ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಆಲ್‌ರೌಂಡರ್ ಯಾರು? ಎಂಬ ಪ್ರಶ್ನೆಗೆ, ವಿವಿಧ ಕಾಲಘಟ್ಟಗಳಲ್ಲಿ ಅನೇಕ ದಿಗ್ಗಜರ ಹೆಸರುಗಳು ಕೇಳಿಬರುತ್ತವೆ. ಕಪಿಲ್ ದೇವ್, ಇಮ್ರಾನ್ ಖಾನ್, ಇಯಾನ್ ಬೋಥಮ್, ರಿಚರ್ಡ್ ಹ್ಯಾಡ್ಲಿ, ಜಾಕ್ ಕಾಲಿಸ್, ಬೆನ್ ಸ್ಟೋಕ್ಸ್… ಹೀಗೆ ಹಲವರ ಹೆಸರುಗಳು ಚರ್ಚೆಯಾಗಬಹುದು. ಆದರೆ ಇವರೆಲ್ಲರಿಗಿಂತ ಮೇಲೊಂದು ಹೆಸರು ಇದ್ದು, ಅದುವೇ ಸರ್ ಗರ್‌ಫೀಲ್ಡ್ “ಗ್ಯಾರಿ” ಸೋಬರ್ಸ್. ಅವರು ಕೇವಲ ಒಬ್ಬ ಕ್ರಿಕೆಟಿಗರಾಗಿರಲಿಲ್ಲ. ಕ್ರಿಕೆಟ್ ಎಂಬ ಆಟವೇ ರೂಪಿಸಿದ ಅತ್ಯಂತ ಸಂಪೂರ್ಣ ಆಟಗಾರ. ಒಬ್ಬ ಬ್ಯಾಟ್ಸ್‌ಮನ್, ಮೂರು ರೀತಿಯ ಬೌಲರ್, ಅದ್ಭುತ ಫೀಲ್ಡರ್ ಮತ್ತು ಅತ್ಯುನ್ನತ ನಾಯಕತ್ವ ಗುಣಗಳನ್ನು ಹೊಂದಿದ್ದ ಅಪರೂಪದ ಪ್ರತಿಭೆ. 90ನೇ ಹುಟ್ಟುಹಬ್ಬವನ್ನು ಆಚರಿಸಲು ಕೇವಲ ಹತ್ತು ದಿನಗಳು ಬಾಕಿ ಇರುವಾಗಲೇ ವಿಶ್ವ ಕ್ರಿಕೆಟ್ ತನ್ನ ಮಹಾನ್ ದಂತಕಥೆಯೊಬ್ಬರಿಗೆ ಅಂತಿಮ ವಿದಾಯ ಹೇಳಿದೆ.
ಕ್ರಿಕೆಟ್ ಲೋಕದ ನಿಜವಾದ GOAT

ಯುವರಾಜ್ ಸಿಂಗ್ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸುವುದಕ್ಕೆ ಸುಮಾರು 40 ವರ್ಷಗಳ ಮುಂಚೆಯೇ…
ರವಿಶಾಸ್ತ್ರಿ ಒಂದೇ ಓವರ್‌ನ ಎಲ್ಲಾ ಎಸೆತಗಳನ್ನು ಬೌಂಡರಿ ದಾಟಿಸುವುದಕ್ಕೂ ಸುಮಾರು 17 ವರ್ಷಗಳ ಮುಂಚೆಯೇ…
ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಪ್ರಥಮ ದರ್ಜೆ ಕ್ರಿಕೆಟಿಗ ಎಂಬ ಇತಿಹಾಸವನ್ನು ನಿರ್ಮಿಸಿದ್ದವರು ಸರ್ ಗ್ಯಾರಿ ಸೋಬರ್ಸ್.
ಇದು ಕೇವಲ ದಾಖಲೆ ಅಲ್ಲ. ಅದು ಒಂದು ಯುಗದ ಆರಂಭ.
ಎಲ್ಲವನ್ನೂ ಮಾಡಬಲ್ಲ ದೈತ್ಯ ಕ್ರಿಕೆಟ್ ಪ್ರತಿಭೆ

ಆಲ್‌ರೌಂಡರ್ ಎಂದರೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಆಟಗಾರ ಎನ್ನುವುದು ಸಾಮಾನ್ಯ ಅರ್ಥ.
ಆದರೆ ಗ್ಯಾರಿ ಸೋಬರ್ಸ್ ವಿಷಯದಲ್ಲಿ ಅದು ಸಾಕಾಗುವುದಿಲ್ಲ.
ಅವರು…
- ಎಡಗೈ ಸ್ಪೋಟಕ ಬ್ಯಾಟ್ಸ್‌ಮನ್
- ಎಡಗೈ ಮಧ್ಯಮ ವೇಗದ ಬೌಲರ್
- ಎಡಗೈ ಆರ್ಥೋಡಾಕ್ಸ್ ಸ್ಪಿನ್ನರ್
- ಎಡಗೈ ಚೈನಾಮನ್ ಹಾಗೂ ಲೆಗ್ ಸ್ಪಿನ್ ಬೌಲರ್
- ಅದ್ಭುತ ಸ್ಲಿಪ್ ಹಾಗೂ ಔಟ್‌ಫೀಲ್ಡ್ ಫೀಲ್ಡರ್
ಒಂದೇ ಆಟಗಾರನಲ್ಲಿ ಇಷ್ಟೆಲ್ಲ ಕೌಶಲ್ಯಗಳು ಸೇರುವುದೇ ಅಪರೂಪ. ಅದರಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಷಗಳ ಕಾಲ ಯಶಸ್ಸು ಸಾಧಿಸಿರುವುದು ಅವರನ್ನು ಕ್ರಿಕೆಟ್‌ನ “ಸಂಪೂರ್ಣ ಆಟಗಾರ”ನನ್ನಾಗಿ ಮಾಡಿತು.
ದುಃಖದಲ್ಲೇ ಆರಂಭವಾದ ಬದುಕು
1936ರ ಜುಲೈ 28ರಂದು ವೆಸ್ಟ್ ಇಂಡೀಸ್‌ನ ಬಾರ್ಬೆಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಬ್ರಿಡ್ಜ್‌ಟೌನ್‌ನ ಸೇಂಟ್ ಮೈಕೆಲ್‌ನ ಬೇ ಲ್ಯಾಂಡ್‌ನ ವಾಲ್ಕಾಟ್ ಅವೆನ್ಯೂದ ಶಾಮಂಟ್ ಮತ್ತು ಥೆಲ್ಮಾ ಸೋಬರ್ಸ್ ದಂಪತಿಗಳ ಆರು ಮಕ್ಕಳ ಪೈಕಿ ಐದನೆಯವರಾಗಿದ್ದರು ಜನಿಸಿದ ಸೋಬರ್ಸ್ ಸಂಪೂರ್ಣ ಹೆಸರು ಗಾರ್ಫೀಲ್ಡ್ ಸೇಂಟ್ ಆಬ್ರನ್ ಸೋಬರ್ಸ್. ಅವರಿಗೆ ಕೇವಲ ಐದು ವಯಸ್ಸಿರುವಾಗಲೇ, ಅವರ ತಂದೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಮೃತಪಟ್ಟರು. ಹಡಗಿನಲ್ಲಿ ವ್ಯಾಪಾರಿ ನಾವಿಕನಾಗಿ ಕೆಲಸ ಮಾಡುತ್ತಿದ್ದ ಅವರ ತಂದೆಯ ಸಾವಿನ ನಂತರ, ಆರು ಮಕ್ಕಳನ್ನು ಸಾಕಿ ಬೆಳೆಸುವ ಸಂಪೂರ್ಣ ಹೊಣೆ ತಾಯಿ ಥೆಲ್ಮಾ ಸೋಬರ್ಸ್ ಅವರ ಮೇಲಿದ್ದ ಪರಿಣಾಮ ಸೋಬರ್ಸ್ ಅವರ ಬಾಲ್ಯ ಸುಖಕರವಾಗಿರಲಿಲ್ಲ. ಕೌಟುಂಬಿಕ ಆರ್ಥಿಕ ಸಂಕಷ್ಟಗಳ ನಡುವೆಯೂ ಮಕ್ಕಳನ್ನು ಬೆಳೆಸಿದ ತಾಯಿಯ ತ್ಯಾಗವೇ ಗ್ಯಾರಿ ಸೋಬರ್ಸ್ ಅವರ ಬದುಕಿನ ದೊಡ್ಡ ಶಕ್ತಿಯಾಗಿತ್ತು.
ಆರು ಬೆರಳುಗಳೊಂದಿಗೆ ಜನಿಸಿದ್ದ ಅಪರೂಪದ ಬಾಲಕ
ಹಲವರಿಗೆ ಗೊತ್ತಿಲ್ಲದ ಒಂದು ಕುತೂಹಲಕಾರಿ ಸಂಗತಿಯೆಂದರೆ… ಗ್ಯಾರಿ ಸೋಬರ್ಸ್ ಅವರು ಎರಡೂ ಕೈಗಳಲ್ಲಿ ಆರು ಬೆರಳುಗಳೊಂದಿಗೆ ಜನಿಸಿದ್ದರು. ಅಂದಿನ ಕಾಲದಲ್ಲಿ ಈಗಿನಂತೆ ಶಸ್ತ್ರಚಿಕಿತ್ಸೆ ಅಷ್ಟೇನೂ ಪ್ರಾಮುಖ್ಯತೆ ಪಡೆಯದಿದ್ದಂತಹ ಕಾಲದಲ್ಲಿ ಸಣ್ಣ ವಯಸ್ಸಿನಲ್ಲಿಯೇ ಕ್ಯಾಟ್‌ಗಟ್ ಮತ್ತು ಚೂಪಾದ ಚಾಕುಗಳ ಸಹಾಯದಿಂದ ಎರಡೂ ಕೈಗಳಲ್ಲಿದ್ದ ಆರನೇ ಬೆರಳುಗಳನ್ನು ತೆಗೆದುಹಾಕಲಾಯಿತು. ವೆಸ್ಟ್ ಇಂಡೀಸ್ ದ್ವೀಪದ ಎಲ್ಲರಂತೆಯೇ ಸೋಬರ್ಸ್ ಕೂಡಾ ಬಾಲ್ಯದಿಂದಲೇ ಕ್ರಿಕೆಟ್, ಫುಟ್ಬಾಲ್ ಮತ್ತು ಬ್ಯಾಸ್ಕೆಟ್‌ಬಾಲ್ ಆಟಗಳನ್ನು ಅಡುತ್ತಲೇ ಆರಂಭವಾದ ಅವರ ಬಾಲ್ಯ, ತಮ್ಮ ಅತ್ಯಂತ ಉತ್ಸಾಹ ಮತ್ತು ತಮ್ಮ ನೈಸರ್ಗಿಕ ಸಾಮರ್ಥ್ಯಗಳಿಂದಲೇ ಈ ಎಲ್ಲಾ ಈ ಎಲ್ಲಾ ಆಟಗಳಲ್ಲಿಯೂ ಪ್ರಬುದ್ಧರಾದರೂ, ಅಂತಿಮವಾಗಿ ಅವರು ಒಲವು ತೋರಿಸಿದ್ದು ಕ್ರಿಕೆಟ್ ಆಟದತ್ತವೇ. ಬಾರ್ಬೆಡೋಸ್‌ನ ಕಡಲತೀರಗಳಲ್ಲಿ ಬಿದ್ದಿರುತ್ತಿದ್ದ ಸಣ್ಣ ಸಣ್ಣ ತೆಂಗಿನ ಮರದ ಕಾಯಿಗಳೇ ಅವರಿಗೆ ಚಂಡು ಮತ್ತು ತೆಂಗಿನ ಸೋಗೆಯೇ ಅವರ ಬ್ಯಾಟುಗಳಾಗಿಸಿಕೊಂಡು ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಆರಂಭಿಸಿದ ಸೋಬರ್ಸ್ ನಂತರದ ದಿನಗಳಲ್ಲಿ ತಮ್ಮ ಮನೆಯ ಸುತ್ತಮುತ್ತಲಿನ ಬೀದಿಗಳು ಮತ್ತು ಖಾಲಿ ಮೈದಾನಗಳೇ ಅವರ ಕ್ರಿಕೆಟ್ ವಿಶ್ವವಿದ್ಯಾಲಯವಾಗಿದ್ದವು.
16ನೇ ವಯಸ್ಸಿಗೇ ಪ್ರಥಮ ದರ್ಜೆ ಕ್ರಿಕೆಟ್
ಕೇವಲ 16ನೇ ವಯಸ್ಸಿನಲ್ಲಿ ಬಾರ್ಬೆಡೋಸ್ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ. ಭಾರತ ತಂಡದ ವಿರುದ್ಧ ಆಡಿದ ಪಂದ್ಯದಲ್ಲಿ 7 ವಿಕೆಟ್‌ಗಳನ್ನು ಪಡೆದು ಎಲ್ಲರ ಗಮನ ಸೆಳೆದರು.
ಮುಂದಿನ ವರ್ಷವೇ… ಕೇವಲ 17ನೇ ವಯಸ್ಸಿನಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.
21ನೇ ವಯಸ್ಸಿನಲ್ಲಿ ನಿರ್ಮಿಸಿದ ಅಮರ ದಾಖಲೆ

1958ರಲ್ಲಿ ಜಮೈಕಾದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ… ಕೇವಲ 21 ವರ್ಷದ ಸೋಬರ್ಸ್ 365 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಆ ಕಾಲದಲ್ಲಿ ಇದು ಟೆಸ್ಟ್ ಕ್ರಿಕೆಟ್ ಇತಿಹಾಸದ ಅತ್ಯಧಿಕ ವೈಯಕ್ತಿಕ ಮೊತ್ತವಾಗಿತ್ತು. ಈ ದಾಖಲೆ… 36 ವರ್ಷಗಳ ಕಾಲ ಅಜೇಯವಾಗಿಯೇ ಉಳಿಯಿತು. 1994ರಲ್ಲಿ ಬ್ರಿಯಾನ್ ಲಾರಾ 375 ರನ್ ಗಳಿಸಿದ ನಂತರವೇ ಈ ದಾಖಲೆ ಮುರಿಯಲಾಯಿತು.
ಒಂದೇ ಓವರ್‌ನಲ್ಲಿ ಆರು ಸಿಕ್ಸರ್
- ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್. ನಾಟಿಂಗ್‌ಹ್ಯಾಮ್‌ಶೈರ್ ಪರ ಆಡುತ್ತಿದ್ದ ಗ್ಯಾರಿ ಸೋಬರ್ಸ್. ಗ್ಲಾಮರ್ಗನ್ ವಿರುದ್ಧದ ಪಂದ್ಯ. ಮಧ್ಯಮ ವೇಗಿ ಮಾಲ್ಕಂ ನ್ಯಾಶ್ ಎಸೆದ ಒಂದು ಓವರ್… ಪ್ರತಿ ಎಸೆತವೂ ಬೌಂಡರಿ ದಾಟಿತು. ಒಟ್ಟು…6 ಎಸೆತಗಳು… 6 ಸಿಕ್ಸರ್‌ಗಳು… ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಗೌರವ ಸೋಬರ್ಸ್ ಅವರದಾಯಿತು.
ಹೆಲ್ಮೆಟ್ ಇಲ್ಲದ ಯುಗದ ಸಾಹಸಿ
ಇಂದಿನಂತೆ ಹೆಲ್ಮೆಟ್, ಆಧುನಿಕ ರಕ್ಷಣಾ ಸಾಧನಗಳೇ ಇಲ್ಲದ ಕಾಲ. ಅತ್ಯಂತ ವೇಗದ ಬೌಲರ್‌ಗಳ ಎದುರು… ಸೋಬರ್ಸ್ ಆಡಿದ ಸಾಧನೆಗಳು ಇಂದಿಗೂ ಅಚ್ಚರಿ ಮೂಡಿಸುತ್ತವೆ.
ಟೆಸ್ಟ್ ವೃತ್ತಿಜೀವನ
- ಪಂದ್ಯಗಳು – 93
- ರನ್ – 8,032
- ಬ್ಯಾಟಿಂಗ್ ಸರಾಸರಿ – 57.78
- ಶತಕಗಳು – 26
- ವಿಕೆಟ್‌ಗಳು – 235
ಈ ಅಂಕಿ-ಅಂಶಗಳು ಇಂದಿಗೂ ಆಲ್‌ರೌಂಡರ್‌ಗಳಿಗೆ ಮಾನದಂಡವಾಗಿವೆ.
ಏಕದಿನ ಕ್ರಿಕೆಟ್‌ನಲ್ಲಿ ಒಂದೇ ಪಂದ್ಯ
ಆಶ್ಚರ್ಯಕರ ಸಂಗತಿಯೆಂದರೆ… ಸೋಬರ್ಸ್ ಅವರ ಏಕದಿನ ಅಂತಾರಾಷ್ಟ್ರೀಯ ವೃತ್ತಿಜೀವನ ಕೇವಲ ಒಂದೇ ಪಂದ್ಯಕ್ಕೆ ಸೀಮಿತವಾಯಿತು.
ಆ ಪಂದ್ಯದಲ್ಲಿ…
- ಶೂನ್ಯಕ್ಕೆ ಔಟಾದರು.
- ಆದರೆ ಒಂದು ವಿಕೆಟ್ ಪಡೆದರು.
ಇಪ್ಪತ್ತು ವರ್ಷಗಳ ಟೆಸ್ಟ್ ಬದುಕು
- ಟೆಸ್ಟ್ ಪದಾರ್ಪಣೆ – 1954
- ನಿವೃತ್ತಿ – 1974
ಸುಮಾರು ಎರಡು ದಶಕಗಳ ಕಾಲ ವಿಶ್ವ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ಬೆನ್ನೆಲುಬಾಗಿ ನಿಂತರು.
ಸರ್ ಗೌರವ
ಕ್ರಿಕೆಟ್‌ಗೆ ನೀಡಿದ ಅನನ್ಯ ಸೇವೆಯನ್ನು ಗುರುತಿಸಿ ಬ್ರಿಟನ್ ಸರ್ಕಾರ ಅವರಿಗೆ “ಸರ್” ಗೌರವವನ್ನು ನೀಡಿತು. ಆ ಬಳಿಕ ಅವರು ವಿಶ್ವದಾದ್ಯಂತ… Sir Garfield Sobers ಎಂದೇ ಪ್ರಸಿದ್ಧರಾದರು.

ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಸರ್ ಗಾರ್ಫೀಲ್ಡ್ ಸೋಬರ್ಸ್ ಅವರ ಗೌರವಾರ್ಥ ಅವರ ತವರು ದೇಶವಾದ ಬಾರ್ಬಡೋಸ್‌ನಲ್ಲಿ ಸರ್ ಗ್ಯಾರಿ ಸೋಬರ್ಸ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮತ್ತು ಗಾರ್ಫೀಲ್ಡ್ ಸೋಬರ್ಸ್ ಜಿಮ್ನಾಷಿಯಂ ಒಳಾಂಗಣ ಕ್ರೀಡಾಂಗಣವಿದೆ. ಅದೇ ರೀತಿಯಾಗಿ ಬಾರ್ಬಡೋಸ್‌ನ ಐತಿಹಾಸಿಕ ಕೆನ್ಸಿಂಗ್ಟನ್ ಓವಲ್ ನಲ್ಲಿರುವ ಪೆವಿಲಿಯನ್‌ನಲ್ಲಿ, ಅವರ ಹೆಸರಿನಲ್ಲಿಯೇ ಒಂದು ಸ್ಟ್ಯಾಂಡ್ ಮತ್ತು ಪ್ರಸಿದ್ಧ ಪ್ರತಿಮೆಗಳನ್ನು ನಿರ್ಮಿಸುವ ಮೂಲಕ ಆ ಕ್ರಿಕೆಟ್ ದೈತ್ಯನ ಸಾಧನೆಯನ್ನು ಚಿರಾಯುವಾಗಿ ಮಾಡಿರುವುದು ಸ್ವಾಗತಾರ್ಹವಾಗಿದೆ
ಭಾರತೀಯ ಚಲನಚಿತ್ರ ನಟಿ ಅಂಜು ಮಹೇಂದ್ರು ಆವರೊಂದಿಗೆ ನಡೆದಿತ್ತು ನಿಶ್ಚಿತಾರ್ಥ
1966-1967ರ ಅವಧಿಯಲ್ಲಿ ವೆಸ್ಟ್ ಇಂಡೀಸ್ ತಂಡವು ಭಾರತ ಪ್ರವಾಸದಲ್ಲಿದ್ದಾಗ ಅದಾಗಲೇ ಭಾರತೀಯ ಚಿತ್ರರಂಗದಲ್ಲಿ ಪ್ರಸಿದ್ಧ ನಟಿಯಾಗಿದ್ದ ಅಂಜು ಮಹೇಂದ್ರು ಆವರನ್ನು ಯಾವುದೋ ಒಂದು ಪಾರ್ಟಿಯಲ್ಲಿ ಭೇಟಿಯಾದ ನಂತರ ಅವರಿಬ್ಬರ ನಡುವೆ ಉತ್ತಮ ಸ್ನೇಹ ಏರ್ಪಟ್ಟು ಅದು ಪ್ರೇಮಕ್ಕೆ ತಿರುಗಿ ಅವರಿಬ್ಬರೂ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು. ಆದರೆ ಇಬ್ಬರೂ ತಮ್ಮ ತಮ್ಮ ವೃತ್ತಿ ಜೀವನದಲ್ಲಿ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿದ್ದು ಎರಡೂ ದೇಶಗಳ ದೂರದ ಅಂತರ ಮತ್ತು ವೃತ್ತಿಜೀವನದ ಬಿಡುವಿಲ್ಲದ ಮತ್ತು ಹೊಂದಾಣಿಕೆಯಾಗದ ವೇಳಾಪಟ್ಟಿಗಳ ಕಾರಣದಿಂದಾಗಿ ಪರಸ್ಪರ ಸಮಯವನ್ನು ನೀಡಲು ಸಾದ್ಯವಾಗದೇ ಇದ್ದ ಕಾರಣ, ಅವರ ಸಂಬಂಧವು ಮೂರ್ನಾಲ್ಕು ವರ್ಷಗಳಲ್ಲಿಯೇ ಕೊನೆಗೊಂಡರೂ, ಸೋಬರ್ಸ್ ತಮ್ಮ ಆತ್ಮಕಥೆಯಲ್ಲಿ ಆ ಪ್ರಣಯದ ದಿನಗಳನ್ನು ಪ್ರೀತಿಯಿಂದ ನೆನಪಿಸಿಕೊಂಡಿದ್ದರು.
ಅವರು ಸೆಪ್ಟೆಂಬರ್ 1969 ರಲ್ಲಿ ಆಸ್ಟ್ರೇಲಿಯಾದ ಪ್ರುಡೆನ್ಸ್ “ಪ್ರು” ಕಿರ್ಬಿ ಅವರೊಂದಿಗೆ ಮದುವೆಯಾಗಲು ಅನುಮತಿ ಕೋರಿ ಸೋಬರ್ಸ್ ಅವರು ಮಹೇಂದ್ರು ಅವರಿಗೆ ಪತ್ರವನ್ನೂ ಬರೆದಿದ್ದದ್ದು ಗಮನಾರ್ಹವಾಗಿತ್ತು. ಹೀಗೆ ಆಸ್ಟ್ರೇಲಿಯಾದ ಗೆಳತಿಯನ್ನು ಮದುವೆಯಾಗಿದ್ದ ಕಾರಣ ಸೋಬರ್ಸ್ ಅವರಿಗೆ ಅಲ್ಲಿನ ಪೌರತ್ವವೂ ಲಭಿಸಿ, ಸೋಬರ್ಸ್ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ದೇಶಗಳ ಉಭಯ ಪೌರತ್ವವನ್ನು ಹೊಂದಿದ್ದರು. ಈ ಸುಂದರ ದಾಂಪತ್ಯದ ಕುರುಹಾಗಿ ಸೋಬರ್ಸ್ ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ದತ್ತುಪುತ್ರಿ ಇದ್ದರು. ವಿವಿಧ ಕಾರಣಗಳಿಂದಾಗಿ 1984 ರಲ್ಲಿ ದಂಪತಿಗಳು ಬೇರ್ಪಟ್ಟು, ನಂತರ 1990 ರಲ್ಲಿ ವಿವಾಹವು ವಿಚ್ಛೇದನದಲ್ಲಿ ಕೊನೆಗೊಂಡಿತು.
90ನೇ ಹುಟ್ಟುಹಬ್ಬಕ್ಕೆ ಕೇವಲ 10 ದಿನಗಳು ಬಾಕಿ ಇರುವಾಗಲೇ ನಿಧನ
2026ರ ಜುಲೈ 17ರಂದು ತಮ್ಮ 90ನೇ ಹುಟ್ಟುಹಬ್ಬಕ್ಕೆ ಕೇವಲ 10 ದಿನಗಳು ಬಾಕಿ ಇರುವಾಗಲೇ ವಯೋಸಹಜವಾಗಿ ಗ್ಯಾರಿ ಸೋಬರ್ಸ್ ಅವರು ನಿಧನರಾಗಿದ್ದಾರೆ ಎಂದು ಅವರ ಪುತ್ರ ಡೇನಿಯಲ್ ಸೋಬರ್ಸ್ ಆವರು ದೃಢಪಡಿಸುವ ಮೂಲಕ ಕ್ರಿಕೆಟ್ ಲೋಕ ತನ್ನ ಒಬ್ಬ ಯುಗಪುರುಷನನ್ನು ಕಳೆದುಕೊಂಡಿದೆ ಎಂದರೂ ಅತಿಶಯವಾಗದು.
ಏಕೆ ಇಂದಿಗೂ ‘ಸರ್ವಶ್ರೇಷ್ಠ’?
ಕಪಿಲ್ ದೇವ್ ವೇಗದ ಬೌಲಿಂಗ್ ಮಾಡುತ್ತಿದ್ದರು. ಇಮ್ರಾನ್ ಖಾನ್ ವೇಗದ ಬೌಲಿಂಗ್ ಜೊತೆಗೆ ನಾಯಕತ್ವದಲ್ಲಿ ಮಿಂಚಿದರು. ಜಾಕ್ ಕಾಲಿಸ್ ಅಸಾಧಾರಣ ಬ್ಯಾಟ್ಸ್‌ಮನ್. ಬೆನ್ ಸ್ಟೋಕ್ಸ್ ಆಧುನಿಕ ಯುಗದ ಮ್ಯಾಚ್ ವಿನ್ನರ್.
ಆದರೆ… ಒಬ್ಬ ಆಟಗಾರ…
- ಮೂರು ರೀತಿಯ ಬೌಲಿಂಗ್ ಮಾಡುವುದು,
- ವಿಶ್ವಮಟ್ಟದ ಬ್ಯಾಟಿಂಗ್,
- ಅತ್ಯುತ್ತಮ ಫೀಲ್ಡಿಂಗ್,
- ನಾಯಕತ್ವ…
ಇವೆಲ್ಲವನ್ನೂ ಒಂದೇ ಮಟ್ಟದಲ್ಲಿ ಮಾಡಿರುವ ಉದಾಹರಣೆ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪ. ಅದಕ್ಕಾಗಿಯೇ ಗ್ಯಾರಿ ಸೋಬರ್ಸ್ ಅವರನ್ನು ಇಂದಿಗೂ “The Greatest All-Rounder of All Time” ಎಂದು ಕರೆಯಲಾಗುತ್ತದೆ.
ಒಂದು ಯುಗದ ಅಂತ್ಯ

ಕೆಲವರು ದಾಖಲೆಗಳನ್ನು ನಿರ್ಮಿಸುತ್ತಾರೆ. ಕೆಲವರು ಆಟವನ್ನು ಬದಲಿಸುತ್ತಾರೆ. ಆದರೆ ಕೆಲವೇ ಕೆಲವು ಮಹಾನ್ ವ್ಯಕ್ತಿಗಳು ಆಟದ ವ್ಯಾಖ್ಯಾನವನ್ನೇ ಬದಲಿಸುತ್ತಾರೆ. ಗ್ಯಾರಿ ಸೋಬರ್ಸ್ ಅಂತಹವರಲ್ಲಿ ಒಬ್ಬರು. ಅವರು ನಿವೃತ್ತಿಯಾದರೂ… 52 ವರ್ಷಗಳ ನಂತರವೂ ಕ್ರಿಕೆಟ್ ಲೋಕ ಅವರನ್ನು “ಸರ್ವಶ್ರೇಷ್ಠ ಆಲ್‌ರೌಂಡರ್” ಎಂದೇ ಗೌರವಿಸುತ್ತಿದೆ. ಅವರಂತಹ ಪ್ರತಿಭೆ ಮತ್ತೊಮ್ಮೆ ಹುಟ್ಟಬಹುದೇ? ಬಹುಶಃ ಇಲ್ಲ. ಏಕೆಂದರೆ… ಸರ್ ಗ್ಯಾರಿ ಸೋಬರ್ಸ್ ಕೇವಲ ಒಬ್ಬ ಕ್ರಿಕೆಟಿಗನಲ್ಲ… ಕ್ರಿಕೆಟ್ ಇತಿಹಾಸದ ಜೀವಂತ ದಂತಕಥೆಯಾಗಿದ್ದರು ಎನ್ನುವುದೇ ಸತ್ಯ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ