ಅಪರಿಚಿತರ ಮಾನವೀಯತೆ

ಸಾಧಾರಣವಾಗಿ ಯಾರಾದರೂ ನಿಸ್ವಾರ್ಥವಾಗಿ ಮತ್ತೊಬ್ಬರಿಗೆ ಒಳ್ಳೆಯ ಕೆಲಸವನ್ನು ಮಾಡಿದಲ್ಲಿ  ನಿಮ್ಮಂತಹವರು ಇರುವುದರಿಂದಲೇ ಒಳ್ಳೆಯ ಮಳೆ ಬೆಳೆ ಆಗುತ್ತಿದೆ ಹಾಗಾಗಿಯೇ ಈ ಸಮಾಜ ಇನ್ನೂ ಚೆನ್ನಾಗಿದೆ ಎನ್ನುವ ಮಾತನ್ನಾಡುವುದನ್ನು ಗಮನಿಸಿದ್ದೇವೆ. ಕಾಲೇಜಿನ  ಪ್ರತಿಭಾವಂತನ ಹುಡುಗನಿಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ನಂತರ  ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯ ಮಾಲಿಕರೊಬ್ಬರು ಸಾಮಾನ್ಯ ವಿದ್ಯಾರ್ಥಿಗೆ ತೋರಿದ ಮಾನವೀಯತೆ ಮತ್ತು ಪ್ರೀತಿಯ ಕಕ್ಕುಲತೆ, ಆ ಹುಡುಗನ ಜೀವನದಲ್ಲಿ ಮಹತ್ತರವಾದ ಬದಲಾವಣೆ ತಂದು ಮುಂದೆ ಆತ  ಇಡೀ ಭಾರತವೇ ಹೆಮ್ಮೆ ಪಡುವಂತಹ ವ್ಯಕ್ತಿಯಾದ ಹೃದಯಸ್ಪರ್ಶಿ ಮತ್ತು ಸಹಾನುಭೂತಿಯ ನೈಜ ಕಥೆ ಇದೋ ನಿಮಗಾಗಿ.

ತಮಿಳುನಾಡಿನ ಚನ್ನೈನ ಪ್ರತಿಷ್ಠಿತ ಕಾಲೇಜೊಂದರ ಪ್ರಾಂಶುಪಾಲರು ನಂತರ ಮದ್ರಾಸ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಮೊದಲಿಯಾರ್ ಅವರು  ಅಪರೂಪದ ಎಂಜಿನಿಯರಿಂಗ್ ಪುಸ್ತಕವೊಂದನ್ನು ತಮ್ಮ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಯನ್ನು ಕರೆದು ಆತನಿಗೆ ಕೊಟ್ಟು ಜೀವನದಲ್ಲಿ ಒಳ್ಳೆಯ ವಿದ್ಯಾವಂತನಾಗು ಎಂದು ಹಾರೈಸುತ್ತಾರೆ.  ಆ ಪುಸ್ತಕದ  ಮೌಲ್ಯ  ಕೇವಲ ಆ ಪುಸ್ತಕದ ಮುಖ ಬೆಲೆ ಮಾತ್ರಾ ಆಗಿರದೇ, ಅದರ ನಿಜವಾದ ಮೌಲ್ಯವು ಹಿಂದುಳಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಕ್ಕೆ ಹೆಸರುವಾಸಿ ಆಗಿದ್ದಂತಹ, ಗೌರವಾನ್ವಿತ ಭಾರತೀಯ ಶಿಕ್ಷಣ ತಜ್ಞ ಮತ್ತು ಮದ್ರಾಸ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಮೊದಲಿಯಾರ್ ಅವರು ತಮ್ಮ ಸ್ವಂತ ಕೈಬರಹದ ಟಿಪ್ಪಣಿಯೇ ಆಗಿತ್ತು ಎಂದರೂ  ಅತಿಶಯವಾಗದು. ಅಂತಹ ಗೌರವಾನ್ವಿತ ವ್ಯಕ್ತಿಗಳಿಂದ ಪುಸ್ತಕ ಪಡೆದದ್ದಕ್ಕಾಗಿ ಆ ವಿದ್ಯಾರ್ಥಿಗೆ ಬಹಳ ಹೆಮ್ಮೆಯಾಗಿರುತ್ತದೆ ಮತ್ತು ಮುಂದೆ ಜೀವನದಲ್ಲಿ ತಾನು ಯಾವುದಾದರೂ ಮಹತ್ತರವಾದ ಸಾಧನೆಯನ್ನು ಮಾಡಬೇಕೆಂಬ ಛಲ ಮೂಡಿಸುವವಲ್ಲಿ ಯಶಸ್ವಿಯಾಗಿರುತ್ತದೆ. 

ದುದೃಷ್ಟವಶಾತ್, ಪುಸ್ತಕವನ್ನು ಪಡೆದ ಆ ಅದೃಷ್ಟಶಾಲಿ ವಿದ್ಯಾರ್ಥಿಯ ಆನಂದ ಹೆಚ್ಚು ಕಾಲ ಬಾಳಲಿಲ್ಲ.  ಏಕೆಂದರೆ ಆತ ತನ್ನ ಕೊಠಡಿಗೆ  ಹಿಂದಿರುಗಿ ಬರುವಷ್ಟರಲ್ಲಿ ಆತನಿಗೆ  ತನ್ನ ತಂದೆಯಿಂದ ಬಂದಿದ್ದ ಪತ್ರ ಕಾಣಿಸುತ್ತದೆ. ಆ ಪತ್ರದಲ್ಲಿ ಮಗೂ, ನಿನ್ನೆ ರಾತ್ರಿ ಕಡಲಿನಲ್ಲಿಲ್ಲಾದ ಪ್ರವಾಹದಿಂದಾಗಿ ನಮ್ಮ ಮನೆ ಮತ್ತು ದೋಣಿ ಸಂಪೂರ್ಣವಾಗಿ ನಾಶವಾಗಿದೆ. ಪರಿಸ್ಥಿತಿಯನ್ನು ನಿರ್ವಹಿಸಲು ತನ್ನ ಸಂಪೂರ್ಣ ಪ್ರಯತ್ನ ಎಲ್ಲವೂ ನಿಶ್ಪಲವಾದ ಕಾರಣ, ನನಗೆ ನಿನ್ನ ಸಹಾಯದ ಅವಶ್ಯಕತೆ ಇದ್ದು, ಈ ಪತ್ರ ಓದಿದ ಕೂಡಲೇ  ದಯವಿಟ್ಟು ಮನೆಗೆ ಬಾ ಎಂದಿರುತ್ತದೆ.

ಆ ಪತ್ರವನ್ನು ಓದುತ್ತಲೇ ಆ ಹದಿ ಹರೆಯದ ಹುಡುಗನ ಹೃದಯ ಘಲ್ ಎಂದು ಕೂಡಲೇ ಊರಿಗೆ ಹೋಗಬೇಕು ಎಂದು ಬಯಸುತ್ತಾದರೂ, ಊರಿಗೆ ಹೋಗಲು ಹಣವಿರದೇ, ಹಾಗೂ ಹೀಗೂ ನಿದ್ದೆಯಿಲ್ಲದೇ ಇಡೀ ರಾತ್ರಿಯನ್ನು ಕಳೆದು ಮರು ದಿನಬೆಳಿಗ್ಗೆ, ವಿಧಿ ಇಲ್ಲದೇ  ತುರ್ತು ಅವಶ್ಯಕತೆಗಾಗಿ ನೆನ್ನೆ ಪ್ರಾಂಶುಪಾಲರಿಂದ ಬಹುಮಾನವಾಗಿ ಪಡೆದಿದ್ದ ಆ ಪುಸ್ತಕವನ್ನು ಗಟ್ಟಿಯಾಗಿ ಎದೆಗೆ ಅವಚಿಕೊಂಡು ಚೆನ್ನೈನ ಮೋರ್ ಮಾರುಕಟ್ಟೆಯಲ್ಲಿರುವ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯ ಬಳಿ ಹೋಗಿ ಮೌನವಾಗಿ ನಿಲ್ಲುತ್ತಾನೆ. ಅಕ್ಕಿಯ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಎನ್ನುವಂತೆ ಪುಸ್ತಕವನ್ನು ಹಾಗೇ ಇಟ್ಟುಕೊಳ್ಳುವ ಆಸೆ ಆದರೆ, ಊರಿಗೆ ಹೋಗಲು ಹಣವಿಲ್ಲದೇ ಇರುವ ಕಾರಣ ಆ ಪುಸ್ತಕವನ್ನು ಮಾರಲೇ ಬೇಕಾದ ಅನಿವಾರ್ಯ ಸಂಧರ್ಭ. ಕೊನೆಗೆ ಗಟ್ಟಿ ಮನಸ್ಸು ಮಾಡಿ ಭಾರವಾದ ಹೃದಯದಿಂದ  ಮಾರಾಟ ಮಾಡಲು  ನಿರ್ಧರಿಸಿ, ಅಂಗಡಿಯವನ ಬಳಿ ಬಂದು ಬಹಳ ಹಿಂಜರಿಕೆಯಿಂದ ಈ ಪುಸ್ತಕಕ್ಕೆ 20 ರೂಪಾಯಿಗಳನ್ನು ಕೊಡಲು ಸಾಧ್ಯವೇ? ಎಂದು ಕೇಳುತ್ತಾನೆ.

ಅಂಗಡಿಯವನು ಆ ಹುಡುಗನನ್ನು  ಒಮ್ಮೆ ಮೇಲಿಂದ ಕೆಳಗೆ ನೋಡಿ ಪುಸ್ತಕವನ್ನು ಅವನಿಂದ ಪಡೆದು ಪುಸ್ತಕದ ಶೀರ್ಷಿಕೆಯನ್ನೊಮ್ಮೆ ಓದಿ ಪುಸ್ತಕದ ಮೊದಲ ಪುಟ ತೆರೆಯುತ್ತಿದ್ದಂತೆಯೇ, ಅವನ ಹುಬ್ಬುಗಳು ಆಶ್ಚರ್ಯದಿಂದ ಮೇಲಕ್ಕೆ ಹಾರಿದವು. ಇದು ಬಹಳ  ಅಪರೂಪದ ಪುಸ್ತಕವಾಗಿ ಅದರ ಬೆಲೆಯೇ ಬಹಳವಾಗಿದ್ದದ್ದಲ್ಲದೇ, ಅದರ ಮೇಲೆ ಮೊದಲಿಯಾರ್ ಅವರು ಪ್ರೀತಿ ಪಾತ್ರನಿಗೆ ಅಶೀರ್ವಾದದೊಂದಿಗೆ ಎಂದು ಬರೆದು  ಹಸ್ತಾಕ್ಷರ ಮಾಡಿದ್ದರಿಂದ ಪುಸ್ತಕದ ಬೆಲೆ ಮತ್ತಷ್ಟು ಹೆಚ್ಚಾಗಿರುತ್ತದೆ. ಕೂಡಲೇ, ಈ ಪುಸ್ತಕವನ್ನು  ಡಾ. ಮೊದಲಿಯಾರ್ ಸರ್ ಅವರು ನಿನಗಾಗಿಯೇ ನೀಡಿದ್ದಾರೆಯೇ? ಎಂದು ಕೇಳಿದಾಗ, ಆ ಹುಡುಗ ಬಹಳ ವಿನಮ್ರತೆಯಿಂದ ಹೌದು ಆಣ್ಣಾ ಎಂದು ತಲೆ ಆಡಿಸುತ್ತಾನೆ.  ಅರೇ!! ಇದು ಕೇವಲ ಪುಸ್ತಕವಲ್ಲಾ. ಇದು ನಿನಗೆ ಅವರು ನೀಡಿದ ಪ್ರಶಸ್ತಿ. ಇಂತಹ ಪ್ರಶಸ್ತಿಯನ್ನು ಮಾರುವ  ಅನಿವಾರ್ಯತೆ ನಿನಗೇನಿದೆ? ಎಂದು ಬಹಳ ಗಂಭೀರವಾಗಿ  ಅಂಗಡಿಯವರು ಕೇಳುತ್ತಾರೆ.

ಹಿಂದಿನ ದಿನ ತನ್ನ ತಂದೆಯು ಬರೆದಿದ್ದ ಪತ್ರದ ಸಾರಾಂಶವನ್ನು  ಆ  ಅಂಗಡಿಯವರಿಗೆ ತಿಳಿಸಿ, ತನ್ನ ಕುಟುಂಬವು ಬಹಳ ಬಿಕ್ಕಟ್ಟಿನಲ್ಲಿರುವ ಕಾರಣ, ತಕ್ಷಣ ಮನೆಗೆ ಹೋಗಬೇಕಾಗಿರುವ ಕಾರಣ ದಯವಿಟ್ಟು ಶೀಘ್ರವಾಗಿ ಹಣ ನೀಡಿದಲ್ಲಿ ನಾನು ಊರಿಗೆ ಹೋಗುತ್ತೇನೆ ಎಂದು ಆ ಯುವಕ ಹೇಳಿದಾಗ, ಅಂಗಡಿಯವರು ಸದ್ದಿಲ್ಲದೆ ಪುಸ್ತಕವನ್ನು ಮುಚ್ಚಿ, ತನ್ನ ಗಲ್ಲ ಪೆಟ್ಟಿಗೆಯಿಂದ 15 ರೂಪಾಯಿಗಳನ್ನು ಎಣಿಸಿ, ಇದು ನಿನ್ನ ಪ್ರಯಾಣ ಮತ್ತು  ಪ್ರಯಾಣದ ಖರ್ಚಿಗೆ ಸಾಕಾಗುತ್ತದೆ ಎಂದು ಹೇಳಿ ಆ ಹುಡುಗನ ಕೈಗೆ ಹಣವನ್ನು ನೀಡಿ. ಮನುಷ್ಯರ ಜೀವನದಲ್ಲಿ ಕಷ್ಟಗಳು ಬರುತ್ತವೆ ಮತ್ತು ಹಾಗೆಯೇ ಹೋಗುತ್ತವೆ ಆದರೆ  ಈ ಪುಸ್ತಕದಲ್ಲಿರುವ ಜ್ಞಾನವು ಕಾಲಾತೀತವಾಗಿದ್ದು ಅದು ಮಾರಾಟಕ್ಕೆ ಸಿಲುಕದ  ಅನರ್ಘ್ಯ ರತ್ನವಾಗಿದೆ. ಹಾಗಾಗಿ ನಾನು ಈ ಪುಸ್ತಕವನ್ನು ಯಾರಿಗೂ ಮಾರದೇ ಜೋಪಾನವಾಗಿ ನಿನಗಾಗಿಯೇ ಇಟ್ಟಿರುತ್ತೇನೆ. ಎಂದಾಗ, ಅಣ್ಣಾ ನಾನು ನಿಮಗೆ ಪುಸ್ತಕವನ್ನು ಮಾರಿದ ನಂತರ ಆ ಪುಸ್ತಕ ನನ್ನದು ಹೇಗಾಗುತ್ತದೆ ಎಂದಾಗ, ನೀನು ನಿನ್ನ ಊರಿಗೆ ಹೋಗಿ ನಿನ್ನೆಲ್ಲಾ ಸಮಸ್ಯೆಗಳನ್ನೂ ಪರಿಹರಿಸಿಕೊಂಡು  ಹಿಂದಿರುಗಿ ಮತ್ತೆ ನನ್ನಲ್ಲಿಗೆ ಬಂದು ಇಂದು ಕೊಟ್ಟಷ್ಟೇ ಹಣವನ್ನು ನೀಡಿ ಮರಳಿ ನಿನ್ನ ಪುಸ್ತಕವನ್ನು ತೆಗೆದುಕೊಂಡು ಹೋಗು ಎನ್ನುತ್ತಾರೆ. ಅದೇ ರೀತಿ ಕೆಲವು ಸಮಯದ ನಂತರ ಆ ವಿದ್ಯಾರ್ಥಿ, ಅಂಗಡಿಯವರು ನೀಡಿದ್ದ ಹಣವನ್ನು ಹಿಂದಿರುಗಿಸಿ ಅವರಿಂದ ಆ ಪುಸ್ತಕವನ್ನು ಮರಳಿ ಪಡೆಯುತ್ತಾನೆ.

ಅಂದು ಆ ಮಾನವೀಯತೆ ತೋರಿದ ಅಂಗಡಿಯವನ ಹೆಸರು ಇಂದು ಯಾರಿಗೂ ತಿಳಿದಿಲ್ಲಾ.  ಆದರೆ ಆ ವಿದ್ಯಾರ್ಥಿಯ ಹೆಸರು ಮಾತ್ರಾ ಭಾರತದ ಇತಿಹಾಸದಲ್ಲಿ ಅಜರಾಮರವಾಗಿದ್ದು. ಅವರೇ  ಭಾರತದ ಅತ್ಯಂತ ದಕ್ಷ ಮತ್ತು ಪ್ರೀತಿಯ ರಾಷ್ಟ್ರಪತಿಗಳಲ್ಲಿ ಒಬ್ಬರಾಗಿದ್ದಂತಹ ತಮಿಳುನಾಡಿನ ರಾಮೇಶ್ವರಂ ಮೂಲದ ಬೆಸ್ತ ಕುಟುಂಬಕ್ಕೆ ಸೇರಿದ್ದ ಡಾ. ಎಪಿಜೆ ಅಬ್ದುಲ್ ಕಲಾಂ. ನಮ್ಮ ದೇಶ ಕಂಡ ಶ್ರೇಷ್ಠ ವಿಜ್ಞಾನಿ, ದಾರ್ಶನಿಕ ಮತ್ತು ಇತರರ ನಿಸ್ವಾರ್ಥ ಸಹಾನುಭೂತಿಯಿಂದ ತನ್ನ ಪ್ರಯಾಣವು ಹೇಗೆ ರೂಪುಗೊಂಡಿತು ಎಂಬುದನ್ನು ಎಂದಿಗೂ ಮರೆಯಲಾಗದ ವ್ಯಕ್ತಿ ಆಗಿದ್ದಾರೆ.

ಉಪಕಾರ ಮಾಡಿ ಅದಕ್ಕೆ ಪ್ರತಿಯಾಗಿ ಏನನ್ನೂ ನಿರೀಕ್ಷಿಸದ ಅಪರಿಚಿತ ಜನರ ದಯೆಯ ಕಾರ್ಯಗಳ ಮೇಲೆ ತನ್ನ ಜೀವನವು ನಿರ್ಮಿಸಲ್ಪಟ್ಟಿದೆ ಎಂದು ಡಾ. ಕಲಾಂ ಆಗಾಗ್ಗೆ ಹೇಳುತ್ತಿದ್ದದ್ದಕ್ಕೆ ಈ ಘಟನೆಯೇ ಸಾಕ್ಷಿಯಾಗಿದ್ದು, ಇದೇ ಸತ್ಯವನ್ನೇ ನಮ್ಮ ಧರ್ಮ ಗ್ರಂಥಗಳು ಮತ್ತು ಸಂತರು ಹೇಳಿದ್ದಾರೆ ಅಲ್ವೇ? ಮಹರ್ಷಿ ಪತಂಜಲಿ ಯೋಗ  1.33ರ ಸೂತ್ರದಲ್ಲಿ ಸಂತೋಷದವರ ಕಡೆಗೆ ಸ್ನೇಹಪರತೆ, ದುಃಖಿತರ ಕಡೆಗೆ ಕರುಣೆ, ಸದ್ಗುಣಶೀಲರಲ್ಲಿ ಸಂತೋಷ ಮತ್ತು ದುಷ್ಟರ ಕಡೆಗೆ ಅಸಡ್ಡೆ ಬೆಳೆಸಿಕೊಂಡಲ್ಲಿ ಮಾತ್ರವೇ ಎಲ್ಲರ ಮನಸ್ಸು ಶಾಂತವಾಗುತ್ತದೆ. ದಯೆಯೇ ಧರ್ಮದ ಮೂಲವಾಗಿದ್ದು, ದಯೆಯ ಶಕ್ತಿಯು ಎಂದಿಗೂ ಕಡಿಮೆ ಎಂದು ಅಂದಾಜು ಮಾಡಬಾರದು. ಎಂದು ಹೇಳಲಾಗಿದೆ.

ಅಪರಿಚಿತ ವ್ಯಕ್ತಿಯೊಬ್ಬರ ಒಂದು ಸಣ್ಣ ಸಹಾಯ ಹೇಗೆ ಮತ್ತೊಬ್ಬರ ಜೀವನವನ್ನು ಹೇಗೆ ಬದಲಿಸ ಬಲ್ಲದು ಎನ್ನುವುದಕ್ಕೆ ಕಲಾಂ ಅವರ ಈ ಪ್ರಸಂಗವೇ ಸಾಕ್ಷಿಯಾಗಿದ್ದು, ಹಾಗಾಗಿ ಕಷ್ಟದಲ್ಲಿದ್ದವರಿಗೆ ಕೈಲಾದಷ್ಟು  ಸಹಾಯ ಮಾಡುವ ಮನಸ್ಥಿತಿಯನ್ನು ಬೆಳಸಿಕೊಳ್ಳೋಣ ಅಲ್ವೇ? ಯಾರಿಗೆ ಗೊತ್ತು ಯಾವ ಹುತ್ತದಲ್ಲಿ ಯಾವ ಹಾವು ಇರುತ್ತದೆ ಎಂದು ಯಾರಿಗೂ ಗೊತ್ತಿರುವುದಿಲ್ಲಾ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನ ಸಾಮಾಜಿಕ ಜಾಲತಾಣದಲ್ಲಿ ನೋಡಿದ ವ್ಯಕ್ತಿಯೊಬ್ಬರ ಆಂಗ್ಲ ಭಾಷೆಯ ವಿಡಿಯೋದ ಭಾವಾನುವಾದವಾಗಿದೆ.

2 thoughts on “ಅಪರಿಚಿತರ ಮಾನವೀಯತೆ

  1. ಅತ್ಯುತ್ತಮ ಲೇಖನ, ಜೀವನದ ತಿರುವುಗಳು ಹೇಗೆ ಇರುತ್ತದೆ ಎಂಬುದು ವಿಧಿ ಲಿಖಿತ

    Like

Leave a reply to ಶ್ರೀಕಂಠ ಬಾಳಗಂಚಿ Cancel reply