ಹೆಣ್ಣನ್ನು ಅಬಲೆ ಎಂದು ಕರೆಯುವ ಮೂಲಕ ಆಕೆಗೆ ಧೈರ್ಯ ಮತ್ತು ಶಕ್ತಿ ಇಲ್ಲಾ. ಪ್ರತಿಯೊಂದು ಕೆಲಸಕ್ಕೂ ಆಕೆ ಮತ್ತೊಬ್ಬರ ಅದರಲ್ಲೂ ಪುರಷರನ್ನೇ ಅವಲಂಭಿಸಬೇಕು ಎನ್ನುತ್ತದೆ ಈ ಪುರುಷ ಪ್ರಧಾನ ಸಮಾಜ. ಅದರೆ ಇದಕ್ಕೆ ತದ್ವಿರುದ್ಧವಾಗಿ ಮತ್ತೊಂದು ಶ್ಲೋಕದಲ್ಲಿ
ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ |
ಯತ್ರೈತಾಸ್ತು ನ ಪೂಜಂತೇ ಸರ್ವಾಸ್ತತ್ರಾ ಫಲಾಃ ಕ್ರಿಯಾಃ || ಈ ಶ್ಲೋಕದ ಅರ್ಥ ಹೀಗಿದೆ.
ಎಲ್ಲಿ ಸ್ತ್ರೀಯರನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ತನ್ಮೂಲಕದೈವಿಕ ಅನುಗ್ರಹ ಇರುತ್ತದೆ. ಅದೇ ರೀತಿಯಲ್ಲಿ ಯಾವ ಮನೆಯಲ್ಲಿ ಸ್ತ್ರೀಯರನ್ನು ಗೌರವಿಸುವುದಿಲ್ಲವೋ, ಅಲ್ಲಿ ಮಾಡುವ ಎಲ್ಲಾ ಕ್ರಿಯೆಗಳು ಮತ್ತು ಯಜ್ಞ-ಪೂಜೆಗಳು ನಿಷ್ಫಲವಾಗುತ್ತವೆ ಎಂದು ಹೇಳುವ ಮೂಲಕ ಹೆಣ್ಣು ಮಕ್ಕಳಿಗೆ ಗೌರವ ಮತ್ತು ಸನ್ಮಾನದ ಮಹತ್ವವನ್ನು ಒತ್ತಿ ಹೇಳುತ್ತದೆ. ಅಂದು ಭಗೀರಥ ಶಿವನ ಜಟೆಯಿಂದ ಗಂಗೆಯನ್ನು ಈ ಭೂಮಿಗೆ ತಂದರೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀಮತಿ ಗೌರಿ ನಾಯಕ್ ಪಾತಾಳದಿಂದ ಗಂಗೆ ತರಿಸಿದ ಸಾಧನೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ
ಹವಾಮಾನ ವೈಪರೀತ್ಯದಿಂದ ಮತ್ತು ಓಝೋನ್ ಪದರಗಳ ನಾಶದಿಂದ ಪರಿಸರದ ಮೇಲೇ ಭಾರೀ ಪ್ರಮಾಣದಲ್ಲಿ ಹಾನಿಯಾಗಿ ಕಾಲಕಾಲಕ್ಕೆ ಆಗಬೇಕಿದ್ದ ಮಳೆಯೇ ಬಾರದೇ ಹೋದಾಗ, ಮಳೆಯನ್ನೇ ಅವಲಂಭಿಸಿ ಕೃಷಿ ಚಟುವಟಿಕೆಗಳನ್ನು ನಡೆಸುವ ಸಣ್ಣ ಪುಟ್ಟ ರೈತರಿಗೆ ಬಹಳವಾಗಿ ತೊಂದರೆ ಆಗುತ್ತದೆ. ಅದೇ ರೀತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶ ನಗರದ ಸುಮಾರು 52 ವರ್ಷದ ಶ್ರೀಮತಿ ಗೌರಿ ನಾಯಕ್ ಅವರ ಬಳಿ ಕೇವಲ 6 ಗುಂಟೆ ತೋಟ ಇದ್ದು ಮಳೆಯ ನೀರಿನ ಕೊರತೆಯಿಂದಾಗಿ ಅವರೇ ನೆಟ್ಟ ಬಾಳೆ, ತೆಂಗು, ಅಡಕೆ ಗಿಡಗಳು ಒಣಗುತ್ತಿರುವುದನ್ನು ನೋಡಲಾರದೆ, ಕೃಷಿ ಚಟುವಟಿಕೆಗಳನ್ನು ಮಾಡಲಾಗದೇ ಹೋದಾಗ, ತಮ್ಮ ಬಳಿ ಭಾವಿ ಇದ್ದಲ್ಲಿ ಅದರ ಮೂಲಕ ನೀರನ್ನು ಸೇದಿ ತಮ್ಮ ಕೃಷಿಯನ್ನು ಮುಂದುವರೆಸಬಹುದು ಎಂಬ ಆಲೋಚನೆ ಇತ್ತು. ಆದರೆ ಭಾವಿಯನ್ನು ತೋಡಿಸುವಷ್ಟು ಆರ್ಥಿಕವಾಗಿ ಸಧೃಢರಾಗಿರದೇ ಇದ್ದ ಕಾರಣ, ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ!! ಎಂಬ ಸಾಲಿನಂತೆ ವಿಧಿ ಇಲ್ಲದೇ, ಸ್ವತಃ ಹಾರೇ ಪಿಕಾಸಿ ಮತ್ತು ಗುದ್ದಲಿಯಂತಹ ಸಲಕರಣೆ ಹಿಡಿದು ತಮ್ಮ ಮಕ್ಕಳ ಸಹಾಯವನ್ನೂ ಪಡೆಯದೇ, ಯಾರೊಬ್ಬರಿಗೂ ಹೇಳಿದೇ ತಮ್ಮ ಮನೆಯ ಹಿಂಭಾಗದ ಹಿತ್ತಲಿನಲ್ಲಿ ಮಗನಿಗೆ ತಿಳಿದರೆ ಆತ ಕೋಪಗೊಂಡು ಬೈಯ್ಯಬಹುದು ಎಂದೆಣಿಸಿ, ಯಾರ ಸಹಾಯವನ್ನೂ ಪಡೆಯದೇ ಅಲ್ಲಿನ ಅಂತರ್ಜಲದ ಮಟ್ಟವನ್ನು ಅರಿಯದೇ ತಾವೊಬ್ಬರೇ ಮಣ್ಣುನ್ನು ಅಗೆಯುವುದು, ಅಗೆದ ಮಣ್ಣನ್ನು ಮೇಲಕ್ಕೆತ್ತುವುದು ಮತ್ತು ಅದನ್ನು ಹೊತ್ತು ಮತ್ತೊಂದು ಕಡೆ ಸಾಗಿಸಿವುದು ಹೀಗೆ ಎಲ್ಲಾ ಕೆಲಸಗಳನ್ನು ಸುಮಾರು 4-5 ತಿಂಗಳ ಕಾಲ ಹಗಲು ರಾತ್ರಿ ಎನ್ನದೆ ಪಾತಾಳದಿಂದ ನೀರು ಉಕ್ಕಿ ಬರುವವರೆಗೂ ತೋಡಿ ಅಂತಿಮವಾಗಿ ಬರೋಬ್ಬರಿ 8 ಅಡಿ ಅಗಲ ಮತ್ತು 60 ಅಡಿ ಆಳದ ಬಾವಿಯನ್ನು ತೋಡಿ, ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡುವ ಮೂಲಕ ಆಧುನಿಕ ಭಾಗೀರಥಿ ಎಂಬ ಸಾಧನೆಗೆ ಪಾತ್ರರಾಗಿದ್ದಾರೆ.
ಅವರ ಊರಿನಿಂದ ಸ್ವಲ್ಪ ದೂರದ ಹೊಳೆಯಿಂದ ಗಣೇಶನಗರಕ್ಕೆ ನಿತ್ಯ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿತ್ತು. ಅದರೆ ಈ ಬಾರಿಯ ಬೇಸಿಗೆಯಲ್ಲಿ ಆ ಹೊಳೆಯಲ್ಲಿಯೂ ನೀರಿನ ಕೊರತೆ ಉಂಟಾದ ಪರಣಾಮ ಮತ್ತು ಕೆಲವು ತಾಂತ್ರಿಕ ಕಾರಣಗಳಿಂದಲೂ ನಾಲ್ಕೈದು ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿರುವುದರಿಂದ ಅಲ್ಲಿನ ಸ್ಥಳೀಯರಿಗೆ ಅಗತ್ಯವಿದ್ದಷ್ಟು ನೀರನ್ನು ಪೂರೈಸಲು ಆಗದೇ ಇರುವಾಗ, ಸ್ಥಳೀಯರು ಟ್ಯಾಂಕರ್ ಮೂಲಕ ತಮ್ಮ ತಮ್ಮ ಮನೆಗಳಿಗೆ ನೀರನ್ನು ಕೊಂಡು ಕೊಳ್ಳುವ ಪರಿಸ್ಥಿತಿ ಇದ್ದರೂ, ಬಹಳ ಎತ್ತರದ ಸ್ಥಳದಲ್ಲಿ ಗೌರಿ ನಾಯಕ್ ಅವರು ತೋಡಿರುವ ಭಾವಿಯಲ್ಲಿ ಸದಾ ಕಾಲವೂ ನೀರು ಇರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಸ್ವತಃ ಎರಡನೇ ತರಗತಿಯವರೆಗೆ ಮಾತ್ರ ಓದಿರುವ ಗೌರಿಯವರಿಗೆ ಬಾಲ್ಯದಲ್ಲಿಯೇ ಮದುವೆ ಆಗಿ ಇಬ್ಬರು ಮಕ್ಕಳಿದ್ದಾರೆ. ಸಣ್ಣ ವಯಸ್ಸಿನಲ್ಲೇ, ಗೌರಿ ಚಂದ್ರಶೇಖರ ನಾಯಕ್ ತಮ್ಮ ಪತಿಯನ್ನು ಕಳೆದುಕೊಂಡಾಗ ಅವರ ಬಂಧು ಮಿತ್ರರು ಆಕೆಯನ್ನು ಒಂಟಿ, ಅಸಹಾಯಕ ಮತ್ತು ದುರ್ಬಲ ಎಂದು ಪರಿಗಣಿಸಿದ್ದಾಗ, ಇಂತಹ ಮಹತ್ಕಾರ್ಯಗಳಿಂದಾಗಿ ಅವೆಲ್ಲವನ್ನೂ ಸುಳ್ಳಾಗಿಸಿ ಆಕೆ ಇಂದು ತಮ್ಮ ಹಳ್ಳಿಯ ನಾಯಕಿಯಾಗಿದ್ದಾರೆ.
ಅರೇ ಇದೇನು ಇದು ತಮ್ಮ ಸ್ವಾರ್ಥಕ್ಕಾಗಿ ಕೊರೆದು ಕೊಂಡ ಭಾವಿ ಇದರಲ್ಲಿ ಏನಿದೆ ವಿಶೇಷ ಎಂದರೆ, ತಮ್ಮ ಪತಿಯವರ ಅಕಾಲಿಕ ಅಗಲಿಕೆಯ ನಂತರ ಜೀವನೋಪಾಯಕ್ಕಾಗಿ ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ದಿನಗೂಲಿಯ ಮೇಲ ಕೆಲಸ ಮಾಡುತ್ತಾ ತನ್ನ ಇಬ್ಬರು ಮಕ್ಕಳನ್ನು ಬೆಳೆಸಿದ್ದಲ್ಲದೇ, ಎಕ್ಸ್-ರೇ ತಂತ್ರಜ್ಞರಾಗಿರುವ ಮಗ ವಿನಯ್, ಸಿರ್ಸಿಯಲ್ಲಿ ತಮ್ಮ ಅಕ್ವೇರಿಯಂ ಅನ್ನು ನಡೆಸುತ್ತಿದ್ದರೆ, ಮಗಳು ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರೂ, ಕೈಗಳಲ್ಲಿ ಕಸುವು ಇರುವವರೆಗೂ ಸ್ವಾಭಿಮಾನಿಯಾಗಿ ದುಡಿದು ತಿನ್ನಬೇಕೆನ್ನುವ ಗೌರಿಯವರ ಛಲ ನಿಜಕ್ಕೂ ಅನನ್ಯ ಮತ್ತು ಅನುಕರಣೀಯ.
ನೂರಾರು ಮಕ್ಕಳಿರುವ ತಮ್ಮ ಅಂಗನವಾಡಿ ಕೇಂದ್ರದಲ್ಲಿ ತೀವ್ರತರವಾದ ಬರಗಾಲದಿಂದಾಗಿ ನೀರಿನ ಕೊರತೆ ಆದಾಗ, ಊಟವಿಲ್ಲದೇ ಜೀವನ ನಡೆಸಬಹುದು ಆದರೇ ಜೀವನಾವಶ್ಯಕವಾದ ನೀರಿಲ್ಲದೇ ಬದುಕಲು ಸಾಧ್ಯವಿಲ್ಲ ಎಂಬು ಸತ್ಯವನ್ನು ಕಂಡು ಕೊಂಡು ಹಿಂದೆ ತಮ್ಮ ಮನೆಯಲ್ಲಿ ಭಾವಿ ತೋಡಿದ್ದ ಅನುಭವ ಇದ್ದ ಗೌರೀ ನಾಯಕ್ ತಮ್ಮ ಅಂಗನವಾಡಿಯ ಯಾವುದೇ ಮಗುವಿಗೂ ಬಾಯಾರಿಕೆಯಾಗದಂತೆ ಮಾಡುವ ಸಲುವಾಗಿ ಮತ್ತೆ ಭಾವಿ ತೋಡುವ ಎಲ್ಲಾ ಸರಕರಣೆಗಳಿಂದ ಸಜ್ಜಾಗಿ ತನ್ನ ಕೈಗಳಿಂದಲೇ ಮತ್ತೆ ಒಂಟಿಯಾಗಿ ಅಂಗನವಾಡಿಯ ಅಂಗಳದಲ್ಲೇ ತೆರದ ಬಾವಿಯನ್ನು ತೋಡಲು ಮುಂದಾಗಿ ಸುಮಾರು 12 ದಿನಗಳಲ್ಲಿ ಸುಮಾರು 15 ಅಡಿ ಅಗೆದಿರುವಾಗ, ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅಂಗನವಾಡಿ ಕೇಂದ್ರಕ್ಕೆ ಕುಡಿಯುವ ನೀರು ಒದಗಿಸುವುದು ಸರ್ಕಾರದ ಕೆಲಸ. ಆದರೆ ಒಬ್ಬ ಖಾಸಗಿ ವ್ಯಕ್ತಿ ಮತ್ತು ಅದರಲ್ಲಿಯೂ ವಿನಮ್ರ ಹಿನ್ನೆಲೆಯ ಮಹಿಳೆಯೊಬ್ಬರು ಆ ಕೆಲಸಕ್ಕೆ ಮುಂದಾಗಿರುವುದನ್ನು ಮುಂದುವರಿಯಲು ಆಕೆಗೆ ಅವಕಾಶ ನೀಡಬೇಕೆ/ ನೀಡಬಾರದೇ ಎಂಬ ಜಿಜ್ಞಾಸೆ ಹಲವು ದಿನಗಳವರೆಗೆ ಮುಂದುವರೆದ ಪರಿಣಾಮ ಆಕೆ ಭಾವಿಯನ್ನು ತೋಡುವುದನ್ನು ಒಲ್ಲದ ಮನಸ್ಸಿನಿಂದಲೇ ನಿಲ್ಲಿಸ ಬೇಕಾಯಿತು. ಆದರೆ ಸಾರ್ವಜನಿಕ ಬೆಂಬಲ ಗೌರಿಯವರ ಪರವಾಗಿ ಇದ್ದ ಕಾರಣ ಅವರ ಒತ್ತಡದಿಂದಾಗಿ ಸಂಬಂಧಪಟ್ಟ ಅಧಿಕಾರಿಗಳು ಇಷ್ಟವಿಲ್ಲದೇ ಹೋದರೂ ಅದಕ್ಕೆ ಅನುಮತಿ ನೀಡಲೇ ಬೇಕಾಯಿತು.
ಸ್ಥಳೀಯ ಆಡಳಿತ ವ್ಯವಸ್ಥೆ ಮತ್ತು ರಾಜ್ಯ ಸರ್ಕಾರ ಮಾಡಲು ಸಾಧ್ಯವಾಗದ್ದನ್ನು ಗೌರಿ ಮಾಡುತ್ತಿದ್ದಾರೆ. ಇದರಲ್ಲಿ ಆಕೆಯ ಸ್ವಾರ್ಥವಿಲ್ಲದೇ ಸಮಾಜದ ಒಳಿತಿಗಾಗಿ ಮಾಡುತ್ತಿರುವ ಕಾರಣ, ಆಕೆಗೆ ಭಾವಿ ತೋಡುವ ಕೆಲಸವನ್ನು ಮುಂದುವರಿಸಲು ಅನುಮತಿ ನೀಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಸಾರ್ವಜನಿಕರು ಅಧಿಕಾರಿಗಳನ್ನು ಸಮಾಧಾನಪಡಿಸಿದರು. ಇವೆಲ್ಲದರ ನೂರಾರು ಮಕ್ಕಳಿರುವ ಅಂಗನವಾಡಿಯಲ್ಲಿ ತೆರೆದ ಭಾವಿ ಇರುವುದು ಅಪಾಯಕಾರಿ ಎಂಬುದನ್ನು ಮನಗಂಡ ಶಿರ್ಸಿ ಜೀವಜಲ ಕಾರ್ಯಪಡೆ ಅಧ್ಯಕ್ಷರಾಗಿದ್ದಂತಹ ಶ್ರೀನಿವಾಸ್ ಹೆಬ್ಬಾರ್ ಅವರು ಗೌರಿ ಅವರು ತೋಡುತ್ತಿರುವ ಅಂಗನವಾಡಿ ಕೇಂದ್ರದ ಬಾವಿಗೆ ಸಿಮೆಂಟ್ ರಿಂಗ್ ಜೊತೆಗೆ ಭಾವಿ ಕಟ್ಟೆಯಷ್ಟೇ ಅಲ್ಲದೇ ಅದರಿಂದ ನೀರನ್ನು ಸೇದುವ ಬದಲು ಗುಂಡಿಯನ್ನು ಒತ್ತಿದೊಡನೆ ನೇರವಾಗಿ ನೀರು ಮೇಲೆತ್ತುವಂತಹ ಪಂಪ್ ಮತ್ತು ನೀರಿನ ಟ್ಯಾಂಕ್ ಜೊತೆಗೆ ಒಂದೆರಡು ಕಡೆ ನಲ್ಲಿಗಳನ್ನು ಅಳವಡಿಸಿಕೊಡಲು ಒಪ್ಪಿಕೊಂಡರು. ಗೌರಿಯವರ ನಿಸ್ವಾರ್ಥ ಸೇವೆಗೆ ಆ ದೇವರ ಅನುಗ್ರಹವೂ ಇದ್ದ ಪರಿಣಾಮ ಸುಮಾರು 75 ಅಡಿ ಆಳದ ಆ ಭಾವಿಯಲ್ಲಿ ಉಕ್ಕಿ ಬಂದ ಜಲದಿಂದ ಇಂದು ಅವರ ಅಂಗನವಾಡಿಯ ಮಕ್ಕಳಿಗೆ ನೀರಿನ ತೊಂದರೆಯು ಶಾಶ್ವತವಾಗಿ ಪರಿಹಾರವಾಗಿದೆ.
ಕೇವಲ ಅಂಗನವಾಡಿಯಲ್ಲಿ ಕೆಲಸ ಮಾಡುವುದು ಮತ್ತು ಭಾವಿ ತೋಡುವುದಷ್ಟೇ ಅಲ್ಲದೇ ಚಿಕ್ಕವಯಸ್ಸಿನಿಂದಲೂ ಗಂಡು ಮಕ್ಕಳು ಏರಲು ಹೆದರುತ್ತಿದ್ದಂತಹ ಮರಗಳಿಗೆ ಸರಾಗವಾಗಿ ಹತ್ತಿ ಹಣ್ಣುಗಳನ್ನು ಕಿತ್ತು ತಿನ್ನುವುದು ಈಗಲೂ ಆಕೆ ಕಚ್ಚೆ ಕಟ್ಟಿಕೊಂಡು ಎತ್ತರೆತ್ತರದ ತೆಂಗಿನ ಮರಗಳನ್ನು ಸರಾಗವಾಗಿ ಏರಿ ತೆಂಗಿನ ಕಾಯಿ ಕೀಳುವುದು ಮತ್ತು ಅಡಿಕೆ ಮರ ಹತ್ತುವುದರ ಮೂಲಕ ಆಕೆಯನ್ನು ಜನರು ಆಧುನಿಕ ಭಾಗೀರಥಿ ಎಂದು ಕರೆದಿರುವುದು ಆಕೆಯ ಧೈರ್ಯ, ಉತ್ಸಾಹ ಮತ್ತು ಇತರರ ಮೇಲಿನ ನಿಸ್ವಾರ್ಥ ಪ್ರೀತಿಯ ಪ್ರತಿಬಿಂಬಿಸುವ ಹೆಸರಾಗಿದೆ ಎಂದರೂ ತಪ್ಪಾಗದು.
ಗೌರೀ ನಾಯಕ್ ಅವರ ಸಾಧನೆಯನ್ನು ಮೆಚ್ಚಿ ಅನೇಕ ಸಂಘಸಂಸ್ಥೆಗಳು ಆಕೆಗೆ ನೂರಾರು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದು ಅವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ.
- 2018 ರಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ವತಿಯಿಂದ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ
- ರಾಜ್ಯ ಸರ್ಕಾರ ಗುರುತಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಈ ಪ್ರಶಸ್ತಿ
ಕನ್ನಡ ನಾಡಿನ ವೀರರಮಣಿಯ, ಗಂಡು ಭೂಮಿಯ ವೀರ ನಾರಿಯ, ಚರಿತೆಯ ನಾನು ಹಾಡುವೆ ಎಂಬ ಹಾಡಿನಲ್ಲಿರುವಂತೆ ನಮ್ಮ ಈ ಕನ್ನಡ ನಾಡಿನಲ್ಲಿ ಅನೇಕ ವೀರರಮಣಿಯರು ಹುಟ್ಟಿನಾಡಿನ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಏರಿಸಿರುವಾಗ, ಹೆಣ್ಣು ಅಬಲೆ ಎಂದು ಆಕೆಯ ಸಬಲೀಕರಣ ಎಂಬ ಹೆಸರಿನಲ್ಲಿ ತಿಂಗಳು ತಿಂಗಳು ಹೆಣ್ಣು ಮಕ್ಕಳ ಕೈಗೆ ಅಲ್ಪ ಸ್ವಲ್ಪ ಹಣ ಕೊಟ್ಟು ಅವರನ್ನು ಸೋಮಾರಿಗಳನ್ನಾಗಿಸಿ ಮತ್ತು ಅಬಲೆಯನ್ನೇ ಮಾಡುತ್ತಿರುವ ಪ್ರಸ್ತುತ ಕಾಲ ಘಟ್ಟದಲ್ಲಿ, ಸ್ವಂತಕ್ಕೆ ಸ್ವಲ್ಪ ಮತ್ತು ಸಮಾಜಕ್ಕೆ ಸರ್ವಸ್ವ ಎಂಬ ರೀತಿಯಲ್ಲಿ ಇಂತಹ ಮಹತ್ಕಾರ್ಯಗಳಲ್ಲಿ ತೊಡಗಿಕೊಂಡಿರುವ ಗೌರಿ ನಾಯಕ್ ಅವರು ನಿಜವಾಗಿಯೂ ಮಹಿಳಾ ಸಬಲೀಕರಣದ ರಾಯಭಾರಿ ಎಂದರೂ ತಪ್ಪಾಗದ ಕಾರಣ ಆಕೆ ನಿಸ್ಸಂದೇಹವಾಗಿಯೂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ