ಉಡುಪಿ ಶ್ರೀ ಕೃಷ್ಣನ ಪರಮ ಭಕ್ತರಾಗಿದ್ದಂತಹ, ಕರ್ನಾಟಕ ಸಂಗೀತ ಮತ್ತು ಹರಿದಾಸ ಚಳುವಳಿಯ ಸ್ಥಾಪಕ ವ್ಯಕ್ತಿಯಾದ ಪುರಂದರ ದಾಸರನ್ನು ಕರ್ನಾಟಕ ಸಂಗೀತ ಪದ್ಧತಿಯ ಪಿತಾಮಹ ಎಂದು ಕರೆಯಲಾಗುತ್ತದೆ. ಉಡುಪಿಯೊಂದಿಗೆ ಆಳವಾದ ಆಧ್ಯಾತ್ಮಿಕ ಸಂಪರ್ಕವನ್ನು ಹೊಂದಿದ್ದು, ಸಂಗೀತಕಾರರಾಗಿ ಸಂಗೀತದ ಮೂಲಭೂತ ಪಾಠಗಳಾದ ಸರಳಿ ವರಿಸೆ, ಜಂಟಿ ವರಿಸೆ, ಅಲಂಕಾರಗಳು ಮತ್ತು ಗೀತೆಗಳನ್ನು ರಚಿಸಿ, ಸಂಗೀತ ಕಲಿಕೆಯ ವ್ಯವಸ್ಥಿತ ಪಠ್ಯಕ್ರಮವನ್ನು ರೂಪಿಸಿದಲ್ಲದೇ, ಭಕ್ತಿಯ ಪ್ರತಿಪಾದಕರಾಗಿ ಉಡುಪಿಯ ಶ್ರೀಕೃಷ್ಣನಿಗೆ ಸಮರ್ಪಿತವಾದ ಹಲವಾರು ದೇವರನಾಮಗಳನ್ನು ರಚಿಸಿ, ದಾಸ ಸಾಹಿತ್ಯದ ಮೂಲಕ ಸಂಗೀತವನ್ನು ಜನಸಾಮಾನ್ಯರಿಗೆ ತಲುಪಿಸಿದರು. ಅಂತಹ ಪುರಂದರದಾಸರಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿರುವ ಪುತ್ತೂರಿನ ಬಳಿಯ ಕಾಂಚನ ಎಂಬ ಹಳ್ಳಿಯು ಕರ್ನಾಟಕ ಸಂಗೀತದ ಖ್ಯಾತ ವಾಗ್ಗೇಯಕಾರರಾದ ತ್ಯಾಗರಾಜರ ಹುಟ್ಟೂರು ತಿರುವಯ್ಯಾರ್ ನಂತೆಯೇ ಕರ್ನಾಟಕದ ತಿರುವಯ್ಯಾರ್ ಎಂದು ಹೆಸರುವಾಸಿಯಾಗಿದ್ದು ಅಲ್ಲಿ ಪ್ರತೀ ವರ್ಷ ನಡೆಯುವ ಮೂದು ದಿನಗಳ ಕಾಲದ ಪ್ರತಿಷ್ಠಿತ ಶಾಸ್ತ್ರೀಯ ಸಂಗೀತೋತ್ಸವ ಕಾಂಚನೋತ್ಸವದ ಕುರಿತಾದ ಕುತೂಹಲಕಾರಿ ವಿಷಯಗಳನ್ನು ತಿಳಿಯೋಣ ಬನ್ನಿ.
ಬೆಂಗಳೂರು ಮಂಗಳೂರು ರಸ್ತೆಯಲ್ಲಿರುವ ಉಪ್ಪಿನಂಗಡಿ ಹೆದ್ದಾರಿಯಿಂದ ಸುಮಾರು ಎರಡೂವರೆ ಕಿ.ಮೀ ದೂರದಲ್ಲಿರುವ ಕೃಷಿಯೇ ಪ್ರಧಾನವಾಗಿರುವ ಕಾಂಚನದಲ್ಲಿ ನಡೆಯುವ ಸಂಗೀತೋತ್ಸವಕ್ಕೆ 3 ಶತಮಾನಗಳ ಇತಿಹಾಸವಿದೆ. ಮಾಗಿಯ ಚಳಿ ಕಳೆದು ಅತ್ತ ಛಳಿಯೂ ಅಲ್ಲದ ಇತ್ತಾ ಬಿಸಿಲೂ ಇಲ್ಲದ ಕಾಲದಲ್ಲಿ ಸುಮಾರು ಮೂರು ದಿನಗಳ ಕಾಲ ವೈಭವದ ಸಂಗೀತೋತ್ಸವ ಕಾಂಚನ ಶ್ರೀಲಕ್ಷ್ಮೀನಾರಾಯಣ ಸಂಗೀತ ಅಕಾಡೆಮಿ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಾ ಬಂದಿರುವ ಹಿಂದಿನ ಕಥೆ ಅತ್ಯಂತ ರೋಚಕವಾಗಿದೆ. 1911ರಲ್ಲಿ ಕೇರಳದ ಪಾಲಘಾಟ್‌ನಿಂದ ಕಾಂಚನಕ್ಕೆ ಸೊಸೆಯಾಗಿ ಬಂದ ಲಕ್ಷ್ಮಿ ಅಮ್ಮಾಳ್ ಅವರು ಸ್ವತಃ ಉತ್ತಮ ಗಾಯಕಿಯಾಗಿದ್ದಲ್ಲದೇ ಸಂಗೀತ ಪ್ರೇಮಿ ಆಗಿದ್ದ ಕಾರಣ, ಚಕ್ರಕೋಡಿ ನಾರಾಯಣ ಶಾಸ್ತ್ರಿ ಚೆಂಬೈ ವೈದ್ಯನಾಥ ಚೌಕಟ್ಟಿ ಭಾಗವತರ್, ಜಿ.ಎನ್. ಬಾಲಸುಬ್ರಹ್ಮಣ್ಯಂ, ಪಿಟೀಲು ಚೌಡಯ್ಯ, ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಮುಂತಾದ ಸಂಗೀತ ದಿಗ್ಗಜರುಗಳನ್ನು ಕರೆಸಿ ಮಂಗಳೂರಿನಲ್ಲಿ ಸಂಗೀತ ಕಛೇರಿಗಳನ್ನು ಆಯೋಜಿಸುವ ಮೂಲಕ ಅಲ್ಲಿನ ಸಂಗೀತೋತ್ಸವಕ್ಕೆ ಓಂಕಾರ ಹಾಕಿದರು. ಅವರ ನಂತರ ಅವರ ಪುತ್ರ ವೆಂಕಟಸುಬ್ರಹ್ಮಣ್ಯಂ ಅವರು ಚಕ್ರಕೋಡಿ, ಚೆಂಬೈ ವೈದ್ಯನಾಥ ಭಾಗವತರ್, ಜಿಎನ್‌ಬಿ ಅವರಲ್ಲಿ ಸಂಗೀತಾಭ್ಯಾಸವನ್ನು ಮಾಡುತ್ತಲೇ 1954ರಲ್ಲಿ ಕಾಂಚನದಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಸಂಗೀತ ಶಾಲೆಯನ್ನೂ ಸ್ಥಾಪಿಸುವ ಮೂಲಕ ಆ ಊರಿನಲ್ಲಿ ಅಧಿಕೃತವಾಗಿ ಶಾಸ್ತ್ರೀಯ ಸಂಗೀತದ ಪಾಠ ಮತ್ತು ಸಂಗೀತೋತ್ಸವ ಆರಂಭವಾಯಿತು. ಆದೇ ಪರಂಪರೆಯನ್ನು 1982ರಿಂದ ವೆಂಕಟಸುಬ್ರಹ್ಮಣ್ಯಂ ಪುತ್ರ ವಿದ್ವಾನ್ ವಿ. ಸುಬ್ಬರತ್ನಂ ಮತ್ತು ಅವರ ಪತ್ನಿ (ಸಂಗೀತ ವಿದ್ವಾಂಸ ರಾ. ಸತ್ಯನಾರಾಯಣ ಅವರ ಪುತ್ರಿ ಮತ್ತು ಉತ್ತಮ ಕಲಾವಿದೆ) ಮುಂದುವರೆಸಿಕೊಂಡು ಹೋಗಿ, ಪ್ರಸ್ತುತ ಅವರ ಮಕ್ಕಳಾದ ಶ್ರೀರಂಜಿನಿ, ಶ್ರುತಿರಂಜಿನಿ, ಸುಮನಸರಂಜಿನಿ ಸೇರಿದಂತೆ ಅವರ ಇಡೀ ಕುಟುಂಬವೇ ಈ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ.
ಕರಾವಳಿಯ ಅಪ್ಪಟ ಗ್ರಾಮೀಣ ಸೋಗಡಿನ ಯಕ್ಷಗಾನ ಮತ್ತು ತಾಳ ಮದ್ದಳೆಯ ಅಪ್ಪಟ ಪ್ರಭಾವ ಇರುವ ಈ ಊರಿನ ದಿನವಿಡೀ ತೋಟದಲ್ಲಿ ದುಡಿದು ದಣಿವಾಗಿರುತ್ತಿದ್ದ ಸ್ಥಳೀಯ ಕೃಷಿಕರೇ ಈ ಸಂಗೀತೋತ್ಸವರ ಕಲಾರಸಿಕರು ಈ ಸಂಗೀತೋತ್ಸವದಲ್ಲೂ ಭಾರೀ ಉತ್ಸಾಹದಿಂದ ಪಾಲ್ಗೊಂಡು, ಅವರಲ್ಲಿ ಬಹುತೇಕರಿಗೆ ಸಂಗೀತದ ಒಲವು ಇಲ್ಲವೇ ಅಭಿರುಚಿ ಇರುವ ಕಾರಣ, ಅವರು ಹಾಡಿದ್ದು ಚೆನ್ನಾಗಿತ್ತು. ಇವರು ಇನ್ನೂ ಸ್ವಲ್ಪ ಎತ್ತರದ ಸ್ವರದಲ್ಲಿ ಹಾಡಬೇಕಿತ್ತು. ಇವರ ಪಕ್ಕವಾದನವಂತೂ ಅದ್ಭುತ ಎನ್ನುತ್ತಾ ತೋರಿಸಿದ ಪ್ರೋತ್ಸಾಹದಿಂದಾಗಿಯೇ ಅಪಾರವಾದ ಮನ್ನಣೆ ಪಡೆದು ನಂತರದ ದಿನಗಳಲ್ಲಿ ಕೇವಲ ಕರ್ನಾಟಕವಷ್ಟೇ ಅಲ್ಲದೇ, ನೆರೆಹೊರೆಯ ತಮಿಳುನಾಡು, ಕೇರಳದ ಮೂಲೆಮೂಲೆಗಳಿಂದಲೂ ಕೇವಲ ಸಂಗೀತಗಾರಷ್ಟೇ ಅಲ್ಲದೇ ಸಂಗೀತ ಕಲಾ ರಸಿಕರು, ಅಲ್ಲಿ ಮೂರು ದಿನಗಳ ಕಾಲ ಉಚಿತ ಊಟ ಮತ್ತು ವಸತಿಯೊಂದಿಗೆ ನಡೆಯುವ ಈ ಸಂಗೀತೋತ್ಸವದಲ್ಲಿ ಭಾಗಿಗಳಾಗುವ ಮೂಲಕ ಕಳೆದ 70ಕ್ಕೂ ಅಧಿಕ ವರ್ಷಗಳಿಂದಲೂ ಬಹಳ ಅದ್ದೂರಿಯಾಗಿ ಕಾಂಚನೋತ್ಸವ ಎಂಬ ಹೆಸರಿನಲ್ಲಿ ಸಾಕಷ್ಟು ಕೀರ್ತಿಯನ್ನು ಗಳಿಸಿದೆ.
ಈ ಬಾರಿಯ 2026ರ ಫೆಬ್ರವರಿ 5 ರಿಂದ 7 ರವರೆಗೆ ನಡೆಯುವ 72ನೇ ವರ್ಷದ ಕಾಂಚನೋತ್ಸವವು ಬಹಳ ವಿಶೇಷವಾಗಿದ್ದು, ಕಾಂಚನ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ಅದರ ಸ್ಥಾಪಕ ಗುರು, ಸಂಗೀತರತ್ನ ವಿ.ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರ 105ನೇ ಜನ್ಮ ವರ್ಷ ಮಹೋತ್ಸವದ ಅಂಗವಾಗಿ ಕಾಂಚನದಲ್ಲಿ ಸುಮಾರು 2 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಟ್ತಿಸಿರುವ ನೂತನ ಸಂಗೀತ ಕಲಾ ಶಾಲೆ, ಸಭಾಭವನ ಹಾಗೂ ಭೋಜನ ಶಾಲೆಯ ಲೋಕಾರ್ಪಣೆಯನ್ನು ಕಾಂಚನ ಸಹೋದರಿಯರು ಎಂದೇ ಪ್ರಸಿಧ್ಧಿ ಆಗಿರುವ ಕಾಂಚನ ಶ್ರೀರಂಜಿನಿ ಮತ್ತು ಕಾಂಚನ ಶ್ರುತಿರಂಜಿನಿ ಅವರ ನೇತೃತ್ವದಲ್ಲಿ ನಡೆಯಲಿದೆ.
ಫೆಬ್ರವರಿ 5ರ ಸಂಜೆ ನಾರಾಯಣ ಬಡಿಕಿಲ್ಲಾಯರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಲಿದ್ದು, ಅದೇ ದಿನ 72ನೇ ವರ್ಷದ ತ್ಯಾಗರಾಜ, ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಕಾಂಚನ ವೆಂಕಟಸುಬ್ರಮಣ್ಯಂ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ.ಸುಬ್ಬರತ್ನಂ ಅವರ ಪುಣ್ಯ ಸ್ಮರಣೆ ಅಂಗವಾಗಿ ಆರಂಭ ಸ್ತುತಿಯಲ್ಲಿ ಸಂವಿತ್ ಆರ್.ಎಸ್. ತಬಲ ಹಾಗೂ ಕೆ.ಜೆ. ಋತ ವಯಲಿನ್ ನುಡಿಸಲಿದ್ದಾರೆ. ಸಂಜೆ ಸ್ವರ ಲಯ ಲಹರಿಯಲ್ಲಿ ಕೆ.ಜೆ.ಋತ, ಅಭಯ್ ಸಂಪಿಗೆತ್ತಾಯ, ಶ್ರೀಕೃಷ್ಣ ಭಟ್, ತೇಜಸ್ವಿ ಸಂಜಯ್, ವರ್ಚಸ್ ವಿ., ಅಪ್ರಮೇಯ ಹೊಸಹಳ್ಳಿ, ಸಂವಿತ್ ಆರ್.ಎಸ್., ಶಮಿತ್ ಕಲ್ಕೂರ್, ಸಾಕೇತರಾಮ್ ಫಣಿ ವೇದಾಲ ಅವರು ಸಂಗೀತ ವಾದ್ಯಗಳನ್ನು ನುಡಿಸಲಿದ್ದಾರೆ. ಬಳಿಕ ಕಾಂಚನ ಮ್ಯೂಸಿಕ್ ಅಕಾಡೆಮಿಯ ಶಿಷ್ಯರು, ಪ್ರಶಿಷ್ಯರು ಮತ್ತು ಅತಿಥಿ ಕಲಾವಿದರಿಂದ ಸಂಗೀತ ಸೇವೆ ನಡೆಯಲಿದೆ.
ಫೆಬ್ರವರಿ 6ರ ಬೆಳಿಗ್ಗೆ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಾಂಚನ ಲಕ್ಷ್ಮೀನಾರಾಯಣ ಸಂಗೀತ ಕಲಾ ಶಾಲೆ, ಸಭಾಭವನ ಹಾಗೂ ಭೋಜನ ಶಾಲೆ ಪ್ರವೇಶೋತ್ಸವದ ಬಳಿಕ ಶತಾಧಿಕ ಕಂಠಗಾಯನ ಮತ್ತು ವಾದನದ ಜೊತೆಗೆ ಮಧ್ಯಾಹ್ನದವರೆಗೂ ಸಂಗೀತ ಸೇವೆ ಸಂಜೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ.ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ನೂತನವಾಗಿ ನಿರ್ಮಿಸಲಾಗಿರುವ ಸಂಗೀತ ಕಲಾ ಶಾಲೆ ಮತ್ತು ಸಭಾ ಭವನದ ಉದ್ಘಾಟನೆ ನಡೆಯಲಿದೆ.
ಇನ್ನು ಮೂರನೇ ದಿನ ಫೆಬ್ರವರಿ 7ರಂದು ಬೆಳಿಗ್ಗೆ ವಿದುಷಿ ಚಾರುಲತಾ ರಾಮಾನುಜಂ ನೇತೃತ್ವದಲ್ಲಿ ಕಾಂಚನ ಮನೆಯಿಂದ ಸಂಗೀತ ಶಾಲೆಯ ವರೆಗೆ ಊಂಛಾವೃತ್ತಿಯೊಂದಿಗೆ ತ್ಯಾಗರಾಜರ ಉತ್ಸವ ಆರಂಭವಾಗಿ ನಂತರ ಕಾಂಚನೋತ್ಸವಕ್ಕೆ ಬರುವ ಎಲ್ಲಾ ಸಂಗೀತಗಾರರು ಸಾಮೂಹಿಕವಾಗಿ ತ್ಯಾಗರಾಜರು ಮತ್ತು ಪುರಂದರದಾಸರ ಕೃತಿಗಳ ಗಾಯನ ಮತ್ತು ವಾದನಗಳೊಂದಿಗೆ ಮಧ್ಯಾಹ್ನದವರೆಗೂ ನಡೆಸಿ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5ಕ್ಕೆ ರಾಘವೇಶ್ವರ ಭಾರತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ‘ಗಾಡ್ ಆಫ್ ಇಂಡಿಯನ್ ವಯಲಿನ್‘ ಎಲ್.ಸುಬ್ರಹ್ಮಣ್ಯಂ ಅವರಿಗೆ ಕಾಂಚನ ಶ್ರೀ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಸಂಸದೆ ಬಾನ್ಸುರಿ ಸ್ವರಾಜ್ ಪ್ರಶಸ್ತಿ ಪ್ರದಾನ ಮಾಡಲಿದ್ದು ಆ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆ ಮತ್ತು ಎಲ್ .ಸುಬ್ರಹ್ಮಣ್ಯಂ, ಕವಿತಾ ಕೃಷ್ಣಮೂರ್ತಿ, ಚಾರುಲತಾ ರಾಮಾನುಜಂ, ಕಲೈಮಾಮಣಿ ಶಿವಮಣಿ ಸೇರಿದಂತೆ ದೇಶದ ಅನೇಕ ಕಲಾವಿದರು ಈ ಬಾರಿಯ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.
ಲಕ್ಷ್ಮಿ ಅಮ್ಮಾಳ್ ಮತ್ತು ವೆಂಕಟಸುಬ್ರಹ್ಮಣ್ಯಂ ಅವರುಗಳ ಕಾಲದಲ್ಲಿ ಈ ಉತ್ಸವವು ಸತತವಾಗಿ 11 ದಿನಗಳ ಕಾಲ ಹಗಲು-ರಾತ್ರಿ ಎನ್ನದೇ ನಿರಂತರವಾಗಿ ಸಂಗೀತ ಕಛೇರಿಗಳು ನಡೆಯುತ್ತಿದ್ದು, ಪಿಟೀಲು ಚೌಡಯ್ಯನವರು, ಅರಿಯಾಕುಡಿ ಇಲ್ಲವೇ ಚೆಂಬೈ ಅವರ ಕಛೇರಿಗಳು ಇದ್ದಾಗ ಕಲಾ ರಸಿಕರು ಸುಮಾರು 3 ಕಿ.ಮೀ ದೂರದ ವರೆಗೂ ಸರತಿಯಲ್ಲಿ ನಿಲ್ಲುವಂತಹ ಪರಿಸ್ಥಿತಿ ಇತ್ತು ಎಂದರೆ ಆ ಸಂಗೀತೋತ್ಸವದ ವೈಭವ ಹೇಗಿತ್ತು ಎಂಬುದರ ಅರ್ಥವಾಗುತ್ತದೆ. ಕರಾವಳಿಯ ಮೂಲೆಯಲ್ಲಿರುವ ಕಾಂಚನದಂತಹ ಹಳ್ಳಿಗಾಡಿನ ಪ್ರದೇಶದಲ್ಲಿಯೂ ಇಷ್ಟು ಅದ್ದೂರಿಯಾಗಿ ಸಂಗೀತ ಸೇವೆ ನಡೆಯುತ್ತಿದ್ದನ್ನು ನೋಡಿದ ಆ ಕಾಲದ ಸಂಗೀತ ದಿಗ್ಗಜರಾದ ಮಹಾರಾಜಪುರಂ ಸಂತಾನಂ ಮತ್ತು ಸಾಂಬಾಮೂರ್ತಿಗಳು ಇದು ಕರ್ನಾಟಕದ ತಿರುವಯ್ಯಾರ್, ದೇಶದ ಎರಡನೇ ತಿರುವಯ್ಯಾ ಎಂದು ಉದ್ಘಾರ ಮಾಡಿದ ಕಾರಣ ಅಂದಿನಿಂದ ಕಾಂಚನ ಗ್ರಾಮ, ಕರ್ನಾಟಕದ ತಿರುವಯ್ಯಾರ್ ಎಂದೇ ಪ್ರಸಿದ್ದಿ ಪಡೆದಿದೆ.
ಕಾಂಚನೋತ್ಸವವು ಸಂಗೀತ ಸಾಧಕರಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ, ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವ ಕಾರ್ಯವನ್ನು ಮಾಡುತ್ತಿದ್ದು, ನೂರು ವರ್ಷಗಳ ಹಿಂದೆ ಆರಂಭವಾದ ಈ ಪದ್ದತಿಯನ್ನು ಮಂಗಳೂರು ಬೆಂಗಳೂರಷ್ಟೇ ಅಲ್ಲದೇ ದೇಶ ವಿದೇಶಗಳಲ್ಲಿ ನೆಲೆಸಿರುವ ಲಕ್ಷ್ಮಿ ಅಮ್ಮಾಳ್ ಅವರ ಕುಟುಂಬಸ್ಥರು ಇಂದಿಗೂ ವರ್ಷದಿಂದ ವರ್ಷಕ್ಕೆ ಮತ್ತಷ್ಟು ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿದ್ದ ಆ ಮೂರು ದಿನಗಳ ಕಾಲ ತ್ಯಾಗರಾಜ ಉತ್ಸವ, ದೀಕ್ಷಿತರ ಆರಾಧನೆಯನ್ನು ಲಕ್ಷ್ಮಿ ಅಮ್ಮಾಳ್ ಅವರ ಕುಟುಂಬದ ನೆಂತರಿಷ್ಟರಲ್ಲದೇ, ನೂರಾರು ಕಲಾವಿದರು ಮತ್ತು ಸಾವಿರಾರು ಕಲಾರಾಧಕರು ತಮ್ಮ ಮನೆಯ ಸಮಾರಂಭದಂತೆಯೇ ಬಹಳ ಶಿಸ್ತು ಮತ್ತು ಸಂಮ್ಯಮಗಳಿಂದ ನಡೆಸಿಕೊಂಡು ಹೋಗುವ ಮೂಲಕ ಸಂಗೀತ ಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸುತ್ತಿರುವುದು ನಿಜಕ್ಕೂ ಅದ್ಭುತ ಮತ್ತು ಅನನ್ಯವೇ ಸರಿ.
ಇಂದಿನಿಂದ ಆರಂಭವಾಗುತ್ತಿರುವ ಕಾಂಚನೋತ್ಸವದ ಬಗ್ಗೆ ಇಷ್ಟೆಲ್ಲಾ ಮಾಹಿತಿ ತಿಳಿದ ಮೇಲೇ ಇನ್ನೇಕೆ ತಡಾ, ಈ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಈ ಬಾರಿಯ ವಿಶೇಷವಾದ ಸಂಗೀತೋತ್ಸವದಲ್ಲಿ ಭಾಗಿಗಳಾಗಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?.
ಏನಂತೀರೀ?
ನಿಮ್ಮವನೇ ಉಮಾಸುತ