ಧೈರ್ಯಂ ಸರ್ವತ್ರ ಸಾಧನಂ

ಭಯವನ್ನು ಮೀರಿದಾಗಲೇ ಸಾಧನೆ ಸಾಧ್ಯ

ನಾನು ಸದಾ ನಿನ್ನೊಂದಿಗಿರುತ್ತೇನೆ…”, “ನಿನಗಾಗಿ ಪ್ರಾಣವನ್ನೂ ಕೊಡಲು ಸಿದ್ಧ...” ಎಂದು ಹೇಳುವವರು ನಮ್ಮ ಸುತ್ತಲೂ ಅನೇಕರಿರುತ್ತಾರೆ. ಆದರೆ ಸಂಕಷ್ಟ ಎದುರಾದಾಗ, ಆ ಮಾತುಗಳನ್ನು ಉಳಿಸಿಕೊಳ್ಳುವವರು ಎಷ್ಟು ಜನ? ಸಂದರ್ಭ ಬಂದಾಗ ನೆಪ ಹೇಳಿ ಹಿಂದೆ ಸರಿಯುವವರೇ ಹೆಚ್ಚಾಗಿರುವ ಇಂದಿನ ಕಾಲದಲ್ಲಿ, ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಜೀವವನ್ನೇ ಪಣಕ್ಕಿಟ್ಟ ಎರಡು ಘಟನೆಗಳು ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿವೆ.

ಇವು ಕೇವಲ ಕಥೆಗಳಲ್ಲ. ಧೈರ್ಯ, ಸಮರ್ಪಣೆ ಮತ್ತು ನಿಸ್ವಾರ್ಥ ನಿಷ್ಠೆಯ ಜೀವಂತ ಉದಾಹರಣೆಗಳು.


ಪ್ರಸಂಗ – 1 : ಖಾಲ್ಸಾ ಪಂಥದ ಜನನ

1699ರ ಏಪ್ರಿಲ್ 13. ವೈಶಾಖಿ ಹಬ್ಬದ ಸಂಭ್ರಮದಲ್ಲಿ ಪಂಜಾಬಿನ ಆನಂದಪುರ ಸಾಹಿಬ್‌ನಲ್ಲಿ ಸುಮಾರು 80,000ಕ್ಕೂ ಹೆಚ್ಚು ಸಿಖ್ಖರು ಸೇರಿದ್ದರು.

ಆ ಸಮಯದಲ್ಲಿ ಭಾರತ, ಮೊಘಲ್ ಚಕ್ರವರ್ತಿ ಔರಂಗಜೇಬನ ಆಳ್ವಿಕೆಯಲ್ಲಿ ಧಾರ್ಮಿಕ ಹಿಂಸೆ, ಬಲವಂತದ ಮತಾಂತರ ಮತ್ತು ಅನ್ಯಾಯಗಳಿಂದ ತತ್ತರಿಸಿತ್ತು. ಇಂತಹ ಸಂದರ್ಭದಲ್ಲಿ ಸಿಖ್ ಸಮಾಜವನ್ನು ಧೈರ್ಯಶಾಲಿ, ಸಂಘಟಿತ ಮತ್ತು ಸಮಾನತೆಯ ತತ್ವದ ಮೇಲೆ ಕಟ್ಟಬೇಕೆಂದು ಗುರು ಗೋಬಿಂದ್ ಸಿಂಗ್ ನಿರ್ಧರಿಸಿದರು.

ಸಭೆಯ ಮಧ್ಯದಲ್ಲಿ ಖಡ್ಗ ಹಿಡಿದು ನಿಂತ ಗುರುಗಳು,

“ಧರ್ಮಕ್ಕಾಗಿ ತನ್ನ ತಲೆಯನ್ನು ಅರ್ಪಿಸಲು ಯಾರು ಸಿದ್ಧ?”

ಎಂದು ಕೇಳಿದ ಕ್ಷಣ ಸಾವಿರಾರು ಜನರ ಮಧ್ಯೆ ಮೌನ ಆವರಿಸಿತು.

ಕೆಲ ಕ್ಷಣಗಳ ನಂತರ ಭಾಯಿ ದಯಾ ರಾಮ್ ಮುಂದೆ ಬಂದರು.

“ಗುರುಗಳೇ, ನಾನು ಸಿದ್ಧ.”

ಗುರುಗಳು ಅವರನ್ನು ಗುಡಾರದೊಳಗೆ ಕರೆದುಕೊಂಡು ಹೋದರು. ಕೆಲವೇ ಕ್ಷಣಗಳಲ್ಲಿ ರಕ್ತದ ಕಲೆಗಳಿದ್ದ ಖಡ್ಗದೊಂದಿಗೆ ಹೊರಬಂದರು.

ಮತ್ತೊಮ್ಮೆ ಅದೇ ಪ್ರಶ್ನೆ.

ಮತ್ತೆ ಒಬ್ಬರು ಮುಂದೆ ಬಂದರು.

ಹೀಗೆ ಒಬ್ಬೊಬ್ಬರಾಗಿ ಐವರು ತಮ್ಮ ಜೀವವನ್ನೇ ಧರ್ಮಕ್ಕಾಗಿ ಅರ್ಪಿಸಲು ಸಿದ್ಧರಾದರು.

ಅಲ್ಲಿದ್ದ ಎಲ್ಲರೂ ಗುರುಗಳು ಅವರ ತಲೆ ಕತ್ತರಿಸಿದ್ದಾರೆಂದು ಭಾವಿಸುತ್ತಿದ್ದಾಗ, ಸ್ವಲ್ಪ ಸಮಯದ ನಂತರ ಗುರುಗಳು ಆ ಐವರನ್ನೂ ಜೀವಂತವಾಗಿ ಹೊರಗೆ ಕರೆತಂದರು.

ಅವರು ಭಾರತದ ವಿವಿಧ ಭಾಗಗಳಿಂದ ಬಂದವರಾಗಿದ್ದರು.

  • ಭಾಯಿ ದಯಾ ಸಿಂಗ್ – ಲಾಹೋರ್ (ಇಂದಿನ ಪಾಕಿಸ್ತಾನ)
  • ಭಾಯಿ ಧರ್ಮ ಸಿಂಗ್ – ಹಸ್ತಿನಾಪುರ (ಉತ್ತರ ಪ್ರದೇಶ)
  • ಭಾಯಿ ಹಿಮ್ಮತ್ ಸಿಂಗ್ – ಜಗನ್ನಾಥಪುರಿ (ಒಡಿಶಾ)
  • ಭಾಯಿ ಸಾಹಿಬ್ ಸಿಂಗ್ – ಬೀದರ್ (ಕರ್ನಾಟಕ)
  • ಭಾಯಿ ಮೋಹ್ಕಮ್ ಸಿಂಗ್ – ದ್ವಾರಕಾ (ಗುಜರಾತ್)

ಜಾತಿ, ಪ್ರದೇಶ, ವೃತ್ತಿ ಯಾವುದನ್ನೂ ಲೆಕ್ಕಿಸದೆ ಧೈರ್ಯವನ್ನೇ ಮಾನದಂಡವನ್ನಾಗಿ ಮಾಡಿಕೊಂಡು ಗುರು ಗೋಬಿಂದ್ ಸಿಂಗ್ ಈ ಐವರನ್ನು “ಪಂಜ್ ಪ್ಯಾರೆ” ಎಂದು ಘೋಷಿಸಿದರು.

ನಂತರ ಕಬ್ಬಿಣದ ಪಾತ್ರೆಯಲ್ಲಿ ನೀರು ಮತ್ತು ಸಕ್ಕರೆ ಮಿಶ್ರಣ ಮಾಡಿ, ದ್ವಿಮುಖ ಖಡ್ಗದಿಂದ ಕಲಸಿ ಸಿದ್ಧಪಡಿಸಿದ ಅಮೃತವನ್ನು ಅವರಿಗೆ ಕುಡಿಸಿ, ಅವರ ಹೆಸರಿನ ಕೊನೆಯಲ್ಲಿ “ಸಿಂಗ್”  (ಸಿಂಹ) ಎಂಬ ಬಿರುದನ್ನು ನೀಡಿ  ದೇಶ ಮತ್ತು ಧರ್ಮದ ರಕ್ಷಣೆಗಾಗಿ ಖಾಲ್ಸಾ ಪಂಥವನ್ನು ಸ್ಥಾಪಿಸಿದರು.

ಇನ್ನೂ ಅದಕ್ಕಿಂತ ಮಹತ್ತರ ಸಂಗತಿ ಏನೆಂದರೆ, ಗುರು ಗೋಬಿಂದ್ ಸಿಂಗ್ ಅವರೇ ನಂತರ ಈ ಪಂಜ್ ಪ್ಯಾರೆಗಳಿಂದ ಅಮೃತ ಸ್ವೀಕರಿಸಿ, ಧರ್ಮದ ಮುಂದೆ ಗುರು-ಶಿಷ್ಯ, ದೊಡ್ಡವರು-ಚಿಕ್ಕವರು ಎಂಬ ಭೇದವಿಲ್ಲ ಎಂಬುದನ್ನು ಜಗತ್ತಿಗೆ ಸಾರಿದರು.

 

 

 

 


ಪ್ರಸಂಗ – 2 : ನಿಜವಾದ ಸಂಗೀತಾಸಕ್ತರು ಯಾರು?

ಒಬ್ಬ ರಾಜನಿಗೆ ಸಂಗೀತದ ಮೇಲೆ ಅಪಾರ ಅಭಿಮಾನವಿತ್ತು. ಆತ ಸ್ವತಃ ಸಂಗೀತದಲ್ಲಿ ಪರಿಣತನಾಗಿದ್ದ ಕಾರಣ, ಉತ್ತಮ ಗಾಯಕರನ್ನು ಗುರುತಿಸುವ ಸಾಮರ್ಥ್ಯವೂ ಹೊಂದಿದ್ದ.

ಒಮ್ಮೆ ಬೇಟೆಯಾಡುವಾಗ ದಾರಿ ತಪ್ಪಿದ ರಾಜ, ಒಂದು ಸುಂದರ ಸರೋವರದ ಸಮೀಪ ವಿಶ್ರಾಂತಿ ಪಡೆಯುತ್ತಿದ್ದಾಗ, ದೂರದಿಂದ ಅಪೂರ್ವವಾದ ಗಾಯನ ಕೇಳಿಬಂತು.

ಆ ಧ್ವನಿಯನ್ನು ಅನುಸರಿಸಿ ಹೋದಾಗ, ಒಬ್ಬ ಸಂತ ತಲ್ಲೀನರಾಗಿ ಹಾಡುತ್ತಿರುವುದನ್ನು ಕಂಡ.

ಗಾನ ಮುಗಿದ ಬಳಿಕ ರಾಜನು ಅವರನ್ನು ತನ್ನ ಅರಮನೆಯಲ್ಲಿ ಸಂಗೀತ ಕಾರ್ಯಕ್ರಮ ನೀಡುವಂತೆ ವಿನಂತಿಸಿದ.

ಸಂತರು ಒಂದು ಷರತ್ತು ವಿಧಿಸಿದರು.

 

 

“ನಾನು ಹಾಡುವಾಗ ನನ್ನ ಸುತ್ತ ಖಡ್ಗ ಹಿಡಿದ ಸೈನಿಕರು ನಿಲ್ಲಬೇಕು. ನನ್ನ ಗಾಯನ ಕೇಳುತ್ತಾ ಯಾರಾದರೂ ತಲೆದೂಗಿದರೆ, ಅವರ ತಲೆ ಕತ್ತರಿಸಬೇಕು.”

ಸಂಗೀತದ ಮೇಲಿನ ಪ್ರೀತಿಯಿಂದ ರಾಜನು ಒಪ್ಪಿಕೊಂಡ.

ಮರುದಿನ ದರ್ಬಾರಿನಲ್ಲಿ ಕಾರ್ಯಕ್ರಮ ಆರಂಭಕ್ಕೂ ಮುನ್ನ ಈ ಷರತ್ತು ಘೋಷಿಸಲಾಯಿತು.

ಜೀವ ಭಯದಿಂದ ಅನೇಕರು ಸಭೆ ಬಿಟ್ಟು ಹೊರಟರು.

ಆದರೆ ಸಂಗೀತದ ಮೇಲೆ ನಿಜವಾದ ಆಸಕ್ತಿ ಇದ್ದವರು ಅಲ್ಲಿಯೇ ಉಳಿದರು.

ಸಂತರು ಗಾಯನ ಆರಂಭಿಸಿದರು.

ಮೊದಲ ಸ್ವರವೇ ಎಲ್ಲರ ಹೃದಯ ತಟ್ಟಿತು.

ಎರಡನೇ ಸ್ವರದಲ್ಲಿ ಕಣ್ಣುಗಳು ಮುಚ್ಚಿಕೊಂಡವು.

ಮೂರನೇ ಸ್ವರದಲ್ಲಿ ಮನಸ್ಸುಗಳು ಕರಗಿದವು.

ಸ್ವಲ್ಪ ಹೊತ್ತಿನಲ್ಲೇ ರಾಜನಿಂದ ಹಿಡಿದು ಸಭಿಕರು, ಸೈನಿಕರು—ಎಲ್ಲರೂ ತಮ್ಮನ್ನು ಮರೆತು ಸಂಗೀತದ ತಾಳಕ್ಕೆ ತಲೆದೂಗತೊಡಗಿದರು.

ಗಾಯನ ಮುಗಿದ ನಂತರ ರಾಜನು ಆತಂಕದಿಂದ,

ಸ್ವಾಮೀ, ಎಲ್ಲರೂ ಷರತ್ತು ಉಲ್ಲಂಘಿಸಿದ್ದಾರೆ. ಈಗ ಏನು ಮಾಡಬೇಕು?” ಎಂದು ಕೇಳಿದ.

ಸಂತರು ನಗುತ್ತಾ ಉತ್ತರಿಸಿದರು.

“ಇದು ಪರೀಕ್ಷೆ ಮಾತ್ರ. ಜೀವದ ಭಯವನ್ನೇ ಮರೆತು ಸಂಗೀತದಲ್ಲಿ ಲೀನವಾಗುವವರೇ ನಿಜವಾದ ಸಂಗೀತಾಸಕ್ತರು. ಭಯವನ್ನು ಮೀರಿದಾಗ ಮಾತ್ರ ನಿಜವಾದ ಅನುಭವ ಸಾಧ್ಯ.” ಇದೊಂದು ಸಭಾ ಕಛೇರಿ. ನಾನು ಹಾಡುವುದೇ ಇಂತಹವರಿಗಾಗಿ ಮಾತ್ರ

ರಾಜನು ಆಶ್ಚರ್ಯದಿಂದ ಸಂತರ ಪಾದಗಳಿಗೆ ನಮಸ್ಕರಿಸಿದರೆ, ಸಭಿಕರೆಲ್ಲರೂ ಕುಳಿತಲ್ಲಿಂದಲೇ ಸಂತರಿಗೆ ಪ್ರಣಾಮಗಳನ್ನು ಸಲ್ಲಿಸಿದರು. ಎಂದಿನಂತೆ ರಾಜನು ಸಂತರಿಗೆ ಯಥಾಶಕ್ರಿ ಸತ್ಕರಿಸಿದ.


ಸಾರಾಂಶ

ಧರ್ಮವಾಗಲಿ, ಸಂಗೀತವಾಗಲಿ, ವಿದ್ಯೆಯಾಗಲಿ, ಕಲೆ, ಆಧ್ಯಾತ್ಮ ಅಥವಾ ಸೇವೆಯಾಗಲಿ—ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಕೇವಲ ಆಸಕ್ತಿ ಸಾಕಾಗುವುದಿಲ್ಲ.

ಭಯವನ್ನು ಮೀರುವ ಧೈರ್ಯ, ಗುರಿಯ ಮೇಲಿನ ತನ್ಮಯತೆ ಮತ್ತು ಸಂಪೂರ್ಣ ಸಮರ್ಪಣೆ ಅಗತ್ಯ.

ಗುರು ಗೋಬಿಂದ್ ಸಿಂಗ್ ಅವರ ಮುಂದೆ ನಿಂತ ಐವರು ತಮ್ಮ ಜೀವವನ್ನೇ ಲೆಕ್ಕಿಸದೆ ಧರ್ಮವನ್ನು ಆರಿಸಿಕೊಂಡರು.

ಸಂಗೀತ ಸಭೆಯಲ್ಲಿ ಉಳಿದವರು ಜೀವಭಯವನ್ನೂ ಮರೆತು ಸಂಗೀತದಲ್ಲಿ ಲೀನರಾದರು.

ಈ ಎರಡೂ ಪ್ರಸಂಗಗಳು ಒಂದೇ ಸಂದೇಶವನ್ನು ಸಾರುತ್ತವೆ—

“ಧೈರ್ಯಂ ಸರ್ವತ್ರ ಸಾಧನಂ” — ಧೈರ್ಯವಿದ್ದಲ್ಲಿ ಮಾತ್ರ ಸಾಧನೆ ಸಾಧ್ಯ.

ಆಸಕ್ತಿ ಇದ್ದರೆ ಸಮಯ ಸಿಗುತ್ತದೆ.
ತನ್ಮಯತೆ ಇದ್ದರೆ ಸಾಧನೆ ಸಿಗುತ್ತದೆ.
ಸಮರ್ಪಣೆ ಇದ್ದರೆ ಸಾಕ್ಷಾತ್ಕಾರ ಸಿಗುತ್ತದೆ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply