ಗುಂಡಪ್ಪ ರಂಗನಾಥ್ ವಿಶ್ವನಾಥ್

ಅದು 1982, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗನದಲ್ಲಿ ಕರ್ನಾಟಕ ಮತ್ತು ಮುಂಬೈ ನಡುವಿನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ, ಮಂಕಡ್ ಬೌಲಿಂಗ್‌ನಲ್ಲಿ ವೆಂಗ್‌ಸರ್ಕಾರ್ ಕ್ಯಾಚ್ ನಿಂದಾಗಿ ಕರ್ನಾಟಕದ ಆಟಗಾರೊಬ್ಬರಿಗೆ ಅಂಪೈರ್ ಔಟ್ ನೀಡಿದಾಗ, ಸಾಮಾನ್ಯವಾಗಿ ಅಂಪೈರ್ ನಿರ್ಣಯಕ್ಕೆ ಎಂದೂ ಕಾಯಾದ ಆ ಆಟಗಾರ ಕೆಲಕ್ಷಣ ತಮ್ಮ ಕೈಗಳನ್ನು ಸೊಂಟದ ಮೇಲೆ ಇಟ್ಟುಕೊಂಡು ಆಂಪೈರ್ ಅವರನ್ನು ದಿಟ್ಟಿಸಿ ಮೌನವಾಗಿ ನೀವು ತಪ್ಪು ನಿರ್ಣಯ ನೀಡಿದ್ದೀರಿ ಎಂದು ಸೂಚಿಸಿ ನಂತರ ಹೊರನಡೆಯುತ್ತಿದ್ದಂತೆಯೇ, ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರಲ್ಲಿ ಅಸಹನೆ ಮೂಡಿದ ಪರಿಣಾಮ ಗ್ಯಾಲರಿಯಲ್ಲಿದ್ದ ಕುರ್ಚಿಗಳೆಲ್ಲವೂ ಹಾಳಾದರೆ, ಇನ್ನೂ ಕೆಲವು ಉದ್ರಿಕ್ತ ಪ್ರೇಕ್ಷಕರು ಮೈದಾನಕ್ಕೆ ನುಗ್ಗಿ ಅಂಪೈರ್‌ಗಳನ್ನು ಹಲ್ಲೆ ಮಾಡುವ ಮಟ್ಟಕ್ಕೆ ಹೋಗಿತ್ತು.

ಆಟಗಾರನಿಗೆ ಔಟ್ ನೀಡಿದ್ದಕ್ಕಾಗಿ ಪ್ರೇಕ್ಷಕರು ನಡೆಸಿದ ದಾಂದಲೆ ಸರಿಯಲ್ಲವಾದರೂ, ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಕಲಾತ್ಮಕ, ಸಭ್ಯ ಮತ್ತು ಅಂತ್ಯಂತ ಕ್ರೀಡಾಸ್ಪೂರ್ತಿ (Sportsman Spirit)ಗೆ ಹೆಸರಾಗಿದ್ದ ಆ ಆಟಗಾರನ ಕ್ರೀಡಾಸ್ಪೂರ್ತಿ ಎಂತಹದ್ದು ಎನ್ನುವುದಕ್ಕೆ ಈ ಪ್ರಸಂಗವೇ ಸಾಕ್ಷಿಯಾಗಿದೆ. 1979-80ರಲ್ಲಿ ಇಂಗ್ಲೆಂಡ್ ಮತ್ತು ಭಾರತದ ನಡುವೆ ಸುವರ್ಣ ಮಹೋತ್ಸವ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡಿನ ಪ್ರಮುಖ ಆಟಗಾರರು ಅದಾಗಲೇ ಪೆವಿಲಿಯನ್ನಿಗೆ ಮರಳಿ ದುಸ್ಥಿತಿಯಲ್ಲಿತ್ತು. ಆಗ ಬೋಥಮ್ ಮತ್ತು ಟೇಲರ್ ಆಟವಾಡುತ್ತಿದ್ದಾಗ, ಅಂಪೈರ್ ಆವರು ಟೇಲರ್ ಅವರು ಔಟ್ ಎಂದು ತೀರ್ಮಾನಿಸಿದಾಗ, ಟೇಲರ್ ಸಹಾ ಮರುಮಾತಿಲ್ಲದೇ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗ, ಭಾರತದ ಪರ ಆ ಪಂದ್ಯದಲ್ಲಿ ಹಂಗಾಮಿ ನಾಯಕರಾಗಿದ್ದ ಆಟಗಾರನ ಆತ್ಮಸಾಕ್ಷಿಗೆ ಆ ನಿರ್ಣಯ ಒಪ್ಪಿಗೆಯಾಗದೇ, ಅವರೇ ಖುದ್ದಾಗಿ ಟೇಲರ್ ಅವರನ್ನು ಮತ್ತೆ ಆಡಲು ಅನುವು ಮಾಡಿಕೊಟ್ಟರು. ನಾಯಕನ ಕ್ರೀಡಾಸ್ಪೂರ್ತಿಗೆ ಇಡೀ ಕ್ರೀಡಾಂಗಣವೇ ಎದ್ದು ನಿಂತು ಚಪ್ಪಾಳೆ ಹೊಡೆದಿತ್ತು. ಇಂತಹ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಟೇಲರ್ ಬೋಥಮ್ ಅವರೊಂದಿಗೆ ಆಟವನ್ನು ಮುಂದುವರೆಸಿ ಅಂತಿಮವಾಗಿ ಭಾರತವನ್ನು ಸೋಲಿಸುವುದರಲ್ಲಿ ಸಫಲರಾದರು. ಪಂದ್ಯದಲ್ಲಿ ಭಾರತವೇನೂ ಸೋತರೂ ಸಜ್ಜನ ಸಭ್ಯರ ಆಟ ಎಂದೇ ಪ್ರಸಿದ್ಧಿ ಪಡೆದಿರುವ ಕ್ರಿಕೆಟ್ ಆಟವನ್ನು ಗೆಲ್ಲಿಸಿದ ಪರಿಣಾಮ ಆ ಆಟಗಾರನ ಹೃದಯ ವೈಶ್ಯಾಲ್ಯದಿಂದ ಆತನ ಹೆಸರು ಕ್ರಿಕೆಟ್ ಕ್ಷೇತ್ರದಲ್ಲಿ ಆಜರಾಮರವಾಗಿ ಉಳಿದಿದೆ.

ಹೀಗೆ ವಯಕ್ತಿಕ ಹಿತಾಸಕ್ತಿಯನ್ನು ಮರೆತು ತಂಡಕ್ಕಾಗಿ ಜೀವಮಾನವಿಡೀ ಆಪದ್ಬಾಂಧವನಾಗಿದ್ದ, ತಾನು ಸಿಡಿಸಿದ ಶತಕಗಳ ಪಂದ್ಯಗಳಲ್ಲಿ ಎಂದೂ ಭಾರತ ಸೋಲು ಬಿಡದ, ಭಾರತೀಯ ಕ್ರಿಕೆಟ್ ರಂಗ ಕಂಡ ಅತ್ಯಂತ ಕಲಾತ್ಮಕ ಆಟಗಾರನೇ ಗುಂಡಪ್ಪ ರಂಗನಾಥ್ ವಿಶ್ವನಾಥ್ (GR Vishwanath) ಅರ್ಥಾತ್ ಎಲ್ಲರ ಪ್ರೀತಿಯ ವಿಶಿ. 12 ಫೆಬ್ರವರಿ 1949ರಂದು ಭದ್ರಾವತಿಯಲ್ಲಿ ಜನಿಸಿ ವಿಶ್ವವಿಖ್ಯಾತರಾದ ವಿಶಿಯವರ ಜನ್ಮ ದಿನದಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ.

ಮಧ್ಯವವರ್ಗದ ಸಾಮಾನ್ಯ ಹಿನ್ನಲೆಯ ಕುಟುಂಬದ ವಿಶ್ವನಾಥ್ ಅವರಿಗೆ ಬಾಲ್ಯದಿಂದಲೂ ಕ್ರಿಕೆಟ್ ಆಟದ ಮೇಲೆ ಬಹಳ ಪ್ರೀತಿ ಇದ್ದ ಕಾರನ, ತಮ್ಮ ಶಾಲಾ ಮೈದಾನಗಳಲ್ಲಿ ಮತ್ತು ಮನೆಯ ಮುಂದಿನ ಬೀದಿಗಳಲ್ಲೇ ಆಟವಾಡುತ್ತಾ, ಹೊಡಿ ಬಡಿ ಕಡಿ ಎನ್ನುವುದಕ್ಕಿಂತಲೂ ಕಲಾತ್ಮಕ ಆಟವನ್ನು ರೂಡಿಸಿಕೊಂಡ ಪರಿಣಾಮ ಎಲ್ಲರ ಮನ ಸೆಳೆದು, ತಮ್ಮ ೨೦ನೇ ವಯಸ್ಸಿನಲ್ಲಿಯೇ ಅಂದಿನ ಮೈಸೂರು ರಾಜ್ಯದ ಪರವಾಗಿ ರಣಜಿ ಪಂದ್ಯಾವಳಿಗೆ ಆಯ್ಕೆಯಾದಾಗ, ಸಣ್ಣಗೆ ಕುಳ್ಳಗಿದ್ದ ಈ ವ್ಯಕ್ತಿ ಏನು ಆಡುತ್ತಾನೇ? ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ ತನ್ನ ಚೊಚ್ಚಲು ಪಂದ್ಯದಲ್ಲೇ ಆಕರ್ಷಕ ದ್ವಿಶತಕವನ್ನು ಬಾರಿಸಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಲ್ಲದೇ ತಮ್ಮ ತಾಳ್ಮೆಯುತ ಸುಂದರ ಆಟದ ಶೈಲಿ ಮತ್ತು ಸಮಯೋಚಿತ ತಂತ್ರದಿಂದ ಗಮನ ಸೆಳೆದು, ಅದರಲ್ಲೂ ಸ್ಕ್ವೈರ್ ಕಟ್ ಬಾರಿಸುವುದಲ್ಲಿ ಎತ್ತಿದ ಕೈ ಆಗಿದ್ದು ಅತ್ಯಂತ ಸ್ಟೈಲಿಶ್ ಬ್ಯಾಟ್ಸ್‌ಮನ್ ಎಂದೇ ಪ್ರಖ್ಯಾತರಾದರು.

1969-೭೦ರಲ್ಲಿ ಆಸ್ತ್ರೇಲಿಯನ್ನರು ಭಾರತ ಪ್ರವಾಸ ಮಾಡಿದ್ದ ಮೊದಲನೇ ಟೆಸ್ಟ್ ಪಂದ್ಯ ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್‌ಗಳಿಂದ ಗೆದ್ದಿತ್ತು. ಆ ಪಂದ್ಯದಲ್ಲಿ ಚಂದುಬೋರ್ಡೆಯವರ ಪ್ರದರ್ಶನ ಅಷ್ಟೇನೂ ಉತ್ತಮ ಆಗಿರದಿದ್ದ ಕಾರಣ ಕಾನ್ಪುರದ ಎರಡನೇ ಟೆಸ್ಟ್ ಪಂದ್ಯಕ್ಕೆ ಅದಾಗಲೇ ಪಾದಾರ್ಪಣೆ ಮಾಡಿದ ವರ್ಷದಲ್ಳೇ ದೇಶೀಯ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಇಪ್ಪತ್ತರ ಹರಯದ ವಿಶಿ ಮೇಲೆ ಹುಡುಗನ ಮೇಲೆ ನಾಯಕ ಪಟೌಡಿಗೆ ಅಪಾರವಾದ ವಿಶ್ವಾಸವಿರಿಸಿ ಬೋರ್ಡೆಯವರ ಸ್ಥಾನದಲ್ಲಿ ವಿಶಿಯವರಿಗೆ ಅವಕಾಶ ನೀಡುತ್ತಾರೆ. ತಂಡದ ಮೂರನೇ ವಿಕೆಟ್ ಆಗಿ ಆಶೋಕ್ ಮಂಕಡ್ ಔಟಾದಾಗ ಕ್ರೀಸಿಗೆ ಬಂದ ವಿಶ್ವನಾಥ್ ಮೊದಲ ಪಂದ್ಯ ಎಂಬ ಅಳುಕಿನಿಂದಲೋ ಏನೋ? ಮೊದಲ ಇನ್ನಿಂಗ್ಸ್ ನಲ್ಲಿ ಸೊನ್ನೆಗೆ ಔಟಾಗಿ ಸಪ್ಪೆ ಮುಖ ಹಾಕಿಕೊಂಡು ಪೆವಲಿಯನ್ ಮರಳಿದಾಗ, ಈ ಆಟಗಾರನ ಭವಿಷ್ಯ ಅಷ್ಟೇ ಎಂದೇ ಎಲ್ಲರೂ ಭಾವಿಸಿದ್ದರು.

ವಿಶಿ ಮೇಲೆ ಬಹಳ ಭರವಸೆಯನ್ನು ಇಟ್ಟುಕೊಂಡಿದ್ದ ನಾಯಕ ಪಟೌಡಿ, ಅರೇ ಇನ್ನೂ ಎರಡನೇ ಇನ್ನಿಂಗ್ಸ್ ಇದೆಯಲ್ಲಾ, ಆಗ ಶತಕ ಬಾರಿಸು ಎಂದು ಹೊಸಾ ಆಟಗಾರನಿಗೆ ಭರವಸೆ ಮೂಡಿಸಿದ್ದರು. ನಾಯಕನ ವಿಶ್ವಾಸಕ್ಕೆ ಕುಂದು ಬಾರರಂತೆ ಎರಡನೇ ಇನ್ನಿಂಗ್ಸ್ ನಲ್ಲಿ ಅಜಿತ್ ವಾಡೇಕರ್ ಅವರ ಔಟಾ ಆದ ನಂತರ ಬಂದು ಮಂಕಡ್ ಜೊತೆ ಅಮೋಘವಾಗಿ ಆಟವಾಡಿ 25 ಬೌಂಡರಿಗಳುಳ್ಳ ಅಮೋಘ 137ರನ್ನುಗಳನ್ನು ಗಳಿಸುವ ಮೂಲಕ ರಾತ್ರೋ ರಾತ್ರಿ ಪ್ರಸಿದ್ಧಿ ಪಡೆದಿದ್ದಲ್ಲದೇ, ಬ್ಯಾಟಿಂಗ್ನಲ್ಲಿ ತಮ್ಮ ಛಾಪನ್ನು ಮೂಡಿಸುವ ಮೂಲಕ ತಂಡದಲ್ಲಿ ಸ್ಥಾನವನ್ನು ಗಟ್ಟಿ ಮಾಡಿಕೊಂಡರು, ಅಕಸ್ಮಾತ್ ಬಾಲು out side the off stums ಬಿದ್ದಿತೆಂದರೆ ತಮ್ಮ ಸ್ಕ್ವೇರ್ ಕಟ್ ಮೂಲಕ ಫೀಲ್ಡರ್ಗಳು ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಚೆಂಡನ್ನು ಬೌಂಡರಿ ದಾಟಿಸುತ್ತಿದ್ದ ಪರಿ ನಿಜಕ್ಕೂ ಅವರ್ಣನೀಯ. ಹೀಗೆ ಗುಂಡಪ್ಪ ಆರ್. ವಿಶ್ವನಾಥ್ ತಮ್ಮ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಪಂದ್ಯದಲ್ಲಿ ಅಜೇಯ ದ್ವಿಶತಕ ಗಳಿಸಿದ ಮತ್ತು ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಎಪ್ಪತ್ತರ ದಶಕದಲ್ಲಿ ಭಾರತೀಯ ತಂಡಕ್ಕೆ ಮತ್ತೊಬ್ಬ ಕುಳ್ಳಾ ಮಾಸ್ಟರ್ ಗವಾಸ್ಕರ್ ಸೇರಿಕೊಂಡ ನಂತರ ಅವರಿಬ್ಬರ ಜೋಡಿ ಇಡೀ ವಿಶ್ವ ಕ್ರಿಕೆಟ್ಟಿನಲ್ಲಿ ಮಾಡಿತ್ತು ಮೋಡಿ. ವಿಶ್ವನಾಥ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಅವರಲ್ಲಿದ್ದ ಆಟವನ್ನು ಗುರುತಿಸಿದ ಗವಾಸ್ಕರ್ ಆ ಬಂಧವನ್ನು ಅನುಬಂಧವನ್ನಾಗಿಸಿಕೊಳ್ಳುವ ಸಲುವಾಗಿ ತಮ್ಮ ಸಹೋದರಿ ಕವಿತಾ ಗವಾಸ್ಕರ್ ಅವರನ್ನು 1978ರಲ್ಲಿ ವಿಶ್ವನಾಥ್ ಅವರೊಂದಿಗೆ ಮದುವೆ ಮಾಡಿಸುವ ಮೂಲಕ ಭಾವ ಭಾವಮೈದುನರಾಗಿ ಹೋದರು. ಅಚ್ಚರಿಯ ವಿಷಯವೇನೆಂದರೆ, ವಿಶಿಯವರ ಮದುವೆಯ ಸಮಯದಲ್ಲೇ ಕರ್ನಾಟಕ ರಣಜಿ ಫೈನಲ್ ಪ್ರವೇಶಿಸಿದ್ದ ಕಾರಣ, ಅವರು ಆದನ್ನು ತಪ್ಪಿಸಿಕೊಳ್ಳಬಾರದೆಂದೇ, ಅವರ ಮದುವೆಗಾಗಿಯೇ, ಫೈನಲ್ ಪಂದ್ಯದ ವೇಳಾಪಟ್ಟಿಯನ್ನು ಬಿಸಿಸಿಐ ಬದಲಾಯಿಸಿದ್ದಲ್ಲದೇ, ಮದುವೆ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ, ನೇರವಾಗಿ ಕ್ರೀಡಾಂಗಣಕ್ಕೆ ಆಡಲು ಇಳಿದ ವಿಶಿ, ಆ ಫೈನಲ್ ಪಂದ್ಯದಲ್ಲಿ 247 ರನ್ ಹೊಡೆದು ಕರ್ನಾಟಕ ರಣಜಿ ಚಾಂಪಿಯನ್ ಆಗುವಂತೆ ಮಾಡುವ ಮೂಲಕ ಆಪದ್ಭಾಂಧವ ಎಂದೇ ಪ್ರಖ್ಯಾತಿ ಪಡೆದರು.

ವಿಶ್ವನಾಥ್ ಅವರು ಆಡುತ್ತಿದ್ದ ಸಮಯದಲ್ಲಿ ವೆಸ್ಟ್ ಇಂಡೀಸ್ ನ ಆಂಡಿ ರಾಬರ್ಟ್ಸ್, ಆಸ್ಟ್ರೇಲಿಯಾದ ಡೆನಿಸ್ ಲಿಲ್ಲಿ, ಥಾಂಪ್ಸನ್ ಮುಂತಾದ ಭಯಾನಕ ವೇಗದ ಬೊಲರ್ಗಳ ಬೌನ್ಸರ್ಗಳನ್ನು ಹೆಲ್ಮೆಟ್ ಧರಿಸದೇ ಮತ್ತು ಯಾವುದೇ ರೀತಿಯಲ್ಲೂ ಮೈ ಮೇಲೆ ಬೀಳಿಸಿಕೊಳ್ಳದೇ ತಮ್ಮ ಚುರುಕಾದ ಪುಟ್ ವರ್ಕ್ ಮತ್ತು ಮಣಿಕಟ್ಟುಗಳ ಸಹಾಯದಿಂದ ಲೀಲಾಜಾಲವಾಗಿ ಬೌಂಡರಿಗೆ ಅಟ್ಟುತ್ತಿದ್ದದ್ದನ್ನು ವರ್ಣಿಸುವುದಕ್ಕಿಂತಲೂ ನೋಡಿದರೇ ಮಹದಾನಂದ (ಇಂದಿಗೂ ಅವರಾಡಿದ ಕೆಲವು ಪಂದ್ಯಗಳು ಯೂಟ್ಯೂಬ್ ನಲ್ಲಿ ಲಭ್ಯವಿದೆ) ಎಪ್ಪತ್ತು ಎಂಬತ್ತರ ದಶಕದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಕಪಿಲ್ ದೇವ್ ಆಗಮನವಾದ ನಂತರ, ಸುನಿಲ್ ಗವಾಸ್ಕರ್ ಅವರ ಶಿಸ್ತು ಮತ್ತು ತಾಳ್ಮೆಯ ಆಟ, ಕಪಿಲ್ ದೇವ್ ಅವರ ಬೌಲಿಂಗ್ ವೇಗ, ಇವರಿಬ್ಬರ ಸಮ್ಮಿಲನವೇ ಗುಂಡಪ್ಪ ವಿಶ್ವನಾಥ್ ಎಂಬ ಖ್ಯಾತಿಯನ್ನು ಪಡೆದಿತ್ತಲ್ಲದೇ, ಸ್ವತಃ ಗವಾಸ್ಕರ್ ಅವರೇ ಹೇಳುತ್ತಿದ್ದಂತಹ ಮಾತೆಂದರೆ, ನನ್ನಂತಹ ನೂರು ಗವಾಸ್ಕರ್ ಬರಬಹುದು, ಆದರೆ ವಿಶಿಯಂತಹ ಒಬ್ಬ ಆಟಗಾರ, ಭಾರತೀಯ ಕ್ರಿಕೆಟ್ ಗೆ ಬರಲಾರ ಎಂಬುದು ಇಂದಿಗೂ ಕಠೋತವಾದ ಸತ್ಯವಾಗಿದೆ. ವಿಶಿ ಕ್ರೀಸ್ ನಲ್ಲಿ ಇರುವವರೆಗೂ ಅದು ಕೇವಲ ಆಟವಾಗಿರದೇ, ಅದೊಂದು ಕವಿತೆಯಂತಿರುತ್ತಿತ್ತು. ಕಲಾತ್ಮಕವಾಗಿ ಆಟವಾಡುತ್ತಲೇ ಅಷ್ಟೇ, ವೇಗವಾಗಿ ಚಂಡನ್ನು ಬೌಂಡರಿಗೆ ಅಟ್ಟುತ್ತಿದ್ದದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ ಎನ್ನುತ್ತಾರೆ ಅವರ ಸಮಕಾಲೀನ ಆಟಗಾರರು.

ವಿಶ್ವನಾಥ್ ಅವರ ಕ್ರಿಕೆಟ್ ವೃತ್ತಿ ಜೀವನದ ವಯಕ್ತಿ ಮಹತ್ತರ ಇನ್ನಿಂಗ್ಸ್ ಗಳೆಂದರೆ

  • ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ದದ ಚೊಚ್ಚಲ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ 134 ರನ್ನುಗಳನ್ನು ಗಳಿಸಿದ್ದು.
  • 1975ರಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮದ್ರಾಸಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ವಯಕ್ತಿಯ ಹಿತಾಸಕ್ತಿಯನ್ನು ಬದಿಗೊತ್ತಿ, ಅಜೇಯ 97ರನ್ ಬಾರಿಸಿ ತಂಡಕ್ಕೆ ವಿಜಯವನ್ನು ತಂದುಕೊಟ್ಟಿದ್ದು.
  • 1981ರಲ್ಲಿ ಆಸ್ಟ್ರೇಲಿಯಾದ Melbourne Cricket Groundಬ ವೇಗದ ಪಿಚ್ ನಲ್ಲಿ 114 ರನ್ ಮೂಲಕ ಭಾರದ ಗೆಲುವಿಗೆ ಕಾರಣಗಾಗಿದ್ದಾರೆ
  • ಇನ್ನು 1981-82ರಲ್ಲಿ ಇಂಗ್ಲೇಂಡ್ ಭಾರತ ಪ್ರವಾಸದಲ್ಲಿ ಮದ್ರಾಸ್ ಟೆಸ್ಟಿನಲ್ಲಿ ತಾಳ್ಮೆಯಿಂದ ತಮ್ಮ ವಯಕ್ತಿಯ ಗರಿಷ್ಟ ಮೊತ್ತವಾದ 222 ರನ್ ಗಳಿಸಿದ್ದದ್ದನ್ನು ಮೊತ್ತ ಮೊದಲಬಾರಿಗೆ ಟಿವಿಯಲ್ಲಿ ನೋಡಿದ ಅನುಭವ ನಿಜಕ್ಕೂ ಬಣ್ಣಿಸಲಸದಳವಾಗಿದೆ.

ಇನ್ನು ತಂಡದ ಭಾಗವಾಗಿ 1976 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಪೋರ್ಟ್ ಆಫ್ ಸ್ಪೇನ್ ನಲ್ಲಿ ನಡೆದ 3 ನೇ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 403 ರ ಗುರಿ ಯಶಸ್ವಿಯಾಗಿ ತಲುಪಲು ಗವಾಸ್ಕರ್ 102 ಮತ್ತು ವಿಶ್ವನಾಥ್ 112 ರನ್ ಗಳಿಸಿದರೆ, ಮೊಹಿಂದರ್ ಅಮರ್ ನಾಥ್ 85, ಮತ್ತೊಬ್ಬ ಕನ್ನಡಿಗೆ ಬ್ರಿಜೇಶ್ ಪಟೇಲ್ ಅಜೇಯ 49 ರನ್ನುಗಳಿಸಿ, ತಂಡದ ಮೊತ್ತವನ್ನು 406 ಏರಿಸಿ ಭಾರತಕ್ಕೆ ಜಯ ತಂದುಕೊಡುವ ಮೂಲಕ ಬೃಹತ್ ಮೊತ್ತ ಚೇಸ್ ಮಾಡಿದ ದಾಖಲೆ ಸುಮಾರು 27 ವರ್ಷಗಳ ಕಾಲ ಅಳಿಯದೇ ಇದ್ದು. 2003ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ ಆ ದಾಖಲೆಯನ್ನು ಮುರಿದದ್ದು ಈಗ ಇತಿಹಾಸ.

1969 ರಿಂದ 1983ರ ವರೆಗೆ 91 ಟೆಸ್ಟ್ ಪಂದ್ಯಗಳಲ್ಲಿ, 14 ಶತಕಗಳು ಮತ್ತು 35 ಅರ್ಧಶತಕಗಳನ್ನು ಒಳಗೊಂಡಂತೆ 41.93 ಸರಾಸರಿಯಲ್ಲಿ 6,080 ರನ್ ಗಳಿಸಿದ್ದರೆ, ಅವರ ಸಮಯದಲ್ಲಿ ಆಗಷ್ಟೇ ಪ್ರಾಭಲ್ಯಮಾನಕ್ಕೆ ಬರುತ್ತಿದ್ದ ಏಕ ದಿನ ಪಂದ್ಯಗಳ್ಲಿ ಭಾರತ ಪರ 25 ಏಕದಿನ ಪಂದ್ಯಗಳಲ್ಲಿ 439 ರನ್ ಗಳಿಸಿದ್ದಾರೆ, ಅದರಲ್ಲಿ ಎರಡು ಅರ್ಧ ಶತಕಗಳಿದ್ದು 75 ರನ್ನುಗಳು ಅಧಿಕ ಮೊತ್ತವಾಗಿದೆ. ಅಪರೂಪಕ್ಕೊಮ್ಮೆ ಬಲಗೈ ಆಫ್ ಬ್ರೇಕ್ ಬೌಲಿಂಗ್ ಮಾಡುತ್ತಿದ್ದ ವಿಶಿ, ಕೆಲವೊಮ್ಮೆ ವಿಕೆಟ್ ಕೀಪಿಂಗ್ ಸಹಾ ಮಾಡಿದ್ದಾರೆ. 1983ರಲ್ಲಿ ಇಂಗ್ಲೇಂಡಿನಲ್ಲಿ ನಡೆದ ಕಪಿಲ್ ದೇವ್ ನಾಯಕತ್ವದಲ್ಲಿ ಅಚ್ಚರಿಯಂತೆ ಚೊಚ್ಚಲು ವಿಶ್ವಕಪ್ ತಂಡದ ಭಾಗವಾಗದೇ ಹೋದದ್ದಕ್ಕೆ ಬಹಳಷ್ಟು ಬೇಸರ ವ್ಯಕ್ತಪಡಿಸಿದ್ದ ವಿಶಿ, ಅಕಸ್ಮಾತ್ ಆಡಲು ಕರೆ ಬರಬಹುದು ಎಂದು ವಯಕ್ತಿಯವಾಗಿ ಇಂಗ್ಲೇಂಡಿಗೆ ಹೋಗಿ ವಿಶ್ವಕಪ್ ಪಂದ್ಯಾವಳಿಗಳನ್ನು ವೀಕ್ಷಿಸಲು ಹೋಗಿದ್ದದ್ದು ವಿಶೇಷವಾಗಿತ್ತು.

ಸುನಿಲ್ ಗವಾಸ್ಕರ್ ಅವರ ಸಹೋದರಿ ಕವಿತಾ ಮತ್ತು ಕರ್ನಾಟಕ ಪ್ರೀಮಿಯರ್ ಪಂದ್ಯಾವಳಿಗಳಲ್ಲಿ ಕೆಲ ಪಂದ್ಯಗಳನ್ನು ಆಡಿದ ಮಗ ದೈವಿಕ್ ನೊಂದಿಗೆ ಬೆಂಗಳೂರಿನ ಜೆ ಪಿ ನಗರದಲ್ಲಿ ವಾಸಿಸುತ್ತಿದ್ದಾರೆ. 1971 ರಲ್ಲಿಯೇ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ ವಿಶ್ವನಾಥ್ ಅವರ ಕೊಡುಗೆಯನ್ನು ಶಾಶ್ವತವಾಗಿ ಅಜರಾಮರವಾಗಿಸುವ ಸಲುವಾಗಿ 2011ರ ಜನವರಿ 18ರಂದು ಅವರ ಮನೆಯ ಹತ್ತಿರವೇ ಜೆ.ಪಿ. ನಗರರದ ಬನ್ನೇರುಘಟ್ಟ ರಸ್ತೆ ಮತ್ತು ಕನಕಪುರ ರಸ್ತೆ ನಡುವೆ ಸಂಪರ್ಕಿಸುವ 100 ಅಡಿ ರಿಂಗ್ ರಸ್ತೆಯಲ್ಲಿ (ಜೆ.ಪಿ. ನಗರ 15 ನೇ ಕ್ರಾಸ್ ಜಂಕ್ಷನ್‌ನಲ್ಲಿ 6 ನೇ ಹಂತ/2 ನೇ ಹಂತದ ಗಡಿಯ ಬಳಿ) ಅಂದಿನ ಮುಖ್ಯಮಂತ್ರಿಗಳಾದ ಯಡೆಯೂರಪ್ಪನವರು ಅಂಡರ್‌ಪಾಸ್ ಉದ್ಘಾಟನೆ ಮಾಡಿದರು.

ಕನ್ನಡ ನಾಡಿನ ಹೆಮ್ಮೆಯ ಕಂದ ವಿಶ್ವನಾಥ್ ಅವರು ಹಾಕಿಕೊಟ್ಟ ಮಾರ್ಗವನ್ನು ಮುಂದೆ ರಾಹುಲ್ ದ್ರಾವಿಡ್ ಮತ್ತು ಕೆ. ಎಲ್ ರಾಹುಲ್ ಇಂದಿಗೂ ಸಹಾ ಮುಂದುವರೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಕ್ರಿಕೆಟ್ ನಿಂದ ನಿವೃತ್ತಿ ಆದ ನಂತರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಹಿರಿಯ ಅಧಿಕಾರಿಗಳಾಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ ನಂತರ  ಕೆಲ ಕಾಲ ಭಾರತೀಯ ತಂಡದ ಆಯ್ಕೆದಾರಾಗಿ ಅನೇಕ ಆಟಗಾರರನ್ನು ಭಾರತಕ್ಕೆ ಪರಿಚಯಿಸಿದ್ದಲ್ಲದೇ, ಐಸಿಸಿ ಮ್ಯಾಚ್ ರೆಫ್ರಿ ಆಗಿಯೂ ಕಾರ್ಯನಿರ್ವಹಿಸಿ ಈಗ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ. ಕೆಲ ಕಾಲ ಐಸಿಸಿ ಮ್ಯಾಚ್ ರೆಫ್ರಿ ಆಗಿ ಕಾರ್ಯನಿರ್ವಹಿಸಿ ಈಗ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ. ಕೆಲವೊಮ್ಮೆ ವಿಜಯ್ ಭಾರದ್ವಾಜ್ ಮತ್ತು ಜಾನಿಯವರ ಒತ್ತಾಸೆಯ ಮೇರೆಗೆ ಐಪಿಲ್ ಪಂದ್ಯಾವಳಿಯಗಳಲ್ಲಿ ಅಗೊಮ್ಮೆ ಈಗೊಮ್ಮೆ ತಜ್ಞ ವೀಕ್ಷಕ ವಿವರಣೆಗಾರರಾಗಿ ತಮ್ಮ ಅಪಾರವಾದ ಅನುಭವವನ್ನು ಹಂಚಿಕೊಳ್ಳುವ ಮೂಲಕ ವಿಶ್ರಾಂತ ಜೀವನ ನಡೆಸುತ್ತಿರುವ ಗುಂಡಪ್ಪ ರಂಗನಾಥ್ ವಿಶ್ವನಾಥ್ ಅವರ ಜೀವನ ನೂರ್ಕಾಲ ಹಸನಾಗಿರಲಿ ಎಂದು ನಾವೂ ನೀವು ಹರಸೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಕನ್ನಡಿಗರ ಹೆಮ್ಮೆ ಆಪತ್ಬಾಂದವ ಜಂಟಲ್ ಮೆನ್ ಆಟಗಾರ ಗುಂಡಪ್ಪ ವಿಶ್ವನಾಥ್ ಅವರ ಬಗ್ಗೆ ಮಾಜಿ ಕ್ರಿಕೆಟ್ ಗ MAK Patudi ಅವರ ಸಂಬಂಧಿ ಬರೆದಿರುವ ಲೇಖನ 👇

ಗುಂಡಪ್ಪ ವಿಶ್ವನಾಥ್ 14 ಶತಗಳಲ್ಲಿ ಯಾವುದು ಸೊತಿಲ್ಲ, ಒಂದೊಂದು ಶತಕವು ವಜ್ರದಂತೆ ಇದೆ ಅಂದಿನ ದಿನಗಳಲ್ಲಿ ಪಿಚ್ ಕವರ್ ಮಾಡ್ತಾಇರಲಿಲ್ಲ ಅನ್ನಿಸುತ್ತ ಜೊತೆಗೆ ಹೆಲ್ಮೆಟ್ ಇರಲಿಲ್ಲ ಅಂದಿನ ದಾಂಡಿಗ ರಾಬರ್ಟ್ಸ್, ಹೋಲ್ಡರ್140kmph ಅಧಿಕವಾಗಿ ಎಸೆಯತ್ತಿದ್ದರು ಆದರೂ ಅವರನ್ನ ಲೀಲಾಜಾಲವಾಗಿ ಎದುರಿಸುತ್ತಿದ್ದರು. 50 ವರ್ಷ ತುಂಬಿರುವುದರಿಂದ ಈ ಲೇಖನ ( ಗೋಲ್ಡನ್ ಎಜ್ ಆಗಿದೆ)

Leave a comment