ಸುಮಾರು 500 ವರ್ಷಗಳ ಸುದೀರ್ಘ ಹೋರಾಟದ ಬಳಿಕ 2024ರ ಜನವರಿ 23ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಭವ್ಯವಾದ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆ ಆದಾಗ ವಿಶ್ವಾದ್ಯಂತ ಇರುವ ಸಕಲ ಹಿಂದೂಗಳಿಗೆ ಅದ್ಯಾವುದೋ ಮಹತ್ಕಾರ್ಯವನ್ನು ಸಾಧಿಸಿದ ನೆಮ್ಮದಿ. ಇನ್ನು ಕರ್ನಾಟಕಕ್ಕೂ ಮತ್ತು ರಾಮನಿಗೂ ತ್ರೇತಾಯುಗದಿಂದಲೂ ಅವಿನಾಭಾವ ಸಂಬಂಧ. ರಾಮನ ಪ್ರಾಣ ಭಂಟ ಹನುಮಂತ ನಮ್ಮ ಕರ್ನಾಟಕದ ಹಂಪೆಯ ಬಳಿಯ ಅಂಜನಾದ್ರಿ ಬೆಟ್ಟದವನು ಎಂದೇ ವಾಲ್ಮೀಕಿ ಮೂಲ ರಾಮಾಯಣದಲ್ಲಿ ಉಲ್ಲೇಖಿಸಲಾಗಿದ್ದರೆ, ವಿಶ್ವಹಿಂದೂ ಪರಿಷದ್ ಆಶ್ರಯದಲ್ಲಿ ನಿರ್ಮಿಸಲಾದ ಅಯೋಧ್ಯೆಯ ರಾಮ ಮಂದಿರದ ಸಂಪೂರ್ಣ ಮೇಲುಸ್ತುವಾರಿಯ ಜವಾಬ್ಧಾರಿಯು ಬೆಂಗಳೂರು ಮೂಲದ ವಿಎಚ್‌ಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಗಳಾದ ಶ್ರೀ ಗೋಪಾಲ್ ನಾಗರಕಟ್ಟೆ ಎಲ್ಲರ ಪ್ರೀತಿಯ ಗೋಪಾಲ್ ಜೀ ಅವರದ್ದಾಗಿತ್ತು,
ಇನ್ನು ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡುವ ಮೂರ್ತಿಯನ್ನು ನಿರ್ಮಿಸಲು ನಿಯೋಜಿಸಲಾದ ಮೂರು ಶಿಲ್ಪಿಗಳಾದ ಅರುಣ್ ಯೋಗಿರಾಜ್, ಗಣೇಶ್ ಭಟ್ ಮತ್ತು ಸತ್ಯನಾರಾಯಣ ಪಾಂಡೆ ಅವರುಗಳಲ್ಲಿ ಮೊದಲ ಇಬ್ಬರು ಶಿಲ್ಪಿಗಳು ಕರ್ನಾಟಕದವರಾಗಿದ್ದು ಮೂರನೆಯವರು ರಾಜಸ್ಥಾನದ ಜೈಪುರದ ಶಿಲ್ಪಿಗಳಾಗಿದ್ದರು. ಇನ್ನು ಅಯೋಧ್ಯೆಯಲ್ಲಿ ಮೂರ್ತಿಯನ್ನು ನಿರ್ಮಿಸಲು ಬಳಸಲಾದ ಶಿಲೆಯೂ ಸಹಾ ಕರ್ನಾಟಕದ ಮೈಸೂರಿನ ಹತ್ತಿರದ ಹೆಗ್ಗಡದೇವನ ಕೋಟೆ ಬಳಿಯ ಹಾರೋಹಳ್ಳಿಯದ್ದಾಗಿದ್ದು ಅಂತಿಮವಾಗಿ ಮೈಸೂರಿನ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರು ನಿರ್ಮಿಸಿದ ಕೃಷ್ಣ ಶಿಲೆಯ ಬಾಲ ರಾಮನ ವಿಗ್ರಹವನ್ನೇ ಅಂತಿಮವಾಗಿ ಅಯೋಧ್ಯೆಯ ಗರ್ಭಗುಡಿಯಲ್ಲಿ ಕರ್ನಾಟಕದ ಉಡುಪಿಯ ಪೇಜಾವರ ಮಠದ ಯತಿಗಳು ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ 15 ಸದಸ್ಯರಲ್ಲಿ ಒಬ್ಬರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಮತ್ತು ಉಡುಪಿಯಿಂದಲೇ ಹೋಗಿದ್ದ ಋತ್ವಿಕರಿಂದಲೇ ಪ್ರತಿಷ್ಠಾಪನೆ ಮಾಡಲಾಗಿತ್ತು.
ಡಿಸೆಂಬರ್ 29ರಿಂದ 2026ರ ಜನವರಿ 2ರವರೆಗೆ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಯ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಆಚರಿಸಲಾಗುತ್ತಿರುವ ಸಂಧರ್ಭದಲ್ಲಿ ಅಯೋಧ್ಯೆ ರಾಮ ಮಂದಿರದಲ್ಲಿ ಚಿನ್ನ ಮತ್ತು ವಜ್ರಖಚಿತವಾದ ಪಚ್ಚೆಗಳು, ನೀಲಮಣಿಗಳು ಮತ್ತು ಚಿನ್ನದಿಂದ ಅಲಂಕರಿಸಲ್ಪ ಸುಮಾರು 30 ಕೋಟಿ ಮೌಲ್ಯದ 10 ಅಡಿ ಎತ್ತರ ಮತ್ತು 8 ಅಡಿ ಅಗಲದ 800 ಕಿಲೋಗ್ರಾಂ ತೂಕ ಹೊಂದಿರುವ ಈ ಭವ್ಯ ವಿಗ್ರಹವು ಅಯೋಧ್ಯೆಯಲ್ಲಿ ಅನಾವರಣಗೊಳ್ಳಲಿದ್ದು ಈ ವಿಗ್ರಹವನ್ನೂ ಸಹಾ ಮೂಲತಃ ಕರ್ನಾಟಕದದ ಹಾಸನ ಜಿಲ್ಲೆಯ ಅರಕಲಗೂಡು ಗ್ರಾಮದವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿರುವ ಕಲಾವಿದೆ ಶ್ರೀಮತಿ ಜಯಶ್ರೀ ಫಣೀಶ್ ಅವರು ತಂಜಾವೂರು ಶೈಲಿಯ ಶ್ರೀರಾಮ ಕಲಾಕೃತಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಕರ್ನಾಟಕ ಮತ್ತು ರಾಮ ಮಂದಿರದ ಅನಿವಾಭಾವ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಈ ಸುಂದರವಾದ ಪ್ರತಿಮೆ ಕೇವಲ ಕಲಾಕೃತಿಯಾಗಿರದೆ, ಇದು ಅತ್ಯಂತ ಮೌಲ್ಯಯುತ ಸಾಂಸ್ಕೃತಿಕ ಪಾರಂಪರಿಕ ಮೌಲ್ಯ ಆಸ್ತಿಯಾಗಿ ಗುರುತಿಸಲ್ಪಡುತ್ತದೆ ಎಂದರೂ ಅತಿಶಯವಾಗದು.
ಆರಂಭದಲ್ಲಿ ಕರ್ನಾಟಕದ ಅನಾಮಧೇಯ ಭಕ್ತರೊಬ್ಬರು ಈ ಭವ್ಯವಾದ ಪ್ರತಿಮೆಯನ್ನು ಇಂಡಿಯಾ ಪೋಸ್ಟ್ ಮೂಲಕ ಅಯೋಧ್ಯೆಗೆ ಕಳುಹಿಸಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧಿಕಾರಿಗಳು ಹೇಳಿದ್ದರಾದರೂ, ದಾನಿಯ ಗುರುತನ್ನು ಹೆಚ್ಚು ದಿನ ಗುಟ್ಟಾಗಿ ಇಟ್ಟುಕೊಳ್ಳಲಾಗದೇ, ಶ್ರೀಮತಿ ಜಯಶ್ರೀ ಫಣೀಶ್ ಅವರ ಹೆಸರನ್ನು ಬಹಿರಂಗಪಡಿಸಲಾಗಿದೆ. ಈ ವಿಗ್ರಹವನ್ನು ತಂಜಾವೂರಿನ ನುರಿತ ಕುಶಲಕರ್ಮಿಗಳು ಸಾಂಪ್ರದಾಯಿಕ ದಕ್ಷಿಣ ಭಾರತದ ಶಿಲ್ಪಕಲೆ ತಂತ್ರಗಳನ್ನು ಬಳಸಿ ರಚಿಸಿದ್ದಾರೆ.ಇದರ ತೂಕ ಸುಮಾರು ಎಂಟು ಕ್ವಿಂಟಾಲ್ ಎಂದು ಅಂದಾಜಿಸಲಾಗಿದೆ, ಆದರೆ ತಜ್ಞರು ನಿಖರವಾದ ಲೋಹದ ಸಂಯೋಜನೆಯನ್ನು ದೃಢೀಕರಿಸುತ್ತಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಡಾ. ಅನಿಲ್ ಮಿಶ್ರಾ ಅವರು ಈ ವಿಗ್ರಹದ ಕುರಿತಾಗಿ ಮಾತನಾಡಿ, ಈ ವಿಗ್ರಹವು ಭಕ್ತರಿಗೆ ಹೊಸ ಭಕ್ತಿ ಕೇಂದ್ರವಾಗಲಿದೆ. ದೇಶಾದ್ಯಂತದ ಸಂತರು, ಧಾರ್ಮಿಕ ನಾಯಕರು ಮತ್ತು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಡಿಸೆಂಬರ್ 29-ಜನವರಿ 2ರಂದು ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ನಡುವೆ ಈ ಪ್ರತಿಮೆ ಅನಾವರಣಗೊಳ್ಳಲಿದ್ದು ಈ ಐತಿಹಾಸಿಕ ಕ್ಷಣಕ್ಕೆ ಲಕ್ಷಾಂತರ ಭಕ್ತಾದಿಗಳು ಸಾದು ಸಂತರುಗಳು ಸಾಕ್ಷಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀ ಬಾಲರಾಮನನ್ನು ಸ್ಥಾಪಿಸಬೇಕೆಂಬ ಬಲವಾದ ಸಂಕಲ್ಪ ಮಾಡಿದ ಜಯಶ್ರೀ ಅವರು, ಕಳೆದ 9 ತಿಂಗಳಿಂದ ಪ್ರತಿದಿನ ಸುಮಾರು 18 ಗಂಟೆಗಳ ಕಾಲ (ಒಟ್ಟು 2832 ಗಂಟೆಗಳು) ಶ್ರೀ ರಾಮನ ನಾಮ ಜಪಿಸುತ್ತಾ ಈ ವಿಗ್ರಹ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಚಿನ್ನ, ವಜ್ರ, ವೈಡೂರ್ಯ ಹಾಗೂ ನವರತ್ನಗಳನ್ನು ಬಳಸಿ ಅತ್ಯಂತ ಕಲಾತ್ಮಕವಾಗಿ ಈ ಮೂರ್ತಿಯನ್ನು ಸಿದ್ಧಪಡಿಸಲಾಗಿದೆ. 6 ಅಡಿ ಎತ್ತರದ ಈ ಸುಂದರ ವಿಗ್ರಹದ ಸುತ್ತಲೂ ಮಹಾವಿಷ್ಣುವಿನ ದಶಾವತಾರಗಳು ಹಾಗೂ ಕೆಳಭಾಗದಲ್ಲಿ ನವಗ್ರಹ ಮೂರ್ತಿಗಳನ್ನು ಕೆತ್ತಲಾಗಿದ್ದು, ನೋಡುಗರ ಹೃನ್ಮನಗಳನ್ನು ಖಂಡಿತವಾಗಿಯೂ ಸೆಳೆಯುತ್ತಿದೆ ಎಂದರೂ ತಪ್ಪಾಗದು. ಈ ಮಹತ್ಕಾರ್ಯಕ್ಕೆ ಜಯಶ್ರೀ ಅವರ ಪತಿ, ಖ್ಯಾತ ಮೂಳೆ ತಜ್ಞರಾದ ಡಾ. ಫಣೀಶ್ ಮತ್ತು ಖ್ಯಾತ ನೃತ್ಯಗಾತಿಯಾದ ಅವರು ಮಗಳು ಸಂಗೀತ ಮತ್ತು ಅಮೇರಿಕಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಶ್ರೇಯಸ್ ಅವರ ಬೆಂಬಲವೂ ಇದ್ದು ಪತ್ನಿ ಮತ್ತು ತಾಯಿಯ ಈ ಅಧ್ಯಾತ್ಮಿಕ ಸಾಧನೆಗೆ ಮಕ್ಕಳೂ ಸಹ ತಮ್ಮ ಕೈಲಾದ ಮಟ್ಟಿಗೆ ಸಹಾಯ ಹಸ್ತವನ್ನು ನೀಡಿರುವುದು ಶ್ಲಾಘನೀಯವಾಗಿದೆ.
ಅಯೋಧ್ಯೆಗೆ ಈ ಪ್ರತಿಮೆಯನ್ನು ಸಾಗಿರುವ ಮೊದಲು ಬೆಂಗಳೂರಿನ ಜಯಶ್ರೀ ಅವರ ನಿವಾಸದಲ್ಲಿ ಇರಿಸಲಾಗಿದ್ದ ಈ ಬಾಲರಾಮನ ಮೂರ್ತಿಯನ್ನು ವೀಕ್ಷಿಸಲು ರಾಜ್ಯದಾದ್ಯಂತ ಸುಮಾರು 33,000ಕ್ಕೂ ಹೆಚ್ಚು ಭಕ್ತರು ಆಗಮಿಸಿ ಪುನೀತರಾಗಿದ್ದು ಅವರುಗಳಲ್ಲಿ ಪಮುಖವಾಗಿ, ಉಡುಪಿಯ ಪೇಜಾವರ ಮಠದ ಶ್ರೀಗಳು ಭೇಟಿ ನೀಡಿ ಮೂರ್ತಿಯ ದರ್ಶನ ಪಡೆದು ದಂಪತಿಗಳನ್ನು ಆಶೀರ್ವದಿಸಿದ್ದಾರೆ. ಸಂಗೀತ ಸಾಮ್ರಾಟ್ ರುದ್ರಪಟ್ಟಣದ ಆರ್.ಕೆ. ಪದ್ಮನಾಭನ್ ಅವರು ಮೂರ್ತಿಯ ಮುಂದೆ ನಿಂತು ರಾಮ ನಾಮದ ಗೀತೆಗಳನ್ನು ಹಾಡಿ ಭಕ್ತಿ ಸಮರ್ಪಿಸಿದ್ದಾರೆ. ಇನ್ನು ಅರಕಲಗೂಡು ಶಾಸಕ ಎ. ಮಂಜು ಅವರರೂ ಸಹಾ ಭೇಟಿ ನೀಡಿ, ಜಯಶ್ರೀ ಅವರ ಭಕ್ತಿ ಹಾಗೂ ಕಲಾತ್ಮಕ ಶ್ರಮವನ್ನು ಕಂಡು ಆಶ್ಚರ್ಯಚಕಿತರಾಗಿ ತಮ್ಮೂರಿನ ಕೀರ್ತಿಯನ್ನು ಹೆಚ್ಚಿಸಿದ ಆ ದಂಪತಿಗಳನ್ನು ಸನ್ಮಾನಿಸಿದ್ದಾರೆ.
2025ರ ಡಿಸೆಂಬರ್ 29ನೇ ತಾರೀಕಿನಂದು ಅಯೋಧ್ಯೆಯ ಶ್ರೀ ಬಾಲರಾಮ ಮಂದಿರದ ಸಂತ ತುಳಸಿದಾಸ ದೇವಾಲಯದ ಬಳಿಯ ಅಂಗದ್ ಟೀಲಾದಲ್ಲಿ ಈ ಮೂರ್ತಿಯ ಅನಾವರಣಗೊಳ್ಳಲಿರುವ ಈ ಐತಿಹಾಸಿಕ ಕ್ಷಣದಲ್ಲಿ ಜಯಶ್ರೀ ಅವರ ಪುತ್ರಿ ಸಂಗೀತ ಅವರು ತಮ್ಮ ನಾಟ್ಯದ ಮೂಲಕ ಭಗವಂತನಿಗೆ ಸೇವೆಯನ್ನು ಸಲ್ಲಿಸುತ್ತಲಿರುವುದು ಆಭಿನಂದನಾರ್ಹವಾಗಿದೆ.
ಬೆಂಗಳೂರಿನಿಂದ ಸುಮಾರು 1,900 ಕಿ.ಮೀ ದೂರದ ಅಯೊಧ್ಯೆಗೆ ಈ ಅತ್ಯಂತ ಸೂಕ್ಷ್ಮ ಹಾಗೂ ಭಾರವಾದ ಈ ಕಲಾಕೃತಿಯನ್ನು ಸಾಗಿಸುವ ಹೊಣೆಗಾರಿಕೆಯನ್ನು ಅಂಚೆ ಇಲಾಖೆಯ ಲಾಜಿಸ್ಟಿಕ್ಸ್ ಪೋಸ್ಟ್ ಸೇವೆಯವರಿಗೆ ವಹಿಸಲಾಗಿತ್ತು. ವಿಶೇಷವಾದ ಮರದ ಕ್ರೇಟ್‌ನಲ್ಲಿ ಬಹು-ಪದರಗಳ ರಕ್ಷಣೆ ನೀಡಿ ಪ್ಯಾಕ್ ಮಾಡಲಾಗಿದ್ದ ಈ ಪ್ರತಿಮೆ ಡಿಸೆಂಬರ್ 17ರಂದು ಬೆಂಗಳೂರಿನಿಂದ ಹೊರಟು ಡಿಸೆಂಬರ್ 22ರಂದು ಅಯೋಧ್ಯೆ ತಲುಪುವ ಮಾರ್ಗದ ಉದ್ದಕ್ಕೂ ಇಲಾಖಾ ಅಧಿಕಾರಿಗಳು ವಾಹನಕ್ಕೆ ಬೆಂಗಾವಲು ನೀಡಿದ್ದು, ಕ್ರೇನ್ ಬಳಸಿ ಅತ್ಯಂತ ಎಚ್ಚರಿಕೆಯಿಂದ ಲೋಡ್ ಹಾಗೂ ಅನ್-ಲೋಡ್ ಮಾಡಲಾಗಿದೆ..
ಜಯಶ್ರೀ ಮತ್ತು ಫಣೀಶ್ ದಂಪತಿಗಳು ಈ ವಿಗ್ರಹವಷ್ಟೇ ಅಲ್ಲದೇ, ಕಳೆದ ಒಂದು ದಶಕದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ, ಸುಮಾರು 10ಕ್ಕೂ ಹೆಚ್ಚು ಕಲಾಕೃತಿಗಳನ್ನು ವಿವಿಧ ದೇವಾಲಯಗಳಿಗೆ ದಾನ ಮಾಡುವ ಮೂಲಕ ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೊ, ಹರಿಯ ಕರುಣದಲಾದ ಭಾಗ್ಯವ ಹರಿಸಮರ್ಪಣೆ ಮಾಡಿ ಬದುಕಿರೊ ಸಿರಿಪುರಂದರವಿಠಲರಾಯನ · ಚರಣಕಮಲದ ನಂಬಿ ಬದುಕಿರೋ ಎನ್ನುವ ಪುರಂದರ ದಾಸರ ವಾಣಿಯಂತೆ ತಾವುಗಳಿಸಿದ ಸಂಪತ್ತನ್ನು ಸಮಾಜಕ್ಕೇ ಕೊಡುಗೆಯಾಗಿ ನೀಡುತ್ತಿರುವುದು ಬಹಳ ಅದ್ಭುತ ಮತ್ತು ಅನನ್ಯವಾಗಿದ್ದು ಪ್ರಭು ಶ್ರೀರಾಮನ ಆಶೀರ್ವಾದದಿಂದ ಅವರ ಕುಟುಂಬಕ್ಕೆ ಮತ್ತಷ್ಟು ಆಯುರಾರೋಗ್ಯದ ಜೊತೆಗೆ ಸಕಲೈಶ್ವರ್ಯಗಳು ಲಭಿಸಿ, ತನ್ಮೂಲಕ ಮತ್ತಷ್ಟು ಸಮಾಜಮುಖಿ ಸೇವೆಗಳನ್ನು ಮಾಡುವಂತಾಗಲಿ ಎಂದು ನಾವೂ ನೀವೂ ಹಾರೈಸುವುದರ ಜೊತೆಗೆ ಈ ರೀತಿಯ ಅವರ ಸಮಾಜ ಸೇವೆ ಮತ್ತಷ್ಟು ಮಗದಷ್ಟು ಹಿಂದೂಗಳಿಗೆ ಪ್ರೇರಣೆಯಾಗಿ ನಮ್ಮ ಸನಾತನ ಸಂಸ್ಕೃತಿ ಉತ್ತುಂಗಕ್ಕೇರಲಿ ಎಂದು ಆಶಿಸೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ