ಸರಿ ಸುಮಾರು 1757–1947ರ ವರೆಗೆ ಸುಮಾರು 200ವರ್ಷಗಳ ಕಾಲ ಈಸ್ಟ್ ಇಂಡಿಯಾ ಕಂಪನಿ ಮತ್ತು ಬ್ರಿಟೀಷ್ ಸಾಮ್ರಾಜ್ಯ ನಮ್ಮ ದೇಶವನ್ನು ನೇರವಾಗಿ ಆಳಿದ ಸಂಧರ್ಭದಲ್ಲಿ ನಮ್ಮ ದೇಶದ ಬಹುತೇಕ ಸಂಸ್ಕಾರ ಸಂಸ್ಕೃತಿಗಳನ್ನು ಹಾಳು ಮಾಡಿದ್ದಲ್ಲದೇ ನಮ್ಮಲ್ಲೇ ಸಾವಿರಾರು ದೇಸೀ ಆಟಗಳು ಇದ್ದರೂ, Gentlemen’s Game ಎನ್ನುವ ಹೆಸರಿನಲ್ಲಿ ಕ್ರಿಕೆಟ್ ಆಟವನ್ನು ಕಲಿಸಿಕೊಟ್ಟು ಹೋದರು. ಅಂತರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ 1983ರವರೆಗೂ ಅಷ್ಟಕಷ್ಟೇ ಇದ್ದ ಭಾರತ, ಕಪಿಲ್ ದೇವ್ ನಾಯಕತ್ವದಲ್ಲಿ ದೈತ್ಯ ಕ್ಲೈವ್ ಲಾಯ್ಡ್ ನಾಯಕತ್ವದ ಬಲಿಷ್ಟ ವೆಸ್ಟ್ ಇಂಡೀಸ್ ತಂಡವನ್ನು 43 ಓಟಗಳ ಅಂತರದಿಂದ ಸೋಲಿಸುವ ಮೂಲಕ ಚೊಚ್ಚಲ ವಿಶ್ವಕಪ್ ಗೆಲ್ಲುತ್ತಿದ್ದಂತೆಯೇ, ಭಾರತದಲ್ಲಿ ಕ್ರಿಕೆಟ್ ಎನ್ನುವುದು ಧರ್ಮವಾಗಿ ಮಾರ್ಪಟ್ಟು ಇಂದು ICC ಯನ್ನೇ ತನ್ನ ಬೆರಳಿನ ತುದಿಯಲ್ಲಿ ಆಡಿಸುವಷ್ಟರ ಮಟ್ಟಿಗೆ ಭಾರತೀಯರು ಬೆಳೆದಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
2026ರ ಮಾರ್ಚ್ 8ರಂದು ಅಹಮದಾಬಾದಿನ ಶ್ರೀ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬಲಿಷ್ಟ ನ್ಯೂಜಿಲೆಂಡ್ ತಂಡವನ್ನು 96 ಓಟಗಳ ಅಂತರದಿಂದ ಸೋಲಿಸುವ ಮೂಲಕ ಮೂರನೇ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಆಗುವ ಮೂಲಕ ಪುರುಷರ ಭಾರತೀಯ ಕ್ರಿಕೆಟ್ ತಂಡ ಹಲವಾರು ಧಾಖಲೆಗಳನ್ನು ನಿರ್ಮಿಸಿದ್ದು ಸುಲಭದ ಕಾರ್ಯವಾಗಿರದೇ, 2026ರ T20 ವಿಶ್ವಕಪ್ಪಿನಲ್ಲಿ ಭಾರತದ ಯಶೋಗಾಥೆಯನ್ನು ನೋಡೋಣ ಬನ್ನಿ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ)ಯಲ್ಲಿ ಸುಮಾರು 110 ಸದಸ್ಯ ರಾಷ್ಟ್ರಗಳಿದ್ದರೂ, ಅದರಲ್ಲಿ 12 ಪೂರ್ಣ ಸದಸ್ಯರು ಟೆಸ್ಟ್ ಆಡುವ ರಾಷ್ಟ್ರಗಳಿದ್ದು, ಉಳಿದ 98 ರಾಷ್ಟ್ರಗಳು ಸಹಾಯಕ ಸದಸ್ಯರಾಗಿದ್ದರೂ, ಪ್ರಸ್ತುತವಾಗಿ ಕೇವಲ 12-15 ರಾಷ್ಟ್ರಗಳು ಮಾತ್ರ ಉನ್ನತ ಮಟ್ಟದ ಸ್ಪರ್ಧಾತ್ಮಕ ಅಂತರರಾಷ್ಟ್ರೀಯ ಕ್ರಿಕೆಟ್ ಆಟದಲ್ಲಿ ಸಕ್ರಿಯವಾಗಿದೆ, ಹಾಗಾಗಿ ಪ್ರತೀವರ್ಷವೂ 10-12 ತಂಡಗಳು ಮಾತ್ರಾ ಆಡುತ್ತಿದ್ದ ವಿಶ್ವಕಪ್ ಪಂದ್ಯಾವಳಿಯನ್ನು ಮತ್ತಷ್ಟು ಆಕರ್ಷಣೀಯವನ್ನಾಗಿಸಲು ಮತ್ತು ಜಗತ್ತಿನಾದ್ಯಂತ ಕ್ರಿಕೆಟ್ ಆಟಕ್ಕೆ ಮತ್ತಷ್ಟು ಮೆರಗು ತರುವ ಉದ್ದೇಶದಿಂದ ಈ ಬಾರಿ ಸುಮಾರು 20 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಗ್ರೂಪ್ A ಲೀಗ್ ಹಂತದ ಮೊದಲ ಪಂದ್ಯದಲ್ಲಿ ಬಹುತೇಕ ಭಾರತೀಯ ಮೂಲದವರೇ ಹೆಚ್ಚಾಗಿರುವ ಅಮೇರಿಕಾ ವಿರುದ್ಧದ ಪಂದ್ಯ ಭಾರತ ಸುಲಭವಾಗಿ ಗೆಲ್ಲಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರೆ, ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಮೊತ್ತ 77 ಆಗುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು ಆತಂಕದ ಸ್ಥಿತಿಯಲ್ಲಿದ್ದ ಭಾರತ ತಂಡಕ್ಕೆ ನಾಯಕ ಸೂರ್ಯಕುಮಾರ್ ಎಚ್ಚರಿಕೆಯಿಂದ ಗಳಿದ 84 ಓಟಗಳ ಸಹಾಯದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 161 ರನ್ ಕಲೆ ಹಾಕುವಷ್ಟರಲ್ಲಿ ಸಾಕಷ್ಟು ತಿಣುಕಾಡಿತ್ತು. ನಂತರ ಅಮೇರಿಕಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ 29 ಓಟಗಳಿಂದ ಸೋತಾರೂ ಭಾರತ ತಂಡಕ್ಕೆ ಆಪರಿಯಾಗಿ ಕಾಟ ಕೊಟ್ಟಿದ್ದು ಶ್ಲಾಘನೀಯವಾಗಿತ್ತು. ನಮೀಬಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಇಶಾನ್ ಕಿಶಾನ್ ಮತ್ತು ಹಾರ್ಧಿಕ್ ಪಾಂಡ್ಯವರ ಭರ್ಜರಿ ಅರ್ಧ ಶತಕದ ಸಹಾಯದಿಂದ 20 ಓವರ್‌ಗಳಲ್ಲಿ 9 ವಿಕೆಟ್ 206 ಓಟಗಳಿಗೆ ಪ್ರತ್ಯುತ್ತರವಾಗಿ ನಮೀಬಿಯಾ 18.2 ಓವರ್‌ಗಳಲ್ಲಿ 116 ರನ್‌ಗಳಿಗೆ ಸರ್ವಪತನವಾಗಿ ಭಾರತಕ್ಕೆ 92 ಓಟಗಳ ಭರ್ಜರಿ ಗೆಲುವು ತಂದು ಕೊಟ್ಟಿತು.
ಇನ್ನು ಇಡೀ ವಿಶ್ವವೇ ಎದುರು ನೋಡುತ್ತಿದ್ದ ಸಾಂಪ್ರದಾಯಿಕ ಎದುರಾಳಿ ಪಾಕೀಸ್ಥಾನದ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಮೊದಲು ಆಟವಾಡಿದ ಮಾಡಿದ ಭಾರತ ತಂಡಕ್ಕೆ ಮತ್ತೆ ಇಶಾನ್ ಕಿಶನ್ ಗಳಿಸಿದ ಅರ್ಧ ಶತಕದಿಂದಾಗಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 175 ಓಟಗಳ ಸಾಧಾರಣ ಮೊತ್ತಕ್ಕೆ ಉತ್ತರವಾಗಿ ಒತ್ತಡವನ್ನು ನಿಭಾಯಿಸಲು ಅಸಮರ್ಥವಾದ ಪಾಕೀಸ್ಥಾನ ಕೇವಲ 114 ಓಟಗಳಿಗೆ ಔಟ್ ಆಗುವ ಮೂಲಕ ಭಾರತಕ್ಕೆ 61 ಓಟಗಳ ಗೆಲವನ್ನು ತಂದು ಕೊಟ್ಟಿತು. ಲೀಗ್ ನ ಕಡೆಯ ಪಂದ್ಯಾವಾಗಿ ನೆದರ್‌ಲ್ಯಾಂಡ್ ವಿರುದ್ಧ ಭಾರತ ಶಿವಂ ದುಬೆಯ ಅಕರ್ಷಕ ಅರ್ಧ ಶತಕದ ಸಹಾಯದಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿ ಸುಲಭವಾಗಿ ಜಯ ಶಾಲಿಯಾಗಬಹುದು ಎಂದು ನಿರೀಕ್ಷಿಸಿದ್ದವರಿಗೆ ನೆದರ್‌ಲ್ಯಾಂಡ್ ತಂಡ ಕಡೆಯ ಚಂಡಿನವರೆಗೂ ದಿಟ್ಟವಾಗಿ ಆಟವಾಡಿ 7 ವಿಕೆಟ್ ನಷ್ಟಕ್ಕೆ 176 ಓಟಗಳನ್ನು ಗಳಿಸಿ ವಿರೋಚಿತವಾಗಿ 17 ಓಟಗಳ ಅಂತರದಿಂದ ಸೋಲನ್ನು ಅನುಭವಿಸಿತು.
ಲೀಗ್ ಹಂತದಲ್ಲಿ ಅಜೇಯ ತಂಡವಾಗಿ ಸೂಪರ್ 8 ಹಂತಕ್ಕೆ ತಲುಪಿದ ಭಾರತ, ದಕ್ಷಿಣ ಆಫ್ರಿಕಾದ ವಿರುದ್ಧ ಪಂದ್ಯದಲ್ಲಿ ದ.ಆ. 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ಓಟಗಳಿಸಿದಕ್ಕೆ ಪ್ರತ್ಯುತ್ತರವಾಗಿ ಭಾರತ ಕೇವಲ 111 ರನ್‌ಗಳಿಗೆ ಸರ್ವಪತನ ಆಗಿ 63 ಓಟಗಳಿಂದ ಪಂದ್ಯವನ್ನು ಸೋತು ಎಲ್ಲರನ್ನೂ ಅಶ್ಚರ್ಯ ಚಕಿತರನ್ನಾಗಿಸಿತು. ಚನ್ನೈನಲ್ಲಿ ನಡೆದ ಎರಡನೇ ಸೂಪರ್ 8 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಮೊದಲು ಆಟವಾಡಿ ಅಭಿಷೇಕ್ ಮತ್ತು ಹಾರ್ಧಿಕ್ ಅವರ ಅರ್ಧಶತಕದ ನೆರವಿನಿಂದ ಭಾರತ 4 ವಿಕೆಟ್‌ಗೆ 256 ಓಟಗಳಿಸಿದ್ದಕ್ಕೆ ಉತ್ತರವಾಗಿ ಜಿಂಬಾಬ್ವೆ 6 ವಿಕೆಟ್‌ಗೆ 184 ರನ್ ಗಳಿಸುವ ಮೂಲಕ 72 ಓಟಗಳ ಅಂತರದಲ್ಲಿ ಸೋಲನ್ನು ಕಂಡಿತ್ತು. ಮತ್ತೊಂಡೆಡೆ ಲೀಗ್ ಹಂತದಲ್ಲಿ ಅಜೇಯ ತಂಡವಾಗಿದ್ದ ವಿಂಡೀಸ್ ವಿರುದ್ಧದ ಮೂರನೇ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಎಂಬ ಮಹತ್ತರವಾದ ಪಂದ್ಯವಾಗಿದ್ದು ಅದರಲ್ಲಿ ಮೊದಲು ಆಟವಾಡಿದ ವಿಂಡೀಸ್ 4 ವಿಕೆಟ್‌ಗೆ 195 ರನ್ ಕಲೆ ಹಾಕಿದಾಗ ಭಾರತ ತಂಡದಲ್ಲಿ ಆತಂಕ ಮನೆಮಾಡಿತ್ತು. ಈ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತದ ಪರ ಕಡೆಯ ಹಂತದಲ್ಲಿ ಭಾಗವಾದ ಸಂಜು ಸ್ಯಾಮ್ಸನ್ ಗಳಿಸಿದ ಅಜೇಯ 97 ಓಟಗಳ ನೆರವಿನಿಂದಾಗಿ ಇನ್ನು 4 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್‌ಗಳಿಂದ ಪಂದ್ಯವನ್ನು ಗೆಲ್ಲುವ ಮೂಲಕ ಸೂಪರ್ ಎಂಟರ ನಾಲ್ನನೇ ತಂಡವಾಗಿ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಆಡಲು ಅರ್ಹತೆ ಪಡೆಯಿತು.
ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಆಟಾವಾಡಿದ ಭಾರತಕ್ಕೆ ಮತ್ತೆ ಸಂಜು ಸ್ಯಾಮ್ಸನ್ 42 ಚಂಡುಗಳಲ್ಲಿ 89 ಓಟಗಳ ಮೂಲಕ 7 ವಿಕೆಟ್ ನಷ್ಟಕ್ಕೆ 253 ಓಟಗಳನ್ನು ಗಳಿಸಿದ ವಿರುದ್ಧವಾಗಿ ಜೇಕಬ್ ಬೇಥಲ್ ಅಮೋಘವಾಗಿ ಶತಕವನ್ನು ಗಳಿಸಿದರೂ 18 ಮತ್ತು 19ನೇ ಓವರಿನಲ್ಲಿ ಬೂಮ್ರಾ ಮತ್ತು ಹಾರ್ಧಿಕ್ ಆವರ ಅದ್ಭುತ ಬೌಲಿಂಗ್ ನಿಂದಾಗಿ 7 ವಿಕೆಟ್ ನಷ್ಟಕ್ಕೆ ಇಂಗ್ಲೇಂಡ್ 246 ಓಟಗಳನ್ನು ಗಳಿಸುವ ಮೂಲಕ 7 ರನ್ನುಗಳ ಅಂತರದಿಂದ ಸೋಲನ್ನು ಅನುಭವಿಸಿ ನಾಲ್ಕನೇ ಭಾರಿಗೆ ಭಾರತ ಫೈನಲ್ಸ್ ಪ್ರವೇಶಿಸಿತ್ತು.
ಎದುರು ನಿಂತು ಹೋರಾಡುವ ಶತ್ರುಗಳನ್ನು ಸೋಲಿಸುವುದು ಸುಲಭ ಆದರೆ ನಮ್ಮ ಬೆನ್ನ ಹಿಂದೇಯೇ ನಿಂತು ಚೂರಿ ಚುಚ್ಚುವ ಹಿತಶತ್ರುಗಳನ್ನು ಮಣಿಸುವುದು ಅಸಾಧ್ಯ ಎನ್ನುವಂತೆ ಭಾರತ ತಂಡದ ಪರಿಸ್ಥಿತಿಯಾಗಿತ್ತು. ವಿಶ್ವಕಪ್ ಪಂದ್ಯಾವಳಿಗಿಂತಲೂ ಮುನ್ನಾ ವಿಶ್ವದ ನಂಬರ್ 1 ಬ್ಯಾಟ್ಸಮನ್ ಮತ್ತು ಬೌಲರ್ ಎಂದು ಹೆಸರಾಗಿದ್ದ ಅಭಿಷೇಕ್ ಶರ್ಮಾ ಮತ್ತು ವರುಣ್ ಚಕ್ರವರ್ತಿ ಇಡೀ ಪಂದ್ಯಾವಳಿಯಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಎಲ್ಲರ ತಾತ್ಸಾರಕ್ಕೆ ಗುರಿಯಾಗಿದ್ದರು. ನರೇಂದ್ರ ಮೋದಿ ಮೈದಾನದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಜೇಯವಾಗಿದ್ದ ಭಾರತ ತಂಡವನ್ನು ಆಸ್ಟ್ರೇಲಿಯಾ ಸೋಲಿಸಿದಾಗ ಕುಣಿಯಲಾರದವಳು ನೆಲ ಡೊಂಕು ಎಂದಳಂತೆ ಎನ್ನುವಂತೆ ತಂಡದ ಸೋಲನ್ನು ಕ್ರೀಡಾಂಗಣದ ಹಣೆಗೆ ಕಟ್ಟಿದ ಪರಿಣಾಮ ಈ ಬಾರಿಯೂ ಎಲ್ಲರ ಚಿತ್ತ ಹರಿದಿತ್ತು ಅದರತ್ತಾ.
ಮತ್ತೊಂದೆಡೆ ಸೌತ್ ಆಫ್ರಿಕಾದ ವಿರುದ್ಧ ಭರ್ಜರಿಯಾಗಿ ಗೆದ್ದು ಫೈನಲ್ಸ್ ಪ್ರವೇಶಿಸಿದ್ದ ನ್ಯೂಜಿಲೆಂಡ್ ನಾಯಕ, ಪಂದ್ಯದ ಮುನ್ನಾ ನಾವು ಬಂದಿರುವುದೇ ಹಲವಾರು ಜನರ ಹೃದಯಗಳನ್ನು ಛಿದ್ರಗೊಳಿಸುವುದಕ್ಕಾಗಿ ಎಂದು ಅಬ್ಬರಿಸಿದ್ದ ಮೇಲಂತೂ ಹಿತಶತ್ರುಗಳು ಭಾರತ ನ್ಯೂಜಿಲೆಂಡ ತಂಡಕ್ಕೆ ಸುಲಭದ ತುತ್ತಾಗುತ್ತದೆ ಎಂದೇ ಷರಾ ಬರೆದಿದ್ದವು. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಕೋಟ್ಯಂತರ ನೈಜ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಿಂದ ಫೈನಲ್ ಪಂದ್ಯದಲ್ಲಿ ಅಭಿಷೇಕ್, ಸಂಜು ಮತ್ತು ಇಶಾನ್ ಅವರ ಆಕರ್ಷಕ ಅರ್ಧ ಶತಕ ಮತ್ತು ದುಬೆ ಅವರ ಮಿಂಚಿನ ಆಟದಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 255 ರನ್ ಗಳಿಸಿದಾಗಳೂ ಹಲವರು ಭಾರತದ ಸೋಲು ಕಟ್ಟಿಟ್ಟ ಬುತ್ತಿ ಎನ್ನುವಂತೆಯೇ ಮಾತನಾಡುತ್ತಿದ್ದರು. ಭಾರತದ ಅಕ್ಸರ್ ಪಟೇಲ್ ಮತ್ತು ಬೂಮ್ರಾ ಅವರ ಮಾರಕ ದಾಳಿಗೆ ಬೆಚ್ಚಿದ ನ್ಯೂಜಿಲೆಂಡ್ 19 ಓವರ್ಗಳಲ್ಲಿ ಕೇವಲ 159 ರನ್ನುಗಳನ್ನು ಗಳಿಸಿ ಏಕಪಕ್ಷೀಯವಾದಂತಹ ಪಂದ್ಯವಾಗಿ ಭಾರತ 96 ಓಟಗಳ ವಿಜಯವನ್ನು ಗಳಿಸುತ್ತಿದ್ದಂತೆಯೇ 140 ಕೋಟಿ ಭಾರತೀಯರ(ಹಿತಶತ್ರುಗಳನ್ನು ಹೊರತು ಪಡಿಸಿ) ವಿಜಯೋತ್ಸಾಹದ ಕಹಳೆ ಮುಗಿಲು ಮುಟ್ಟುವ ಮೂಲಕ ಹಲವಾರು ಐತಿಹಾಸಿಕ ಸಾಧನೆಗಳಿಗೆ ಪಾತ್ರವಾಯಿತು.
ಭಾನುವಾರ, 2026ರ ಮಾರ್ಚ್ 8ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಭಾರತದ ಪುರುಷರು T20 ವಿಶ್ವಕಪ್ ನಲ್ಲಿ ಒಟ್ಟು ಮೂರನೇ ಬಾರಿ (2007 ಪಾಕೀಸ್ಥಾನದ ವಿರುದ್ಧ, 2024 ದಕ್ಷಿಣ ಆಫ್ರಿಕಾದ ವಿರುದ್ಧ ಮತ್ತು 2026 ನ್ಯೂಜಿಲೆಂಡ್ ವಿರುದ್ಧ) ಜಯಗಳಿಸಿದ್ದಲ್ಲದೇ, ಇದುವರೆಗೂ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ತಲಾ ಎರಡು ಬಾರಿ ಗೆದ್ದಿದ್ದ ದಾಖಲೆಯನ್ನು ಧೂಳಿ ಪಟ ಮಾಡಿದ್ದಲ್ಲದೇ, ಸತತವಾಗಿ ಎರಡನೇ ಬಾರಿ ಮತ್ತು ಆತಿಥೇಯ ದೇಶವಾಗಿ ಮೊದಲನೇ ಬಾರಿ ಹೀಗೆ ಈ ಮೂರನ್ನೂ ಸಾಧಿಸಿದ ಏಕೈಕ ದೇಶವಾಗಿ ಭಾರತ ಹೊರಹೊಮ್ಮಿತು. ಇದರ ಜೊತೆ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಅಂಟಿದ್ದ ಕಳಂಕವನ್ನೂ ತೊರೆದು ಹಾಕಿದ್ದಲ್ಲದೇ, ಎಂತಹ ಕೆಟ್ಟ ಪರಿಸ್ಥಿತಿಯಲ್ಲೂ ತಂಡದ ಆಟಗಾರ ಮೇಲೆ ಭರವಸೆ ಇಟ್ಟಲ್ಲಿ ಮಾಡು ಇಲ್ಲವೇ ಮಡಿ ಎನ್ನುವ ಸಮಯದಲ್ಲಿ ಅವರೆಲ್ಲರೂ ಅತ್ಯುತ್ತಮವಾದ ಪ್ರದರ್ಶನವನ್ನು ನೀಡುತ್ತಾರೆ ಎಂಬುದಕ್ಕೆ ಈ ವಿಶ್ವಕಪ್ ಪಂದ್ಯಾವಳಿ ಸಾಕ್ಷಿಯಾಗಿತ್ತು.
ವಿಶ್ವಕಪ್ ಪಂದ್ಯಾವಳಿಗೆ ತಂಡವನ್ನು ಆಯ್ಕೆಮಾಡುವ ಮುನ್ನಾ ಯಾರ ಗಮನಕ್ಕೂ ಬಾರದೇ ಇದ್ದರೂ ದೇಶೀಯ ಪಂದ್ಯಾವಳಿಯಲ್ಲಿನ ಭರ್ಜರಿ ಪ್ರದರ್ಶನದಿಂದಾಗಿ ತಂಡಕ್ಕೆ ಸೇರಿಕೊಂಡ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಮತ್ತು ಪಂದ್ಯಾವಳಿಯ ಆರಂಭಕ್ಕೆ ಕೆಲವೇ ದಿನಗಳ ಮುಂದೆ ಹರ್ಷಿತ್ ರಾಣಾ ಗಾಯ ಗೊಂಡ ಪರಿಣಾಮವಾಗಿ ತಂಡವನ್ನು ಸೇರಿಕೊಂಡ ಸಿರಾಜ್ ತಮಗೆ ಸಿಕ್ಕ ಅವಕಾಶಗಳನ್ನೂ ಎರಡೂ ಕೈಗಳಲ್ಲಿ ಬಾಜಿಕೊಳ್ಳುವ ಮೂಲಕ ಭಾರತ ತಂಡದ ಗೆಲುವಿಗೆ ಕಾರಣವಾದರು. ಇಡೀ ಪಂದ್ಯಾವಳಿಯಲ್ಲಿ ಉಳಿದ ತಂಡಗಳಂತೆ ಕೇವಲ ಒಬ್ಬ ಆಟಗಾರನ ಮೇಲೆ ನಿರ್ಭರವಾಗದೇ ಕಡೆಯ ಮೂರು ಪಂದ್ಯಗಳ ಹೊರತಾಗಿ ಉಳಿದೆಲ್ಲಾ ಪಂದ್ಯಗಳಲ್ಲೂ ಸಮಯ ಮತ್ತು ಸಂಧರ್ಭೋಚಿತವಾಗಿ ಭಾರತ ತಂಡದ ಆಟಗಾರ ಮಿಂಚಿದ ಪರಿಣಾಮ ಸಾಂಘಿಕವಾಗಿ ವಿಶ್ವಕಪ್ ಗೆಲ್ಲಲು ಸಹಕಾರಿಯಾದರು.
Catches wins the matches ಎಂಬುದು ಕ್ರಿಕೆಟ್‌ನ ಮೂಲಭೂತ ಗಾದೆಯಾಗಿದ್ದು, ಅತ್ಯುತ್ತಮ ಫೀಲ್ಡಿಂಗ್, ನಿರ್ದಿಷ್ಟವಾಗಿ ನಿರ್ಣಾಯಕ ಕ್ಯಾಚ್‌ಗಳನ್ನು ತೆಗೆದುಕೊಳ್ಳುವುದೇ ಪಂದ್ಯಗಳ ಸೋಲು ಗೆಲುವನ್ನು ನಿರ್ಧರಿಸುತ್ತದೆ. ಆದರೆ ಭಾರತದ ಪರ ಕಳಪೆ ಫೀಲ್ದಿಂಗ್ ನಡುವೆಯೂ ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ತಿಲಕ್ ವರ್ಮಾ ಅವರುಗಳು ಅದ್ಭುತವಾಗಿ ಹಿಡಿದ ಕ್ಯಾಚ್‌ಗಳು ಮತ್ತು ಹಾರ್ಧಿಕ್ ಪಾಂಡ್ಯಾನ ಚುರುಕಾದ ರನ್ ಔಟ್ ಗಳೂ ಸಹಾ 2026ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿಗೆ ಸಹಕರಿಸಿದವು.
ಇಡೀ ಪಂದ್ಯಾವಳಿಯಲ್ಲಿ ಅಭಿಷೇಕ್ ಮತ್ತು ವರುಣ್ ಚಕ್ರವರ್ತಿಯವರ ಕಳಪೆ ಪ್ರದರ್ಶನವೇ ಎತ್ತಿ ತೋರಿ, ಒಂದೆರಡು ಪಂದ್ಯದ ಹೊರತಾಗಿ ನಾಯಕ ಸೂರ್ಯಕುಮಾರ್ ಯಾದವ್ ಅವರ ಪ್ರದರ್ಶನವೂ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ ಎನ್ನುವುದು ಗೌಣವಾಗಿ ಹೋಗಿದ್ದು ವಿಚಿತ್ರವಾದರೂ ವಾಸ್ತವದ ಸಂಗತಿಯಾಗಿತ್ತು. ಇಡೀ ಪಂದ್ಯಾವಳಿಯಲ್ಲಿ ಭಾರತದ ಪರ ಎಲೆ ಮರೆಕಾಯಿಗಳಂತೆ ಇದ್ದರೂ ತಂಡ ಪರ ಅಗತ್ಯ ಇದ್ದಾಗಲೆಲ್ಲಾ, ಯಾವುದೇ ಕ್ರಮಾಂಕದಲ್ಲಿ ಆಟಕ್ಕೆ ಕಳುಹಿಸಿದರೂ, ಭರ್ಜರಿಯಾಗಿ ಪ್ರದರ್ಶನ ನೀಡಿದ ಶಿವಂ ದುಬೆ, ಇಶಾನ್ ಕಿಶನ್, ತಿಲಕ್ ವರ್ಮಾ ಮತ್ತು ಅಕ್ಸರ್ ಪಟೇಲ್ ಅವರನ್ನು ಅಭಿನಂದಿಸದೇ ಹೋದರೆ ತಪ್ಪಾದೀತು.
ಭಾರತದ ಪರ ಬೌಲಿಂಗ್ ಪಡೆಯಲ್ಲಿ ಬುಮ್ರಾ ಅತ್ಯುತ್ತಮ ಮತ್ತು ವರುಣ್ ಚಕ್ರವರ್ತಿ ಕಳಪೆ ಪ್ರದರ್ಶನ ಎಂದೇ ಖ್ಯಾತಿ/ಕುಖ್ಯಾತಿ ಗಳಿಸಿದರೂ, ಅಚ್ಚರಿ ಎನ್ನುವಂತೆ ಜಸ್ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ ತಲಾ 14 ವಿಕೆಟ್‌ಗಳೊಂದಿಗೆ ಜಂಟಿಯಾಗಿ ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಖ್ಯಾತಿಗೆ ಪಾತ್ರರಾಗಿದ್ದಾರೆ ಎನ್ನುವುದೇ ಸತ್ಯ ಸಂಗತಿಯಾಗಿದೆ. ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲಿ 4/15 ಪ್ರದರ್ಶನದೊಂದಿಗೆ ಬುಮ್ರಾ ಅಗ್ರಸ್ಥಾನದಲ್ಲಿದ್ದರೆ (Avg: 12.42, Econ: 6.21) ತಮ್ಮ ಖ್ಯಾತಿಗೆ ತಕ್ಕಂತೆ ಆಡದೇ ಹೋದರು ಆಡಿದ ಪಂದ್ಯಗಳಲ್ಲಿ ಒಂದು ಎರಡು ವಿಕೆಟ್ ಗಳಿಸುವ ಮೂಲಕ ವರುಣ್ (Avg: 20.50, Econ: 9.25) ಸಹಾ ತಮ್ಮ ತಂಡದ ಗೆಲುವಿಗೆ ಸಹಕಾರಿಯಾಗಿದ್ದಾರೆ
ಒಟ್ಟಿನಲ್ಲಿ ಹೇಳುವುದಾದರೇ, ಒಗ್ಗಟ್ಟಿನಲ್ಲಿ ಬಲವಿದೆ, ಒಬ್ಬಟ್ಟಿನಲ್ಲಿ ರುಚಿ ಇದೆ ಎನ್ನುವಂತೆ ಸಾಂಘೀಕ ಪ್ರದರ್ಶನದಿಂದ ಭಾರತದ ತಂಡ ಗೆಲುವನ್ನು ಸಾಧಿಸುವ ಮೂಲಕ ಯುಗಾದಿ ಹಬ್ಬದ ಎರಡು ವಾರಗಳ ಮುಂಚೆಯೇ ಸಕಲ ಭಾರತೀಯರಿಗೆ ಹೊಸ ವರ್ಷದ ಕೊಡುಗೆಯನ್ನು ನೀಡಿದ್ದಲ್ಲದೇ ಒಬ್ಬಟ್ಟಿನ ಸಿಹಿಯನ್ನು ತಿನ್ನಿಸಿದೆ ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ