ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ, ಭರ್ಗೋ ದೇವಸ್ಯ ಧೀಮಹಿ, ಧಿಯೋ ಯೋ ನಃ ಪ್ರಚೋದಯಾತ್|| ಎನ್ನುವ ಅತ್ಯಂತ ಸರಳವಾದ ಗಾಯತ್ರಿ ಮಂತ್ರವನ್ನು ಕೇಳದೇ ಇರುವ ಹಿಂದೂಗಳೇ ಇಲ್ಲ ಎಂದರೂ ಅತಿಶಯವಾಗದು. ಕೇಳಲು ಅತ್ಯಂತ ಸರಳವಾದ ಮಂತ್ರವಾದರೂ ಅದರ ಶಕ್ತಿ ಅಥವಾ ಮಹತ್ವ ಅತ್ಯಂತ ಪರಿಣಾಮಕಾರಿ ಆಗಿರುವ ಕಾರಣಕ್ಕಾಗಿ ಗಾಯತ್ರಿ ಮಂತ್ರವನ್ನು ಮಹಾನ್ ಮಂತ್ರವೆಂದೇ ಕರೆಯಲಾಗುತ್ತದೆ. ಗಾಯತ್ರಿ ಮಂತ್ರವನ್ನು ಋಷಿ ವಿಶ್ವಾಮಿತ್ರರು ಸೂರ್ಯ ದೇವನಾದ ಸವಿತೃವು ಜ್ಞಾನ, ಬುದ್ಧಿವಂತಿಕೆ, ಮತ್ತು ಪ್ರೇರಣೆಯ ಮೂಲವೆಂದು ಪರಿಗಣಿಸಲಾಗಿರುವ ಕಾರಣ, ಅಂತಹ ಸವಿತೃವನ್ನು ಆರಾಧಿಸಲು ಮತ್ತು ಜ್ಞಾನೋದಯವನ್ನು ಪಡೆಯಲು ರಚಿಸಲಾಗಿದೆ ಎಂದು ನಮ್ಮ ಪುರಾಣದಲ್ಲಿ ಹೇಳಲಾಗುತ್ತದೆ. ಹಾಗಾಗಿ ಈ ಮಂತ್ರವನ್ನು ಯಾರು ಬಹಳ ಶ್ರದ್ಧಾ ಭಕ್ತಿಗಳಿಂದ ಪಠಿಸುತ್ತಾರೋ ಅವರಿಗೆ ಜ್ಞಾನೋದಯ, ಬುದ್ಧಿವಂತಿಕೆ, ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಪಡೆಯಬಹುದು ಎಂದು ನಂಬಲಾಗಿದೆ.
ಇಂತಹ ಗಾಯತ್ರಿ ಮಂತ್ರವನ್ನು ಪಠಿಸಲು ಮೀಸಲಾದ ದಿನವನ್ನೇ ಗಾಯತ್ರಿ ಪ್ರತಿಪತ್ ಎಂದು ಕರೆಯಲಾಗುತ್ತದೆ. ಗಾಯತ್ರಿ ಪ್ರತಿಪದವು ಒಂದು ಅದ್ಭುತ ಮತ್ತು ಪವಿತ್ರ ದಿನವಾಗಿದ್ದು, ಶ್ರಾವಣ ಮಾಸದ ಪೌರ್ಣಿಮೆಯ ಮಾರನೇ ದಿನ ಪಾಡ್ಯದಂದು ಆಚರಿಸಲಾಗುತ್ತದೆ. ಈ ಗಾಯತ್ರಿ ಪ್ರತಿಪದದ ಶುಭ ದಿನವನ್ನು ಗಾಯತ್ರಿ ಪಾಡ್ಯಮಿ, ಗಾಯತ್ರಿ ಜಪ ಸಂಕಲ್ಪ ಅಥವಾ ಗಾಯತ್ರಿ ಜಪಂ ಎಂದೂ ಸಹಾ ಕರೆಯಲಾಗುತ್ತದೆ. ಋಗ್ ಯಜುರ್ ಸಾಮ ವೇದಿ ಬ್ರಾಹ್ಮಣರು ಭಕ್ತಿ ಮತ್ತು ಸಮರ್ಪಣೆಯಿಂದ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಶುಚಿರ್ಭೂತರಾಗಿ ಸಂಧ್ಯಾವಂಧನೆಯ ಸಮಯದಲ್ಲಿ ಸೂರ್ಯದೇವನಿಗೆ ಅರ್ಘ್ಯ ನೀಡಿದ ನಂತರ ಜನಿವಾರದ ಬ್ರಹ್ಮಗಂಟನ್ನು ಹಿಡಿದುಕೊಂಡು ಯಥಾ ಶಕ್ತಿ 108 ಇಲ್ಲವೇ 1008 ಗಾಯತ್ರಿ ಜಪವನ್ನು ಮಾಡುತ್ತಾರೆ. ಹೀಗೆ ಗಾಯತ್ರಿ ಜಪ ಮಾಡಿದ ನಂತರ ಹಿಂದಿನ ದಿನ ಉಪಾಕರ್ಮದಂದು ಧರಿಸಿದ್ದ ನೂತನ ಯಜ್ಞೋಪವೀತದೊಂದಿಗೆ ಇರುವ ಹಳೆಯ ಜನಿವಾರವನ್ನು ವಿಸರ್ಜಿಸುವ ಸಂಪ್ರದಾಯವೂ ಇದೆ
ಈ ಗಾಯತ್ರಿ ಮಂತ್ರವು ಹಿಂದೂ ಧರ್ಮದಲ್ಲಿ ಬಹಳ ಮಹತ್ವದ ಮಂತ್ರವಾಗಿದ್ದು, ಇದನ್ನು ಸವಿತೃ ಮಂತ್ರ, ವೇದಮಾತೆ, ಮತ್ತು ದೇವಮಾತೆ ಎಂದೂ ಕರೆಯಲಾಗುವುದಲ್ಲದೇ, ಈ ಮಂತ್ರವು ಭಾರತೀಯ ಸಂಸ್ಕೃತಿಯಲ್ಲಿ ಬಹಳ ಮಹತ್ವದ ಸ್ಥಾನವನ್ನು ಹೊಂದಿದೆ. ಗಾಯತ್ರಿ ಪ್ರತಿಪದದಂದು ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ವಿಶೇಷ ಫಲಿತಾಂಶಗಳು ಸಿಗುತ್ತವೆ ಎಂಬ ನಂಬಿಕೆ ಇದೆ.
ಇಂತಹ ಪವಿತ್ರವಾದ ಗಾಯತ್ರಿ ಮಂತ್ರದ ಕತೃವಾದ ಸಪ್ತಋಷಿಗಳಲ್ಲಿ ಒಬ್ಬರಾದ ವಿಶ್ವಾಮಿತ್ರರು ಮೂಲತಃ ಕ್ಷತ್ರಿಯರಾಗಿದ್ದು, ವಿಶ್ವಾಮಿತ್ರರು ಋಷಿಯಾಗುವ ಮೊದಲು ಕೌಶಿಕ ಎಂಬುದು ಅವರ ಮೂಲ ಹೆಸರಾಗಿತ್ತು. ಚಂದ್ರವಂಶದ ರಾಜ ಕುಶನ ವಂಶಸ್ಥರಾಗಿದ್ದ ಕಾರಣ ಅವರಿಗೆ ಕೌಶಿಕ ಎಂಬ ಹೆಸರು ಬಂದಿತು. ನಂತರ ಋಷಿ ವಸಿಷ್ಠರೊಡನೆಯ ಸಂಘರ್ಷರಿಂದಾಗಿ ಅವರು ತಮ್ಮ ರಾಜ್ಯವನ್ನು ತ್ಯಜಿಸಿ, ಕಠಿಣವಾದ ತಪಸ್ಸನ್ನು ಮಾಡುವ ಮೂಲಕ ಋಷಿಗಳಲ್ಲಿ ಅತ್ಯುನ್ನತ ಸ್ಥಾನವಾದ ಬ್ರಹ್ಮರ್ಷಿ ಪಟ್ಟವನ್ನು ಪಡೆದು ವಿಶ್ವಾಮಿತ್ರರಾಗಿ ಸಪ್ತರ್ಷಿಗಳಲ್ಲಿ ಒಬ್ಬರಾಗಿದ್ದು ನಿಜಕ್ಕೂ ರೋಚಕವಾಗಿದೆ.
ಅದೊಮ್ಮೆ ರಾಜಾ ಕೌಶಿಕನು ತನ್ನ ಪರಿವಾರದೊಂದಿಗೆ ಕಾಡಿಗೆ ಬೇಟೆಗೆ ಹೋಗಿ ಕತ್ತಲಾದ ನಂತರ ರಾಜ ಮತ್ತು ಅವನ ಪರಿವಾರವಿಡೀ ಬಹಳ ಹಸಿವಿನಿಂದ ದಣಿವಾಗಿರುವ ಸಂಧರ್ಭದಲ್ಲೇ ಅವರಿಗೆ ಋಷಿ ವಸಿಷ್ಠ ಆಶ್ರಮ ಕಾಣಿಸುತ್ತದೆ. ಕೂಡಲೇ ಅವರೆಲ್ಲರೂ ವಸಿಷ್ಠರ ಆಶ್ರಮಕ್ಕೆ ಹೋದಾಗ ಅವರೆಲ್ಲರನ್ನೂ ಹಸನ್ಮುಖರಾಗಿ ಸ್ವಾಗತಿಸಿ ವಸಿಷ್ಠರು, ನೀವೆಲ್ಲರೂ ಬಹಳಷ್ಟು ದಣಿವಾಗಿದ್ದೀರಿ ಮತ್ತು ಹಸಿವಾಗಿದೆ ಎಂದು ನಿಮ್ಮ ಕಣ್ಣುಗಳಲ್ಲೇ ಕಾಣುತ್ತಿದೆ. ನೀವೆಲ್ಲರೂ ಕೈ ಕಾಲು ಮುಖ ತೊಳೆದುಕೊಂಡು ಊಟಕ್ಕೆ ಬನ್ನಿ ಎಂದು ಹೇಳಿ ಊಟದ ತಯಾರಿಗೆ ಹೋಗುತ್ತಾರೆ.
ರೋಗಿ ಬಯಸಿದ್ದು ಹಾಲು ಅನ್ನಾ, ವೈದ್ಯರು ಹೇಳಿದ್ದೂ ಹಾಲೂ ಅನ್ನಾ ಎನ್ನುವಂತೆ ಊಟ ಎಂಬ ಪದ ಕೇಳಿದ ತಕ್ಷಣ, ಎಲ್ಲರೂ ಹತ್ತಿರದಲ್ಲಿದ್ದ ನದಿಯಲ್ಲಿ ಕೈ ಕಾಲು ಮುಖ ತೊಳ್ದುಕೊಂದು ಶುಚಿರ್ಭೂತರಾಗಿ ಆಶ್ರಮಕ್ಕೆ ಬರುವಷ್ಟರಲ್ಲಿ ಎಲ್ಲರೀಗೂ ಘಮ ಘಮ ಎನ್ನಿಸುವ ಶುಚಿ ರುಚಿಯಾದ ಭೂರೀ ಭಕ್ಷ ಭೋಜನ ಸಿದ್ದವಾಗಿದ್ದು, ಎಲ್ಲರೂ ಅತ್ಯಂತ ಸಂತೋಷದಿಂದ ಊಟ ಮಾಡಿ ವಿಶ್ರಮಿಸಿಕೊಳ್ಳುತ್ತಿರುವಾಗ, ರಾಜ ಕೌಶಿಕನಿಗೆ, ಇಷ್ಟು ಬೇಗ ಇಡೀ ಪರಿವಾರಕ್ಕೆ ಈ ಪರಿಯಾದ ಅಡುಗೆಯನ್ನು ವಸಿಷ್ಠರು ಹೇಗೆ ಮಾಡಿ ಬಡಿಸಿದರು? ಎಂಬ ಕುತೂಹಲ ಮೂಡಿ ವಸಿಷ್ಠರಲ್ಲಿ ತನ್ನ ಸಂದೇಹವನ್ನು ನಿವೇದನೆ ಮಾಡುತ್ತಾನೆ.
ಆಗ ವಸಿಷ್ಠರು ತಮ್ಮ ಆಶ್ರಮದಲ್ಲಿ ಕೇಳಿದ್ದನ್ನು ಕೊಡುವ ಕಾಮಧೇನು ಎಂಬ ಹಸುವನ್ನು ತೋರಿಸಿ ಇದರ ಸಹಾಯದಿಂದ ಎಲ್ಲವನ್ನು ಪಡೆಯಬಹುದು ಎಂದು ಹೇಳಿದ್ದನ್ನು ಕೇಳಿ ದುರಾಸೆಗೆ ಒಳಗಾದ ಕೌಶಿಕನು ಇಂತಹ ಅಮೂಲ್ಯವಾದ ವಸ್ತುಗಳು ಋಷಿಗಳ ಆಶ್ರಮಕ್ಕಿಂತಲೂ ರಾಜಾಶ್ರಯದಲ್ಲಿ ಇರಬೇಕು. ಹಾಗಾಗಿ ಇದನ್ನು ನನಗೆ ಕೊಡಿ ಎಂದು ಕೇಳಿದಾಗ, ರಾಜಾ, ಕಾಮಧೇನುವು ನಿಸ್ವಾರ್ಥವಾದ ಸಾತ್ವಿಕ ಸೇವೆಯಾಗಿ ಮುಡುಪಾಗಿದ್ದು, ಯಾರದ್ದೇ ವಯಕ್ತಿಯ ಪ್ರತಿಷ್ಟೆ ಅಥವಾ ಸ್ವಾರ್ಥಕ್ಕಾಗಿ ಅಲ್ಲಾ! ಎಂದು ವಿನಮ್ರವಾಗಿ ತಿಳಿಸಿದ್ದಕ್ಕೆ ಕೋಪಗೊಂಡ ರಾಜಾ ಕೌಶಿಕನು ಬಲವಂತವಾಗಿ ಕಾಮಧೇನುವನ್ನು ಕರೆದುಕೊಂಡು ಹೋಗಲು ಮುಂದಾದಾಗ, ವಸಿಷ್ಠರ ಕೋರಿಕೆಯ ಮೇರೆಗೆ ಕಾಮಧೇನುವು ಶಕ್ತಿವಂತ ಯೋಧರ ಸೈನ್ಯವನ್ನು ಕ್ಷಣಮಾತ್ರದಲ್ಲೇ ಸೃಷ್ಟಿಸಿ, ಆ ಸೈನ್ಯವು ರಾಜಾ ಕೌಶಿಕನ ಪಡೆಗಳನ್ನು ಸೋಲಿಸಿದಾದ ಅವಮಾನಗೊಂಡ ರಾಜಾ ಕೌಶಿಕ ತನ್ನ ರಾಜ್ಯಭಾರವನ್ನು ತ್ಯಜಿಸಿ ಬ್ರಹ್ಮರ್ಷಿ ಪಟ್ಟವನ್ನು ಪಡೆಯುವ ಸಲುವಾಗಿ ಘನ ಘೋರವಾದ ತಪಸ್ಸನ್ನು ಮಾಡಲು ಮುಂದಾಗುತ್ತಾನೆ.
ಕೌಶಿಕನ ತಪಸ್ಸನ್ನು ಭಂಗ ಮಾಡುವ ಸಲುವಾಗಿ ದೇವೇಂದ್ರನು ಮೇನಕೆಯನ್ನು ಕಳುಹಿಸಿದಾಗ, ಮೇನಕೆಯ ಮೋಹಕ್ಕೆ ಬಲಿಯಾಗಿ ಅವರಿಬ್ಬರ ಸಂಬಂಧದಿಂದಾಗಿ ಶಕುಂತಲೆ ಎಂಬ ಮಗಳು ಜನಿಸಿದಾಗ, ಮೇನಕೆಯು ಕೌಶಿಕ ಮತ್ತು ಶಕುಂತಲೆಯನ್ನು ಕಾಡಿನಲ್ಲೇ ಬಿಟ್ಟು ಹೋದಾಗ, ಶಾಕುಂತಲೆಯನ್ನು ಕಣ್ವ ಋಷಿಗಳು ಲಾಲಿಸಿ ಪಾಲಿಸಿ ಬೆಳಸಿ ನಂತರ ರಾಜ ದುಶ್ಯಂತನೊಂದಿಗೆ ಗಂಧರ್ವ ವಿವಾಹವಾಗುತ್ತಾಳೆ. ಹೀಗೆ ಮೇನಕೆಯಿಂದ ವಿಚಲಿತನಾಗಿದ್ದಕ್ಕೆ ಬೇಸರಗೊಂಡು ಮತ್ತೆ ತನ್ನ ತಪಸ್ಸು ಮತ್ತು ಧ್ಯಾನಗಳಿಗೆ ಮರಳಿ ತನ್ನ ಎಲ್ಲಾ ಆಸೆಗಳನ್ನು ಜಯಿಸಿ ಬ್ರಹ್ಮ ಮತ್ತು ವಸಿಷ್ಠರ ಆಶೀರ್ವಾದದೊಂದಿಗೆ ಬ್ರಹ್ಮರ್ಷಿ ಪದವಿಯನ್ನು ಪಡೆದದ್ದಲ್ಲದೇ, ಗಾಯತ್ರಿ ಮಂತ್ರಕ್ಕೆ ಕಾರಣೀಭೂತರಾಗುತ್ತಾರೆ.
ಗಾಯತ್ರಿ ಪ್ರತಿಪದ್ ಆಚರಣೆ
ಗಾಯತ್ರಿ ಪ್ರತಿಪದ್ ದಿನದಂದು ಸೂರ್ಯೋದಯಕ್ಕೆ ಮುಂಚೆಯೇ ಎದ್ದು ಅಭ್ಯಂಜನವನ್ನು ಮಾಡಿ ಮಡಿ ಬಟ್ಟೆಯನ್ನು ಉಟ್ಟುಕೊಂಡು ತಮ್ಮ ದೇವತೆಗಳಿಗೆ ಜ್ಞಾನ ಮತ್ತು ಬುದ್ಧಿವಂತಿಕೆಯಿಂದ ಜ್ಞಾನೋದಯ ಪಡೆಯಲು ಪ್ರಾರ್ಥನೆ ಸಲ್ಲಿಸಿ, ಸೂರ್ಯದೇವರಿಗೆ ಅರ್ಘ್ಯವನ್ನು ನೀಡಿದ ನಂತರ 108 ಅಥವಾ 1008 ಬಾರಿ ಗಾಯತ್ರಿ ಮಂತ್ರವನ್ನು ಜಪಿಸಲಾಗುತ್ತದೆ. ಒಂದೇ ಬಾರಿ ಅಷ್ಟು ಗಾಯತ್ರಿ ಮಂತ್ರವನ್ನು ಜಪಿಸಲಾಗದೇ ಹೋದಲ್ಲಿ ಬೆಳಿಗ್ಗೆ ಮತ್ತು ಸಾಯಂ ಸಂಧ್ಯಾವಂದನೆಯ ಸಮಯದಲ್ಲಿ ಗಾಯತ್ರಿ ಮಂತ್ರದ ಜಪವನ್ನು ಮಾಡುತ್ತಾರೆ. ಗಾಯತ್ರಿ ಮಂತ್ರ ಜಪಿಸಿದ ನಂತರ ಗಾಯತ್ರಿ ದೇವಿಯ ವಿಗ್ರಹಕ್ಕೆ ಪೂಜಿಸುವುದಲ್ಲದೇ ಕೆಲವರು ಉಪವಾಸವನ್ನೂ ಮಾಡುವ ಸಂಪ್ರದಾಯವಿದೆ. ಗಾಯತ್ರಿ ಪ್ರತಿಪದ್ ದಿನದಂದು ಬ್ರಹ್ಮಚಾರಿ, ಗೃಹಸ್ಥರು, ಅಥವಾ ವಯಸ್ಸಾದವರು ಎಂಬ ಬೇಧ ಭಾವವಿಲ್ಲದೇ, ಶುದ್ಧ ಮನಸ್ಸಾಕ್ಷಿಯೊಂದಿಗೆ ಯಾರು ಬೇಕಾದರೂ, ಗಾಯತ್ರಿ ಮಂತ್ರವನ್ನು ಜಪಿಸಬಹುದಾಗಿದೆ. ಸೂರ್ಯ ದೇವರಿಗೆ ಸಮರ್ಪಿತವಾದ ಈ ಗಾಯತ್ರಿ ಮಂತ್ರವನ್ನು. ಪ್ರತೀ ದಿನ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ, ಮಧ್ಯಾಹ್ನ ಸೂರ್ಯ ತನ್ನ ತುದಿಯನ್ನು ತಲುಪುವಾಗ ಮತ್ತು ಸಂಜೆ ಸೂರ್ಯಾಸ್ತ ಸಮಯದಲ್ಲಿ ಮೂರು ಬಾರಿ ಗಾಯತ್ರಿ ಮಂತ್ರವನ್ನು ಜಪಿಸುವುದು ಅತ್ಯಂತ ಪುಣ್ಯಕರವಾಗಿದ್ದು, ಈ ರೀತಿಯಾಗಿ ಗಾಯತ್ರಿ ಮಂತ್ರವನ್ನು ಪಠಿಸುವುದದಿಂದ ಪರಮ ಶಕ್ತಿಶಾಲಿ ಮತ್ತು ಸರ್ವಶಕ್ತನೊಂದಿಗೆ ಒಂದು ಗೂಡಿಸುತ್ತದೆ ಎನ್ನುವ ನಂಬಿಕೆ ಇದೆ.
ಗಾಯತ್ರಿ ಮಂತ್ರವನ್ನು ಪಠಿಸುವಾಗ ಪಾಲಿಸಬೇಕಾಗುವ ಕೆಲವು ನಿಯಮಗಳು

- ಗುರುಮುಖೇನ ಮಂತ್ರೋಪದೇಶವಾದ ನಂತರವೇ ಗಾಯತ್ರಿ ಮಂತ್ರವನ್ನು ಪಠಿಸಬೇಕು
- ದೈಹಿಕವಾಗಿ ಮತ್ತು ಮಾನಸಿಕವಾಗಿ ಶುದ್ಧರಾದ ನಂತರವೇ ಗಾಯತ್ರಿ ಮಂತ್ರವನ್ನು ಪಠಿಸಬೇಕು
- ಗಾಯತ್ರಿ ಮಂತ್ರವನ್ನು ಪಠಿಸುವಾಗ ಶುದ್ಧವಾದ ಮಡಿ ಬಟ್ಟೆಯನ್ನು ಧರಿಸಬೇಕು.
- ಗಾಯತ್ರಿ ಮಂತ್ರವನ್ನು ಪಠಿಸುವಾಗ ಕೃಷ್ಣಾಜಿನ ಅರ್ಥಾತ್ ಜಿಂಕೆಯ ಚರ್ಮ (ಕಾನೂನು ಬಾಹೀರ) ಅಥಾವ ಮಂದಲಿಗೆ (ಚಾಪೆ) ಅಥವಾ ಮರದ ಮಣೆಯ ಮೇಲೆ ಕುಳಿತುಕೊಳ್ಳಬೇಕು.
- ಗಾಯತ್ರಿ ಮಂತ್ರವನ್ನು ಪಠಿಸುವ ಸಂಖ್ಯೆಯನ್ನು ನೆನಪಿಡಲು ತುಳಸಿ ಅಥವಾ ಶ್ರೀಗಂಧದ ಜಪಮಾಲೆಯನ್ನು ಬಳಸಬೇಕು
- ಯಾವ ಸಮಯದಲ್ಲಿ ಬೇಕಾದರೂ ಗಾಯತ್ರಿ ಮಂತ್ರವನ್ನು ಜಪಿಸಬಹುದಾದರೂ, ಬ್ರಾಹ್ಮಿ ಮುಹೂರ್ತದಲ್ಲಿ ಗಾಯತ್ರಿ ಮಂತ್ರವನ್ನು ಪಠಿಸುವುದು ಅತ್ಯಂತ ಮಂಗಳಕರವಾಗಿದ್ದು ಆ ಸಮಯದಲ್ಲಿ ಪೂರ್ವಾಭಿಮುಖವಾಗಿ ಕುಳಿತು ಕೊಳ್ಳಬೇಕು
- ಸೂರ್ಯಾಸ್ತ ಸಮಯದಲ್ಲಿ ಗಾಯತ್ರಿ ಮಂತ್ರವನ್ನು ಪಠಿಸುವಾಗ ಪಶ್ಚಿಭಿಮುಖವಾಗಿ ಕುಳಿತು ಕೊಳ್ಳಬೇಕು
ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ಆಗುವ ಪ್ರಯೋಜನಗಳು

- ನಕಾರಾತ್ಮಕತೆ ದೂರಾವಾಗಿ ಸಕಾರಾತ್ಮಕ ಆಲೋಚನೆಗಳು, ಚಿಂತನೆಗಳು ಸೃಷ್ಟಿಯಾಗುತ್ತದೆ
- ಒತ್ತಡ ಮತ್ತು ಕೋಪದಿಂದ ಮುಕ್ತಿ ದೊರೆತು, ಅನೇಕ ರೀತಿಯ ಭಯಗಳು ನಿವಾರಣೆಯಾಗಿ ಮನಸ್ಸನ್ನು ಶಾಂತವಾಗುತ್ತದೆ
- ಏಕಾಗ್ರತೆ ಹೆಚ್ಚಾಗಿ ಮನಸ್ಸು ಅಧ್ಯಯನದ ಮೇಲೆ ಕೇಂದ್ರೀಕೃತವಾಗುವುದು.
- ಮಲಗುವ ಮುನ್ನ ನೀವು ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಕೆಟ್ಟ ಕನಸುಗಳಿಂದ ಮುಕ್ತಿ ದೊರೆತು ಗಾಢವಾದ ನಿದ್ರೆ ಮಾಡಬಹುದಾಗಿದೆ.
ಗಾಯತ್ರಿ ಮಂತ್ರದ ಬಗ್ಗೆ ಇಷ್ಟೆಲ್ಲಾ ಮಾಹಿತಿಗಳು ತಿಳಿದ ನಂತರ ಈ ಗಾಯತ್ರಿ ಪ್ರತಿಪತ್ ದಿನದಂದು ಮತ್ತು ಪ್ರತೀ ದಿನವೂ ಯಥಾ ಶಕ್ತಿ ಗಾಯತ್ರಿ ಜಪವನ್ನು ಮಾಡುವ ಮೂಲಕ ಅದರ ಪ್ರಯೋಜನಗಳನ್ನು ಪಡೆದುಕೊಳ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ