ಕಳೆದ ಎಂಟು ಹತ್ತು ದಿನಗಳಿಂದಲೂ ಕರ್ನಾಟಕಲ್ಲಿನ ಕೆಲಸವಿಲ್ಲದ ಕೆಲವು ಮಂತ್ರಿಗಳು ತಮ್ಮ ಇಲಾಖೆಯ ಕೆಲಸಗಳನ್ನು ಸರಿಯಾಗಿ ಮಾಡದೇ ತಮ್ಮ ವೈಫಲ್ಯಗಳನ್ನು ಮುಚ್ಚಿಡುವ ಸಲುವಾಗಿಯೋ ಇಲ್ಲವೇ ಯಾವುದೋ ಅಧಿಕಾರಕ್ಕಾಗಿ ಯಾರನ್ನೋ ಮೆಚ್ಚಿದುವ ಸಲುವಾಗಿ ಸಂಘದ ಪಥಸಂಚಲನವನ್ನು ನಿರ್ಭಂಧಿಸುವ, ಸಂಘದ ಶಾಖೆಗಳಿಗೆ ಸರ್ಕಾರಿ ಜಾಗದಲ್ಲಿ ಪ್ರತಿಬಂಧಿಸುವ ಆಟ ಆಡ್ತಾ ಇದ್ರೇ, ಸಿನಿಮಾ ಡೈಲಾಗ್ ಹೊಡೆದುಕೊಂಡು ಸಿದ್ರಾಮಯ್ಯನ ಗ್ಯಾರಂಟಿಗಳ ಫಲವಾಗಿ ಅಚಾನಕ್ಕಾಗಿ ಚಿಕ್ಕಬಳ್ಳಾಪುರದ ಜನಪ್ರತಿನಿಧಿಯಾಗಿ ಆಯ್ಕೆಯಾದ ವ್ಯಕ್ತಿಯೊಬ್ಬ ತನ್ನ ಇತಿ ಮಿತಿಗಳನ್ನರಿಯದೇ, ತಾನೊಬ್ಬ ಮಾತ್ರಾ ಸಾಚಾ ಎನ್ನುವಂತೆ ಎಲ್ಲರನ್ನೂ ಬಾಯಿಗೆ ಬಂದಂತೆ ಮಾತನಾಡುತ್ತಾ, ಜೋಕರ್ ಆಗಿರುವ ಸಂಧರ್ಭದಲ್ಲಿ ಬಸ್ ಒಂದರ ಅಪಘಾತವು ಹಲವಾರು ವರ್ಷಗಳಿಂದಲೂ ನಿರಂತವಾಗಿ ನಡೆದುಕೊಂಡು ಬರುತ್ತಿರುವ ಖಾಸಗೀ ಟ್ರಾವಲ್ಸ್ ಕಂಪನಿಗಳ ಮಾಫಿಯಾ ವಿಚಾರ ಯಾರ ಗಮನಕ್ಕೂ ಬಾರದೇ ಹೋಗಿದ್ದು ಇಂದು ಬೆಳಕಿಗೆ ಬಂದಿದ್ದು ಅದರ ಬಗ್ಗೆ ಸರ್ಕಾರದ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಚಿಂತಿಸಬೇಕಾದ ಅನಿವಾರ್ಯತೆ ಒದಗಿ ಬಂದಿದೆ.
2025ರ ಅಕ್ಟೋಬರ್ 15 ನೇ ತಾರೀಕು. ಜೈಸಲ್ಮೀರ್ ನಿಂದ ಜೋಧಪೂರಿಗೆ ಹೋಗುವ ಒಂದು ಬಸ್ಸು ಬೆಂಕಿಗೆ ಆಹುತಿಯಾಗಿ ಸುಮಾರು 20 ಪ್ರಯಾಣಿಕರ ಸಾವಿಗೆ ಕಾರಣವಾದಂತೆಯೇ, ಅಕ್ಟೋಬರ್ 24 ರಂದು ಹೈದರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗೀ ಕಾವೇರೀ ಟ್ರಾವೆಲ್ಸ್ ಬಸ್ ಕರ್ನೂಲ್ ಬಳಿ ಅಪಘಾತಕ್ಕೆ ಈಡಾಗಿ ಇಡೀ ಬಸ್ಸು, ಬೆಂಕಿಗೆ ಆಹುತಿಯಾಗಿ 20 ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದು ಆ ಅವಘಡದ ಹಿಂದಿರುವ ಘನಘೋರ ಕತೆ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ.
ಆಕ್ಟೋಬರ್ 23 ಗುರುವಾರ ರಾತ್ರಿಯಂದು ಅನೇಕ ಕನಸುಗಳನ್ನು ಹೊತ್ತ ಅಥವಾ ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಸುಮಾರು 20-30 ಪ್ರಯಾಣೀಕರು ಭಾಗ್ಯನಗರದಿಂದ ಬೆಂಗಳೂರಿಗೆ ಬರುವ ಸಲುವಾಗಿ ಹೈಟೆಕ್ ಮಲ್ಟೀ ಆಕ್ಸಲ್ ಸ್ಲೀಪರ್ ಕೋಚ್ ಬಸ್ಸನ್ನೇರಿ ಎಲ್ಲರೂ ಆರಾಮವಾಗಿ ಕನಸು ಕಾಣುತ್ತಾ ಸುಖಃವಾಗಿ ನಿದ್ರಿಸುತ್ತಿದ್ದು ಬಸ್ಸು, ಆಂಧ್ರಪ್ರದೇಶದ ಕರ್ನೂಲ್ ಬಳಿ ತಡ ರಾತ್ರಿಯಲ್ಲಿ ಬರುತ್ತಿರುವಾಗ ಇದ್ದಕ್ಕಿದ್ದಂತೆಯೇ ಎದುರಿನಿಂದ ಬರುತ್ತಿದ್ದ ಬೈಕ್ ಡಿವೈವಡರ್ಗೆ ಡಿಕ್ಕಿ ಹೊಡೆದು ಆಯ ತಪ್ಪಿ ಅದು ನೇರವಾಗಿ ಬಸ್ಸಿನ ಅಡಿಗೆ ಬಂದು ಬೀಳುತ್ತಿದ್ದಂತೆಯೇ ಆ ಕ್ಷಣದಲ್ಲಿ ಏನೂ ಮಾಡಲಾಗದೆ ಆ ಬೈಕಿನ ಮೇಲೆ ಬಸ್ ಹತ್ತಿ ಕೊಂಡು ಹೋಗುತ್ತಿದ್ದಂತೆಯೇ ಬಸ್ಸಿನ ಅಡಿಗೆ ಸಿಕ್ಕ ಬೈಕ್ ಸುಮಾರು 200-300 ಮೀಟರ್ಗಳಷ್ಟು ರಸ್ತೆಯಲ್ಲಿ ಎಳೆದುಕೊಂಡು ಹೋಗುವಾಗ ಆದ ಘರ್ಷಣೆಯಲ್ಲಿ ಬಸ್ಸಿಗೆ ಅಚಾನಕ್ಕಾಗಿ ಬೆಂಕಿ ತಗಲಿ. ಆರಾಮಾಗಿ ಮಲಗಿದ್ದ ಪ್ರಾಯಾಣಿಕರಿಗೆ ಆ ಕ್ಷಣದಲ್ಲಿ ಏನಾಗುತ್ತಿದೆ ಎಂದು ತಿಳಿಯುವ ಮುನ್ನವೇ ಇಡೀ ಬಸ್ಸಿಗೆ ಬೆಂಕಿ ತಗುಲಿ ಕ್ಷಣ ಮಾತ್ರದಲ್ಲೇ ಇಡೀ ಬಸ್ ಧಗ ಧಗ ಎಂದು ಉರಿದು ಹೋಗಿ, ಕೆಲವರ ಧೈರ್ಯ ಅಥವಾ ಸಮಯ ಪ್ರಜ್ಞೆಯಿಂದಾಗಿ ಬದುಕುಳಿದರೆ, ಸುಮಾರು 20 ಅಮಾಯಕ ಜೀವಗಳು ಗುರುತಿಸಲೂ ಅಗದಂತೆ ಸುಟ್ಟು ಕರಕಲಾಗುವ ಮೂಲಕ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.
ಬೆಂಕಿಯ ಕೆನ್ನಾಲಿಗೆಗೆ 20 ಮಂದಿ ಆಯುತಿಯಾದ ವಿಷಯ ಶುಕ್ರವಾರದ ಬೆಳಿಗ್ಗೆ ಎಲ್ಲಾ ದೃಶ್ಯ ಮಾದ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಈ ನರಕಸದೃಶದ ವಿಷಯ ಎಂತಹ ಕಲ್ಲು ಹೃದಯದವವರನ್ನೂ ಭಯ ಭೀತಿ ಗೊಳಿಸಿದ್ದಲ್ಲದೇ, ಅಸಲಿಗೆ ಬೈಕ್ ಹಾಗೂ ಬಸ್ ಅಪಘಾತವಾಗಿದ್ದಕ್ಕೆ ಇಡೀ ಬಸ್ ಬೆಂಕಿ ಹೊತ್ತಿಕೊಳ್ಳಲು ಹೇಗೆ ಸಾಧ್ಯ? ಎಂಬ ವಿಷಯ ಎಲ್ಲರ ತಲೆಗೆ ಹುಳ ಹೊಕ್ಕಿದಂದಾಗಿದ್ದು, ಇದೀಗ ತನಿಖೆ ನಡೆದ ಬಳಿಕ ಸ್ಫೋಟಕ ಸಂಗತಿ ಹೊರಬಿದ್ದಿದ್ದು, ಬಸ್‌ಗೆ ಬೆಂಕಿ ಹೊತ್ತಿಕೊಂಡ ಹಿಂದಿರುವ ಕಾರಣ ಟ್ರಾವೆಲ್ಸ್ ಏಜನ್ಸಿಯವರ ಮಾಫಿಯಾ ತನ ಮತ್ತು ಯಾರೋ ಕೆಲವರು ಕುಡಿದು ವಾಹನ ಚಲಾಯಿಸಿದರೆ, ಮತ್ತಾರಿಗೋ ಅದರ ಪರಿಣಾಮ ಹೇಗೆ ಬೀರುತ್ತದೆ ಎಂಬ ವಿಷಯವನ್ನು ಬಯಲಿಗೆ ತಂದಿದೆ.
ಅಸಲಿಗೆ ಆ ಅಪಘಾತದ ಹಿಂದೆ ಶಿವಶಂಕರ್ ಮತ್ತು ಏರಿಸ್ವಾಮಿ ಎಂಬ ಕುಡುಕರಿಬ್ಬರೂ ಕಂಠ ಪೂರ್ತಿ ಕುಡಿದ ನಂತವೂ ಮತ್ತೆ ಮದ್ಯದ ಅಂಗಡಿಯಿಂದ ಮತ್ತಷ್ಟು ಮದ್ಯವನ್ನು ಖರೀದಿಸಿ ಅದನ್ನೂ ಕುಡಿದ ನಂತರ ಹತ್ತಿರದ ಪೆಟ್ರೋಲ್ ಬಂಕ್ ಗೆ ಹೋಗುವಷ್ಟರಲ್ಲಿ ಮದ್ಯದ ಅಮಲು ಅವರ ತಲೆಗೆ ಏರಿದ್ದು, ಪೆಟ್ರೋಲ್ ಬಂಕ್‌ನಿಂದ ಪ್ರಯಾಸ ಪಟ್ಟು ಬೈಕ್ ಹತ್ತಿದ ಸಂಗತಿ ಪೆಟ್ರೋಲ್ ಬಂಕ್ ನ ಸಿಸಿ ಟಿವಿಯಲ್ಲಿ ದಾಖಲಾಗಿದ್ದು ಸುಮಾರು ಮಧ್ಯ ರಾತ್ರಿ 2:30-40 ಗಂಟೆಯ ಹೊತ್ತಿಗೆ ಲಕ್ಷ್ಮಿಪುರದಿಂದ ತೂರಾಡುತ್ತಲೇ ಬೈಕ್ ಏರಿ ಶಿವಶಂಕರ್ ಬೈಕ್ ಚಲಾಯಿಸುತ್ತಿದ್ದರೆ, ಎರಿಸ್ವಾಮಿ ಹಿಂಬದಿಯಲ್ಲಿ ಕುಳಿತು ಬೈಕ್ ಹೆದ್ದಾರಿಯಲ್ಲಿ ಸಾಗುತ್ತಿದ್ದಂತೆಯೇ ಶಿವಶಂಕರ್ ನಿಯಂತ್ರಣ ಕಳೆದುಕೊಂಡ ಪರಿಣಾಮ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಚಾಲಕ ಶಿವಶಂಕರ್ ಸ್ಥಳದಲ್ಲೇ ಮೃತಪಟ್ಟರೆ, ಎರಿಸ್ವಾಮಿ ಸ್ವಲ್ಪ ದೂರಕ್ಕೆ ಹಾರಿ ತೀವ್ರ ಗಾಯದಿಂದ ರಸ್ತೆ ಪಕ್ಕಕ್ಕೆ ಬಿದ್ದಿದ್ದಾನೆ.
ಹೀಗೆ ಅಚಾನಕ್ಕಾಗಿ ಬೈಕ್ ಡಿವೈಡರಿಗೆ ಬಡಿದು ಅದು ಸೀದ ಬಸ್ಸಿನ ಕೆಳಗೆ ಬಿದ್ದು ಅದರ ಮೇಲೆ ಬಸ್ ಹರಿದ ಪರಿಣಾಮ, ಬಸ್ಸಿನ ಬಾಗಿಲ ಸ್ವಲ್ಪ ಹಿಂದಿರುವ ಲಗೇಜ್ ಬಾಕ್ಸಿನಲ್ಲಿ, ಹೈದರಾಬಾದ್ ಮೂಲದ ಉದ್ಯಮಿ ಮಂಗನಾಥ್ ಅವರು ಬೆಂಗಳೂರಿನ ಇ-ಕಾಮರ್ಸ್ ಕಂಪನಿಗೆ ತಲುಪಿಸುವ ಸಲುವಾಗಿ ಕಳುಹಿಸಿದ್ದ ಸುಮಾರು 46 ಲಕ್ಷ ರೂ. ಮೌಲ್ಯದ 234 ಸ್ಮಾರ್ಟ್ ಫೋನ್‌ಗಳಿಗೆ ಬೆಂಕಿ ತಾಕಿದ್ದು ಫೋನ್‌ಗೆ ಬೆಂಕಿ ಹೊತ್ತಿಕೊಂಡಾಗ ಅದರ ಬ್ಯಾಟರಿಗಳು ಸ್ಫೋಟಗೊಂಡಿದ್ದು ಮುಂಬಾಗಿಲಿನಿಂದ ಪ್ರಯಾಣಿಕರು ಹೊರಬರಲು ಸಾಧ್ಯವಾಗದೇ ಹೋಗಿದ್ದು ಆ ಸ್ಪೋಟದ ಶಬ್ದವು ಬಹಳ ತೀವ್ರವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರ ಜೊತೆ ತುರ್ತು ನಿರ್ಗಮನದ ಬಳಿಯಲ್ಲಿ ಅಳವಡಿಸಿದ್ದ ಹವಾನಿಯಂತ್ರಣ ವ್ಯವಸ್ಥೆಗಾಗಿ ಇರಿಸಿದ್ದ ವಿದ್ಯುತ್ ಬ್ಯಾಟರಿಗಳೂ ಸಹಾ ಸ್ಫೋಟಗೊಂಡು ಬೆಂಕಿಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿ ಬೆಂಕಿ ಇಡೀ ಬಸ್ಸಿಗೆ ತಗುಲಿ ಅಲ್ಲಿಂದಲೂ ಪ್ರಯಾಣಿಕರು ತಪ್ಪಿಸಿಕೊಳ್ಳಲಾಗದೇ, ಸುಟ್ಟು ಕರಕಲಾಗಿದ್ದಾರೆ.
ಈ ದುರಂತದಲ್ಲಿ ಕೇವಲ 2 ತಿಂಗಳ ಹಿಂದಷ್ಟೇ ಕಳೆದ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನ ಆಕ್ಸೆಂಚರ್‌ಗೆ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಆಯ್ಕೆಯಾಗಿದ್ದ 23 ವರ್ಷದ ಯುವತಿ ಅನುಷಾ ಕೂಡ ಸಜೀವ ದಹನವಾಗಿದ್ದು, ಮಗಳು ಕಾಲೇಜು ಓದುವಾಗಲೇ ಉದ್ಯೋಗಕ್ಕೆ ಆಯ್ಕೆಯಾಗಿದ್ದು, ಅವರ ತಂದೆಗೆ ಬಹಳ ಹೆಮ್ಮೆಯ ವಿಚಾರ ಆಗಿತ್ತು. ಆದರೆ ಆ ಹೆಮ್ಮೆಯೇ ಇಂದು ಬೆಂಕಿಗಾಹುತಿಯಾಗಿ ಭಸ್ಮವಾಗಿದ್ದು, ತನ್ನ ಮಗಳಿಗೆ ಬೆಂಗಳೂರಿನಲ್ಲಿ ಕೆಲಸವೇ ಸಿಗದೇ ಇರದಿದ್ದರೆ, ಇಂದು ಆಕೆ ಬದುಕಿರುತ್ತಿದ್ದಳು ಎಂದು ರೋಧಿಸುತ್ತಿದ್ದದ್ದು ನಿಜಕ್ಕೂ ಕರುಳು ಕಿತ್ತು ಬರುವಂತಿದ್ದರೆ, ಅದೇ ರೀತಿಯಲ್ಲಿ ಐದು ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದ ಮೇಘನಾಥ್ ಸಹಾ ಬೆಂಕಿಗೆ ಆಹುತಿಯಾಗಿದ್ದು ಕುಟುಂಬಕ್ಕೆ ಆಧಾರವಾಗಿದ್ದ ಒಬ್ಬನೇ ಮಗನನ್ನು ಕಳೆದು ಕೊಂಡ ಆತನ ತಾಯಿ ಕೂಡ ಘಟನಾ ಸ್ಥಳಕ್ಕೆ ಅಳುತ್ತಲೇ ಆಗಮಿಸಿ ಮಗ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗದೇ, ನನ್ನ ಮಗ ಹೀಗೆ ನನ್ನನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ, ನನ್ನ ಮಗನಿಲ್ಲದೆ ನಾನು ಹೇಗೆ ಬದುಕಲಿ? ಎಂದು ಕಣ್ಣೀರಿಟ್ಟಿದ್ದಾರೆ.
ಅದೇ ರೀತಿ ಏಳೆಂಟು ವರ್ಷಗಳ ಹಿಂದೆ ನನ್ನ ಸ್ನೇಹಿತನೊಬ್ಬನ, ಸ್ನೇಹಿತ ಬೆಂಗಳೂರಿನ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ, ತನ್ನೂರು ಹೈದಿರಾಬಾದಿಗೆ ಹೊರಡಲು ಸಿದ್ಧನಾಗಿದ್ದ. ಬುಧವಾರ ಅವನ ಕಡೆಯ ದಿನವಾಗಿದ್ದರೂ, ಅವನ ಬಾಸ್ ಶುಕ್ರವಾರದವರೆಗೂ ಕೆಲಸ ಮಾಡದಿದ್ದರೆ, ಅತನಿಗೆ ರಿಲೀವಿಂಗ್ ಲೆಟರ್ ಕೊಡುವುದಿಲ್ಲಾ ಎಂದು ಬೆದರಿಸಿ ಶುಕ್ರವಾರ ಸಂಜೆ ಕಳುಹಿಸಿ ಕೊಟಿದ್ದಾನೆ. ಆಗ ನನ್ನ ಸ್ನೇಹಿತನೇ ತನ್ನ ಗೆಳಯನನ್ನು ತನ್ನ ಬೈಕಿನಲ್ಲಿ ಕರೆದುಕೊಂಡು ಬಸ್ ಸ್ಟಾಂಡ್ ವರೆಗೂ ಹೋಗಿ ಅಲ್ಲಿ ಒಟ್ಟಿಗೇ ಇಬ್ಬರೂ ಊಟ ಮುಗಿಸಿ ಬಸ್ ಹತ್ತಿಸಿ, ನಾಳೆ ಬೆಳಿಗ್ಗೆ ಹೈದರಾಬಾದ್ ತಲುಪಿದ ನಂತರ ಕರೆ ಮಾಡು ಎಂದು ತಿಳಿಸಿ ಮನೆಗೆ ಬಂದು ಬೆಚ್ಚಗೆ ಮಲಗಿದ್ದಾನೆ. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಮಾರನೇ ದಿನ ಹೇಗೂ ಕಛೇರಿಗೆ ರಜಾ ಎಂದು ತಡವಾಗಿ ಎದ್ದು ಟಿವಿ ಹಾಕಿದರೆ, ಹಿಂದಿನ ರಾತ್ರಿ, ಆತನ ಗೆಳೆಯ ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೆ ಒಳಗಾಗಿ ಬಸ್ಸಿನ ಡೀಸಲ್ ಟ್ಯಾಂಕಿಗೆ ಬೆಂಕಿ ಹತ್ತಿಕೊಂಡಾಗ ಬಸ್ಸಿನಲ್ಲಿ ಪಾರ್ಸಲ್ ರೂಪದಲ್ಲಿದ್ದ ಕೂದಲಿನ ಬಂಡಲ್ಲಿಗೆ ಬೆಂಕಿ ತಾಗಿ ಇಡೀ ಬಸ್ಸಿನಲ್ಲಿದ್ದ ಎಲ್ಲರೂ ಬೆಂದು ಕರಕಲಾಗಿ ಹೋಗಿದ್ದ ಹೃದಯ ವಿದ್ರಾವಕ ಸಂಗತಿ ತಿಳಿದು, ಒಂದು ವಾರಗಳ ಕಾಲ ನನ್ನ ಸ್ನೇಹಿತನೂ ಖಾಯಿಲೆಗೆ ಬಿದ್ದು ಸುಮಾರು ದಿನಗಳ ವರೆಗೆ ಖಿನ್ನತೆಗೆ ಒಳಗಾಗಿದ್ದ. ಅಂದು ಬಾಸ್ ಅವನನ್ನು ಬುಧವಾರವೇ ಕಳುಹಿಸಿಕೊಟ್ಟಿದ್ದರೆ ಒಂದು ಜೀವ ಉಳಿಯಬಹುದಿತ್ತೇನೋ ಎಂಬದೇ ಬಹಳ ದಿನಗಳವರೆಗೂ ನಮ್ಮಲ್ಲಿ ಚರ್ಚೆಯ ವಿಷಯವಾಗಿತ್ತು.
20 ಜನರ ಬಲಿ ಪಡೆದ ಈ ಬಸ್ ಅಪಘಾತ ಕೇವಲ ಬಸ್‌ನ್ನು ಮಾತ್ರ ಸುಡದೇ ಅನೇಕರ ಕನಸನ್ನು ಕೂಡ ಜೊತೆಗೆ ಸುಟ್ಟಿರುವ ಹಿಂದೆ ಟ್ರಾವೆಲ್ಸ್ ಕಂಪನಿಯ ಮಾಫಿಯಾ ತನವೇ ಎದ್ದು ಕಾಣುತ್ತಿದೆ. ಈ ದುರಂತದಲ್ಲಿ ಬದುಕುಳಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗುಣಸಾಯಿ ಎನ್ನುವವರು ಆ ಭಯಾನಕ ಘಟನೆಯ ಕುರಿತು ಹೀಗೆ ಹೇಳಿದ್ದು, ಆಗ ಕತ್ತಲೆಯಾಗಿತ್ತು ಮತ್ತು ದಟ್ಟ ಹೊಗೆಯಿಂದ ಕೂಡಿತ್ತು. ಬಸ್ಸಿನಲ್ಲಿ ಯಾವುದೇ ತುರ್ತು ಸುರಕ್ಷತಾ ನಿಯಮಗಳಿರಲಿಲ್ಲ ಮತ್ತು ಕಿಟಕಿ ಒಡೆಯಲು ಹ್ಯಾಮರ್‌ಗಳಿರಲಿಲ್ಲ. ನಾವು ಒಳಗಿನಿಂದ ಗಾಜನ್ನು ಒಡೆಯಲು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಬಹುಶಃ ಯಾರೋ ಹೊರಗಿನಿಂದ ಕಿಟಕಿಯನ್ನು ಒಡೆದ ಪರಿಣಾಮ, ತಾನು ಕಿಟಕಿಯಿಂದ ಹಾರಿ ಪ್ರಾಣಪಾಯದಿಂದ ಪಾರಾದೆ. ನಮ್ಮಲ್ಲಿ ಎಷ್ಟು ಮಂದಿ ಬದುಕುಳಿಯುವಲ್ಲಿ ಯಶಸ್ವಿಯಾಗಿದ್ದೇವೆಂದು ಸಹಾ ನನಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.
ಸಾಮಾನ್ಯವಾಗಿ ಸ್ಲೀಪರ್ ಬಸ್ಸುಗಳಲ್ಲಿ ಸಾಕಷ್ಟು ಸೀಟುಗಳನ್ನು ಹಾಕುವ ಸಲುವಾಗಿ ನಡೆದಾಡುವ ಜಾಗ ಬಹಳ ಇಕ್ಕಟ್ಟಾಗಿದ್ದು, ಒಂದೇ ಸಲಕ್ಕೆ ಇಬ್ಬರು ಅತ್ತಿಂದಿತ್ತ ನಡೆಯಲು ಸಾಧ್ಯವಿರುವುದಿಲ್ಲ. ಜೊತೆಗೆ ಅದರಲ್ಲಿರುವ ಪರದೆ ಮತ್ತು ಬೆಡ್‌ಶೀಟ್ ಸಹಾ ಬೇಗ ಬೆಂಕಿ ವ್ಯಾಪಿಸಲು ಅನುವು ಮಾಡಿಕೊಡುತ್ತದೆ. ಅದು ಏಸಿ ಬಸ್ ಆಗಿರುವ ಕಾರಣ ಬಹುತೇಕ ಕಿಟಕಿಗಳು ಮುಚ್ಚಿರುವ ಕಾರಣ ಬೇಗನೆ ಹೊಗೆ ತುಂಬಿಕೊಂಡು ಉಸಿರಾಟ ಕಷ್ಟವಾಗುತ್ತದೆ. ಹೀಗಾಗಿ ಅವಘಡವಾದ ಕೂಡಲೆ ಹೊರಗೆ ಬರುವುದು ಕೂಡಾ ಬಹಳ ಕಷ್ಟವಾಗುತ್ತದೆ. ಇನ್ನು ತುರ್ತು ನಿರ್ಗಮನದ ಬಾಗಿಲುಗಳು ಹೆಸರಿಗೆ ಮಾತ್ರವೇ ಇದ್ದು ಕಾಲಕಾಲಕ್ಕೆ ಅದನ್ನು ಪರೀಕ್ಷಿಸದೇ ಇರುವ ಪರಿಣಾಮ ಅದೂ ಸಹಾ ಸರಿಯಾಗಿ ತೆರೆಯದೇ ಇರುವುದೂ ಸಹಾ ಇಂತಹ ಅವಘಡಕ್ಕೆ ಕಾರಣವಾಗುತ್ತದೆ.
ನಿಜ ಹೇಳಬೇಕೆಂದರೆ ಬಹುತೇಕ ಖಾಸಗೀ ಬಸ್ ಕಂಪನಿಗಳಿಗೆ ಪ್ರಯಾಣಿಕರುಗಳಿದ ಬರುವ ಆದಾಯಕ್ಕಿಂತಲೂ ಆ ಬಸ್ಸುಗಳ ಮೇಲೆ ತುಂಬುವ ಪಾರ್ಸಲ್ ಗಳ ಆದಾಯವೇ ಹೆಚ್ಚಾಗಿರುವ ಕಾರಣ, ಬಸ್ಸಿನ ಒಳಗೆ, ಕೆಳಗೆ, ಹಿಂದೆ ಮತ್ತು ಮೇಲೆ ಹೀಗೆ ಒಂದು ಲಾರಿಗೆ ತುಂಬುವುದಕ್ಕಿತಲೂ ಹೆಚ್ಚಿನ ಲಗೇಜ್ ಗಳನ್ನು ತುಂಬಿಸುತ್ತಾರೆ. ಎಲ್ಲದ್ದಕ್ಕಿತಂಲೂ ಅಚ್ಚರಿಯೆಂದರೆ, ವಿಮಾನ ಮತ್ತು ರೈಲಿನಲ್ಲಿ ಸಾಗಿಸಲು ನಿಷಿದ್ಧವಾದ ಅನೇಕ ಸ್ಪೋಟಕಕಾರಿ ವಸ್ತುಗಳನ್ನು ಯಾವುದೇ ತಪಾಸಣೆ ಇಲ್ಲದೇ ಎಗ್ಗಿಲ್ಲದೇ ಈ ರೀತಿಯ ಬಸ್ಸಿನಲ್ಲಿ ತುಂಬಿಸುವುದು ಸಹಾ ಅವಘಡಕ್ಕೆ ಕಾರಣವಾಗುತ್ತದೆ ಎನ್ನುವುದಕ್ಕೆ ಈ ಬಸ್ಸಿನಲ್ಲಿದ್ದ ಮೊಬೈಲ್ ಬ್ಯಾಟರಿ ಸ್ಪೋಟ ಮತ್ತು ನನ್ನ ಗೆಳೆಯನ ಗೆಳೆಯ ಗತಿಸಿಹೋದ ಬಸ್ಸಿನಲ್ಲಿ ಸಾಗಿಸುತ್ತಿದ್ದ ಕೂದಲಿನ ಗಂಟು ಇದಕ್ಕೆ ಪುಷ್ಟಿಯನ್ನು ನೀಡುತ್ತದೆ.
ಇಂಥ ಬಸ್ಸಿನಲ್ಲಿ ಮರಳು, ಜಲ್ಲಿ ಕಲ್ಲಿದ್ದಲು, ದೊಡ್ಡ ದೊಡ್ಡ ಸಿಮೆಂಟ್ ಪೈಪ್, ಸ್ಟೀಲ್ ರಾಡಗಳನ್ನು ಬಿಟ್ಟು ಉಳಿದೆಲ್ಲವನ್ನೂ ಎಲ್ಲವನ್ನೂ ತೆಗೆದುಕೊಂಡು ಹೋಗುವ ಕಾರಣದಿಂದಲೇ, ಬಸ್ಸಿಗಾಗಿ ಮಾಡಿದ ಸಾಲ ಕೇವಲ ಎರಡೇ ವರ್ಷದಲ್ಲಿ ತೀರುತ್ತದೆ ಎಂದು ಹೆಸರು ಹೇಳಲು ಇಚ್ಚಿಸದ ಟ್ರಾವೆಲ್ಸ್ ಮಾಲಿಕರೊಬ್ಬರು ತಿಳಿಸಿರುವುದು ಟ್ರಾವೆಲ್ಸ್ ಮಾಫಿಯಾದ ಕರಾಳ ಮುಖವನ್ನು ಪರಿಚಯಿಸುತ್ತದೆ. ಸ್ಥಳೀಯ RTO & Police Departmentಗಳಿಗೆ ಈ ಕುಕೃತ್ಯದ ಎಲ್ಲಾ ವಿಚಾರಗಳ ಅರಿವಿದ್ದರೂ, ಟ್ರಾವಲ್ಸ್ ನವರು ತಿಂಗಳು ತಿಂಗಳು ಕೊಡುವ ಲಂಚಕ್ಕೆ ನಾಲಿಗೆ ಚಾಚಿದ ಪರಿಣಾಮ ಇಂತಹ ಅವಘಡಗಳು ಪದೇ ಪದೇ ನಡೆಯುತ್ತಲೇ ಇರುವುದು ದುರಂತದ ಸಂಗತಿಯಾಗಿದೆ. ಸರ್ಕಾರಿ ಜಾಗದಲ್ಲಿ ಒಂದು ಗಂಟೆ ಶಾಖೆ ಮಾಡಲು ಆಕ್ಷೇಪ ಎತ್ತುವ ಇದೇ ಸರ್ಕಾರ, ಟ್ರಾವೆಲ್ಸ್ ಕಂಪನಿಗಳ ಕಛೇರಿಗಳ ಸುತ್ತಮುತ್ತಲಿನ ಸಾರ್ವಜನಿಕ ಜಾಗಗಳಲ್ಲಿ ವರ್ಷದ 365, 24×7 ಒತ್ತುವರಿ ಮಾಡಿಕೊಂಡು ತಮ್ಮ ಪಾರ್ಸಲ್ಲುಗಳನ್ನು ಅನಧಿಕೃತವಾಗಿ ಇಟ್ಟಿರುವುದರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೇ ಹೋಗಿರುವುದು ಅಚ್ಚರಿಯನ್ನು ಮೂಡಿಸುತ್ತದೆ.
ಸಾವು ಎಂಬುದು ಯಾರಿಗೆ ಯಾವಾಗಾ ಹೇಗೆ ಬರುತ್ತದೆ ಎಂಬುದನ್ನು ಯಾರೂ ಸಹಾ ಊಹಿಸಲು ಸಾಧ್ಯವಿಲ್ಲ. ರಾತ್ರಿ ಮಲಗುವ ಮುನ್ನ ನೆನೆಸುವ ಉದ್ದಿನ ಬೇಳೆ ಬೆಳಿಗ್ಗೆ ಜೀವಂತವಾಗಿ ಎದ್ದರೆ ಇಡ್ಲಿಯಾಗುತ್ತದೆ. ಅಕಸ್ಮಾತ್ ಸತ್ತರೆ ವಡೆಮಾಡಲು ಬಳಕೆಯಾಗುತ್ತದೆ ಎಂಬ ಜನಮಸಾಮಾನ್ಯರ ಮಾತು ಮಾರ್ಮಿಕವಾಗಿದ್ದರೂ, ಈ ಕುರಿತಾಗಿ ಸರ್ಕಾರ, ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಸಾರ್ವಜನಿಕರು ಸ್ವಲ್ಪ ಎಚ್ಚರವಹಿಸಿದರೆ, ಇಂತಹ ಅಪಘಾತಗಳ ಮೂಲಕ ಅಚಾನಕ್ಕಾಗಿ ಸಾಯುವುದನ್ನು ತಪ್ಪಿಸಬಹುದಲ್ಲವೇ? ಹಣಕ್ಕಿಂತಲೂ ಮಾನವೀಯತೇ ಮುಖ್ಯ. ಹಣ ಬರುತ್ತದೆ ಹೋಗುತ್ತದೆ ಆದರೆ ಒಮ್ಮೆ ಸತ್ತು ಹೋದವ್ಯಕ್ತಿ ಮತ್ತೆ ಬರಲು ಸಾಧ್ಯ ಇಲ್ಲಾ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ