ಗೆಲ್ಲುವಾಗ ನೆನಪಾಗದ ಧರ್ಮ, ಸೋತಾಗ ಏಕೇ?

ಅದು 1987ನೇ ಇಸವಿ ಕನ್ನಡ ಚಲನಚಿತ್ರರಂಗದಲ್ಲಿ ಅಪರೂಪದ ಇತಿಹಾಸ ಬರೆದ ದ್ವಾರಕೀಶ್ ನಿರ್ಮಾಣದ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಅವರ ಚೊಚ್ಚಲ ಅಭಿನಯದ ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿಮಾಕ್ಕೆ ಅಧಿಕೃತವಾಗಿ ಸಂಗೀತ ನಿರ್ದೇಶಕರಾಗಿ ವಿಜಯಾನಂದ್  ಅವರಾಗಿದ್ದರೂ ಅವರ ಹಿಂದಿನ ಶಕ್ತಿಯಾಗಿ 20ರ ಹರೆಯದ ತರುಣ ದಿಲೀಪ್ ಇದ್ದದ್ದನ್ನು ಗಮನಿಸಿದ್ದ ದ್ವಾರಕೀಶ್ ಅವರು ತಮ್ಮ ಮುಂದಿನ ಚಿತ್ರದಲ್ಲಿ  ಆ ಹುಡುಗನನ್ನು ಸ್ವತಂತ್ರ ಸಂಗೀತ ನಿರ್ದೇಶಕನನ್ನಾಗಿ ಮಾಡುತ್ತೇನೆ ಎಂದು ಹೇಳಿದ್ದರು.

ವಿದ್ವಾನ್ ಸರ್ವತ್ರ ಪೂಜ್ಯತೆ ಎನ್ನುವಂತೆ, 1992ರಲ್ಲಿ  ಖ್ಯಾತ ನಿರ್ದೇಶಕ ಮಣಿರತ್ನಂ ಅವರ ರೋಜಾ ತಮಿಳು ಚಲನಚಿತ್ರದ ಮೂಲಕ ಅದೇ ಯುವಕ ದಿಲೀಪ್, ಎ.ಆರ್. ರೆಹಮಾನ್ (ಮುಸಲ್ಮಾನರಾಗಿ ಮತಾಂತರವಾಗಿ) ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ವೃತ್ತಿಜೀವನವನ್ನು ಆರಂಭಿಸಿದ ನಂತರ ಮುಂದಿನ ಮೂರು ದಶಕಗಳ ಕಾಲ ಕೇವಲ ದಕ್ಷಿಣ ಭಾರತವಷ್ಟೆ ಅಲ್ಲದೇ, ಬಾಲಿವುಡ್ ಹಾಲಿವುಡ್ ಎತ್ತರಕ್ಕೇರಿದ್ದಲ್ಲದೇ, 2009 ರಲ್ಲಿ 81 ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳಲ್ಲಿ ಸ್ಲಂಡಾಗ್ ಮಿಲಿಯನೇರ್ ಚಿತ್ರದ   ಅತ್ಯುತ್ತಮ ಮೂಲ ಸಂಗೀತ ಮತ್ತು ಅತ್ಯುತ್ತಮ ಮೂಲ ಗೀತೆ (ಜೈ ಹೋ)  ಪ್ರಶಸ್ತಿಗಳನ್ನು ಪಡೆದರು. ಅವರು ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೀತರಚನೆಕಾರ ಗುಲ್ಜಾರ್ ಅವರೊಂದಿಗೆ ಹಂಚಿಕೊಳ್ಳುವ ಮೂಲಕ  ಭಾರತೀಯ ಚಿತ್ರರಂಗಕ್ಕೆ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದಾರೆ.

ಹೀಗೆ ಸುಮಾರು ಮೂರು ದಶಕಗಳ ಕಾಲ ಭಾರತೀಯ ಚಲನಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ಅನಭಿಶಕ್ತ ದೊರೆಯಾಗಿ ಮೆರೆದ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಇತ್ತೀಚಿಗೆ ಏಷ್ಯನ್ ನೆಟ್‌ವರ್ಕ್‌ಗೆ ನೀಡಿದ  ಸಂದರ್ಶನವೊಂದರಲ್ಲಿ ಹಿಂದಿ ಚಿತ್ರರಂಗದ ಬಾಲಿವುಡ್ ಆಂತರಿಕ ರಾಜಕಿಯ ಮತ್ತು ಬದಲಾಗಿರುವ ಕಾರ್ಯ ವೈಖರಿಯ ಬಗ್ಗೆ ನೀಡಿರುವ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಳೆದ ಎಂಟು ವರ್ಷಗಳಿಂದ ಬಾಲಿವುಡ್ ನಲ್ಲಿ  ಸೃಜನ ಶೀಲತೆ ಇಲ್ಲದವರ ಕೈಗೆ ಅಧಿಕಾರ ಸಿಕ್ಕಿದಂತಾಗಿದ್ದು, ತಾವು ಮುಸ್ಲಿಂ ಎಂಬ ಕಾರಣಕ್ಕಾಗಿ ತಮಗೆ ಕೆಲಸ ಸಿಗುತ್ತಿಲ್ಲಾ ಎಂಬ ವಿಷಯ ತನಗೆ ನೇರವಾಗಿ ಅನುಭವಕ್ಕೆ ಬಾರದಿದ್ದರೂ, ಪರೋಕ್ಷವಾಗಿ ಅರಿವಿಗೆ ಬರುತ್ತಿದೆ ಎಂಬ ಆಘಾತಕಾರಿ ಹೇಳಿಕೆ ಪ್ರಪಂಚಾದ್ಯಂತ ಸಂಚಲನ ಮೂಡಿಸಿದೆ.

ಹಿಂದಿ ಚಿತ್ರರಂಗದಲ್ಲಿ ಆಗುತ್ತಿರುವ ಈ ಬದಲಾವಣೆಯ ಹಿಂದೆ ಕೋಮು ವಿಚಾರಗಳು ಇರಬಹುದು ಎಂಬ ಮಾತುಗಳು ತಮ್ಮ ಕಿವಿಗೆ ಪರೋಕ್ಷವಾಗಿ ಬಿದ್ದಿವೆ. ತಮಗೆ ಬರಬೇಕಿದ್ದ ಅವಕಾಶಗಳನ್ನು ಬೇರೆ ಸಂಗಿತ ನಿರ್ದೇಶಕರಿಗೆ ನೀಡಲಾಗುತ್ತಿದೆ ಎಂಬ ವಿಷಯವು ಚೈನೀಸ್ ವಿಸ್ಪರ್ಸ್ ಮಾದರಿಯಲ್ಲಿ ತನಗೆ ತಲುಪುತ್ತಿದೆ. ಅನೇಕ ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ತಮಗೆ ಅವಕಾಶ ನೀಡಲು ಮುಂದಾದರೂ, ಸಂಗೀತ  ಕಂಪನಿಗಳು ಅನಗತ್ಯ  ಮಧ್ಯ ಪ್ರವೇಶದಿಂದಾಗಿ ತಮಗೆ ಸಿಗಬೇಕಿದ್ದ ಕೆಲಸ ಬೇರೆ ಸಂಗಿತಗಾರರ ಪಾಲಾಗುತ್ತಿದ್ದರೂ, ತಾನು ಕೆಲಸಕ್ಕಾಗಿ ಹಾತೊರೆಯುತ್ತಾ ಯಾರ ಹಿಂದೆ ಹೋಗುವುದಿಲ್ಲ. ತನ್ನ ಕೆಲಸದ ಮೇಲಿನ ಪ್ರಾಮಾಣಿಕತೆ ತನಗೆ ಅವಕಾಶಗಳನ್ನು ತಂದುಕೊಡುತ್ತದೆ ಎಂಬ ನಿಲುವನ್ನು ಹೊಂದಿರುವುದಾಗಿ ಹೇಳಿದ್ದಾರೆ,

ಹಾಗೆ ನೋಡಿದರೆ ಸಂಗೀತ ಹಿನ್ನಲೆಯ  ವೆಲ್ಲಲರ್  ಕುಟುಂಬದಿಂದ  ಆರ್‌. ಕೆ. ಶೇಖರ್ ಮತ್ತು ಕಸ್ತೂರಿ ದಂಪತಿಗಳಿಗೆ  ಜನವರಿ 6, 1967 ರಂದು ತಮಿಳುನಾಡಿನ ಮದ್ರಾಸ್‌ನಲ್ಲಿ  ಜನಿಸಿದ ದಿಲೀಪ್ ಕುಮಾರ್ ರಾಜಗೋಪಾಲ ಬಾಲ್ಯದಲ್ಲೇ ತನ್ನ ಅಸಾಧಾರಣ ಸಂಗೀತ ಪ್ರತಿಭೆಯಿಂದ ಎಲ್ಲರ ಗಮನವನ್ನು ಸೆಳೆದಿದ್ದ. ತನ್ನ ನಾಲ್ಕನೇ ವಯಸ್ಸಿನಲ್ಲಿ ಪಿಯಾನೋ ಕಲಿಯಲು ಪ್ರಾರಂಭಿಸಿದ ದಿಲೀಪ್ ಮಲಯಾಳಂ ಚಲನಚಿತ್ರಗಳಿಗೆ ಸಂಗೀತ ಸಂಯೋಜಕ ಮತ್ತು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ತನ್ನ ತಂದೆಗೆ ಸ್ಟುಡಿಯೋದಲ್ಲಿ ಕೀಬೋರ್ಡ್ ನುಡಿಸಲು ಸಹಾಯ ಮಾಡುತ್ತಲೇ ಪದ್ಮ ಶೇಷಾದ್ರಿ ಬಾಲ ಭವನದಲ್ಲಿ ಓದುತ್ತಿದ್ದ. ಆತನಿಗೆ 9 ವರ್ಷ ವಯಸ್ಸಿರುವಾಗ ದುರಾದೃಷ್ಟವಷಾತ್ ಅತನ ತಂದೆ ಹಠಾತ್ತಾಗಿ ನಿಧನರಾದಾಗ, ತನ್ನ ತಂದೆಯ ಸಂಗೀತ ಉಪಕರಣಗಳ ಬಾಡಿಗೆಯ ಮೂಲಕ ಕುಟುಂಬದ ಆದಾಯವನ್ನು ನಿಭಾಯಿಸುತ್ತಿದ್ದಲ್ಲದೇ, ಸಣ್ಣ ವಯಸ್ಸಿನಲ್ಲಿಯೇ ಅನಿವಾರ್ಯವಾಗಿ ಕುಟುಂಬದ ಜವಾಬ್ಧಾರಿಯನ್ನು ಹೊರುವ ಸಲುವಾಗಿ ತನ್ನ 11 ನೇ ವಯಸ್ಸಿನಲ್ಲಿ ತಮ್ಮ ತಂದೆಯ ಆಪ್ತ ಸ್ನೇಹಿತ ಮತ್ತು ಮಲಯಾಳಂ ಚಿತ್ರರಂಗದ ಗೀತೆಗಳ ಸಂಯೋಜಕ ಎಂ.ಕೆ. ಅರ್ಜುನನ್ ಅವರ ಆರ್ಕೆಸ್ಟ್ರಾದಲ್ಲಿ ಕೀಬೋರ್ಡ್ ನುಡಿಸುತ್ತಿದ್ದ ಕಾರಣ ಸರಿಯಾಗಿ ಶಾಲೆಗೆ ಹೋಗಲಾರದೇ, ನಂತರದ ದಿನಗಳಲ್ಲಿ  ವಿವಿಧ ಶಾಲೆಗಳನ್ನು ಬದಲಿಸುತ್ತಲೇ,  ನಂತರ ತನ್ನ ಬಾಲ್ಯ ಸ್ನೇಹಿತರಾದ  ತಾಳವಾದ್ಯಗಾರ ಶಿವಮಣಿ , ಸುರೇಶ್ ಪೀಟರ್ಸ್ ಮತ್ತು ಜಾನ್ ಆಂಥೋನಿ, ಜೊಜೊ ಮತ್ತು ರಾಜಾ ಅವರೊಂದಿಗೆ ಪ್ರೌಢಶಾಲಾ ವಿದ್ಯಾರ್ಥಿಯಾಗಿರುವಾಗಲೇ ನೆಮೆಸಿಸ್ ಅವೆನ್ಯೂ ಎಂಬ ಬ್ಯಾಂಡ್ ಅನ್ನು ರಚಿಸಿಕೊಂಡು ಖ್ಯಾತರಾಗುತ್ತಿದ್ದಂತೆಯೇ, ತನ್ನ ತಾಯಿಯೊಂದಿಗೆ ಚರ್ಚಿಸಿ ಶಾಲೆಯನ್ನು ತೊರೆದು ಪೂರ್ಣ ಪ್ರಮಾಣದಲ್ಲಿ ಸಂಗೀತಗಾರರಾಗಿ ವೃತ್ತಿ ಜೀವನವನ್ನು ಮುಂದುವರಿಸಿಸುತ್ತಾ  ಕೀಬೋರ್ಡ್, ಪಿಯಾನೋ, ಸಿಂಥಸೈಜರ್, ಹಾರ್ಮೋನಿಯಂ ಮತ್ತು ಗಿಟಾರ್ ಗಳನ್ನು ಕರಗತ ಮಾಡಿಕೊಂಡು ಆಗಿನ ಕಾಲದ ಖ್ಯಾತ  ಸಂಗೀತ ನಿರ್ದೇಶಕರಾದ ಎಂ.ಎಸ್ . ವಿಶ್ವನಾಥನ್ , ವಿಜಯ ಭಾಸ್ಕರ್, ಇಳಯರಾಜ, ರಮೇಶ್ ನಾಯ್ಡು, ವಿಜಯ್ ಆನಂದ್, ಹಂಸಲೇಖ, ರಾಜ್–ಕೋಟಿ ಮುಂತಾದವರೊಂದಿಗೆ ಚಿತ್ರ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ, ಜಾಕಿರ್ ಹುಸೇನ್ , ಕುನ್ನಕುಡಿ ವೈದ್ಯನಾಥನ್ ಮತ್ತು ಎಲ್. ಶಂಕರ್ ಅವರಂತಹ ಸಂಗೀತ ದಿಗ್ಗಜರೊಂದಿಗೆ ಸಂಗೀತ ಕಾರ್ಯಕ್ರಮಗಳ ಭಾಗವಾಗಿ ವಿಶ್ವಾದ್ಯಂತ ಪ್ರವಾಸಗಳಲ್ಲಿ  ತೊಡಗಿಸಿಕೊಂಡಿದ್ದ.

ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ 1984 ರಲ್ಲಿ ಅವರ ತಂಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಯಾವುದೇ ವೈದ್ಯಕೀಯ ಚಿಕಿತ್ಸೆಯಿಂದ ಆಕೆ ಚೇತರಿಸಿಕೊಳ್ಳದೇ ಹೋದಾಗ, ಅನಿವಾರ್ಯವಾಗಿ ಅವರ ತಾಯಿ ತನ್ನ ಮಗಳ  ಅರೋಗ್ಯಕ್ಕಾಗಿ ದೇವರ ಮೊರೆ ಹೊತ್ತು, ಕಂಡ ಕಂಡ ದೇವರುಗಳಿಗೆ ಹರಕೆ ಹೊತ್ತಿದ್ದಲ್ಲದೆ, ವಿವಿಧ ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳನ್ನು ಎಡತಾಗುತ್ತಿದ್ದಂತಹ ಸಮಯದಲ್ಲಿಯೇ ಪೀರ್ ಸಾಹಿಬ್ ಎಂಬ  ಸೂಫಿ ಇಸ್ಲಾಂ ಸಂತನ ಸಂಪರ್ಕಕ್ಕೆ ಬಂದ ನಂತರ ಕಾಕತಾಳೀಯವೆಂಬಂತೆ ಅವರ ತಂಗಿಯ ಆನಾರೋಗ್ಯ ಸಂಪೂರ್ಣ ಗುಣವಾದ ಕಾರಣ,  ಆ ಸಂತರ ಸಲಹೆಯಂತೆ ದಿಲೀಪ್ 1989ರಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಇಸ್ಲಾಂಗೆ ಮತಾಂತರಗೊಂಡು ತನ್ನ ಹೆಸರನ್ನು ದಿಲೀಪ್ ಶೇಖರ್ ನಿಂದ ಅಲ್ಲಾ ರಖಾ ರೆಹಮಾನ್  (ಎ. ಆರ್. ರೆಹಮಾನ್) ಎಂದು ಬದಲಿಸಿಕೊಂಡಿದ್ದಲ್ಲದೇ, ಕಟ್ಟರ್ ಮುಸಲ್ಮಾನರ ರೀತಿಯಲ್ಲಿ ತನ್ನ ಎಲ್ಲಾ ಧಾರ್ಮಿಕ ಆಚರಣೆಗಳನ್ನು ಪಾಲಿಸುತ್ತಾ 1995 ಸೈರಾ ಬಾನು ಅವರನ್ನು ವಿವಾಹವಾಗಿ ಅವರ ದಾಂಪತ್ಯದ ಕುರುಹಾಗಿ  ಖತೀಜಾ ಮತ್ತು ರಹೀಮಾ ಎಂಬ ಹೆಣ್ಣುಮಕ್ಕಳು ಮತ್ತು ತಂದೆಯಂತೆ ಸಂಗೀತ ನಿರ್ದೇಶಕರಾಗಿರುವ  ಮಗ ಎ.ಆರ್. ಅಮೀನ್ ಇದ್ದಾರೆ.

ಹೀಗೆ  ವಯಕ್ತಿಕವಾಗಿ ಹಿಂದೂವಿನಿಂದ ಮುಸಲ್ಮಾನರಾಗಿ ಮತಾಂತರಗೊಂಡರೂ, ಅವರ ಸಂಗಿತ ವೃತ್ತಿ ಜೀವನದ ಸಹೋದ್ಯೋಗಿಗಳು ಯಾವುದೇ ವೆತ್ಯಾಸವಿಲ್ಲದೇ ಆತನನ್ನು ಮೊದಲಿನಂತೆಯೇ ಒಪ್ಪಿ ಅಪ್ಪಿಕೊಂಡ ಕಾರಣ, ಚೊಚ್ಚಲು ಚಿತ್ರ ರೋಜಾ ದಿಂದ ಆರಂಭವಾದ ಆತನ ಸಂಗೀತ ಪಯಣ ನಂತರ ಬಾಂಬೆ, ಕಾದಲನ್ , ತಿರುಡಾ ತಿರುಡಾ, ಜಂಟಲ್‌ಮ್ಯಾನ್ ನಂತರ ತಮಿಳು ಚಿತ್ರವಲ್ಲದೇ,  ದಿಲ್ ಸೇ, ತಾಲ್, ಲಗಾನ್, ಸ್ವದೇಶ್, ರಂಗ್ ದೇ ಬಸಂತಿ,ಗುರು,ಜೋಧಾ ಅಕ್ಬರ್,ರಾಕ್‌ಸ್ಟಾರ್,ಜಬ್ ತಕ್ ಹೈ ಜಾನ್ ನಂತಹ ಚಿತ್ರಗಳಿಗೆ ಸಂಗೀತ ನೀಡಿ ಅವೆಲ್ಲವೂ ಸೂಪರ್ ಡ್ಯೂಪರ್ ಹಿಟ್ ಆದ ಪರಿಣಾಮ,  ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಎರಡು ಅಕಾಡೆಮಿ ಪ್ರಶಸ್ತಿಗಳು, ಎರಡು ಗ್ರ್ಯಾಮಿ ಪ್ರಶಸ್ತಿಗಳು, ಒಂದು BAFTA ಪ್ರಶಸ್ತಿ, ಒಂದು ಗೋಲ್ಡನ್ ಗ್ಲೋಬ್ ಪ್ರಶಸ್ತಿ, ಆರು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಹದಿನೈದು ಫಿಲ್ಮ್‌ಫೇರ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಲ್ಲದೇ, 2010 ರಲ್ಲಿ ಭಾರತ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣವನ್ನು ಪಡೆದಾಗಲೂ ಆತನ ಧರ್ಮ ಅಡ್ಡಿಯಾಗಿರಲಿಲ್ಲ.

ಆಸ್ಕರ್ ವಿಜೇತರಾದ ಸಂಗೀತಗಾರ ಎ.ಆರ್.ರಹಮಾನ್ ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದರೂ, ತಾನು ಮುಸ್ಲಿಂ ಅಥವಾ ತಮಿಳಿಗ ಎಂಬ ಕಾರಣದಿಂದ ಕಳೆದ 8 ವರ್ಷಗಳಿಂದ ನನಗೆ ಬಾಲಿವುಡ್‌ನಲ್ಲಿ ಅವಕಾಶ ಸಿಗುತ್ತಿಲ್ಲ ಎಂಬ ಹೇಳಿಕೆಯ ಪರ ಮತ್ತು ವಿರೋಧದ ಚರ್ಚೆ ಈಗ ದೇಶಾದ್ಯಂತ ಆರಂಭವಾಗಿದೆ.  ರೆಹಮಾನ್ ಅವರ ಹೇಳಿಕೆಯನ್ನು ಅನೇಕರು ಟೀಕೆ ಮಾಡಿದ್ದಾರೆ. ಅವರ ಹೇಳಿಕೆ ಸರಿ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇತ್ತೀಚಿನ ದಿನಗಳಲ್ಲಿ ರೆಹಮಾನ್ ವಿದೇಶಿ ಕೆಲಸ ಕಾರ್ಯಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವುದರಿಂದ ತಮ್ಮ ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಲು ತೊಂದರೆ ಆಗಬಹುದು ಅಥವಾ  ಅವರು ದುಬಾರಿ ಎಂಬ ಕಾರಣದಿಂದಲೂ  ಅನೇಕ ನಿರ್ಮಾಪಕರು ಅವರನ್ನು ಸಂಪರ್ಕಿಸಲು ಹಿಂಜರಿಯುತ್ತಾರೆಯೇ ಹೊರತು  ಇದರಲ್ಲಿ ಕೋಮು ತಾರತಮ್ಯವಿಲ್ಲಾ ಎಂದು ಸ್ವತಃ ಮುಸಲ್ಮಾನರಾಗಿರುವ ಖ್ಯಾತ ನಟಿ ಶಬಾನ ಅಜ್ಮಿ ಅವರ ಪತಿ ಮತ್ತು ಗೀತ ರಚನೆಕಾರ ಜಾವೇದ ಅಕ್ತರ್ ಹೇಳಿದ್ದಾರೆ.

ಅದೇ ರೀತಿಯಾಗಿ  ಖ್ಯಾತ ಹಿನ್ನಲೆ  ಗಾಯಕಾ ಶಾನ್ ಹಿಂದಿ ಚಿತ್ರರಂಗವಷ್ಟೇ ಏಕೆ ಇಡೀ ಭಾರತದ ಸಂಗಿತ ಶೇತ್ರದಲ್ಲಿ ಯಾವುದೇ ಧರ್ಮ ಅಥವಾ ಜಾತಿಗೆ ಅವಕಾಶವಿಲ್ಲ. ಇಲ್ಲಿ ಕೇವಲ ಪ್ರತಿಭೆಗೆ ಮಾತ್ರ ಬೆಲೆ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲಸಾ ಸಿಗುತ್ತಿಲ್ಲಾ ಎಂಬ ಕಾರಣಕ್ಕೆ ಈ ರೀತಿಯ ಹೇಳಿಕೆ ಸರಿಯಲ್ಲ. ಕಳೆದ ಹಲವು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ತಮಗೂ ಸಹಾ ಕೆಲವೊಂದು ಸಮಯದಲ್ಲಿ ಅವಕಾಶಗಳು ಸಿಗುವುದಿಲ್ಲಾ. ಅಂತಹ ಸಮಯದಲ್ಲಿ ಅದನ್ನು ನಾನು ವೈಯಕ್ತಿಕವಾಗಿ ತೆಗದು ಕೊಳ್ಳುವುದಿಲ್ಲಾ. ಏಕೆಂದರೆ ಪ್ರತಿಯೊಬ್ಬ ನಿರ್ದೇಶಕರಿಗೂ ಮತ್ತು ಸಂಗೀತ ನಿರ್ದೇಶಕರಿಗೂ  ಅವರದ್ದೇ ಆದ  ಆದ್ಯತ್ತೆಗಳು ಇರುತ್ತವೆ.  ಅವರ ಚಿತ್ರಗಳಲ್ಲಿ ತಾವು ಸೂಕ್ತ ಎಂದು ಭಾವಿಸಿದಾಗ ಖಂಡಿತವಾಗಿಯೂ ಕೆಲಸ ಕೊಟ್ಟೇ ಕೊಡುತ್ತಾರೆ ಇದರಲ್ಲಿ ಯಾವುದೇ  ಕೋಮು ಭಾವನೆಯನ್ನು ತರುವುದು ಸರಿಯಲ್ಲ. ಒಂದು ವೇಳೆ ಧರ್ಮದ ಆಧಾರದ ಮೇಲೆ ಕೆಲಸ ಸಿಗುತ್ತಿದ್ದರೆ ಕಳಿದ ಮೂವತ್ತು ವರ್ಷಗಳಿಂದ ರೆಹಮಾನ್  ಏಕಮೇವ ಅದ್ವಿತೀಯನಾಗಿ ಬೆಳೆಯಲು ಹೇಗೆ ಸಾದ್ಯವಾಗುತ್ತಿತ್ತು? ಪ್ರಸ್ತುತ ಹಿಂದಿ ಚಿತ್ರಂಗದಲ್ಲಿ ಸಲ್ಮಾನ್ ಖಾನ್, ಅಮೀರ್ ಖಾನ್ ಮತ್ತು ಶಾರುಖ್ ಖಾನ್ ರಂತಹ ಖಾನ್ ಮುಸಲ್ಮಾನರೇ ಹೇಗೆ ಪ್ರವರ್ಧಮಾನಕ್ಕೆ ಬರುತ್ತಿದ್ದರು?  ಎಂದು ಪಶ್ನಿಸಿರುವುದು ಸೂಕ್ತವಾಗಿದ್ದು, ಈ ಕುರಿತಾಗಿ ಅನಗತ್ಯವಾಗಿ ಹೆಚ್ಚು ಚರ್ಚಿಸದೇ, ಒಳ್ಳೆಯ ಸಂಗೇತ ಮಾಡುವದರ ಕಡೆ ಗಮನ ಹರಿಸಬೇಕು ಎಬ ತಿರುಗೇಟು ನೀಡಿರುವುದು ಸಕಾಲಿಕ ಎನಿಸುತ್ತದೆ.

ಸಂಗೀತ ನೀಡುವವರು ಮತ್ತು ಸಂಗೀತ ಮಾಡುವವರ ನಡುವ ಬಹಳಷ್ಟು ವೆತ್ಯಾಸವಿದೆ. ಇತ್ತೀಚೆಗೆ ಹಿಂದಿ ಚಿತ್ರರಂಗದಲ್ಲಿ ಸೃಜನಶೀಲರಲ್ಲದ ಕೆಲವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ  ಎಂಬ ರೆಹೆಮಾನ್ ಅವರ ಮಾತನ್ನು ಒಪ್ಪಿಕೊಳ್ಳುತ್ತೇನೆ ಆದರೂ, ಧರ್ಮದ ಆಧಾರಿತವಾಗಿ ಕೆಲಸ ಸಿಗುತ್ತಿದೆ ಎಂಬ ರೆಹಮಾನ್ ಅವರ ಹೇಳಿಕೆ ಸುಳ್ಳು. ಅವರು ಐದು ವರ್ಷಗಳಲ್ಲಿ ಮಾಡಬೇಕಾದ ಕೆಲಸವನ್ನು ಇಪ್ಪತ್ತೈದು ವರ್ಷಗಳ ಹಿಂದೆಯೇ ಮಾಡಿ ಮುಗಿಸಿದ್ದಾರೆ ಎಂದು ಖ್ಯಾತ ಗಾಯಕ ಶಂಕರ್ ಮಹದೇವನ್ ಹೇಳಿದ್ದಾರೆ.

ಹಾಗೆ ನೋಡಿದರೆ ಹಿಂದೆ ಚಿತ್ರರಂಗದಲ್ಲಿ ಬಾರೀ  ಹೆಸರು ಮಾಡಿದ್ದ ಅಮಿತಾಬ್ ಬಚ್ಚನ್ ಅವರೂ ಸಹಾ ತಮ್ಮ ವೃತ್ತಿ ಬದುಕಿನಲ್ಲಿ ಏರಳಿತ ಕಂಡಿದ್ದಾರೆ. ತಮ್ಮ ABC ಮೂಲಕ ನೆಲಕಚ್ಚಿದ್ದವರು ಮತ್ತೆ ಫೀನಿಕ್ಸ್ ನಂತೆ  ಮೇಲೆ ಬಂದಿದ್ದಾರೆ. ಸಂಗೀತ ಲೋಕದ ದಂತಕಥೆ ಆರ್ ಡಿ ಬರ್ಮನ್ ಸಹಾ ತಮ್ಮ ಅಂತಿಮ ದಿನಗಳಲ್ಲಿ ಅಕ್ಷರಶಃ ಯಾವುದೇ ಕೆಲಸವಿಲ್ಲದೆ ನಿಧನರಾದದ್ದು ತಮ್ಮ ಕಣ್ಣ ಮುಂದಿದೆ, ಸೋನು ನಿಗಮ್, ಸುಭಾಷ್ ಘಾಯ್ ಅಷ್ಟೇ ಏಕೆ ಮೂರು ಖಾನ್ ಗಳೂ ಸಹಾ ಇದೇ ರೀತಿ ಏರಿಳಿತ ಕಂಡಿದ್ದಾರೆ. ಕೇವಲ 40ರ ಪ್ರಸ್ತುತ ಅರ್ಜಿತ್ ಸಿಂಗ್  ಮತ್ತು ಶ್ರೇಯಾ ಘೋಷಾಲ್ ಕಳೆದ ದಶಕದಲ್ಲಿ ವರ್ಷಕ್ಕೆ ಸಾವಿರಾರು ಹಾಡುಗಳನ್ನು ಹಾಡುಗಳ ಮೂಲಕ ಉತ್ತಂಗಕ್ಕೇರಿದ್ದವರು ಪ್ರಸ್ತುತವಾಗಿ  ಹೊಸಬರ ಆಗಮನದಿಂದಾಗಿ ಅವರ ಹಾಡುಗಳ ಸಂಖ್ಯೆಯೂ ಕ್ರಮೇಣ ಕಡಿಮೆಯಾಗುತ್ತಿದೆ  ಬದಲಾವಣೆ ಎನ್ನುವುದು ಜಗದ ನಿಯಮ ಎಂಬುದನ್ನು 60ರ ಆಸುಪಾಸಿನಲ್ಲಿರುವ ರೆಹೆಮಾನ್  ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.

ನೆರೆಹೊರೆ ಮುಸ್ಲಿಂ ದೇಶಗಳಾದ ಪಾಕೀಸ್ಥಾನ ಮತ್ತು ಬಾಂಗ್ಲಾ ದೇಶದೊಂದಿಗೆ ನಮ್ಮ ದೇಶದ ಸದ್ಯದ ರಾಜಕೀಯ ಮತ್ತು ಧಾರ್ಮಿಕ ಪರಿಸ್ಥಿತಿ ಬಿಗಡಾಯಿಸಿರುವಾಗ ರೆಹಮಾನ್  ತನ್ನ ವಯಕ್ತಿಯ ಹಿತಾಸಕ್ತಿ ಅಥವಾ ತೆವಲಿಗಾಗಿ ಧರ್ಮದ ಮೆಲೆ ಆರೋಪ ಮಾಡುತ್ತಿರುವುದು ಕೇವಲ ರಾಷ್ಟ್ರವಷ್ಟೇ ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ದುಷ್ಪರಿಣಾಮ ಬೀರುತ್ತದೆ  ಎನ್ನುವ ಕನಿಷ್ಟ ಜ್ಞಾನವಾದರೂ ಇರಬೇಕಿತ್ತು.  ಈ ಹೇಳಿಕೆಯಿಂದಾಗಿ ರೆಹಮಾನನಿಗೆ  ಜಾಗತಿಕವಾಗಿ ಭಾರತವನ್ನು ಮಣಿಸಲು ಹವಣಿಸುತ್ತಿರುವವರ ಬೆಂಬಲ  ತಾತ್ಕಾಲಿಕವಾಗಿ ಸಿಗಬಹುದಾದರೂ ಶಾಶ್ವತವಾಗಿ ಆತ ಭಾರತೀಯರ ಮನೆ ಮತ್ತು ಮನಗಳಿಂದ ದೂರವಾಗುತ್ತಾನೆ ಎಂಬುದನ್ನೂ ಆತ ಮನಗಾಣಬೇಕಿತ್ತು.  ಅಕಸ್ಮಾತ್ ರೆಹಮಾನ್ ನ ಈ ಹೇಳಿಕೆ ಯಾವುದೋ ಷಡ್ಯಂತರದ ಭಾಗವಾಗಿದ್ದಲ್ಲಿ, ನಿಸ್ಸಂದೇಹವಾಗಿ ಆತ ನಿರ್ನಾಮವಾಗುವುದಂತೂ ನಿಶ್ಚಿತ. ಈ ವಿಕಸಿತ ಭಾರತದ ಭಾರತೀಯರನ್ನು ಈಗ ಅಷ್ಟು ಸುಲಭವಾಗಿ ಈ ರೀತಿಯ ಸುಳ್ಳುಗಳಿಂದ ದಿಕ್ಕು ತಪ್ಪಿಸಲಾಗದು.

ಹಿಂದೂವಾಗಿ ಹುಟ್ಟಿ, ಬ್ರಾಹ್ಮಣರ ಶಾಲೆಯಲ್ಲಿ ಓದಿರುವ ತನಗೆ ರಾಮಾಯಣದ ಬಗ್ಗೆ ಚೆನ್ನಾಗಿ ಗೊತ್ತಿದೆ ಹಾಗಾಗಿ ತಾನು ರಾಮಾಯಣ ಸಿನಿಮಾದಲ್ಲಿ ಬ್ರಿಟೀಷ್ ಸಂಗೀತ ಸಂಯೋಜಕರೊಂದಿಗೆ ಸೇರಿ ಕೆಲಸ ಮಾಡುತ್ತಿದ್ದೇನೆ  ಎಂದು ಅದೇ ಸಂದರ್ಶನದಲ್ಲಿ ಹೇಳಿರುವ  ರೆಹಮಾನನಿಗೆ ಅದೇ ರಾಮನು ಅಪಿ ಸ್ವರ್ಣಮಯೀ ಲಂಕಾ ನಮೇ ಲಕ್ಷ್ಮಣ ರೋಚತೇ, ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಯಸೀ ಎಂಬ ಮಾತುಗಳ ಅರ್ಥ ಗೊತ್ತಿದ್ದರೇ,  ದೇಶವನ್ನು ಒಡೆಯುವ ಈ ರೀತಿಯ ಮುಸ್ಲಿಂ ಹೇಳಿಕೆಗಳು ಬರುತ್ತಿರಲಿಲ್ಲಾ ಅಲ್ವೇ?

ಧರ್ಮೋ ರಕ್ಷತಿ ರಕ್ಷಿತಃ!!

ಏನಂತೀರೀ?
ನಿಮ್ಮವನೇ ಉಮಾಸುತ

Leave a comment