರಹವನ್ನು ಪಾಂಡವರ ಮೊಮ್ಮಗನಾದ ರಾಜ ಜನಮೇಜಯನು ಕೊರಟಗೆರೆ ತಾಲ್ಲೂಕು, ಹೊಳವನಹಳ್ಳಿಯಿಂದ ಸುಮಾರು ಒಂದು ಮೈಲಿ ದೂರದಲ್ಲಿರುವ ಕೊರಟಗೆರೆಯಿಂದ ಪೂರ್ವಕ್ಕೆ ಐದು ಮೈಲಿ ದೂರದಲ್ಲಿ ಜಯಮಂಗಲಿ ನದಿಯ ದಡದಲ್ಲಿ ಸ್ಥಾಪಿಸಿದನಂತೆ, ಈ  ಹಿಂದೆ ಕ್ಷೇತ್ರವನ್ನು ಕೋರಂಪುರ ಎಂದು ಕರೆಯಲಾಗುತ್ತಿದ್ದು, ಅಂದಿನ  ಪಾಳೆಯಗಾರರ ಕಾಲದಲ್ಲಿ ಇದೊಂದು ಪ್ರಮುಖವಾದ ಪಟ್ಟಣವಾಗಿತ್ತು. ನಂತರದ ದಿನಗಳಲ್ಲಿ  ಇಲ್ಲಿ ಸ್ಥಾಪಿಸಲಾಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ (ಸಮಾಧಿ) ಅತ್ಯಂತ ಹಳೆಯ ಬೃಂದಾವನಗಳಲ್ಲಿ ಒಂದಾಗಿದೆ.

ಪ್ರತೀ ವರ್ಷ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಬರುವ ರಥಸಪ್ತಮಿಯಂದು ಬಹಳ ಅದ್ದೂರಿಯಾಗಿ  ಇಲ್ಲಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದದಲ್ಲಿ ನಡೆಯುವ  ವಾರ್ಷಿಕ ರಥೋತ್ಸವ ಅರ್ಥಾತ್ ದೊಡ್ಡ ಜಾತ್ರೆಯ ಬಹಳ ಪ್ರಸಿದ್ಧವಾಗಿದ್ದು ಕೇವಲ ಸುತ್ತಮುತ್ತಲಿನ ಪ್ರದೇಶವಲ್ಲದೇ ದೇಶವಿದೇಶಗಳಿಂದಲೂ ಸಾವಿರಾರು ಜನರು ಇಲ್ಲಿಗೆ ಬೆಂದು ಸ್ವಾಮಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಈ ಜಾತ್ರೆಯ ಮತ್ತೊಂದು ವಿಶೇಷತೆ ಎಂದರೆ, ಈ ಕಮನೀಯ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ರಾಮ ಲಕ್ಷ್ಮಣ, ಸೀತಾದೇವಿ ಮತ್ತು ಆಂಜನೇಯಸ್ವಾಮಿಯ ವಿಗ್ರಹವನ್ನು ರಥದಲ್ಲಿ  ಕೂರಿಸಿ ರಥವನ್ನು ಎಳೆಯುವ ಸಮಯಕ್ಕೆ ಸರಿಯಾಗಿ  ಕ್ಷಣಾರ್ಧದಲ್ಲೇ, ಶ್ರೀ  ದೇವರಾಯನ ದುರ್ಗದ ರಥೋತ್ಸವದಲ್ಲಿ ನಡೆಯುವಂತೆಯೇ ಇಲ್ಲಿಯೂ ಆಕಾಶದಲ್ಲಿ ಗರುಡನು ಕಾಣಿಸಿಕೊಂಡು ಸ್ವಾಮಿಗೆ 3 ಸುತ್ತು ಪ್ರದಕ್ಷಿಣೆ ಹಾಕಿದ ನಂತರವೇ ರಥವನ್ನು ಎಳೆಯಲಾಗುತ್ತದೆ. ಆಕಾಶದಲ್ಲಿ ಗರುಡ ಪಕ್ಷಿ ಕಾಣಿಸಿಕೊಳ್ಳುತ್ತಿದ್ದಂತೆಯೇ ನೆರೆದುದ್ದ ಭಕ್ತರದಲ್ಲಿ ಅಮಿತೋತ್ಸಹ ಉಂಟಾಗಿ ಅವರ  ಜೈಕಾರವು ಮುಗಿಲು ಮುಟ್ಟುವುದನ್ನು ಓದಿ ತಿಳಿಯುವುದಲ್ಲಿಂತಲೂ, ಸ್ವತಃ ಅನುಭವಿಸಿ ನೋಡಿದರೆ ಆನಂದಮಯವೆನಿಸುತ್ತದೆ.

ಈ ಜಾತ್ರೆಯ ಸಮಯದಲ್ಲೇ ಇಂದಿಗೂ ಸಹಾ  ತುಮಕೂರು  ಜಿಲ್ಲೆಯಲ್ಲೇ ಅತಿದೊಡ್ಡ  ದನಗಳ ಜಾತ್ರೆಯೂ ಸಹ ನಡೆಯುತ್ತದೆ.  ಸುತ್ತಮುತ್ತಲಿನ ರೈತಾಪಿ ಜನಗಳಲ್ಲದ್ದೇ ನೆರೆಹೊರೆಯ ರಾಜ್ಯದವರೂ ಸಹಾ ಹೆಚ್ಚಿನ ಸಂಖ್ಯೆಯಲ್ಲಿ ಈ  ದನಗಳ ಜಾತ್ರೆಗೆ ಬಂದು ತಮ್ಮ ದೈನಂದಿನ ಅವಶ್ಯಕತೆಗೆ ಮತ್ತು ಕೃಷಿ ಚಟುವಟಿಕೆಗಳಿಗೆ ದನಕರುಗಳನ್ನು ಕೊಡು ಕೊಳ್ಳುವಿಕೆಯನ್ನು ಮಾಡುವುದು ನಿಜಕ್ಕೂ ಆದ್ಭುತವಾಗಿದೆ  ಜಾತ್ರೆಯ ಸಮಯದಲ್ಲಿ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ದೇವಾಲಯಕ್ಕೇ ಹೊಂದಿಕೊಂಡಂತೆ ವಿಶ್ರಾಂತಿ ಗೃಹವಿದೆ ಮತ್ತು ಜಾತ್ರೆಯ ಸಂಧರ್ಭದಲ್ಲಿ ಅನ್ನದಾಸೋಹದ ವ್ಯವಸ್ಥೆಯೂ ಇದೆ.

ಒಂದು ದಿನದ ಪ್ರವಾಸವದಲ್ಲಿ, ಶ್ರೀ ದೇವರಾಯನ ದುರ್ಗ, ಕ್ಯಾಮೇನಹಳ್ಳಿ ಸೀತಾ ರಾಮ ಲಕ್ಷ್ಮಣರಾದಿಯಾಗಿ ಶ್ರೀ ಆಂಜನೇಯ ಸ್ವಾಮಿ ಮತ್ತು ಗೊರವನಹಳ್ಳಿಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೂ ಭೇಟಿ ನೀಡಬಹುದಾಗಿದ್ದು, ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ ಇನ್ನೇಕೆ ತಡಾ ಈ ವಾರಾಂತ್ಯದಲ್ಲಿ ಈ ಎಲ್ಲಾ ಶ್ರೀಕ್ಷೇತ್ರಗಳಿಗೂ ಭೇಟಿ ನೀಡಿ ಸ್ವಾಮಿಯ ಕೃಪಾಶ್ರೀರ್ವಾದಕ್ಕೆ ಪಾತ್ರರಾಗಿ  ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

Leave a comment