ಧಾರವಾಡ ಕರ್ನಾಟಕದ ವಿದ್ಯಾಕಾಶಿ ಎಂದರೂ ತಪ್ಪಾಗದು. ಧಾರವಾಡದ ಸಾಧನೆ ಕೇರಿಯ ಯಾವುದೇ ರಸ್ತೆಯಲ್ಲಿ ನಿಂತು ಒಂದು ಕಲ್ಲನ್ನು ಎಸೆದರೆ ಅದು ಸೀದಾ ಹೋಗಿ ಒಬ್ಬ ಸಾಹಿತಿಯ ಮನೆಯ ಮೇಲೆ ಬೀಳುತ್ತದೆ ಎನ್ನುವ ಮಾತು ಉತ್ಪ್ರೇಕ್ಷೆಯೇನಲ್ಲ. ಅಂತಹ ಧಾರವಾಡದ ಸಾಧನಕೇರಿಯವರೇ ಆದ ವರ ಕವಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ದ.ರಾ.ಬೇಂದ್ರೆಯವರು ಧಾರವಾಡದಲ್ಲಿ ದತ್ತಾತ್ರೇಯ ಗುಡಿಯ ಕಡೆಗೆ ಅವರ ಸ್ನೇಹಿತರಾದ ಶ್ರೀ ಸುರೇಶ್ ಕುಲಕರ್ಣಿಯವರೊಂದಿಗೆ ಹೋಗಿ ಹಿಂದಿರುಗಿ ಬರುತ್ತಿರುತ್ತಾರೆ.
ಆ ರಸ್ತೆಯ ಮೂಲೆಯೊಂದರಲ್ಲಿ ಒಬ್ಬ ಚಮ್ಮಾರ ಚಪ್ಪಲಿ ಹೊಲಿಯುತ್ತಾ ಕುಳಿತಿದ್ದ. ಬೇಂದ್ರೆಯವರ ಚಪ್ಪಲಿಯ ಉಂಗುಷ್ಠ ಹರಿದಿದ್ದನ್ನು ಕಂಡು ಆತ ಅಜ್ಜಾವ್ರ ನಿಮ್ಮ ಚೆಪ್ಪಲಿಯ ಉಂಗುಷ್ಠ ಹಚ್ಚಿಕೊಡತೀನಿ ಕೊಡ್ರಿ ಎಂದು ಕೇಳಿದಾಗಲೇ, ಬೇಂದ್ರೆಯವರಿಗೆ ತಮ್ಮ ಚಪ್ಪಲಿ ಉಂಗುಷ್ಠ ಕಿತ್ತುಹೋಗಿದೆ ಎಂಬುದರ ಅರಿವಾಗಿ, ಕೂಡಲೇ ತಮ್ಮ ಚಪ್ಪಲಿಯನ್ನು ಹೊಲಿಯಲು ಆ ಚಮ್ಮಾರನಿಗೆ ಕೊಟ್ಟರು. ಅದಾಗಲೇ ಮಟ ಮಟ ಮಧ್ಯಾಹ್ನ ಮತ್ತು ಬಿಸಿಲು ಸಹಾ ಬಹಳವಾಗಿತ್ತು. ಬೆಂದ್ರೇಯವರು ಚಪ್ಪಲಿಯನ್ನು ಹೊಲಿಯಲು ಕೊಟ್ಟುಾ ಸುಡುಬಿಸಿಲಿನಲ್ಲಿ ಬರಿಗಾಲಲ್ಲಿ ನಿಂತಿದ್ದನ್ನು ಗಮನಿಸಿದ ಆ ಚಮ್ಮಾರ ಕೂಡಲೇ ಅಜ್ಜಾರೇ, ಬಿಸಿಲಾಗ ಕಾಲು ಸುಡುತಾವ, ಇದರ ಮೇಲೆ ಕಾಲು ಇಡ್ರಿ ಎಂದು ತನ್ನಲ್ಲಿದ್ದ ಒಂದು ಚಪ್ಪಲಿಯನ್ನು ಅವರಿಗೆ ಕೊಟ್ಟ.
ಆತನ ವೃತ್ತಿಪರತೆ ಮತ್ತು ತನ್ನ ಗ್ರಾಹಕರ ಬಗ್ಗೆಯ ಕಾಳಜಿ ಕಂಡು ಬೇಂದ್ರೆಯವರಿಗೆ ಚಮ್ಮಾರನ ಬಗ್ಗೆ ಪ್ರೀತಿ ಹುಟ್ಟಿದ್ದಲ್ಲದೇ ಮನ ತುಂಬಿ ಬಂತು. ಕೂಡಲೇ ಅಲ್ಲೋ ತಮ್ಮಾ, ನನ್ನ ಕಾಲು ಸುಡೋದರ ಬಗ್ಗೆ ನಿನಗೆ ಕಾಳಜಿ ಅದ. ಆದರೆ ಸುಡೋ ಬಿಸಿಲಿನಾಗೆ ನೀನ್ ಹಿಂಗಾ ಕೂತಿದ್ದಿ. ನಿನ್ನ ಮೈಸುಡೋದಿಲ್ಲೇನು? ಎಂದವರೇ ತಮ್ಮ ಛತ್ರಿಯನ್ನು ಬಿಡಿಸಿ ಅವನ ತಲೆ ಮೇಲೆ ಹಿಡಿದರು. ಅಷ್ಟು ವಯಸ್ಸಿನ ಹಿರಿಯರು ತನಗೆ ಛತ್ರಿ ಹಿಡಿದಿರುವುದನ್ನು ಕಂಡು ಅತನಿಗೆ ಬಹಳ ಸಂಕೋಚವಾಗಿ, ಅಯ್ಯೋ ಬೇಡ್ ಬಿಡ್ರೀ ಅಜ್ಜಾರೇ ಅಂದರೂ, ಕೇಳದ ಬೇಂದ್ರೆಯವರು ತಮ್ಮ ಛತ್ರಿಯನ್ನು ಅವನ ನೆರಳಿಗೆ ಹಿಡಿದರು. ಹಿರಿಯರು ತನ್ನ ಮಾತು ಕೇಳುವುದಿಲ್ಲಾ ಎಂಬುದನ್ನು ಅರಿತ ಆತ, ಲಗುಬಗನೆ ಚಪ್ಪಲಿಯನ್ನು ಹೊಲಿದಿದ್ದಲ್ಲದೇ, ಅದಕ್ಕೆ ಪಾಲೀಶ್ ಸಹಾ ಮಾಡಲು ಅನುವಾದ.
ಇದೇ ಸಮಯದಲ್ಲಿ ಬೇಂದ್ರೆಯವರು ಆತನನ್ನು ಮಾತಿಗೆ ಎಳೆದು,
ಮದ್ವೀ ಆಗಿದ್ಯೇನು? ಎಷ್ಟು ಮಕ್ಕಳು ನಿನಗ? ಎಂದರು
ಅದಕ್ಕೆ ಆತ ತಲೆಯನ್ನು ಬಗ್ಗಿಸಿ, ಹೂಂ ಆಗಿದೆ. ಎರಡು ಮಕ್ಕಳು ಎಂದ
ದಿನಕ್ಕೆ ಎಷ್ಟು ದುಡೀತಿದಿ? ಎಂದು ಬೇಂದ್ರೇಯವರು ಕೇಳಿದ್ದಕ್ಕೆ
ದಿನಕ್ಕೆ ಸರಾಸರಿ ಹತ್ತು ರೂಪಾಯಿ ಸಿಗಬಹುದು. ಒಮ್ಮೊಮ್ಮೆ ಹೆಚ್ಚು ಕಡಿಮೆ ಆಗತೈತಿ ಎಂದ
ಅದನ್ನು ಕೇಳಿದ ಬೇಂದ್ರೆಯವರ ಮನಸ್ಸಿಗೆ ಸ್ವಲ್ಪ ಬೇಸರವಾದರೂ ಅದನ್ನೂ ಸಾವರಿಸಿಕೊಂಡು ಶರೆ ಕುಡಿತೀಯೇನು? ಎಂದರು
ಈ ಪ್ರಶ್ನೆಯಿಂದ ಬೆಚ್ಚಿ ಬಿದ್ದ ಆ ಚಮ್ಮಾರ, ತುಸು ಭಯ ಮತ್ತು ನಾಚಿಕೆಯಿಂದ ಯಾವಾಲಾದರೂ ಒಮ್ಮೊಮ್ಮೆ ಎಂದು ಹೇಳುತ್ತಾ, ಅಜ್ಜಾರೇ!! ತಗೋರಿ ನಿಮ್ಮ ಚಪ್ಪಲಿ ಎಂದು ಹೊಲಿದ ಚಪ್ಪಲಿಯನ್ನು ಅವರ ಮುಂದಿಟ್ಟ.
ಸರಿ ಎಷ್ಟು ಆತು ಎಂದು ಬೇಂದ್ರೆಯವರು ಕೇಳಿದಾಗ, ಒಂದೂವರೆ ರೂಪಾಯಿ ಆತ್ರಿ ಎಂದ ಚಮ್ಮಾರ. ಕೂಡಲೇ ಬೇಂದ್ರೆಯವರು ಆತನಿಗೆ ಹತ್ತು ರೂಪಾಯಿಯ ನೋಟೊಂದ್ದನ್ನು ನೀಡಿದಾಗ, ಆತ ಚಿಲ್ಲರೆ ಇಲ್ಲವೆಂದಾಗ, ಚಿಲ್ಲರೆ ಏನು ಕೊಡ ಬ್ಯಾಡಾ! ಇದು ನಿನ್ನ ಇವತ್ತಿನ ದುಡಿಮೆ. ಮೊದಲು ಒಂದು ಕೊಡೆ ಖರೀದಿಸಿ ಬಿಸಿಲು ಮತ್ತು ಮಳೆಯಿಂದ ನಿನ್ನನ್ನು ರಕ್ಷಿಸಿಕೋ. ನಿನ್ನ ದುಡಿಮೆಯನ್ನೇ ಅವಲಂಬಿಸಿರುವ ನಿನ್ನ ಹೆಂಡತಿ ಮತ್ತು ಮಕ್ಕಳು ಇದ್ದಾರೆ ಎನ್ನೋದನ್ನ ಮರೀಬ್ಯಾಡ ಎಂದು ಹೇಳಿದ್ದಲ್ಲದೇ, ಉಳಿದ ಹಣದಲ್ಲಿ ಅವರಿಗೆ ಹಣ್ಣು ಹಂಪಲು ಒಯ್ಯಿ, ಸುಮ್ಮಾನೇ ಶರೆ ಕುಡಿಬ್ಯಾಡ ಎಂದು ಪ್ರೀತಿಯಿಂದ ಗದುರಿಸಿದರೂ, ಬೇಂದ್ರೆಯವರ ಅಂತಃಕರಣ ನೋಡಿ ಆ ಚಮ್ಮಾರನಿಗೇ ಅರಿವಿಲ್ಲದಂತೆ ಒದ್ದೆಯಾದ ಅವನ ಕಣ್ಣುಗಳನ್ನು ಒರೆಸಿಕೊಂಡು.
ಹಾಂ! ಅಜ್ಜಾರೆ ನಿಮ್ಮ ಮನಿ ಎಲ್ಲೈತಿ? ಎಂದು ಕೇಳಿದ.
ಚಪ್ಪಲಿಯನ್ನು ಹಾಕಿಕೊಳ್ಳುತ್ತಾ! ನಮ್ಮ್ ಮನೀ ಸಾಧನಕೇರೀಯೊಳಗ ಎಂದು ಸರಸರನೇ ಅಲ್ಲಿಯೇ ಇದ್ದ ಟಾಂಗಾ ಏರಲು ಹೋದಾಗ,
ಆ ಚಮ್ಮಾರ ನಿಮ್ಮ್ ಮನೀ ಬೇಂದ್ರೆ ಮಾಸ್ತರ ಮನೆ ಹತ್ರೇನ್ರಿ? ಎಂದು ಕೇಳಿದ.
ಅದಕ್ಕೆ ಕೊಂಚವೂ ವಿಚಲಿತರಾಗದ ಬೇಂದ್ರೆಯವರು ಹಿಂದಿರಿಗಿಯೂ ನೋಡದೇ ಹೂಂ ಎನ್ನುತ್ತಾ! ಟಾಂಗಾ ಏರಿ ಹೊರಟೇ ಬಿಟ್ಟರು.
ಆನಂತರದ ದಿನಗಳಲ್ಲಿ ಅವರೇ ಬೇಂದ್ರೇಯವರು ಎಂದು ತಿಳಿದ ಆ ಚಮ್ಮಾರ ಆಗಾಗ್ಗೆ ಬೇಂದ್ರೆಯವರ ಮನೆಗೆ ಹೋಗಿ ಬರುವ ಅಭ್ಯಾಸವನ್ನು ರೂಢಿ ಮಾಡಿಕೊಂಡನಂತೆ.
ಈ ಘಟನೆಯನ್ನು ಓದುವಾಗ ಕನ್ನಡದ ಮೊದಲ ರಾಷ್ಟ್ರಕವಿ ಶ್ರೀ ಪಂಜೆ ಮಂಗೇಶರಾಯರ ಉದಯರಾಗ ಕವಿತೆಯ ಏರುವನು ರವಿ ಏರುವನು ಬಾನೊಳು ಸಣ್ಣಗೆ ತೋರುವನು. ಏರಿದವನು ಚಿಕ್ಕವನಿರಲೇ ಬೇಕೆಂಬ ಮಾತನು ಸಾರುವನು ರವಿ ಸಾರುವನು ಎಂಬ ಸಾಲುಗಳು ನೆನಪಾಗಿ, ಬೇಂದ್ರೇಯಂತಹವರು ಎಷ್ಟೇ ಎತ್ತರಕ್ಕೇರಿದರೂ, ಅದನ್ನು ತೋರಿಸಿಕೊಳ್ಳದೇ, ಎಷ್ಟು ಸರಳವಾಗಿ ಯಾವ ಹಂತಕ್ಕೆ ಬೇಕಾದರೂ ಇಳಿದು ತಮ್ಮ ಹೃದಯವಂತಿಕೆಯನ್ನು ತೋರುತ್ತಾರೆ ಎಂಬುದು ಅರಿವಾಗುತ್ತದೆ. ಅಲ್ಪರಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲೂ ಕೊಡೆ ಹಿಡಿಯುತ್ತಾರೆ ಎಂಬ ಗಾದೆಯ ತದ್ವಿರುದ್ಧವಾಗಿ, ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಂತಹ ಹಿರಿಯ ಕವಿಗಳು ಮತ್ತು ವಿದ್ವಾಂಸರಾದ ಬೇಂದ್ರೆಯವರು ಸಾಧಾರಣ ಚಮ್ಮಾರನಿಗೆ ಕೊಡೆ ಹಿಡಿದಂತಹ ಇಂತಹ ಪ್ರಸಂಗ ನಿಜಕ್ಕೂ ನಮ್ಮ ಇಂದಿನ ಜನಾಂಗಕ್ಕೆ ಮಾದರಿ ಎಂದರೂ ತಪ್ಪಾಗದು. ಹಣ, ಆಸ್ತಿ, ಅಂತಸ್ತುಗಳು ಐಷಾರಾಮ್ಯತೆಯಿಂದ ಬರುವುದಿಲ್ಲ. ಅದು ನಮ್ಮ ಆತ್ಮತೃಪ್ತಿ ಮತ್ತು ನಾವು ನಡೆಸುವ ಜೀವನ ಶೈಲಿ ಮತ್ತು ಹೃದಯವಂತಿಯಿಂದ ಬರುತ್ತದೆ. ಇದೇ ಅಲ್ವೇ ನಮ್ಮ ಈ ಮಣ್ಣಿನ ಗುಣ ಮತ್ತು ಸನಾತನ ಧರ್ಮದ ವಸುದೈವ ಕುಟುಂಬಕಂ ಎಂಬ ಮಾತಿನ ನಿಜವಾದ ಅರ್ಥ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ
ಈ ಲೇಖನ 2026 January 31ರ ಹಂಪಿ ವರ್ಲ್ಡ್ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ
