ಸಾವಯವ ಕೃಷಿ ತಜ್ಞ ನಾಡೋಜ ಶ್ರೀ ನಾರಾಯಣರೆಡ್ಡಿ

ಕೆಲವು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈಟ್ ಫೀಲ್ಡ್ ಭಾಗದ ವಯಸ್ಸಾದ ಹಿರಿಯರೊಬ್ಬರು ತಮ್ಮ ಬಳಿ ಇರುವ ಜಮೀನಿನಲ್ಲಿ ಬಹುಮಹಡಿ ಕಟ್ಟಡಗಳನ್ನು ಕಟ್ಟಿ ಸಾಫ್ಟ್ ವೇರ್ ಕಂಪನಿಗಳಿಗೆ ಬಾಡಿಗೆ ನೀಡಿದರೂ ಸಾಕು ನನಗೆ  ನೂರಾರು ಕೋಟಿ ಹಣ ಬರುತ್ತದೆ. ಆದರೆ ನಮಗೆ ಇಂದು ಬೇಕಾಗಿರುವುದು ಹಣವಲ್ಲ. ಶುದ್ದ ಗಾಳಿ ಮತ್ತು ಸತ್ವಯುತ ಆಹಾರವಿದ್ದಲ್ಲಿ ಆರೋಗ್ಯಕರವಾಗಿದ್ದು ನೂರಾರು ವರ್ಷ ಬಾಳಿ ಬದುಕಿ ಅನುಭವಿಸಬಹುದು. ಹಾಗಾಗಿ ಎಲ್ಲಾ ರೈತರೂ ಸಹಾ ಹೆಚ್ಚು ಹೆಚ್ಚು ಬೆಳೆಯುವ ದುರಾಸೆಯಿಂದ ರಾಸಾಯನಿಕಗಳನ್ನು ಬಳಸಿ ಭೂಮಿಯನ್ನು ವಿಷಮಾಡದೇ ಸಾವಯವ ಕೃಷಿ ಮಾಡಿ ಅವಶ್ಯಕತೆ ಇದ್ದಷ್ಟು ಬೆಳೆಯೋಣ ಎಂದು ಕಣ್ಣಿಗೆ ಕಟ್ಟುವಂತೆ ಮನಮಿಡಿಯುವಂತೆ ಹೇಳುತ್ತಿದ್ದಾಗ ಕುತೂಹಲದಿಂದ ಯಾರು  ಎಂದು ಗಮನಿಸಿದಾಗ ತಿಳಿದವರೇ ಸಾವಯವ ಕೃಷಿ ತಜ್ಞ ಶ್ರೀ ನಾರಾಯಣರೆಡ್ಡಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು   ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ

ಕೋಲಾರ ಜಿಲ್ಲೆಯ ವರ್ತೂರಿನ ಸೊರಹುಣಸೆ ಗ್ರಾಮದ  ಶ್ರೀ ಲಕ್ಷ್ಮಯ್ಯ ರೆಡ್ಡಿ ಮತ್ತು ಶ್ರೀಮತಿ ಎಲ್ಲಮ್ಮ ದಂಪತಿಗಳ 14 ನೇ ಮಗನಾಗಿ 1935 ರಲ್ಲಿ ನಾರಾಯಣ ರೆಡ್ಡಿಯವರ ಜನನವಾದರೆ,  ಅವರ ನಂತರ ಇನ್ನೂ ನಾಲ್ವರು ಮಕ್ಕಳು ಜನಿಸುತ್ತಾರೆ. ಹೀಗೆ ತಿನ್ನುವ ಕೈಗಳು 36 ಆದರೆ ದುಡಿಯುವ ಕೈಗಳು ಮಾತ್ರಾ 4 ಆಗಿದ್ದರೂ ಅವರ ತಂದೆ ತಾಯಿಯರು ತಮ್ಮ ಮಕ್ಕಳನ್ನು ಓದಿ ವಿದ್ಯಾವಂತರನ್ನಾಗಿಸ ಬೇಕು ಎಂಬ ಆಸೆಯಿಂದ ನಾರಾಯಣರೆಡ್ಡಿಯವನ್ನು ಶಾಲೆಗೆ ಸೇರಿಸುತ್ತಾರೆ. ತಮ್ಮ   ಹುಟ್ಟೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸವನ್ನು  ಮುಗಿಸಿದ ರೆಡ್ಡಿಯವರು  8 ನೇ ತರಗತಿ ಪರೀಕ್ಷೆಯನ್ನು ಬರೆಯಲು ಬೆಂಗಳೂರಿಗೆ ಹೋದ  ಅವರ ಊರಿನ ಮೊಟ್ಟ ಮೊದಲ ಹುಡುಗ ಎಂದರೆ ವಿದ್ಯಾಭ್ಯಾಸದ ಬಗ್ಗೆ ಆವರ ಊರಿನಲ್ಲಿ ಯಾವ ರೀತಿಯ ಪ್ರೋತ್ಸಾಹ ಇತ್ತು ಎಂದು ತಿಳಿಯುತ್ತದೆ. ತಂದೆ ತಾಯಿಯರಿಗೆ ಹೊಲಗಳಲ್ಲಿ ಸಹಾಯ ಮಾಡುತ್ತಲೇ ನಾರಾಯಣ ರೆಡ್ಡಿ ಅವರು ತಮ್ಮ 10 ನೇ ತರಗತಿಯನ್ನು ಪೂರ್ಣಗೊಳಿಸುತ್ತಾರೆ.

ಅದೊಮ್ಮೆ ಹುಡುಗು ಬುದ್ದಿಯ ರೆಡ್ಡಿಯವರು ಅದ್ಯಾವುದೋ ವಿಷಯಕ್ಕಾಗಿ ತಮ್ಮ  ತಂದೆಯೊಂದಿಗೆ ಜಗಳವಾಡಿ ಮನೆಯನ್ನು ಬಿಟ್ಟು  ಓಡಿ ಹೋಗಿ ಹೋಟೆಲ್‌ನಲ್ಲಿ ಲೋಟ ತೊಳೆಯುವ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅದಾದ ನಂತರ  ಅವರ ಹೋಟೆಲ್ಲಿಗೆ ಬರುತ್ತಿದ್ದ ಲಾರಿ ಡ್ರೈವರ್ ಮತ್ತು ಕ್ಲೀನರ್ ಗಳ ಪರಿಚಯವಾಗಿ ಅವರೊಂದಿಗೆ ಕೆಲಸಕ್ಕೆ ಸೇರಿಕೊಂಡು ಹಾಗೂ ಹೀಗೂ ಬಾಂಬೆಗೆ  ಹೋದ ನಂತರ ಅವರ ಪಾಡು ನಾಯಿಪಾಡಿಗಿಂತಲೂ ಕಡೆಯಾಗಿ ಹೋಗುತ್ತದೆ. ಉಳಿದು ಕೊಳ್ಳಲು ಸೂಕ್ತಸ್ಥಳವಿಲ್ಲದೇ ರಾತ್ರಿ  ಇತರೇ ನಿರಾಶ್ರಿತರ ಜೊತೆಯಲ್ಲಿ ರಸ್ತೆಯ ಬದಿಯಲ್ಲಿ ಛಳಿ, ಮಳೆ ಗಾಳಿಯೆನ್ನುವುದನ್ನೂ ಲೆಖ್ಖಿಸದೇ ಜೀವಿಸುತ್ತಿದ್ದಾಗ, ಅದೊಮ್ಮೆ ಅಂದಿನ ಕಾಲಾದ ಬಾಂಬೆಯ  ಕುಖ್ಯಾತ ಭೂಗತ ಲೋಕದ ಪಾತಕಿ ಹಾಜಿ ಮಸ್ತಾನ್  ರಾತ್ರಿಯಲ್ಲಿ ಈ ರೀತಿಯಲ್ಲಿ ಛಳಿಯಿಂದ ನಡುಗುತ್ತಿದ್ದ ನಿರಾಶ್ರಿತರಿಗೆ ಕಂಬಳಿ ವಿತರಿಸಲು  ಬಂದಾಗ, ಅವರ ಒಳ್ಳೆಯ ತನವನ್ನು ನೋಡಿ ರೆಡ್ಡಿಯೂ ಸಹಾ ಅವರೊಂದಿಗೆ ಪ್ರತೀ ರಾತ್ರಿ ಬೇರೆ ಬೇರೆ ಸ್ಥಳಗಳಲ್ಲಿ  ಕಂಬಳಿ ವಿತರಿಸಲು ಸಹಾಯ ಹೋಗುತ್ತಿದ್ದ ಸ್ವಲ್ಪ ಸಮಯದಲ್ಲೇ ಹಾಜಿ ಮಸ್ತಾನ್ ಯಾರು? ಅತನ ಕೆಲಸಗಳೇನು ಎಂಬುದೆಲ್ಲವನ್ನೂ ತಿಳಿದು ಅಂತಹವರೊಡನೆ ಮುಂದುವರೆಯುವುದು ಸಲ್ಲದು ಎಂದು ತೀರ್ಮಾನಿಸಿ ಅದುವರೆವಿಗೂ ಕಷ್ಟ ಪಟ್ಟು ದುಡಿದು ಕೂಡಿಟ್ಟ ಹಣದೊಂದಿಗೆ ಬೆಂಗಳೂರಿಗೆ ಮರಳಲು ನಿರ್ಧರಿಸಿದ್ದಾಗಲೇ. ಅದೊಂದಿ ದಿನ ಇವರ ಜಾಡನ್ನು ಹುಡುಕುತ್ತಾ ಬಂದ ಅವರ ಸಹೋದರ ಮತ್ತೆ ರೆಡ್ಡಿಯವರನ್ನು ಬೆಂಗಳೂರಿಗೆ ಕರೆದು ತರುತ್ತಾರೆ.

ಊರಿಗೆ ಬಂದ ನಂತರ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿರುವಾಗಲೇ, ತಮ್ಮ ಹೆತ್ತವರ ಆಸೆಯಂತೆ ಅವರೇ ಇಷ್ಟ ಪಟ್ಟು ತೋರಿಸಿದ ಸರೋಜ ಎಂಬ ಹುಡುಗಿಯನ್ನು ಮದುವೆಯಾದ ನಂತರ ಅವರ ಪಿತ್ರಾರ್ಜಿತ ಆಸ್ತಿಯಾಗಿ ಕೃಷಿಯನ್ನು  ಮಾಡಲು ಸುಮಾರು ಒಂದೂವರೆ ಎಕರೆ ಭೂಮಿ ಸಿಕ್ಕನಂತರ ರೆಡ್ಡಿಯವರು ಅಧಿಕೃತವಾಗಿ ಕೇವಲ ರೈತರಾಗಿದ್ದಲ್ಲದೇ,   ಜಪಾನ್‌ನ ರೈತ ಫುಕುವೋಕಾ ಅವರ ವಿಚಾರಗಳಿಂದ ಪ್ರೇರಿತರಾಗಿ  ಪ್ರಾಮಾಣಿಕವಾಗಿ ಕಷ್ಟ ಪಟ್ಟು  ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಅದರಲ್ಲಿ ಯಶಸ್ಸು ಕಂಡು ಕೊಂಡಿದ್ದರಿಂದ ರಾಜ್ಯದ ಅತ್ಯುತ್ತಮ ರೈತ ಎಂದೇ ಪ್ರಖ್ಯಾತರಾಗುತ್ತಾರೆ. ಅಷ್ಟೆಲ್ಲಾ ಕಷ್ಟ ಪಟ್ಟು ದುಡಿದರೂ ಕೈ ಬಾಯಿಗೆ ಹತ್ತದೇ, ಬಂದ  ಲಾಭವೆಲ್ಲವೂ ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಬೀಜಗಳಿಗೇ ಸಾಕಾಗುತ್ತಿದ್ದರಿಂದ ತಮ್ಮ ಭೂಮಿಯನ್ನು ಮಾರಿ ಯಾವುದಾದರೂ ಉದ್ಯಮವನ್ನು ಆರಂಭಿಸಬೇಕು ಎಂದು ಯೋಚಿಸುತ್ತಿರುವಾಗಲೇ ಅವರ ಆಲೋಚನೆಗಳಿಗೆ ಸ್ವತಃ ಅವರ ಧರ್ಮ ಪತ್ನಿಯವರಾದ ಶ್ರೀಮತಿ ಸರೋಜಾ ಅವರು ತಣ್ಣೀರೆರಚಿ  ರೈತರಿಗೆ ಅವರ ಭೂಮಿ ಎನ್ನುವುದು ಕೇವಲ ಮಣ್ಣು ಗಿಡಗಂಟೆಗಳಲ್ಲಾ ಅದು ರೈತರ ತಾಯಿ ಹಾಗಾಗಿ ಕೃಷಿಯಲ್ಲೇ ಹೆಚ್ಚು ಸಮಯ ವ್ಯಯಿಸಿದರೆ  ಖಂಡಿತವಾಗಿಯೂ ಲಾಭಗಳಿಸಬಹುದು ಎನ್ನುವುದನ್ನು ಮನದಟ್ಟು ಮಾಡಿಕೊಡುತ್ತಾರೆ.

ಕೃಷಿಯ ಜೊತೆ ಅಧ್ಯಾತ್ಮದಲ್ಲೂ  ಆಸಕ್ತಿ ಹೊಂದಿದ್ದ ರೆಡ್ಡಿಯವರು ಅದೊಮ್ಮೆ ತಮ್ಮ ಊರಿನ ಸಮೀಪದಲ್ಲಿರುವ ವೈಟ್‌ಫೀಲ್ಡ್‌ನ ಪುಟ್ಟಪರ್ತಿ ಸಾಯಿಬಾಬಾ ಅವರ ಆಶ್ರಮಕ್ಕೆ ಹೋಗಿದ್ದಾಗ ಅಲ್ಲಿ ಅವರಿಗೆ ಅಮೆರಿಕದ ಖಗೋಳ ಭೌತಶಾಸ್ತ್ರಜ್ಞ ಆಲ್ಬರ್ಟ್ ಟ್ರಕ್ಕರ್ ಅವರ ಪರಿಚಯವಾಗಿ ಇಬ್ಬರೂ ಉಭಯಕುಶಲೋಪರಿಯನ್ನು ವಿಚಾರಿಸಿಕೊಂಡಾಗ, ರೆಡ್ಡಿಯವರು ತಮ್ಮನ್ನು ತಾವು ಸಾವಯವವಾಗಿ ಕೃಷಿ ಮಾಡುತ್ತಿರುವ ಸಾವಯವ ಯೋಧ ಎಂದು ಪರಿಚಯಿಸಿ ಕೊಂಡಾಗ ಅದರಿಂದ ಉತ್ತೇಜಿತರಾದ ಟ್ರಕ್ಕರ್ ಅವರು 70ರ ದಶಕದಲ್ಲೇ. ರೆಡ್ಡಿಯವರಿಗೆ ಸಾವಯವ ಕೃಷಿಯನ್ನೇ ಮುಂದುವರೆಸಲು  ಪ್ರಾರಂಭಿಸಲು ಅವರಿಗೆ ರೂ. 5000ಗಳನ್ನು ಸಾಲದ ರೂಪದಲ್ಲಿ ನೀಡಿದಾಗ, ಮತ್ತಷ್ಟು ಹುರುಪಿನಿಂದ  ಸಾವಯವ ಕೃಷಿಯನ್ನು ಮುಂದುವರೆಸಿ ಎರಡು ವರ್ಷಗಳ ನಂತರ ರೆಡ್ಡಿ ಅವರು ಟ್ರಕ್ಕರ್‌ ಗೆ  ಪತ್ರವೊಂದನ್ನು ಬರೆದು, ಸಾವಯವ ಕೃಷಿಯಲ್ಲಿ ಯಾವುದೇ ಲಾಭವೂ ಇಲ್ಲಾ ಮತ್ತು  5000 ರೂಪಾಯಿಗಳ ಸಾಲದಲ್ಲಿರುವ ಕಾರಣ, ನಾನು  ಇನ್ನು ಮುಂದೆ ಕೃಷಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇನೆ ಎಂದು ಬರೆದಾಗ, ಛಲ ಬಿಡದ ತ್ರಿವಿಕ್ರಮನಂತೆ ಟ್ರಕ್ಕರ್ ಅವರಿಗೆ ಮತ್ತೆ  10,000/- ರೂಪಾಯಿಗಳ ಚೆಕ್‌ ನೀಡಿ ಸಾವಯವ ಕೃಷಿಯನ್ನೇ ಮುಂದುವರೆಸಬೇಕೆಂದು  ಪಟ್ಟು ಹಿಡಿದಾಗ ವಿಧಿಯಿಲ್ಲದೇ ಅಂದು ಸಾವಯವ ಕೃಷಿಯಲ್ಲೇ ಮುಂದುವರೆಯಲು ಮಾಡಿದ ನಿರ್ಧಾರದಿಂದ ಮುಂದೆಂದೂ ಅವರಿಗೆ ಹಿಂತಿರುಗಿ ನೋಡವ ಪ್ರಮೇಯವೇ ಬರಲಿಲ್ಲ.

ಹಾಗೆ ಪಡೆದ ಹಣದಿಂದ ರಾಸಾಯನಿಕಗಳಿಂದ ಜರ್ಜರಿತವಾಗಿದ್ದ ಅವರ ಭೂಮಿಯನ್ನು ಸಾವಯವ ಕೃಷಿಗೆ ಪರಿವರ್ತನೆಗೊಳ್ಳಿಸಲು ಸುಮಾರು ನಾಲ್ಕು ವರ್ಷಗಳ ಕಾಲ ಸಣ್ಣ ಸಣ್ಣ ಸಸ್ಯಗಳನ್ನು ಬೆಳೆಸುವ ಮೂಲಕ ಸೂಕ್ಷ್ಮಜೀವಿಗಳನ್ನು ತುಂಬಿಸಿದ್ದಲ್ಲದೇ ಒಂದೂವರೆ ಎಕರೆ ಇದ್ದ ಜಮೀನಿನ ಜೊತೆ ರಾಜ್ಯದ ವಿವಿಧ ಭಾಗಗಳಲ್ಲಿ ಭೂಮಿಯನ್ನು ಖರೀದಿಸಿ ಆ ಭೂಮಿಯನ್ನು ಊಳಲು ಟ್ರಾಕ್ಟರ್ ಬಳಸದೇ, ಬೀಜ ಕಂಪನಿಗಳಿಂದ ಬೀಜಗಳನ್ನು ಖರೀದಿಸದೇ, ಕೀಟನಾಶಕಗಳು ಅಥವಾ ರಾಸಾಯನಿಕ ಗೊಬ್ಬರಗಳನ್ನು ಖರೀದಿಸದೇ ಸಾವಯವ ಶೈಲಿಯಲ್ಲೇ ಕೃಷಿ ಮಾಡಲು ನಿರ್ಧರಿಸಿದರು.  ಅವರು ಬೀಜಗಳನ್ನು ಹೇಗೆ ಸಂರಕ್ಷಿಸುತಿದ್ದರು ಎನ್ನುವುದಕ್ಕೆ ಈ ಉದಾಹರಣೆ ಬಹಳ ಸೂಕ್ತ ಎನಿಸುತ್ತದೆ. ಅದೊಮ್ಮೆ ತಮ್ಮ ಸ್ನೇಹಿತರೊಂದಿಗೆ ಕೆಲವು  ರೈತರನ್ನು ಉದ್ದೇಶಿಸಿ ಮಾತನಾಡಲು ದೂರದ ಊರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮಾರ್ಗದ ಮಧ್ಯದಲ್ಲಿ  ಖರೀದಿಸಿದ್ದ ಕಿತ್ತಳೆ ಹಣ್ಣುಗಳು ಬಹಳ ಸಿಹಿಯಾಗಿದ್ದವು. ಸಹಜವಾಗಿ ಉಳಿದವರೆಲ್ಲರೂ  ಹಣ್ಣನ್ನು ಸವಿದು ಜೀಜಗಳನ್ನು  ಹೊರಗೆ ಉಗಿಯುತ್ತಿದ್ದರೆ, ರೆಡ್ಡಿಯವರು ಮಾತ್ರಾ ಆ ಬೀಜಗಳನ್ನು ಜತನದಿಂದ ಕಾಪಾಡಿಕೊಂಡು ಆ ಬೀಜಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟರೆ,  3-4 ವರ್ಷಗಳಲ್ಲಿ  ಅದು ಹೆಮ್ಮರವಾಗಿ ಅದರ ಇಳುವರಿಯಿಂದಲೇ  ವರ್ಷಕ್ಕೆ ಸುಮಾರು 10000/- ರೂ. ಗಳಿಸಬಹುದು.  ಹೀಗೆ ಬೀಜಗಳನ್ನು ಕೊಳ್ಳದೇ, ಶೂನ್ಯ ಹೂಡಿಕೆಯಿಂದ  ಹೆಚ್ಚಿನ ಲಾಭವನ್ನು ಪಡೆಯಬಹುದು ಎಂಬುದನ್ನು ಹೇಳುತ್ತಿದ್ದದ್ದಲ್ಲದೇ, ಅದನ್ನು ಅಕ್ಷರಶಃ ಮಾಡಿತೋರಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡರು.

ಸಾವಯವ ಕೃಷಿಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ನಾರಾಯಣ ರೆಡ್ಡಿ ಅವರನ್ನು ಉಪನ್ಯಾಸ ನೀಡಲು ಕೃಷಿ ವಿದ್ಯಾನಿಲಯವೊಂದು ಆಹ್ವಾನಿಸಿದಾಗ ನಾನು ಬೆಳೆಯುತ್ತಿರುವ ಕೃಷಿಯಲ್ಲಿ ಸಫಲವಾಗುವವರೆಗೆ ತೋಟದಿಂದ ಹೊರಗೆ ಬರುವುದಿಲ್ಲ ಎಂದು ನಯವಾಗಿ ನಿರಾಕರಿಸಿದ್ದರಂತೆ. ಆ ನಂತರದಲ್ಲಿ ಸಾವಯವ ಕೃಷಿಯಲ್ಲಿ ಅಪಾರ ಜ್ಞಾನ ಮತ್ತು ಅನುಭವವನ್ನು ಹಂಚಿಕೊಳ್ಳಲು ದೇಶ, ವಿದೇಶಗಳ ನೂರಾರು ಕೃಷಿ ವಿದ್ಯಾನಿಲಯಗಳಷ್ಟೇ ಅಲ್ಲದೇ ಯಾರೇ ಕರೆದರೂ ಅಲ್ಲಿಗೆ ಹೋಗಿ ತಮ್ಮ ಅನುಭವವನ್ನು ತಿಳಿಸಿ ಬರುತ್ತಿದ್ದರು. ದೇಶ ವಿದೇಶಗಳಿಂದ ಸಾವಿರಾರು ಕೃಷಿ ವಿದ್ಯಾರ್ಥಿಗಳು ಸಾವಯವ ಕೃಷಿಯ ಬಗ್ಗೆ ಅವರಿಂದ  ಮಾರ್ಗದರ್ಶನ ಪಡೆದಿದ್ದಾರೆ.

ದೊಡ್ಡಬಳ್ಳಾಪುರದ ಮರಳೇನಹಳ್ಳಿ ಸಮೀಪದ ಶ್ರೀನಿವಾಸಪುರದಲ್ಲಿ 4 ಎಕರೆಯಲ್ಲಿ ಆವರು ಮಾಡಿದ್ದ ತೋಟ ನಿಜಕ್ಕೂ ಸ್ವರ್ಗಕ್ಕೆ ಕಿಚ್ಚು ಹಬ್ಬಿಸುವಂತಿತ್ತು. ಆ 4 ಎಕರೆಯಲ್ಲೇ ಎಲ್ಲ ಬಗೆಯ ಮರ, ಗಿಡಗಳು ಸಮೃದ್ಧವಾಗಿ ಬೆಳೆಸಿದ್ದರು. ಏಕ ಬೆಳೆಗಳಿಗಿಂತ  ವಾರಕ್ಕೊಮ್ಮೆ ಬರುವ ಸೊಪ್ಪು ಎರಡು ವಾರಕ್ಕೊಮ್ಮೆ ಬೆಳೆವ ತರಕಾರಿಗಳು, ತಿಂಗಳಿಗೊಮ್ಮೆ ಸಿಗುವ ವಿಳ್ಳೇದೆಲೇ, ಮೂರು ತಿಂಗಳಿಗೊಮ್ಮೆ ಸಿಗುವ ತೆಂಗಿನ ಕಾಯಿ, ಭತ್ತ, ರಾಗಿ, ಆರು ತಿಂಗಳಿಗೊಮ್ಮೆ ಸಿಗುವ ಬಾಳೇ ಹಣ್ಣು ಇನ್ನು ದೀರ್ಘಕಾಲದ ಬೆಳೆಯಾಗಿ ತೋಟದ ಸುತ್ತಲೂ ತೇಗದ ಮರಗಳನ್ನು ನೆಡುವ ಮೂಲಕ ಸಣ್ಣ ಜಮೀನಿನಲ್ಲಿ ನಿರಂತರವಾಗಿ ಆದಾಯ ಬರುವಂತಹ ತೋಟದ ಪ್ರಾತ್ಯಕ್ಷಿತೆಯನ್ನು ಆ ತೋಟದಲ್ಲಿ ಕಾಣಬಹುದಾಗಿದೆ. ಹೀಗೆ ಏಕ ಬೆಳೆಗಷ್ಟೇ ಸೀಮಿತವಾಗದೇ  ಎಲ್ಲಾ ಮಾದರಿಯ ಬೆಳೆಗಳನ್ನು ಬೆಳೆದಿದ್ದಲ್ಲದೇ, ತಮ್ಮ ಮನೆಗೆ ಬೇಕಾಗುವ ತರಕಾರಿ, ಸೊಪ್ಪುಗಳನ್ನು ಬೆಳೆಯುವ ಮೂಲಕ ತಮ್ಮ ಜೀವಿತವಧಿಯಲ್ಲಿ ಒಮ್ಮೆಯೂ ತರಕಾರಿ ಖರೀದಿದೇ ಇರುವ ಹೆಗ್ಗಳಿಕೆ ಅವರದ್ದು. ಇವೆಷ್ಟೇ ಅಲ್ಲದೇ,  ಮಾವು, ಹುಣಸೆ ಮರಗಳನ್ನು ಬೆಳೆಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಳಕ್ಕೆ ಸಹಕಾರಿಯಾವುದಲ್ಲದೆ ರೈತನ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸುತ್ತದೆ ಎಂದು ಹೇಳುತ್ತಿದ್ದರು.

ಹೆಚ್ಚು ಹೆಚ್ಚು ಬೆಳೆಗಳನ್ನು ಪಡೆಯಲು ಟ್ರಾಕ್ಟರ್, ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳು ಹೇಗೆ ನಮ್ಮ ಭೂಮಿಯ ಫಲವತ್ತತೆಯನ್ನು ಹಾಡು ಮಾಡುತ್ತದೆ  ಎಂಬುದನ್ನು ಬಹಳ ವಿಷಧವಾಗಿ ರೆಡ್ಡಿಯವರು ತಿಳಿಸುತ್ತಿದ್ದರು. ಅವರ ಪ್ರಕಾರ   ನಮ್ಮ ಹೊಲಗಳನ್ನು ಊಳಲು ಟ್ರ್ಯಾಕ್ಟರ್‌ ಬಳಸುವುದರಿಂದ ಜಮೀನಲ್ಲಿರುವ ಸೂಕ್ಷ್ಮಜೀವಿಗಳನ್ನು ಸಾಯಿಸುತ್ತವೆ ಮತ್ತು ನೆಲವನ್ನು ಗಟ್ಟಿಯಾಗಿಸುತ್ತದೆ. ಆದರೆ ಅದೇ ಎತ್ತುಗಳು ಮತ್ತು ನೇಗಿಲುಗಳು ನೆಲದ 3-4 ಇಂಚುಗಳನ್ನು ಮಾತ್ರಾ ಅಗೆಯುವುದರಿಂದ ಮೇಲ್ಮಣ್ಣಿನ ಕೆಳಗೆ ನಡೆಯುತ್ತಿರುವ ಕೆಲಸಕ್ಕೆ ತೊಂದರೆಯಾಗುವುದಿಲ್ಲ. 1 ಗ್ರಾಂ ಮೇಲ್ಮಣ್ಣಿನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಸೂಕ್ಷ್ಮಜೀವಿಗಳಿರುತ್ತವೆ. ಇನ್ನು ಎರೆಹುಳುಗಳು, ಗೆದ್ದಲುಗಳು ಮತ್ತು ಇರುವೆಗಳುಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಇನ್ನು ಕೀಟ ನಾಶಕಗಳನ್ನು ಬಳಸುವುದರಿಂದ ಕೇವಲ ಕಳೆಗಷ್ಟೇ ಅಲ್ಲದೇ ಕಳೆಗಳ ನಡುವೆ ಬೆಳೆವ 15 ಜಾತಿಯ ಅಮೂಲ್ಯವಾದ ಔಷಧೀಯ ಮೌಲ್ಯದ ಸೊಪ್ಪನ್ನು ಸಹಾ ಹಾಳು ಮಾಡುತ್ತದೆ. ಕೀಟ ನಾಶಕದ ಬದಲು ಕಪ್ಪೆಗಳಿದ್ದರೆ ಅವುಗಳು ಸಾವಿರಾರು ಕೀಟಗಳನ್ನು ತಿನ್ನುವ ಮೂಲಕ  ಪರಿಣಾಮಕಾರಿ ಕೀಟ ನಿಯಂತ್ರಣವನ್ನು ಮಾಡುತ್ತದೆ. ಆದರೆ ನಾವುಗಳು ಕಪ್ಪೆಗಳನ್ನು ಯುರೋಪಿಯನ್ನರ ಬಾಯಿ ರುಚಿಗಾಗಿ ರಫ್ತು ಮಾಡುವುದು ದುರಾದೃಷ್ಟಕರ ಎನ್ನುತ್ತಿದ್ದರು. ಇನ್ನು ಬೀಜಗಳನ್ನು ಅಂಗಡಿಯಿಂದ ಖರೀದಿಸದೇ, ತಮ್ಮ ಸ್ವಂತ ಜಮೀನಿನಿಂದಲೇ ಸಂಗ್ರಹಿಸಿ ಇಡುತ್ತಿದ್ದರಲ್ಲದೇ, ಇನ್ನು  ಗೊಬ್ಬರಕ್ಕಾಗಿ, ಕೊಟ್ಟಿಗೆಯ ಹಸುಕರು, ಕೋಳಿ, ಆಡು.ಕುರಿ ಮತ್ತು ಹಂದಿಗಳ ಗೊಬ್ಬರ ಬಳಸುವುದು ಉತ್ತಮ ಎನ್ನುತ್ತಿದ್ದರು.

ರೆಡ್ಡಿಯವರು ಕೇವಲ ಸಾವಯವ ಕೃಷಿಕರಷ್ಟೇ ಅಲ್ಲದೇ ದೂರದೃಷ್ಟಿಯುಳ್ಳ ಸರಳ ಸಜ್ಜನ ಸಂತ ಮತ್ತು ಸ್ವಾಭಿಮಾನಿಗಳಾಗಿದ್ದರು. ಅದೊಮ್ಮೆ  ಉತ್ತರ ಕರ್ನಾಟಕದ ಹಳ್ಳಿಗೆ ಹೋಗಿದ್ದಾಗ, ಅಲ್ಲಿಯವರು ಬೆಳಿಗ್ಗೆ ರೆಡ್ಡಿಯವರಿಗೆ ಒಂದು ಬಕೆಟ್ ನೀರನ್ನು ನೀಡಿ, ಇಲ್ಲಿ ನೀರಿನ ಕೊರತೆ  ಇರುವ ಕಾರಣ ಇದರಲ್ಲೇ ಇಡೀ ದಿನವನ್ನು ನಿಭಾಯಿಸಬೇಕು ಎಂದು ಹೇಳಿದಾಗ, ರೆಡ್ಡಿಯವರು ಅಲ್ಲಿ ತಮ್ಮ ಸ್ನಾನ ಮತ್ತು ಶುದ್ಧೀಕರಣಕ್ಕೆ ಒಂದು ಬಕೆಟ್ ನೀರು ಸಾಕಾಗುತ್ತದೆ ಎಂಬುದನ್ನು ಕಂಡುಕೊಂಡು ಬೆಂಗಳೂರಿಗೆ ಹಿಂದಿರುಗಿದ ನಂತರ ತಮ್ಮ ಜೀವಮಾನವಿಡೀ ತಮ್ಮ ದೈನಂದಿನ ಅಗತ್ಯಗಳಿಗಾಗಿ ಕೇವಲ ಒಂದು ಬಕೆಟ್ ನೀರನ್ನು ಮಾತ್ರ ಬಳಸುವುದನ್ನು ರೂಢಿ ಮಾಡಿಕೊಂಡರು. ಇನ್ನು ಬೆಂಗಳೂರಿನ ಸುತ್ತಮುತ್ತಲಿನ ಕಾರ್ಯಕ್ರಮಗಳು ಹತ್ತಿರವಿದ್ದರೆ ಬಸ್ಸಿನಲ್ಲಿ ಇಲ್ಲವೇ ಸ್ವಲ್ಪ ದೂರವಿದ್ದರೆ, ತಮ್ಮದೇ ಕಾರಿನಲ್ಲಿ ಸಾಧಾರಣವಾಗಿ ಬಿಳಿ ಪಂಚೆ, ಬಿಳಿಯ ಖಾದಿ ಕುರ್ತಾ ಮತ್ತು ಸಾಧಾರಣ ಚಪ್ಪಲಿಗಳನ್ನು ಧರಿಸಿ ಕಾರ್ಯಕ್ರಮಕ್ಕೂ ಮುಂಚಿತವಾಗಿ ಸಮಯಕ್ಕೆ ಸರಿಯಾಗಿ  ಹೋಗುತ್ತಿದ್ದರಲ್ಲದೇ, ರೈತರು, ಎಂಜಿನಿಯರ್‌ಗಳು ಅಥವಾ ಐಟಿ ವೃತ್ತಿಪರರನ್ನು ಗ್ರಹಿಸಿ ಅವರಿಗೆ ಅರ್ಥವಾಗುವಂತೆ ಅವರದ್ದೇ ಭಾಷೆಯಲ್ಲಿ ಕೇವಲ ಕೃಷಿಯ ಬಗ್ಗೆ ಮಾತ್ರವೇ ನಿರ್ಗಳವಾಗಿ  ಮಾತನಾಡಿ  ಕೃಷಿಯಿಂದ ಜೀವನದಲ್ಲಿ ಎಲ್ಲನ್ನೂ ಪಡೆಯಬಹುದು ಎಂದು ಖಡಾಖಂಡಿತವಾಗಿ ಹೇಳುತ್ತಿದ್ದರು.

ಸಾವಯವ ಕೃಷಿಯಲ್ಲಿ ಅಪಾರವಾದ ಸಾಧನೆ ಮಾಡಿದ್ದ ನಾರಾಯಣ ರೆಡ್ಡಿಯವರಿಗೆ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿದ್ದು ಅವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ

  • 2004ರಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ
  • 1994ರಲ್ಲಿ ರಾಜ್ಯೋತ್ಸವ ಪ್ರಶಸ್ತಿ
  • 1977,78,79ರಲ್ಲಿ ತಾಲೂಕು, ಜಿಲ್ಲಾ, ರಾಜ್ಯ ಕೃಷಿ ಸಾಧಕ ಪ್ರಶಸ್ತಿ
  • 2004ರಲ್ಲಿ ಚೌಡಯ್ಯ ಪ್ರತಿಷ್ಟಾನ ಪ್ರಶಸ್ತ
  • 2011 ದ್ವಾರಕನಾಥ್‌ ಶ್ರೇಷ್ಠ ಕೃಷಿಕ ಪ್ರಶಸ್ತಿ
  • 2018 ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ

ನಾವು ನಮ್ಮದೇ ಭೂಮಿಯಲ್ಲಿ ದುಡಿಯುವಾಗಲೂ ಮಾಲೀಕರೆಂಬ ಹಮ್ಮಿನಲ್ಲಿ ದುಡಿಯಬಾರದು. ಈ ಭೂಮಿಯ ಸೇವಕನೆಂಬ ವಿನಯದಲ್ಲಿ ದುಡಿಯಬೇಕು. ಎನ್ನುವ ದಾರ್ಶನಿಕ ಮಾತುಗಳನ್ನು ಆಡುತ್ತಿದ್ದ  ಸಾವಯವ ಕೃಷಿ ತಜ್ಞ ನಾಡೋಜ ನಾರಾಯಣ ರೆಡ್ಡಿಯವರು ವಯೋಸಹಜವಾಗಿ 14 ಜನವರಿ 2019 ರಂದು ತಮ್ಮ 84ನೇ ವಯಸ್ಸಿನಲ್ಲಿ ನಿಧನರಾಗಿ ಭೌತಿಕವಾಗಿ ನಮ್ಮೆಲ್ಲರನ್ನೂ ಅಗಲಿದ್ದರೂ, ಅವರ  ಅನುಭವ ಮತ್ತು ಸಾಧನೆಗಳ ಮೂಲಕ ಸಕಲ ಸಾವಯವ ಕೃಷಿಕರಿಗೆ ಪ್ರೇರಣಾದಾಯಿಗಳಾಗಿರುವ ಕಾರಣ  ಅವರು ನಮ್ಮೆಲ್ಲರ ನೆಚ್ಚಿನ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a comment