ಕ್ರಿಕೆಟ್ ಆಟ ಎನ್ನುವುದು ಇಂಗ್ಲೆಂಡ್‌ನಲ್ಲಿ ಮಕ್ಕಳ ಆಟವಾಗಿ ಬಹುಶಃ 13 ನೇ ಶತಮಾನದಷ್ಟು ಹಿಂದೆಯೇ, ಹುಟ್ಟಿಕೊಂಡಿದ್ದು ನಂತರ 16 ನೇ ಶತಮಾನದಲ್ಲಿ ಆಡಲ್ಪಡುತ್ತಿತ್ತು ಎಂಬುದಕ್ಕೆ 1597 ರ ನ್ಯಾಯಾಲಯದ ಪ್ರಕರಣದಲ್ಲಿ ಮೊದಲ ಲಿಖಿತ ದಾಖಲೆಯಾಗಿ ಕಾಣಿಸಿ ಕೊಂಡಿದೆ. ನಂತರ 18 ನೇ ಶತಮಾನದ ಆರಂಭದಲ್ಲಿ ಈಸ್ಟ್ ಇಂಡಿಯಾ ಕಂಪನಿಯವರು ವ್ಯಾಪಾರಕ್ಕೆಂದು ಭಾರತಕ್ಕೆ ಬಂದು ನಂತರ ಒಂದೊಂದೇ ರಾಜ್ಯಗಳನ್ನು ಕೈವಶಮಾಡಿಕೊಂಡು ಹೋಗುತ್ತಿರುವಾಗ ಅಂದಿನ ಬ್ರಿಟೀಷ್ ನಾವಿಕರು, ಅಧಿಕಾರಿಗಳು ಮತ್ತು ಸೇವಕರುಗಳು ತಮ್ಮ ತಮ್ಮಲ್ಲೇ ಕ್ರಿಕೆಟ್ ಆಟವಾಡುವ ಮೂಲಕ ಭಾರತಕ್ಕೆ ಕ್ರಿಕೆಟ್ ಪರಿಚಯಿಸಲ್ಪಡುತ್ತದೆ. ಕ್ರಿಕೆಟ್ ಜನಕರು ಇಂಗ್ಲೇಂಡಿಗರಾದರೂ ಪ್ರಸ್ತುತವಾಗಿ ಕ್ರಿಕೆಟ್ ಎನ್ನುವುದು ಭಾರತದ ಉಪಖಂಡಗಳಾದ ಭಾರತ, ಪಾಕೀಸ್ಥಾನ, ಶ್ರೀಲಂಕ ಮತ್ತು ಬಾಂಗ್ಲಾದೇಶಗಳಲ್ಲಿ ಜನಪ್ರಿಯ ಕ್ರೀಡೆಯಾಗಿದ್ದು, ಭಾರತದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಕ್ರಿಕೆಟ್ ಎನ್ನುವುದು ಧರ್ಮವಾಗಿ ಹೋಗಿದೆ ಎಂದರೂ ತಪ್ಪಾಗದು.
ಬಹುತೇಕರು ಹೇಳುವ ಪ್ರಕಾರ 1983ರ ಪ್ರುಡೆನ್ಷಿಯಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಕಪಿಲ್ ದೇವ್ ನಾಯಕತ್ವದ ತಂಡ ಅಚ್ಚರಿಯ ರೀತಿಯಲ್ಲಿ ಅಂದಿನ ಕಾಲದ ಕ್ರಿಕೆಟ್ ದಿಗ್ಗಜರಾದ ವೆಸ್ಟ್ ಇಂಡೀಸ್ ಅವರನ್ನು ಸೋಲಿಸಿದ ನಂತರ ಭಾರತದಲ್ಲಿ ಕ್ರಿಕೆಟ್ ಎನ್ನುವುದು ಬಹಳ ಪ್ರಾಮುಖ್ಯತೆ ಪಡೆಯಿತು ಎನ್ನುವುದು ಎಷ್ಟು ಸತ್ಯವೋ ಅದೇ ರೀತಿ, ಆ ಫೈನಲ್ಸ್ ಪಂದ್ಯವನ್ನು ಲಾರ್ಡ್ಸ್ ಕ್ರೀಡಾಂಗಣದಲ್ಲಿ ವೀಕ್ಷಿಸುವ ಸಲುವಾಗಿ ಅಂದಿನ BCCI ಅಧ್ಯಕ್ಷರಿಗೆ ಹೆಚ್ಚುವರಿಯಾಗಿ ಎರಡು ಟಿಕೆಟ್ ನೀಡಲು ನಿರಾಕರಿಸಿದ ಲಾರ್ಡ್ಸ್ ಕ್ರೀಡಾಂಗಣದ ಅಧಿಕಾರಿಗಳ ಉದ್ಧಟತನವೇ ಭಾರತದ ಉಪ ಖಂಡದಲ್ಲಿ ಕ್ರಿಕೆಟ್ ಈ ಪರಿಯಾದ ಧರ್ಮವಾಗಿ ಬೆಳೆಯಲು ಪ್ರೇರೇಪಿಸಿತು ಎಂಬುದೇ ಅಷ್ಟೇ ಸತ್ಯವಾಗಿದ್ದು ಆ ರೋಚಕತೆಯನ್ನು ಎಳೆ ಎಳೆಯಾಗಿ ತಿಳಿಯೋಣ ಬನ್ನಿ.
ಕೆಲವು ದೊರೆತ ದಾಖಲೆಗಳ ಪ್ರಕಾರ ಭಾರತದಲ್ಲಿ ಮೊದಲ ಪಂದ್ಯವು 1721ರಲ್ಲಿ ಕೆಲವು ಬ್ರಿಟಿಷ್ ಅಧಿಕಾರಿಗಳ ನಡುವೆ ನಡೆದರೆ, 1792ರಲ್ಲಿ ಕಲ್ಕತ್ತಾ ಕ್ರಿಕೆಟ್ ಕ್ಲಬ್ ಸ್ಥಾಪನೆ ಅಗುವ ಮೂಲಕ ಭಾರತದ ಮೊದಲ ಕ್ರಿಕೆಟ್ ಕ್ಲಬ್ ಎಂಬ ಹೆಗ್ಗಳಿಕೆ ಪಾತ್ರವಾಯಿತು. ಆದರೆ ಇದು ಬ್ರಿಟೀಷರಿಂದ ಸ್ಥಾಪಿಸಲ್ಪಟ್ಟಿತ್ತು. ನಂತರ 1848ರಲ್ಲಿ ಮುಂಬೈನ ಪಾರ್ಸಿ ಸಮುದಾಯವು ಓರಿಯಂಟಲ್ ಕ್ರಿಕೆಟ್ ಕ್ಲಬ್ ಆರಂಭಿಸುವ ಮೂಲಕ ಮೊದಲ ಭಾರತೀಯ ಕ್ರಿಕೆಟ್ ಕ್ಲಬ್ ಎಂಬ ಖ್ಯಾತಿಯನ್ನು ಪಡೆದು ಕ್ರಿಕೆಟ್ ಆಟವನ್ನು ಕರಗತ ಮಾಡಿಕೊಂಡು 1886/1888 ರಲ್ಲಿ ಇದೇ ಪಾರ್ಸೀ ತಂಡವು ಇಂಗ್ಲೆಂಡ್ ಪ್ರವಾಸ ಮಾಡುವ ಮೂಲಕ ಭಾರತೀಯ ತಂಡದ ಮೊದಲ ಅಂತರರಾಷ್ಟ್ರೀಯ ಪ್ರವಾಸವಾಯಿತು. ನಂತರ ಬಾಂಬೆ, ಬರೋಡ, ಜಾಮ್ ನಗರ, ಹೈದರಾಬಾದಿನ ನಿಜಾಮರು ಮುಂತಾದ ಅನೇಕ ರಾಜ ಮಹಾರಾಜರ ಆಸ್ಥೆ ಮತ್ತು ಆಶ್ರಯದಲ್ಲಿ ಕ್ರಿಕೆಟ್ ಭಾರತದಲ್ಲಿ ವ್ಯಾಪಕವಾಯಿತು. 1911ರಲ್ಲಿ ಪಟಿಯಾಲ ಮಹಾರಾಜ ನೇತೃತ್ವದಲ್ಲಿ ಅಖಿಲ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಮಾಡಿದರೆ, 1932ರಲ್ಲಿ ಪೋರಬಂದರ್ ಮಹಾರಾಜರು ಮತ್ತು ಕೆಎಸ್‌ಜಿ ಲಿಂಬ್ಡಿ ರಾಜರುಗಳ ಸಾರಥ್ಯದಲ್ಲಿ ಇಂಗ್ಲೇಂಡ್ ಪ್ರವಾಸ ಮಾಡಿ ಲಾರ್ಡ್ಸ್‌ನಲ್ಲಿ ಮೊದಲ ಅಧಿಕೃತ ಟೆಸ್ಟ್ ಪಂದ್ಯವನ್ನು ಸಿ.ಕೆ. ನಾಯ್ಡು ಅವರ ನಾಯಕತ್ವದಲ್ಲಿ ಆಡುವ ಮೂಲಕ ಅಧಿಕೃತವಾಗಿ ಕ್ರಿಕೆಟ್ ಟೆಸ್ಟ್ ಆಡುವ 6ನೇ ರಾಷ್ಟ್ರವಾಯಿತು.
ಕ್ರಿಕೆಟ್ ಜಗತ್ತಿನಲ್ಲಿ ಪಾರಂಪರಿಕವಾಗಿ ಸಾಂಪ್ರದಾಯಿಕ ಎದುರಾಳಿಗಳಾಗಿ ಇಂಗ್ಲೇಂಡ್ ಮತ್ತು ಆಸ್ಟ್ರೇಲಿಯಾ ಕಾಣಿಸಿಕೊಳ್ಳುತ್ತಾರಾದರೂ, ಅಚ್ಚರಿಯ ವಿಷಯವೆಂದರೆ, ಮೊದಲ ಅಧಿಕೃತ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಿರುವುದು 1844ರ ಸೆಪ್ಟೆಂಬರ್ 24–26ರಲ್ಲಿ USA ಮತ್ತು ಕೆನಡಾ ನಡುವೆ ನ್ಯೂಯಾರ್ಕ್‌ನ ಸೇಂಟ್ ಜಾರ್ಜ್ ಕ್ರಿಕೆಟ್ ಕ್ಲಬ್‌ನಲ್ಲಿ ಎನ್ನುವುದು ವಾಸ್ತವದ ಸಂಗತಿ ಈ ಪಂದ್ಯದಲ್ಲಿ ಕೆನಡಾ 23 ರನ್‌ಗಳಿಂದ ಗದ್ದಿತ್ತು. ಮೂರು ದಿನಗಳ ಕಾಲದ ಈ ಐತಿಹಾಸಿಕ ಪಂದ್ಯವು, 1877 ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಆಡಲಾದ ಮೊದಲ ಅಧಿಕೃತ ಟೆಸ್ಟ್ ಪಂದ್ಯಕ್ಕಿಂತಲೂ 30 ವರ್ಷಗಳಿಗೂ ಹಿಂದೆ ನಡೆದಿತ್ತು ಎನ್ನುವುದು ವಿಶೇಷ.
ಇನ್ನು ನೇರವಾಗಿ ವಿಷಯಕ್ಕೆ ಬರುವುದಾದರೆ, ಐದು ದಿನಗಳ ಟೆಸ್ಟ್ ಪಂದ್ಯಾವಳಿಗಳು ತನ್ನ ಆಕರ್ಷಣೆಯನ್ನು ಕಳೆದುಕೊಂಡು ಜನರು ಕ್ರಿಕೆಟ್ ನಿಂದ ವಿಮುಕ್ತರಾಗುತ್ತಿದ್ದಾರೆ ಎನ್ನುವ ಸಂಧರ್ಭದಲ್ಲಿ 1970-71 ರ ಆಶಸ್ ಸರಣಿಯ ಮೂರನೇ ಟೆಸ್ಟ್ ಮಳೆಯಿಂದಾಗಿ ರದ್ದಾದಾಗ ಬಂದಿದ್ದ ಜನರನ್ನು ರಂಜಿಸುವ ಸಲುವಾಗಿ ತಲಾ 40 ಓವರ್‌ಗಳ ( ಒಂದು ಓವರಿಗೆ 8ನಂತೆ) ಪಂದ್ಯವನ್ನು ಆಡಿಸಿದ್ದೇ ಅಧಿಕೃತವಾಗಿ ಮೊದಲ ಏಕದಿನ ಅಂತರರಾಷ್ಟ್ರೀಯ (ODI) ಕ್ರಿಕೆಟ್ ಪಂದ್ಯವನ್ನು ಜನವರಿ 5, 1971 ರಂದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ಆಡಲಾಯಿತು. ಬಹುತೇಕ ಟೆಸ್ಟ್ ಪಂದ್ಯಗಳು ನೀರಸವಾಗಿ ಡ್ರಾ ಆಗತ್ತಿದ್ದಂತಹ ಸಂಧರ್ಭದಲ್ಲಿ ಈ ಏಕದಿನ ಪಂದ್ಯಗಳು ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತ ರೋಚಕ ಫಲಿತಾಂಶ ನೀಡುತ್ತಿದ್ದ ಕಾರಣ, 1974ರಲ್ಲಿ ಇಂಗ್ಲೇಂದಿನ ಪ್ರುಡೆನ್ಷಿಯಲ್ ವಿಮಾ ಕಂಪನಿಯ ಸಹಭಾಗಿತ್ವದೊಂದಿಗೆ ಮೊದಲ ಏಕದಿನ ವಿಶ್ವಕಪ್ ಪಂದ್ಯಾವಳಿಗಳು ಆರಂಭವಾಗಿ ನಾಲ್ಕು ವರ್ಷಗಳ ನಂತರ 1979ರಲ್ಲೂ ಇಂಗ್ಲೇಂಡ್ನಲ್ಲಿಯೇ ನಡೆದು ಎರಡೂ ಪಂದ್ಯಾವಳಿಗಳಲ್ಲಿಯೂ ಕೈವ್ ಲಾಯ್ಡ್ ತಂಡ ಜಯಶಾಲಿಯಾಗಿದ್ದು 1983ರಲ್ಲಿ ಮೂರನೇ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿಯೂ ಲಾಯ್ಡ್ ತಂಡವೇ ಸತತ ಮೂರನೇ ಬಾರಿ ಪ್ರುಡೆನ್ಷಿಯಲ್ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿತ್ತು.
ಮೊದಲ ಎರಡೂ ಪಂದ್ಯಾವಳಿಗಳಲ್ಲಿ ಕೇವಲ ಆಫ್ರಿಕಾದ ವಿರುದ್ಧ ಮಾತ್ರ ಜಯಗಳಿಸಿದ್ದ ಭಾರತ ತಂಡದಿಂದ 1983ರ ವಿಶ್ವಕಪ್ ಪಂದ್ಯಾವಳಿಯಿಂದ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಆದರೆ ಬಹುತೇಕ ಹೊಡೀ ಬಡೀ ಆಟವಾಡುವ ಯುವಕರೇ ಹೆಚ್ಚಾಗಿದ್ದ ಕಪಿಲ್ ದೇವ್ ನೇತೃತ್ವದ ತಂಡ ಅಭ್ಯಾಶ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದಾಗ ಅಂದಿನ ಆಸ್ಟ್ರೇಲಿಯಾ ನಾಯಕ ಕಿಮ್ ಹ್ಯೂಸ್ ಕಪಿಲ್, ಬಿನ್ನಿ, ಮದನ್ ಲಾಲ್ ಮುಂತಾದ ಆಲ್ರೊಂಡರ್ ಇರುವ ಭಾರತದ ತಂಡವನ್ನು ನಿರ್ಲಕ್ಷಿಸಲಾಗದು ಎಂದು ನುಡಿದಿದ್ದ ಭವಿಷ್ಯ ನಿಜವಾಗಿ 1983ರ ಜೂನ್ 25ರಂದು ಭಾರತ ವೆಸ್ಟ್ ಇಂಡೀಸ್ ವಿರುದ್ದದ ಫೈನಲ್ ಆಡುವ ಮುನ್ನವೂ ವೆಸ್ಟ್ ಇಂಡೀಸ್ ತಂಡವೇ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿತ್ತು.
ಯಾರೂ ನಿರೀಕ್ಷಿಸದ ರೀತಿಯಲ್ಲಿ ಭಾರತ ತಂಡ ವಿಶ್ವಕಪ್ ಫೈನಲ್ ತಲುಪಿದಾಗ, ಆ ಪಂದ್ಯವನ್ನು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ವೀಕ್ಷಿಸುವ ಸಲುವಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಸಂಪುಟದ ಮಂತ್ರಿ ಮತ್ತು ಬಿಸಿಸಿಐ ಅಧ್ಯಕ್ಷ ಆಗಿದ್ದಂತಹ NKP ಸಾಲ್ವೆ ಅವರುತಮ್ಮ ಪತ್ನಿ ಮತ್ತು ಅಂದಿನ ಭಾರತೀಯ ಹೈಕಮಿಷನರ್ ಅವರಿಗಾಗಿ ಹೆಚ್ಚುವರಿ ಎರಡು ಟಿಕೆಟ್ ಬೇಕೆಂದು ವಿನಂತಿಸಿಕೊಂಡಾಗ, ಇಂಗ್ಲೆಂಡ್ ಫೈನಲ್‌ಗೆ ತಲುಪಿರಲ್ಲಿವಾದ್ದರಿಂದ ಬಹುತೇಕ ಖಾಲೀ ಸೀಟುಗಳು ಇದ್ದರೂ ಸೆಮಿಫೈನಲ್ಸ್ ನಲ್ಲಿ ಇಂಗ್ಲೇಂಡ್ ವಿರುದ್ಧ ಭಾರತ ಅನೋಘವಾಗಿ ಜಯಗಳಿಸಿದ್ದ ಕೋಪದಿಂದಲೋ ಏನೋ, ಭಾರತದ ಕ್ರಿಕೆಟ್ ಅಧ್ಯಕ್ಷರಿಗೆ ಎರಡು ಸೀಟುಗಳನ್ನು ನೀಡಲು ನಿರಾಕರಿಸುತ್ತದೆ.
ಇದರ ಹೊರತಾಗಿಯೂ ಭಾರತ ವೆಸ್ಟ್ ಇಂಡೀಸ್ ತಂಡವನ್ನು ಅಚ್ಚರಿಯ ರೂಪದಲ್ಲಿ 43 ರನ್‌ಗಳಿಂದ ಸೋಲಿಸಿ ತಮ್ಮ ಮೊದಲ ವಿಶ್ವಕಪ್ ಪ್ರಶಸ್ತಿಯನ್ನು ಪಡೆದಾಗ, ಭಾರತ ಕ್ರಿಕೆಟ್‌ನಲ್ಲಿ ಅಗ್ರಸ್ಥಾನವನ್ನು ತಲುಪಿರಬಹುದು, ಆದರೆ ಆಟದ ರಾಜಕೀಯದಲ್ಲಿ, ಶಾಶ್ವತವಾಗಿ ಇನ್ನೂ ಎರಡನೇ ದರ್ಜೆಯ ಸ್ಥಾನಮಾನಕ್ಕೆ ಶಾಪಗ್ರಸ್ತರಾಗಿದ್ದೇವೆ. ಇದಕ್ಕೆ ಖಂಡಿತವಾಗಿಯೂ ಬದಲಿಸಬೇಕು ಮತ್ತು ಬದಲಾಯಿಸಿಯೇ ತೀರುತ್ತೇನೆ ಎಂದು ಫಣ ತೊಟ್ಟ ಸಾಳ್ವೆಯವರು ಭಾರತಕ್ಕೆ ಹಿಂದಿರುಗಿದ ಕೂಡಲೇ, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಭೇಟಿಯಾಗಿ ತಮಗೆ ಆದ ಅವಮಾನವನ್ನು ತಿಳಿಸಿ ಶಾಶ್ವತವಾಗಿ ವಿಶ್ವಕಪ್ ಅನ್ನು ಇಂಗ್ಲೆಂಡ್‌ನಿಂದ ಹೊರಗೆ ತರುವುದೇ ತಮ್ಮ ಧ್ಯೇಯ ಅದಕ್ಕೆ ಪ್ರಧಾನಿಗಳ ಸಹಾಯ ಅವಶ್ಯಕ ಎಂದು ಕೋರಿದರು. ಹೇಳುವುದು ಸುಲಭ ಆದರೆ ಅದನ್ನು ಕಾರ್ಯಗತಗೊಳಿಸುವುದು ಬಹಳ ಕಷ್ಟ ಎಕೆಂದರೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವೀಟೋ ಅಧಿಕಾರವನ್ನು ಹೊಂದಿದ್ದರಿಂದ ಆ ಎರಡು ದೇಶಗಳ ಮಾತೇ ಅಂತಿಮವಾಗುತ್ತದೆ ಎಂದು ಎಲ್ಲರೂ ಎಚ್ಚರಿಸಿದರು.
ಸಾಳ್ವೆಯವರು ಕೇವಲ ನಾಲ್ಕು ಗೋಡೆಗಳ ಮಧ್ಯೆ ಕೂತು ಕನಸನ್ನು ಕಾಣುವ ಬದಲಾಗಿ ತಮ್ಮ ಕನಸನ್ನು ನನಸಾಗಿಸುವ ನೀಲನಕ್ಷೆಯನ್ನು ತಯಾರಿಸಿ ಅದಕ್ಕನುಗುಣವಾಗಿ. ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಏಷ್ಯನ್ ಬಣವಾಗಿ ಒಗ್ಗೂಡಿಸಿದ್ದಲ್ಲದೇ, ಆ ಬಣಕ್ಕೆ ಬಹುಕಾಲದಿಂದಲೂ ಇಂಗ್ಲೆಂಡ್ ನಿರ್ಲಕ್ಷಿಸಿದ್ದ 21 ಅಸೋಸಿಯೇಟ್ ಸದಸ್ಯ ರಾಷ್ಟ್ರಗಳಿಗೆ ಕ್ರಿಕೆಟ್ಟಿಗಾಗಿ ಐದು ಪಟ್ಟು ಹೆಚ್ಚಿನ ಹಣವನ್ನು ನೀಡುವುದಾಗಿ ಹೇಳಿದ್ದಕ್ಕಾಗಿ ಅವರೆಲ್ಲರೂ ಭಾರತವನ್ನು ಬೆಂಬಲಿಸಿದ ಕಾರಣ, 1987ರ ವಿಶ್ವಕಪ್ ಪಂದ್ಯಾವಳಿಗಳು ರಿಲಯನ್ಸ್ ಕಪ್ ಹೆಸರಿನಲ್ಲಿ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಕ್ರಿಕೆತ್ ಮಂಡಳಿಯ ಸಹಭಾಗಿತ್ವದಲ್ಲಿ ಐಸಿಸಿಯ ಸಾರಥ್ಯದಲ್ಲಿ, ಏಷ್ಯಾದಲ್ಲಿ ಹಗಲು ಬಹಳ ಕಡಿಮೆ ಎಂಬ ಕೊಂಕನ್ನು ಇಂಗ್ಲೆಂಡ್ ತೆಗೆದಾಗ, 60 ಓವರ್‌ಗಳ ಬದಲಾಗಿ 50 ಓವರುಗಳ ಪಂದ್ಯವನ್ನಾಗಿಸಿ ನಡೆಸುವ ಮೂಲಕ ಇಂಗ್ಲೆಂಡ್ ನಿಂದ ಹೊರಗೆಯೂ ದೊಡ್ಡ ಮಟ್ಟದಲ್ಲಿ ವಿಶ್ವಕಪ್ ಪಂದ್ಯಾವಳಿಗಳನ್ನು ನಡೆಸಬಹುದು ಎಂದು ಜಗತ್ತಿಗೆ ತೋರಿಸಿಕೊಡುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಇಂಗ್ಲೇಂಡಿನ ಪ್ರಾಭಲ್ಯಕ್ಕೆ ಬಲವಾದ ಪೆಟ್ಟನ್ನು ನೀಡಿದರೆ. ಎನ್‌ಕೆಪಿ ಸಾಳ್ವೇ ಅವರೊಂದಿಗೆ ಜಗಮೋಹನ್ ದಾಲ್ಮಿಯಾ ಮತ್ತು ಐಎಸ್ ಬಿಂದ್ರಾ ಅವರ ಕೊಡುಗೆಯೂ ಬಹಳ ಮುಖ್ಯವಾಗಿತ್ತು.
1987 ರ ರಿಲಯನ್ಸ್ ವಿಶ್ವಕಪ್ ಫೈನಲ್ಸ್ ನವೆಂಬರ್ 8, 1987 ರಂದು ಕಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದು ಮೊದಲು ಆಟವಾಡಿದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 253/5 ಗಳಿಸಿದ್ದಕ್ಕೆ ಉತ್ತರವಾಗಿ ಇಂಗ್ಲೆಂಡ್ 50 ಓವರ್‌ಗಳಲ್ಲಿ 246/8 ಕ್ಕೆ ಸೀಮಿತಗೊಂಡ ಕಾರಣ, ಆಸ್ಟ್ರೇಲಿಯಾ 7 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದೂ ಸಹಾ ಇಂಗ್ಲೇಂಡ್ ತಂಡಕ್ಕೆ ತಡೆದುಕೊಳ್ಳಲಾಗದ ಆಘಾತವಾಯಿತು. ಹೀಗೆ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ, ವಿಶ್ವಕಪ್ ಪಂದ್ಯಾವಳಿಗಳು ಇಂಗ್ಲೆಂಡ್‌ನಿಂದ ಹೊರಬಂದ ನಂತರ ಭಾರತದ ಉಪಖಂಡದ ತಂಡಗಳೂ ಪ್ರಭಲವಾದ ಕಾರಣ, ಮುಂದಿನ ಒಂದು ದಶಕದೊಳಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಮ್ಮ ವೀಟೋ ಅಧಿಕಾರವನ್ನು ಕಳೆದುಕೊಂಡಿದ್ದಲ್ಲದೇ, ಕ್ರಿಕೆಟ್‌ನ ಆರ್ಥಿಕ ಕೇಂದ್ರವು ಲಾರ್ಡ್ಸ್‌ನಿಂದ ಮುಂಬೈಗೆ ಸ್ಥಳಾಂತರಗೊಂಡಿತು.
ಅಡೇ ಸಮಯದಲ್ಲಿ ಭಾರತದಲ್ಲಿಯೂ ಟಿವಿಗಳ ನೋಡುಗರ ಸಂಖ್ಯೆ ಹೆಚ್ಚಾಗಿ ಕೇವಲ ನಗರ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದ ಕ್ರಿಕೆಟ್ ದಿಲ್ಲಿಯಿಂದ ಹಳ್ಳಿ ಹಳ್ಳಿಯವರೆಗೂ ತಲುಪಿದ ಕಾರಣ, ಭಾರತ ತಂಡಕ್ಕೆ ಬಹಳಷ್ಟು ಉತ್ತಮವಾದ ಪ್ರತಿಭೆಗಳು ಬಂದು ಉತ್ತಮ ರೀತಿಯಲ್ಲಿ ತಮ್ಮ ಪ್ರತಿಭೆಯನ್ನು ತೋರಿದ ಕಾರಣ ಭಾರತ ತಂಡವೂ ಒಂದರ ಹಿಂದೆ ಒಂದು ಪಂದ್ಯವನ್ನು ಗೆಲ್ಲುತ್ತಾ ಕ್ರಿಕೆಟ್ ಜಗತ್ತಿನಲ್ಲಿ ಪ್ರಭಲ ತಂಡವಾಗುತ್ತಿದ್ದಂತೆಯೇ ಬಿಸಿಸಿಐ ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಯಿತು. 2008 ರಲ್ಲಿ ಲಲಿತ್ ಮೋದಿ ಆರಂಭಿಸಿದ ಟಿ20 ಐಪಿಎಲ್ ಪಂದ್ಯಾವಳಿಗಳ ಟಿವಿ ಪ್ರಸಾರದ ವಿಶ್ವಾದ್ಯಂತ ಹಕ್ಕುಗಳು ಮಿಲಿಯನ್ ಗಟ್ಟಲೆ ವ್ಯಾಪಾರ ಆಗುತ್ತಿದ್ದಂತೆಯೇ ಬಿಸಿಸಿಐಯನ್ನು ಯಾರೂ ಸಹಾ ಮುಟ್ಟಲಾಗದ ಸ್ಥಿತಿ ತಲುಪಿತು.
1983 ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಾಗ, ಆ ಆಟಗಾರರಿಗೆ ಬಹುಮಾನವಾಗಿ ಕೊಡಲು ಬಿಸಿಸಿಐ ಹತ್ತಿರ ಹಣವಿಲ್ಲದಿದ್ದಾಗ, ಅಂದಿನ ಕ್ರಿಕೆಟ್ ತಂಡ ಮ್ಯಾನೇಜರ್ ಆಗಿದ್ದ ರಾಜ್ ಸಿಂಗ್ ಡುಂಗಾಪುರ್ ಅವರು ಕ್ರಿಕೆಟ್ ಅಭಿಮಾನಿ ಮತ್ತು ತಮ್ಮ ಜೀವಮಾನದ ಪ್ರೇಯಸಿಯಷ್ಟೇ ಅಲ್ಲದೇ, ಭಾರತದ ಶ್ರೇಷ್ಠ ಗಾಯಕಿಯಾದ ಲತಾ ಮಂಗೇಶ್ಕರ್ ಅವರಿಂದ ಉಚಿತವಾಗಿ ನವದೆಹಲಿಯ ಐಜಿಐ ಕ್ರೀಡಾಂಗಣದಲ್ಲಿ ಸಂಗೀತ ಕಚೇರಿಯನ್ನು ನಡೆಸಿ ಸಂಗ್ರಹಿಸಿದ ಹಣವನ್ನು ಆಟಗಾರರಿಗೆ ನೀಡಿದ್ದ ಬಿಸಿಸಿಐ ಇಂದು ಸತತವಾಗಿ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ 131ಕೋಟಿಗಳಷ್ಟು ಬಹುಮಾನವನ್ನು ನೀಡುವಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ, ಅಂದು ಲಾರ್ಡ್ಸ್ ಮೈದಾನದ ಅಧಿಕಾರಿಗಳು ಎರಡು ಟಿಕೆಟ್ ನಿರಾಕರಿಸಿದ್ದನ್ನೇ ಸವಾಲಾಗಿ ಸ್ವೀಕರಿಸಿ ಮುಂದಿನ ನಾಲ್ಕೇ ವರ್ಷಗಳಲ್ಲಿ ಇಂಗ್ಲೆಂಡಿಗೆ ತಕ್ಕ ಪಾಠ ಕಲಿಸಿದ ಎನ್‌ಕೆಪಿ ಸಾಳ್ವೇ ಅವವರ ಇಚ್ಢಾಶಕ್ತಿಯನ್ನು ಮತ್ತು ಕತೃತ್ವವನ್ನು ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯೂ ನೆನಯಲೇ ಬೇಕು.
ಭಾರತೀಯ ಕ್ರಿಕೆಟ್ಟಿಗೆ ಸಾಳ್ವೆಯವರ ಅಪಾರವಾದ ಕೊಡುಗೆಯನ್ನು ಅಜರಾಮರವಾಗಿಸುವ ನಿಟ್ಟಿನಲ್ಲಿ ಅವರ ಹೆಸರಿನಲ್ಲೇ NKP ಸಾಲ್ವೆ ಚಾಲೆಂಜರ್ ಟ್ರೋಫಿ ಎಂಬ ವಾರ್ಷಿಕ ಪಂದ್ಯಾವಳಿಗಳನ್ನು ಭಾರತದ ಉದಯೋನ್ಮುಖ 36 ಆಟಗಾರರು ಮೂರು ತಂಡಗಳಲ್ಲಿ ಇಂಡಿಯಾ ಸೀನಿಯರ್ಸ್ ಇಂಡಿಯಾ ಬ್ಲೂ ಆಗಿ, ಇಂಡಿಯಾ ಎ ಇಂಡಿಯಾ ರೆಡ್ ಆಗಿ ಮತ್ತು ಇಂಡಿಯಾ ಬಿ ಇಂಡಿಯಾ ಗ್ರೀನ್ ಆಗಿ ಆಡುವ ಪಂದ್ಯಾವಳಿಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ ಬಹುತೇಕ ಆಟಗಾರರೇ ಭಾರತ ತಂಡಕ್ಕೆ ಆಯ್ಕೆಯಾಗಿ ವಿಶ್ವ ಕ್ರಿಕೆಟ್ ಜಗತ್ತಿನಲ್ಲಿ ಸಾಳ್ವೆಯವರ ಅಜೇಯದ ಕನಸನ್ನು ನನಸಾಗಿಸುತ್ತಿರುವುದು ಶ್ಲಾಘನೀಯವಾಗಿದೆ. ಎಷ್ಟಾದರೂ ನಮ್ಮದು ಭೀಷ್ಟ, ದ್ರೋಣಾಚಾರ್ಯ, ದ್ರೌಪತಿ, ಚಾಣಕ್ಯ, ಕಣ್ಣಗಿ, ಅಲಮೇಲಮ್ಮನವರಂತಹ ಪ್ರತಿಜ್ಞೆಯನ್ನು ನನಸಾಗಿಸಿದ ದೇಶದವರಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಇದು ಭಾರತ ತಂಡ ಸತವಾಗಿ ಎರಡು ಬಾರಿ T20 ವಿಶ್ವಕಪ್ ಗೆದ್ದಾಗ ಸಾಮಾಜಿಕ ಜಾಲತಾಣವೊಂದರಲ್ಲಿ ಓದಿದ ಆಂಗ್ಲ ಸಂದೇಶದ ಭಾವಾನುವಾದವಾಗಿದೆ.