ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮಹತ್ವವನ್ನು ಸಾರಲು “ಗಲೀಜು (ಕೊಳಕು) ಇರುವ ಸ್ಥಳದಲ್ಲಿ ಹಂದಿಗಳು ಆಕರ್ಷಿತವಾಗುತ್ತವೆ” ಎಂಬ ಜನಪ್ರಿಯ ಗಾದೆ ಮಾತೊಂದನ್ನು ನಮ್ಮ ಹಿರಿಯರು ಬಳಸುವುದನ್ನು ನೋಡಿದ್ದೇವೆ. ಪ್ರಸ್ತುತವಾಗಿ ಇದೇ ಗಾದೆ ಮಾತು “ದೇಶವಿರೋಧಿ ಕೃತ್ಯ ಅಥವಾ ದೇಶವಿರೋಧಿಗಳು ಇರುವ ಸ್ಥಳದಲ್ಲಿ ಪ್ರಕಾಶ್ ರೈ ಆಕರ್ಷಿತರಾಗುತ್ತಾರೆ” ಇಲ್ಲವೇ, “ಪ್ರಕಾಶ್ ರಾಜ್ ಇದ್ದ ಕಡೆ ದೇಶ ವಿರೋಧಿಗಳು ಇರುತ್ತಾರೆ” ಎಂದು ಹೇಳಿದರೂ ತಪ್ಪಾಗದು ಎಂದು ಜನರು ಆಡಿಕೊಳ್ಳುತ್ತಿದ್ದರೆ ಅದಕ್ಕೆ ನೇರವಾಗಿ ಕನ್ನಡ ಮೂಲದ ಬಹುಭಾಷಾ ಚಲನಚಿತ್ರ ನಟ ಪ್ರಕಾಶ್ ರೈ (ಪ್ರಕಾಶ್ ರಾಜ್) ಅವರೇ ಹೊಣೆಗಾರರಾಗುತ್ತಾರೆ ಎಂದರೂ ತಪ್ಪಾಗದು.
ಅವರು ಇತ್ತೀಚಿನ ದಿನಗಳಲ್ಲಿ ತನ್ನ ಸಿನಿಮಾ ವಿಚಾರಕ್ಕಿಂತಲೂ ಹೆಚ್ಚಾಗಿ ತನಗೆ ಬೇಡವಾದ ವಿಚಾರಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಕುಖ್ಯಾತಿಯನ್ನು ಪಡೆದಿದ್ದಾರೆ. ತಮ್ಮ ವಿಶಿಷ್ಟ ಅಭಿನಯದ ಮೂಲಕ ಜನಮನ್ನಣೆ ಮತ್ತು ಹಲವಾರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವುದು ಎಷ್ಟು ಸತ್ಯವೂ ಹಾಗೆಯೇ ತನಗೆ ಸಂಬಂಧ ಪಡದ ವಿಷಯಗಳೆಲ್ಲಾ ಮೂಗು ತೂರಿಸಿತ್ತಾ, ಬಹುತೇಕ ಎಲ್ಲಾ ಭಾಷಾ ಚಿತ್ರರಂಗದಿಂದಲೂ ಬಹಿಷ್ಕಾರ ಹಾಕಿಸಿಕೊಂಡ ನಟರುಗಳಲ್ಲಿ ಅಗ್ರೇಸರ ಎಂದರೂ ತಪ್ಪಾಗದು. ತಮ್ಮ ರಾಜಕೀಯ, ಧಾರ್ಮಿಕ ನಿಲುವುಗಳು ಮತ್ತು ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ ಆಗ್ಗಾಗ್ಗೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸಾಮಾಜಿಕ ಜಾಲತಾಣಗಳು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಹಲವಾರು ಬಾರಿ ವಿವಾದಗಳನ್ನು ತನ್ನ ಮೈಮೇಲೆ ಎಳೆದುಕೊಳ್ಳುವ ಎಡಬಿಡಂಗಿಯಾಗಿದ್ದು ಈಗ ಧರ್ಮಸ್ಥಳದ ಬುರುಡೆ ಗ್ಯಾಂಗ್ ವಿಚಾರ ಮತ್ತು CJP ಬೆಂಗಳೂರಿನ ಪ್ರತಿಭಟನೆಯಲ್ಲಿಯೂ ಭಾಗವಹಿಸಿ ತಮ್ಮವಿವಾದಾತ್ಮಕ ಹೇಳಿಕೆಯಿಂದಾಗಿ ಮತ್ತೆ ಮುನ್ನಲೆಗೆ ಬಂದಿದ್ದಾರೆ.

ಪ್ರಕಾಶ್ ರೈ ಅವರ ಉಳಿದೆಲ್ಲಾ ವಿವಾದಾತ್ಮಕ ಹೇಳಿಕೆಗಳು ಎಷ್ಟೇ ಇದ್ದರೂ, ಧರ್ಮಸ್ಥಳದ ಸೌಜನ್ಯಾ ಕೊಲೆಗೆ ಸಂಬಂಧ ಪಟ್ಟ ವಿಚಾರದಲ್ಲಿ ಬುರುಡೆ ಗ್ಯಾಂಗ್ ನೊಳಗೆ ಪ್ರಕಾಶ್ ರೈ ಪಾತ್ರ ಎಲ್ಲಿಯೂ ಕೇಳಿ ಬಂದಿರಲ್ಲ. ಬಾಯಿ ಚಪಲಕ್ಕೆ ನಾನು ಗೌರಿ ಎಂದು ಗೌರಿ ಲಂಕೇಶ್ ಕೊಲೆಯಾದಾಗ, ಅತ್ತು ಕರೆದು ಕಾಸು ಮಾಡಿಕೊಂಡಂತೆ ಆಗೊಮ್ಮೆ ಈಗೊಮ್ಮೆ ಸೌಜನ್ಯ ವಿಚಾರದಲ್ಲಿಯೂ ಒಂದೆರಡು ಹೇಳಿಕೆಗಷ್ಟೇ ಸೀಮಿತವಾಗಿದ್ದ ರೈ, ಈಗ ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ತನಿಖಾ ವರದಿ ಬಹಿರಂಗಪಡಿಸುವಂತೆ ಕೋರಿ ಚಿನ್ನಯ್ಯ ಸಲ್ಲಿಸಿರುವ ಅರ್ಜಿಯಲ್ಲಿ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ವಿರುದ್ಧ ನಟ ಪ್ರಕಾಶ್ ರಾಜ್, ಗಿರೀಶ್ ಮಟ್ಟಣ್ಣವರ್ ಮತ್ತಿತರರು ಸುಮಾರು 200 ಕೋಟಿ ರೂ. ಷಡ್ಯಂತ್ರ ರೂಪಿಸಿದ್ದರು ಎಂದು ಆರೋಪಿರುವುದಲ್ಲದೇ, ತನ್ನನ್ನು ಕೇರಳದ ಮುಡಾಯಿಕಲ್ ದೇವಸ್ಥಾನಕ್ಕೆ ಹಾಗೂ ಒಂದು ರೆಸಾರ್ಟ್‌ಗೆ ಕರೆದೊಯ್ದಿದ್ದಾಗ, ಒಂದು ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ಗಿರೀಶ್ ಮಟ್ಟಣ್ಣವರ್ ಅವರು ನಟ ಪ್ರಕಾಶ್ ರಾಜ್ ಅವರಿಗೆ ಕರೆ ಮಾಡಿ ತನ್ನ ಕೈಗೆ ಪೋನನ್ನು ಕೊಟ್ಟಾಗ, ಆ ಕಡೆಯಿಂದ ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ನನ್ನೊಂದಿಗೆ ಮಾತನಾಡಿ, ಗಿರೀಶ್ ಮಟ್ಟಣ್ಣವರ್ ಹೇಳಿಕೊಟ್ಟಂತೆ ಅಧಿಕಾರಿಗಳ ಮುಂದೆ ಹೇಳಿಕೆ ನೀಡಬೇಕೆಂದು ಮತ್ತು ತಾವು 29 ನೇ ತಾರೀಕಿಗೆ ಬಂದು ತನ್ನನ್ನು ಅಪ್ಪಿಕೊಳ್ಳುವುದಾಗಿ ಹೇಳಿದರು ಎಂಬ ಹೇಳಿಕೆ ನಿಜಕ್ಕೂ ಅಚ್ಚರಿಯನ್ನು ಮೂಡಿಸಿದ್ದು, ಧರ್ಮಸ್ಥಳದ ವಿವಾದದಲ್ಲಿ ಪ್ರಕಾಶ್ ರೈ ಅವರೇಕೆ ಮೂಗು ತೂರಿಸಿಕೊಂಡು ಬಂದರು? ಅವರಿಗೂ ಈ ಬುರುಡೇ ಗ್ಯಾಂಗ್ ಏನು ಸಂಬಂಧ? ಎಂದೆಲ್ಲಾ ಜನರು ಮಾತನಾಡಿಕೊಳ್ಳುತ್ತಿರುವುದಕ್ಕೆ ಉತ್ತರಿಸಲೇ ಬೇಕಾಗಿದೆ.

ತಮ್ಮ ಮೇಲಿನ ಆರೋಪವನ್ನು ಸಾರಾಸಕಟಾಗಿ ತಳ್ಳಿಹಾಕಿದೇ, ಜಾಲತಾಣ x ನಲ್ಲಿ ಈರೀತಿಯಾಗಿ ಪೋಸ್ಟ್ ಮಾಡಿದ್ದಾರೆ. “ಎಲ್ಲರಿಗೂ ನಮಸ್ಕಾರ.. ಮಾಧ್ಯಮಗಳಲ್ಲಿ… ಸಾಮಾಜಿಕ ಜಲತಾಣಗಳಲ್ಲಿ ಧರ್ಮಸ್ತಳ ಪ್ರಕರಣದ ಕುರಿತಂತೆ ನನ್ನ ಬಗ್ಗೆ ಕೆಲವು ಸುದ್ದಿ ಚರ್ಚಿಸಲ್ಪಡುತ್ತಿರುವು ನನ್ನ ಗಮನಕ್ಕೆ ಬಂದಿದೆ. ಇದು ಅತಿ ಸೂಕ್ಷ್ಮವಾದ .. ಮತ್ತು ಕೋಟ್ಯಾಂತರ ಭಕ್ತರ ನಂಬಿಕೆಗೆ ಧಕ್ಕೆ ತಂದಿರುವ ಪ್ರಕರಣವಾಗಿರುವುದರಿಂದ .. ಈ ರೀತಿಯ ಅನುಮಾನಗಳಿಗೆ ಉತ್ತರಿಸಬೇಕಾಗಿರುವುದು ನನ್ನ ಕರ್ತವ್ಯವೂ ಆಗಿದೆ . ನಾನು ದೂರದೂರಿನಲ್ಲಿದ್ದೇನೆ. ಇನ್ನೆರಡು ದಿನಗಳಲ್ಲಿ ನಾನೇ ಸ್ವತಃ ಬಂದು ಮಾಧ್ಯಮ ಮಿತ್ರರ ಮುಖೇನ ಉತ್ತರಿಸುತ್ತೇನೆ. ಅಲ್ಲಿಯವರೆಗೆ ಗಾಳಿಮಾತುಗಳನ್ನು .. ಮತ್ತು ಕೆಲವು ದುರುಳರು ಈ ಸುದ್ದಿಗೆ ಕಟ್ಟಲೆತ್ನಿಸುತ್ತಿರುವ ರೆಕ್ಕೆ ಪುಕ್ಕಗಳನ್ನು ನಂಬದಿರಿ” ಎಂದಿದ್ದಾರೆ.
ಹೌದು ನಿಜ. ಪ್ರಕಾಶ್ ರೈ ದೇಶಾದ್ಯಂತ ವಿವಿಧ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವ ಕಾರಣ ಬಹುಶಃ ಕರ್ನಾಟಕದಲ್ಲಿ ಇಲ್ಲದೇ ಇರಬಹುದು ಹಾಗಾಗಿ ಅವರೇ ಹೇಳಿದಂತೆ ಒಂದೆರಡು ದಿನಗಳಲ್ಲಿ ಬೆಂಗಳೂರು/ಮಂಗಳೂರಿಗೆ ಬಂದು ಧರ್ಮಸ್ಥಳ ಬುರುಡೇ ಗ್ಯಾಂಗ್ ನಲ್ಲಿ ತಮ್ಮ ಪಾತ್ರವೇನು ಎಂಬುದರ ಕುರಿತಾಗಿ ಸ್ಪಷ್ಟವಾದ ಮಾಹಿತಿ ನೀಡುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದಾಗಲೇ, ಹೇಳುವುದೊಂದು ಮಾಡುವುದು ಮತ್ತೊಂದು ಎನ್ನುವಂತೆ ಮತ್ತು ತಾನು ಮಾತ್ರಾ ತನ್ನ ಪ್ರಸಿದ್ಧ ಹ್ಯಾಶ್‌ಟ್ಯಾಗ್ #justasking (ಕೇವಲ ಪ್ರಶ್ನಿಸುತ್ತಿದ್ದೇನೆ) ಎನ್ನುವ ಮೂಲಕ ಯಾರನ್ನು ಬೇಕಾದರೂ ಕೇಳಬಹುದು ಮತ್ತು ತಾನು ಕೇಳಿದ ಕೂಡಲೇ ಉತ್ತರವನ್ನು ನಿರೀಕ್ಷಿಸುವ ಪ್ರಕಾಶ್, ಆದರೆ ತನ್ನನ್ನು ಮಾತ್ರಾ ಯಾರೂ ಕೇಳಬಾರದು ಮತ್ತು ಅವರು ಕೇಳಿದ ಪ್ರಶ್ನೆಗೆ ತಾನು ಕೊಡುವ ಉಡಾಫೆಯ ಮಾತುಗಳನ್ನೇ ಸ್ವೀಕರಿಸಬೇಕು ಎಂಬುದನ್ನು ಹಲವಾರು ಬಾರಿ ನಿರೂಪಿಸಿದ್ದಾರೆ (ಟಿವಿ ನಿರೂಪಕಿಯೊಂದಿಗೆ ಕಾವೇರಿ ನೀರಿನ ವಿವಾದ ಸಮಯದಲ್ಲಿ ಸಂದರ್ಶನದಿಂದ ಎದ್ದು ಹೊರೆ ನಡೆದಿದ್ದು, ಮಂಡ್ಯಾದ ಪತ್ರಿಕಾಗೋಷ್ಟಿಯಲ್ಲಿ ತಮ್ಮ ವಿರುದ್ಧ ಕೇಳಿದ್ದ ಪ್ರಶ್ನೆಗೆ ತೀವ್ರವಾದ ಆಕ್ರೋಶ ವ್ಯಕ್ತಪಡಿಸಿದ್ದು, ಹಿರಿಯ ರಾಜಕಾರಣಿ ಸುಬ್ರಹ್ಮಣ್ಯ ಸ್ವಾಮಿ ಅವರೊಂದಿಗೆ ಚರ್ಚೆಯೊಂದರಲ್ಲಿ ಅವರ ಪ್ರಶ್ನೆಗೆ ಉತ್ತರಿಸಲಾಗದೇ ವೇದಿಕೆಯಲ್ಲೇ ನಖಶಿಖಾ ಎಂದು ಉರಿದುಕೊಂಡಿದ್ದು, ತಮ್ಮ ಉತ್ತಮ ಸ್ನೇಹಿತೆಯಾದ ಅಂದಿನ ಬಿಜೆಪಿ ವಕ್ತಾರೆ ಮತ್ತು ನಟಿಯೂ ಆದ ಮಾಳವಿಕಾ ಅವಿನಾಶ್ ಆವರೊಂದಿಗೆ ಸಂದರ್ಶನದಲ್ಲೂ ಸಹಾ ಹೀಗೆ ಕಿರುಚಾಡಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ)
ಧರ್ಮಸ್ಥಳ ಬುರುಡೆ ಗ್ಯಾಂಗ್ ಸಂಬಂಧಪಟ್ಟ ವಿಚಾರದಲ್ಲಿ ತಾನು ದೂರದ ಊರಿನಲ್ಲಿ ಇದ್ದೇನೆ ಎಂದು ಹೇಳಿದ ಇದೇ ಪ್ರಕಾಶ್ ಆದಾದ ಕೇವಲ ಎರಡೇ ದಿನಗಳಲ್ಲಿ ಅಂದರೆ ಭಾನುವಾರ, ಜೂನ್ 14, 2026ರ ಸಂಜೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಇತ್ತೀಚಿನ ನೀಟ್-ಯುಜಿ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗೆ ಹೊಣೆಗಾರಿಕೆಯ ವಿರುದ್ಧ ಆಕ್ಷೇಪಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕುರಿತಾಗಿ ನಡೆಸಿದ ಪ್ರತಿಭಟನೆಯಲ್ಲಿ ದೇಶವಿರೋಧಿ ಸಂಘಟನೆಗಳ ಪರವಾಗಿ ಸದಾಕಾಲ ಗುರುತಿಸಿಕೊಳ್ಳುವ ಮತ್ತು ತನ್ನ ದೇಶವಿರೋಧಿ ಹೇಳಿಕೆಗಳಿಂದಲೇ ಪ್ರ(ಕು)ಖ್ಯಾತಿಯನ್ನು ಪಡೆದಿರುವ ಸೋನಮ್ ವಾಂಗ್‌ಚುಕ್ ಜೊತೆ ಇದೇ ಪ್ರಕಾಶ್ ರಾಜ್ ಸಕ್ರಿಯವಾಗಿ ಭಾಗವಹಿಸಿದ್ದರು.

ದೇಶದ ಶಿಕ್ಷಣ ಕ್ಷೇತ್ರದಲ್ಲಿನ ಸಾಲು ಸಾಲು ವೈಫಲ್ಯಗಳು ಹಾಗೂ ನೀಟ್ (NEET) ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ’ (CJP) ಆಯೋಜಿಸಿರುವ ಈ ದೇಶವ್ಯಾಪಿ ಅಭಿಯಾನದ ಧರಣಿಗೂ ಪ್ರಕಾಶ್ ರಾಜ್ ಗೂ ಯಾವ ಬಾದರಾಯಣ ಸಂಬಂಧ? ಧರ್ಮಸ್ಥಳದ ಕುರಿತಾದ ಪ್ರಕರಣದಲ್ಲಿ ಹೇಳಿಕೆ ನೀಡಲು ದೂರದ ಪ್ರದೇಶದಲ್ಲಿ ಇದ್ದೇನೆ ಎಂದವರು ಅದಾಗಿ ಕೇವಲ ಎರಡೇ ದಿನಗಳಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೇ ದೆಹಲಿಯ ಜೆ.ಎನ್.ಯು ತುಕ್ಡೇ ಗ್ಯಾಂಗ್ ಮತ್ತು ಕೇಜ್ರೀವಾಲ್ ಅವರ ಆಪ್ ಮತ್ತಿ ಇಂಡಿ ಒಕ್ಕೂಟದ ಪರೋಕ್ಷ ಬೆಂಬಲ ಹೊಂದಿರುವ ಮತ್ತು ನೆರೆ ರಾಷ್ಟ್ರಗಳಾದ ಬಾಂಗ್ಲಾ ಮತ್ತು ನೇಪಾಳದಲ್ಲಿ ನಡೆದ ಝೆನ್ ಝೀಗಳ ದಂಗೆಯಂತೆ ವಿದೇಶದಲ್ಲಿ ಕುಳಿತು ಭಾರತಲ್ಲೂ ವಿದ್ಯಾರ್ಥಿಗಳ ಆಂತರಿಕ ದಂಗೆಯನ್ನು ಎಬ್ಬಿಸಲು ಪ್ರಚೋದಿಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ’ (CJP) ಯೊಂದಿಗೆ ಕಾಣಿಸಿಕೊಂಡಿದ್ದು ದೇಶವಿರೋಧಿ ಕೃತ್ಯ ಅಥವಾ ದೇಶವಿರೋಧಿಗಳೊಂದಿಗೆ ಪ್ರಕಾಶ್ ರೈ ಕೈ ಜೋಡಿಸುತ್ತಾರೆ ಎನ್ನುವ ಮಾತು ಎಷ್ಟು ಸತ್ಯ ಎನ್ನುವುದಕ್ಕೆ ಅವರೇ ಪುರಾವೇ ಒದಗಿಸುತ್ತಿದ್ದಾರೆ.
ದೇಶದ ಶಿಕ್ಷಣ ವ್ಯವಸ್ಥೆಯು ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ಸ್ಪರ್ಧಾತ್ಮಕ ಪ್ರಶ್ನೆಪತ್ರಿಕೆಗಳು ಪದೇ ಪದೇ ಸೋರಿಕೆಯಾಗುತ್ತಿರುವುದು ಮತ್ತು ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳಿಂದಾಗಿ ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯವನ್ನು ಅಂಧಕಾರಕ್ಕೆ ದೂಡಿದ್ದು, ನೀಟ್ ಪರೀಕ್ಷೆಯ ಗೊಂದಲ ಹಾಗೂ ಅಕ್ರಮಗಳಿಂದ ಮನನೊಂದು ಇತ್ತೀಚಿನ ದಿನಗಳಲ್ಲಿ ಹಲವು ವೈದ್ಯಕೀಯ ಸೀಟು ಆಕಾಂಕ್ಷಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವುದರ ಕುರಿತಾಗಿ ಯಾವುದೇ ಆಡಳಿತ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ಭಾರತೀಯನಿಗೂ ಇದೆ. ಹಾಗಾಗಿ ಇದರ ಕುರಿತಾಗಿ ಪ್ರಕಾಶ್ ರೈ ಸಹಾ ಮಾತನಾಡುವುದು ತಪ್ಪಲ್ಲ. ಆದರೆ to know about you, tell me about your friends ಎನ್ನುವಂತೆ ಭೂತದ ಕೈಯಲ್ಲಿ ಭಗವದ್ಗೀತೆ ಎನ್ನುವಂತೆ ಪ್ರಕಾಶ್ ರಾಜ್ ಯಾರ ಜೊತೆ ಇದ್ದಾರೆ ಅಥವಾ ಪ್ರಕಾಶ್ ರೈ ಜೊತೆ ಯಾರಿದ್ದಾರೆ ಅಂತಹವರ ವಿಶ್ವಾಸಾರ್ಹತೆ ಏನು? ಆವರ ಹಿನ್ನಲೆ ಏನು? ಎಂಬೆಲ್ಲಾ ವಿಚಾರಗಳನ್ನೂ ಕೂಲಂಕುಶವಾಗಿ ಅವಲೋಕನ ಮಾಡಲೇ ಬೇಕಾಗುತ್ತದೆ. 
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ CJP ವಿದ್ಯಾರ್ಥಿಗಳೊಂದಿಗೆ ಹೋರಾಟ ಮಾಡುತ್ತಿರುವ ವಿಚಾರ ತಿಳಿಯುತ್ತಿದ್ದಂತೆಯೇ ತನ್ನ ಉಪಸ್ಥಿತಿಯಿಂದಾಗಿ ಸಾರ್ವಜನಿಕರು ಮತ್ತು ಮಾಧ್ಯಮಗಳ ಗಮನವನ್ನು ಈ ಪ್ರತಿಭಟನೆಯತ್ತ ದೊಡ್ಡ ಮಟ್ಟದಲ್ಲಿ ಸೆಳೆಯುವಂತೆ ಮಾಡಬಹುದು ಎಂಬ ದೂ(ದು)ರಾಲೋಚನೆಯಿಂದ, “ನನ್ನ ಧ್ವನಿ ವಿದ್ಯಾರ್ಥಿಗಳ ಪರ” ಎಕ್ಸ್ (ಟ್ವಿಟರ್) ಮೂಲಕ ಪ್ರತಿಕ್ರಿಯಿಸಿದ್ದ ನಟ ಪ್ರಕಾಶ್ ರಾಜ್, ಈ ಹೋರಾಟಕ್ಕೆ ತಮಗಿರುವ ಬದ್ಧತೆಯನ್ನು ವ್ಯಕ್ತಪಡಿಸುತ್ತಾ, “ಈ ಅತ್ಯಂತ ಪ್ರಮುಖವಾದ ಹಾಗೂ ಶಾಂತಿಯುತವಾದ ಪ್ರತಿಭಟನೆಗೆ ಬೆಂಬಲ ನೀಡಲು ನಾನು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದೇನೆ. ಶಿಕ್ಷಣ ಕ್ಷೇತ್ರದ ವೈಫಲ್ಯಗಳ ಬಗ್ಗೆ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಮತ್ತು ನಮ್ಮ ಧ್ವನಿಯನ್ನು ಎತ್ತಲು ದಯವಿಟ್ಟು ನೀವೆಲ್ಲರೂ ನಮ್ಮೊಂದಿಗೆ ಕೈಜೋಡಿಸಿ” ಎಂದು ಬರೆದುಕೊಂಡು ಎಂದಿನಂತ ತಮ್ಮ ಪ್ರಸಿದ್ಧ ಹ್ಯಾಶ್‌ಟ್ಯಾಗ್ #justasking (ಕೇವಲ ಪ್ರಶ್ನಿಸುತ್ತಿದ್ದೇನೆ) ಮೂಲಕ ಸಾರ್ವಜನಿಕರಿಗೆ ಕರೆ ನೀಡಿದ್ದಲ್ಲದೇ ಕೊಟ್ಟ ಮಾತಿನಂತೆ ಅಲ್ಲಿಗೆ ಬಂದು ಎಂದಿನಂತೆ ತಮ್ಮ ಸೈದ್ಧಾಂತಿಕ ವಿರೋಧಾಭಾಸಗಳಿಂದಾಗಿ ದೇಶ ವಿಭಜಿಸುವ ಮಾತುಗಳ ಮೂಲಕ ವಿದ್ಯಾರ್ಥಿಗಳನ್ನು ಕೇಂದ್ರ ಸರ್ಕಾರದ ವಿರುದ್ಧ ದಂಗೆ ಏಳುವಂತೆ ಪ್ರಚೋದಿಸಿರುವುದು ಖಂಡನಾರ್ಹವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ವ್ಯವಸ್ಥೆಯ ವಿರುದ್ಧ ಹೋರಾಡಲು ತಮ್ಮ ಪ್ರವಾಸವನ್ನೂ ಮೊಟಕುಗೊಳಿಸಿ ನೇರವಾಗಿ ಪ್ರತಿಭಟನಾ ಕಣಕ್ಕೆ ಧುಮುಕಲು ಸಮಯ ಇರುತ್ತದೆ. ಆದರೆ ಅದೇ ಧರ್ಮಸ್ಥಳದ ಬುರುಡೆ ಗ್ಯಾಂಗ್ ಕುರಿತಾದ ವಿಚಾರದಲ್ಲಿ ಮಾತನಾಡಲು ಸಮಯ ಇಲ್ಲಾ ಎನ್ನುವುದು ಎಷ್ಟು ಹಾಸ್ಯಾಸ್ಪದ ಮತ್ತು ಇದು ಅವರ ಎಡಬಿಡಂಗಿತನವನ್ನು ತೋರಿಸುತ್ತದೆ ಅಲ್ವೇ?
ಪ್ರಕಾಶ್ ರಾಜ್ ಅವರು CJP or SIR ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆಯೇ ಇಲ್ಲವೇ ಎಂಬುದು ಮುಖ್ಯವಲ್ಲಾ. ಆದರೆ ಅವರು ಬೆಂಬಲಿಸುವ ಚಳುವಳಿಗಳು, ಅವರು ಕೈಜೋಡಿಸುವ ವ್ಯಕ್ತಿಗಳು ಮತ್ತು ಅವರು ಆಯ್ದ ವಿಚಾರಗಳ ಬಗ್ಗೆ ಮೌನ ವಹಿಸುವುದೇ ಸಾರ್ವಜನಿಕ ಚರ್ಚೆಯ ಕೇಂದ್ರಬಿಂದುವಾಗಿದೆ. ಪ್ರಶ್ನಿಸುವುದು ಪ್ರಜಾಪ್ರಭುತ್ವದ ಹಕ್ಕು. ಆದರೆ ಪ್ರಶ್ನೆಗಳನ್ನು ಆಯ್ಕೆ ಮಾಡುವುದು ಮತ್ತು ಉತ್ತರಗಳನ್ನು ತಪ್ಪಿಸುವುದು ಸಾರ್ವಜನಿಕ ಜೀವನದಲ್ಲಿ ಮತ್ತಷ್ಟು ಪ್ರಶ್ನೆಗಳಿಗೆ ಕಾರಣವಾಗುವುದು ಸಹ ಅಷ್ಟೇ ಸತ್ಯ.
ಏನಂತೀರೀ?
ನಿಮ್ಮವನೇ ಉಮಾಸುತ