ಇತ್ತೀಚಿನ ದಿನಗಳಲ್ಲಿ ಜನ್ಮದಿನ ಎಂದರೆ ಲಕ್ಷಾಂತರ ರೂಪಾಯಿ ವೆಚ್ಚದ ಪಾರ್ಟಿಗಳು, ದುಬಾರಿ ಕೇಕ್, ಭರ್ಜರಿ ಅಲಂಕಾರ, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು, ರೀಲ್ಸ್ ಮತ್ತು ಲೈಕ್‌ಗಳ ಹಬ್ಬ. ಕೆಲವೇ ಗಂಟೆಗಳ ಸಂಭ್ರಮಕ್ಕಾಗಿ ಸಾವಿರಾರು, ಲಕ್ಷಾಂತರ ರೂಪಾಯಿ ಖರ್ಚು ಮಾಡುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ.
ಆದರೆ ಅದೇ ಹಣವನ್ನು ಸಮಾಜಕ್ಕೆ ಶಾಶ್ವತವಾಗಿ ಉಪಯೋಗವಾಗುವ ಕಾರ್ಯಕ್ಕೆ ಬಳಸಿದರೆ? ಆ ಸಂತೋಷ ಎಷ್ಟು ದೊಡ್ಡದಾಗಿರಬಹುದು? ಇದಕ್ಕೆ ಜೀವಂತ ಉದಾಹರಣೆಯಾಗಿ ನಿಂತಿದ್ದಾರೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಉಮೈ ಸಲ್ಮಾ. ತಮ್ಮ ಪುತ್ರ ಮಲ್ಲಿಕ್ ರೆಹನ್ ಅವರ 26ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುವ ಬದಲು, ಸುಮಾರು ₹2 ಲಕ್ಷ ವೆಚ್ಚ ಮಾಡಿ ತಾವು ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಶಾಲೆಯ ರೂಪವನ್ನೇ ಬದಲಾಯಿಸಿದ್ದಾರೆ.
ಮೂವತ್ತು ವರ್ಷಗಳ ನಂತರ ಹೊಸ ಬಣ್ಣ ಕಂಡ ಶಾಲೆ
ಉಮೈ ಸಲ್ಮಾ ಅವರು ಕಳೆದ ಎಂಟು ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರು ಶಾಲೆಗೆ ಬಂದಾಗ ಕಟ್ಟಡದ ಸ್ಥಿತಿ ಅಷ್ಟೇನು ಉತ್ತಮವಾಗಿರಲಿಲ್ಲ. ಸಣ್ಣಪುಟ್ಟ ದುರಸ್ತಿ ಕಾಮಗಾರಿಗಳನ್ನು ಇಲಾಖೆಯ ಅನುದಾನದಲ್ಲಿ ಪೂರ್ಣಗೊಳಿಸಿದ್ದರೂ, ಸುಮಾರು ಮೂರು ದಶಕಗಳಿಂದ ಶಾಲೆಗೆ ಸುಣ್ಣ–ಬಣ್ಣ ಬಳಿದಿರಲಿಲ್ಲ. ಇದರಿಂದ ಶಾಲೆಯ ವಾತಾವರಣವೂ ನಿರ್ಜೀವವಾಗಿತ್ತು. ಶಾಲೆಗೆ ಹೊಸ ರೂಪ ನೀಡಬೇಕೆಂಬ ಆಸೆ ಇದ್ದರೂ, ಸುಮಾರು ₹2 ಲಕ್ಷ ವೆಚ್ಚವಾಗುವುದರಿಂದ ಶಾಲಾ ಅಭಿವೃದ್ಧಿ ಸಮಿತಿಯಿಂದಲೂ ಅಥವಾ ಪೋಷಕರಿಂದಲೂ ಯಾವುದೇ ಆರ್ಥಿಕ ನೆರವು ದೊರೆಯಲಿಲ್ಲ. ಮುಖ್ಯೋಪಾಧ್ಯಾಯಿನಿಯವರು ವಿಚಲಿತರೂ ಆಗಲಿಲ್ಲ.
ಮಗನ ಹುಟ್ಟುಹಬ್ಬವೇ ಸಮಾಜಸೇವೆಯ ಹಬ್ಬವಾಯಿತು
ಸಾಮಾನ್ಯವಾಗಿ ಮಗನ ಹುಟ್ಟುಹಬ್ಬ ಎಂದರೆ ಪಾರ್ಟಿ, ಊಟ, ಉಡುಗೊರೆಗಳು, ಸಂಭ್ರಮ.ಆದರೆ ಉಮೈ ಸಲ್ಮಾ ಅವರು ವಿಭಿನ್ನವಾಗಿ ಯೋಚಿಸಿದರು. “ಒಂದು ದಿನದ ಸಂಭ್ರಮಕ್ಕಿಂತ, ನೂರಾರು ಮಕ್ಕಳ ಭವಿಷ್ಯಕ್ಕೆ ಉಪಯೋಗವಾಗುವ ಕೆಲಸವೇ ಉತ್ತಮ” ಎನ್ನುವ ಮನೋಭಾವದಿಂದ ತಮ್ಮ ಮಗನ ಜನ್ಮದಿನದ ವೆಚ್ಚವನ್ನೇ ಶಾಲೆಯ ಅಭಿವೃದ್ಧಿಗೆ ಮೀಸಲಿಟ್ಟರು. ಎಸ್‌ಡಿಎಂಸಿ ಸಭೆಯಲ್ಲಿ ತಮ್ಮ ನಿರ್ಧಾರವನ್ನು ತಿಳಿಸಿ, ತಮ್ಮ ವೈಯಕ್ತಿಕ ಉಳಿತಾಯದಿಂದ ಎಲ್ಲರ ಒಪ್ಪಿಗೆಯೊಂದಿಗೆ ಶಾಲೆಗೆ ಹೊಸದಾಗಿ ಬಣ್ಣ ಬಳಿಸುವ ಕಾಮಗಾರಿಯನ್ನು ಆರಂಭಿಸಿದರು.
ಶಾಲೆಯ ರೂಪವೇ ಬದಲಾಯಿತು
ಸುಮಾರು ₹2 ಲಕ್ಷ ವೆಚ್ಚದಲ್ಲಿ ಶಾಲೆಯ ಕಟ್ಟಡಕ್ಕೆ ಹೊಸದಾಗಿ ಸುಣ್ಣ-ಬಣ್ಣ ಬಳಿಯಲಾಯಿತು. ಅಷ್ಟೇ ಅಲ್ಲದೆ ಮಕ್ಕಳಿಗೆ ಆಕರ್ಷಕವಾಗುವಂತೆ ತರಗತಿ ಕೊಠಡಿಗಳನ್ನು ರೈಲ್ವೆ ಕೋಚ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಯಿತು. ಕೆಲ ಆಟೋಪಕರಣಗಳನ್ನೂ ಶಾಲೆಗೆ ಒದಗಿಸಲಾಯಿತು. ಇಂದು ಆ ಶಾಲೆಗೆ ಕಾಲಿಟ್ಟರೆ ಅದು ಸರ್ಕಾರಿ ಶಾಲೆಯೇ ಎಂಬ ಅನುಮಾನ ಬರುವಷ್ಟು ಸುಂದರವಾಗಿದೆ. ಶಾಲೆಯಲ್ಲಿ ಓದುತ್ತಿರುವ 1ರಿಂದ 7ನೇ ತರಗತಿಯ 90ಕ್ಕೂ ಹೆಚ್ಚು ಮಕ್ಕಳು ಈಗ ಶಾಲೆಗೆ ಇನ್ನಷ್ಟು ಉತ್ಸಾಹದಿಂದ ಬರುತ್ತಿದ್ದಾರೆ.
ಒಬ್ಬ ಶಿಕ್ಷಕನ ನಿಜವಾದ ಸಂಪತ್ತು
ಈ ಘಟನೆಯಲ್ಲಿ ಗಮನಿಸಬೇಕಾದ ಅತ್ಯಂತ ಮಹತ್ವದ ವಿಚಾರವೇನೆಂದರೆ… ಉಮೈ ಸಲ್ಮಾ ಅವರು ಕೇವಲ ಹಣ ಖರ್ಚು ಮಾಡಿಲ್ಲ. ಒಬ್ಬ ಶಿಕ್ಷಕಿಯಾಗಿ ತಮ್ಮ ಕರ್ತವ್ಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ” ಇದು ಸರ್ಕಾರದ ಕೆಲಸ, ಅದನ್ನು ಶಿಕ್ಷಣ ಇಲಾಖೆಯೇ ಮಾಡಲಿ” ಎಂದು ಕೈಕಟ್ಟಿ ಕುಳಿತುಕೊಳ್ಳಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಒಂದು ಶಾಲೆ ಸುಂದರವಾದರೆ ಅದರ ಲಾಭ ನೂರಾರು ಮಕ್ಕಳಿಗೆ ಸಿಗುತ್ತದೆ ಎಂಬುದನ್ನು ಅರಿತು ಸಮಾಜದ ಹಿತಕ್ಕಾಗಿ ತಮ್ಮ ವೈಯಕ್ತಿಕ ಸಂತೋಷವನ್ನೇ ತ್ಯಾಗ ಮಾಡಿದರು.
ಇದು ದಾನವಲ್ಲ… ಜವಾಬ್ದಾರಿ
ಇಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಸಮಾಜಸೇವೆ ಕುರಿತು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಆದರೆ ನಿಜವಾದ ಸಮಾಜಸೇವೆ ಎಂದರೆ ತನ್ನ ಸುತ್ತಲಿನ ಸಮಸ್ಯೆಯನ್ನು ಕಂಡು, ತನ್ನ ಕೈಲಾದಷ್ಟು ಪರಿಹಾರ ನೀಡುವುದು. ಉಮೈ ಸಲ್ಮಾ ಅವರು ಅದನ್ನೇ ಮಾಡಿದ್ದಾರೆ. ಇಂತಹ ಕೆಲಸಗಳಿಗೆ ಕೋಟ್ಯಂತರ ರೂಪಾಯಿ ಬೇಕಾಗುವುದಿಲ್ಲ. ಬೇಕಾಗಿರುವುದು ಸಮಾಜದ ಬಗ್ಗೆ ಕಾಳಜಿ ಮತ್ತು ಒಳ್ಳೆಯ ಮನಸ್ಸು.
ಸರ್ಕಾರಿ ಶಾಲೆ ಎಂದರೆ ಯಾರ ಶಾಲೆ?
ನಾವು ಬಹಳ ಸುಲಭವಾಗಿ… “ಸರ್ಕಾರಿ ಶಾಲೆ ಅಂದರೆ ಸರ್ಕಾರದ್ದು” ಎಂದು ಹೇಳಿಬಿಡುತ್ತೇವೆ. ಆದರೆ ನಿಜವಾಗಿ ಸರ್ಕಾರಿ ಶಾಲೆಗಳು ಯಾರದು? ಅವು ನಮ್ಮ ಮಕ್ಕಳದ್ದು. ನಮ್ಮ ಊರಿನದ್ದು. ನಮ್ಮ ಸಮಾಜದ್ದು. ಒಂದು ಸರ್ಕಾರಿ ಶಾಲೆ ಅಭಿವೃದ್ಧಿಯಾದರೆ ಅದರ ಲಾಭ ಕೇವಲ ಆ ಶಾಲೆಗೆ ಸೀಮಿತವಾಗುವುದಿಲ್ಲ. ಇಡೀ ಸಮಾಜಕ್ಕೆ ಉತ್ತಮ ಶಿಕ್ಷಣದ ಮೂಲಕ ಅದರ ಫಲ ಸಿಗುತ್ತದೆ.
ಪ್ರತಿಯೊಬ್ಬರೂ ಹೀಗೆ ಯೋಚಿಸಿದರೆ…
ಪ್ರತಿ ವರ್ಷ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ಗೃಹಪ್ರವೇಶ, ಶ್ರಾದ್ಧ, ಸ್ಮರಣಾರ್ಥ ಕಾರ್ಯಕ್ರಮಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಅದರ ಒಂದು ಸಣ್ಣ ಭಾಗವನ್ನಾದರೂ ಶಾಲೆ, ಆಸ್ಪತ್ರೆ, ಗ್ರಂಥಾಲಯ, ಅನಾಥಾಶ್ರಮ ಅಥವಾ ಸಾರ್ವಜನಿಕ ಸೇವೆಗೆ ಮೀಸಲಿಟ್ಟರೆ ಸಮಾಜದ ಚಿತ್ರಣವೇ ಬದಲಾಗಬಹುದು. ಉಮೈ ಸಲ್ಮಾ ಅವರು ಅದನ್ನೇ ತಮ್ಮ ಬದುಕಿನ ಮೂಲಕ ತೋರಿಸಿದ್ದಾರೆ.
ಶಿಕ್ಷಕರ ನಿಜವಾದ ಹುಟ್ಟುಹಬ್ಬ ಯಾವುದು ಗೊತ್ತೇ?
ಕೇಕ್ ಕತ್ತರಿಸಿದ ದಿನವಲ್ಲ… ತಮ್ಮಿಂದ ಓದಿದ ಮಕ್ಕಳು ಉತ್ತಮ ನಾಗರಿಕರಾಗಿ ಬೆಳೆಯುವ ದಿನ. ಉಮೈ ಸಲ್ಮಾ ಅವರ ಮಗನ ಜನ್ಮದಿನ ಒಂದು ದಿನದ ಸಂಭ್ರಮವಾಗಿ ಮುಗಿದಿಲ್ಲ. ಇನ್ನು ಮುಂದೆ ಆ ಶಾಲೆಗೆ ಬರುವ ಪ್ರತಿಯೊಬ್ಬ ಮಗುವಿನ ನಗುವಿನಲ್ಲೂ, ಆ ಕಟ್ಟಡದ ಪ್ರತಿಯೊಂದು ಗೋಡೆಯಲ್ಲೂ, ಅವರ ಸೇವೆಯ ನೆನಪು ಶಾಶ್ವತವಾಗಿ ಉಳಿಯಲಿದೆ.ಅದೇ ನಿಜವಾದ ಆಚರಣೆ. ಅದೇ ನಿಜವಾದ ಸಮಾಜಸೇವೆ. ಅದೇ ಒಬ್ಬ ಶಿಕ್ಷಕರ ನಿಜವಾದ ಗುರುದಕ್ಷಿಣೆ.
ಇದು ಕೇವಲ ಶಿಕ್ಷಕಿಯ ತ್ಯಾಗವಲ್ಲ… ಸರ್ಕಾರಕ್ಕಾದ ಎಚ್ಚರಿಕೆಯ ಗಂಟೆ!
ಒಬ್ಬ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ತಮ್ಮ ಎರಡು ತಿಂಗಳ ಸಂಬಳವನ್ನು ಖರ್ಚು ಮಾಡಿ ತಾವು ಸೇವೆ ಸಲ್ಲಿಸುತ್ತಿರುವ ಶಾಲೆಯನ್ನು ದುರಸ್ತಿ ಮಾಡಿಸಿರುವುದು ನಿಸ್ಸಂದೇಹವಾಗಿ ಅಭಿನಂದನಾರ್ಹ ಮತ್ತು ಅನುಕರಣೀಯ ಕಾರ್ಯ. ಆದರೆ, ಈ ಘಟನೆಯನ್ನು ಕೇವಲ ಒಬ್ಬ ಶಿಕ್ಷಕಿಯ ಸಮಾಜಮುಖಿ ಸೇವೆ ಎಂದು ಮಾತ್ರ ನೋಡದೆ, ಸರ್ಕಾರ ಮತ್ತು ಶಿಕ್ಷಣ ಇಲಾಖೆಗೆ ಸಿಕ್ಕಿರುವ ಒಂದು ಗಂಭೀರ ಸಂದೇಶವಾಗಿಯೂ ಪರಿಗಣಿಸಬೇಕಾಗಿದೆ.
ಪ್ರತಿ ವೇದಿಕೆಯಲ್ಲಿ “ಇಂದಿನ ಮಕ್ಕಳೇ ನಾಳಿನ ಪ್ರಜೆಗಳು“ ಎಂದು ಭಾಷಣ ಮಾಡುವ ರಾಜಕಾರಣಿಗಳು, ಮಂತ್ರಿಗಳು ಮತ್ತು ಅಧಿಕಾರಿಗಳು, ಅದೇ ಮಕ್ಕಳಿಗೆ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವುದು ಅತ್ಯಂತ ವಿಷಾದನೀಯ. ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯೇ ಹೊರತು, ಶಿಕ್ಷಕರು ತಮ್ಮ ವೈಯಕ್ತಿಕ ಉಳಿತಾಯದಿಂದ ಅವುಗಳನ್ನು ಸರಿಪಡಿಸುವ ಪರಿಸ್ಥಿತಿ ನಿರ್ಮಾಣವಾಗಬಾರದು.
ಒಬ್ಬ ಶಿಕ್ಷಕಿಯ ಸೇವಾಭಾವವನ್ನು ನಾವು ಹೃದಯಪೂರ್ವಕವಾಗಿ ಗೌರವಿಸಬೇಕು. ಆದರೆ, ಅಂತಹ ಸೇವಾಭಾವವನ್ನು ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕಾರಣವಾಗಲು ಬಿಡಬಾರದು. ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಯೂ ಉತ್ತಮ ಕಟ್ಟಡ, ಸ್ವಚ್ಛ ಪರಿಸರ ಮತ್ತು ಅಗತ್ಯ ಸೌಲಭ್ಯಗಳನ್ನು ಹೊಂದಿರುವಂತೆ ನೋಡಿಕೊಳ್ಳುವುದು ಶಿಕ್ಷಣ ಇಲಾಖೆಯ ಕರ್ತವ್ಯವಾಗಿದೆ.
ಉಮೈ ಸಲ್ಮಾ ಅವರಂತಹ ಶಿಕ್ಷಕರು ಸಮಾಜಕ್ಕೆ ಸ್ಫೂರ್ತಿಯಾಗಲಿ. ಆದರೆ, ಇಂತಹ ತ್ಯಾಗಗಳು ಅನಿವಾರ್ಯವಾಗುವ ಪರಿಸ್ಥಿತಿ ಮತ್ತೆ ಮತ್ತೆ ಎದುರಾಗದಂತೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಶಾಲೆಗಳ ಅಭಿವೃದ್ಧಿ ದಾನಿಗಳ, ಶಿಕ್ಷಕರ ಅಥವಾ ಹಳೆ ವಿದ್ಯಾರ್ಥಿಗಳ ಉದಾರತೆಯ ಮೇಲೆ ಅವಲಂಬಿತವಾಗದೇ, ಸರ್ಕಾರದ ಯೋಜಿತ ಮತ್ತು ಸಮರ್ಪಕ ಆಡಳಿತದಿಂದಲೇ ನಡೆಯುವ ದಿನಗಳು ಬರಲಿ ಎಂಬುದೇ ಪ್ರತಿಯೊಬ್ಬ ನಾಗರಿಕನ ಆಶಯ.
ಒಬ್ಬ ಶಿಕ್ಷಕಿಯ ಉದಾರತೆ ನಮಗೆ ಹೆಮ್ಮೆ ತರುತ್ತದೆ; ಆದರೆ, ಅದೇ ಉದಾರತೆ ಸರ್ಕಾರದ ಕರ್ತವ್ಯ ಲೋಪವನ್ನು ನೆನಪಿಸಿದಾಗ ಅದು ನಿಜಕ್ಕೂ ಆತ್ಮಾವಲೋಕನಕ್ಕೆ ಕಾರಣವಾಗಬೇಕು. ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ