ಪ್ರಾಣಿಗಳ ನಿಷ್ಠೆ ಪ್ರತೀಕಾರ

ಕೆಲವು ಸಂಬಂಧಗಳಿಗೆ ಮಾತುಗಳ ಅಗತ್ಯವಿಲ್ಲ. ಕೆಲವು ಪ್ರೀತಿಗಳಿಗೆ ಭಾಷೆಯ ಅಗತ್ಯವಿಲ್ಲ. ಕೆಲವೊಮ್ಮೆ ಮನುಷ್ಯರಿಗಿಂತಲೂ ಪ್ರಾಣಿಗಳೇ ನಿಷ್ಠೆ, ಪ್ರೀತಿ ಮತ್ತು ಬಾಂಧವ್ಯದ ನಿಜವಾದ ಅರ್ಥವನ್ನು ಬದುಕಿನ ಕೊನೆಯ ಕ್ಷಣದವರೆಗೂ ತೋರಿಸಿಬಿಡುತ್ತವೆ. ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದ ಈ ಮನಮಿಡಿಯುವ ಘಟನೆ ಅಂತಹ ಅಪರೂಪದ ಉದಾಹರಣೆಯಾಗಿದೆ.

15 ವರ್ಷಗಳ ಕಾಲ ತನ್ನ ಯಜಮಾನನೇ ತನ್ನ ಪ್ರಪಂಚ ಎಂದು ಬದುಕಿದ ‘ದುಗ್ಗು’ ಎಂಬ ಸಾಕು ನಾಯಿ, ತನ್ನ ಯಜಮಾನನ ಅಂತಿಮ ಯಾತ್ರೆಯಲ್ಲೇ ಕುಸಿದು ಪ್ರಾಣ ಬಿಟ್ಟಿದೆ. ಈ ಘಟನೆ ಕಂಡ ಸಾವಿರಾರು ಜನರ ಕಣ್ಣಲ್ಲಿ ನೀರು ತರಿಸಿದ್ದು ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲಿಯೂ ಲಕ್ಷಾಂತರ ಜನರ ಮನಸ್ಸು ಮುಟ್ಟಿದೆ.

ಯಜಮಾನನೇ ಜಗತ್ತಾಗಿದ್ದ ದುಗ್ಗು

ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಸಿವಿಲ್ ಲೈನ್ಸ್ ನಿವಾಸಿಯಾಗಿದ್ದ 67 ವರ್ಷದ ಪ್ರದೀಪ್ ಜೈನ್ ಅವರಿಗೆ ದುಗ್ಗು ಕೇವಲ ಸಾಕು ನಾಯಿಯಾಗಿರಲಿಲ್ಲ; ಮನೆಯ ಸದಸ್ಯನಾಗಿತ್ತು.

15 ವರ್ಷಗಳ ಹಿಂದೆ ಮನೆಗೆ ಬಂದಿದ್ದ ದುಗ್ಗು, ಆ ದಿನದಿಂದಲೇ ಪ್ರದೀಪ್ ಜೈನ್ ಅವರ ನೆರಳಾಗಿ ಬದುಕತೊಡಗಿತ್ತು.

  • ಯಜಮಾನ ಮನೆಗೆ ಬರುವವರೆಗೆ ಬಾಗಿಲ ಬಳಿ ಕಾದು ನಿಲ್ಲುವುದು,
  • ಅವರು ಊಟ ಮಾಡಿದ ನಂತರವೇ ತಾನೂ ಆಹಾರ ಸೇವಿಸುವುದು,
  • ಮನೆಯೊಳಗೆ ಅವರು ಎಲ್ಲಿ ಹೋದರೂ ಹಿಂಬಾಲಿಸುವುದು,
  • ಅವರು ಅಸ್ವಸ್ಥರಾದರೆ ತಾನೂ ಊಟ ಬಿಡುವುದು…

ಇದು ದುಗ್ಗುವಿನ ದಿನಚರಿಯಾಗಿತ್ತು.

ಕುಟುಂಬದವರ ಪ್ರಕಾರ, ಪ್ರದೀಪ್ ಜೈನ್ ಅವರಿಗೆ ದುಗ್ಗು ಕೇವಲ ಯಜಮಾನನ ಸಂಬಂಧ ಹೊಂದಿರಲಿಲ್ಲ; ತಂದೆ, ಸ್ನೇಹಿತ ಮತ್ತು ಬದುಕಿನ ಆಧಾರವಾಗಿದ್ದರು.


ಆಸ್ಪತ್ರೆಯಿಂದ ಮನೆಗೆ ಮರಳಿದರೂ… ಜೀವ ಇರಲಿಲ್ಲ

ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರದೀಪ್ ಜೈನ್ ಅವರು ಭೋಪಾಲ್‌ನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಮಂಗಳವಾರ ಸಂಜೆ ಅವರ ಪಾರ್ಥಿವ ಶರೀರವನ್ನು ಮನೆಗೆ ತರಲಾಯಿತು. ಬಂಧುಗಳು, ಸ್ನೇಹಿತರು, ನೆರೆಹೊರೆಯವರು ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಆದರೆ ಆ ಗುಂಪಿನ ಮಧ್ಯೆ, ತನ್ನ ಯಜಮಾನನಿಗಾಗಿ ಕಾದು ನಿಂತಿದ್ದ ಮತ್ತೊಬ್ಬ ಜೀವವೂ ಇತ್ತು – ದುಗ್ಗು.


ಏನೋ ತಪ್ಪಾಗಿದೆ ಎಂಬುದನ್ನು ಮೊದಲು ಅರಿತದ್ದು ದುಗ್ಗು

ಪಾರ್ಥಿವ ಶರೀರ ಮನೆ ತಲುಪುತ್ತಿದ್ದಂತೆ ದುಗ್ಗು ವಿಚಿತ್ರವಾಗಿ ವರ್ತಿಸಲು ಆರಂಭಿಸಿತು. ಮತ್ತೆ ಮತ್ತೆ ಓಡಿ ಬಂದು ಯಜಮಾನನ ದೇಹದ ಬಳಿ ಹೋಗಲು ಪ್ರಯತ್ನಿಸಿತು. ಜೋರಾಗಿ ಕೂಗುತ್ತಿತ್ತು. ಯಾರ ಮಾತನ್ನೂ ಕೇಳಲಿಲ್ಲ. ಅದರ ನೋವನ್ನು ತಡೆಯಲಾಗದೆ ಕುಟುಂಬದವರು ಅದನ್ನು ಬೇರೆ ಕೋಣೆಯಲ್ಲಿ ಇರಿಸಿದರು. ಆದರೆ ಇಡೀ ರಾತ್ರಿ ದುಗ್ಗುವಿಗೆ ನಿದ್ರೆಯೇ ಇರಲಿಲ್ಲ. ಅದು ಒಂದು ತುತ್ತು ಆಹಾರವನ್ನೂ ಸೇವಿಸಲಿಲ್ಲ. ಮನೆಯೆಲ್ಲ ಅದರ ಕರಾಳ ಕೂಗಿನಿಂದ ತುಂಬಿಹೋಗಿತ್ತು.


ಕೊನೆಯ ಬಾರಿ ಯಜಮಾನನಿಗೆ ಮೌನ ವಿದಾಯ

ಮಾರನೇ ದಿನ ಅಂತಿಮ ಯಾತ್ರೆ ಆರಂಭಿಸುವ ಮುನ್ನ ಕುಟುಂಬದವರು ದುಗ್ಗುವಿಗೆ ಕೊನೆಯ ಬಾರಿ ಯಜಮಾನನನ್ನು ನೋಡುವ ಅವಕಾಶ ನೀಡಿದರು. ಅದು ನಿಧಾನವಾಗಿ ನಡೆದು ಬಂದು ಪ್ರದೀಪ್ ಜೈನ್ ಅವರ ತಲೆಯ ಬಳಿ ನಿಂತಿತು. ಕೆಲ ಕ್ಷಣ ಯಾವುದೇ ಶಬ್ದವಿಲ್ಲ. ಯಾವುದೇ ಚಲನೆಯಿಲ್ಲ. ಮಾತನಾಡಲು ಸಾಧ್ಯವಾಗದ ಆ ಜೀವ ತನ್ನ ಯಜಮಾನನಿಗೆ ಮೌನವಾಗಿ ವಿದಾಯ ಹೇಳುತ್ತಿತ್ತು. ಆ ದೃಶ್ಯ ನೋಡಿದ ಅನೇಕರು ಕಣ್ಣೀರಿಟ್ಟರು.


ಅಂತಿಮ ಯಾತ್ರೆಯಲ್ಲೇ ಕೊನೆಯುಸಿರು

ಸ್ವಲ್ಪ ಹೊತ್ತಿನ ಬಳಿಕ ಅಂತಿಮ ಯಾತ್ರೆ ಆರಂಭವಾಯಿತು. ದುಗ್ಗು ಯಾವುದೇ ಗದ್ದಲವಿಲ್ಲದೆ ಮೆರವಣಿಗೆಯ ಹಿಂದೆ ನಡೆಯತೊಡಗಿತು. ಆದರೆ ಕೆಲವೇ ಹೆಜ್ಜೆ ನಡೆದ ಬಳಿಕ ಅದು ಏಕಾಏಕಿ ಕುಸಿದು ಬಿದ್ದಿತು. ಕುಟುಂಬದವರು ಎತ್ತಿ ನೋಡಿದಾಗ ಅದು ಕೊನೆಯುಸಿರೆಳೆದಿತ್ತು. ತನ್ನ ಯಜಮಾನನನ್ನು ಒಂಟಿಯಾಗಿ ಕಳುಹಿಸಲು ಮನಸ್ಸಾಗದಂತೆ, ಅದೇ ಅಂತಿಮ ಪಯಣದಲ್ಲಿ ತನ್ನ ಜೀವವನ್ನೂ ಸಮರ್ಪಿಸಿತು.


ಒಂದೇ ದಿನ ಎರಡು ಅಂತ್ಯಕ್ರಿಯೆಗಳು

ಒಂದೇ ದಿನ… ಒಂದೇ ಮನೆಯಿಂದ… ಎರಡು ಜೀವಗಳು ಶಾಶ್ವತವಾಗಿ ದೂರವಾದವು. ಪ್ರದೀಪ್ ಜೈನ್ ಅವರ ಅಂತ್ಯಸಂಸ್ಕಾರವನ್ನು ಸಂಪ್ರದಾಯದಂತೆ ನೆರವೇರಿಸಲಾಯಿತು. ದುಗ್ಗುವಿಗೂ ಪ್ರತ್ಯೇಕ ಚಿತಾರಥ ಸಿದ್ಧಪಡಿಸಿ, ಯಜಮಾನನ ಅಂತ್ಯಸಂಸ್ಕಾರ ನಡೆದ ಸ್ಥಳದ ಸಮೀಪವೇ ಗೌರವಪೂರ್ವಕವಾಗಿ ಸಮಾಧಿ ಮಾಡಲಾಯಿತು. ಮನೆಯ ಸದಸ್ಯರನ್ನು ಹೇಗೆ ಬೀಳ್ಕೊಡುತ್ತಾರೋ ಅದೇ ಮಮತೆಯಿಂದ ದುಗ್ಗುವನ್ನೂ ಮಣ್ಣಿನ ಮಡಿಲಿಗೆ ಒಪ್ಪಿಸಲಾಯಿತು.


“ಅದು ಸಾಕು ನಾಯಿಯಲ್ಲ… ನಮ್ಮ ಮನೆಯ ಮಗನೇ”

ಮೃತರ ಸಹೋದರ ಈ ಘಟನೆಯನ್ನು ನೆನಪಿಸಿಕೊಂಡು ಭಾವುಕರಾದರು.

“15 ವರ್ಷಗಳ ಹಿಂದೆ ದುಗ್ಗು ನಮ್ಮ ಮನೆಗೆ ಬಂದಿತ್ತು. ಆ ದಿನದಿಂದ ಅದು ನಮ್ಮ ಕುಟುಂಬದ ಸದಸ್ಯನಾಗಿತ್ತು. ನನ್ನ ಅಣ್ಣ ಅಂಗಡಿಯಿಂದ ಮನೆಗೆ ಬರುವವರೆಗೆ ಅದು ಬಾಗಿಲ ಬಳಿ ಕಾಯುತ್ತಿತ್ತು. ಅಣ್ಣ ಊಟ ಮಾಡಿದ ಬಳಿಕವೇ ಅದು ಊಟ ಮಾಡುತ್ತಿತ್ತು. ನಾವು ಅದನ್ನು ಎಂದಿಗೂ ಸರಪಳಿಯಲ್ಲಿ ಕಟ್ಟಿರಲಿಲ್ಲ. ಮನೆಯೊಳಗೆ ಅದು ಸಂಪೂರ್ಣ ಸ್ವತಂತ್ರವಾಗಿತ್ತು. ಏಕೆಂದರೆ ಅದು ನಮ್ಮ ಮನೆಯ ಮತ್ತೊಬ್ಬ ಸದಸ್ಯನಾಗಿತ್ತು.”


ಇದೇ ವೇಳೆ ನೆನಪಾಗುವ ಮತ್ತೊಂದು ಹೃದಯವಿದ್ರಾವಕ ಘಟನೆ…

ಮೂಕಜೀವಿಗಳ ನೆನಪು, ನಿಷ್ಠೆ ಮತ್ತು ಭಾವನೆಗಳ ಬಗ್ಗೆ ಮಾತನಾಡುವಾಗ ನೇಪಾಳದಲ್ಲಿ ನಡೆದ ಮತ್ತೊಂದು ಘಟನೆ ನೆನಪಾಗುತ್ತದೆ.

2012ರಲ್ಲಿ ಕಾಡಾನೆ ‘ಧುರ್ಬೆ’ (Dhurbe) ದಾಳಿಯಲ್ಲಿ ತನ್ನ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಶನಿಚರ ಬೋಟೆ ಎಂಬ ವ್ಯಕ್ತಿ, ಅದೇ ಆನೆಯ ಕಾಟದಿಂದ ಪಾರಾಗಲು ತನ್ನ ಮನೆ ಮಾರಾಟ ಮಾಡಿ ಕುಟುಂಬ ಸಮೇತ ಎರಡು ದೊಡ್ಡ ನದಿಗಳನ್ನು ದಾಟಿ ಸುಮಾರು ಒಂಬತ್ತು ಮೈಲಿ ದೂರದ ಜಗತ್ಪುರ ಪ್ರದೇಶದಲ್ಲಿ ಹೊಸ ಜೀವನ ಆರಂಭಿಸಿದ್ದರು. ಆದರೆ ವಿಧಿ ಅವರನ್ನು ಅಲ್ಲಿಯೂ ಬಿಡಲಿಲ್ಲ. 14 ವರ್ಷಗಳ ನಂತರ, ಅದೇ ಧುರ್ಬೆ ಆನೆ ಅವರ ಹೊಸ ಮನೆಯನ್ನೇ ಪತ್ತೆಹಚ್ಚಿ,  ಧುರ್ಬೆ ಮನೆಗೆ ನುಗ್ಗಿದಾಗ ಶನಿಚರ ಬೋಟೆ ಅವರ ಪತ್ನಿ ಮನೆಯ ಮುಂಭಾಗದಲ್ಲಿದ್ದ ಒಣ ಹುಲ್ಲಿಗೆ ಬೆಂಕಿ ಹಚ್ಚಿ ಆನೆಯನ್ನು ಹಿಂದಕ್ಕೆ ಸರಿಯುವಂತೆ ಮಾಡಿದರು. ಇದರಿಂದ ಮನೆಯೊಳಗಿದ್ದ ಉಳಿದ ಕುಟುಂಬ ಸದಸ್ಯರ ಪ್ರಾಣ ಉಳಿಯಿತು ಆದರೆ ದುರಾದೃಷ್ಟವಷಾತ್ ಆಕೆ ಮತ್ತು ಆಕೆಯ ನಾಲ್ಕು ವರ್ಷದ ಮೊಮ್ಮಗನನ್ನು ಬಲಿ ಪಡೆದು ಮತ್ತೊಮ್ಮೆ ಕುಟುಂಬವನ್ನು ದುಃಖದ ಸಾಗರಕ್ಕೆ ತಳ್ಳಿತು. . ಸ್ಥಳೀಯ ನಿವಾಸಿಗಳ ಪ್ರಕಾರ, ದಾಳಿ ನಡೆಸುವ ಮೊದಲು ಧುರ್ಬೆ 9ರಿಂದ 10 ದಿನಗಳ ಕಾಲ ಗ್ರಾಮದ ಸುತ್ತಮುತ್ತಲೇ ಓಡಾಡುತ್ತಿತ್ತು.


‘ಧುರ್ಬೆ’ – ಜಗತ್ತಿನ ಕುಖ್ಯಾತ ಆನೆಗಳಲ್ಲಿ ಒಂದು

ನೇಪಾಳದ ಚಿತ್ವಾನ್ ರಾಷ್ಟ್ರೀಯ ಉದ್ಯಾನವನ ಅಧಿಕಾರಿಗಳ ಪ್ರಕಾರ,

  • ಧುರ್ಬೆ 2010ರಿಂದ ಈವರೆಗೆ ಕನಿಷ್ಠ 25 ಜನರನ್ನು ಕೊಂದಿದೆ.
  • ಇದರ ಚಲನವಲನವನ್ನು ಮೇಲ್ವಿಚಾರಣೆ ಮಾಡಲು GPS ಟ್ರ್ಯಾಕಿಂಗ್ ಕಾಲರ್ ಅಳವಡಿಸಲಾಗಿದೆ.
  • 2012ರಲ್ಲಿ ಅದನ್ನು ಹೊಡೆದುರುಳಿಸಲು 93 ಮಂದಿಯ ವಿಶೇಷ ತಂಡ ರಚಿಸಲಾಗಿತ್ತು.
  • ಎರಡು ಬಾರಿ ಗುಂಡೇಟು ತಿಂದರೂ ಬದುಕುಳಿದಿತ್ತು.
  • ನಂತರ 2020 ಹಾಗೂ 2023ರಲ್ಲಿ ಹೊಸ ಟ್ರ್ಯಾಕಿಂಗ್ ಸಾಧನಗಳನ್ನು ಅಳವಡಿಸಲಾಯಿತು.

ತಜ್ಞರ ಪ್ರಕಾರ, ಪ್ರೌಢಾವಸ್ಥೆಗೆ ಬಂದ ಗಂಡು ಆನೆಗಳನ್ನು ಹಿಂಡಿನಿಂದ ಹೊರಹಾಕುವುದರಿಂದ ಅವು ಏಕಾಂಗಿಯಾಗುತ್ತವೆ. ಆಹಾರದ ಹುಡುಕಾಟದಲ್ಲಿ ಮಾನವ ವಸತಿ ಪ್ರದೇಶಗಳಿಗೆ ಬರುವುದರಿಂದ ಇಂತಹ ಘರ್ಷಣೆಗಳು ಸಂಭವಿಸುತ್ತವೆ. ಆದರೆ ಅನೆಯ ನೆನಪಿನ ಶಕ್ತಿ ಬಹಳ ಕಡಿಮೆ ಎಂದೇ ಭಾವಿಸಿರುವಾಗ ಈ ದುರ್ಬೆ ಎಂಬ ಆನೆ ಅದೇ ಮನೆಯವರನ್ನು ಹೇಗೆ ನನಪಿನಲ್ಲಿ ಇಟ್ಟುಕೊಂಡುತ್ತು ಮತ್ತು ಏತಕ್ಕಾಗಿ ಈ ರೀತಿಯ ಪ್ರತೀಕಾರ ತೀರಿಸಿಕೊಂಡಿತು ಎಂಬುದಕ್ಕೆ ಕಾರಣ ಇನ್ನೂ ಸಿಗದಾಗಿದೆ.


ನಿಷ್ಠೆ… ಪ್ರತೀಕಾರ… ಎರಡೂ ಪ್ರಕೃತಿಯ ಮುಖಗಳು

ಒಂದೆಡೆ ದುಗ್ಗು ತನ್ನ ಯಜಮಾನನ ಪ್ರೀತಿಗಾಗಿ ಜೀವವನ್ನೇ ಅರ್ಪಿಸುತ್ತದೆ. ಮತ್ತೊಂದೆಡೆ ಧುರ್ಬೆ ಎಂಬ ಕಾಡಾನೆ ವರ್ಷಗಳ ಬಳಿಕವೂ ತನ್ನ ದಾರಿಯಲ್ಲಿ ಎದುರಾದ ಮನುಷ್ಯರನ್ನು ಮತ್ತೆ ಮತ್ತೆ ಬಲಿ ಪಡೆಯುತ್ತದೆ. ಒಂದೇ ಪ್ರಕೃತಿ… ಆದರೆ ಎರಡು ವಿಭಿನ್ನ ಮುಖಗಳು. ಒಂದು ಪ್ರೀತಿ. ಇನ್ನೊಂದು ಪ್ರತೀಕಾರ.


ಕೊನೆಯ ಮಾತು

ಇಂದು ಸಂಬಂಧಗಳು ಸ್ವಾರ್ಥದ ಅಳತೆಯಲ್ಲಿ ಅಳೆಯಲ್ಪಡುತ್ತಿರುವ ಕಾಲದಲ್ಲಿ, ದುಗ್ಗುವಿನ ಕಥೆ ನಮಗೆ ಒಂದು ದೊಡ್ಡ ಪಾಠ ಹೇಳುತ್ತದೆ. ನಿಷ್ಠೆಗೆ ಮಾತುಗಳ ಅಗತ್ಯವಿಲ್ಲ. ಪ್ರೀತಿಗೆ ಭಾಷೆಯ ಅಗತ್ಯವಿಲ್ಲ. ಕೆಲವೊಮ್ಮೆ ಮಾತನಾಡಲಾರದ ಒಂದು ಜೀವ, ಮನುಷ್ಯರು ಬದುಕಿನಿಡೀ ಹೇಳಲಾಗದಷ್ಟು ಪ್ರೀತಿಯನ್ನು ತನ್ನ ನಡೆ-ನುಡಿಗಳ ಮೂಲಕ ತೋರಿಸಿಬಿಡುತ್ತದೆ. ತನ್ನ ಯಜಮಾನನನ್ನು ಒಂಟಿಯಾಗಿ ಕಳುಹಿಸಲು ಮನಸ್ಸಾಗದೆ, ಕೊನೆಯ ಹೆಜ್ಜೆಯವರೆಗೂ ಜೊತೆಯಾಗಿ ನಡೆದು ಅದೇ ಪಯಣದಲ್ಲಿ ಕಣ್ಮುಚ್ಚಿದ ದುಗ್ಗು, ನಿಷ್ಠೆ ಎಂದರೆ ಏನು ಎಂಬುದಕ್ಕೆ ಜೀವಂತ ಉದಾಹರಣೆಯಾಗಿ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply