ಭಾರತೀಯ ಜ್ಞಾನ ವ್ಯವಸ್ಥೆ ಮತ್ತು ಶಿಕ್ಷಣ: ಅಗತ್ಯವಿದೆ ಹೇಗೆ?

ಇತ್ತೀಚೆಗೆ ದಿನಪತ್ರಿಕೆಗಳಲ್ಲಿ ಪ್ರಕಟವಾದ ಕೆಲವು ಘಟನೆಗಳು ನನ್ನ ಮನಸ್ಸನ್ನು ಬಹಳವಾಗಿ ಕಾಡಿದವು. ಮೊದಲ ನೋಟಕ್ಕೆ ಇವು ಸಾಮಾನ್ಯ ಅಪರಾಧ ಅಥವಾ ಆತ್ಮಹತ್ಯೆಯ ಪ್ರಕರಣಗಳಂತೆ ಕಂಡರೂ, ಆಳವಾಗಿ ಪರಿಶೀಲಿಸಿದಾಗ ಇಂದಿನ ಶಿಕ್ಷಣ ವ್ಯವಸ್ಥೆ, ಕುಟುಂಬ ವ್ಯವಸ್ಥೆ ಮತ್ತು ಸಾಮಾಜಿಕ ಮೌಲ್ಯಗಳ ಬಗ್ಗೆ ಅನೇಕ ಪ್ರಶ್ನೆಗಳನ್ನು ಎತ್ತುತ್ತವೆ.



ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಬಂಡಲ ಗ್ರಾಮದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಸರ್ಕಾರಿ ಮೆಟ್ರಿಕ್‌ ಪೂರ್ವ ಬಾಲಕಿಯರ ವಸತಿ ಶಾಲೆಯೊಂದರಲ್ಲಿ 15 ವರ್ಷದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲೆಯ ಶೌಚಾಲಯದಲ್ಲಿಯೇ ಮಗುವಿಗೆ ಜನ್ಮ ನೀಡಿ, ಬಳಿಕ ಆ ನವಜಾತ ಶಿಶುವನ್ನು ಕಿಟಕಿಯಿಂದ ಹೊರಗೆ ಎಸೆದಿದ್ದು, ಸುಮಾರು 2.8 ಕೆ.ಜಿ ತೂಕದ ಹೆಣ್ಣು ಹಸುಕೂಸು ದುರಾದೃಷ್ಟವಷಾತ್ ತನ್ನ ಜನ್ಮದಾತೆಯಿಂದಲೇ ಎಸೆಯಲ್ಪಟ್ಟಿದ್ದ ಕಾರಣ ಮೃತಪಟ್ಟಿರುವ ಪ್ರಕರಣ ಇಡೀ ಸಮಾಜವನ್ನೇ ಬೆಚ್ಚಿಬೀಳಿಸಿದೆ. ಆಕೆ ಗರ್ಭಿಣಿಯಾಗಿದ್ದ ವಿಚಾರ ಯಾರ ಗಮನಕ್ಕೂ ಬಾರದಿರುವುದು ಮತ್ತು ಪ್ರಸವದಂತಹ ಸಂಕಷ್ಟಕರ ಪರಿಸ್ಥಿತಿಯನ್ನು ಒಬ್ಬಳೇ ಎದುರಿಸಿರುವುದು ಪೋಷಕರು, ಆಕೆಯ ಸಹಪಾಠಿಗಳು, ಶಿಕ್ಷಕರು ಮತ್ತು ಸಮಾಜದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.

ಇನ್ನೊಂದು ಪ್ರಕರಣದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ಬಿ.ಸಿ.ಎ. (BCA) ಓದುತ್ತಿದ್ದ ಗಾಯತ್ರಿ ಎಂಬ ವಿದ್ಯಾರ್ಥಿನಿ, ಕಾಲೇಜು ಶುಲ್ಕ ಪಾವತಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಂದೆಯಿಂದ ಪಡೆದಿದ್ದ 10,000/- ಕಾಲೇಜು ಶುಲ್ಕದ ಹಣವನ್ನು ಪರಿಚಯಸ್ಥನೊಬ್ಬನಿಗೆ ಸಾಲವಾಗಿ ನೀಡಿದ್ದ ಆಕೆ, ಸೂಕ್ತ ಸಮಯದಲ್ಲಿ ಆತ ಹಣ ಮರಳಿ ಕೊಡದ ಕಾರಣ ಆಕೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ಮನನೊಂದು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇನ್ನು ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳು ಸೋರಿ ಹೋಗಿ ಇಡೀ ಪರೀಕ್ಷೆಯನ್ನೇ ರದ್ದು ಪಡಿಸಿ ಮತ್ತೊಮ್ಮೆ ಪರೀಕ್ಷೆ ಮಾಡಲು ಸರ್ಕಾರ ಆದೇಶ ನೀಡಿರುವಾಗ, ದೇಶದ ಅನೇಕ ಭಾಗಗಳಲ್ಲಿ ಮತ್ತೊಮ್ಮೆ ಪರೀಕ್ಷೆಯನ್ನು ಎದುರಿಸಲಾಗದೇ, ಕೆಲವು ವಿದ್ಯಾರ್ಥಿಗಳು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಹಾಗೆ ನೋಡಿದರೆ, ಪಶ್ನೆಪತ್ರಿಕೆ ಸೋರಿಹೋಗಿರುವುದನ್ನು ಸಮಮರ್ಥನೆ ಮಾಡುತ್ತಿಲ್ಲವಾದರೂ, ನಿಜವಾಗಿಯೂ ನೀಟ್ ಪರೀಕ್ಷೆಗೆ ಚೆನ್ನಾಗಿ ಓದಿದ್ದ ವಿದ್ಯಾರ್ಥಿಗಳು, ತಮಗೆ ಮತ್ತೊಮ್ಮೆ ಉತ್ತಮ ಫಲಿತಾಂಶ ಪಡೆಯಲು ಅವಕಾಶ ಸಿಕ್ಕಿತು ಎಂದು ಮತ್ತಷ್ಟೂ ಚೆನ್ನಾಗಿ ಅಭ್ಯಾಸ ಮಾಡಿ ಪರೀಕ್ಷೆ ಬರೆಯುತ್ತಾರೆ. ಆದರೆ, ಎರಡನೇ ಬಾರಿ ಪರೀಕ್ಷೆ ಬರೆಯಲು ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿಯನ್ನು ಹೊಂದಿದ್ದರೆ, ಮುಂದೇ ಆಕೆ/ಆತ ವೈದ್ಯರಾಗಿ ಇದಕ್ಕಿಂತಲೂ ಕಠಿಣ ಸಂಧರ್ಭವನ್ನು ಹೇಗೆ ಎದುರಿಸುತ್ತಾರೆ? ಕೇವಲ ಅಂಕ ಪಡೆಯುವದಷ್ಟೇ ಅಲ್ಲದೇ, ಎಂತಹ ಕಠಿಣ ಪರಿಸ್ಥಿತಿಯನ್ನೂ ಎದುರಿಸುವಂತಹ ಸಂಸ್ಕಾರ/ ಶಿಕ್ಷಣವನ್ನು ಕೊಡಲು ನಮ್ಮ ಸಮಾಜ/ಶಿಕ್ಷಣ ವ್ಯವಸ್ಥೆ ದುರ್ಬಲವಾಗಿದೆಯೇ ಎನ್ನುವಂತಹ ಅನುಮಾನ ಮೂಡಿಸುತ್ತಿದೆ.

ಈ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಓದಿ ಬೆಳೆಯಬೇಕಾದ ನಮ್ಮ ಯುವಜನತೆ ಜೀವನದ ಸವಾಲುಗಳನ್ನು ಎದುರಿಸುವ ಮಾನಸಿಕ ದೃಢತೆ ಮತ್ತು ನೈತಿಕ ಮಾರ್ಗದರ್ಶನದ ಕೊರತೆಯಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತದೆ.

ಬದಲಾಗುತ್ತಿರುವ ಸಾಮಾಜಿಕ ಪರಿಸರ

ಇಂದಿನ ಕಾಲದಲ್ಲಿ ಬಾಲ್ಯದಿಂದಲೇ ಮಕ್ಕಳು ದೂರದರ್ಶನ, ಸಿನಿಮಾಗಳು, ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್‌ಗಳ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಮಾಹಿತಿಯ ಜೊತೆಗೆ ಅಪರಿಪಕ್ವ ಮನಸ್ಸುಗಳಿಗೆ ಅಸಮರ್ಪಕ ವಿಷಯಗಳೂ ಸುಲಭವಾಗಿ ಲಭ್ಯವಾಗುತ್ತಿವೆ. ಪರಿಣಾಮವಾಗಿ ಪ್ರೀತಿ, ಸಂಬಂಧಗಳು ಮತ್ತು ಜೀವನದ ಜವಾಬ್ದಾರಿಗಳ ಬಗ್ಗೆ ಸಮರ್ಪಕ ಅರಿವು ಮೂಡುವ ಮುನ್ನವೇ ಹಲವರು ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಹಿಂದಿನ ಕಾಲದಲ್ಲಿ ಕುಟುಂಬವೇ ಮೊದಲ ಪಾಠಶಾಲೆಯಾಗಿತ್ತು. ಹಿರಿಯರು ಮಕ್ಕಳಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಜೀವನದಲ್ಲಿ ಯಾವ ಮೌಲ್ಯಗಳನ್ನು ಪಾಲಿಸಬೇಕು ಎಂಬುದನ್ನು ಮನವರಿಕೆ ಮಾಡಿಕೊಡುತ್ತಿದ್ದರು. ನೆರೆಹೊರೆಯವರಿಗೂ ಸಾಮಾಜಿಕ ಜವಾಬ್ದಾರಿ ಇತ್ತು. ಆದರೆ ಇಂದು ವ್ಯಕ್ತಿವಾದ ಹೆಚ್ಚಾಗಿರುವ ಕಾರಣ, ಮಕ್ಕಳು ಹೆಚ್ಚಿನ ಸಮಯವನ್ನು ಪರದೆಗಳೊಂದಿಗೆ ಕಳೆಯುತ್ತಿದ್ದಾರೆ. ಹಿರಿಯರ ಮಾರ್ಗದರ್ಶನ ಕಡಿಮೆಯಾಗುತ್ತಿದೆ.

ಇದಕ್ಕೆ ಪರಿಹಾರವೇನು?

ಈ ರೀತಿಯ ಸಮಸ್ಯೆಗಳಿಗೆ ಕೇವಲ ಕಾನೂನು ಕ್ರಮಗಳು ಅಥವಾ ಶಿಸ್ತಿನ ನಿಯಮಗಳು ಮಾತ್ರ ಸಾಕಾಗುವುದಿಲ್ಲ. ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತ ಬದುಕಿನ ಅರಿವು ಮೂಡಿಸುವ ನೈತಿಕ ಶಿಕ್ಷಣ ಮತ್ತು ಭಾರತೀಯ ಜ್ಞಾನ ವ್ಯವಸ್ಥೆಗಳ (Indian Knowledge Systems – IKS) ಅಳವಡಿಕೆ ಅತ್ಯಗತ್ಯವಾಗಿದೆ.

ನೈತಿಕ ಶಿಕ್ಷಣದ ಮಹತ್ವ

ನೈತಿಕ ಶಿಕ್ಷಣವು ವಿದ್ಯಾರ್ಥಿಗಳಿಗೆ ಕೇವಲ ಪಾಠಪುಸ್ತಕದ ಜ್ಞಾನವನ್ನು ನೀಡುವುದಲ್ಲ; ಬದುಕನ್ನು ಹೇಗೆ ಅರ್ಥಪೂರ್ಣವಾಗಿ ನಡೆಸಬೇಕು ಎಂಬುದನ್ನು ಕಲಿಸುತ್ತದೆ.

ನೈತಿಕ ಶಿಕ್ಷಣದ ಪ್ರಮುಖ ಉದ್ದೇಶಗಳು:

* ಸರಿ ಮತ್ತು ತಪ್ಪಿನ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಬೆಳೆಸುವುದು.
* ಪ್ರಾಮಾಣಿಕತೆ, ಜವಾಬ್ದಾರಿ ಮತ್ತು ಸ್ವಯಂ ನಿಯಂತ್ರಣವನ್ನು ಬೆಳೆಸುವುದು.
* ಭಾವನಾತ್ಮಕ ಸಮತೋಲನ ಮತ್ತು ಮಾನಸಿಕ ದೃಢತೆಯನ್ನು ವೃದ್ಧಿಸುವುದು.
* ಕುಟುಂಬ, ಸಮಾಜ ಮತ್ತು ರಾಷ್ಟ್ರದತ್ತ ಕರ್ತವ್ಯ ಪ್ರಜ್ಞೆಯನ್ನು ಬೆಳೆಸುವುದು.
* ಸಹಾನುಭೂತಿ ಮತ್ತು ಪರಸ್ಪರ ಗೌರವವನ್ನು ಉತ್ತೇಜಿಸುವುದು.

ಇಂತಹ ಶಿಕ್ಷಣ ವ್ಯವಸ್ಥೆಯ ಧ್ಯೇಯ ವಿದ್ಯಾರ್ಥಿಗಳನ್ನು ಕೇವಲ ಯಶಸ್ವಿ ವೃತ್ತಿಪರರನ್ನಾಗಿಸುವುದಲ್ಲ. ಬದಲಾಗಿ ಇಂದಿನ ವಿದ್ಯಾರ್ಥಿಗಲೇ ದೇಶದ ಮುಂದಿನ ಪ್ರಜೆಗಳು ಎಂಬುದನ್ನು ಪರಿಗಣಿಸಿ ಅವರುಗಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಬೇಕಾದಂತಹ ಗುರುತರವಾದ ಜವಾಬ್ಧಾರಿಯನ್ನು ಹೊಂದಿದ್ದು ಅದಕ್ಕೆ ಪ್ರಸ್ತುತ ಮೆಕಾಲೆ ಶಿಕ್ಷಣ ಪದ್ದತಿ ಅಂಕ ಗಳಿಯ ಬದಲು, ಭಾರತೀಯ ಜ್ಞಾನ ವ್ಯವಸ್ಥೆಗಳ (IKS) ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ.

ಭಾರತೀಯ ಜ್ಞಾನ ವ್ಯವಸ್ಥೆಗಳು ಸಾವಿರಾರು ವರ್ಷಗಳ ಅನುಭವ, ಚಿಂತನೆ ಮತ್ತು ಸಂಶೋಧನೆಯ ಫಲವಾಗಿದೆ. ಗಣಿತ, ಖಗೋಳಶಾಸ್ತ್ರ, ವೈದ್ಯಶಾಸ್ತ್ರ, ತತ್ವಶಾಸ್ತ್ರ, ಆಡಳಿತ, ಕೃಷಿ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಾರತೀಯ ಪರಂಪರೆ ವಿಶ್ವಕ್ಕೆ ದಾರಿದೀಪವಾಗಿದೆ.


ರಾಷ್ಟ್ರೀಯ ಶಿಕ್ಷಣ ನೀತಿ (NEP-2020) ಸಹ ಭಾರತೀಯ ಜ್ಞಾನ ಪರಂಪರೆಯನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳುತ್ತದೆ.

ಇದರ ಪ್ರಮುಖ ಪ್ರಯೋಜನಗಳು:

* ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಆತ್ಮವಿಶ್ವಾಸ ಬೆಳೆಸುವುದು.
* ಜಾಗತಿಕ ಜ್ಞಾನದ ಜೊತೆಗೆ ಭಾರತೀಯ ಚಿಂತನೆಗಳನ್ನು ಪರಿಚಯಿಸುವುದು.
* ಶಿಕ್ಷಣವನ್ನು ಕೇವಲ ಉದ್ಯೋಗದ ಸಾಧನವಾಗಿರದೆ ಜೀವನದ ಮಾರ್ಗದರ್ಶಕವಾಗಿಸುವುದು.
* ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಜೀವನ ಶೈಲಿಯ ಬಗ್ಗೆ ಅರಿವು ಮೂಡಿಸುವುದು.
* ವಿಮರ್ಶಾತ್ಮಕ ಹಾಗೂ ಸ್ವತಂತ್ರ ಚಿಂತನೆಯನ್ನು ಉತ್ತೇಜಿಸುವುದು.
*

ಭಾರತೀಯ ಜ್ಞಾನ ಪರಂಪರೆಯ ಮೂಲಭೂತ ತತ್ವಗಳಾದ ಧರ್ಮ, ಸತ್ಯ, ಅಹಿಂಸೆ, ಸೇವೆ ಮತ್ತು “ವಸುಧೈವ ಕುಟುಂಬಕಂ” ಎಂಬ ವಿಚಾರಗಳು ನೈತಿಕ ಶಿಕ್ಷಣದೊಂದಿಗೆ ನೇರವಾಗಿ ಸಂಬಂಧ ಹೊಂದಿವೆ.

ಈ ಎರಡರ ಸಮನ್ವಯದಿಂದ:

* ನೈತಿಕ ನಾಯಕತ್ವ ಬೆಳೆಯುತ್ತದೆ.
* ಸಾಮಾಜಿಕ ಜವಾಬ್ದಾರಿ ಹೆಚ್ಚುತ್ತದೆ.
* ರಾಷ್ಟ್ರೀಯತೆ ಮತ್ತು ಸಾಂಸ್ಕೃತಿಕ ಹೆಮ್ಮೆ ವೃದ್ಧಿಸುತ್ತದೆ.
* ವ್ಯಕ್ತಿಯ ವೈಯಕ್ತಿಕ ಹಾಗೂ ವೃತ್ತಿಪರ ಬದುಕಿನಲ್ಲಿ ಸಮತೋಲನ ಮೂಡುತ್ತದೆ.
* ಜವಾಬ್ದಾರಿಯುತ ನಾಗರಿಕರು ರೂಪುಗೊಳ್ಳುತ್ತಾರೆ.


ಈಗಾಗಲೇ ತಿಳಿಸಿದಂತೆ ಶಿಕ್ಷಣದ ಉದ್ದೇಶ ಕೇವಲ ಉತ್ತಮ ಅಂಕಗಳನ್ನು ಗಳಿಸುವುದು ಅಥವಾ ಉದ್ಯೋಗ ಪಡೆಯುವುದಲ್ಲ. ಅದು ಉತ್ತಮ ವ್ಯಕ್ತಿತ್ವ, ಚಾರಿತ್ರ್ಯ ಮತ್ತು ಜೀವನ ಮೌಲ್ಯಗಳನ್ನು ಬೆಳೆಸುವ ಪ್ರಕ್ರಿಯೆಯಾಗಿರಬೇಕು. ಇಂದಿನ ಸಮಾಜದಲ್ಲಿ ಕಾಣುತ್ತಿರುವ ಅನೇಕ ಸಮಸ್ಯೆಗಳ ಮೂಲದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಕೊರತೆಯೂ ಒಂದು ಪ್ರಮುಖ ಕಾರಣವಾಗಿದೆ. ಹಾಗಾಗಿ ಶಾಲಾ, ಕಾಲೇಜುಗಳಲ್ಲಿ ನೈತಿಕ ಶಿಕ್ಷಣ ಮತ್ತು ಭಾರತೀಯ ಜ್ಞಾನ ವ್ಯವಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಕಾಲದ ಅಗತ್ಯವಾಗಿದೆ. ಜ್ಞಾನ, ಬುದ್ಧಿವಂತಿಕೆ, ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿ ಹೊಂದಿರುವ ಯುವಜನತೆಯನ್ನು ರೂಪಿಸಿದಾಗ ಮಾತ್ರ ಆರೋಗ್ಯಕರ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ.

ಕಾಲ ಇನ್ನೂ ಮಿಂಚಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಜ್ಞಾನಕೇಂದ್ರಿತವಾಗಿರುವುದರ ಜೊತೆಗೆ ಮೌಲ್ಯಕೇಂದ್ರಿತವಾಗಿಯೂ ರೂಪಿಸುವ ಮೂಲಕ ನಮ್ಮ ಮಕ್ಕಳಲ್ಲಿ ಧೈರ್ಯ ಮತ್ತು ಸ್ಥೈರ್ಯಗಳನ್ನು ಹೆಚ್ಚಿರುವ ಮೂಲಕ ದೈಹಿಕವಾಗಿ, ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಸಧೃಡಗೊಳಿಸುವ ಮೂಲಕ ಸಮರ್ಥ ಭಾರತವನ್ನು ಮತ್ತೊಮ್ಮೆ ಕಟ್ಟಲೇ ಬೇಕಾದ ಸಮಯ ಬಂದಿದೆ ಅಲ್ವೇ?

ಏನಂತೀರೀ?
ನಿಮ್ಮವನೇ, ಉಮಾಸುತ

Leave a comment