ನಮ್ಮ ಸನಾತನ ಧರ್ಮದಲ್ಲಿ ವರ್ಷದ 365 ದಿನಗಳು ವಿಶೇಷವೇ ಆಗಿದ್ದು, ಪ್ರತಿಯೊಂದು ದಿನವೂ ಹಬ್ಬವೇ ಆಗಿದೆ ಎಂದರೂ ತಪ್ಪಾಗದು. ಹಬ್ಬಗಳು ಎಂದರೆ ಸಂತೋಷ, ಸಂಭ್ರಮ ಮತ್ತು ಸಂಪ್ರದಾಯಗಳ ಸಂಗಮವಾಗಿದ್ದು, ನಮ್ಮ ದೇಶದಲ್ಲಿ, ಯುಗಾದಿ, ದೀಪಾವಳಿ, ಗಣೇಶ ಚತುರ್ಥಿ, ನವರಾತ್ರಿ ಮತ್ತು ಸಂಕ್ರಾಂತಿಗಳಂತಹ ಅನೇಕ ಹಬ್ಬಗಳನ್ನು ಸಾಂಸ್ಕೃತಿಕ, ಧಾರ್ಮಿಕ ಮತ್ತು ಋತುಮಾನಗಳ ಆಧಾರದ ಮೇಲೆ ಆಚರಿಸಲಾಗುತ್ತದೆ. ಇವುಗಳು ಜೀವನದ ವಿವಿಧ ಅಂಶಗಳನ್ನು ಸಂಕೇತಿಸುತ್ತವೆ. ಈ ಹಬ್ಬಗಳು ಧಾರ್ಮಿಕ ಪದ್ಧತಿಗಳು, ಕಲೆ ಮತ್ತು ಸಮುದಾಯದ ಬಾಂಧವ್ಯವನ್ನು ಬಲಪಡಿಸುತ್ತವೆ ಎನ್ನುವುದು ನಿರ್ವಿವಾದವೇ ಸರಿ.
ದುರಾದೃಷ್ಟವಷಾತ್ ಬ್ರಿಟೀಷರು ನಮ್ಮ ದೇಶಕ್ಕೆ ಬಂದು ಕೇವಲ ನಮ್ಮ ಸಂಪತ್ತನ್ನು ಮಾತ್ರಾ ಲೂಟಿ ಮಾಡಲಿಲ್ಲ. ನಮ್ಮ ದೇಶವನ್ನು ಕೈವಶ ಮಾಡಿಕೊಳ್ಳಲು ಬಳಸಿದ್ದೇ ನಮ್ಮ ಸಂಪ್ರದಾಯ, ಸಂಸ್ಕಾರ. ಸಂಸ್ಕೃತಿ ಮತ್ತು ನಮ್ಮ ಶಿಕ್ಷಣವನ್ನು ಒಡೆದು ಹಾಗಿದ್ದು ಮತ್ತು ಸದ್ದಿಲ್ಲದೇ ಮತಾಂತರ ಮಾಡಿದ್ದು. 2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಅಧಿಕೃತವಾಗಿ 2.3% to 2.4%ರಷ್ಟು ಕ್ರಿಶ್ಚಿಯನ್ನರು ಇದ್ದು (ಮತಾಂತರವಾಗಿಯೂ ಮೀಸಲಾತಿ ಉಳಿಸಿಕೊಳ್ಳುವ ಸಲುವಾಗಿ ಹಿಂದೂ ಹೆಸರು ಇಟ್ಟು ಕೊಂಡಿರುವ ಸಂಖ್ಯೆ ಕೋಟಿಗಟ್ಟಲೆ ಇದೆ) ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯವಲ್ಲದೇ ದಕ್ಷಿಣ ಭಾರತದ ಕೇರಳ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಕ್ರಿಶ್ಚಿಯನ್ನರ ಜನಸಂಖ್ಯೆ ರಾಷ್ಟ್ರೀಯವಾಗಿ ಅಲ್ಪಸಂಖ್ಯಾತರಾಗಿದ್ದರೂ, ಹಲವಾರು ಈಶಾನ್ಯ ರಾಜ್ಯಗಳಲ್ಲಿ ಬಹುಸಂಖ್ಯಾತರಾಗಿರುವುದು ಹಿಂದೂ ಧರ್ಮದ ಏಕತೆಗೆ ಆಘಾತಕಾರಿಯಾಗಿದೆ.
ಬ್ರಿಟೀಷರು ಭಾರತವನ್ನು ಬಿಟ್ಟು ಹೋಗಿ 75+ ವರ್ಷಗಳು ಆಗಿದ್ದರೂ, ಇನ್ನೂ ಸಹಾ ಬ್ರಿಟೀಷರ ಗುಲಾಮಿ ಪದ್ದತಿ. ಶಾಲಾ ಕಾಲೇಜುಗಳಲ್ಲಿ, ಕಛೇರಿಗಳಲ್ಲಿ ಸದ್ದಿಲ್ಲದೇ, ಕ್ರಿಶ್ಚಿಯನ್ ಆಚರಣೆಗಳು ಪರೋಕ್ಷವಾಗಿ ರೂಢಿಯಲ್ಲಿರುವುದಕ್ಕೆ ಈ ಘಟನೆಗಳೇ ಸಾಕ್ಷಿಯಾಗಿದೆ.
ನಮ್ಮ ಸನಾತನ ಧರ್ಮದಲ್ಲಿ ಹೆಣ್ಣು ಮಕ್ಕಳ ಸಂಕೇತ ಎನಿಸಿಕೊಳ್ಳುವ ಹಣೆಯ ಮೇಲಿನ ಕುಂಕುಮ, ಕೈಗೆ ಬಳೆ, ಎಣ್ಣೆ ಹಚ್ಚಿ ಬೈತಲೆ ತೆಗೆದು ಬಣ್ಣ ಬಣ್ಣದ ಹೂವುಗಳನ್ನು ಮುಡಿದುಕೊಂಡ ಜಡೆಗಳು, ಮೈ ತುಂಬಾ ಧರಿಸುವ ಬಟ್ಟೆಗಳು ಇಂದು ಅಂಧ ಪಾಶ್ಚಾತ್ಯೀಕರಣದ ಅಂಗವಾಗಿ ಮಾಯವಾಗಿ ಎಷ್ಟೋ ವರ್ಷಗಳಾಗಿವೆ. ಇನ್ನು ಡಿಸೆಂಬರ್ ಕಡೆಯ ವಾರಗಳು ಬಂತೆಂದರೆ ನಮ್ಮ ಶಾಲಾ ಕಾಲೇಜುಗಳಲ್ಲಿ ಮತ್ತು ಕಛೇರಿಗಳಲ್ಲಿ ವಿದ್ಯಾರ್ಥಿಗಳು, ಸ್ನೇಹಿತರು, ಕುಟುಂಬ ಸದಸ್ಯರು ಅಥವಾ ಸಹೋದ್ಯೋಗಿಗಳು ಕ್ರಿಶ್ಚಿಯನ್ನರು ಬಹಳ ಉದಾರಿಗಳು ಎಂದು ತೋರಿಸುವ ಹಾಗಿ ಅವರೆಲ್ಲರ ನಡುವೆ ಉಡುಗೊರೆ ವಿನಿಮಯ ಮಾಡಿಕೊಳ್ಳುವ ಸಿಕ್ರೇಟ್ ಸಾಂತಾ ಆಟ ಆರಂಭವಾಗುತ್ತದೆ. ಕೆಲವೆಡೆ ಒಂದು ದಿವಸ ಆಟವಾಡಿದರೆ ಇನ್ನೂ ಕೆಲವೆಡೆ ವಾರ ಪೂರ್ತಿ ಗುಟ್ಟಾಗಿ ಉಡುಗೊರೆ ನೀಡುವ ಮೂಲಕ ಕ್ರಿಶ್ಚಿಯನ್ನರು ಬಹಳ ಉದಾರಿಗಳು ಎಂದು ತೋರಿಸುವ ಹುನ್ನಾರ ನಿಜಕ್ಕೂ ಆಘಾತಕಾರಿಯಾಗಿದೆ.
ಇನ್ನು ಶಾಲೆಗಳಲ್ಲಿ ಸ್ವಾತ್ರಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಿನಗಳಂದು ಭಾರತಮಾತೆ ಮತ್ತು ವೀರ ಪುರುಷರ ಉಡುಗೆ ತೊಡುಗೆ ಹಾಕಿಸದೇ ಇದ್ದರೂ, ಶ್ರೀಕೃಷ್ಣ ಜನ್ಮಾಷ್ಠಮಿಯಂದು ಮಕ್ಕಳಿಗೆ ರಾಧಾ ಕೃಷ್ಣ ಉಡುಪು ಹಾಕಿಸದೇ ಹೋದರೂ, ಕ್ರಿಸ್‌ಮಸ್ ಹಬ್ಬಕ್ಕೆ ಮಾತ್ರಾ ಚಿಕ್ಕ ಚಿಕ್ಕ ಮಕ್ಕಳಿಗೂ ಸಾಂಟಾ ರೀತಿಯ ಉಡುಗೆ ತೊಡುಗೆ ತೊಡುಗೆ ತೊಡಿಸುವುದು, ದಸರಾ ಹಬ್ಬದ ರಜೆಗಳನ್ನು ಕಡಿಮೆ ಮಾಡಿ ಕ್ರಿಸ್ಮಸ್ ಹಬ್ಬಕ್ಕೆ ಕೊಡುವ ಮೂಲಕ ಸರ್ಕಾರ ಇಲ್ಲವೇ ಶಿಕ್ಷಣ ಇಲಾಖೆಯೇ ಪರೋಕ್ಷವಾಗಿ ಕ್ರೈಸ್ತ ಮತಾಂತರಕ್ಕೆ ಪ್ರೋತ್ಸಾಹ ನೀಡುತ್ತಿದೆಯೇ? ಎಂಬ ಅನುಮಾನ ಮೂಡುತ್ತಿದೆ.
ಇನ್ನು ಹೋಲಿ ಹಬ್ಬದ ಬಣ್ಣ ಹಾನಿಕರ, ಶ್ರೀಕೃಷ್ಣ ಜನ್ಮಾಷ್ಠಮಿ ವಿಟ್ಲ ಪಿಂಡಿ ಆಡಬಾರದು, ದೀಪಾವಳಿ ಹಬ್ಬಕ್ಕೆ ಪಟಾಕಿ ಹೊಡೆಯುವುದು ಪರಿಸರಕ್ಕೆ ಹಾನಿಕರ ಎನ್ನುವವರಿಗೆ ಕ್ರಿಸ್ಮಸ್ ಹಬ್ಬ ಬಂದಿತೆಂದರೆ ಕ್ರಿಸ್ಮಸ್ ಟ್ರೀ ಗಿಡಗಳನ್ನು ಕತ್ತರಿಸಿದಾಗ ಇಲ್ಲವೇ ಮರದ ಬದಲು ಪ್ಲಾಸ್ಟಿಕ್ ಗಿಡಗಳನ್ನು ಇಡುವುದು ಅದಕ್ಕೆ ಬಣ್ಣ ಬಣ್ಣದ ದೀಪಗಳನ್ನು ಹಚ್ಚುವಾಗ ಆಗುವ ಪರಿಸರ ಹಾನಿಯ ಬಗ್ಗೆ ಚಕಾರವನ್ನೂ ಎತ್ತದೆ ಹೋಗುವುದು ಎಷ್ಟು ಸರಿ? ಎಂದು ಅವರೇ ಹೇಳಬೇಕು. ಇನ್ನು ಕೆಲವು ಕಚೇರಿಗಳಲ್ಲಿ ಕ್ರಿಶ್ಚಿಯನ್ನರೇ ಇಲ್ಲದೇ ಹೋದರೂ, ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಅವರ ಮೇಜಿನ ಮೇಲೆ ಬಣ್ಣ ಬಣ್ಣದ ಬೆಲೂನ್ ಇಲ್ಲವೇ ಬಣ್ಣದ ಕಾಗದಗಳ ಮೂಲಕ ಅಲಂಕರಿಸುವುದು, ತಲೆಯ ಮೇಲೆ ಕೆಂಪು ಬಣ್ಣದ ಟೋಪಿ ಧರಿಸಿ, ಕೋಟು ಹಾಕಿ ಕೊಂಡು ಸಾಂಟ ರೀತಿಯ ವೇಷ ಧರಿಸಿ ಅವರಿವರಿಗೆ ಉಡುಗೊರೆ ಕೊಡುವ ರೂಢಿ ಯಾವ ಪುರುಷಾರ್ಥಕ್ಕೆ? ಎಂದು ಅದನ್ನು ಆಚರಿಸುವ ಹಿಂದೂಗಳೇ ಹೇಳಬೇಕು.
ಇನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯರಾದ ಜೆಮಿಯಾ ರೋಡಿಗ್ರೇಸ್ (ಆಕೆ ಮತ್ತು ಅವರ ತಂದೆ ಸಾಮೂಹಿಕ ಮತಾಂತರಗಳಲ್ಲಿ ಭಾಗಿಯಾಗಿರುವ ಆರೋಪವಿದೆ) ಮತ್ತು ಸ್ಮೃತಿ ಮಂದಾನಾ ಅವರ ಫೋಟೋ ಸಹಾ ಇದೆಕ್ಕೆ ಪುಷ್ಟಿಯನ್ನು ನೀಡುವಂತಿದೆ. ಜೆಮಿಯಾ ತಂದೆ ಬಲವಂತವಾಗಿ ಮತಾಂತರದ ಕೃತ್ಯದಲ್ಲಿ ಭಾಗಿಗಳಾಗಿದ್ದಾರೆ ಎಂಬ ಆರೋಪ ಬಂದಾಗ ಇದೊಂದು ಶಡ್ಯಂತ್ರ ಎಂದೇ ವಾದ ಮಾಡುತ್ತಿರುವವರಿಗೆ, ವಿಶ್ವಕಪ್ ಸಮಯದಲ್ಲಿ ಉತ್ತಮ ಆಟಕ್ಕಾಗಿ ಪಂದ್ಯ ಪುರುಷೋತ್ತ್ತಮ ಪ್ರಶಸ್ತಿಯನ್ನು ಸ್ವೀಕರಿಸುವಾಗ ಅನಗತ್ಯವಾಗಿ ಪದೇ ಪದೇ ಜೀಸಸ್ ಹೆಸರನ್ನು ಹೇಳಿದ್ದು ಮತ್ತು ಆಟದ ಮಧ್ಯೆ ಬೈಬಲ್ ಪಠಿಸುತ್ತಿದ್ದೆ ಎಂದು ಹೇಳುವ ಮೂಲಕ ಜೀಮಿಯಾ ತಾನು ಎಂತಹ ಕಟ್ಟರ್ ಕ್ರಿಶ್ಚಿಯನ್ ಎಂದು ಇಡೀ ಜಗತ್ತಿಗೇ ತೋರಿಸಿಕೊಟ್ಟಿದ್ದಳು.
ಇನ್ನು ಇತ್ತೀಚೆಗೆ ಎಲ್ಲರಿಗೂ ತಿಳಿದಿರುವಂತೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸವ್ಯಸಾಚಿ ಆಟಗಾರ್ತಿ ಸ್ಮೃತಿ ಮಂದಾನ ವಯಕ್ತಿಕ ಜೀವನದಲ್ಲಿ ಆದ ಘಟನಾವಳಿಗಳು ಎಲ್ಲರಿಗೂ ತಿಳಿದೇ ಇದೆ. ಹಿಂದಿ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಪಲಾಶ್ ಮುಚ್ಚಲ್ ಅವರೊಂದಿಗೆ ಆಕೆಯ ಗೆಳೆತನ ಅನೇಕ ದಿನಗಳಿಂದಲೂ ಇದ್ದು, ಎಲ್ಲರ ಸಮ್ಮುಖದಲ್ಲೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿ, ಆವರ ಮದುವೆ ಮೆಹಂದಿ ದಿನದಲ್ಲಿ ಕ್ರಿಕೆಟ್ ಆಟಗಾರ್ತಿಯರು ಕುಣಿದು ಕುಪ್ಪಳಿಸಿದ ವಿಡೀಯೋ ಮತ್ತು ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇನ್ನೇನು ಮಾರನೇ ದಿನ ಮದುವೆಗೆ ಎಲ್ಲವೂ ಸಿದ್ದವಾಗಿರುವಾಗ ಇದ್ದಕ್ಕಿದ್ದಂತೆಯೇ ಸ್ಮೃತಿ ಅವರ ತಂದೆಗೆ ಹೃದಯಾಘಾತ ಆಗಿ ಆಸ್ಪತ್ರೆಗೆ ಸೇರಿದ ಪರಿಣಾಮ ಆರಂಭದಲ್ಲಿ ಮದುವೆಯನ್ನು ಮುಂದಕ್ಕೆ ಹಾಕಿದ್ದೇವೆ ಎಂದರೂ ನಂತರದ ದಿನಗಳಲ್ಲಿ ಪಲಾಶ್ ಮುಚ್ಚಲ್ ಅವರೊಂದಿಗೆ ಮದುವೆಯನ್ನು ಶಾಶ್ವತವಾಗಿ ನಿಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಸ್ಮೃತಿಯ ಜೊತೆಗೆ ಜೆಮಿಯಾ ರೋಡಿಗ್ರೇಸ್ ಇದ್ದದ್ದು ಕಂಡವರಿಗೆ ಅಬ್ಬಾಬ್ಬ ಗೆಳೆತನ ಎಂದರೆ ಹೀಗಿರಬೇಕು ಎಂದು ಮೂಗಿನ ಮೇಲೆ ಬೆರಳಿಟ್ಟಿಕೊಂಡವರಿಗೆ, ಅದೇ ಮಹಿಳಾ ಕ್ರಿಕೆಟ್ ತಂಡವು ಪಂದ್ಯಾವಳಿಯ ಮಧ್ಯದಲ್ಲಿ ಆಂಧ್ರದ ಒಂದು ದೇವಾಲಯಕ್ಕೆ ಭೇಟಿ ನೀಡಿದಾಗ ಜಾತ್ಯಾತೀತ ಜೆಮಿಮಾ ಮಾತ್ರಾ ದೇವಾಲಯದಲ್ಲಿ ಕಾಣಲೇ ಇಲ್ಲಾ. ಇನ್ನು ದೇವಾಲಯದಲ್ಲಿ ದೇವರ ಮುಂದೆ ಎಲ್ಲರೂ ಹಿಂದೂ ಧರ್ಮದ ರೀತಿಯಲ್ಲಿ ಎರಡೂ ಕೈಗಳನ್ನು ಮುಗಿದು ಪ್ರಾರ್ಥನೆ ಸಲ್ಲಿಸುತ್ತಿದ್ದರೆ, ಸ್ಮೃತಿ ಮಾತ್ರಾ ಚರ್ಚುಗಳಲ್ಲಿ ಪಾದ್ರಿಯ ಮುಂದೆ ಬೇಡಿಕೊಳ್ಳುವಂತೆ ಕೈ ಚಾಚಿದ್ದದ್ದು ಸ್ಮೃತಿ ಎನಾದರೂ, ಸಹವಾಸದಿಂದ ಸನ್ಯಾಸಿ ಕೆಟ್ಟ ಎನ್ನುವಂತೆ ಜೆಮಿಯಾ ಸಹವಾಸದಿಂದ ಮತಾಂತರವಾಗಿದ್ದಾಳೆಯೇ? ಎಂಬ ಅನುಮಾನವನ್ನು ನೂರಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿರುವುದಕ್ಕೆ ಖುದ್ದು ಸ್ಮೃತಿ ಮಂದಾನಳೇ ಉತ್ತರಿಸಬೇಕಾಗಿದೆ.
ಹೌದು ನಿಜ. ಭಾರತದ ಸಂವಿಧಾನ, ಪ್ರಾಥಮಿಕವಾಗಿ ವಿಧಿ 25ರ ಅಡಿಯಲ್ಲಿ, ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ವ್ಯಕ್ತಿಗಳು ತಮ್ಮ ತಮ್ಮ ನಂಬಿಕೆಯನ್ನು ಪ್ರತಿಪಾದಿಸಲು, ಅಭ್ಯಾಸ ಮಾಡಲು ಮತ್ತು ಪ್ರಚಾರ ಮಾಡಲು ಅವಕಾಶ ನೀಡುತ್ತದೆ. ಅದೂ ಅಲ್ಲದೇ ಸ್ವಯಂಪ್ರೇರಣೆಯಿಂದ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳುವ ಹಕ್ಕಿದೆ. ಆದರೆ ಈ ಹಕ್ಕು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯ ಮತ್ತು ಇತರ ಮೂಲಭೂತ ಹಕ್ಕುಗಳಿಗೆ ಒಳಪಟ್ಟಿದ್ದು ಬಲವಂತವಾಗಿ ಇಲ್ಲವೇ ಆಮಿಷ ಅಥವಾ ಆಮಿಷವೊಡ್ಡಿ ಮತಾಂತರ ಮಾಡುವುದು ತಪ್ಪು ಎಂದು ಸಹಾ ಹೇಳಲಾಗಿದೆಯಾದರೂ, ಕರ್ನಾಟಕ, ಕೇರಳ, ತಮಿಳುನಾಡು, ಅವಿಭಜಿತ ಆಂಧ್ರವಷ್ಟೇ ಅಲ್ಲದೇ, ಪೂರ್ವಾಂಚಲ ರಾಜ್ಯಗಳೂ ಸೇರಿದಂತೆ ದೇಶಾದ್ಯಂತ ಶಾಲೆಗಳು ಮತ್ತು ಆಸ್ಪತ್ರೆಯಲ್ಲಿ ಸೇವೆಯ ರೂಪದಲ್ಲಿ, ಕಷ್ಟದ ಸಮಯದಲ್ಲಿ ಸಹಾಯ ಮಾಡಿ ಭಾವನಾತ್ಮಕವಾಗಿ ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡುತ್ತಿರುವುದು ಅವ್ಯಾಹತವಾಗಿ ನಡೆಯುತ್ತಿದ್ದರೂ, ಎಲ್ಲರೂ ಸಹಾ ಕಣ್ಣು ಮುಚ್ಚಿಕೊಂಡು ಕುಳಿತಿರುವುದು ನಮ್ಮ ದೇಶದ ಅಖಂಡತೆ ಮತ್ತು ಏಕತೆಗೆ ಭಂಗ ತರುತ್ತಿರುವುದು ಆಘಾತಕಾರಿಯಾಗಿದೆ.
ಸಮಸ್ತ ಹಿಂದೂಗಳ ಶ್ರದ್ಧಾ ಕೇಂದ್ರವಾದ ತಿರುಮಲ ತಿರುಪತಿ ಬೆಟ್ಟದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯು ನೆಲೆಸಿದ್ದು, ಅ ದೇವಾಲಯಕ್ಕೆ ಸೇರಿದ ಸಪ್ತಗಿರಿಗಳು ಆ ಹಿಂದೂ ದೇವಾಲಯದ ನೆಲೆಯಾಗಿದ್ದರೂ ತಲೆಮಾರುಗಳ ಹಿಂದೆಯೇ ಕ್ರಿಶ್ಚಿಯನ್ ಮತಾಂತರಗೊಂಡರೂ ಹೆಸರಿನಲ್ಲಿ ಮಾತ್ರವೇ ಹಿಂದೂ ಎಂಬತೆ ತೋರಿಸಿಕೊಂಡಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ (ವೈಎಸ್ಆರ್) ತಿರುಪತಿ ದೇವಾಲಯದ ಆಡಳಿತ ಮಂಡಳಿಯಲ್ಲಿ ಅನಧಿಕೃತವಾಗಿ ಅವರ ತಮ್ಮ ವಿವೇಕಾನಂದ ರೆಡ್ಡಿಯಷ್ಟೇ ಅಲ್ಲದೇ ಇನ್ನೂ ಅನೇಕ ಅನ್ಯಧರ್ಮೀಯರನ್ನು ಸೇರಿಸಿದ್ದ ಕಾರಣ, ತಿರುಮಲ ದೇವಾಲಯ ಸಂಕೀರ್ಣದೊಳಗೆ ಸ್ಥಳೀಯ ಯುನೈಟೆಡ್ ಕ್ರಿಶ್ಚಿಯನ್ ಚರ್ಚುಗಳಿಂದ ಕ್ರಿಸ್‌ಮಸ್ ಕಾರ್ಯಕ್ರಮಗಳಂತೆ ಕ್ರಿಶ್ಚಿಯನ್ ಕೂಟಗಳು ಮತ್ತು ರ್ಯಾಲಿಗಳು ಸುತ್ತಮುತ್ತಲಿನ ತಿರುಪತಿ ಪ್ರದೇಶ ಮತ್ತು ಬೆಟ್ಟಗಳ ಬುಡದಲ್ಲಿ ನಡೆಯುತ್ತಿದ್ದದ್ದಲ್ಲದೇ, ಅಲ್ಲೊಂದು ದೊಡ್ಡ ಚರ್ಚ್ ಕಟ್ಟಿಸುವ ಹುನ್ನಾರವೂ ನಡೆದಿದೆ.
ಇನ್ನು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಮಗ ಉದಯನಿಧಿ ಸ್ಟಾಲಿನ್ ಉದಯನಿಧಿ ಸ್ಟಾಲಿನ್ ತಮ್ಮನ್ನು ತಾವು ಹೆಮ್ಮೆಯ ಕ್ರಿಶ್ಚಿಯನ್ ಎಂದು ಡಿಸೆಂಬರ್ 2024 ರಲ್ಲಿ ನಡೆದ ಕ್ರಿಸ್‌ಮಸ್ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕವಾಗಿ ಘೋಷಿಸಿ ಕೊಂಡಿರುವುದಲ್ಲದೇ, ಹಿಂದೂ ಧರ್ಮವನ್ನು ಮಲೇರಿಯಾ ಡೆಂಗೂ ಮತ್ತು ಏಡ್ಸ್ ರೋಗಗಳಿಗೆ ಹೋಲಿಸಿ ಹಿಂದೂ ಧರ್ಮವನ್ನು ಈ ದೇಶದಿಂದಲೇ ನಿರ್ಮೂಲನ ಮಾಡಬೇಕೆಂಬ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಬಹುಸಂಖ್ಯಾತ ಹಿಂದೂಗಳೇ ಇರುವ ಭಾರತ ದೇಶವನ್ನು ತಮ್ಮ ಅಧಿಕಾರದ ಮೂಲಕ ಪರೋಕ್ಷವಾಗಿ ಕ್ರಿಶ್ಚಿಯನ್ ರಾಷ್ಟವನ್ನಾಗಿಸುವ ಹುನ್ನಾರದಲ್ಲಿ ತೊಡಗಿಕೊಂಡಿದ್ದಾರೆ.
ತಮಿಳು ಚಿತ್ರರಂಗದಲ್ಲಿ ತಲಪತಿ ಎಂದೇ ಪ್ರಖ್ಯಾತವಾಗಿದ್ದು, ಇದೀಗ ತಾನೇ ತಮಿಳು ನಾಡಿನ ರಾಜಕೀಯಕ್ಕೆ ಪ್ರವೇಶಿಸಿ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿರುವ ಕ್ರಿಶ್ಚಿಯನ್ ಮತಾಂತರಿ ಜೋಸೆಫ್ ವಿಜಯ್ 2025 ರ ಸೆಪ್ಟೆಂಬರ್ 27 ರಂದು,ಕರೂರ್ ನಲ್ಲಿ ಆಯೋಜಿಸಲಾಗಿದ್ದ ರಾಜಕೀಯ ರ್ಯಾಲಿಯ ಕಾಳ್ತುಳಿತಕ್ಕೆ ಒಳಗಾಗಿ ಕನಿಷ್ಠ 41 ಜನರು ಸಾವನ್ನಪ್ಪಿ, ಸುಮಾರು 100ಕ್ಕೂ ಹೆಚ್ಚು ಜನರು ಗಾಯಗೊಂಡಾಗ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನ ಸ್ಥಾಪಕ ಅಧ್ಯಕ್ಷ ವಿಜಯ್ ತನ್ನ ಅಭಿಮಾನಿಗಳ ಸಾವಿನಿಂದಾಗಿ ಈ ಬಾರಿ ಯಾರೂ ಸಹಾ ದೀಪಾವಳಿ ಹಬ್ಬವನ್ನು ಆಚರಿಸಬೇಡಿ ಎಂದು ಆಜ್ಞಾಪಿಸಿದ್ದವರು ಕೇವಲ 8 ವಾರಗಳಲ್ಲಿ 2025ರ ಡಿಸೆಂಬರ್ ನಲ್ಲಿ ಕನ್ಯಾಕುಮಾರಿಯಲ್ಲಿ ಪ್ರತೀವರ್ಷವೂ ನಡೆಯುವ ಅದ್ದೂರಿಯ ಕ್ರಿಸ್‌ಮಸ್ ಹಬ್ಬದಲ್ಲಿ ಪಾಲ್ಗೋಳ್ಳುವ ಮೂಲಕ ತನ್ನ ಹಿಂದೂ ವಿರೋಧಿ ಮನಸ್ಥಿತಿಯನ್ನು ಬಹಿರಂಗ ಪಡಿಸಿರುವುದು ಹೇಯಕರ ಎನಿಸುತ್ತದೆ.
ಇದೇ ರೀತಿಯಾಗಿ ಸಿಖ್ಖರೇ ಪ್ರಾಭಲ್ಯವಿರುವ ಪಂಜಾಬಿನಲ್ಲಿಯೂ ಸಹಾ ಕ್ರಿಶ್ಚಿಯನ್ ಮತಾಂತರ ಎಗ್ಗಿಲ್ಲದೇ ನಡೆಯುತ್ತಿದ್ದು, ಪಂಜಾಬಿನ ಮಾಜಿ ಮುಖ್ಮಮಂತ್ರಿ ಮತ್ತು ಪ್ರಸ್ತುತ ಕಾಂಗ್ರೇಸ್ ಸಾಂಸದ ಚರಣ್‌ಜಿತ್ ಸಿಂಗ್ ಚನ್ನಿ ಮೂಲತಃ ರಾಮದಾಸಿಯಾ ಸಿಖ್ ದಲಿತ ಸಮುದಾಯಕ್ಕೆ ಸೇರಿದವರಾದರೂ ಆತ ಸಹಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬ ವಿಷಯವು ಸಾರ್ವಜನಿಕವಾಗಿ ಕೇಳಿಬರುತ್ತಿದೆ.
ಈ ದೇಶದಲ್ಲಿ ಸರ್ವರಿಗೂ ಸಮ ಪಾಲು, ಸರ್ವರಿಗೂ ಸಮ ಬಾಳುವ ಹಕ್ಕು ಇದ್ದರೂ, ಬಲವಂತವಾಗಿ ವಿವಿಧ ಆಮಿಷಗಳ ಮೂಲಕವೂ, ಇಲ್ಲವೇ ಕ್ರಿಶ್ಚಿಯನ್ ಹಬ್ಬ ಹರಿದಿನಗಳಾದ ಗುಡ್ ಫ್ರೈಡೇ, ಹ್ಯಾಲೋವಿನ್ ಡೇ, ಕ್ರಿಸ್ಮಸ್, ನ್ಯೂ ಇಯರ್ ಎನ್ನುವ ನೆಪದಲ್ಲಿ ಪರೋಕ್ಷವಾಗಿ ಹಿಂದೂಗಳನ್ನು ಕ್ರಿಶ್ಚಿಯನ್ ಸಂಸ್ಕೃತಿಗೆ ಪರಿವರ್ತಿಸುತ್ತಿರುವುದು ನಿಜಕ್ಕೂ ಕೆಟ್ಟ ಸಂಪ್ರದಾಯವಾಗಿದ್ದು, ಧರ್ಮೋ ರಕ್ಷತಿ ರಕ್ಷಿತಃ ಎನ್ನುವಂತೆ ನಮ್ಮ ದೇಶದಲ್ಲಿ ಎಲ್ಲಿಯವರೆಗೂ ಹಿಂದೂಗಳು ಬಹುಸಂಖ್ಯಾತರಾಗಿರುತ್ತಾರೋ ಅಲ್ಲಿಯವರೆಗೆ ಅನ್ಯಧರ್ಮೀಯರಿಗೂ ಸಮಾನ ಅವಕಾಶವಿರುತ್ತದೆ. ಅಪ್ಪಿ ತಪ್ಪಿ ಹಿಂದೂಗಳು ಮತಾಂತರವಾದಲ್ಲಿ ನಿಸ್ಸಂದೇಹವಾಗಿ ನಮ್ಮ ದೇಶ ಮತ್ತೆ ಹತ್ತಾರು ಭಾಗಗಳಾಗಿ ಛಿದ್ರ ಛಿದ್ರವಾಗುವುದರಲ್ಲಿ ಅನುಮಾನವೇ ಇಲ್ಲದ ಕಾರಣ, ದಯವಿಟ್ಟು ಅನ್ಯ ಧರ್ಮದ ರೀತಿ ರಿವಾಜುಗಳನ್ನು ಆನುಸರಿಸುವುದು ಪ್ರತಿಷ್ಟೆಯ ಸಂಕೇತ ಎಂದು ಭಾವಿಸಿ ಅದನ್ನು ಅಚರಿಸುವುದನ್ನು ನಿಲ್ಲಿಸುವ ಮೂಲಕ ಭಾರತದ ಐಕ್ಯತೆ ಮತ್ತು ಅಖಂಡತೆಗೆ ಅಳಿಲು ಸೇವೆ ಸಲ್ಲಿಸುವುದು ಉತ್ತಮ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ