ಅಧಿಕಾರವಿಲ್ಲದೇ ಕಂಗೆಟ್ಟಿದ್ದ ಕಾಂಗ್ರೇಸ್ ಪಕ್ಷ, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರಕ್ಕೆ ಬರಲೇ ಬೇಕೆಂದರೆ ಜನರ ಕಣ್ಣಿಗೆ ಹೊಸದಾಗಿ ಮಣ್ಣೆರಚಬೇಕು ಎಂದು ನಿರ್ಧರಿಸಿ, ಮೊದಲು ಅಡಳಿತಾರೂಢ ಬಿಜೆಪಿಯದ್ದು 40% ಕಮಿಷನ್ ಸರ್ಕಾರ ಎಂದು ಬಿಂಬಿಸುವುದರಲ್ಲಿ ಸಫಲರಾದ ನಂತರ ಪಕ್ಕದ ತಮಿಳು ನಾಡು ಮತ್ತು ದೂರದ ದೆಹಲಿಯಲ್ಲಿ ಅಧಿಕಾರಕ್ಕೆ ಬರಲು ಅಲ್ಲಿನ ಸರ್ಕಾರಗಳು ನೀಡಿದ ಉಚಿತ ಆಮೀಷಗಳನ್ನೇ ಯಥಾವತ್ ಕರ್ನಾಟಕದಲ್ಲೂ ಜಾರಿಗೆ ತರಲು ನಿರ್ಧರಿಸಿ ಅದರ ಪ್ರಕಾರ, ಅನ್ನ ಭಾಗ್ಯ ಯೋಜನೆಯಡಿ, ಐದು ಕೆಜಿ ಅಕ್ಕಿಯ ಬದಲಾಗಿ ಮಾಸಿಕ 10 ಕೆಜಿ ಅಕ್ಕಿ, ಗೃಹ ಜ್ಯೋತಿ ಭರವಸೆಯಡಿ ರಾಜ್ಯದ ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್, ಶಕ್ತಿ ಯೋಜನೆಯಡಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ, ಗೃಹ ಲಕ್ಷ್ಮಿ ಗ್ಯಾರಂಟಿ ಅಡಿಯಲ್ಲಿ ರಾಜ್ಯದ ಪ್ರತೀ ಕುಟುಂಬದ ಮಹಿಳಾ ಮುಖ್ಯಸ್ಥೆಗೆ ಪ್ರತೀ ತಿಂಗಳು ರೂ 2,000 ಮಾಶಾಸನವಲ್ಲದೇ, ಯುವ ನಿಧಿ ಯೋಜನೆಯಡಿಯಲ್ಲಿ ನಿರುದ್ಯೋಗಿ ಡಿಪ್ಲೊಮಾ ಡಿಪ್ಲೊಮಾದಾರರಿಗೆ ಎರಡು ವರ್ಷಗಳವರೆಗೆ ತಿಂಗಳಿಗೆ ರೂ 1,500/- ಮತ್ತು ಪದವೀಧರರು ತಿಂಗಳಿಗೆ ರೂ 3,000/- ಭತ್ಯೆ ನೀಡುವುದಾಗಿ ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರತೀ ಮನೆ ಮನೆಗೂ ಗ್ಯಾರಂಟಿ ಕಾರ್ಡ್ ನೀಡಿದ್ದನ್ನೇ ನಂಬಿದ ಕರ್ನಾಟಕದ ಜನರು 136 ಕಾಂಗ್ರೇಸ್ ಶಾಸಕರನ್ನು ಆಯ್ಕೆ ಮಾಡಿದರು.
ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ನುಡಿದಂತೆ ನಡೆಯುತ್ತೇವೆ ಎಂದು ಘೋಷಿಸಿದ್ದ ಕಾಂಗ್ರೇಸ್ ಪಕ್ಷಕ್ಕೆ, ಯಾವುದೇ ಪೂರ್ವ ರೀತಿಯ ತಯಾರಿಯಿಲ್ಲದೇ, ಅಧಿಕಾರಕ್ಕೆ ಬಂದಾಗ ನೋಡಿಕೊಳ್ಳೋಣ ಎಂಬ ಉಡಾಫೆಯಲ್ಲಿ ನೀಡಿದ್ದ ಗ್ಯಾರಂಟಿಗಳನ್ನು ಜಾರಿ ಮಾಡುವುದು ಅಷ್ಟು ಸುಲಭವಲ್ಲಾ ಎಂದು ಅರಿವಾಗುತ್ತಿದ್ದಂತೆಯೇ ಒಂದೊಂದೇ ವರಾತವನ್ನು ತೆಗೆಯಲಾರಂಭಿಸಿದರು. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಅತ್ತೇ ಮನೆಗೆ ಹೋಗಬಹುದು, ತವರು ಮನೆಗೆ ಹೋಗಬಹುದು ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಉಚಿತ ಬಸ್ ನಲ್ಲಿ ಪ್ರಯಾಣಿಸಲು ಮಹಿಳಾ ಮಣಿಗಳ ನೂಕುನುಗ್ಗಲು ಒಬ್ಬರ ಜಡೆ ಮತ್ತೊಬ್ಬರು ಹಿಡಿಕೊಂಡು ಶಂರಪರ ಕಿತ್ತಾಡುತ್ತಿದ್ದದ್ದನ್ನು ಕಂಡು ಆರಂಭದಲ್ಲಿ ಹೈರಾಣಾಗಿ ಹೋಗಿದ್ದರು. ಉಚಿತವಾಗಿ ಪ್ರಯಾಣಿಸುವ ಹೆಣ್ಣು ಮಕ್ಕಳು ಆರಾಮಾಗಿ ಕಾಲು ಮೇಲೆ ಕಾಲು ಹಾಕಿಕೊಂಡು ಹೋಗುವಂತಾದರೆ, ದುಡ್ಡು ಕೊಟ್ಟು ಟಿಕೆಟ್ ಪಡೆದ ಗಂಡಸರು ನಿಂತು ಕೊಂಡು ಹೋಗಬೇಕು ಎಂಬ ಪರಿಸ್ಥಿತಿಯಿಂದಾಗಿ ಸರ್ಕಾರಕ್ಕೆ ಹಿಡಿ ಶಾಪ ಹಾಕತೊಡಗಿದರು.
ಚುನಾವಣಾ ಪ್ರಚಾರದ ಸಮಯದಲ್ಲಿ ಏ ಕಾಕಾ ಪಾಟೀಲ್ ನಿನಗೂ ಫ್ರೀ, ಏ ಮಹದೇವಪ್ಪ ನಿನಗೂ 200 ಯೂನಿಟ್ ಫ್ರೀ ಹೇಳಿದ್ದ ಸಿದ್ದರಾಮಯ್ಯನವರು ಅತ್ತೂ ಕರೆದು ಐತಣ ಮಾಡಿಸಿಕೊಂಡರಂತೆ ಎನ್ನುವಂತೆ ಅಳುದೂ ತೂಗೀ ಅದೇನೋ ಲೆಖ್ಖಾಚಾರ ಹಾಕಿ ಮೂಗಿಗೆ ತುಪ್ಪಾ ಸವರಿದಂತೆ ಉಚಿತ ವಿದ್ಯುತ್ ಕೊಡಲಾರಂಭಿಸಿದರೆ, ಮಹಿಳೆಯರಿಗೆ ತಿಂಗಳಿಗೆ ರೂ 2,000 ಕೊಡುವ ಗೃಹ ಲಕ್ಷ್ಮಿ ಯೋಜನೆ ಟೇಕಾಫ್ ಆಗುವುದಕ್ಕೇ ಸಮಯ ತೆಗೆದುಕೊಂಡು ನಂತರ ಒಂದು ತಿಂಗಳು ಬಂದರೆ ಬಂದಿತು ಇಲ್ಲದಿದ್ದರೇ ಇಲ್ಲಾ ಎನ್ನುವಂತಾಗಿದ್ದು, ಅದರಲ್ಲೂ ಎರಡು ತಿಂಗಳುಗಳ ಹಣ ಕೊಡದೇ ಉಳಿಸಿಕೊಂಡಿದ್ದೂ ಅಧಿವೇಷನದಲ್ಲಿ ಚರ್ಚೆಗೆ ಬಂದು ಮಂತ್ರಿಗಳಾದ ಹೆಬ್ಬಾಳ್ಕರ್ ಮತ್ತು ಮುಖ್ಯಮಂತ್ರಿಗಳ ಮಾನಾ ಹರಾಜಾಕಿದ್ದಂತೂ ಸುಳ್ಳಲ್ಲಾ.
ಇನ್ನು ಅತ್ತು ಕೇಜಿ ಅಕ್ಕಿ ಬೇಕಾ ಬೇಡ್ವಾ ಎಂದಿದ್ದ ಸಿದ್ದು, ಅಧಿಕಾರಕ್ಕೆ ಬಂದ ತಕ್ಷಣವೇ ಅದಾಗಲೇ ಕೇಂದ್ರ ಸರ್ಕಾರ ನೀಡುತ್ತಿದ್ದ 5 KG ಅಕ್ಕಿಯ ಜೊತೆಗೆ ಮತ್ತೆ 5 KG ಅಕ್ಕಿ ಕೊಡಲಾಗದೇ ಚಡಪಡಿಸಿ ಕೆಲವು ತಿಂಗಳುಗಳ ಕಾಲ ಅಕ್ಕಿಯ ಬದಲಾಗಿ ರೂ 170/- ಹಣವನ್ನು ಅಕೌಂಟಿಗೆ ಹಾಕಿ ಈಗ ಅಕ್ಕಿ, ಬೇಳೆ ಎಣ್ಣೆ, ಸಿರಿಧಾನ್ಯ ಹೀಗೆ ಸಿಕ್ಕಪಕ್ಕಿದ್ದನ್ನುಕೊಟ್ಟು ಅಪಹಾಸ್ಯಕ್ಕೆ ಈಡಾಗಿದೆ. ಇನ್ನು ಯುವ ನಿಧಿ ಯೋಜನೆಯ ಫಲಾನುಭವಿಗಳು ಯಾರು? ಎಂಬುದೇ ಇಂದಿಗೂ ಯಾರಿಗೂ ಗೊತ್ತಿಲ್ಲಾ
ಒಟ್ಟಿನಲ್ಲಿ ಜನರು ಕೇಳದೇ ಹೊದರೂ, ಕೇವಲ ತಮ್ಮ ಅಧಿಕಾರದ ತೆವಲಿಗಾಗಿ ಈ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕವಾಗಿ ₹45,000 ಕೋಟಿಕೂ ಅಧಿಕ ವೆಚ್ಚ ತಗುಲುತ್ತಿದ್ದು ಇದು ಖಂಡಿತವಾಗಿಯೂ ರಾಜ್ಯದ ಬೊಕ್ಕಸಕ್ಕೆ ತುಂಬಲಾಗದ ಆರ್ಥಿಕ ಹೊರೆಯಾಗಿದೆ ಎಂಬುದನ್ನು ಆರ್ಥಿಕ ತಜ್ಞರೇಕೆ, ಖುದ್ದು ಕಾಂಗ್ರೇಸ್ ಸರ್ಕಾರದ ಅನೇಕ ಮಂತ್ರಿಗಳು ಮತ್ತು ಶಾಸಕರೇ ಹೇಳುತ್ತಿದ್ದಾರೆ. ಕಾಂಗ್ರೆಸ್ ಶಾಸಕ ಎಚ ಆರ್ ಗವಿಯಪ್ಪ ಅವರು ಗ್ಯಾರಂಟಿ ಯೋಜನೆ ಬಗ್ಗೆ ಅಪಸ್ವರ ಎತ್ತಿದ್ದರು. ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಗವಿಯಪ್ಪ ಅವರು ಗ್ಯಾರಂಟಿ ಯೋಜನೆಗಳಿಂದ ಆಶ್ರಯ ಮನೆಗಳು ಸಿಗುತ್ತಿಲ್ಲ, ಹಾಗಾಗಿ ಗ್ಯಾರಂಟಿ ಯೋಜನೆಗಳಿಗೆ ಕಡಿವಾಣ ಹಾಕಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದರು. ಅದೇ ರೀತಿಯಲ್ಲಿ ಉತ್ತರ ಕರ್ನಾಟಕದ ದಾಂಡೇಲಿಯಲ್ಲಿ ಮಾತನಾಡಿದ್ದ ಆರ್ ವಿ ದೇಶಪಾಂಡೆ ನಮ್ಮ ಕಾಂಗ್ರೆಸ್ ಸರ್ಕಾರ ತಂದಿರುವ ಉಚಿತ ಯೋಜನೆ ಶಕ್ತಿಯಿಂದಾಗಿ ಎಲ್ಲಾ ಬಸ್ ಗಳಲ್ಲಿಯೂ ಮಹಿಳೆಯೇ ಇದ್ದು, ಈ ಸರ್ಕಾರಿ ಬಸ್ ಗಳಲ್ಲಿ ನಾಲ್ಕು ಗಂಡಸರು ಹೋಗುವುದೇ ಕಷ್ಟವಾಗಿದೆ ಎಂದು ಲೇವಡಿ ಮಾಡಿದ್ದರು.
ಇಷ್ಟೆಲ್ಲಾ ಅಪಸವ್ಯಗಳ ನಡುವೆಯೂ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲಾ ಎನ್ನುವಂತೆ ಸಿಎಂ ಸಿದ್ದರಾಮಯ್ಯ ಅವರು ಮಾತ್ರಾ, ಗ್ಯಾರಂಟಿ ಎನ್ನುವುದು ಕರ್ನಾಟಕ ರಾಜ್ಯದ ಜನಪ್ರಿಯ ಮಾಡಲ್ ಆಗಿದ್ದು, ದೇಶಾದ್ಯಂತ ಇದೇ ಮಾಡಲನ್ನು ಬಹುತೇಕ ಮುಖ್ಯಮಂತ್ರಿಗಳು ಅಳವಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಪದೇ ಪದೇ ಹೇಳುವ ಮೂಲಕ ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ನಡೆಸುತ್ತಿದ್ದಾರೆ.
ಆದರೆ ಮುಖ್ಯಮಂತ್ರಿಗಳ ಈ ಮಾತಿಗೆ ಸಡ್ಡು ಹೊಡೆಯುವಂತೆ ಉಪಮುಖ್ಯಮಂತ್ರಿ ಡಿಕೆಶಿ ಅವರು ಬೆಂಗಳೂರಿನಲ್ಲಿ ಕುಸುಮ ಸಂಜೀವಿನಿ ಕಾರ್ಯಕ್ರಮದ ಉದ್ಘಾಟನಾ ಸಮಯದಲ್ಲಿ ಮಾತನಾಡುತ್ತಾ, ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರಕ್ಕೆ ಹೊರೆ ಉಂಟಾಗಿದೆ. ಹಾಗಾಗಿ ಮೋದಿ ಅವರ ಕೋರಿಕೆಯ ಮೇರೆಗೆ ಗ್ಯಾಸ್ ಸಬ್ಸಿಡಿಯನ್ನು ಜನರು ಬಿಟ್ಟು ಕೊಟ್ಟಂತೆ, ಶ್ರೀಮಂತರು ಅಗತ್ಯವಿರುವ ಜನರ ಹಿತದೃಷ್ಟಿಯಿಂದ ಈ ಕೂಡಲೇ, ಗ್ಯಾರಂಟಿ ಯೋಜನೆಯನ್ನು ಪಡೆಯುವುದನ್ನು ಬಿಟ್ಟುಕೊಟ್ಟಲ್ಲಿ ಸರ್ಕಾರಕ್ಕೆ ಅನುಕೂಲವಾಗುತ್ತದೆ ಎಂದು ಕೇಳಿಕೊಂಡಿದ್ದಾರೆ.
ಅದೇ ರೀತಿಯಾಗಿ ವಿಜಯಪುರದ ಆಲಮಟ್ಟಿಯಲ್ಲಿ ಮಾಧ್ಯಮಗಳೊಂದಿಗೆ ಸಚಿವ ಎಂ.ಬಿ ಪಾಟೀಲ್ ಅವರು ಮಾತನಾಡುವಾಗ ಶ್ರೀಮಂತರು ಸ್ವಯಂ ಪ್ರೇರಿತರಾಗಿ ಗ್ಯಾರಂಟಿ ಯೋಜನೆ ಲಾಭ ಪಡೆಯೋದು ಬಿಡಬೇಕು ಎಂದು ಹೇಳುವ ಮೂಲಕ ಅಪರೂಪಕ್ಕೆ ಅವರ ರಾಜಕೀಯ ವಿರೋಧಿ ಡಿಕೆ ಸುರೇಶ್ ಆವರು ನೀಡಿದ್ದ ಶ್ರೀಮಂತರು ಗ್ಯಾರಂಟಿ ತೆಗೆದುಕೊಳ್ಳುತ್ತಿದ್ದರೆ ಅದು ತಪ್ಪು ಎನ್ನುವ ಹೇಳಿಕೆಯನ್ನು ಸಮರ್ಥಿಸಿಕೊಂದಿದ್ದಾರೆ. ಹಾಗೇ ಮಾತು ಮುಂದುವರೆಸಿದ ಪಾಟೀಲರು, ಸ್ವಯಂ ಪ್ರೇರಿತರಾಗಿ ಶ್ರೀಮಂತರು ಗ್ಯಾರಂಟಿ ಯೋಜನೆ ಲಾಭ ಪಡೆಯೋದು ಬಿಡಬೇಕು ಅಂತ ನಾನೂ ಒತ್ತಾಯಿಸುತ್ತೇನೆ. ಅರ್ಹ ಬಿಪಿಎಲ್ ಕುಟುಂಬದವರು ಮಾತ್ರಾ ಗ್ಯಾರಂಟಿ ಯೋಜನೆ ತೆಗೆದುಕೊಳ್ಳಲಿ. ಎಂದಿದ್ದಾರೆ.
ಹೀಗೆ ಕಾಂಗ್ರೇಸ್ ಶಾಸಕರುಗಳು, ಮಂತ್ರಿಗಳು ಅಧಿಕಾರಕ್ಕೆ ಬಂದ ಸರಿ ಸುಮಾರು ಮೂರು ವರ್ಷಗಳಲ್ಲಿ ಗ್ಯಾರೆಂಟಿ ಯೋಜನೆಗಳ ಕುರಿತಾಗಿ ಮಾತಾಡುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಯಿಸಿರುವ ಜಾಗೃತ ಕನ್ನಡಿಗರು, ಯಾವುದೇ ಕನ್ನಡಿಗರೂ ನಿಮ್ಮ ಬಳಿ ಬಂದು ನಮಗೆ ಉಚಿತ ಯೋಜನೆಗಳನ್ನು ಕೊಡಿ ಎಂದು ಕೇಳಿರಲಿಲ್ಲ. ನಿಮ್ಮ ಅಧಿಕಾರದ ತೆವಲಿಗಾಗಿ ದಿಕ್ಕು ದೆಸೆಯಿಲ್ಲದೇ, ಯಾವುದೇ ಮುಂದಾಲೋಚನೆ ಇಲ್ಲದೇ, ಗ್ಯಾರೆಂಟಿಗಳನ್ನು ಘೋಷಿಸುವ ಮೂಲಕ ಜನರನ್ನು ಮರಲು ಮಾಡಿ ಅಧಿಕಾರಕ್ಕೆ ಬಂದ್ದು ಗ್ಯಾರೆಂಟಿ ಹೊರೆಯನ್ನು ತಾಳಲಾಗದೇ ಬಸವಳಿದಿದ್ದೀರಿ. ಹಾಗಾಗಿ, ನಮಗೆ ಗ್ಯಾರೆಂಟಿಗಳನ್ನು ಕೊಡುವುದಕ್ಕೆ ಯೋಗ್ಯತೆ ಇಲ್ಲ, ನಮ್ಮ ಕೈ ಯಲ್ಲಿ ಏನೂ ಕಿಸಿಯೋದಿಕ್ಕೆ ಆಗ್ತಾ ಇಲ್ಲ. ರಾಜ್ಯದ ಅಭಿವೃದ್ದಿಗೆ ದುಡ್ಡಿಲ್ಲ ಅಂತ ಧೈರ್ಯವಾಗಿ ಜನರ ಮುಂದೆ ಹೇಳಿ ಗ್ಯಾರೆಂಟಿಗಳನ್ನು ನಿಲ್ಲಿಸಿಬಿಡಿ. 136-140 ಶಾಸಕರ ಬೆಂಬಲ ಕೊಟ್ಟರೂ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಸಿದ್ದು, ಡಿಕೆಶಿ, ಪರಮೇಶ್ವರ್, ಜಾರಕೀಹೊಳೆ ಅವರ ಬಣಗಳು ಪರಸ್ಪರ ಆಂತರಿಕವಾಗಿ ಕಿತ್ತಾಡುತ್ತಿರುವದಿಂದ ಸರ್ಕಾರ ಇದ್ದೂ ಇಲ್ಲವಾಗಿದಂತಿದೆ. ಅದೂ ಅಲ್ಲದೇ, ಹೇಗೂ ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬರುವುದಿಲ್ಲವಾದ್ದರಿಂದ ಈಗ ಗ್ಯಾರೆಂಟಿ ನಿಲ್ಲಿಸಿದರೂ ಹೆಚ್ಚಿನ ಪರಿಣಾಮ ಆಗದು ಎನ್ನುತ್ತಿದ್ದಾರೆ.
ಸುಖಾ ಸುಮ್ಮನೇ ಅಧಿಕಾರಕ್ಕೇರಲು, ಮುಗ್ಧ ಜನರನ್ನು ಮೋಸ ಮಾಡುವ ಸಲುವಾಗಿಯೇ ತಂದ ಈ ಗ್ಯಾರೆಂಟಿಗಳ ಕುರಿತಾಗಿ ಈಗ ದೆಹಲಿಯ ಉಚ್ಚ ನ್ಯಾಯಾಲಯವೂ ಸಹಾ ಕಿಡಿ ಕಾರಿದ್ದು, ಚುನಾವಣಾ ಸಮಯದಲ್ಲಿ ಬಗೆ ಬಗೆಯ ಉಚಿತಗಳ ಆಕರ್ಷಕ ಯೋಜನೆಗಳು(ಫ್ರೀ ಬೀಜ್) ನೀಡುವುದು ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ. ದೇಶಾದ್ಯಂತ ಅನೇಕ ರಾಜ್ಯಗಳು ಇದರಿಂದಾಗಿ ಆದಾಯದ ಕೊರತೆಯನ್ನು ಎದುರಿಸುತ್ತಿದ್ದರೂ, ಪಕ್ಷಾತೀತವಾಗಿ ರಾಜ್ಯಗಳ ಅಭಿವೃದ್ಧಿಯನ್ನು ಕಡೆಗಣಿಸಿ ಉಚಿತ ಕೊಡುಗೆಗಳನ್ನು ನೀಡುತ್ತಿರುವುದು ಅಪಾಯಕಾರಿ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರಿದ್ದ ಪೀಠ ಹೇಳಿದೆ.
ಗ್ಯಾರೆಂಟಿಗಳಿಗೆ ಹಣ ಒದಗಿಸುವುದೇ ಸಿದ್ದರಾಮಯ್ಯನವರಿಗೆ ಕಷ್ಟವಾಗಿ ಕೋಟಿ ಕೋಟಿ ಸಾಲ ಮಾಡುತ್ತಿರುವಾಗ, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತೆ ಸರ್ಕಾರದ 5 ಪ್ರಮುಖ ಗ್ಯಾರಂಟಿಗಳಾದ ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ, ಶಕ್ತಿ, ಅನ್ನಭಾಗ್ಯ ಸಮರ್ಪಕ ಅನುಷ್ಠಾನ, ಮೇಲ್ವಿಚಾರಣೆ ಮತ್ತು ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸಿಸಿದ್ದು, ರಾಜ್ಯ ಮಟ್ಟದ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ, ಐವರು ಉಪಾಧ್ಯಕ್ಷರುಗಳಿಗೆ ರಾಜ್ಯ ಸಚಿವ ಸ್ಥಾನಮಾನ ಮಾನ ನೀಡಿರುವುದಲ್ಲದೇ,ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಿತಿಗಳ ಸದಸ್ಯರುಗಳಿಗೂ ಸರ್ಕಾರದ ಬೊಕ್ಕಸದಿಂದ ನಿಗಧಿತ ಸಂಬಳವನ್ನು ನೀಡುವ ಮೂಲಕ ಈ ಸಮಿತಿಗಳು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಗಂಜಿ ಕೇಂದ್ರಗಳಾಗಿರುವುದು ಆಘಾತಕಾರಿಯಾಗಿದೆ. ಈ ಸಮಿತಿಗಳ ಸದಸ್ಯರಿಗೆ ಸಂಪುಟ ದರ್ಜೆ ಸ್ಥಾನಮಾನ ಮತ್ತು ಗೌರವಧನ ನೀಡುವುದು ಸಾರ್ವಜನಿಕ ಹಣದ ದುರುಪಯೋಗ ಎಂದು ವಿರೋಧ ಪಕ್ಷಗಳು ಮತ್ತು ಸಾಮಾನ್ಯ ಪ್ರಜೆಗಳು ಆಕ್ಷೇಪ ಎತ್ತಿದರೂ, ಅದೆಕ್ಕೆಲ್ಲ ತಲೆ ಕೆಡೆಸಿಕೊಳ್ಳದೇ, ತಾನು ನಡೆದದ್ದೇ ದಾರಿ ಎನ್ನುವಂತೆ ಈ ಸಿದ್ದು ಸರ್ಕಾರ ಮುನ್ನೆಡೆಯುತ್ತಿರುವುದು ನಿಜಕ್ಕೂ ದುಃಖಕರ ಸಂಗತಿಯಾಗಿದೆ.
ನಿಂಗೂ ಫ್ರೀ, ನಂಗೂ ಫ್ರೀ ಅಂತ ಸುಳ್ಳು ಗ್ಯಾರಂಟಿಗಳನ್ನು ಘೋಷಿಸುವಾಗ ಕಾಕಾ ಪಾಟೀಲ್, ಮಹದೇವಪ್ಪ ನಂತಹವರು ಶ್ರೀಮಂತರು ಅಂತ ಈ ಸರ್ಕಾರಕ್ಕೆ ಗೊತ್ತಿರಲಿಲ್ವಾ? ಸರಕಾರಿ ಕೆಲಸಗಾರರಿಗೆ ಸಂಬಳ ಕೊಡಲು ದುಡ್ಡಿಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಔಷಧಿಯೂ ಇಲ್ಲಾ ಸರಿಯಾದ ಸೌಲತ್ತುಗಳೂ ಇಲ್ಲಾ ಇಂತಹ ಪರಿಸ್ಥಿತಿ ಇರುವಾಗ, ಕೈಲಾಗದವಳು ಮೈಯ್ಯೆಲ್ಲಾ ಪರಚಿಕೊಂಡಳಂತೆ ಎನ್ನುವಂತೆ, ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗದೇ, ಈಗ ಶ್ರೀಮಂತರು ಗ್ಯಾರಂಟಿ ತೆಗೆದುಕೊಳ್ಳುವುದು ಮಹಾ ಪಾಪ ಎಂದು ಬಿಂಬಿಸುವುದಾದರೆ, ಸಮಾಜ ಸೇವೆ ಮಾಡಲು ನಾವು ರಾಜಕೀಯಕ್ಕೆ ಬಂದಿದ್ದೇವೆ ಎನ್ನುವ ಇದೇ ರಾಜಕಾರಣಿಗಳು ಕೆಲವೇ ಕೆಲವೇ ವರ್ಷಗಳಲ್ಲಿ 5 ತಲೆಮಾರಿಗೆ ಆಗುವಷ್ಟು ಕೋಟಿ ಕೋಟಿ ಅಸ್ತಿಯ ಒಡೆಯರಾಗುವುದಲ್ಲದೇ, ಶಾಸಕ, ಮಂತ್ರಿಗಳಾಗುತ್ತಿದ್ದಂತೆಯೇ ಸಮಾಜ ಸೇವೆಗೂ ಸಂಬಳ, ಸವಲತ್ತು, ದಿನಭತ್ಯೆ, ಪಿಂಚಣಿಗಳನ್ನು ಪಡೆಯುವುದೂ ಮಹಾ ಪಾಪವಲ್ಲವೇ? ಹಾಗಾಗಿ ಸುಖಾ ಸುಮ್ಮನೆ ಪಾಪಕ್ಕೀಡಾಗುವುದರ ಬದಲು ಅವರ ಎಲ್ಲಾ ಸಂಪತ್ತುಗಳನ್ನೂ ತ್ಯಾಗ ಮಾಡಿ ಅದರಿಂದ ಉಳಿಯುವ ಹಣದಲ್ಲಿ ಅವರಿಗೆ ಇಷ್ಟ ಬಂದ ಹಾಗೆ ಉಚಿತ ಭಾಗ್ಯಗಳನ್ನು ನೀಡುವ ಮೂಲಕ ನಿಜವಾದ ಸಮಾಜ ಸೇವಕರಾಗಬಹುದು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಜೈಕರ‌್ನಾಟಕ,
ಬೇರೆ ರಾಜ್ಯಗಳು ಸಹ ಇದನ್ನೇ ಅನುಸರಿಸಿದೆ,
ಇದನ್ನು ತಪ್ಪು ಅನ್ನೋರು ಎಷ್ಟು ಜನ ಅದರ ಲಾಭ ನಿರಾಕರಣೆ ಮಾಡಿದ್ದಾರೆ ?
ಭಾರತೀಯ ಜನತಾ ಪಕ್ಷ ಸಹ ಗೆಲವು ಪಡೆಯಲು ಇದನ್ನೇ ಅನಿಸರಿಸಿದೆ, ಕನ್ನಡಿಗರ ಹಿತ ಕಾಯಲು
ದೆಹಲಿ ಕೇಂದ್ರಿತ ಪಕ್ಷಗಳಿಂದ ಸಾಧ್ಯವಿಲ್ಲ ಪ್ರಾದೇಶಿಕ ಪಕ್ಷ ಬಂದರೆ ಮಾತ್ರಾ ಕರ‌್ನಾಟಕಕ್ಕೆ ಭವಿಷ್ಯ
LikeLike
ಪಕ್ಷಾತೀತವಾಗಿ ಉಚಿತ ಕೊಡುವುದನ್ನೇ ಲೇಖನದಲ್ಲಿ ವಿರೋಧ ವ್ಯಕ್ತಪಡಿಸಿದ್ದೇನೆ. ಒಕ್ಕೂಟ ರಾಷ್ಟ್ರದ ಭಾಗವಾಗಿ ಹೇಗೆ ನಡೆದುಕೊಳ್ಳಬೇಕೆಂಬ ಅರಿವಿಲ್ಲದ ಪ್ರಾದೇಶಿಕ ಪಕ್ಷಗಳು ದೇಶದ ಅಭಿವೃದ್ಧಿಗೆ ಹೇಗೆ ಮಾರಕ ಎನ್ನುವುದನ್ನು ತಮಿಳುನಾಡು, ಮಹಾರಾಷ್ಟ್ರ, ದೆಹಲಿ, ಪಂಜಾಬ್ ಮತ್ತು ಪಶ್ವಿಮ ಬಂಗಾಳದಲ್ಲಿ ನೋಡಿಯಾಗಿದೆ. ತಮ್ಮ ಸೈಧ್ಧಾಂತಿಕ ವಿರೋಧಾಭಾಸಕ್ಕಾಗಿ ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎನ್ನುವಂತೆ ಕೇಂದ್ರ ಸರ್ಕಾರದ ಪ್ರತಿಯೊಂದು ನಡೆಯನ್ನೂ ವಿರೋಧ ಮಾಡುವ ಪ್ರಾದೇಶಿಕ ಪಕ್ಷಗಳಿಂದ ರಾಜ್ಯ ಮತ್ತು ದೇಶದ ಅಭಿವೃದ್ಧಿ ಮರೀಚಿಕೆಯೇ ಸರಿ.
LikeLike