ಪತ್ನಿಯರ ಕೃತಜ್ಞತಾ(ಮೆಚ್ಚುಗೆಯ) ದಿನ

ಅರೇ ಇದೇನಿದು ಹೊಸಾ ಆಚರಣೆ? ಎಂದು ನೀವು ಕೇಳಿದರೆ, ಹೌದು ನಿಜ WIFE APPRECIATION DAY ಎಂದು ಆಚರಿಸುವ  ದಿನವೊಂದು ಇದೆ ಎಂದು ನಮ್ಮ ಆತ್ಮೀಯರೊಬ್ಬರು ತಿಳಿಸಿದಾಗಲೇ ನನಗೂ ಸಹಾ ತಿಳಿದಿದ್ದು ಅದರ ಬಗ್ಗೆ ಕುತೂಹಲಗೊಂಡು  ಅಲ್ಲಿ ಇಲ್ಲಿ ಓದಿ ತಿಳಿದ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಕೆಲವು ದಶಕಗಳ ಹಿಂದೆ ನಮ್ಮ ಸನಾತನ ಸಂಸ್ಕೃತಿಯಲ್ಲಿ ವರ್ಷದ 365 ದಿನಗಳನ್ನೂ ಒಂದಲ್ಲಾ ಒಂದು ಹಬ್ಬವನ್ನಾಗಿ ಆಚರಿಸಲಾಗುತ್ತದೆ ಎಂದು ಹೆಮ್ಮೆಯಿಂದ ನಾವುಗಳು ಹೇಳಿಕೊಳ್ಳುವಾಗ, ಬಹುತೇಕರು  ಅರೇ ಇದೆಂತಹ ಮೂಢ ನಂಬಿಕೆ ಎಂದು ಮೂದಲಿಸುತ್ತಿದ್ದರು.  ಆದರೆ 18ನೇ ಶತಮಾನದ ಅಂತ್ಯದಲ್ಲಿ ಇಂಗ್ಲೇಂಡಿನಲ್ಲಿ ಗುಡಿಕೈಗಾರಿಕೆಯ ಬದಲಾಗಿ  ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು  ಯಂತ್ರಗಳನ್ನು ಆವಿಷ್ಕರಿಸಿ, ಕಾರ್ಖಾನೆಗಳನ್ನು ಆರಂಭಿಸಿ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕಾ ಕ್ರಾಂತಿ  ಆರಂಭವಾದ ನಂತರ ಕೃಷಿ. ಚಟುವಟಿಕೆಯೂ ಸೇರಿದಂತೆ ಜವಳಿ ಉದ್ಯಮ, ಕಬ್ಬಿಣ ಉತ್ಪಾದನೆ, ಮತ್ತು ಸಾರಿಗೆಯಂತಹ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿ ಆದ ಕಾರಣ, ಹೆಚ್ಚಿನ ಉತ್ಪಾದನೆಗಳಿಗೆ ಹೊಸ ಹೊಸಾ ಯಂತ್ರಗಳ ಆವಿಷ್ಕಾರವಾಯಿತು. ಈ ರೀತಿಯ ಕೈಗಾರಿಕಾ ಕಾಂತ್ರಿಯಿಂದಾಗಿ ಜಾಗತಿಕವಾಗಿ ಎಲ್ಲಾ ದೇಶಗಳ ಆರ್ಥಿಕ ಶಕ್ತಿ ಹೆಚ್ಚಾಗುತ್ತಿದ್ದಂತೆಯೇ ಆದರೆ ಜಾಗತಿಕವಾಗಿ ಎಲ್ಲಾ ದೇಶಗಳ ಆರ್ಥಿಕ ಶಕ್ತಿ ಹೆಚ್ಚಾಗುತ್ತಿದ್ದಂತೆಯೇ  ತಮ್ಮ ಉತ್ಪಾದನೆಗಾಗಿ ಹೊಸಾ ಹೊಸಾ ಗ್ರಾಹಕರ ಆವಿಷ್ಕಾರದಲ್ಲಿ ಇದ್ದಾಗಲೇ ಈ ವಸಾಹತು ಕಲ್ಪನೆ ಮೂಡಿ ಮತ್ತೊಂದು ದೇಶಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು  ಅಲ್ಲಿನ ಸ್ಥಳೀಯ ಉತ್ಪಾದಕರನ್ನು ಹತ್ತಿಕ್ಕಿ ತಮ್ಮ ಉತ್ಪಾದನೆಗಳನ್ನು ಅವರ ಮೇಲೆ ಹೇರ ತೊಡಗಿದರು.

ಉತ್ಪಾದನೆಗೇನೂ ಕೊರತೆ ಇಲ್ಲದಿದ್ದರೂ, ಜನರ ಬಳಿ ಕೊಳ್ಳುವ ಶಕ್ತಿಯೇ ಇಲ್ಲದಿರುವಾಗಲೇ ಮಾಹಿತಿ ತಂತ್ರಜ್ಞಾನದ ಆವಿಷ್ಕಾರವಾಗಿ ಸಾಮಾನ್ಯ ಮಧ್ಯಮ ವರ್ಗದ ಮಕ್ಕಳೂ ಆಧುನಿಕ ತಂತ್ರಜ್ಞಾನಗಳನ್ನು ಕಲಿತು ಇಲ್ಲಿಂದಲೇ ಬಹುರಾಷ್ಟ್ರೀಯ ಕಂಪನಿಗಳಿಗೆ  ಬಗೆ ಬಗೆಯ ತಂತ್ರಾಂಶಗಳನ್ನು ನಿರ್ಮಿಸಿ ಕೊಡಲು  ಆರಂಭಿಸುತ್ತಿದ್ದಂತೆಯೇ ಎಲ್ಲರ ಬಳಿಯೂ ಯಥೇಚ್ಚವಾಗಿ ಹಣ ಕಾಸು ಓಡಾಡ ತೊಡಗಿದಾಗ, ಕೈಯ್ಯಲ್ಲಿರುವ ಕಾಸು ಖರ್ಚು ಮಾಡುವುದು ಹೇಗೆ ಎಂಬ ಜಿಜ್ಞಾಸೆಯಲ್ಲಿರುವಾಗಲೇ ಹುಟ್ಟಿಕೊಂಡಿದ್ದೇ ಅದ್ಧೂರಿಯ  ಹೊಸ ವರ್ಷದ ಆಚರಣೆ, ಕ್ರಿಸ್ಮಸ್, ಪ್ರೇಮಿಗಳ ದಿನ, ಸ್ನೇಹಿತರ ದಿನ, ಧನ್ಯವಾದ ದಿನ, ಇಂತಹ ದಿನಗಳಿಗೆ ಪಟ್ಟಿಗೆ ಮತ್ತೊಂದು ಸೇರ್ಪಡೆಯೇ ಪತ್ನಿಯರ ಕೃತಜ್ಞತಾ(ಮೆಚ್ಚುಗೆಯ) ದಿನ ಅರ್ಥಾತ್ Wife Appreciation Day.

ಸಾಮಾನ್ಯವಾಗಿ ಸೆಪ್ಟೆಂಬರ್ 3ನೇ ಭಾನುವಾರದಂದು ಆಚರಿಸಲಾಗುವ  ಪತ್ನಿಯ ಮೆಚ್ಚುಗೆಯ ದಿನದ ಆಚರಣೆಯ ಮೂಲವು ಸ್ವಲ್ಪಮಟ್ಟಿಗೆ ಅಸ್ಪಷ್ಟವಾಗಿದ್ದು ಈ ಆಚರಣೆ ಒಬ್ಬ ನಿರ್ದಿಷ್ಟ ವ್ಯಕ್ತಿ ಅಥವಾ ಸಂಸ್ಥೆಯಿಂದ ಪ್ರಾರಂಭಿಸಲಾಗಿಲ್ಲದಿದ್ದರೂ, ಅದರ ಮಹತ್ವವು  ಬಹಳ ಸ್ಪಷ್ಟವಾಗಿದೆ. 2000ರ ದಶಕದ ಆರಂಭದಲ್ಲಿ ಬಹುಶಃ ಕಾರ್ಪೊರೇಟ್, ಅಮೆರಿಕ ಮತ್ತು ಸಾಮಾಜಿಕ ಮಾಧ್ಯಮದಿಂದ ಮಕ್ಕಳಿಲ್ಲದ ಪತ್ನಿಯರನ್ನು ಗೌರವಿಸುವ, ತಾಯಂದಿರ ದಿನಕ್ಕೆ ಪ್ರತಿರೂಪವಾಗಿ ಕಲ್ಪಿಸಲಾಗುವ ಉದ್ದೇಶವನ್ನು ಹೊಂದಿದ್ದ ಈ ಆಚರಣೆ 2006ರಿಂದ ಉಚ್ಛ್ರಾಯ ಸ್ಥಿತಿಯನ್ನು ತಲುಪಿ ಅಮೇರಿಕಾದಲ್ಲಿ ವಾರ್ಷಿಕವಾಗಿ ಆಚರಿಸಲಾಗುವ ಅದ್ದೂರಿ ದಿನಗಳಲ್ಲಿ ಈ ದಿನವು  ಒಂದಾಗಿದೆ.

ಆರಂಭದಲ್ಲಿ ಮಕ್ಕಳಿಲ್ಲದ ಮಡದಿಯರನ್ನು ಗೌರವಿಸುವುದರ ಹಿನ್ನಲೆಯಿಂದ ಆರಂಭವಾದರೂ ನಂತರ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ಅಮೇರಿಕಾದ ಪುರುಷರು ತಮ್ಮ ಪತ್ನಿಯನ್ನು ಪ್ರೀತಿಸುವ ಪರಿಯನ್ನು ತೋರಿಸಿಕೊಳ್ಳುವ ದಿನವಾಗಿ ಆಚರಿಸಲ್ಪಟ್ಟಿದೆ. ಉಳಿದ ಹಬ್ಬಗಳಂತೆಯೇ ಈ ದಿನವೂ ಸಹಾ ತಮ್ಮ ಮಡದಿಗೆ ಶುಭಾಶಯ ಪತ್ರಗಳು ಮತ್ತು ಆಕೆಗೆ ಮೆಚ್ಚುಗೆಯಾಗುವ ವಿಶೇಷ ಉಡುಗೊರೆಗಳನ್ನು ನೀಡುವ ಪದ್ದತಿ ರೂಢಿಯಲ್ಲಿದೆ.

ಇದನ್ನೇ ಬಂಡವಾಳವನ್ನಾಗಿಸಿಕೊಂಡ ಅಮೇರಿಕಾದ ಆನ್ ಲೈನ್ ಸಂಸ್ಥೆಗಳು, ಹೆಂಗಸರುಗಳು ಮೆಚ್ಚುವಂತಹ ಉಡುಗೆ ತೊಡುಗೆಗಳು, ಡಿಸೈನರ್ ಸುಗಂಧ ದ್ರವ್ಯ  ವಿಶಿಷ್ಟವಾದ ಆಭರಣಗಳು, ಆಲಂಕಾರಿಕ ವಸ್ತುಗಳು,  ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಅಲ್ಲದೇ  ನೆಚ್ಚಿನ ಪ್ರವಾಸ ತಾಣಗಳಲ್ಲಿನ ಪ್ರವಾಸಗಳನ್ನು ಭಾರೀ ರಿಯಾತಿ ದರದಲ್ಲಿ ಕೊಡುವ ಆಮಿಷವನ್ನು ಒಡ್ಡುವ ಮೂಲಕ ತಮ್ಮ ಭಾರೀ ಲಾಭವನ್ನು ಮಾಡಿಕೊಳ್ಳುತ್ತಿರುವುದು ತಿಳಿದಿದ್ದರೂ,  ಪಾಶ್ಚಾತ್ಯರ  ಅಂಧಾನುಕರಣೆಯಲ್ಲಿ ಅಗ್ರೇಸರವಾಗಿರುವ ಭಾರತದಲ್ಲೂ ಇತ್ತೀಚೆಗೆ ಈ Wife Appreciation Day ಹಾವಳಿ ಹೆಚ್ಚಾಗುತ್ತಿರುವುದು ಕಳವಳಕಾರಿಯಾದ ಸಂಗತಿಯಾಗಿದೆ

ನೀವು ನಿಮ್ಮ ಹೆಂಡತಿಯನ್ನು ಪ್ರೀತಿಸುತ್ತೀರಿ, ಆಕೆಯನ್ನು ಮೆಚ್ಚಿಕೊಂಡಿದ್ದೀರಿ ಮತ್ತು ಆಕೆಯನ್ನು ಗೌರವಿಸುತ್ತೀರಿ ಎಂದು ತಿಳಿಸುವುದಕ್ಕೆ ಮತ್ತೊಂದು ಕಂಪನಿಗಳನ್ನು ಉದ್ಧಾರ ಮಾಡುವ ಈ ರೀತಿಯಾದ ದುಬಾರಿಯ ತೋರ್ಪಡಿಕೆಯ ಉಡುಗೊರೆಗಳಿಗಿಂತಲೂ ಆಕೆಯೊಂದಿಗೆ ಪ್ರತಿದಿನವೂ ಸ್ವಲ್ಪ ಸಮಯವನ್ನು ಕಳೆಯುವುದು ಉತ್ತಮ ಎನ್ನುವುದು ನನ್ನ ವಯಕ್ತಿಕ ಆಭಿಪ್ರಾಯ.  ಇದಕ್ಕೆ ಪೂರಕವಾಗುವಂತೆ ನಮ್ಮ   ಊರಿಗೆ ಅರಸನಾಗಿದ್ದರೂ ತಾಯಿಗೆ ಮಗ ಮತ್ತು ಹೆಂಡತಿಯ ಸೇವಕ ಎಂಬ ಗಾದೆಯ ಮಾತಿದ್ದು, ಈ ಹಿಂದೆ ಪತಿಯು ಕೆಲಸ ಮುಗಿಸಿ ಮನೆಗೆ ಬರುವಾಗ ಆಕೆಯನ್ನು ರಮಿಸಲು ಒಂದು ಮೊಳ ಮಲ್ಲಿಗೆ ಹೂವು ಮತ್ತು ಸಿಹಿ ತಿಂಡಿಯ ಪಟ್ಟಣವೊಂದನ್ನು ಕೈಗಿಡುತ್ತಿದ್ದಂತೆಯೇ, ಎಲ್ಲಾ ಕೋಪತಾಪಗಳೆಲ್ಲವೂ ಮಂಗ ಮಾಯವಾಗುತ್ತಿದ್ದದ್ದನ್ನು ನೋಡಿದ್ದೇವೆ ಮತ್ತು  ಹೆಚ್ಚಿನವರು ಅನುಭವಿಸಿದ್ದೇವೆ.

ಇನ್ನು ನಮ್ಮ ಕನ್ನಡ ಪ್ರೇಮ ಕವಿಗಳು ಎಂದೇ ಪ್ರಖ್ಯಾತರಾಗಿದ್ದ. ಹಿರಿಯ ಕವಿ ಕೆ.ಎಸ್. ನರಸಿಂಹಸ್ವಾಮಿಯವರು ಹೆಂಡತಿಯೊಬ್ಬಳು ಮನೆಯೊಳಗಿದ್ದರೆ, ನನಗದೆ ಕೋಟಿ ರುಪಾಯಿ! ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನೂ ಒಬ್ಬ ಸಿಪಾಯಿ.  ಎಂದು ಸರಳವಾಗಿ ತಮ್ಮ ಕವಿತೆಯಲ್ಲಿ ಬರೆಯುವ ಮೂಲಕ ಹೆಂಡತಿಯ ಪ್ರೀತಿ ಮತ್ತು ಅವಳ ಉಪಸ್ಥಿತಿಯು ಪುರುಷನಿಗೆ ಸಿಗುವ ಅತ್ಯಂತ ದೊಡ್ಡ ಸಂಪತ್ತು ಮತ್ತು ಅದನ್ನು ಹೇಗೆ ಗಳಿಸಿಕೊಳ್ಳಬೇಕು  ಎಂಬುದನ್ನು ಸೂಚಿಸಿದ್ದಾರೆ. ಹಾಗಾಗಿ  ಮಡದಿಗಾಗಿ ಕೇವಲ Wife Appreciation Day ಎಂದು ಮೀಸಲಾಗಿಸದೇ, ಪ್ರತೀ ದಿನವೂ ಮನೆಯಲ್ಲಿ ಆಕೆ ಮಾಡುವ ಕೆಲಸಗಳೊಂದಿಗೆ ಪತಿಯರೂ ಸಹಾ ಸಹಕರಿಸುವ ಮೂಲಕ ಮತ್ತು ಆಕೆ ಮಾಡುವ ಅಡುಗೆ, ಮನೆಯ ಅಲಂಕಾರ, ಅತಿಥಿ ಸತ್ಕಾರ, ಮಕ್ಕಳನ್ನು ನೋಡಿಕೊಳ್ಳುವ ಪರಿಯನ್ನು ಹೊಗಳುವ ಸಾಧ್ಯವಾದರೇ ನಿಮ್ಮದೇ ಭಾಷೆಯಲ್ಲಿ ಒಂದೆರಡು ಸಾಲು ಕವಿತೆ ರಚಿಸಿ ಹಾಡುವ ಇಲ್ಲವೇ  ಸಮಯಕ್ಕೆ ಒಪ್ಪುವಂತಹ ಜನಪ್ರಿಯ ಚಲನಚಿತ್ರಗೀತೆಗಳನ್ನು ಹಾಡುವ ಮೂಲಕ ದಿನನಿತ್ಯವೂ ಆಕೆ ಸಂತೃಪ್ತಳಾಗಿ ಇರುವಂತೆ ನೋಡಿ ಕೊಂಡಲ್ಲಿ  ಎಲ್ಲರ ಸಂಸಾರವೂ ಸ್ವರ್ಗಕ್ಕೆ ಕಿಚ್ಚು ಹತ್ತಿಸುವಂತೆ ಇರುತ್ತದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನದ ಸಂಕ್ಷಿಪ್ತ ಸಾರ, 2025 ಸೆಪ್ಟಂಬರ್ 21ರ ತುಮಕೂರು ವಾರ್ತೆ ಪತ್ರಿಕೆಯಲ್ಲಿ ಪ್ರಕಟವಾಗಿದೆ.

2 thoughts on “ಪತ್ನಿಯರ ಕೃತಜ್ಞತಾ(ಮೆಚ್ಚುಗೆಯ) ದಿನ

  1. ಅಣ್ಣಾ ಅದ್ಬುತವಾದ ಮಂಡನೆ… ನಮ್ಮ ಮನೆಯಲ್ಲಿ ಓದಿದ ನಂತರ ಕೆಲವು ಸರಿ ತಪ್ಪುಗಳ ಚರ್ಚೆ ಹುಟ್ಟು ಹಾಕಿದೆ. ಎಲ್ಲರಿಗೂ ಗೊತ್ತಿರುವಂತೆ ನನ್ನ ಹೆಂಡತಿಯೇ ಗೆಲ್ಲುವುದು……

    Like

    1. ಅದಕ್ಕೇ ಅಲ್ವೇ, ನಮ್ಮ ಹಿರಿಯರು ಊರಿಗೆ ಒಡೆಯನಾದರೂ ತಾಯಿಗೆ ಮಗ ಮತ್ತು ಹೆಂಡತಿಗೆ ಗುಲಾಮ ಎಂದು ಹೇಳಿರುವುದು. ಅದನ್ನೇ ಯೋಗರಾಜ ಭಟ್ರು, ಸರಳವಾಗಿ ಹೆಣ್ಮಕ್ಳೇ ಸ್ಟ್ರಾಂಗ್ ಗುರೂ!! ಎಂದು ಹೇಳಿರುವುದು. ಎಲ್ಲರ ಮನೆಯ ದೂಸೆಯಲ್ಲೂ ತೂತು ಇರುತ್ತದೆ ಎನ್ನುವಂತೆ ಎಲ್ಲರ ಮನೆಯಲ್ಲೂ ಮಡದಿಯರದ್ದೇ ದರ್ಬಾರ್!! ಎನ್ನುವುದು ನಿರ್ವಿವಾದ.

      Like

Leave a reply to Shridhar Muralidhar Joshi Cancel reply