ಹೇಳಿ ಕೇಳೀ ಕರ್ನಾಟಕದ ನೆಲವು ವೈವಿಧ್ಯಮಯ ಜನಪದ ಕಲೆಗಳ ನಾಡಾಗಿದ್ದು, ಈ ಕಲೆಗಳಲ್ಲಿ ಗ್ರಾಮೀಣ ಜೀವನದ ಭಾವನೆ, ಸಂಸ್ಕೃತಿ, ಆಚರಣೆ, ನಂಬಿಕೆ ಹಾಗೂ ಜನರ ಮನೋಭಾವಗಳು ಪ್ರತಿಫಲಿಸುತ್ತವೆ. ಅಂತಹ ಅದ್ಭುತ ಜನಪದ ಕಲೆಯ ಭಾಗವೇ ರಂಗ ಕುಣಿತ ಎಂದರೂ ತಪ್ಪಾಗದು. ರಂಗ ಕುಣಿತ ಇದು ಕೇವಲ ಮನರಂಜನೆಗಾಗಿ ಮಾಡುವ ನೃತ್ಯವಾಗಿರದೇ, ಧಾರ್ಮಿಕ ಭಕ್ತಿ ಮತ್ತು ನಂಬಿಕೆಯ ಹೆಸರಿನಲ್ಲಿ ಇಡೀ ಊರಿನ ಜನರನ್ನು ಒಗ್ಗಟ್ಟಾಗಿಸುವ ಮತ್ತು ಕೃಷಿ ಚಟುವಟಿಕೆಗಳಿಗೆ ಮುಂಚೆ ಜಡವಾಗಿದ್ದ ಅವರ ದೇಹವನ್ನು ಸಡಿಲ ಗೊಳಿಸುವುದಷ್ಟೇ ಅಲ್ಲದೇ ಸಾಮಾನ್ಯ ಅತೀ ಸಾಮಾನ್ಯ ಜನರಿಗೂ ತಾಳ ಮತ್ತು ನೃತ್ಯದ ಗತ್ತುಗಳನ್ನು ಕಲಿಸುವ ಸುಂದರ ಕಲೆಯ ರೂಪವಾಗಿದೆ.
ಸಾಮಾನ್ಯವಾಗಿ ಈ ರಂಗ ಕುಣಿತವನ್ನು ಬಹುತೇಕ ಹಳ್ಳಿಗಳ ಉತ್ಸವ, ಜಾತ್ರೆ, ದೇವರ ಹಬ್ಬ ಮುಂತಾದ ವಿಶೇಷ ಸಮಾರಂಭಗಳು ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಕಾಣಸಿಗುವ ಜನಪದ ನೃತ್ಯ ರೂಪವಾಗಿದೆ. ರಂಗ ಎಂಬ ಪದವು ಇಲ್ಲಿ ಬಣ್ಣ, ಚೈತನ್ಯ, ಉತ್ಸಾಹ ಮತ್ತು ವೇದಿಕೆಯ ಅರ್ಥವನ್ನು ನೀಡಿದರೆ, ಇನ್ನು ಕುಣಿತ ಎನ್ನುವುದು ಮನಸ್ಸಿನ ಎಲ್ಲಾ ದುಗಡಗಳನ್ನೂ ಮರೆತು ಊರಿನವರೆಲ್ಲಾ ಸೇರಿಕೊಂಡು ಭಕ್ತಿ, ಭಾವ, ಮತ್ತು ಉಲ್ಲಾಸದಿಂದ ತಮಟೆಯ ನಾದಕ್ಕೆ ತಕ್ಕಂತೆ ಮಾಡುವ ನೃತ್ಯವಾಗಿದೆ. ಈ ಕಲೆಯ ಮೂಲಕ ಕುಣಿಯುವವರು ಮತ್ತು ಅದನ್ನು ನೋಡಲು ಬಂದವರ ಮನಸ್ಸನ್ನು ರಂಜಿಸುವುದರ ಜೊತೆಗೆ, ಅವರ ಸಂಸ್ಕೃತಿಯ ಬೇರುಗಳನ್ನು ಉಳಿಸಿಕೊಂಡು ಹೋಗುವ ಸುಂದರ ಪರಂಪರೆಯ ಧ್ಯೋತಕವಾಗಿದೆ.
ಸಾಮಾನ್ಯವಾಗಿ ನೃತ್ಯ ಎಂದೊಡನೆ ವಿಶೇಷ ವೇಷಭೂಷಣ ಧರಿಸಿಕೊಂಡು ಹಾಡು ಮತ್ತು ತಾಳಕ್ಕೆ ಅನುಗುಣವಾಗಿ ಕೈಕಾಲು ಮತ್ತು ಮುಖಭಾವನೆಯ ಮೂಲಕ ಪ್ರದರ್ಶಿಸುತ್ತಾರೆ. ಆದರೆ ಈ ರಂಗ ಕುಣಿತದಲ್ಲಿ ಇದಾವುದರ ಪರಿಮಿತಿಯೇ ಇಲ್ಲದೇ, ಊರಿನ ಮಧ್ಯದಲ್ಲಿರುವ ದೊಡ್ಡ ಮೈದಾನ ಅಥವಾ ನಮ್ಮೂರು, ಬಾಳಗಂಚಿಯಲ್ಲಿ ಇರುವಂತೆ ರಂಗ ಮಂಟಪದ ಮುಂದೆ ರಾತ್ರಿ ಊಟವಾದ ನಂತರ ಕನಿಷ್ಟ ಪಕ್ಷ ಮನೆಗೆ ಒಬ್ಬರಂತೆ ಗಂಡಸರು ಮತ್ತು ಮಕ್ಕಳು ಕೈಯ್ಯಲ್ಲೊಂದು ಶಲ್ಯ ಇಲ್ಲವೇ ಕೈವಸ್ತ್ರ ಹಿಡಿದು ಗೆಜ್ಜೆ ಇದ್ದರೆ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಗೆಜ್ಜೆ ಇಲ್ಲದಿದ್ದರೆ, ಜಾಲಿಯ ಕಾಯಿಗಳು ಸದ್ದು ಮಾಡುವುದರಿಂದ ಅಂತಹವುಗಳನ್ನು ಕಟ್ಟಿಕೊಂಡು ರಂಗಮಂಟಪದ ಮುಂದೆ ಬಂದು ಸೇರುತ್ತಾರೆ.
ಇನ್ನು ತಮಟೆ ನುಡಿಸುವವರು ರಂಗ ಮಂಟಪದ ಮುಂದೆ ತೆಂಗಿನ ಗರಿಯ ಸೋಗೆಗಳಿಗೆ ಬೆಂಕಿ ಹಾಕಿ, ಚರ್ಮದ ತಮಟೆಗಳನ್ನು ಹದವಾಗಿ ಕಾಯಿಸಿ, (ಈಗೆಲ್ಲಾ ಪಾಲೀಥೀನ್ ತಮಟೆಗಳು ಬಂದಿದ್ದು, ಅವುಗಳ ನಾದ ಚರ್ಮದ ತಮಟೆಗಳ ಮುಂದೆ ಏನೂ ಇಲ್ಲವಾಗಿದೆ) ಟ್ರಣ ಟ್ರಣ್ ಎನ್ನುತ್ತಿದ್ದಂತೆಯೇ ಆಬಾಲವೃಧ್ಧರಾದಿಯಾಗಿ ಎಲ್ಲಾ ಗಂಡಸರೂ ಕೈಯಲ್ಲಿ ಶಲ್ಯವೋ ಇಲ್ಲವೇ ಹೆಗಲು ಮೇಲಿನ ವಸ್ತ್ರವನ್ನು ಹಿಡಿದುಕೊಂಡು ಹಲ್ಯೋ.. ಹಲ್ಯೋ.. ಹಲ್ಯೋ.. ಎಂದು ರಂಗ ಕುಣಿಯುವುದಕ್ಕೆ ಅರ್ಧ ವೃತ್ತಾಕಾರದಲ್ಲಿ ನಿಂತು ಸಿದ್ದರಾಗುತ್ತಾರೆ. ಆರಂಭದಲ್ಲಿ ತಮಟೆ ನುಡಿಸುವವರು ನಿಧಾನ ಗತಿಯಲ್ಲಿ ಕೈಕಾಲುಗಳನ್ನು ಸಡಿಲ ಗೊಳಿಸುವ ಗತ್ತನ್ನು ನುಡಿಸುತ್ತಾ, ಕೆಲ ಸಮಯದ ನಂತರ ವೇಗವಾಗಿ ನುಡಿಸುವ ಗತ್ತಿಗೆ ಕೈ ಕಾಲುಗಳನ್ನು ಚಲಿಸುತ್ತಾ ಅದಕ್ಕೆ ತಕ್ಕಂತೆ ದೇಹವನ್ನೂ ಬಳುಕಿಸುತ್ತಾ ಸಹಜವಾಗಿ ಆದರೆ ಅಷ್ಟೇ ಸುಂದರವಾಗಿ ಮನ ಬಿಚ್ಚಿ ಕುಣಿಯುವುದನ್ನು ನೋಡುವುದಕ್ಕಿಂತಲೂ ಅನುಭವಿಸಿದರೆ ಬಹಳ ಮುದ ನೀಡುತ್ತದೆ. ಇದು ಕೇವಲ ಕಲೆ ಅಥವಾ ಕಲಾ ಪ್ರದರ್ಶನವಷ್ಟೇ ಆಗಿರದೇ, ಊರಿನ ಜನರ ಒಗ್ಗಟ್ಟು, ಸಹಕಾರ, ಸಮುದಾಯ ಭಾವ ಮತ್ತು ಸಂಭ್ರಮದ ಸಂಕೇತವಾಗಿದೆ.
ಪ್ರ
ತೀ ಒಂದೆರಡು ನಿಮಿಷಗಳಿಗೊಮ್ಮೆ ಹಲ್ಯೋ.. ಹಲ್ಯೋ.. ಹಲ್ಯೋ.. ಎಂದು ದಿಕ್ಕು ಬದಲಿಸುತ್ತಾ, ಪ್ರತೀ ಐದಾರು ನಿಮಿಷಗಳಿಗೊಮ್ಮೆ ಗತ್ತನ್ನು ಬದಲಿಸುತ್ತಾ ವಿವಿಧ ರೀತಿಯಲ್ಲಿ ರಂಗ ಕುಣಿಯುತ್ತಿದ್ದರೆ, ನೋಡುತ್ತಿರುವ ಕೈಕಾಲುಗಳು ಅವರ ಅರಿವಿಲ್ಲದಂತೆಯೇ ಆಡಿಸುವುದೇ ರಂಗದ ಗತ್ತಾಗಿದೆ. ಇನ್ನು ಕುಣಿದು ಕುಪ್ಪಳಿಸಿದ ನಂತರ ಆಯಾಸವನ್ನು ಪರಿಹರಿಸಿಕೊಳ್ಳಲು ನೀಡುವ ಕೆಲ ನಿಮಿಷಗಳ ವಿಶ್ರಾಂತಿಯಲ್ಲಿ ತಮಟೆ ನುಡಿಸುವವರು ಮತ್ತು ಕುಣಿಯುವವರಲ್ಲಿ ಕೆಲವರು ಆ ಊರಿನ ದೇವರ ಕುರಿತಾದ ಪದಗಳನ್ನು ಹೇಳಿ ರಂಜಿಸಿದರೆ, ಇನ್ನೂ ಕೆಲವೊಮ್ಮೆ ರಂಗ ಕುಣಿಯುವವರನ್ನು ಮತ್ತು ಅದನ್ನು ನೋಡಲು ಬಂದವರ ಮನರಂಜಿಸಲು ವಿವಿಧ ವೇಷಗಳನ್ನು ಧರಿಸಿ ಸಣ್ಣ ಸಣ್ಣ ಹಾಸ್ಯ ಕುಚೇಷ್ಟೆಗಳಿಂದ ಐದು ಹತ್ತು ನಿಮಿಷ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಾರೆ. ಹೀಗೆ ಹಾಸ್ಯ ಕುಚೇಷ್ಟೆಗಳನ್ನು ಮಾಡುವ ಸಂಧರ್ಭದಲ್ಲಿ ಕೆಲವೊಮ್ಮೆ ಗ್ರಾಮೀಣ ರೀತಿಯ ಅಶ್ಲೀಲಕ್ಕೆ ತಿರುಗಿ ಅಲ್ಲಿರುವ ಹೆಂಗಳೆಯರಿಗೆ ಮುಜುಗರ ತರುವ ಸಂದರ್ಭಗಳೂ ಉಂಟು. ಹೀಗೆ ಸುಮಾರು ಒಂದು ಗಂಟೆಗಳ ಕಾಲ ರಂಗ ಕುಣಿತ ಮತ್ತು ಹಾಸ್ಯಗಳ ನಂತರ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋಗಿ ಸುಖಃವಾದ ನಿದ್ರೆಗೆ ಜಾರುತ್ತಾರೆ. ಈ ರೀತಿಯ ರಂಗ ಕುಣಿತ ಊರಿನ ಹಬ್ಬಕ್ಕೆ ವಾರ ಇಲ್ಲವೇ ಎರಡು ವಾರಗಳ ಮುಂಚೆಯೇ ಆರಂಭವಾಗಿ ಹಬ್ಬದ ದಿನಕ್ಕೆ ಕೊನೆಗೊಳ್ಳುತ್ತದೆ.
ಆಧುನಿಕತೆಯ ಪರಿಣಾಮದಿಂದ, ಇಂದಿನ ಯುವ ಪೀಳಿಗೆಗಳ ಆಸಕ್ತಿ ಯಾಂತ್ರೀಕೃತ ನಗರ ಜೀವನದ ತಂತ್ರಜ್ಞಾನ ಮತ್ತು ಹೊಸಾ ಮನರಂಜನಾ ರೂಪಗಳ ಕಡೆ ಹೆಚ್ಚು ತಿರುಗಿರುವ ಕಾರಣದಿಂದ ಈ ರೀತಿಯ ಅನೇಕ ಜನಪದ ಕಲೆಗಳು ನಿಧಾನವಾಗಿ ಕಣ್ಮರೆ ಆಗುತ್ತಿದ್ದರೂ, ಇಂದಿಗೂ ಹಳೇ ಮೈಸೂರಿನ ಭಾಗಗಳಾದ ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ರಂಗ ಕುಣಿತದಂತಹ ಜನಪದ ಕಲೆಗಳು ಉಳಿದಿರುವುದು ಶ್ಲಾಘನೀಯವಾಗಿದೆ.
ನಮ್ಮ ಜನಪದ ಕಲೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಈ ಎಲ್ಲಾ ಕಲೆಗಳನ್ನೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿ, ಶಾಲಾ ಕಾಲೇಜು ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಶ್ಚಾತ್ಯ ನೃತ್ಯಗಳ ಬದಲಾಗಿ ಇಂತಹ ನಮ್ಮ ಗ್ರಾಮೀಣ ಸೊಗಡಿನ ಜನಪದ ಕಲೆಗಳಿಗೆ ಪ್ರಾಮುಖ್ಯತೆ ನೀಡಿದಲ್ಲಿ ನಮ್ಮ ಜನಪದ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿದಂತೆಯೂ ಆಗುತ್ತದೆ ಮತ್ತು ನಮ್ಮ ಸಂಸ್ಕೃತಿಯು ಮುಂದಿನ ಪೀಳಿಗೆಗೂ ಜೀವಂತವಾಗಿ ಉಳಿಸ ಬಹುದು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ